ಬಣ್ಣಬಯಲಿಗೆ ಅಂಜುವವರು ಯಾರು?

-ಎ.ವಿ.ಮುರಳೀಧರ

ಧರ್ಮವನ್ನು ರಾಜಕೀಯದಲ್ಲಿ ಬೆರೆಸಬೇಡಿ ಎಂಬ ಅತ್ಯಾಕರ್ಷಕ ವಾಕ್ಯಗಳು ಎಲ್ಲ ರಾಜಕಾರಣಿಗಳ ನಾಲಗೆಯ ಮೇಲೆ ನಲಿದಾಡುತ್ತಿರುತ್ತವೆ. ಹಿಂದಿನ ಸರ್ಕಾರದ ಮಂತ್ರಿಯೊಬ್ಬರು ವೀರಶೈವ ಲಿಂಗಾಯಿತ ವರ್ಗಗಳನ್ನು ಬೇರ್ಪಡಿಸಲು ಯತ್ನಿಸಿ ಚುನಾವಣೆಯಲ್ಲಿ ಪತನ ಕಂಡರು.

ಆಧುನಿಕತೆಗೂ ಅಂತರ್ಜಾತಿ ವಿವಾಹಗಳಿಗೂ ಸಂಬಂಧವಿಲ್ಲ. ಅಂತರ್ಜಾತಿ ವಿವಾಹಗಳು ತಕ್ಷಣದ ತುರ್ತಿನಿಂದ ಅಥವಾ ಇನ್ನಿತರ ಕಾರಣಗಳಿಂದ ನಡೆಯುವಂಥದ್ದು. ನಡೆದುಹೋಗಿ ನಂತರ, ಅವರ ಮಕ್ಕಳು ಸಮಾಜದಲ್ಲಿ ಅನುಭವಿಸುವ ದ್ವಂದ್ವ ಬಹಳ ಸಾರಿ ನೋಡಿದ್ದೇವೆ. ನಾವು ಈಗೇನು ಆಧುನಿಕತೆ ಎಂದುಕೊಳ್ಳುತ್ತೇವೆಯೋ ಅದು ನೂರು ವರ್ಷದ ನಂತರ ಖಂಡಿತವಾಗಿಯೂ ಪುರಾತನವಾಗಿರುತ್ತದೆ. ಆದಾಗ್ಯೂ ಈಗಿನ ಹೊಸ ಆವಿಷ್ಕಾರಗಳನ್ನು, ವಿಜ್ಞಾನ, ತಂತ್ರಜ್ಞಾನ ಮುಂದುವರಿದ ಪರಿ, ವೇಗವನ್ನು ಗಮನಿಸಿದರೆ ನಾವು ಆಧುನಿಕರು ಎಂದು ಕರೆದುಕೊಳ್ಳಲು ಅಡ್ಡಿ ಇಲ್ಲ (ಏಕೆಂದರೆ ಈ ಆಧುನಿಕರು ಅಂದುಕೊಳ್ಳುವ ಹೊತ್ತಿನಲ್ಲೇ ಬಿಹಾರ, ಉ.ಪ್ರ. ಮಹಾರಾಷ್ಟ್ರ, ಮ.ಪ್ರ., ರಾಜಾಸ್ತಾನಗಳಲ್ಲಿ ದಲಿತರನ್ನು, ಹಿಂದುಳಿದವರನ್ನು ಕಾಣುವ ರೀತಿ ಯಾವ ಆದಿಮಯುಗಕ್ಕೂ ಕಡಿಮೆಯಿಲ್ಲ).

ಜಾತಿಯು ಮನಸ್ಸಿಗೆ ಹಾಗೂ ಮನುಷ್ಯನ ಬೆಳವಣಿಗೆಗೆ (ಅಪ್ ಬ್ರಿಂಗಿಂಗ್) ಸಂಬಂಧಪಟ್ಟಿದ್ದು. ಅಂತರಂಗಕ್ಕೆ ಸಂಬಂಧಪಟ್ಟಿದ್ದು, ಬಾಹ್ಯಕ್ಕಲ್ಲವೆಂದು ನನ್ನ ನಂಬಿಕೆ. ಆದರೂ ಇದು ಹುಟ್ಟಿನಿಂದ ನಿಮ್ಮ ಚರ್ಮದಷ್ಟೇ ಹತ್ತಿರವಾಗಿ ಮೈಗೆ ಅಂಟಿಬಿಟ್ಟಿರುತ್ತದೆ. ಸ್ವಲ್ಪ ವಿಶಾಲ ಮನಸ್ಸುಳ್ಳವರು ಇದೊಂದು ವಿಷವರ್ತುಲ ಎಂದರೆ, ಕೆಲವರಿಗೆ ಇದು ಭದ್ರತಾವರ್ತುಲ. ನೂರಿಪ್ಪತ್ತು ವರ್ಷಗಳ ಹಿಂದೆಯೇ `ಜಾತಿ ಅನ್ನುವುದು ಜನರಿಗೆ ಅಫೀಮಿದ್ದಂತೆ’ ಎಂದು ಕಾರ್ಲ್‍ಮಾಕ್ರ್ಸ್ ಹೇಳಿದ್ದಾರೆ. ಈಗಲೂ ನೀವು ಯಾವುದೇ ಹಳ್ಳಿ, ಪಟ್ಟಣ ಹಾಗೂ ನಗರ ಪ್ರದೇಶಗಳಲ್ಲಿ, ಕೆಲವು ಪ್ರದೇಶಗಳಲ್ಲಿ ಕೆಲವು ಜಾತಿಯ ಜನರು ಮಾತ್ರ ಕೂಡಿ ಬದುಕುತ್ತಾ, ಅಥವಾ ತಮ್ಮ ಜಾತಿಯ ಜನರ ಸಂಖ್ಯಾ ಬಾಹುಳ್ಯ ಜಾಸ್ತಿ ಇರುವ ಪ್ರದೇಶಗಳಲ್ಲೇ ಬದುಕುವುದನ್ನು ಕಾಣಬಹುದು.

ಆರ್ಥಿಕ ಪರಿಸ್ಥಿತಿ ಬೆಳೆದಂತೆ ಆಯಾ ಕಾಲದ ಹುಡುಗ, ಹುಡುಗಿಯರ ಮಾನಸಿಕ ಮಟ್ಟ ವಿಶಾಲಗೊಂಡು, ತಮ್ಮ ಕಾರ್ಯಕ್ಷೇತ್ರದಲ್ಲೇ ಇರುವ ಪರಸ್ಪರ ಸಂಬಂಧಗಳಲ್ಲಿ ಜೋಡಿಯಾಗುತ್ತಿವೆಯಾದರೂ, ಇದು ಪ್ರತಿಶತದ ಲೆಕ್ಕದಲ್ಲಿ ನೋಡಿದರೆ, ಹಿಂದಿಗಿಂತ ಬಹಳ ಬೆಳೆದ ಹಾಗೆ ಕಾಣಿಸುತ್ತಿಲ್ಲ. ಜಾತಿ ಪ್ರಭಾವ ಹೆಚ್ಚುತ್ತಿದೆಯೇ ಎಂದರೆ ಹೆಚ್ಚಾಗಿಲ್ಲ. ಇದು ಎಲ್ಲಾ ಕಾಲದಲ್ಲೂ ಹೀಗೇ. ಈಗ ಜನಸಂಖ್ಯೆ ಜಾಸ್ತಿಯಾಗಿರುವುದರಿಂದ ಹೆಚ್ಚಾದಂತೆ ಕಾಣುತ್ತದೆ ಅಷ್ಟೇ. ಆದರೆ ಕೆಲವೊಂದು ಜಾತಿಗಳು ರಾಜಕೀಯವಾಗಿ ಮೊದಲಿಂದಲೂ ಪ್ರಬಲವಾಗಿರುವುದರಿಂದ ಸಹಜವಾಗಿ ಹಾಗೆ ಕಾಣುತ್ತವೆ. ರಾಜಕೀಯ ಎಂದರೆ ಅಧಿಕಾರ, ಅಧಿಕಾರ ಇದ್ದ ಮೇಲೆ ಝಣಝಣ ಕಾಂಚಾಣ. ಕಾಂಚಾಣವನ್ನು ಬಂಡವಾಳ ಮಾಡಿಕೊಂಡು ಇನ್ನಷ್ಟು ಅಧಿಕಾರ, ಆ ಅಧಿಕಾರದಿಂದ ಮತ್ತಷ್ಟು ಹಣ.

ಮೊದಲು ತಾನು, ತನ್ನ ಬಂಧುಗಳು ಮತ್ತು ಹತ್ತು ತಲೆಮಾರಿಗಾಗುವಷ್ಟು ಆದ ನಂತರ ಜನರ ಕಾಳಜಿ.  ಸೂಕ್ಷ್ಮವಾಗಿ ಗಮನಿಸಿದಾಗ ಇದಕ್ಕೆ ಆರ್ಥಿಕ ಅಸಮಾನತೆಯೇ ಮುಖ್ಯ ಕಾರಣಗಳಲ್ಲೊಂದು ಎನ್ನಿಸದಿರದು.  ಗಾಂಧೀಜಿ ಈ ಅಸಮಾನತೆಗೆ ಸಾಮಾಜಿಕ ಆಯಾಮವೇ ಕಾರಣ ಎಂದು ನಂಬಿದ್ದರು. ಆರ್ಥಿಕ ಆಯಾಮ ನಂತರದ ಕಾರಣ ಎಂದು ಭಾವಿಸಿದ್ದರು. ಈ ಜಾತಿ ಪ್ರಭಾವ ಉಲ್ಬಣಗೊಳ್ಳಲು ಕಾರಣ ನಮ್ಮನ್ನು ಆಳುವ ಪ್ರಭುಗಳು. 18ನೇ ಶತಮಾನದಲ್ಲಿ ಇಂಗ್ಲೆಂಡ್‍ನಲ್ಲಿ ಬದುಕಿದ್ದ ರಾಬರ್ಟ್ ಥಾಮಸ್ ಮಾಲ್ತೂಸ್ ಎಂಬ ಅರ್ಥಶಾಸ್ತ್ರಜ್ಞನ ಪ್ರಕಾರ ಯಾವಾಗ ಜನಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳವಾಗುತ್ತದೋ ಆಗ ಉಪಲಬ್ದ ಸಂಪನ್ಮೂಲಗಳು, ಮೂಲ ಉತ್ಪನ್ನಗಳು ಅದೇ ರೀತಿ ಸಿಗದಾದಾಗ, ಕೊರತೆಯುಂಟಾದಾಗ ಅಥವಾ ಸೀಮಿತವಾಗಿ ಲಭ್ಯವಾದಾಗ ಜನರಲ್ಲಿ ಸಹಜವಾಗಿ ಅದನ್ನು ಸಿಕ್ಕಷ್ಟು ಕೈವಶ ಪಡೆದುಕೊಳ್ಳಲು ಹಾಹಾಕಾರ ಶುರುವಾಗುತ್ತದೆ. ಆಗ ಸಮಾಜ ಅರಾಜಕತೆಗೆ ಎಡೆಮಾಡಿಕೊಡುತ್ತದೆ. 

*

ಈ ಜಾತಿಪ್ರಭಾವ ಪ್ರತಿನಿಧಿಸುತ್ತಿರುವ ವ್ಯಕ್ತಿಗಳು, ಸಂಘಟನೆಗಳು ಹಾಗೂ ಮಠಮಾನ್ಯರ ಉದ್ದೇಶ ಬಹುತೇಕ ಸ್ವಾರ್ಥ. ಮಾಜಿ ಮುಖ್ಯಮಂತ್ರಿಯೊಬ್ಬರು ಪ್ರತಿ ಜಾತಿಗೊಂದು ಮಠದ ನಿರ್ಮಾಣ ಅಭಿವೃದ್ಧಿಗೆ ಪೂರಕ ಎಂದಿದ್ದಾರೆ. ಈಗಿನ ಸಂದರ್ಭದಲ್ಲಿ ಅವರು ಸುತ್ತಲಿನ ಆಗುಹೋಗುಗಳನ್ನು ಗಮನಿಸಿ ಈ ಹೇಳಿಕೆ ನೀಡಿರಬಹುದು. ಆದರೆ ಇದು ಆಗಿಹೋಗುವ ಮಾತಲ್ಲ. ಹಿಂದುಳಿದ ವರ್ಗಗಳಲ್ಲೇ ಸುಮಾರು 414 ಜಾತಿಗಳಿವೆ (ಕರ್ನಾಟಕದಲ್ಲಿ). ಇನ್ನು ಗೌಡ, ಲಿಂಗಾಯಿತ, ಬ್ರಾಹ್ಮಣ ಮತ್ತಿತರ ಜಾತಿಗಳು ಅವುಗಳ ಉಪವರ್ಗ, ಇವುಗಳನ್ನು ಗಣನೆಗೆ ತೆಗೆದುಕೊಂಡರೆ ಆಗುವ ಸಂಖ್ಯೆ ಸಾವಿರಕ್ಕೂ ಅಧಿಕ. ಈ ಜಾತಿ ಪ್ರಭಾವವು ರಾಜಕೀಯವನ್ನು ಕೆಡಿಸುತ್ತಿದೆಯೇ ಎಂಬುದೊಂದು ಅತ್ಯಂತ ಮುಗ್ಧ ಪ್ರಶ್ನೆ. 

ಜಾತಿ ರಾಜಕೀಯವನ್ನು ಕೆಡಿಸುತ್ತಿದೆಯೋ ಅಥವಾ ರಾಜಕೀಯ ಜಾತಿಯನ್ನು ಕೆಡಿಸುತ್ತಿದೆಯೋ ಹೇಳಲಾಗದು. ಅವೆರಡೂ ಒಂದಕ್ಕೊಂದು ತಳುಕು ಹಾಕಿಕೊಂಡಿವೆ. ಒಂದೇ ನಾಣ್ಯದ ಆಚೆ, ಈಚೆ ಅಷ್ಟೇ. ಚುನಾವಣಾ ಕಾಲದಲ್ಲಿ ಟಿಕೆಟ್ ಹಂಚುವುದರಿಂದ ಹಿಡಿದು, ಯಾವ ಭಾಗದಲ್ಲಿ ಯಾವ ಜಾತಿಯ ಪ್ರಭಾವ ಎಷ್ಟಿದೆ, ಆ ಜಾತಿಯಲ್ಲಿ ಯಾರು ಗೆಲ್ಲುವ ಕುದುರೆ, ಗೆದ್ದನಂತರ ಯಾವ ಜಾತಿಯವರಿಗೆ ಎಷ್ಟು ಪ್ರಾಧಾನ್ಯ, ಮಂತ್ರಿಮಂಡಳದಲ್ಲಿ ಯಾರು ಬಲ ಹೆಚ್ಚಿರಬೇಕು ಎಲ್ಲಾ ಇದರಲ್ಲಿ ಒಳಗೊಂಡಿರುತ್ತದೆ. 

ಈಗಂತೂ ಭಾರತದಲ್ಲಿ ಅಧಿಕಾರ ಯಾವತ್ತೂ ಹಿಂದೂಗಳ ಕೈಯಲ್ಲೇ ಇರಬೇಕು ಎಂದು ಇತ್ತೀಚೆಗೆ ಚುನಾಯಿತ ಪ್ರತಿನಿಧಿ ಒಬ್ಬರು ಅಭಿಪ್ರಾಯ ಪಟ್ಟಿದ್ದರು. ಕಳೆದ ಐದಾರು ವರ್ಷಗಳಲ್ಲಿ ಚಿತ್ರಣವೇ ಈ ರೀತಿ ರೂಪುಗೊಂಡಿದೆ. ಈಗ ಯಾರಾದರೂ ತಮ್ಮ ಜಾತಿಯ ಬಗ್ಗೆ ಮಾತನಾಡುವುದೇ ಹೆಚ್ಚು ಸೂಕ್ತ ಎಂಬ ವಿಚಾರವನ್ನು ಬಿತ್ತಲಾಗುತ್ತಿದೆ. ಇದರ ವಿರುದ್ಧ ಮಾತನಾಡಿದರೆ, ಪ್ರಭುತ್ವದ ವಿರುದ್ಧ ಮಾತನಾಡಿದಂತೆ. ಸೂಕ್ತ ಕಾನೂನು ಜಡಿದು ಒಳಗೆ ಹಾಕುವ ಬೆದರಿಕೆ. ಇತ್ತೀಚೆಗೆ ಪ್ರಮುಖ ರಾಜಕಾರಣಿಗಳ ಬೆಳಗಾಗುವುದೇ ಮಠಮಾನ್ಯಗಳಲ್ಲಿ ಎಂಬಂತಾಗಿಬಿಟ್ಟಿದೆ. ಮಠಮಾನ್ಯಗಳೂ ರಾಜಕಾರಣಿಗಳ ದುರ್ಬಲತೆಯನ್ನು ಚೆನ್ನಾಗಿಯೇ

ದುರುಪಯೋಗಪಡಿಸುಕೊಳ್ಳುವುದನ್ನು ರೂಢಿಮಾಡಿಕೊಂಡಿವೆ. ಸಮಾಜದಲ್ಲಿ ಪ್ರಬಲವರ್ಗಗಳು ಮಠಗಳ ಮೂಲಕ ಹೀಗೆ ಬಹಿರಂಗವಾಗಿಯೇ ರಾಜಕೀಯವನ್ನು ಮಾಡಲು ಶುರುಮಾಡಿದಾಗ ಅಲ್ಪಸಂಖ್ಯಾತರು, ಹಿಂದುಳಿದವರು ಹಾಗೂ ದಲಿತರು ಸಹಾ ಈಗ ಅಭದ್ರತೆಯಿಂದ ತಮ್ಮ ತಮ್ಮ ಮಠಗಳ ಮೂಲಕ ಪ್ರತಿಭಟನೆ ಮಾಡಲು ಶುರುಮಾಡಿವೆ. ಇದನ್ನು ಬರೆಯುವ ಹೊತ್ತಿನಲ್ಲಿ ಮಾದಿಗ ಸಮುದಾಯವು ಅತಿದೊಡ್ಡ ಜಾಥಾವನ್ನೇ ಹಮ್ಮಿಕೊಂಡಿದೆ. 

*

ಧರ್ಮವನ್ನು ರಾಜಕೀಯದಲ್ಲಿ ಬೆರೆಸಬೇಡಿ ಎಂಬ ಅತ್ಯಾಕರ್ಷಕ ವಾಕ್ಯಗಳು ಎಲ್ಲ ರಾಜಕಾರಣಿಗಳ ನಾಲಿಗೆಯ ಮೇಲೆ ನಲಿದಾಡುತ್ತಿರುತ್ತವೆ. ಈ ಹಿಂದಿನ ಸರ್ಕಾರದ ಮಂತ್ರಿಯೊಬ್ಬರು ವೀರಶೈವ ಲಿಂಗಾಯಿತ ವರ್ಗಗಳನ್ನು ಬೇರ್ಪಡಿಸಲು ಯತ್ನಿಸಿ (ಇದರಿಂದ ತಕ್ಷಣದ ಚುನಾವಣೆಯ ಲಾಭ ಗಳಿಸುವ ಹವಣಿಕೆಯಿಂದ) ಕೊನೆಗೆ ಅದು ಆಗದೆ ದೊಡ್ಡ ವಿವಾದವಾಗಿ ಅದೇ ಅವರ ಸರ್ಕಾರದ ಪತನಕ್ಕೆ ಕಾರಣವಾಯಿತು. ಆದರೆ ಈಗಿನ ಒಕ್ಕೂಟ ಸರ್ಕಾರವೇನೋ ತೋರ್ಗಾಣಿಕೆಗೆ `ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಎಂಬ ಧ್ಯೇಯವಾಕ್ಯವನ್ನು ಮೊಳಗಿಸಿದ್ದರೂ, ದೇಶದಲ್ಲಿ ಆಗಿದ್ದನ್ನು, ಆಗುತ್ತಿರುವುದನ್ನು ಈ ಆರು ವರ್ಷಗಳಲ್ಲಿ ಎಲ್ಲರೂ ನೋಡಿರುವಂತಾದ್ದೇ. 

ಇವರು ಬಹಳ ನಾಜೂಕಾಗಿ ತಮ್ಮ ಒಳ ಅಜೆಂಡಾವನ್ನು ಜಾರಿ ಗೊಳಿಸುವುದರಲ್ಲಿ ನಿಸ್ಸೀಮರು ಅನ್ನಿಸುತ್ತದೆ.  ಬಹಳಷ್ಟು ಕಾನೂನುಗಳನ್ನು ಹೀಗೇ ಜಾರಿಗೊಳಿಸಿದರೂ ಜನರು ಬಹಳ ಬುದ್ಧಿವಂತರು. ನಾಗರಿಕ ತಿದ್ದುಪಡಿ ಕಾಯಿದೆ, ರೈತರ ಕಾನೂನಿನ ಜಾರಿಗೊಳಿಸಿದಾಗ ತಕ್ಷಣ ಸಿಡಿದೆದ್ದರು. ಸಮಾಜದ ಎಲ್ಲಾ ವರ್ಗಗಳು, ಜಾತಿ, ಜನಾಂಗಗಳು ಸಾಮಾಜಿಕ ಅಭದ್ರತೆಯ ಅರಿವುಂಟಾಗಿರುವುದರಿಂದ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಯತ್ನಿಸಿದಾಗಲೆಲ್ಲ ಅದು ಸವರ್ಣೀಯರ ಕೆಂಗಣ್ಣಿಗೆ ತುತ್ತಾಗಿ, ಮೇಲ್ವರ್ಗದವರೊಂದಿಗೆ ನೇರ ಸಂಘರ್ಷಕ್ಕೆ ಎಡೆಮಾಡಿಕೊಡುತ್ತದೆ. ಹಾಗೇ ಮೇಲ್ವರ್ಗದಲ್ಲಿಯೂ ಆರ್ಥಿಕವಾಗಿ ಹಿಂದುಳಿದವರು, ಉನ್ನತ ವಿದ್ಯಾಭ್ಯಾಸ, ಸರ್ಕಾರಿ ನೌಕರಿ ಮುಂತಾದ ಕಡೆ ತಮಗೆ ಸಿಕ್ಕಬಹುದಾದ ಸ್ಥಾನಮಾನಗಳಿಂದ ಮೀಸಲಾತಿ, ಒಳಮೀಸಲಾತಿ ಇತ್ಯಾದಿಗಳಿಂದ ವಂಚಿತರಾದಾಗ ಕೆಳವರ್ಗದವರ ವಿರುದ್ಧ ಸಿಟ್ಟು ಕಾರತೊಡಗುತ್ತಾರೆ.

ಈಗಂತೂ ಎಲ್ಲರೂ ಮೀಸಲಾತಿಗಾಗಿ ಹಾತೊರೆಯುವವರೇ. ಪಂಚಮಸಾಲಿಗಳು 2ಎ ವರ್ಗಕ್ಕೆ ಸೇರಿಸಬೇಕೆಂದು, ವಾಲ್ಮೀಕಿ ಜನಾಂಗದವರದೊಂದು, ಎಡಗೈ, ಬಲಗೈ ಅವರದಿನ್ನೊಂದು ಹೀಗೆ. ಕುರುಬರು ತಮ್ಮನ್ನು ಎಸ್ಟಿಗೆ ಸೇರಿಸಬೇಕೆಂದು. ಸದಾಶಿವ ವರದಿ ಜಾರಿಗೆ ಮಾಡಿ ಎಂಬ ಮಾದಿಗರ ಕೂಗು ಮತ್ತಷ್ಟು ಜಾಸ್ತಿಯಾಗುತ್ತಿದೆ. ರಾಜಕೀಯ ಶಕ್ತಿಗಳಿಲ್ಲದೆ, ಅಧಿಕಾರವಿಲ್ಲದೆ ಇದು ಅಸಾಧ್ಯ. ಇದನ್ನರಿತ ಆಯಾ ಜಾತಿ ಜನರು ನೇರವಾಗಿ ತಮ್ಮತಮ್ಮ ಮಠಮಾನ್ಯಗಳಿಗೆ ಮೊರೆಯಿಡುತ್ತಾರೆ. ಅವರು ನೇರವಾಗಿ ಅಧಿಕಾರ ಕೇಂದ್ರಕ್ಕೇ ಬೆದರಿಕೆ ಒಡ್ಡುವ ತಂತ್ರದಲ್ಲಿ ತೊಡಗುತ್ತಾರೆ. ರಾಜಕಾರಣಿಗಳಿಗೂ, ಮಠಗಳನ್ನು ಧಿಕ್ಕರಿಸಿ ಅಧಿಕಾರದಲ್ಲಿ ಮುಂದುವರೆಯುವುದು ಅಸಾಧ್ಯ ಎಂದು ಅರಿವಾಗಿ ಕಾಲಕಾಲಕ್ಕೆ ಅನುದಾನ ಕೊಟ್ಟು ಅವರ ಬಾಯಿ ಮುಚ್ಚಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಅತ್ಯಧಿಕ ಜನಸಂಖ್ಯೆಯಲ್ಲಿರುವ ಜಾತಿಗಳ ಮತಗಳನ್ನು ಮನಸ್ಸಿನಲ್ಲಿಟ್ಟುಕೊಂಡು ದೇಣಿಗೆ ಕಾರ್ಯ ಮುಂದುವರೆಯುತ್ತದೆ. 

ಇಂಥವರ ಬಣ್ಣಬಯಲು ಮಾಡುವುದೇನೋ ಸರಿ. ಆದರೆ ಎಷ್ಟು ರಾಜಕಾರಣಿಗಳು ಈ ಬಣ್ಣಬಯಲಿಗೆ ಅಂಜುತ್ತಾರೆ? ಈಗ ಕಳೆದ 10 ವರ್ಷಗಳಲ್ಲಿ ಎಷ್ಟು ಬಾರಿ ಎಷ್ಟು ರಾಜಕಾರಣಿಗಳ ಬಣ್ಣ ಹೀಗೆ ಬಯಲಾಗಿದೆ? ಹಿಂದಿನಂತೆ ಪತ್ರಿಕೆ, ಮಾಧ್ಯಮಗಳಿಗೆ ಅಂಜುವವರು ಯಾರಿದ್ದಾರೆ?  ಜನರ ನೆನಪು ಸಾರ್ವಜನಿಕವಾಗಿ ಕಮ್ಮಿ ಎಂಬಂತೆ ಎರಡು ದಿನ ಅದು ಚಾಲ್ತಿಯಲ್ಲಿದ್ದು ಮೂರನೇ ದಿನ ಮೈಕೊಡವಿಕೊಂಡು ಹೊರಬರುತ್ತಾರೆ. ನ್ಯಾಯಾಲಯ, ಲೋಕಾಯುಕ್ತಗಳಿಗೇ ರಾಜಕಾರಣಿಗಳು ಅಂಜುತ್ತಿಲ್ಲ. ಜೈಲಿಗೆ ಹೋಗಿಬಂದ ರಾಜಕಾರಣಿಗಳೂ, ಜಾಮೀನಿನ ಮೇಲೆ ಹೊರಗೆ ಇರುವಂಥವರೂ ಇನ್ನಷ್ಟು, ಮತ್ತಷ್ಟು ಸುಳ್ಳುಗಳನ್ನು ಹೇಳಿಕೊಂಡು ರಾಜಾರೋಷವಾಗಿ ಮೆರೆಯುತ್ತಿದ್ದಾರೆ.

ನಮ್ಮ 2019ನೇ ಪಾರ್ಲಿಮೆಂಟ್‍ನಲ್ಲಿ ಪ್ರತಿಶತ 50ರಷ್ಟು ಎಂ.ಪಿ.ಗಳ ಮೇಲೆ ಕ್ರಿಮಿನಲ್ ಕೇಸ್‍ಗಳಿವೆ. ಯಾವುದೇ ರಾಜಕೀಯ ಗ್ಲಾಮರ್ ಇಲ್ಲದ, ಜನರ ಮಧ್ಯೆ ಇದ್ದುಕೊಂಡು, ಜನರ ಕೆಲಸ ಮಾಡುವ, ರಾಜಕೀಯ ಸಿದ್ಧಾಂತ ಇಟ್ಟುಕೊಂಡು ಗುರಿಯೆಡೆಗೆ ಹೋರಾಡುವ, ಅಧಿಕಾರ ಲಾಲಸೆಯಿಲ್ಲದೆ ಮೌಲ್ಯಾಧಾರಿತ ರಾಜಕಾರಣಿಗಳು ಈಗ ಸಾವಿರದಲ್ಲೊಬ್ಬರು ಸಿಗಬಹುದು. ಪ್ರತಿಯೊಬ್ಬ ನಿಷ್ಠೆಯ ರಾಜಕಾರಣಿಗೆ `ಆಬ್ಜೆಕ್ಟಿವ್ ಕಂಪಲ್ಶನ್’ ಇರುತ್ತದೆ.  ಅವನು ಚಿಂತನೆಯನ್ನು ಜಾರಿಗೆ ತರಲು ಕಾಯಬೇಕಾಗುತ್ತದೆ. ಕರ್ಪೂರಿ ಠಾಕೂರ್ ಅವರ ಉದಾಹರಣೆಯನ್ನೇ ಹೇಳಬಹುದಾದರೆ, ಕ್ಷೌರಿಕ ಮನೆತನದಿಂದ ಬಂದು ಎರಡು ಬಾರಿ ಮುಖ್ಯಮಂತ್ರಿಗಳಾದ ಅವರಿಗೆ `ಭೂ ಸುಧಾರಣೆಯ ಪ್ರಸ್ತಾಪ ಮಂತ್ರಿಮಂಡಳದಲ್ಲಿ ಏಕೆ ಮಾಡಲಿಲ್ಲ’ ಎಂದು ಕೇಳಿದಾಗ ಹೀಗೆ ಹೇಳಿದ್ದರು:  `ನನ್ನ ಪ್ರತಿ ಶಾಸಕರೂ ನನಗಿಂತ ಶಕ್ತಿಶಾಲಿಗಳೆಂದು ತಿಳಿದು ಕೊಂಡಿದ್ದಾರೆ. ನಾನೇನಾದರೂ ಪ್ರಸ್ತಾಪ ಮಾಡಿದ್ದರೆ ಜೀವಂತವಾಗಿ ಹೊರಬರುತ್ತಿರಲಿಲ್ಲ. ಹಿಂದುಳಿದವರ, ದಲಿತರ ಮೇಲೆ ಉನ್ನತ ವರ್ಗದವರ ದೌರ್ಜನ್ಯಕ್ಕಿಂತಲೂ ಹಿಂದುಳಿದ, ದಲಿತ ಪಾಳೇಗಾರರ ದೌರ್ಜನ್ಯವೇ ಅತ್ಯಂತ ಕ್ರೂರವಾದದ್ದು.’

Leave a Reply

Your email address will not be published.