ಬತ್ತಲಾಗದೆ ಬಯಲು ಸಿಕ್ಕದಿಲ್ಲಿ

ಸುಧಾರಣೆ ಅನಿವಾರ್ಯವಾಗಿರುವ ಈಗಿನ ಕಾಲಮಾನದ ನಮ್ಮ ಪ್ರಸ್ತುತ ಬದುಕನ್ನು ಕುರಿತ ಕೆಲವು ಟಿಪ್ಪಣಿಗಳನ್ನು ಇಲ್ಲಿ ಮಂಡಿಸಬಯಸಿದ್ದೇನೆ.

-ಎನ್.ಬೋರಲಿಂಗಯ್ಯ

ನಮ್ಮ ಆಲೋಚನೆಗಳು ನಮ್ಮ ಬದುಕನ್ನು ರೂಪಿಸುತ್ತವೆಯೋ? ಅಥವಾ ನಮ್ಮ ಬದುಕು ನಮ್ಮ ಆಲೋಚನೆಗಳನ್ನು ರೂಪಿಸುತ್ತದೋ? ಈ ಇಂಥ ಅಷ್ಟೇನೂ ಸುಗಮ ಚಕ್ರವ್ಯೂಹವಲ್ಲದ ಸಂಕೀರ್ಣ ಪ್ರಶ್ನೆಗಳ ವಿಶ್ಲೇಷಣೆಗೆ ಈಗ ಕೈ ಹಚ್ಚದೆ ಇಲ್ಲಿಯ ಮೊದಲ -ನಮ್ಮ ಆಲೋಚನೆಗಳು ನಮ್ಮ ಬದುಕನ್ನು ರೂಪಿಸುತ್ತವೆ- ವಿಚಾರದ ಪಕ್ಷಪಾತಿಯಾಗಿ ಸುಧಾರಣೆ ಅನಿವಾರ್ಯವಾಗಿರುವ ಈಗಿನ ಕಾಲಮಾನದ ನಮ್ಮ ಪ್ರಸ್ತುತ ಬದುಕನ್ನು ಕುರಿತ ಕೆಲವು ಟಿಪ್ಪಣಿಗಳನ್ನು ಇಲ್ಲಿ ಮಂಡಿಸಬಯಸಿದ್ದೇನೆ.

ಆಲಂಬನಕ್ಕಾಗಿ ಎಂಬಂತೆ ಸಮಾಜಮುಖಿಯ ಕಳೆದ ಫೆಬ್ರವರಿ ಸಂಚಿಕೆಯ ಡಾ.ಜ್ಯೋತಿಯವರ ಪ್ರತಿಬಿಂಬದ ‘ಮೊದಲು ನಾವು ಬದಲಾಗಬೇಕು’ ಎಂಬ ಸಮಯೋಚಿತ ಸಲಹಾರೂಪದ ಲೇಖನಕ್ಕೆ ನಾನು ಬಹಳ ಹಿಂದಿನಿಂದಲೂ ಯೋಚಿಸುತ್ತಿದ್ದ ಒಂದು ಗಂಭೀರ ತಿರುವು ಕೊಡುತ್ತಾ ನನ್ನ ಮೊದಲ ಟಿಪ್ಪಣಿಯನ್ನು ಆರಂಭಿಸಬಹುದಾಗಿದೆ.

ಡಾ.ಜ್ಯೋತಿಯವರ ಲೇಖನದ ಶೀರ್ಷಿಕೆಯನ್ನು ‘ಮೊದಲು ನಾವು ಮಹಿಳೆಯರು ಬದಲಾಗಬೇಕು’ ಎಂಬಂತೆ ನಿರ್ದಿಷ್ಟಗೊಳಿಸಿಕೊಂಡರೆ ನಮ್ಮ ನಮ್ಮ ಬದುಕಿನ ಸಂದರ್ಭಗಳಲ್ಲಿಯೇ ಏನೆಲ್ಲಾ ಸಂಗತಿಗಳು ಸ್ಪಷ್ಟವಾಗಿ ಸ್ಫುಟಗೊಳ್ಳುತ್ತವೆ, ಆಲೋಚಿಸಿ ನೋಡಿ. ಸಮಸ್ಯೆ ‘ಮಹಿಳೆ’ಗಷ್ಟೆ ಸೀಮಿತಗೊಂಡಿದ್ದರೂ ಆಲೋಚಿಸಬೇಕಾದವರು ಮಹಿಳೆಯರ ದೃಷ್ಟಿಯಿಂದ ‘ಪುರುಷರು’ ಎಂಬುದೂ ನಿಜವೆ. ಆದರೂ ಡಾ.ಜ್ಯೋತಿಯವರ ಲೇಖನದ ಶೀರ್ಷಿಕೆಗೆ ನಾನು ಕೊಟ್ಟಿರುವ ತಿರುವಿಗೆ ಅಪಚಾರವಾಗದಂತೆ ಅವರನ್ನೇ, ಅಂದರೆ ಮಹಿಳೆಯರನ್ನೇ ಆಲೋಚಿಸಲು ನಮ್ರವಾಗಿಯೇ ಹಚ್ಚಲು ಬಯಸುತ್ತೇನೆ. ಬೇಕಾದರೆ ಬದುಕನ್ನು ಸಮಗ್ರವಾಗಿ ಬದಲಿಸಲು ಬೇಕಾದ ಮತ್ತು ನಾನು ಬಹಳ ದಿನಗಳಿಂದಲೂ ಗಾಂಧಿ, ಟಾಲ್‍ಸ್ಟಾಯ್, ರಸಲ್, ಕುವೆಂಪು ಮುಂತಾದ ಮಹಾಮಹಿಮರ ಜತೆ ಸಂಘರ್ಷಿಸಿಕೊಂಡು ನಿರ್ಣಯಾತ್ಮಕವೆಂಬಂತೆ ಕಂಡುಕೊಂಡಿರುವ ಕೆಲವು ಸಂಗತಿಗಳನ್ನು ಮುಂದಿಡುತ್ತೇನೆ.

ಜಗತ್ತಿನ ಕೋಟ್ಯಾನುಕೋಟಿ ಬಡಮಹಿಳೆಯರನ್ನು ಅಣಕಿಸುತ್ತಿರುವ ರೇಷ್ಮೆ, ಚಿನ್ನ-ಬೆಳ್ಳಿ, ವಜ್ರ ವೈಢೂರ್ಯಾದಿ ಅಂಗಡಿಗಳು ಹೇಳ ಹೆಸರಿಲ್ಲದಂತೆ ನೆಲ ಕಚ್ಚಬೇಕಾಗಿದೆ. ಅಂದರೆ ಮಹಿಳೆಯರು ಈ ವ್ಯಾಮೋಹದಿಂದ ಮುಕ್ತರಾಗಬೇಕಾಗಿದೆ. ಗಾಂಧೀಜಿ ಹರಿಜನ ನಿಧಿಗಾಗಿ ಒಡವೆಗಳನ್ನು ಸಂಗ್ರಹಿಸುತ್ತಿದ್ದಾಗ ಕೊಟ್ಟ ಹೆಣ್ಣುಮಕ್ಕಳು ಒಡವೆಗಳನ್ನು ಮತ್ತೆ ಎಂದೂ ತೊಡುವುದಿಲ್ಲ ಎಂಬ ಮಾತಿಗೆ ಬದ್ಧವಾಗಿಸಿ ತೆಗೆದುಕೊಳ್ಳುತ್ತಿದ್ದರು.

ಇದ್ದಾನೋ ಇಲ್ಲವೋ ಎಂಬಂತೆ ಸಂಶಯಾತ್ಮಕವಾಗಿ ಅಡ್ಡಗೋಡೆಯ ಮೇಲೆ ಕೂತಿರುವ ದೇವರನ್ನು ಗುಡಿ-ಚರ್ಚು-ಮಸೀದಿ ಮುಂತಾದವುಗಳಿಂದ ಬಿಡುಗಡೆ ಮಾಡಿ ಅವರವರ ಮನೋಗತ ಭಕ್ತಿಯ ವಿಷಯವಾಗಿಸಬೇಕಾಗಿದೆ. ಅಂದರೆ, ದೇವಾಲಯಗಳನ್ನು ಮಹಿಳೆಯರು ಬಹಿಷ್ಕರಿಸಬೇಕಾಗಿದೆ. ಏನಾಗುತ್ತದೋ ಅದು ಆಗಿಯೇ ಹೋಗಲಿ. ಮಹಿಳೆಯರು ಅಡಿಗೆ ಮನೆಗಳಿಂದ ಹೊರನಡೆಯಬೇಕಾಗಿದೆ. ಮಕ್ಕಳ ವಿಷಯದಲ್ಲಿಯೂ ಅಷ್ಟೆ, ಪ್ರಾಣಿ-ಪಕ್ಷಿಗಳ ಮಾದರಿಯನ್ನು, ಮಹಿಳೆಯರು ಅನುಸರಿಸಿದರೆ ಸಾಕು.

ಇವುಗಳಿಗೆ ಪೂರಕವಾಗಿ, ಈ ಮೇಲಿನ ಅಂಶಗಳಲ್ಲಿಯೇ ಸ್ವಲ್ಪಮಟ್ಟಿಗೆ ವ್ಯಕ್ತವಾಗಿರುವ ಇನ್ನೊಂದು ಸಂಗತಿಯೆಂದರೆ, ಪ್ರಕೃತಿಯ ಚೆಲುವೇ ಮೈವೆತ್ತಂತಿರುವ ಹೂವುಗಳನ್ನು ಬೆಳೆದು ಕಾದು ಮೌಲ್ಯವರ್ಧಿಸಿ ಮಾರಾಟದ ದಂಧೆ ಮಾಡಿಕೊಂಡಿರುವ ಬೆಳೆಗಾರರನ್ನು ಅಮೂಲ್ಯ ಹಣ್ಣು ತರಕಾರಿ ಬೆಳೆಗಾರರನ್ನಾಗಿ ಪರಿವರ್ತಿಸಬೇಕಾಗಿದೆ. ಭೂಮಿ ಹೀಗೆ ಅನಗತ್ಯ ದುಂದಾಗಿ ಬಳಕೆಯಾಗಬಾರದಲ್ಲವೆ?

ಈ ಎಲ್ಲಕ್ಕೂ ಕಿರೀಟಪ್ರಾಯವೆಂಬಂತೆ ಬಹುಚರ್ಚಿತ ಸಂಗತಿ ಎಂದರೆ ಮಹಿಳೆಯರಿಗೆ ಉರುಲಿನಂತೆಯೆ ಬಿಂಬಿತವಾಗುತ್ತಿರುವ ಪುರುಷ ಪ್ರಾಧಾನ್ಯ ವ್ಯವಸ್ಥೆ. ಶತಮಾನಗಳಿಂದ ಅನೇಕಾನೇಕ ಚರ್ಚೆಗೊಳಗಾಗಿದ್ದರೂ ಪರಿಹಾರವನ್ನೆ ಕಾಣದ ಇದು ಅಂಥ ದೊಡ್ಡ ಸಮಸ್ಯೆಯೇ ಅಲ್ಲ- ಯಾಕೆಂದರೆ ಇದೊಂದು ರೋಗ ಲಕ್ಷಣವೇ ಹೊರತು, ನಿಜವಾದ ರೋಗವಲ್ಲ. ನಿಜವಾದ ರೋಗ ಎಂದರೆ ಆಸ್ತಿಯ ಮೇಲಿನ ಹಕ್ಕು ಮತ್ತು ಅದನ್ನು ವಂಶಾನುಗತವಾಗಿ ನಿರ್ವಹಿಸುತ್ತಿರುವುದು. ಇತ್ತೀಚಿನ ದಿನಗಳಲ್ಲಿ ಕಲೆ, ಸಾಹಿತ್ಯ, ಸಂಗೀತ, ವಿಜ್ಞಾನ, ತಂತ್ರಜ್ಞಾನಾಧಾರಿತ ಬೌದ್ಧಿಕ ಹಕ್ಕುಗಳೂ ಕೂಡ ಕಡಿಮೆ ಹಗರಣಗಳನ್ನೇನೂ ಸೃಷ್ಟಿಸಿಲ್ಲ. ಇವನ್ನು ಸಹ ಆಸ್ತಿಯ ಹಕ್ಕು ಪಟ್ಟಿಗೆ ಸೇರಿಸಿದಂತೆಯೇ ಚರ್ಚಿಸಬೇಕಾಗುತ್ತದೆ. ಅಧಿಕ ಮೊತ್ತದ ಸಂಬಳ ಸಾರಿಗೆಗಳ ಔದ್ಯೋಗಿಕ ಹಕ್ಕು ಕೂಡ ಸಮಪಾಲು ಸಮಬಾಳುಗಳ ದೃಷ್ಟಿಯಿಂದ ಚಿಂತನಾರ್ಹ ಸಂಗತಿ.

ಉದಾಹರಣೆಗಳ ಮೂಲಕ ಸ್ಪಷ್ಟಪಡಿಸುವುದಾದರೆ, ಉಳ್ಳವರು ಡಾಕ್ಟರು ಇಂಜಿನಿಯರುಗಳಾಗುವರಯ್ಯಾ ನಾನೇನ ಮಾಡುವೆನಯ್ಯಾ. ಬಡವನಯ್ಯಾ, ಸೋಗೆಯೆ ಸೂರು, ಹುಲ್ಲೆ ಹಾಸಿಗೆ ಬಡವರ ಬಂಧು ಮಾದೇವ ಅವರಿಟ್ಟಂತಿರುವೆನಯ್ಯಾ; ಬೆಳ್ಳಿಯ ಚಮಚ ಬಾಯಲ್ಲಿಟ್ಟುಕೊಂಡು ಹುಟ್ಟಿದ ಈ ಜಗತ್ತು ಕಂಡ ಅತಿದೊಡ್ಡ ಮೇಧಾವಿ ಬರ್ಟ್ರಂಡ್ ರಸಲ್ ವಯಸ್ಸಿಗೆ ಬಂದ ಮೇಲೆ ಪಿತ್ರಾರ್ಜಿತವನ್ನು ಸಂಪೂರ್ಣ ತ್ಯಜಿಸಿ ಸ್ವಂತಿಕೆಯ ಆಧಾರದ ಮೇಲೆಯೇ ಎಲ್ಲ ಬಗೆಯಿಂದಲೂ ತಾನೆ ಒಂದು ಜಗತ್ತಿನ ಅತಿದೊಡ್ಡ ಆಸ್ತಿಯಾಗಿ ವಿಜೃಂಭಿಸಿದ್ದಾನೆ. ಅಪಾರವಾದ ಭೌತಿಕ ಮತ್ತು ಬೌದ್ಧಿಕ ಆಸ್ತಿಯನ್ನೆಲ್ಲ ತನ್ನ ಬದುಕಿನ ಒಂದು ಕಾಲಘಟ್ಟದಲ್ಲಿ ಸಾರ್ವಜನಿಕಗೊಳಿಸಿದ ಟಾಲ್‍ಸ್ಟಾಯ್ ಸ್ಫೋಟಿಸಿದ ಕೌಟುಂಬಿಕ ಬಿರುಗಾಳಿಯನ್ನೆದುರಿಸಲಾರದೆ ಸೋತು ಸುಣ್ಣವಾಗಿ ಎಂಬತ್ತೆರಡನೆಯ ವಯಸ್ಸಿನಲ್ಲಿ ಮನೆಬಿಟ್ಟು ಹೊರಬಂದು ಬೀದಿಯ ಹೆಣವಾಗಿ ಕೊನೆಯಾಗುತ್ತಾನೆ.

ಸುಮ್ಮನೆ ಕಿರುಬೆರಳೆತ್ತಿ ಆರ್ತತೆಯಿಂದ ನೋಡಿದರೇ ಸಾಕು ಅನಾಮತ್ತಾಗಿ ತಬ್ಬಿ ಮೇಲೆತ್ತಿಕೊಳ್ಳುವ ಹಲವಾರು ಈ ಬಗೆಯ ವ್ಯಕ್ತಿಗಳು ಈ ಭೂಮಿಯ ಮೇಲೆ ಈಗಾಗಲೆ ಆಗಿಹೋಗಿದ್ದಾರೆ. ಇಂಥವರಲ್ಲಿ ಯಾರೊಬ್ಬರಾದರೂ ಸಾಕು ದಾರಿದೀಪವಾಗುತ್ತಾರೆ. ಡಾ. ಜ್ಯೋತಿ ತಮ್ಮ ಲೇಖನದಲ್ಲಿ ಗಾಂಧೀಮಾರ್ಗವನ್ನು ನಮ್ಮ ಮುಂದಿಟ್ಟಿದ್ದಾರೆ. ಇದು ಬಹುಮಟ್ಟಿಗೆ ನಮ್ಮ ಪ್ರಾಚೀನ ಋಷ್ಯಾಶ್ರಮ ಜೀವನ ಕ್ರಮಕ್ಕೆ ಹತ್ತಿರವಾಗುತ್ತಿರುವುದರಿಂದ ಪರ್ಯಾಯವಾಗಿ ನಾನು ನನ್ನ ಎರಡನೆಯ ಟಿಪ್ಪಣಿಯಾಗಿ ಕುವೆಂಪು ಅವರ ಸರ್ವರೀತಿಯಿಂದಲೂ ಸುಗಮ ಸಂಗೀತದಂತಿರುವ ಸಹನೀಯ ಸುಂದರ ಸಾಂಸಾರಿಕ ಜೀವನ ಕ್ರಮವನ್ನು ಸ್ಥೂಲವಾಗಿ ಮುಂದಿಡಬಯಸಿದ್ದೇನೆ.

ಕುವೆಂಪು ಈ ದೇಶ ಕಂಡ ಅತಿದೊಡ್ಡ ಚಿಂತನಶೀಲ ಸಾಹಿತಿ ಮತ್ತು ತತ್ವಜ್ಞಾನಿ. ಅವರ ಗದ್ಯ-ಪದ್ಯಗಳೆರಡರಲ್ಲಿಯೂ ಭಾವನಾಂಶಕ್ಕೆ ಸರಿಮಿಗಿಲಾಗಿಯೆ ಚಿಂತನ ಚೈತನ್ಯ ಹೆಣೆದುಕೊಂಡಿರುತ್ತದೆ. ಕಾವ್ಯ ‘ಅಮಲನ ಕತೆ’ಯಿಂದ ಹಿಡಿದು, ಮಹಾಕಾವ್ಯ ‘ಶ್ರೀ ರಾಮಾಯಣ ದರ್ಶನಂ’ ವರೆಗೆ, ಸಣ್ಣಕತೆ ‘ಶ್ರೀಮನ್ಮೂಕವಾಗಿತ್ತು’ವಿನಿಂದ ಹಿಡಿದು ಕಾದಂಬರಿ ‘ಮಲೆಗಳಲ್ಲಿ ಮದುಮಗಳು’ವರೆಗೆ, ಭಾಷಣಗಳು, ‘ಮಕ್ಕಳಿಗೇಕೆ ವೈಚಾರಿಕತೆ’ಯಿಂದ ಹಿಡಿದು ಒಕ್ಕೂಟದ ‘ಸಂಸ್ಕøತಿ ಕ್ರಾಂತಿಗೆ ಕಹಳೆ ನಾಂದಿ’ಯವರೆಗೆ ಎಲ್ಲಿ ನೋಡಿದರಲ್ಲಿ ಹಾಸುಹೊಕ್ಕಾಗಿರುವುದು ಆಧುನಿಕ ಬದುಕನ್ನು ಸರ್ವಂಕಷವಾಗಿ ಸಹನೀಯಗೊಳಿಸುವ ಈ ಚಿಂತನಶೀಲ ಪ್ರತಿಭೆಯೆ. ಇಲ್ಲಿ ಗಮನಿಸಬೇಕಾದ ಬಹಳ ಮುಖ್ಯ ಸಂಗತಿಯೆಂದರೆ ಈ ಪ್ರತಿಭೆ ತನ್ನ ಲೌಕಿಕ ನೆಲೆಯ ಸರಳತೆಯಿಂದ ಶುರುವಾಗಿ ಅಲೌಕಿಕ ನೆಲೆಯ ಪರಮಹಂಸನವರೆಗೆ ಏಕಪ್ರಕಾರವಾಗಿ ವ್ಯಾಪಿಸಿಕೊಂಡಿರುವುದು.

ಇದೆಲ್ಲ ಸಾಧ್ಯವಾದದ್ದು ಕುವೆಂಪು ಅವರ ಸೃಜನಶೀಲ ಚೈತನ್ಯದಿಂದ ಎಂಬುದು ನಿಜವೇ ಆಗಿದ್ದರೂ ಆ ಶಕ್ತಿ ಚೈತನ್ಯಕ್ಕೆ ಸಮರ್ಥ ತೊಡುಗೆಯಾಗಿ ಸಹಕರಿಸಿದ ಪಂಚೇಂದ್ರಿಯಯುಕ್ತ ದೇಹವನ್ನು ಮರೆಯುವಂತಿಲ್ಲ. ಪ್ರಾಣಿಗಳಿಗೆ ಶರೀರವೆ ಸಮಸ್ತವಾದರೂ ಆಲೋಚನಾ ಜೀವಿಯಾದ ಮನುಷ್ಯನಿಗೆ ಅದೊಂದು ಅನಿವಾರ್ಯ ತೊಡುಗೆ. ಕಳೆದ ನಾಲ್ಕೈದು ಸಹಸ್ರ ವರ್ಷಗಳಲ್ಲಿ ನಾಗರಿಕವಾಗಿ ಏನನ್ನು ಸಾಧಿಸಿದ್ದರೂ ಅದು ಅವನ ಬೌದ್ಧಿಕ ಚಟುವಟಿಕೆಗಳಿಗೆ ಆಶ್ರಯ ತಾಣವಾಗಿ ನಿಂತು ಹೊರೆದ ಈ ‘ದೇಹಶ್ರೀ’ಯನ್ನು ಹೇಗೆ ತಾನೆ ಕಡೆಗಣಿಸಲಾದೀತು? ಆ ಕಾರಣಕ್ಕಾಗಿಯೇ ಕುವೆಂಪು ತಮ್ಮ ‘ದೇಹಕ್ಕೆ’ ಎಂಬ ಚಿಕ್ಕ ಕವನದಲ್ಲಿ

ಹೆದರಬೇಡ ನನ್ನ ದೇಹ

ನೀನು ನನ್ನ ಪ್ರಾಣಗೇಹ

ನಿನ್ನ ಕ್ಷೇಮ ನಿನ್ನ ಸ್ನೇಹ

ತಪ್ಪಿ ನಡೆಯಲಾತ್ಮಗೇಯಕೆಲ್ಲಿ ವಿಕಸನ?

ನೀನೆ ಸಕಲ ಸಾಧನಗಳಿಗೆ ಮೊದಲ ಸಾಧನ

ನಿನ್ನ ರಕ್ಷೆಗೆನಿತು ಬೇಕೊ

ನಿನ್ನ ಶಿಕ್ಷೆಗೆನಿತು ಸಾಕೋ

ಅನಿತೆ ಭಿಕ್ಷೆ ನಿನಗೆ ಇದೆಕೋ

ಅದಕೆ ಮೀರಿ ನಿನಗೆ ಭೋಗವೇಕೋ, ಸೋದರ

ನಿನಗಾಗಿಯೇ ನೀನು ಬದುಕೆ, ನೀ ವೃಕೋದರ

ನಿನಗೆ ಭೋಗ ಬೇಡವೆಂದು

ನಾನು ಹೇಳುತಿಲ್ಲ, ಬಂಧು

ಆಗಳೀಗ ಒಂದು ಸಾರಿ

ಉಂಡು ಸುಖಿಸು ಹೊಟ್ಟೆಮೀರಿ, ತಾನೆ ಒದಗಲು

ನೀನೆ ಬೇಗಿ ಹುಡುಕ ಹೋದೆ, ನಿನಗೆ ಒದೆಗಳು

(ಪುಟ 476, ಸಮಗ್ರಕಾವ್ಯ ಸಂಪುಟ 2)

ಈ ವೇಳೆಗಾಗಲೆ ಇದು ಗಾಯಿತ್ರಿ ಮಂತ್ರವಾಗಬೇಕಿತ್ತು. ಈ ತಿಳಿವಳಿಕೆ ಎಂದು ಜಗತ್ತಿನೆಲ್ಲಾ ಮಾನವತೆಗೆ ಮನವರಿಕೆಯಾಗುತ್ತದೋ ಅಂದು ನಮ್ಮೆಲ್ಲ ದಾರಿದ್ರ್ಯ, ಗುಲಾಮಗಿರಿ ನಾಶವಾಗುತ್ತವೆ.

ಇವತ್ತಿನ ಮನುಷ್ಯನ ದುಷ್ಟತನಕ್ಕೆಲ್ಲ ಮೂಲ ಕಾರಣ ಹಣ, ಅದನ್ನು ಮಾನ ಮರ್ಯಾದೆ, ನಾಚಿಕೆ ಹೇಸಿಗೆ ಯಾವುದನ್ನೂ ಲೆಕ್ಕಿಸದೆ ಸಂಪಾದಿಸಲು ಹೊರಟಿರುವ ಜನ. ಕುವೆಂಪು ದೇಹಕ್ಕೆ ಹೇಗೋ ಹಾಗೆಯೇ ಹಣಕ್ಕೂ ಮರ್ಯಾದೆ ಕೊಡುತ್ತಾರೆ. ಉಪನ್ಯಾಸಕ ವೃತ್ತಿಯಿಂದಾರಂಭಿಸಿ ಉಪಕುಲಪತಿಯವರೆಗೆ ಪಾಲಿಗೆ ಬಂದ ಎಲ್ಲ ಹುದ್ದೆಗಳನ್ನೂ ಗೌರವದಿಂದ ಸ್ವೀಕರಿಸಿ ಹುದ್ದೆಗೆ ಮರ್ಯಾದೆ ತರುವ ಹಾಗೆ ಕೆಲಸ ಮಾಡಿ ವಿಶ್ರಾಂತಿ ಪಡೆದ ತರುಣದಲ್ಲಿ ಬರೆದ ‘ತೆರಿಗೆ ನಾಯಿ’ಯ ಕವನದ ಕೊನೆಯ ಕೆಲವು ಸಾಲುಗಳು ಈ ಕೆಳಗಿನವು-

ದುಡಿಮೆಯನ್ನೆ ಕಡಿಮೆಗೊಳಿಸಿ

ತೆರಿಗೆ ಗೋಳಿದೇಕೆ?

ಕೊಡುವ ಮೊದಲೆ ಕಡಿದುಕೊಳ್ಳಿ

ಕೊಟ್ಟು ಕೊರೆವುದೇಕೆ?

ತೆರಿಗೆಯಿರುವ ನಾಕವೂ ನರಕ ಲೋಕವೆ

ತೆರಿಗೆಯಿರದ ನರಕವೂ ನಿಜದಿ ನಾಕವೆ.

(ಸಮಗ್ರ ಸಂಪುಟ, ಪುಟ 427)

ಇದೊಂದು ಶ್ರೇಷ್ಠ ದರ್ಜೆಯ ಆರ್ಥಿಕ ಚಿಂತನೆ, ಎಷ್ಟು ಹೇಳಿದರೂ ಹೊಸದಾಗಿಯೇ ಕಾಣಿಸುವ ‘ಪ್ರಕೃತಿ ನಮ್ಮ ಅಗತ್ಯಗಳನ್ನು ಪೂರೈಸಬಲ್ಲುದು; ನಮ್ಮ ಆಸೆಗಳನ್ನಲ್ಲ’ ಎಂಬಂಥ ಗಾಂಧೀಜಿ ಜೀವನಸೂತ್ರ ಕೂಡ ಇದೇ ಅಲ್ಲವೆ?

ತಂದೆ ಮಕ್ಕಳ ಆರ್ಥಿಕ ಸಂಬಂಧ ಹೇಗಿರಬೇಕು ಎಂಬುದಕ್ಕೆ ಕುವೆಂಪು ತೇಜಸ್ವಿಗೆ ಬರೆದ ಒಂದು ಕಾಗದದ ಕೆಲವು ಸಾಲುಗಳು ಈ ಕೆಳಗಿನವು-

ಉದಯರವಿ                                                                                         4-5-75

ಚಿ.ತೇಜಸ್ವಿಗೆ

ನಿನ್ನ ತಾರೀಖಿಲ್ಲದ ಕಾಗದ ತಲುಪಿತು.

ನಿನ್ನ ‘ನಿಗೂಢ ಮನುಷ್ಯರು’ ಸಿನಿಮಾ ಆಗುವ ವಿಚಾರ ಪತ್ರಿಕೆಯಲ್ಲಿ ಬಂದ ಹಾಗಿತ್ತು. ಯಾರಾದರೂ ಮಾಡಲಿ. ಚೆನ್ನಾಗಿ ಜಾತಿ ಪಕ್ಷಪಾತದ ಸೋಂಕಿಲ್ಲದೆ ಮಾಡಬೇಕಾದ್ದು ಮುಖ್ಯ. ಈಗ ಬ್ಯಾಂಕಿನ ಬಡ್ಡಿಯನ್ನು ಏರಿಸಿದ್ದಾರೆ 20%ಕ್ಕೆ. ನಾನು 30,000 ಬೆಳೆ ಸಾಲ ತೆಗೆದುಕೊಳ್ಳುತ್ತೇನೆ ಎಂದು ಬರೆದಿದ್ದೀಯಾ. ಬೆಳೆ ಸಾಲ ಎಂದರೇನು? ಯಾವಾಗ ತೀರಿಸಬೇಕು? ನೀನು ಹಿಂದೆಯೆ ಬ್ಯಾಂಕಿನಿಂದ ಸಾಲ ತೆಗೆದುಕೊಂಡಿದ್ದನ್ನೆಲ್ಲ ತೀರಿಸಿಯಾಯಿತೆ? ಅದಕ್ಕೆ ಎಷ್ಟು ಬಡ್ಡಿ ಹಾಕಿದ್ದರು? ಅಥವಾ ಹಾಕಿದ್ದಾರೆ? ಆ ಸಾಲಕ್ಕೂ ಈ ಸಾಲಕ್ಕೂ ಏನು ವ್ಯತ್ಯಾಸ? ಏತಕ್ಕಾಗಿ ಈ ಹೊಸ ಸಾಲ ಎತ್ತುತ್ತೀಯ? ಈ ಸಾರಿ ಫಸಲು ಚೆನ್ನಾಗಿರುವುದರಿಂದ ಸಾಲವನ್ನೆಲ್ಲಾ ತೀರಿಸಿಬಿಡುತ್ತೇನೆ ಎನ್ನುತ್ತಿದ್ದಿ. ಆದರೆ ಸಾಲ ತೀರಿಸುವುದಕ್ಕೆ ಬದಲಾಗಿ 30,000 ಸಾಲ ಎತ್ತುತ್ತಿದ್ದೇನೆ ಎಂದು ಬರೆದಿದ್ದೀಯಲ್ಲಾ?…

ಒಂದು ವೇಳೆ ನಿನಗೆ ಕೊಟ್ಟರೆ ನನಗೆ ಬೇಕಾದಾಗ ಯಾವಾಗ ಒಟ್ಟಿಗೆ ತೀರಿಸಲು ಸಾಧ್ಯವಾಗುತ್ತದೆ… ಹಿಂದೆ ನಿನ್ನ ಜೀಪಿನ ವ್ಯವಹಾರದಲ್ಲಿ 8000 ಮತ್ತು ಸ್ಕೂಟರಿನ ವ್ಯವಹಾರದಲ್ಲಿ 4000 ಕೊಟ್ಟಿದ್ದನ್ನೇ ಇದುವರೆಗೂ ಹಿಂದಿರುಗಿಸಲು ನಿನಗೆ ಸಾಧ್ಯವಾಗಿಲ್ಲ.

ನೀನು ಹಿಂದೆ ಬ್ಯಾಂಕಿನಿಂದ ನಿನಗೆ 80,000 ಸ್ಯಾಂಕ್ಷನ್ ಆಗಿದೆ ಎಂದು ಹೇಳುತ್ತಿದ್ದೆ. ಅದೆಲ್ಲಾ ಏನಾಯಿತು?

ತೋಟದ ಜಮಾ ಖರ್ಚು ವೆಚ್ಚ ವಿವರ ಇಡುತ್ತಿದ್ದೀಯಾ? ನಾನು ಕೇಳಿದ್ದಕ್ಕೆಲ್ಲ ತುಸು ವಿವರವಾಗಿ ತಿಳಿಸುತ್ತಿಯಾ ಎಂದು ನಂಬಿದ್ದೇನೆ..

ಮೇ 3, 2015ರ ಭಾನುವಾರದಂದು ಕುವೆಂಪು ತೇಜಸ್ವಿಗೆ ಬರೆದ ಎರಡು ಕಾಗದಗಳು ಪ್ರಜಾವಾಣಿಯಲ್ಲಿ ಅಚ್ಚಾಗಿವೆ. ಅದರಲ್ಲಿ ಒಂದು ಕಾಗದದ ಆಯ್ದ ಭಾಗಗಳನ್ನು ಮಕ್ಕಳನ್ನು ಬೆಳೆಸಬೇಕಾದ ರೀತಿಗೆ ಉದಾಹರಣೆಯಾಗಿ ಇಲ್ಲಿ ಕೊಡಲಾಗಿದೆ. ವಿವರಣೆ ಅನಗತ್ಯ. ಕುವೆಂಪು ಶುದ್ಧ ಆಸ್ತಿಕರಾದರೂ ಅವರೆಂದೂ ದೇವಸ್ಥಾನಗಳಿಗೆ ಹೋದವರಲ್ಲ. ಪರಮಹಂಸರಂಥವರನ್ನೆ ದೇವರೆಂದು ನಂಬಿ ಮನೆಯಲ್ಲಿಯೆ ಆಧ್ಯಾತ್ಮಿಕ ಸಾಧನೆಗೆ ಮಾತ್ರ ಪೂಜಿಸಿದವರು. ಮಕ್ಕಳ ಮದುವೆಯನ್ನೆಲ್ಲ ತಾವೇ ರೂಪಿಸಿದ ಮಂತ್ರಮಾಂಗಲ್ಯದ ಮೂಲಕ ಸರಳವಾಗಿ ಮಾಡಿ ಮಾದರಿಯಾದವರು. ಜೀವನವಿಡೀ ಸಂತೋಷವಾಗಿರುವುದಕ್ಕೆ ಇದಕ್ಕಿಂತ ಒಳ್ಳೆಯ ಮಾದರಿ ಬೇಕೆ?

ಕೊನೆಯದಾಗಿ ದೇವನೂರ ಮಹಾದೇವ ಅವರು ‘ನನ್ನ ದೇವರು’ ಕುರಿತು ಬರೆದಿರುವ ಒಂದು ಸಣ್ಣ ಟಿಪ್ಪಣಿಯನ್ನು ಅವರ ಮಾತಿನಲ್ಲಿಯೇ ಮುಂದಿಡುತ್ತಿದ್ದೇನೆ.

ನನ್ನ ದೇವರು ನನ್ನೊಳಗೆ ಉಳಿದಿರುವುದು ಹೀಗೆ:

ಕವಿ ಸಿದ್ಧಲಿಂಗಯ್ಯ ಒಮ್ಮೆ ನನಗೆ ಹೇಳಿದ ಕತೆಯಲ್ಲಿ ಮನೆಮಂಚಮ್ಮ ಎಂಬ ಗ್ರಾಮದೇವತೆಯ ಒಳಗಿಂದ ನನ್ನ ದೇವರು ಒಡಮೂಡುತ್ತದೆ- ಒಂದ್ಸಲ ಒಂದು ಗ್ರಾಮದ ಜನರೆಲ್ಲಾ ಸೇರಿ ತಮ್ಮ ದೇವತೆಗೆ ಗುಡಿಕಟ್ಟಲು ಆರಂಭಿಸುತ್ತಾರೆ. ಹೀಗೆ ಕಟ್ತಾ ಚಾವಣಿಮಟ್ಟಕ್ಕೆ ಆ ಗುಡಿ ಬಂದಾಗ ಒಬ್ಬನ ಮೈಮೇಲೆ ಆ ದೇವತೆ ಮಂಚಮ್ಮ ಆವಾಹಿಸಿಕೊಂಡು ‘ನಿಲ್ಸಿ ನನ್ ಮಕ್ಕಳಾ’ ಎಂದು ಅಬ್ಬರ ಮಾಡುತ್ತಾಳೆ. ಆ ಅಬ್ಬರಕ್ಕೆ ಜನ ತಮ್ಮ ಕೆಲ್ಸ ನಿಲ್ಸಿ ಕಕ್ಕಾಬಿಕ್ಕಿಯಾಗಿ ನೋಡುತ್ತಿರಲು ಆ ದೇವತೆ ಹಾಗೂ ಆ ಜನರ ನಡುವೆ ಮಾತುಕತೆ ನಡೆಯುತ್ತದೆ:

‘ಏನ್ರಯ್ಯಾ, ಏನ್ ಮಾಡ್ತಾ ಇದ್ದೀರಿ?’

‘ನಿನಗೊಂದು ಗುಡಿಮನೆ ಕಟ್ತಾ ಇದ್ದೀವಿ ತಾಯಿ’

‘ಓಹೋ, ನನಗೇ ಗುಡಿಮನೆ ಕಟ್ತಾ ಇದ್ದೀರೋ? ಹಾಗಾದರೆ ನಿಮಗೆಲ್ಲಾ ಮನೆ ಉಂಟಾ ನನ್ನ ಮಕ್ಕಳಾ?’

‘ನನಗಿಲ್ಲ ತಾಯಿ’- ಅಲ್ಲೊಬ್ಬ ಹೇಳ್ತಾನೆ.

‘ಹಾಗಾದರೆ ಎಲ್ಲರಿಗೂ ಮನೆ ಆಗುವವರೆಗೆ ನನಗೂ ಮನೆ ಬೇಡ’

-ಹೀಗೆಂದ ಮಂಚಮ್ಮದೇವಿ ಮನೆಮಂಚಮ್ಮನಾಗುತ್ತಾಳೆ!

ಛಾವಣಿ ಇಲ್ಲದ ಗುಡಿಯಲ್ಲಿ ತಾಯಿ ಮನೆಮಂಚಮ್ಮ ಇಂದು ಪೂಜಿತಳಾಗುತ್ತಿದ್ದಾಳೆ. ಈ ರೀತಿಯಲ್ಲಿ ಛಾವಣಿ ಇಲ್ಲದ ಗುಡಿಯಲ್ಲಿ ಕಾರುಣ್ಯ ಸಮತೆಯ ಬುದ್ಧನನ್ನು ಇಟ್ಟರೆ ಅದೇ ನನ್ನ ದೇವರಾಗುತ್ತದೆ.

(ಎದೆಗೆಬಿದ್ದ ಅಕ್ಷರ, ಪುಟ – 5)

ದೇವನೂರರ ‘ಎದೆಗೆ ಬಿದ್ದ ಅಕ್ಷರ’ವನ್ನು ಭಗವದ್ಗೀತೆ, ಕುರಾನ್, ಬೈಬಲ್‍ಗಳಂತೆಯೇ ನೈತಿಕ ಪಠ್ಯವಾಗಿ ಓದಬಹುದು.

ಈ ಮಾದರಿಯ ಜನ ಈ ಭೂಮಿಯ ಮೇಲೆ ಒಂದು ಪುಟ್ಟ ರಾಷ್ಟ್ರವಾಗಬಹುದಾದಷ್ಟು ಸಂಖ್ಯೆಯಲ್ಲಿ ಇದ್ದಾರೆ. ಆ ಪಟ್ಟಿಗೆ ನಾವೆಲ್ಲಾ ಸೇರುವುದಾದರೆ ಅದಕ್ಕಿಂತ ಭಾಗ್ಯ ಇನ್ನೇನಿದೆ? ಮನುಷ್ಯ ಚೈತನ್ಯದ ಗುರಿ ದೇವರಲ್ಲಿ ಐಕ್ಯವಾಗುವುದಲ್ಲ. ಬದಲಿಗೆ ದೇವರೇ ಆಗಿ ವಿಕಾಸಗೊಳ್ಳುವುದು.

Leave a Reply

Your email address will not be published.