ಬದಲಾವಣೆ-ಅವಕಾಶಗಳ ವರ್ಷ

-ಡಾ.ಉದಯ ಶಂಕರ ಪುರಾಣಿಕ

ಕೋವಿಡ್-19ನಿಂದಾಗಿ ವಿಶ್ವಾದ್ಯಂತ ಉಂಟಾಗುತ್ತಿರುವ ಬದಲಾವಣೆಗಳ ಪರಿಣಾಮವನ್ನು ಗಮನಿಸಿದಾಗ, 2021 ಹೇಗಿರಬಹುದು ಎನ್ನುವ ಪ್ರಶ್ನೆ ಸಹಜ. ಕೋವಿಡ್-19 ಸೋಂಕು ತಗುಲದಂತೆ ಅಥವಾ ಸೋಂಕಿತರು ಗುಣವಾಗುವಂತೆ ಮಾಡುವ ಲಸಿಕೆಗಳು 2021ರಲ್ಲಿ ಲಭ್ಯವಾಗಬಹುದು ಎನ್ನುವ ನಿರೀಕ್ಷೆ ಇದೆ. ಆದರೆ ಇಂತಹ ಲಸಿಕೆಯನ್ನು ನೂರಾರು ಕೋಟಿ ಸಂಖ್ಯೆಯಲ್ಲಿ ಉತ್ಪಾದಿಸುವುದು, ಅಗತ್ಯ ತಾಪಮಾನದಲ್ಲಿ ಸಂಗ್ರಹಿಸಿಡುವುದು ಮತ್ತು ವಿವಿಧ ದೇಶಗಳಿಗೆ ವಿತರಿಸುವುದು ಹಾಗೂ ನೂರಾರು ಕೋಟಿ ಜನರಿಗೆ ನೀಡುವುದು-ಇದಕ್ಕೆ ಬೇಕಾಗುವ ಹಣ ಮತ್ತು ಸಮಯವನ್ನು ಪರಿಗಣಿಸಿದರೆ, 2021ರಲ್ಲಿ ಎಲ್ಲರಿಗೂ ಈ ಲಸಿಕೆ ದೊರೆಯುವಂತೆ ಮಾಡುವುದು ಸವಾಲಿನ ಕೆಲಸವಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಸೂಕ್ತವಾದ ಲಸಿಕೆಗಳು ಇದ್ದರೂ, ವಿಶ್ವಾದ್ಯಂತ ಕೋವಿಡ್-19ರ ಸಂಪೂರ್ಣ ನಿಯಂತ್ರಣ ಅಥವಾ ನಿರ್ಮೂಲನ ಸಾಧ್ಯವಾಗುವುದಿಲ್ಲ. ಆದರೆ ಜನಜೀವನ, ವ್ಯಾಪಾರ, ವಹಿವಾಟು ಕೊರೊನಾಪೂರ್ವ ಸ್ಥಿತಿಗೆ ಬೇಗ ಮರಳುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಮತ್ತೊಂದು ಸನ್ನಿವೇಶ ಹೀಗಿರಬಹುದು. ವರ್ಷ 2021ರಲ್ಲಿ ಕೋವಿಡ್-19 ಹೆಚ್ಚು ವ್ಯಾಪಕವಾಗಿ ಮತ್ತು ಮಾರಕವಾಗಿ ಹರಡಿ, ಲಕ್ಷಾಂತರ ಜನರ ಸಾವು ನೋವಿಗೆ ಕಾರಣವಾಗಬಹುದು. ಹೀಗಾದಾಗ ಲಾಕ್‍ಡೌನ್‍ನಂತಹ ತೀವ್ರ ಕ್ರಮಗಳು ಹೆಚ್ಚಾಗಬಹುದು ಮತ್ತು ಉದ್ಯೋಗ, ಆರ್ಥಿಕತೆ, ವ್ಯಾಪಾರ, ವಹಿವಾಟುಗಳ ಮೇಲೆ ತೀವ್ರ ಪರಿಣಾಮವುಂಟಾಗುತ್ತದೆ. ಇಂತಹ ಸನ್ನಿವೇಶ ಉಂಟಾದರೆ 2021 ಮತ್ತು ನಂತರದ ದಿನಗಳು ಕೂಡಾ 2020ಗಿಂತ ಹೆಚ್ಚು ಸಂಕಷ್ಟ ತರಲಿವೆ.

ಕೋವಿಡ್-19 ಕುರಿತು ಎರಡು ಸನ್ನಿವೇಶಗಳನ್ನು ಮಾತ್ರ ಇಲ್ಲಿ ಪ್ರಸ್ತಾಪಿಸಿದ್ದೇನೆ. ದೇಶ, ಜನಸಂಖ್ಯೆ, ಆರ್ಥಿಕತೆ ಹೀಗೆ ಹಲವು ಅಂಶಗಳ ಆಧಾರದ ಮೇಲೆ ಮತ್ತಷ್ಟು ಸನ್ನಿವೇಶಗಳನ್ನು ಕುರಿತು ತಜ್ಞರು ಅಧ್ಯಯನ ಮಾಡುತ್ತಿದ್ದಾರೆ. ಕೋವಿಡ್-19ರ ಸಂಕಷ್ಟಕ್ಕೆ ಬೇಗ ಪರಿಹಾರ ದೊರೆಯಲಿ ಎನ್ನುವುದು ಎಲ್ಲರ ಆಶಯವಾಗಿದೆ.

ಕೋವಿಡ್-19ರ ಸಂಕಷ್ಟ ತಂದಿರುವ ಹಲವು ಬದಲಾವಣೆಗಳು ಮತ್ತು ಅವಕಾಶಗಳು ವರ್ಷ2021ರಲ್ಲಿ ಹೆಚ್ಚಾಗುತ್ತವೆ. ಉದಾಹರಣೆಗೆ ಐಟಿಯಂತಹ ಉದ್ಯಮಗಳಲ್ಲಿ ಕಚೇರಿ, ಕೆಲಸ ಮತ್ತು ಕೆಲಸ ದೊರೆಯಲು ಬೇಕಾದ ಕೌಶಲಗಳು ಬಹಳಷ್ಟು ಬದಲಾಗುತ್ತಿವೆ. ಕಚೇರಿಯಿಂದ ಎಷ್ಟು ಜನ ಹಾಗೂ ಮನೆಯಿಂದ ಎಷ್ಟು ಜನ ಕೆಲಸ ಮಾಡಬೇಕು ಎನ್ನುವುದನ್ನು ನಿರ್ಧರಿಸುವುದರ ಜೊತೆಗೆ ಆರೋಗ್ಯಕರ ಅಂತರ, ಸ್ಯಾನಿಟೈಸರ್, ಮಾಸ್ಕ ಮೊದಲಾದ ನಿಯಮಗಳ ಕಡ್ಡಾಯ ಪಾಲನೆಗೆ ಸೂಕ್ತವಾಗುವಂತೆ ಕಚೇರಿಗಳ ವಿನ್ಯಾಸ ಹಾಗೂ ಕೆಲಸದ ವೇಳೆಗಳನ್ನು ನಿರ್ಧರಿಸಲಾಗುತ್ತಿದೆ.

ಈ ಉದ್ಯಮದಲ್ಲಿ ತಾಂತ್ರಿಕ ಶಿಕ್ಷಣ ಪಡೆದವರಂತೆ, ಇತರೆ ಪದವಿ ಹಾಗೂ ಸ್ನಾತಕ್ಕೋತ್ತರ ಪದವಿ ಪಡೆದವರಿಗೂ ಹೊಸ ಉದ್ಯೋಗವಕಾಶಗಳು ದೊರೆಯಲಿವೆ. ಉನ್ನತ ತಂತ್ರಜ್ಞಾನ ಹಾಗೂ ಮೌಲ್ಯಾಧಾರಿತ ಕೆಲಸಗಳನ್ನು ಭಾರತದ ಐಟಿ ಸಂಸ್ಥೆಗಳು ಪಡೆಯಲು ಅವಕಾಶಗಳಿದ್ದು, ಇದಕ್ಕೆ ಪೂರಕವಾದ ತಾಂತ್ರಿಕ ಕೌಶಲಗಳನ್ನು ವಿದ್ಯಾರ್ಥಿಗಳಿಗೆ ಕಲಿಸಲು ರಾಜ್ಯದಲ್ಲಿರುವ ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳು ಮುಂದಾಗಬೇಕಾಗಿದೆ.

ಇ-ವಾಣಿಜ್ಯ ಹೆಚ್ಚು ಜನಪ್ರಿಯವಾಗಲಿದ್ದು, ಕನ್ನಡ ಭಾಷೆಯಲ್ಲಿ ಜಾಲತಾಣ, ಮೊಬೈಲ್ ತಂತ್ರಾಂಶ, ಜಾಹೀರಾತು, ಗ್ರಾಹಕ ಸೇವೆಗಳನ್ನು ನೀಡಲು ಅಮೇಜಾನ್‍ನಂತಹ ಪ್ರಮುಖ ಸಂಸ್ಥೆಗಳು ಪ್ರಾರಂಭಿಸಿವೆ. ವಿಮಾ ಸಂಸ್ಥೆಗಳು, ಬ್ಯಾಂಕುಗಳು, ರಿಟೇಲ್ ಉದ್ಯಮ ಮೊದಲಾಗಿ ಹಲವು ಗ್ರಾಹಕ ಕೇಂದ್ರಿತ ಸಂಸ್ಥೆಗಳು ಕೂಡಾ ಕನ್ನಡ ಬಳಸುವುದಕ್ಕೆ ಹೆಚ್ಚು ಅದ್ಯತೆ ನೀಡಲಿರುವುದರಿಂದ, ಇದರಿಂದ ಸೃಷ್ಟಿಯಾಗುವ ಉದ್ಯೋಗವಕಾಶಗಳನ್ನು ಪಡೆಯಲು ಆಸಕ್ತ ಕನ್ನಡಿಗರು ಮುಂದಾಗಬೇಕು.

ನಾವು ಮತ್ತೊಂದು ಬ್ಯಾಂಕಿನ ಗ್ರಾಹಕರಾಗಿದ್ದರೂ, ಬೇರೆ ಬ್ಯಾಂಕಿನ ಎಟಿಎಮ್‍ಗಳನ್ನು ಬಳಸಲು ಸಾಧ್ಯವಿರುವಂತೆ, ಮುಂಬರುವ ದಿನಗಳಲ್ಲಿ ಮೊಬೈಲ್ ಬ್ಯಾಂಕಿಂಗ್‍ನಲ್ಲಿ ಕೂಡಾ ಬದಲಾವಣೆಯಾಗಲಿದೆ. ಒಂದು ಬ್ಯಾಂಕಿನಲ್ಲಿ ಖಾತೆ ಹೊಂದಿದ್ದರೂ, ಮತ್ತೊಂದು ಬ್ಯಾಂಕಿನ ಮೊಬೈಲ್ ಬ್ಯಾಂಕಿಂಗ್ ಸೌಲಭ್ಯವನ್ನು ಬಳಸಲು ಸಾಧ್ಯವಾಗಲಿದೆ. 15 ಆಗಸ್ಟ್ 2020ರಂದು ಪ್ರಧಾನ ಮಂತ್ರಿಗಳು ಘೋಷಿಸಿದ ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಯೋಜನೆ, ಪ್ರತಿಯೊಬ್ಬ ಭಾರತೀಯನಿಗೂ ಉತ್ತಮ ಗುಣಮಟ್ಟದ ಆರೋಗ್ಯ ಸೇವೆಯನ್ನು ನೀಡುವ ಉದ್ದೇಶ ಹೊಂದಿದೆ. ವರ್ಷ 2021ರಲ್ಲಿ ಈ ಯೋಜನೆಯ ಲಾಭವನ್ನು ನಾವು ಪಡೆಯಲು ಪಡೆಯಲು ಪ್ರಾರಂಭಿಸಬಹುದು.

ಹವಾಗುಣ ಬದಲಾವಣೆಯ ಪರಿಣಾಮಗಳು ಭಾರತವೂ ಸೇರಿದಂತೆ ಅನೇಕ ದೇಶಗಳನ್ನು 2021ರಲ್ಲಿ ಹೆಚ್ಚಾಗಿ ಕಾಡಲಿದೆ. ಮಳೆ ಆಶ್ರಿತ ಕೃಷಿಗೆ ಅತಿವೃಷ್ಟಿ ಅಥವಾ ಅನಾವೃಷ್ಟಿಯ ಆತಂಕವಿದ್ದರೆ, ಭೂಮಿಯ ಫಲವತ್ತತೆ, ಸುಧಾರಿತ ಕೃಷಿ ಪದ್ಧತಿ, ಕೃಷಿ ಉತ್ಪನ್ನಗಳ ಸಂಗ್ರಹ ಹಾಗೂ ಸಾಗಾಣಿಕೆಯಲ್ಲಿ ಆಗುತ್ತಿರುವ ನಷ್ಟ, ಕೃಷಿಗೆ ನೀಡುವ ಸಾಲ, ಸೌಲಭ್ಯಗಳು ಹಾಗೂ ಬೆಂಬಲ ಬೆಲೆ, ಮೊದಲಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳುವುದು ಈ ಮೊದಲಿಗಿಂತಲೂ ಹೆಚ್ಚು ಅಗತ್ಯವಾಗಿದೆ. ಕೃಷಿಗೆ ಪೂರಕವಾದ ಡ್ರೋನ್, ಐಓಟಿ ಮೊದಲಾದ ತಂತ್ರಜ್ಞಾನಗಳ ಬಳಕೆ ಹೆಚ್ಚಾಗಲಿದ್ದು, ಇದರಿಂದ ಕೂಡಾ ಹೊಸ ಉದ್ಯೋಗವಕಾಶಗಳು ಸೃಷ್ಟಿಯಾಗಲಿವೆ.

ವರ್ಷ 2021ರಲ್ಲಿ ಜಗತ್ತನ್ನು ಹೆಚ್ಚಾಗಿ ಕಾಡಲಿರುವ ಸಮಸ್ಯೆಗಳಲ್ಲಿ ಸೈಬರ್ ಭಯೋತ್ಪಾದನೆ ಮೊದಲ ಸ್ಥಾನದಲ್ಲಿದೆ. ಮಾಧ್ಯಮ, ವಿದ್ಯುತ್ ಉತ್ಪಾದನೆ ಹಾಗೂ ವಿತರಣೆ ವ್ಯವಸ್ಥೆ, ಸಾರಿಗೆ, ವಿಮಾನಯಾನ, ಉದ್ಯಮ, ಬ್ಯಾಂಕು, ವಿಮಾ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ರಕ್ಷಣಾ ಪಡೆಗಳು, ಸರ್ಕಾರದ ಇಲಾಖೆಗಳು ಹೀಗೆ ಅನೇಕ ಕಡೆ 2020ರಲ್ಲಿ ನಡೆದಿರುವ ಸೈಬರ್ ಭಯೋತ್ಪದಕರ ದಾಳಿಗಳು, 2021ರಲ್ಲಿ ಹಲವು ಪಟ್ಟು ಹೆಚ್ಚಾಗಲಿವೆ. ಸುಳ್ಳು ಸುದ್ದಿ, ವಿಡಿಯೋ, ಆಡಿಯೋಗಳನ್ನು ಸೃಷ್ಟಿಸಿ ಜನಸಾಮಾನ್ಯರಲ್ಲಿ ಹೆದರಿಕೆ, ಸರ್ಕಾರ ಕುರಿತು ಅಪನಂಬಿಕೆ ಉಂಟು ಮಾಡುವ ಸೈಬರ್ ಭಯೋತ್ಪಾದಕರನ್ನು ಕುರಿತು ಜನಸಾಮಾನ್ಯರಲ್ಲಿ ಹೆಚ್ಚು ಜಾಗೃತಿ ಮೂಡಿಸುವ ಅಗತ್ಯವಿದೆ.

2021ರಲ್ಲಿ ಸಿಹಿ, ಕಹಿ ಏನೇ ಬರಲಿ, ಎಲ್ಲಾ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ನಾವೆಲ್ಲರೂ ಒಗ್ಗಟ್ಟಾಗಿ ಎದುರಿಸುವುದು ಅತ್ಯಗತ್ಯವಾಗಿದೆ.

Leave a Reply

Your email address will not be published.