ಬದಲಾವಣೆ ನಿಸರ್ಗದ ನಿಯಮ

ಕೊರೊನಾ ನಂತರದ ಯುಗದಲ್ಲಿ ಅತ್ಯಗತ್ಯ ಸನ್ನಿವೇಶಗಳು ಒದಗಿ ಬಂದಾಗ ಮಾತ್ರ ಆನ್‌ಲೈನ್ ವ್ಯವಸ್ಥೆಯನ್ನು ಉಪಯೋಗಿಸಬೇಕಾಗುತ್ತದೆ.

ಕೋವಿಡ್-19 ಸಾಂಕ್ರಾಮಿಕ ರೋಗ ಕಳೆದ ನವೆಂಬರ್ 2019ರಿಂದಲೂ ಪ್ರಪಂಚದ ತುಂಬೆಲ್ಲಾ ನಿಧಾನವಾಗಿ ಹರಡಿ ಕಳೆದ ಮೂರು ತಿಂಗಳಲ್ಲಿ ಸ್ಫೋಟಗೊಳ್ಳುತ್ತಿದ್ದು, ನಮ್ಮ ಸಂವಹನದ ಗುಣಲಕ್ಷಣಗಳಲ್ಲಿ ಬದಲಾವಣೆಯನ್ನುಂಟು ಮಾಡಿದೆ. ನಮ್ಮ ಪಾರಂಪರಿಕ ಪದ್ಧತಿಗಳಲ್ಲಿ ಪರಿವರ್ತನೆ ತಂದು ಮೊಬೈಲ್ ಅಥವಾ ಲ್ಯಾಪ್‌ಟಾಪ್ ಮೂಲಕವೇ ಆನ್‌ಲೈನ್ ಸಂವಹನ ಮಾಡುವ ಅನಿವಾರ್ಯತೆ ಉಂಟಾಗಿದೆ. ಈ ಆನ್‌ಲೈನ್ ಕ್ರಾಂತಿ ಆನ್‌ಲೈನ್ ಶಿಕ್ಷಣ, ವರ್ಕ್ ಫ್ರಮ್ ಹೋಂ, ಜೂಮ್ ಮೀಟಿಂಗ್‌ಗಳು, ವೆಬ್‌ಕಾಸ್ಟ್, ಪಾಡ್‌ಕಾಸ್ಟ್ ಗಳು, ಡಿಜಿಟಲ್ ಆವೃತ್ತಿಗಳು ಇತ್ಯಾದಿಯಾಗಿ ಪರ್ಯಾಯವಾಗಿ ಅನೇಕ ಮಾಧ್ಯಮಗಳು ಸೃಷ್ಟಿಯಾಗಿವೆ.

ಈ ಕ್ರಾಂತಿಯು ತನ್ನ ಸಾಧಕಬಾಧಕಗಳ ಮೂಲಕ ನಮ್ಮ ಶಿಕ್ಷಣ, ವ್ಯವಹಾರ, ಸಾಂಸ್ಕೃತಿಕ ಪರಿಸರ ಹಾಗೂ ಕೌಟುಂಬಿಕ ಸಂಬಂಧಗಳನ್ನು ವ್ಯಾಖ್ಯಾನಿಸುವಲ್ಲಿ ನಮ್ಮ ವಿಚಾರ, ವಿಮರ್ಶೆ ಹಾಗೂ ಚರ್ಚೆ ನಡೆಯಬೇಕಾಗಿದೆ.

ಮೊದಲಿಗೆ ಆನ್‌ಲೈನ್ ಕ್ಲಾಸ್‌ಗಳ ಬಗ್ಗೆ ತೆಗೆದುಕೊಂಡರೆ ಈಗ, ಕೋವಿಡ್ ಬಿಕ್ಕಟ್ಟಿನ ಪರಿಣಾಮ ತುರ್ತಾಗಿ ಎಲ್ಲವೂ ಡಿಜಿಟಲ್‌ಮಯವಾಗಿದೆ. ಆನ್‌ಲೈನ್ ಕ್ಲಾಸ್‌ಗಳು ನಡೆಯುತ್ತಿವೆ. ಸ್ಮಾರ್ಟ್ಫೋನ್ ಮೂಲಕ ಬೋಧನೆ ಮುಂದುವರಿದಿದೆ. ಇದು ತಾತ್ಕಾಲಿಕ ವ್ಯವಸ್ಥೆಯಾಗಿದೆ ಎಂದು ಉದ್ಯಮಿ ನಂದನ್ ನಿಲೇಕಣಿ ತಿಳಿಸಿದ್ದಾರೆ. ಅಶೋಕ ಯುನಿವರ್ಸಿಟಿ ಆಯೋಜಿಸಿದ್ದ ‘ಕೊರೊನೋತ್ತರ ಸವಾಲುಗಳನ್ನು ಎದುರಿಸಬಲ್ಲ ಭವಿಷ್ಯದ ಶಾಲೆಗಳು’ ಕುರಿತು ವರ್ಚುವಲ್ ಕಾನ್ಫರೆನ್ಸ್ ನಲ್ಲಿ ಭಾಗವಹಿಸಿದ ಅವರು, ‘ವಿದ್ಯಾರ್ಥಿಗಳ ಕಲಿಕೆಗೆ ಸೀಮಿತ ಗಂಟೆಗಳ ಲೆಕ್ಕ ಅಡ್ಡಿಯಾಗಬಹುದು. ಶಾಲೆಯ ಗಂಟೆ ಮುಗಿದ ನಂತರವೂ ಅವರಿಗೆ ಕಲಿಕೆಗೆ ಸಂಬಂಧಿಸಿ ಶಿಕ್ಷಕರ ನೆರವು ಸಿಗಬೇಕು’ ಎಂದರು.

ನನ್ನ ಮೊಮ್ಮಗ ಒಂದನೇ ಕ್ಲಾಸಿನಲ್ಲಿ ಓದುತ್ತಿದ್ದು, ಅವನ ಆನ್‌ಲೈನ್ ಕ್ಲಾಸ್‌ಗಳು ನಡೆಯುತ್ತಿವೆ. ಲ್ಯಾಪ್‌ಟಾಪ್ ಹಾಗೂ ಸ್ಮಾರ್ಟ್ಫೋನ್ ಮೂಲಕ ಆತ ಉತ್ತಮವಾಗಿ ಕಲಿಯುತ್ತಿದ್ದಾನೆ. ಆತನನ್ನು ಕಲಿಕೆಯಲ್ಲಿ ತೊಡಗಿಸಲು ಹೆಚ್ಚು ಅನುಕೂಲವಾಗಿದೆ. ಆದರೆ, ಆತನಿಗೆ ಇತರ ಸ್ನೇಹಿತರ ಜೊತೆಗಿನ ಸಾಮಾಜೀಕರಣದ ಕೊರತೆಯಾಗುತ್ತಿದೆ. ಇದಕ್ಕೆ ಸಂಬಂಧಿಸಿ ತಜ್ಞರ ಅಭಿಪ್ರಾಯವೆಂದರೆ, ಕಣ್ಣಿಗೆ ತೊಂದರೆ, ಬೌದ್ಧಿಕ ಬೆಳವಣಿಗೆ ಕುಂಠಿತ ಇತ್ಯಾದಿ ಇವೆ. ಆ ಕೊರತೆಗಳನ್ನು ಮುಂದಿನ ದಿನಗಳಲ್ಲಿ ಹೋಗಲಾಡಿಸಬಹುದು.

ಎರಡನೆಯದಾಗಿ, ವರ್ಕ್ ಫ್ರಂ ಹೋಂ ಬಗ್ಗೆ ಹೇಳುವುದಾದರೆ ಅನೇಕ ಕಚೇರಿಗಳು, ಕಂಪನಿಗಳು ಆನ್‌ಲೈನ್ ಮೂಲಕ ಇನ್ನೂ ಕಾರ್ಯನಿರ್ವಹಿಸುತ್ತಿವೆ. ನನ್ನ ಮಗನೇ ಕಳೆದ ಮಾರ್ಚ್ 22, 2020 ರಿಂದ ಈ ರೀತಿ ಕಾರ್ಯ ಮಾಡುತ್ತಿದ್ದಾನೆ. ಸತತವಾಗಿ ಮುಂಜಾನೆ 9.30ರಿಂದ ರಾತ್ರಿ 8 ಗಂಟೆವರೆಗೆ ಒಂದು ಕೊಠಡಿಯಲ್ಲಿದ್ದು, ಕರೆಗಳಿಗೆ ಅನುಗುಣವಾಗಿ ಮಾತನಾಡಿ ಲ್ಯಾಪ್‌ಟಾಪ್ ಮೂಲಕ ಅಂಕಿ ಅಂಶಗಳನ್ನು ವಿಶ್ಲೇಷಿಸಿ, ಚರ್ಚಿಸಿ ಅವುಗಳನ್ನು ಇತರರಿಗೆ ಕಳುಹಿಸುತ್ತಾನೆ. ಬಿಡುವು ಸಿಕ್ಕಾಗ ಬೆನ್ನಿನ ಮೇಲೆ ಕೈಗಳನ್ನಿಟ್ಟು ಒತ್ತಿಕೊಳ್ಳುತ್ತಾ ಸವರುತ್ತ ಹೊರಬರುತ್ತಾನೆ. ಕರೆಗಳು ಬಂದಾಗ ಮತ್ತೆ ಒಳಹೋಗಿ ಕಾರ್ಯ ಪ್ರಾರಂಭಿಸುತ್ತಾನೆ. ಆದರೆ ಮಾನಸಿಕ ಖಿನ್ನತೆ ಎದ್ದುಕಾಣುತ್ತಿದ್ದು, ಒಮ್ಮೊಮ್ಮೆ ಮನೆಯಲ್ಲಿರುವ ನಮ್ಮೆಲ್ಲರ ಮೇಲೆ ಸಿಡಿಮಿಡಿಗೊಳ್ಳುತ್ತಾನೆ. ಕಚೇರಿಯ ಸಿಬ್ಬಂದಿ ಜೊತೆಗಿನ ಸಾಮಾಜೀಕರಣ, ವಿಶ್ರಾಂತಿ, ಹರಟೆಗಳಿಂದ ಖಿನ್ನತೆ ನಿವಾರಣೆ ಆಗುತ್ತದೆನ್ನುತ್ತಾನೆ. ಇದು ಸರಿ.

ಅಂತರರಾಷ್ಟ್ರ, ರಾಷ್ಟ್ರ, ರಾಜ್ಯ ಹಾಗೂ ಜಿಲ್ಲಾಮಟ್ಟದಲ್ಲೂ ಜೂಮ್ ಮೀಟಿಂಗ್‌ಗಳು ನಡೆಯುತ್ತವೆ. ಇವುಗಳಲ್ಲಿ ಎಕ್ಸೆಲ್ ಶೀಟ್‌ನ ಸ್ಕ್ರೀನ್‌ಶಾಟ್ ತೆಗೆಯುವುದು, ಫೈಲ್‌ಗಳ ಗಾತ್ರ ಹಗುರಮಾಡಿ ಇಮೇಲ್ ಮಾಡುವುದು, ಅಪ್ರೂವಿಂಗ್ ಸ್ಟೇಟಸ್ ಸರಿಯಿದೆಯಾ ಎಂದು ಚೆಕ್ ಮಾಡುವುದು ಇತ್ಯಾದಿ ವ್ಯವಸ್ಥಿತವಾಗಿ ನಡೆಯುತ್ತಿವೆ.

ವೆಬ್‌ಕಾಸ್ಟ್ ಹಾಗೂ ಪಾಡ್‌ಕಾಸ್ಟ್ಗಳು ಪ್ರತ್ಯೇಕವಾಗಿ ಅನೇಕ ಸಂಗತಿಗಳನ್ನು ವೀಕ್ಷಕರಿಗೆ ಕೊಡುತ್ತಾ ಪ್ರಸಾರಗೊಳ್ಳುತ್ತವೆ. ವೆಬ್‌ಕಾಸ್ಟ್ನಲ್ಲಿರುವಂತೆ ಪಾಡ್‌ಕಾಸ್ಟ್ನಲ್ಲಿ ಲೈವ್ ನಿರಂತರ ಪ್ರಸಾರವಿರುವುದಿಲ್ಲ.

ಈಗಿನ ಲಾಕ್‌ಡೌನ್ ತುರ್ತು ಸಂದರ್ಭದ ಹಿನ್ನೆಲೆಯಲ್ಲಿ ಪತ್ರಿಕೆಗಳ ಡಿಜಿಟಲ್ ಆವೃತ್ತಿಗಳು ಬಹಳೇ ಸಹಾಯ ಮಾಡುತ್ತಿವೆ. ನಮ್ಮ ‘ಸಮಾಜಮುಖಿ’ ಏಪ್ರಿಲ್-ಮೇ 2020 ಸಂಚಿಕೆಯನ್ನು ಪಿಡಿಎಫ್‌ನಲ್ಲಿ ಓದಲು ಕಿರಿಕಿರಿ ಎನಿಸಿದರೂ ಅನೇಕ ಮಾಹಿತಿ, ಉತ್ತಮ ಲೇಖನಗಳು ದೊರೆಯುತ್ತಿವೆ. ಅದಕ್ಕಾಗಿ ನಮ್ಮ ಆನ್‌ಲೈನ್ ತಾಂತ್ರಿಕತೆಯನ್ನು ಮೆಚ್ಚಲೇಬೇಕು. ನಾನು ಇದೇ ರೀತಿ ಇತರ ಪತ್ರಿಕೆಗಳ ಆವೃತ್ತಿಗಳನ್ನೂ ಓದುತ್ತಿದ್ದೇನೆ.

ಆನ್‌ಲೈನ್ ಮೂಲಕ ಕಲಾಸೌಧ (ಆರ್ಟ್ ಗ್ಯಾಲರಿ) ನಿರ್ಮಿಸಿ ಪ್ರದರ್ಶನಗಳನ್ನು ಏರ್ಪಡಿಸಲಾಗುತ್ತಿದೆ. ವಾಹನಗಳ ಮಾರಾಟ ಮಾಹಿತಿ ಹಾಗೂ ಪ್ರತ್ಯೇಕ ಮಾದರಿಗಳ ಗುಣಲಕ್ಷಣಗಳನ್ನು ಆನ್‌ಲೈನ್ ಮೂಲಕ ಪಡೆಯಬಹುದು. ಮಾರಾಟವು ಆಗುತ್ತಿವೆ.

ನನ್ನ ಪ್ರಕಾರ, ಕೊರೊನಾ ಪ್ರೇರೇಪಿಸಿದ ಆನ್‌ಲೈನ್ ಸಂವಹನ ಕ್ರಾಂತಿ ಶಾಶ್ವತವಲ್ಲ. ಇದೊಂದು ತಾತ್ಕಾಲಿಕ ವ್ಯವಸ್ಥೆ. ಹಿಂದಿನ ಆಫ್‌ಲೈನ್ ವ್ಯವಹಾರ ಮರಳುತ್ತದೆ. ಕೊರೊನಾ ನಂತರದ ಯುಗದಲ್ಲಿ ಆನ್‌ಲೈನ್ ವ್ಯವಸ್ಥೆ ಹೆಚ್ಚಾಗಿ ಅತ್ಯಗತ್ಯ ಸಂದರ್ಭಗಳಲ್ಲಿ ಮಾತ್ರ ವ್ಯವಹರಿಸುವ ಸನ್ನಿವೇಶಗಳು ಒದಗಿ ಬಂದಾಗ ನಾವು ಅದನ್ನು ಉಪಯೋಗಿಸಲೇಬೇಕು. ಯಾಕೆಂದರೆ, “ಬದಲಾವಣೆಯೇ ನಿಸರ್ಗದ ಕಾನೂನು”.

Leave a Reply

Your email address will not be published.