ಬದಲಾಗಬೇಕಿರುವುದು ವಿಶ್ವವಿದ್ಯಾಲಯಗಳ ಶೈಕ್ಷಣಿಕ ಮಾದರಿ

-ಕೆ.ವಿ.ನಾರಾಯಣ

ಈಗ ಎಲ್ಲವೂ ಇಳಿಜಾರಿನಲ್ಲಿದೆ ಎಂದು ಹೇಳುವಾಗ ಎಲ್ಲವೂ ಏರುಗತಿಯಲ್ಲಿದ್ದ ಹೊತ್ತು ಒಂದಿತ್ತು ಎಂಬ ನಂಬಿಕೆ ಹಲವರಲ್ಲಿ ಇದ್ದಂತಿದೆ. ಒಂದು ಸುವರ್ಣ ಯುಗವಿತ್ತು, ನಾವದನ್ನು ಕಳೆದುಕೊಂಡಿದ್ದೇವೆ; ಮರಳಿ ಅದನ್ನು ಪಡೆಯಬೇಕೆಂಬ ಹಂಬಲ ಎಲ್ಲೆಡೆಯೂ ಇದ್ದಂತಿದೆ. ಹಾಗೆ ಎಲ್ಲ ಸರಿಯಾಗಿದ್ದುದು ಯಾವಾಗ?

ನೀವು ಪಟ್ಟಿ ಮಾಡಿರುವ ಕೇಳ್ವಿಗಳೆಲ್ಲ ಒಂದಕ್ಕೊಂದು ನಂಟನ್ನು ಪಡೆದಿವೆಯಾಗಿ ಅವೆಲ್ಲಕ್ಕೂ ಬಿಡಿಬಿಡಿಯಾಗಿ ಹೇಳುವುದರ ಬದಲು ಒಟ್ಟಾರೆಯಾಗಿ ಕೆಲವು ಮಾತುಗಳನ್ನು ಬರೆಯುತ್ತಿದ್ದೇನೆ.

ನಿಮ್ಮ ಕೇಳ್ವಿಗಳಲ್ಲಿ ಆತಂಕ, ಹತಾಶೆ, ಹಳಹಳಿಕೆ, ವಿಷಾದ ಇವೆಲ್ಲದರ ನೆರಳು ಕವಿದಿದೆ. ನಮ್ಮ ಸಂದರ್ಭದಲ್ಲಿ ಈ ಬಗೆಯ ಮಾತುಗಳು ಕೇಳಲುತೊಡಗಿ ಒಂದೆರಡು ದಶಕಗಳೇ ಕಳೆದಿವೆ ಎನ್ನುವುದು ನನ್ನ ತಿಳಿವಳಿಕೆ. ಕೆಲವು ವರುಶಗಳ ಹಿಂದೆಯಂತೂ ಮಾಧ್ಯಮಗಳಲ್ಲಿ ಈ ವಿಷಯವನ್ನು ಇಟ್ಟುಕೊಂಡು ಸಮೀಕ್ಷೆ, ಚರ್ಚೆಗಳು ನಡೆದವು. ಬಳಿಕ ಯುಜಿಸಿ ನೀಡಿದ ಸಲಹೆಗಳನ್ನು ಅನುಸರಿಸಿ ಕೆಲವು ತೋರಿಕೆಯ ಬದಲಾವಣೆಗಳು ನಡೆದಿವೆ. ಆದರೆ ಸಮಸ್ಯೆಯ ಮೂಲವನ್ನು ಹುಡುಕುವ ಕೆಲಸ ನಡೆದಿದೆ ಎಂದು ತೋರುತ್ತಿಲ್ಲ.

ಈಗ ಎಲ್ಲವೂ ಇಳಿಜಾರಿನಲ್ಲಿದೆ ಎಂದು ಹೇಳುವಾಗ ಹೀಗಲ್ಲದೆ ಎಲ್ಲವೂ ಏರುಗತಿಯಲ್ಲಿದ್ದ ಹೊತ್ತು ಒಂದಿತ್ತು ಎಂಬ ನಂಬಿಕೆ ಹಲವರಲ್ಲಿ, ಅಷ್ಟೇಕೆ ಈ ಪ್ರಶ್ನೆಗಳನ್ನು ರೂಪಿಸಿದ ತಮ್ಮಲ್ಲಿ ಕೂಡ ಇದ್ದಂತಿದೆ. ಒಂದು ಸುವರ್ಣ ಯುಗವಿತ್ತು, ನಾವದನ್ನು ಕಳೆದುಕೊಂಡಿದ್ದೇವೆ; ಮರಳಿ ಅದನ್ನು ಪಡೆಯಬೇಕೆಂಬ ಹಂಬಲ ಎಲ್ಲೆಡೆಯೂ ಇದ್ದಂತಿದೆ. ಹಾಗೆ ಎಲ್ಲ ಸರಿಯಾಗಿದ್ದುದು ಯಾವಾಗ? ಆದರೆ ಹಾಗೇನೂ ಇರಲಿಲ್ಲ ಎನ್ನುವುದೇ ದಿಟ. ಅಧ್ಯಯನಕಾರರ ಸಂಖ್ಯೆ ಕಡಿಮೆ ಇದ್ದ ಕಾಲದಲ್ಲಿ ಈಗ ನಾವು ಗುರುತಿಸುತ್ತಿರುವ ಅಧ್ಯಯನ ಪ್ರಬಂಧಗಳ ಮಿತಿಗಳು ಗೋಚರವಾಗುತ್ತಿಲಿಲ್ಲ

ಮುಖ್ಯವಾಗಿ ವಿಶ್ವವಿದ್ಯಾಲಯಗಳ ಪಿ.ಎಚ್.ಡಿ. ಪ್ರಬಂಧಗಳ ಗುಣಮಟ್ಟ ಕಳಪೆಯಾಗಿದೆ ಎನ್ನುವುದು ಒಂದು ತಕರಾರು. ಆ ಪ್ರಬಂಧಗಳ ಸಿದ್ಧತೆ, ರಚನೆ, ಮೌಲ್ಯಮಾಪನಗಳಲ್ಲಿ ಕಟ್ಟುನಿಟ್ಟಾದ ಮಾನದಂಡಗಳನ್ನು ಅಳವಡಿಸಿಕೊಳ್ಳುತ್ತಿಲ್ಲ ಎನ್ನುವುದು ಇನ್ನೊಂದು ತಕರಾರು. ಅಂದರೆ ನಾವು ಸಮಸ್ಯೆಯನ್ನು ನೈತಿಕತೆಯ ನೆಲೆಯಲ್ಲಿ ಮತ್ತು ನಿರ್ವಹಣಾ ವಿಧಾನದ ಕೊರತೆಯ ನೆಲೆಯಲ್ಲಿ ವಿವರಿಸಿಕೊಳ್ಳುತ್ತಿದ್ದೇವೆ. ಕೆಲವು ವಿಶ್ಲೇಷಕರು ಅನಿಯಂತ್ರಿತ ಸಂಖ್ಯೆಯಲ್ಲಿ ಅಧ್ಯಯನ ಪ್ರಬಂಧಗಳು ಸಿದ್ಧಗೊಳ್ಳುತ್ತಿರುವುದರ ಕಡೆಗೆ ಗಮನ ಸೆಳೆಯುತ್ತಿರಬಹುದು. ಮತ್ತೆ ಕೆಲವರು ಇಂತಹ ಪಿಎಚ್.ಡಿ ಅಧ್ಯಯನಕಾರರ ಸಾಮಾಜಿಕ ನೆಲೆಗಟ್ಟು ವಿಸ್ತಾರಗೊಳ್ಳುತ್ತಿರುವುದರಿಂದಲೇ ಗುಣಮಟ್ಟ ನಿಯಂತ್ರಣ ಸಾಧ್ಯವಾಗುತ್ತಿಲ್ಲ ಎಂದೂ ವಿವರಿಸುತ್ತಿರಬಹುದು. ನಾನೀಗ ವಿವರಣೆ ವ್ಯಾಖ್ಯಾನಗಳ ವಿಮರ್ಶೆಗೆ ತೊಡಗುವುದಿಲ್ಲ. ಇಂತಹ ಒಂದು ಸಮಸ್ಯೆ ಇದೆ ಎನ್ನುವುದಾದರೆ ಅದನ್ನು ನೋಡಲು ಬೇರೆ ದಾರಿಗಳಿವೆಯೇ ಎಂಬ ಹುಡುಕಾಟ ನನ್ನದು.

ಪಿ.ಎಚ್.ಡಿ ಪ್ರಬಂಧಗಳು ಸಂಶೋಧನೆಯ ಮೈಲಿಗಲ್ಲುಗಳಲ್ಲ. ವಿಜ್ಞಾನ, ಮಾನವಿಕ ಮತ್ತು ಸಮಾಜಶಾಸ್ತ್ರೀಯ ವಲಯಗಳಲ್ಲಿ ಇಂಥ ಅಧ್ಯಯನಗಳ ಸ್ವರೂಪ ಮತ್ತು ವ್ಯಾಪ್ತಿ ಬೇರೆಬೇರೆಯ ಬಗೆಯಲ್ಲಿರುತ್ತದೆ. ಬೆರಳೆಣಿಕೆಯ ಪ್ರಸಂಗಗಳನ್ನು ಬಿಟ್ಟರೆ ಪಿ.ಎಚ್.ಡಿ ಪ್ರಬಂಧಗಳು ಮರಳಿ ಮುಂದಿನ ಅಧ್ಯಯನಕಾರರ ಗಮನಕ್ಕೆ ಬಂದಿರುವ ಸಂದರ್ಭಗಳು ಕಡಿಮೆ. ಈಗ ನಮ್ಮಲ್ಲೇ ಖ್ಯಾತರಾಗಿರುವ ಹಲವು ಸಂಶೋಧಕರ ಪಿ.ಎಚ್.ಡಿ ಪ್ರಬಂಧಗಳ ಬಳಕೆ, ಪರಿಚಯಗಳಿರಲಿ ಅವುಗಳ ಶೀರ್ಷಿಕೆ ಕೂಡ ಮುಂದಿನ ತಲೆಮಾರಿನ ಸಂಶೋಧಕರಿಗೆ ಗೊತ್ತಿರುವುದಿಲ್ಲ. ಒಂದುವೇಳೆ ಆ ಪ್ರಬಂಧಗಳು ಪರಾಮರ್ಶೆಗೆ ಬಂದರೂ ಅವುಗಳಲ್ಲಿ ಮಾಹಿತಿ ಮತ್ತು ನಿರ್ಣಯಗಳನ್ನು ಉಲ್ಲೇಖಿಸಲು ಬಳಕೆಯಾಗುತ್ತವೆಯಲ್ಲದೆ ಆ ಪ್ರಬಂಧಗಳ ಹಿಂದಿನ ಅಧ್ಯಯನ ವಿಧಾನಗಳು, ತಾತ್ವಿಕ ಚೌಕಟ್ಟುಗಳು ಚರ್ಚೆಯಾಗುವ ಸಂದರ್ಭಗಳಂತೂ ಇಲ್ಲವೇ ಇಲ್ಲ.

ಮಾನವಿಕ ವಿಷಯಗಳಲ್ಲಿ ರಚನೆಯಾಗುವ ಪಿ.ಎಚ್.ಡಿ ಪ್ರಬಂಧಗಳು ತಾವು ಆಯ್ದುಕೊಂಡ  ಅಧ್ಯಯನ ವಲಯದ ಪರಿಚಯ ಪ್ರಬಂಧ ರಚಿಸಿದವರಿಗೆ ಎಷ್ಟು ಮನೋಗತವಾಗಿದೆ ಎಂಬುದರ ಪರಿಚಯ ಮಾಡಿಕೊಡುತ್ತದೆಯೇ ಹೊರತು ಅವುಗಳಲ್ಲಿ ಯಾವಾಗಲೂ ಹೊಸ ವಿಷಯಗಳು ಇರುತ್ತವೆ ಎಂದು ತಿಳಿಯಬೇಕಿಲ್ಲ. ಅವು ಒಂದು ಬಗೆಯಲ್ಲಿ ಪರೀಕ್ಷೆಗೆಂದು ಸಿದ್ಧಪಡಿಸಿದ ಪ್ರಬಂಧಗಳು. ಅವು ತಾವು ಅಧ್ಯಯನಕ್ಕಾಗಿ ತೆಗೆದುಕೊಂಡ ವಿಷಯದಲ್ಲಿ ಹೊಸ ಸಂಗತಿಗಳನ್ನು ಹೇಳಿದ್ದರೆ ಅದು ಆ ಪ್ರಬಂಧದ ವಿಶೇಷ ಸಾಧನೆಯೇ ಹೊರತು ಆ ಪ್ರಬಂಧಗಳಿಗೆ ಅದು ಅಗತ್ಯ ಮಾನದಂಡವಲ್ಲ. ಹೀಗಾಗಿ ವರುಶ ವರುಶವೂ ಸಿದ್ಧಗೊಳ್ಳುತ್ತಿರುವ ನೂರಾರು ಪ್ರಬಂಧಗಳು ಕಾಲಕ್ರಮೇಣ ಮರೆಯಾದರೆ ಅದರಲ್ಲಿ ಅಚ್ಚರಿಪಡಲು ಇಲ್ಲವೇ ಹತಾಶೆ ವ್ಯಕ್ತಪಡಿಸಲು ಕಾರಣಗಳಿಲ್ಲ.

ತಕರಾರು ಎತ್ತುತ್ತಿರುವವರು ನೇರವಾಗಿ ಹೇಳದಿದ್ದರೂ ಅವರ ಮನಸ್ಸಿನಲ್ಲಿ ಗುಣಮಟ್ಟದ ಕುಸಿತ ಮತ್ತು ಅಧ್ಯಯನ ಮಾಡುತ್ತಿರುವವರ ಸಂಖ್ಯೆಯಲ್ಲಿ ಆಗಿರುವ ಹೆಚ್ಚಳ ಇವುಗಳ ನಡುವೆ ಸಂಬಂಧವಿದೆಯೆಂಬ ಅನಿಸಿಕೆ ನೆಲೆಮಾಡಿದೆ. ದುರ್ಬಲ ವರ್ಗ, ಜಾತಿಗಳ ವಿದ್ಯಾರ್ಥಿಗಳಿಗೆ ಬಗೆಬಗೆಯ ಶಿಷ್ಯವೇತನಗಳನ್ನು ನೀಡುವ ಮೂಲಕ ಅವರನ್ನು ಅಧ್ಯಯನದಲ್ಲಿ ತೊಡಗಿಸಲಾಗುತ್ತಿದೆ; ಕಳೆದ ಎರಡು ದಶಕಗಳಲ್ಲಿ ಈ ಕಾರಣಗಳಿಂದಾಗಿ ಪಿ.ಎಚ್.ಡಿ ಅಧ್ಯಯನಗಳಲ್ಲಿ ತೊಡಗುವವರು ಸಮಾಜದ ಎಲ್ಲ ನೆಲೆಗಳಿಂದಲೂ ಬಂದಿದ್ದಾರೆ. ಅವರಿಗೆ ಈ ಬಗೆಯ ಅಧ್ಯಯನಕ್ಕೆ ಬೇಕಾದ ಬೌದ್ಧಿಕ ಮತ್ತು ಮಾನಸಿಕ ಸಿದ್ಧತೆಗಳು ಇವೆಯೇ ಇಲ್ಲವೇ ಎಂಬುದು ಗಣನೆಗೆ ಬರುತ್ತಿಲ್ಲ. ಹೀಗಾಗಿ ಈ ಗುಣಮಟ್ಟದಲ್ಲಿ ಕುಸಿತ ಎಂಬುದು ಅವರ ನಿಲುವು ಇದ್ದೀತು.

ಹಾಗೆಯೇ ವೃತ್ತಿಯಲ್ಲಿ ಪದೋನ್ನತಿ, ವೇತನದಲ್ಲಿನ ಹೆಚ್ಚಳ ಮುಂತಾದ ಆಮಿಶಗಳನ್ನು ಮುಂದಿಟ್ಟು ಅರ್ಹವಲ್ಲದವರೂ ಈ ಬಗೆಯ ಅಧ್ಯಯನಗಳಿಗೆ ತೊಡಗುವಂತಾಗಿರುವುದನ್ನೂ ಇನ್ನೊಂದು ಕಾರಣವಾಗಿ ಮುಂದಿಡುತ್ತಿರುವುದನ್ನೂ ನೊಡುತ್ತಿದ್ದೇವೆ. ಈ ಬಗೆಯ ನಿಲುವುಗಳನ್ನು ವಿಮರ್ಶೆಗೆ ಗುರಿಪಡಿಸುವುದನ್ನು ಸದ್ಯ ಅಮಾನತ್ತಿನಲ್ಲಿ ಇಡೋಣ. ಆದರೆ ಹೀಗೆ ಯೋಚಿಸುವವರು ಪಿ.ಎಚ್.ಡಿ ಅಧ್ಯಯನಗಳನ್ನು ಅವುಗಳ ಪ್ರಬಂದಗಳ ನೆಲೆಯಲ್ಲಿ ಮಾತ್ರ ಗ್ರಹಿಸುತ್ತಿದ್ದಾರೆ. ಆದರೆ ಇದಕ್ಕೊಂದು ಪ್ರಕ್ರಿಯೆ ಇರುತ್ತದೆ. ಐದಾರು ವರುಶಗಳ ಕಾಲ ಅಧ್ಯಯನಕಾರರು ಓದುಬರಹಗಳ ವಾತಾವರಣದಲ್ಲಿ ಇರುವ ಅವಕಾಶವನ್ನು ಒದಗಿಸುವುದು ಕೂಡ ಒಂದು ಶೈಕ್ಷಣಿಕ ಮತ್ತು ಸಾಮಾಜಿಕ ಅಗತ್ಯ.

ಎರಡು ವರುಶಗಳ ಸ್ನಾತಕೋತ್ತರ ಓದಿನಾಚೆಗೆ ಇನ್ನೂ ಹೆಚ್ಚಿನ ಅವಧಿಯಲ್ಲಿ ಸಮಾನ ಆಸಕ್ತರ ಜೊತೆಯಲ್ಲಿ ಇರುವುದು ಬೇರೆ ಸಂದರ್ಭಗಳಲ್ಲಿ ಸಾಧ್ಯವಾಗುವುದಿಲ್ಲ. ವಿಶ್ವವಿದ್ಯಾಲಯದಲ್ಲಿ ಹೀಗೆ ಇರುವ ಅವಕಾಶ ದೊರಕುವುದು ಅಗತ್ಯ. ಇದು ಕೇವಲ ಬೌದ್ಧಿಕ ಬೆಳವಣಿಗೆ ಮಾತ್ರವಲ್ಲದೆ ವಿಶಿಷ್ಟ ಬಗೆಯ ಸಾಮಾಜೀಕರಣಕ್ಕೂ ಅನುವು ಮಾಡಿಕೊಡುತ್ತದೆ. ಗೊತ್ತಾದ ಶೈಕ್ಷಣಿಕ ಹಿನ್ನೆಲೆಯ ಸಮುದಾಯಗಳೊಂದಿಗೆ ಐದಾರು ವರುಶಗಳ ಕಾಲ ಇರುವ ಅವಕಾಶಗಳು ಆ ವಯೋಮಾನದ ಯುವಕರಿಗೆ ಬೇರೆಲ್ಲೂ ದೊರಕುವುದಿಲ್ಲ. ಇದರಿಂದ ಬಗೆಬಗೆಯ ಪರಿಣಾಮಗಳಾಗಬಹುದು. ಕೆಲವು ಶೈಕ್ಷಣಿಕ ಆಸಕ್ತಿಯ ನೆಲೆಯಲ್ಲಿ ಉಪಯುಕ್ತ ಎನಿಸಬಹುದು. ಮತ್ತೆ ಕೆಲವು ಪರಿಣಾಮಗಳು ಸಾಮಾಜಿಕ ನೆಲೆಯಲ್ಲಿ ಕ್ರಿಯಾಶೀಲರಾಗುವ, ಚಿಂತನಶೀಲರಾಗುವ ಸನ್ನಿವೇಶಗಳನ್ನು ರೂಪಿಸುತ್ತಿರಲೂಬಹುದು. ಇದೆಲ್ಲವನ್ನೂ ನಾವು ಇನ್ನೂ ಗುರುತಿಸುವುದಕ್ಕೆ ಮನಸ್ಸು ಮಾಡಿಲ್ಲ.

ಹಾಗೆ ನೋಡಿದರೆ ಇಂತಹ ಅವಕಾಶಗಳು ವಿಶ್ವವಿದ್ಯಾಲಯಗಳಲ್ಲಿ ಅಸ್ಮಿತೆಯ ರಾಜಕಾರಣ ರೂಪುಗೊಂಡು ಬೆಳೆಯುತ್ತಿರುವುದಕ್ಕೆ ಕಾರಣವಾಗುತ್ತಿವೆ. ಇದನ್ನು ಒಂದು ಅಗತ್ಯ ಬೆಳವಣಿಗೆ ಎಂದು ಗುರುತಿಸುವವರೂ ಇದ್ದಾರೆ. ಆದರೆ ಅಧಿಕಾರ ಕೇಂದ್ರಗಳಿಗೆ ಈಚಿನ ದಿನಗಳಲ್ಲಿ ಇದೊಂದು ಅಪಾಯಕಾರಿ ಬೆಳವಣಿಗೆ ಎನಿಸತೊಡಗಿದೆ ಎಂದು ತೋರುತ್ತಿದೆ. ಅದರಿಂದಲೇ ದುರ್ಬಲ ವರ್ಗದ ವಿದ್ಯಾರ್ಥಿಗಳಿಗೆ ಈ ಬಗೆಯ ಅವಕಾಶವನ್ನು ಒದಗಿಸುತ್ತಿದ್ದ ಶಿಷ್ಯವೇತನಗಳ ಅವಕಾಶಗಳನ್ನು ಕಡಿಮೆ ಮಾಡುವ, ಇಲ್ಲವೇ ತೆಗೆದು ಹಾಕುವ ನಡೆಗಳನ್ನು ನೋಡುತ್ತಿದ್ದೇವೆ. ಇದು ಗುಣಮಟ್ಟದ ಹೆಚ್ಚಳಕ್ಕಾಗಿ ಕೈಗೊಂಡ ಕ್ರಮಗಳಾಗಿರುವುದರ ಬದಲು ತನ್ನ ವಿರುದ್ಧದ ದನಿಗಳು ಹರಳುಗಟ್ಟುವುದನ್ನು ಕಡಿಮೆ ಮಾಡುವ ದಿಕ್ಕಿನಲ್ಲಿ ಇಟ್ಟ ಹೆಜ್ಜೆ ಇನ್ನಬಹುದು.

ಕಳೆದ ನಾಲ್ಕೈದು ವರುಶಗಳಲ್ಲಿ ಇದಕ್ಕೆ ಪೂರಕವಾದ ಹಲವು ಘಟನೆಗಳು ನಡೆದಿರುವುದನ್ನು ನಾವು ನೋಡಿದ್ದೇವೆ. ಈ ಮಾತನ್ನು ಈ ಸಂದರ್ಭದಲ್ಲಿ ಹೇಳಲು ಕಾರಣಗಳಿವೆ. ಪಿ.ಎಚ್.ಡಿ ಅಧ್ಯಯನಗಳನ್ನು ಕೇವಲ ಪ್ರಬಂಧಗಳ ಗುಣಮಟ್ಟದ ನೆಲೆಯಲ್ಲಿ ಮಾತ್ರ ನೋಡದೆ ಒಂದು ನಿರಂತರ ಪ್ರಕ್ರಿಯೆಯನ್ನಾಗಿ ನೋಡಬೇಕೆಂದು ಸೂಚಿಸುವ ಉದ್ದೇಶದಿಂದ ಈ ಮಾತನ್ನು ಹೇಳಿದ್ದೇನೆ.

ಪಿ.ಎಚ್.ಡಿ ಪ್ರಬಂಧಗಳು ಇತರರಿಗೆ ಉಪಯುಕ್ತವಾಗುತ್ತಿಲ್ಲ; ಕಳಪೆಯಾಗಿವೆ ಎಂಬ ಮಾತನ್ನು ಬದಿಗೆ ಸರಿಸಿ ಬೇರೊಂದು ರೀತಿಯಲ್ಲಿ ಈ ಸನ್ನಿವೇಶವನ್ನು ನೋಡೋಣ.  ಪ್ರಬಂಧ ರಚನೆಯ ಅನುಭವ ಅಧ್ಯಯನಕಾರರಿಗೆ ಉಪಯುಕ್ತವಾಗುವಂತೆ ಮಾಡುವುದು ಹೇಗೆ ಎಂಬ ಕಡೆಗೆ ನಾವು ಗಮನ ಹರಿಸುತ್ತಿಲ್ಲ. ಅಧ್ಯಯನದ ಅವಧಿಯ ಕೊನೆಯಲ್ಲಿ ಮಂಡಿಸುವ ಪ್ರಬಂಧದ ಮೌಲ್ಯ ಮಾಪನದ ಮೂಲಕ ಮಾತ್ರವೇ ಇಡೀ ಅಧ್ಯಯನದ  ಫಲಿತವನ್ನು ಗುರುತಿಸುವ ನಮ್ಮ ವಿಧಾನದಲ್ಲೇ ಏನೋ ಕೊರತೆ ಇದೆಯೆಂದು ತೋರುತ್ತಿದೆ. ಇದೊಂದು ನಿರಂತರ ಪ್ರಕ್ರಿಯೆಯಾಗಬೇಕು. ಇದಕ್ಕೆ ತಕ್ಕಂತೆ ಅಧ್ಯಯನದ ಸ್ವರೂಪದಲ್ಲಿ ಬದಲಾವಣೆಗಳನ್ನು ರೂಪಿಸಬೇಕು. ಅಧ್ಯಯನಕಾರರಿಗೂ ತಮ್ಮನ್ನು ತಾವು ನಿರಂತರವಾಗಿ ಪರಿಶೀಲಿಸಿಕೊಳ್ಳುವ ಅವಕಾಶವನ್ನು ಈ ಮೂಲಕ ಕಲ್ಪಿಸುವುದು ಸಾಧ್ಯ. ಜಾಗತಿಕವಾಗಿ ಮಾತ್ರವಲ್ಲದೇ ದೇಶೀಯವಾಗಿಯೂ ಹಲವಾರು ವಿಶ್ವವಿದ್ಯಾಲಯಗಳು ಈ ನಿಟ್ಟಿನಲ್ಲಿ ಬದಲಾವಣೆಗಳನ್ನು ತಂದಿವೆ. ಈ ಬದಲಾವಣೆಗಳು ಅಧ್ಯಯನದಲ್ಲಿ ತೊಡಗುವವರು ನಿರಂತರವಾಗಿ ತಮ್ಮ ಶೈಕ್ಷಣಿಕ ಬೆಳವಣಿಗೆಯ ಕಡೆಗೆ ಗಮನವಿರಿಸುವಂತೆ ಮಾಡಬಲ್ಲವು

ಇದಲ್ಲದೆ ನಾವು ಇನ್ನೂ ಊಳಿಗಮಾನ್ಯ ಪದ್ಧತಿಯ ನಿಯಮಾವಳಿಗಳನ್ನು ಉಳಿಸಿಕೊಂಡಿದ್ದೇವೆ. ಅಧ್ಯಯನ ಮಾಡುವವರು ಒಬ್ಬರು ಮಾರ್ಗದರ್ಶಕರನ್ನು ಆಯ್ದುಕೊಂಡು ಅವರಿಗೆ ಶರಣಾಗತರಾಗಬೇಕೆಂಬ ನಿಯಮವೇ ನಾವು ಮರೆಯಬೇಕಾದ ವಿಧಾನವೊಂದರ ಪಳಿಯುಳಕೆ. ಓದಿಗೆ ನೆರವಾಗುವ ದಾರಿಯನ್ನು ಆಗಾಗ ತೋರಿಸುತ್ತಾ, ಮುನ್ನಡೆಯಲು ಒತ್ತಾಸೆಯಾಗುವ ಬದಲು ಪೂರ್ಣ ನಿಯಂತ್ರಕರಾಗುವ ಸಂದರ್ಭವನ್ನು ಮಾರ್ಗದರ್ಶಕರೆಂಬುವವರಿಗೆ ಒದಗಿಸಿದ್ದೇವೆ. ತಮ್ಮ ಮಾರ್ಗದರ್ಶನದಲ್ಲಿ ಪಿ.ಎಚ್.ಡಿ ಪದವಿ ಪಡೆದವರ ಸಂಖ್ಯೆಯನ್ನು ತಮ್ಮ ಶೈಕ್ಷಣಿಕ ಸಾಧನೆಯ ಟೊಪ್ಪಿಗೆಯಲ್ಲಿ ಗರಿಗಳಂತೆ ಸಿಕ್ಕಿಸಿಕೊಳ್ಳುವ ಹಂಬಲ ಅವರಲ್ಲಿ ಕಾಣುತ್ತದೆಯೇ ಹೊರತು. ತಮ್ಮ ಜೊತೆ ಓದುತ್ತಿರುವವನ್ನು ಸ್ವತಂತ್ರರನ್ನಾಗಿಸುವ ಅಪೇಕ್ಷೆ ಕಾಣುವುದಿಲ್ಲ. ಇಂತಿಷ್ಟು ಜನರಿಗೆ ಪಿಎಚ್.ಡಿ ಪದವಿಗಾಗಿ ಮಾರ್ಗದರ್ಶನ ಮಾಡಿರಬೇಕೆಂಬ ಶರತ್ತನ್ನು ಪದೋನ್ನತಿಯ ಅಗತ್ಯಗಳಲ್ಲಿ ಒಂದನ್ನಾಗಿ ಇರಿಸಿರುವ ನಡೆಯ ಹಿಂದಿನ ತರ್ಕ ಕೂಡ ವಿರೋಧಗಳಿಂದ ಕೂಡಿದೆ. ಇದೊಂದು ಸಾರಾಸಗಟಾದ ಹೇಳಿಕೆ ಎಂದು ಅನ್ನಿಸಲೂಬಹುದು. ಹಲವು ವಿನಾಯತಿಗಳನ್ನು ತೋರಿಸಿ ಈ ಮಾತಿಗೆ ಎದುರುತ್ತರವನ್ನೂ ನೀಡಬಹುದು. ಆದರೆ ವಾಸ್ತವವಂತೂ ಹೀಗೇ ಇದೆ. ಅಂದರೆ ನಮ್ಮ ವಿಶ್ವವಿದ್ಯಾಲಯಗಳು ತಮ್ಮ ಶೈಕ್ಷಣಿಕ ಮಾದರಿಗಳನ್ನು ಬದಲಿಸಿಕೊಳ್ಳದಿದ್ದರೆ ಈ ಪರಿಸ್ಥಿತಿಯಲ್ಲಿ ಯಾವ ಬದಲಾವಣೆಯೂ ಬರುವುದಿಲ್ಲ

ಇದೆಲ್ಲ ಹೇಳಿದ ಮೇಲೂ ದಿಟವಾದ ಸಮಸ್ಯೆಯನ್ನು ನಾವು ಇನ್ನೂ ಪರಿಗಣಿಸಿಯೇ ಇಲ್ಲ. ಆಯಿತು, ಸಂಶೋಧನ ಪ್ರಬಂಧಗಳ ಗುಣಮಟ್ಟದ ಮಾತನ್ನು ಬದಿಗಿಡೋಣ. ಹೀಗೆ ಹೇಗೋ ಪದವಿಯೊಂದನ್ನು ಪಡೆದವರು ಮುಂದೆ ಅಧ್ಯಯನದಲ್ಲಿ, ಹೊಸ ವಿಚಾರಗಳ ಹುಡುಕಾಟದಲ್ಲಿ ತೊಡಗಿಸಿಕೊಳ್ಳುವುದಿಲ್ಲವೇಕೆ ಎನ್ನುವುದು ಇನ್ನೊಂದು ಪ್ರಶ್ನೆ. ಈ ಪ್ರಶ್ನೆಗೆ ಉತ್ತರ ಕೇವಲ ವೈಯಕ್ತಿಕ ನೆಲೆಯಲ್ಲಿ ಇರಲಾರದು. ಹೀಗಾಗಲು ಬೇರೆಯೇ ಶೈಕ್ಷಣಿಕ ಕಾರಣಗಳಿವೆ. ಅಂತಹ ಒಂದು ಕಾರಣವನ್ನು ನಾವೀಗ ನೋಡೋಣ.

ಹತ್ತೊಂಬತ್ತನೆಯ ಶತಮಾನದ ಬಳಿಕ ಯುರೋಪಿನಲ್ಲಿ ಜ್ಞಾನಶಾಖೆಗಳನ್ನು ಬೇರೆಯಾಗಿ ವಿಂಗಡಿಸಿಕೊಳ್ಳುವ ಮಾದರಿಯೊಂದು ಬೆಳೆಯುತ್ತಾ ಹೋಯಿತಷ್ಟೆ. ವಸಾಹತು ಆಡಳಿತದಲ್ಲಿ ಇದ್ದ ನಮಗೂ ಅದೇ ಮಾದರಿಯಾಗಿಬಿಟ್ಟಿತು. ಒಂದೊಂದು ಜ್ಞಾನಶಾಖೆಯು ತನ್ನ ಸುತ್ತ ಕೋಟೆಯನ್ನು ಕಟ್ಟಿಕೊಳ್ಳುತ್ತಾ ಹೋದಂತೆ ಅವುಗಳ ನಡುವೆ ಕೊಡುಕೊಳುವ ಕ್ರಿಯೆಯು ಸಂಪೂರ್ಣವಾಗಿ ನಿಂತುಹೋಯಿತು. ನಮ್ಮದೇ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಿಕೊಳ್ಳುವ ಅವಕಾಶ ದೊರೆತ ಬಳಿಕವೂ ಇದೇ ಅವಸ್ಥೆ ಮುಂದುವರೆದಿದೆ.

ಬಹುಶಿಸ್ತೀಯ, ಅಂತರ್ಶಿಸ್ತೀಯ ಅಧ್ಯಯನಗಳೆಂಬ ಹೆಸರುಳ್ಳ ಅಧ್ಯಯನಗಳು ನಡೆಯುತ್ತವೆಯಾದರೂ ದಿಟವಾಗಿ ನಾವು ಜ್ಞಾನಶಾಖೆಗಳ ನಡುವೆ ಇರುವ ಸಾವಯವ ಸಂಬಂಧಗಳನ್ನು ಮರಳಿ ಸ್ಥಾಪಿಸುವ ಕಡೆಗೆ ಹೆಜ್ಜೆ ಇಟ್ಟಿಲ್ಲ. ಯುರೋಪಿನಲ್ಲಿ ಈ ದಿಕ್ಕಿನಲ್ಲಿ ಬದಲಾವಣೆಗಳು ನಡೆದಿವೆಯಾದರೂ ಅದರ ಹಿಂದಿನ ತರ್ಕ ಬೇರೆ ಬಗೆಯಲ್ಲಿದೆ. ಅದನ್ನಿಲ್ಲಿ ಚರ್ಚಿಸಲು ಅವಕಾಶಗಳಿಲ್ಲ. ಆದರೆ ನಾವಿನ್ನೂ ಹಳೆಯ ನಿರುಪಯುಕ್ತವಷ್ಟೇ ಅಲ್ಲ, ಹೆಚ್ಚು ಅಪಾಯಕಾರಿಯಾದ ಮಾದರಿಗೇ ಕಟ್ಟು ಬಿದ್ದಿದ್ದೇವೆ. ಇದರಿಂದ ಆಗಿರುವ ಅಪಾಯಗಳಲ್ಲಿ ನಾವೀಗ ಚರ್ಚಿಸುತ್ತಿರುವ ಸಮಸ್ಯೆಯೂ ಸೇರಿದೆ. ಹೇಗೆಂಬುದನ್ನು ಕೊಂಚ ವಿವರವಾಗಿ ನೋಡೋಣ.

ನಮ್ಮ ವಿದ್ಯಾರ್ಥಿಗಳು ಈಗ ಒಂದು ವಿಷಯವನ್ನು ವಿವರವಾಗಿ ಅಧ್ಯಯನಕ್ಕೆ ಆಯ್ದುಕೊಂಡಾಗ ಸಾಮಗ್ರಿ ಸಂಗ್ರಹ, ವಿವರಣೆಗಳ ಕಡೆಗೆ ಗಮನಹರಿಸುತ್ತಾರೆ. ಅವರಿಗೆ ‘ಏನು’ ಎಂಬ ಪ್ರಶ್ನೆ ಮುಖ್ಯವಾಗುತ್ತದೆಯೇ ಹೊರತು ‘ಏಕೆ’ ಮತ್ತು ‘ಹೇಗೆ’ ಎನ್ನುವ ಪ್ರಶ್ನೆಗಳು ಎದುರಾಗುವುದೇ ಇಲ್ಲ. ಇದರಿಂದಾಗಿ  ಅಧ್ಯಯನ ವಿಷಯದ ತಾತ್ವಿಕತೆಯನ್ನು ಗ್ರಹಿಸುವ ಮತ್ತು ಅದನ್ನು ಆಧರಿಸಿ ತಮ್ಮ  ವಿಶ್ಲೇಷಣೆಯನ್ನು ಬೆಳೆಸುವ ಸಾಧ್ಯತೆ ಕಾಣಿಸುವುದೇ ಇಲ್ಲ. ಪದವಿ ತರಗತಿಯಲ್ಲಾಗಲೀ, ಸ್ನಾತಕೋತ್ತರ ತರಗತಿಗಳಲ್ಲಾಗಲೀ ಓದುವಾಗ ತಮ್ಮ ತಿಳಿವಿನ ಶಾಖೆಗಳ ತಾತ್ವಿಕ ನೆಲೆಗಟ್ಟನ್ನು ಗ್ರಹಿಸುವುದನ್ನು ಅವರು ಕಲಿಯುವುದೇ ಇಲ್ಲ. ಪ್ರತಿಯೊಂದು ಜ್ಞಾನಶಾಖೆಗೂ ಅದರದ್ದೇ ಆದ ಜ್ಞಾನಮೀಮಾಂಸೆ ಮತ್ತು ತಾತ್ವಿಕ ನೆಲೆಗಟ್ಟು ಇರುವುದೆಂಬುದನ್ನು ನಾವು ಅರಿಯುವುದೇ ಇಲ್ಲ. ತಾವು ಕಲಿಯಲಾರದ, ಗ್ರಹಿಸಿಲ್ಲದ ಪರಿಕರವನ್ನು ಪಿ.ಎಚ್.ಡಿ ಪ್ರಬಂಧ ರಚನೆಯಲ್ಲಿ ಬಳಕೆ ಮಾಡಬೇಕೆಂದು ನಿರೀಕ್ಷಿಸುವುದೇ ತಪ್ಪು. ಈ ಕೊರತೆಯನ್ನು ಹೊತ್ತುಕೊಂಡಿರುವವರು ಪದವಿ ಪಡೆದ ಬಳಿಕವೂ ಸಂಶೋಧನೆಯಲ್ಲಿ ಆಸಕ್ತಿಯನ್ನು ಉಳಿಸಿಕೊಂಡರೂ ಹೊಸ ನೋಟಗಳನ್ನು ಒದಗಿಸುವ ಹೊಣೆಯನ್ನು ಹೊರಲಾರರು.

ಕೆಲವು ಜ್ಞಾನಶಾಖೆಗಳ ಮಟ್ಟಿಗೆ ತಾತ್ವಿಕತೆ ಎಂಬುದು ಶತಮಾನಗಳ ಕಾಲ ವಿಕಸನಗೊಂಡ ಚಿಂತನೆಯ ಮೊತ್ತವಾಗಿದ್ದರೆ ಮತ್ತೆ ಕೆಲವು ಅಷ್ಟು ಬಲವಾದ ನೆಲೆಗಳನ್ನು ಪಡೆದಿರುವುದಿಲ್ಲ. ಸಾಹಿತ್ಯ ವಿಮರ್ಶೆಯ ವಲಯವೂ ಈ ಬಗೆಯದೇ ಆಗಿದೆ. ಸಾಹಿತ್ಯ ಮೀಮಾಂಸೆಗೆ ಇರುವ ತಾತ್ವಿಕ ಬುನಾದಿ ಸಾಹಿತ್ಯ ವಿಮರ್ಶೆಗೆ ಇಲ್ಲ. ಹಾಗೆ ನೋಡಿದರೆ ಒಂದೆರಡು ಶತಮಾನಗಳಿಂದೀಚೆಗೆ ಬೆಳೆದಿರುವ ಪರಾವಲಂಬಿ ವಲಯವಿದು. ಈ ವಲಯದಲ್ಲಿ ‘ಸಂಶೋಧನೆ’ ಎಂಬ ಮಾತಿಗೆ ದಿಟವಾಗಿ ಯಾವ ಬಲವಾದ ಸಮರ್ಥನೆಗಳಿಲ್ಲ. ಈ ಅಧ್ಯಯನ ವಲಯಕ್ಕೆ ಬಲವಾದ ತಾತ್ವಿಕ ಬುನಾದಿ ಇಲ್ಲದಿವಾದ್ದರಿಂದ ಇಲ್ಲಿ ನಡೆಯುವ ‘ಸಂಶೋಧನೆ’ಗಳಿಂದ ಪಥಪ್ರವರ್ತಕ ಸಾಧನೆಗಳನ್ನು ಬಯಸಿದರೆ ಅದು ನಿರಾಶೆಗೆ ಅನುವು ಮಾಡಿಕೊಡುತ್ತದೆ. ಈ ವಲಯದ ಪಿ.ಎಚ್.ಡಿ ಪ್ರಬಂಧಗಳನ್ನು ಕೇವಲ ಪದವಿ ಪ್ರಬಂಧಗಳೆಂದು ಪರಿಗಣಿಸುವುದೇ ಲೇಸು.

ತಂತಮ್ಮ ಜ್ಞಾನಶಾಖೆಗಳಿಗಿರುವ ತಾತ್ವಿಕ ನೆಲೆಗಟ್ಟುಗಳನ್ನು ವಿದ್ಯಾರ್ಥಿಗಳಿಗೆ ಪದವಿ ತರಗತಿಗಳ ಮಟ್ಟದಿಂದಲೇ ಪರಿಚಯ ಮಾಡಿಕೊಡುವುದು; ತಿಳಿವಿನ ಪರಿಕರಗಳನ್ನು ಬಳಸಲು ತರಬೇತುಕೊಡುವ ಕ್ರಿಟಿಕಲ್ ಎಂಕ್ವೈರಿಯ ವಿಧಾನಗಳಲ್ಲಿ ಪಳಗುವಂತೆ ಮಾಡುವುದು ಇವೇ ಮುಂತಾದ ಕ್ರಮಗಳನ್ನು ಕೈಗೊಳ್ಳದಿದ್ದರೆ ನಮ್ಮ ಅಧ್ಯಯನಗಳು ಈಗಿರುವ ಪರಿಸ್ಥಿತಿಗಿಂತ ಬೇರೆಯಾಗಲಾರವು. ಕೇವಲ ಗುಣಮಟ್ಟ ನಿಯಂತ್ರಣ ಮತ್ತು ನಿರ್ವಹಣೆಯ ವಿಧಾನಗಳ ಬದಲಾವಣೆಗಳ ಮೂಲಕ ಬದಲಾವಣೆಗಳನ್ನು ತರಬಹುದಾದರೂ ಆ ಬದಲಾವಣೆಗಳು ಅಧ್ಯಯನಗಳ ಸ್ವರೂಪವನ್ನು ಬದಲಿಸಲಾರವು.

*ಲೇಖಕರು ಖ್ಯಾತ ಭಾಷಾಶಾಸ್ತ್ರಜ್ಞರು, ವಿಮರ್ಶಕರು; ಮೂಲತಃ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದವರು.

Leave a Reply

Your email address will not be published.