ಬದಲಾವಣೆ ಅಸಾಧ್ಯ

ಸಂಸ್ಕೃತಿ ಎಂಬ ಪದವು ವಿಶಾಲವಾದ ಅರ್ಥವ್ಯಾಪ್ತಿಯನ್ನು ಹೊಂದಿದ್ದು ಸಾಮಾಜಿಕ ನಡವಳಿಕೆ ಮತ್ತು ಮಾನವ ಸಮಾಜದಲ್ಲಿ ಕಾಣಬಹುದಾದ ರೂಢಿಗತ ಮಾನಕಗಳನ್ನಲ್ಲದೆ ಆ ಸಮುದಾಯದ ವ್ಯಕ್ತಿಗಳ ಜ್ಞಾನ, ನಂಬಿಕೆ, ಕಲೆ, ಸಂಪ್ರದಾಯ, ಸಾಮರ್ಥ್ಯ, ಸ್ವಭಾವ, ಇತ್ಯಾದಿಗಳನ್ನೂ ಒಳಗೊಂಡಿರುತ್ತದೆ. ಕಲಿಕೆ ಮತ್ತು ಸಾಮಾಜೀಕರಣದಿಂದ ವ್ಯಕ್ತಿಯು ಸಂಸ್ಕೃತಿಯನ್ನು ತನ್ನದಾಗಿಸಿಕೊಳ್ಳುತ್ತಾನೆ. ಸಂಸ್ಕೃತಿಯ ಮಾನದಂಡವು ಸಮಾಜದಲ್ಲಿ ಒಪ್ಪಿಗೆಯಾಗುವ ನಡವಳಿಕೆಗಳನ್ನು ಕ್ರೋಡೀಕರಿಸುತ್ತದೆ. ಸಂಸ್ಕೃತಿ ಇರುವುದು ವ್ಯಕ್ತಿಯಲ್ಲೋ ಅಥವಾ ಸಮುದಾಯದಲ್ಲೋ ಎಂಬ ಪ್ರಶ್ನೆಗೆ ನಿರ್ದಿಷ್ಟ ಉತ್ತರ ಕೊಡುವುದು ಕಷ್ಟ.

ಪ್ರಸ್ತುತ ಚರ್ಚೆಗಾಗಿ ಸಂಸ್ಕೃತಿಯನ್ನು ‘ಜೀವನ ವಿಧಾನ’ ಎಂದು ಸರಳವಾಗಿ ಅರ್ಥೈಸಿಕೊಂಡು ಮುಂದುವರಿಯಬಹುದು. ಈ ವ್ಯಾಖ್ಯೆಯಲ್ಲಿ ಸಮಾಜದ ಸಂಪ್ರದಾಯಗಳು, ಪರಂಪರೆಗಳು, ಹಾಗು ಮೌಲ್ಯಗಳು ಅಡಕವಾಗಿವೆಯಾದರೂ ಸಂಸ್ಕೃತಿಯನ್ನು ನಿರ್ಧರಿಸುವಲ್ಲಿ ಮೌಲ್ಯಗಳು ಪ್ರಮುಖಪಾತ್ರ ವಹಿಸುತ್ತವೆ.

ವಿಶ್ವದ ಸಮಸ್ತ ಜೀವಿಗಳಿಗೆ ಒಳಿತು ಬಯಸುವ ಸಂಸ್ಕೃತಿಯನ್ನು ನಮ್ಮ ಪೂರ್ವಿಕರು ರೂಢಿಸಿಕೊಂಡಿದ್ದರೆದು ‘ಶಂ ನೋ ಅಸ್ತು ದ್ವಿಪದೇ, ಶಂ ಚತುಷ್ಪದೇ’ ಎಂಬ ವೇದವಾಕ್ಯದಿಂದ ತಿಳಿದುಬರುತ್ತದೆ. ಅಂತೆಯೇ, ‘ಸಹನಾವವತು ಸಹ ನೌ ಭುನಕ್ತು, ಸಹ ವೀರ್ಯಂ ಕರವಾವ ಹೈ, ತೇಜಸ್ವಿನಾವಧೀತಮಸ್ತು ಮಾ ವಿದ್ವಿಷಾವ ಹೈ’ ಅಂದಿನ ಸಮಾಜದಲ್ಲಿ ಸಹಬಾಳ್ವೆ, ಸಹಕಾಯಕ, ಇತ್ಯಾದಿ ಮೌಲ್ಯಗಳು ವ್ಯಾಪಕವಾಗಿದ್ದಿರಬಹುದೆಂಬುದನ್ನು ಸೂಚಿಸುತ್ತದೆ. ಇಂತಹ ಅನೇಕ ಉನ್ನತ ಮೌಲ್ಯಗಳನ್ನು ಈ ಹಿಂದೆ ಜನಸಾಮಾನ್ಯರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದಿರಬಹುದು.

ಕಳೆದ ಐದಾರು ದಶಕಗಳಲ್ಲಿ, ನಮ್ಮ ಸುತ್ತಲಿನ ಸಮಾಜದಲ್ಲಿ ಮೌಲ್ಯಗಳು ಬದಲಾಗುತ್ತಿರುವುದನ್ನು, ಕುಸಿಯುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಸಾಮಾಜಿಕ ಕಾಳಜಿ ಕಾಣೆಯಾಗುತ್ತಿರುವುದನ್ನು ಗಮನಿಸುತ್ತಿದ್ದೇವೆ. ಸ್ವಾರ್ಥ, ಸುಳ್ಳು, ಕಪಟ, ವಂಚನೆ, ಅಹಿಂಸೆ, ಅತ್ಯಾಚಾರ, ಇತ್ಯಾದಿಗಳು ಅಧಿಕವಾಗುತ್ತಿದ್ದು ಇವೇ ಇಂದಿನ ಸಾಮಾಜಿಕ ಮೌಲ್ಯಗಳೇನೋ ಎನ್ನುವ ಮಟ್ಟ ಮುಟ್ಟಿದ್ದೇವೆ. ಧನಬಲ, ಬಾಹುಬಲ, ಅಧಿಕಾರಗಳಿಂದ ಏನನ್ನಾದರೂ ಸಾಧಿಸಬಹುದು ಎಂಬ ಪರಿಸ್ಥಿತಿ ನಿರ್ಮಾಣಗೊಂಡಿದೆ. ಇವುಗಳಿಗೆ ಅಪವಾದಗಳು ಇವೆಯೆಂಬುದನ್ನು ಒಪ್ಪಿಕೊಳ್ಳುತ್ತೇನೆ.

ಇದರ ಪರಿಣಾಮವಾಗಿ ನಾಗರಿಕರು ಕಳಪೆ ಮಟ್ಟದ ಸೇವೆಗಳಿಂದಲೇ ತೃಪ್ತಿ ಪಟ್ಟುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ. ಜನಸಾಮಾನ್ಯರ ಜೀವನ ದುಸ್ತರವಾಗುತ್ತಿದೆ. ಶಾಲೆ, ಕಾಲೇಜು, ಆಸ್ಪತ್ರೆ, ಕಚೇರಿ, ಹೀಗೆ ಯಾವುದೇ ಸರ್ಕಾರಿ ಸಂಸ್ಥೆಯನ್ನು ಸುಸ್ಥಿತಿಯಲ್ಲಿ ಇರಿಸಿಕೊಳ್ಳುವಲ್ಲಿ ಸೋತಿದ್ದೇವೆ. ಬಹುತೇಕ ಅಂಗನವಾಡಿಗಳು, ಶಾಲೆಗಳು, ಚಿಕಿತ್ಸಾಕೇಂದ್ರಗಳಲ್ಲಿ ಕನಿಷ್ಠ ಮೂಲಭೂತ ಸೌಕರ್ಯಗಳಿಲ್ಲ. ತುರ್ತು ಸಂದರ್ಭಗಳಲ್ಲಿ ಕೂಡ ಅಗತ್ಯ ವೈದ್ಯಕೀಯ ನೆರವು ನೀಡಲಾಗದಂತಹ ನಾಚಿಕೆಗೇಡಿನ ಸ್ಥಿತಿಗೆ ತಲುಪಿದ್ದೇವೆ.  ಉತ್ತಮ ಗುಣಮಟ್ಟದ ರಸ್ತೆ, ಸೇತುವೆ, ಕಟ್ಟಡ ನಿರ್ಮಿಸಿ, ನಿರ್ವಹಣೆ ಮಾಡುವಲ್ಲಿ ವಿಫಲರಾಗಿದ್ದೇವೆ. ಇವು ಕೇವಲ ಕೆಲವು ಉದಾಹರಣೆಗಳು ಮಾತ್ರ.

ಸಮಾಜದಲ್ಲಿ ನ್ಯೂನತೆಗಳಿರುವುದನ್ನು ಮೊದಲು ಒಪ್ಪಿಕೊಂಡರೆ, ಅವುಗಳನ್ನು ನಿವಾರಿಸಲು ಸಾಧ್ಯವಾಗುತ್ತದೆ, ಆದರೆ, ನಾವು ಆ ಮನಸ್ಥಿತಿಯಲ್ಲಿಲ್ಲವಾಗಿ ಬದಲಾವಣೆ ಅಸಾಧ್ಯ ಎನಿಸುತ್ತದೆ.

Leave a Reply

Your email address will not be published.