ಬದುಕಿಗೆ ಬೇಕು ಭರವಸೆ ಭಾರತಕ್ಕಿಲ್ಲ ಅದರ ಕೊರತೆ

-ರಂಗಸ್ವಾಮಿ ಮೂಕನಹಳ್ಳಿ

ಜಗತ್ತಿನಾದ್ಯಂತ ಒಂದು ರೀತಿಯ ಸೂತಕದ ಛಾಯೆ ಆವರಿಸಿದೆ. ಹಾಗಾದರೆ ಮನುಷ್ಯನ ಬದುಕಿಗೆ ಭರವಸೆ ಇಲ್ಲವೇ? ಖಂಡಿತಾ ಇದೆ; ಹಿಂದಿನ ದಿನಗಳಲ್ಲಿ ಊಹಿಸಿಕೊಳ್ಳಲೂ ಆಗದಿದ್ದ ತಂತ್ರಜ್ಞಾನ, ಆಶಾಭಾವ ಚಿಗುರಿಸುವ ಹಲವಾರು ವಿಷಯಗಳು ನಮ್ಮ ಮುಂದಿವೆ.

ಕಳೆದ ಬಾರಿ ಹೊಸ ವರ್ಷವನ್ನು ಎಂದಿನಂತೆ ಬಹಳ ಖುಷಿಯಿಂದ ಸ್ವಾಗತಿಸಿದೆವು. ವಿಶ್ವಕ್ಕೆ ಕೊರೊನದಂತಹ ಘಟನೆ ಘಟಿಸಬಹುದು ಎನ್ನುವ ಕಿಂಚಿತ್ತೂ ಅರಿವು ನಮಗಿರಲಿಲ್ಲ. ವಿಶ್ವಕ್ಕೆ ಇದು ಒಂದು ರೀತಿಯ ಆಶ್ಚರ್ಯ ಎನ್ನುವುದು ಸುಳ್ಳಲ್ಲ. ಕಷ್ಟ ಕಾಲದಲ್ಲಿ ಮನುಷ್ಯನಲ್ಲಿರುವ ನಿಜವಾದ ಶಕ್ತಿಯ ಅನಾವರಣವಾಗುತ್ತದೆ ಎನ್ನುವುದನ್ನು ನಾವು ಕೇಳುತ್ತಾ ಬೆಳೆದವರು. ಕೊರೊನದಂತಹ ಅತ್ಯಂತ ಕಠಿಣ ಸಮಯವನ್ನ ಕಳೆದ ನೂರು ವರ್ಷದಲ್ಲಿ ಯಾರೂ ಕಂಡಿಲ್ಲ.

ಪೂರ್ಣ ವಿಶ್ವ ತಿಂಗಳುಗಟ್ಟಲೆ ಸ್ತಬ್ಧವಾಗಿದ್ದು ಇತಿಹಾಸದಲ್ಲಿ ಇದೆ ಮೊದಲು. ಜಗತ್ತಿನಲ್ಲಿ ಹಣದ ಹರಿವು ಸರಿಯಾಗಿದ್ದರೆ ಮಾತ್ರ ಎಲ್ಲವೂ ಸುಲಲಿತವಾಗಿ ನಡೆದುಕೊಂಡು ಹೋಗುತ್ತದೆ. ಇದರಲ್ಲಿ ಸ್ವಲ್ಪ ಏರುಪೇರಾದರೂ ಆರ್ಥಿಕ ಮಂದಗತಿ ಎನ್ನುವ ಮಾತುಗಳನ್ನ ಕೇಳಲು ಶುರು ಮಾಡುತ್ತೇವೆ. ವಸ್ತುಸ್ಥಿತಿ ಹೀಗಿದ್ದಾಗ ಆರೇಳು ತಿಂಗಳು ಪೂರ್ಣ ವ್ಯಾಪಾರ -ವಹಿವಾಟು ನಿಂತು ಬಿಟ್ಟರೆ? ಉಳ್ಳವರ ಕಥೆ ಬೇರೆ. ಇಲ್ಲದವರ, ಸಮಾಜದ ಅತ್ಯಂತ ಕೆಳಸ್ತರದಲ್ಲಿ ಕೆಲಸ ಮಾಡುವ ಜನರ ಪಾಡೇನು? ಈ ವರ್ಗದ ಜನರಲ್ಲಿ ಬಹುತೇಕರು ಅಂದಿನ ದಿನದ ಆದಾಯದ ಮೇಲೆ ಅವಲಂಬಿತರು.

ಭಾರತದಂತಹ ದೊಡ್ಡ ದೇಶದಲ್ಲಿ ಇದು ದೊಡ್ಡ ಸಮಸ್ಯೆಯಾಗಬೇಕಿತ್ತು. ಆದರೆ ಬೇರೆ ದೇಶಗಳಲ್ಲಿ ಆದ ಸಮಸ್ಯೆಗಳಷ್ಟು ಸುದ್ದಿ ಮತ್ತು ಸದ್ದು ಎರಡೂ ಮಾಡಲಿಲ್ಲ. ಇದಕ್ಕೆ ಪ್ರಮುಖ ಕಾರಣ, ಈ ದೇಶದ ಮಣ್ಣಿನ ಗುಣ. ಸಮಸ್ಯೆ ಬಂದಾಗ ಯಾರೋ ಒಬ್ಬರು ಮುಂದಾಳತ್ವ ವಹಿಸುತ್ತಾರೆ, ಸಮಸ್ಯೆಯ ಪರಿಹಾರಕ್ಕೆ ಕೆಲಸ ಮಾಡಲು ಶುರು ಮಾಡುತ್ತಾರೆ.

ಇಂದಿಗೂ ಜಗತ್ತಿನಾದ್ಯಂತ ಒಂದು ರೀತಿಯ ಸೂತಕದ ಛಾಯೆ ಆವರಿಸಿದೆ. ಹಾಗಾದರೆ ಮನುಷ್ಯನ ಬದುಕಿಗೆ ಭರವಸೆ ಇಲ್ಲವೇ ಎನ್ನುವ ಪ್ರಶ್ನೆ ಕೂಡ ಉದ್ಭವವಾಗುತ್ತದೆ. ಈ ಹಿಂದೆ, ಅಂದರೆ 1918ರಲ್ಲಿ ಸ್ಪ್ಯಾನಿಷ್ ಫ್ಲೂ ಎನ್ನುವ ಹೆಸರಿನ ರೋಗ ಕೋಟ್ಯಂತರ ಜನರ ಸಾವಿಗೆ ಕಾರಣವಾಗಿತ್ತು. ಮನುಕುಲ ಅದನ್ನ ಮರೆತು ಬಹಳ ದೂರ ಬಂದಿದೆ. ಎಲ್ಲಕ್ಕೂ ಮೊದಲಿಗೆ ಈ ಭೂಮಿ ಕೇವಲ ಮನುಷ್ಯ ಒಬ್ಬನ ಸ್ವತ್ತಲ್ಲ. ಇಲ್ಲಿ ನಾವು ಸಾವಿರಾರು ಜೀವಜಂತುಗಳ ಜೊತೆ ಭೂಮಿಯನ್ನ ಹಂಚಿಕೊಂಡಿದ್ದೇವೆ. ಭೂಮಿಯ ಮೇಲಿನ ಎಲ್ಲಾ ಸಂಪತ್ತು ಸೌಲಭ್ಯ ನಮ್ಮದು ಎನ್ನುವ ಭಾವನೆಯಲ್ಲಿ ಪ್ರಕೃತಿಯ ಮೇಲೆ ಮಾಡಿದ ದಾಳಿಯಿಂದಾದ ಗಾಯ ಈ ದಿನಗಳಲ್ಲಿ ಸ್ವಲ್ಪ ವಾಸಿಯಾಗುತ್ತಿದೆ. ಜಗತ್ತಿನಾದ್ಯಂತ ನೆಲ, ಜಲ ಮತ್ತು ವಾಯುವಿನಲ್ಲಿ ಜೀವ ಜಂತುಗಳು ಖುಷಿಯಿಂದ ವಿಹರಿಸುತ್ತಿರುವ ದೃಶ್ಯಗಳನ್ನ ನೋಡಿದ್ದೇವೆ. ಆ ಲೆಕ್ಕದಲ್ಲಿ ಕೊರೋನ ನಮ್ಮ ಅತಿ ವೇಗಕ್ಕೆ ಬಿದ್ದ ಬ್ರೇಕ್ ಅಷ್ಟೇ.

ಹಿಂದಿನ ದಿನಗಳಲ್ಲಿ ಊಹಿಸಿಕೊಳ್ಳಲೂ ಆಗದಿದ್ದ ತಂತ್ರಜ್ಞಾನ, ಆಶಾಭಾವ ಚಿಗುರಿಸುವ ಹಲವಾರು ವಿಷಯಗಳು ನಮ್ಮ ಮುಂದಿವೆ.

ಈ ಸಾಲಿನಲ್ಲಿ ಪ್ರಮುಖವಾಗಿ ಕೇಳಿಬರುವ ಹೆಸರು ಚಲನಚಿತ್ರ ನಟ ಸೋನು ಸೂದ್. ಮುಂಬೈನ ಹೋಟೆಲ್‍ನಲ್ಲಿ ಕ್ವಾರಂಟೈನ್ ಗೆ ಅವಕಾಶ ಕಲ್ಪಿಸುವ ಕೆಲಸದಿಂದ ಶುರುವಾದ ಈತನ ಸೇವೆ ವಲಸಿಗ ಕಾರ್ಮಿಕರನ್ನ ಅವರ ಮನೆಗಳಿಗೆ ಕಳಿಸುವ ಸೌಲಭ್ಯವನ್ನ ಕಲ್ಪಿಸುವುದರ ಮೂಲಕ ಇನ್ನೊಂದು ಹಂತಕ್ಕೆ ತಲುಪಿತ್ತು. ಈ ಕಾರ್ಯಕ್ಕೆ ಇವರಿಟ್ಟ ಹೆಸರು ‘ಘರ್ ಬೆಜೋ’. ಮೇ ತಿಂಗಳಲ್ಲಿ ಶುರುವಾದ ಈ ಕಾರ್ಯದಿಂದ ಹತ್ತಾರು ಸಾವಿರ ಜನರು ಮರಳಿ ತಮ್ಮ ಮನೆಯನ್ನ ಸೇರಲು ಅನುಕೂಲವಾಗಿದೆ. ಸಾವಿರಾರು ಜನರಿಗೆ ಊಟ ಮತ್ತು ವಸತಿಯನ್ನ ಕೂಡ ಇವರು ನೀಡಿದ್ದರು.

ಇನ್ನು ಅಕ್ಷಯ್ ಕುಮಾರ್ ಎನ್ನುವ ನಟ ಪ್ರಧಾನಮಂತ್ರಿ ನಿಧಿಗೆ 25 ಕೋಟಿ ಮತ್ತು ಮುಂಬೈ ನಗರಪಾಲಿಕೆಗೆ 3 ಕೋಟಿ ಮೊತ್ತದ ಹಣವನ್ನ ದೇಣಿಗೆ ರೂಪದಲ್ಲಿ ನೀಡಿದ್ದನ್ನ ಕೂಡ ಮರೆಯುವಂತಿಲ್ಲ. ಅಜಯ್ ದೇವಗನ್ ಎನ್ನುವ ನಟ ಕೂಡ ಸಾಕಷ್ಟು ವೆಂಟಿಲೇಟರ್, ಮಾಸ್ಕ್ ಜೊತೆಗೆ 700 ಕುಟುಂಬದ ಆಹಾರದ ಹೊಣೆಯನ್ನ ಹೊತ್ತಿದ್ದರು.

ಫರ್ಹಾ ಖಾನ್, ಸಲ್ಮಾನ್, ಶಾರುಖ್ ಎಲ್ಲರೂ ತಮ್ಮ ಕೈಲಾದ ಸಹಾಯವನ್ನ ಮಾಡಿದ್ದಾರೆ. ಬಾಲಿವುಡ್ ಮಾತ್ರವಲ್ಲ ನಮ್ಮ ಕ್ರಿಕೆಟಿಗರು ಕೂಡ ದೇಣಿಗೆಯನ್ನ ನೀಡುವುದರಲ್ಲಿ ಹಿಂದೆ ಬಿದ್ದಿಲ್ಲ. ಗೌತಮ್ ಗಂಭೀರ್ ಒಂದು ಕೋಟಿ ರೂಪಾಯಿ ಮತ್ತು ಎರಡು ವರ್ಷದ ತಮ್ಮ ವೇತನವನ್ನ ದೇಣಿಗೆಯಾಗಿ ನೀಡಿದ್ದಾರೆ, ಸಚಿನ್ ಮತ್ತು ಸೌರವ್ ತಲಾ ಐವತ್ತು ಲಕ್ಷ ನೀಡಿದ್ದಾರೆ. ಇವೆಲ್ಲಾ ಕೇವಲ ಒಂದಷ್ಟು ಸ್ಯಾಂಪಲ್ ಮಾತ್ರ. ಹಗಲು ರಾತ್ರಿ ಎನ್ನದೆ, ಜೀವದ ಹಂಗು ತೊರೆದು ದುಡಿದ ವೈದ್ಯಕೀಯ ಸಿಬ್ಬಂದಿ, ಪೊಲೀಸ್, ಜರ್ನಲಿಸ್ಟ್, ಮೂಲಭೂತ ಸೌಕರ್ಯಕ್ಕೆ ಕುಂದಾಗದಂತೆ ನೋಡಿಕೊಂಡ ಹಾಲು ಹಾಕುವ ಹುಡುಗನಿಂದ ಅಧಿಕಾರಿ ವರ್ಗದವರೆಗೆ ಎಲ್ಲರ ಸೇವೆಯೂ ಇಲ್ಲಿ ನೆನೆಯಲು ಯೋಗ್ಯ.

2021ರಲ್ಲಿ ಬದುಕು ತುಂಬಲಿದೆ ಆಶಾಭಾವ! ಈ ಮಾತಿಗೆ ಕೆಳಗಿನ ಅಂಶಗಳು ಇಂಬುಗೊಡುತ್ತವೆ:

  1. ಕುಸಿದ ಬಡ್ಡಿ ದರ ಉದ್ಯಮಗಳಿಗೆ ವರದಾನವಾಗಲಿದೆ. ಇದು

            ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿಸುವ ಸಾಧ್ಯತೆ ಕೂಡ ಇದೆ.

  1. ಜಗತ್ತಿಗೆ ಚೀನಾದ ಕುತಂತ್ರ ಅರಿವಾಗಿದೆ. ಹೀಗಾಗಿ ಮೇಕ್ ಇನ್

            ಇಂಡಿಯಾ ಅಡಿಯಲ್ಲಿ ನಾವು ವಿಶ್ವಕ್ಕೆ ಬೇಕಾದ ಎಲ್ಲವನ್ನೂ

            ತಯಾರಿಸಿ ಮಾರುವ ಅವಕಾಶವಿದೆ. ಈಗಾಗಲೇ ಕೊರೋನ

            ವೈರಸ್‍ನಿಂದ ರಕ್ಷಿಸಿ ಕೊಳ್ಳಲು ಇರುವ ಕಿಟ್ ಗಳನ್ನ ಭಾರತ

            ತಯಾರಿಸುತ್ತಿದೆ. ಇಂತಹ ಕಿಟ್‍ಗಳನ್ನ ಜಗತ್ತಿಗೆ ಮಾರುವ

            ಕ್ಷಮತೆಯನ್ನ ಪಡೆಡಿದ್ದೇವೆ. ಇದೊಂದು ಉದಾಹರಣೆ ಮಾತ್ರ.

            ವೈದ್ಯಕೀಯ ಕ್ಷೇತ್ರದಲ್ಲಿ ಇಂತಹ ಸಾಧ್ಯತೆಗಳು ಅನೇಕ.

  1. ಅಮೆರಿಕಾ, ಇಂಗ್ಲೆಂಡ್ ಮತ್ತು ಯೂರೋಪಿನಿಂದ ಭಾರತೀಯರು

            ಮರಳಿ ಭಾರತಕ್ಕೆ ಮರಳುವ ಸಾಧ್ಯತೆಯಿದೆ. ಅವರ ನೈಪುಣ್ಯ

            ಬಳಸಿಕೊಂಡು ನಮ್ಮ ಕಾರ್ಯ ಕ್ಷೇತ್ರವನ್ನ ವಿಸ್ತರಿಸಿಕೊಳ್ಳುವ

            ಅವಕಾಶ ನಮ್ಮ ಮುಂದಿದೆ. ಅಮೆರಿಕಾ ದೇಶದಲ್ಲಿ ಈಗಾಗಲೇ

            ಊ1ಃ ವೀಸಾ ನಿರಾಕರಣೆ ಕೂಗು ಜೋರಾಗಿದೆ.

  1. ವೈದ್ಯಕೀಯ ಕ್ಷೇತ್ರದಲ್ಲಿ ಹೆಚ್ಚಿನ ಸಂಶೋಧನೆ ನಡೆಸುವ ಸಾಧ್ಯತೆಗಳು

            ನಮ್ಮ ಮುಂದಿವೆ.

  1. ತೈಲ ಬೆಲೆಯನ್ನ ನಮ್ಮ ಅನುಕೂಲಕ್ಕೆ ಬಳಸಿಕೊಂಡು ಹಣದುಬ್ಬರವನ್ನ

            ತಡೆಯಬಹುದು. ಇದು ಜನ ಸಾಮಾನ್ಯನಿಗೆ ಅನುಕೂಲ

            ಮಾಡಿಕೊಡುತ್ತದೆ.

  1. ಆರ್ಟಿಫಿಷಿಯಲ್ ಇಂಟೆಲಿಜೆನ್ಸಿ ಹೆಚ್ಚಿನ ಮಹತ್ವ ಪಡೆಯಲಿದೆ.

            ಇದು ಶಿಕ್ಷಣ ಕ್ಷೇತ್ರದಲ್ಲಿ ಕೂಡ ಬದಲಾಣೆ ತರುವ ಸಾಧ್ಯತೆಯಿದೆ.

  1. ಇವೆಲ್ಲವುಗಳ ಜೊತೆಯಲ್ಲಿ ಸಣ್ಣ ಸಣ್ಣ ವಿಷಯಗಳಾದ ಚೀನಾ

            ಆಪ್‍ಗಳನ್ನ ಬಳಸದಿರುವುದು, ಚೀನಿ ಡಿಜಿಟಲ್ ವಾಲೆಟ್

            ಬಳಸದಿರುವುದು ಇವೆಲ್ಲಾ ನಮ್ಮಲ್ಲಿ ಉದ್ಯೋಗಾವಕಾಶವನ್ನ

            ಹೆಚ್ಚಿಸುತ್ತದೆ.

ಜಗತ್ತಿನ ಬಹುತೇಕ ದೇಶಗಳು ಸಾಲದಲ್ಲಿ ಮುಳುಗಿವೆ. ಜಗತ್ತನ್ನು ಪೂರ್ತಿ ಒಂದು ಮನೆಯನ್ನಾಗಿ ನೋಡಿದರೆ ಒಂದು ರೂಪಾಯಿ ಆಸ್ತಿಯ ಮುಂದೆ ಎರಡೂವರೆ ರೂಪಾಯಿ ಸಾಲವಿದೆ. ಅಮೆರಿಕಾ ಎಕಾನಮಿ ನಿಂತಿರುವುದೇ ಸಾಲದ ಮೇಲೆ. ಅಲ್ಲಿ ಎಲ್ಲದಕ್ಕೂ ಕ್ರೆಡಿಟ್ ಹಿಸ್ಟ್ರಿ ಬೇಕೇ ಬೇಕು. ಹೀಗೆ ಅಮೆರಿಕಾ ಯೂರೋಪು ಸೇರಿ ಜಗತ್ತಿನ ಬಹಳಷ್ಟು ದೇಶಗಳಲ್ಲಿ ಲೋನ್ ಡಿಫಾಲ್ಟರ್ಸ್ ಸಂಖ್ಯೆ ಹೆಚ್ಚುತ್ತದೆ. ಇದು ಸಣ್ಣ ಐಸ್ ಬಾಲ್ ರೂಪದಲ್ಲಿ ಶುರುವಾಗಿ ಅದ್ಯಾವ ಗಾತ್ರವನ್ನ ಪಡೆಯುತ್ತದೋ ದೇವರೇ ಬಲ್ಲ.

ಭಾರತದಲ್ಲಿ ಕೂಡ ಇದು ಆಗಲಿದೆ. ಆದರೆ ಇಲ್ಲಿ ಸಣ್ಣದೊಂದು ಆಶಾಭಾವ ನಮ್ಮ ಪಾಲಿಗಿದೆ. ಅಮೆರಿಕಾ, ಯೂರೋಪುಗಳಲ್ಲಿ ಬಡ್ಡಿಯ ದರ ಸೊನ್ನೆ ಅಥವಾ ನೆಗಟಿವ್, ಜಪಾನ್ ಕಥೆ ಕೂಡ ಸೇಮ್. ಇತರ ಎಮರ್ಜಿಂಗ್ ಮಾರುಕಟ್ಟೆಗಳಲ್ಲಿ ಕೂಡ ಹೂಡಿಕೆಯ ಮೇಲಿನ ಲಾಭಂಶ ಅಷ್ಟಕಷ್ಟೇ! ಭಾರತದಲ್ಲಿ ಕೂಡ ಇದು ಕುಸಿದಿದೆ. ಆದರೆ ಬೇರೆಲ್ಲಾ ದೇಶಗಳಿಗೆ ಹೋಲಿಕೆ ಮಾಡಿ ನೋಡಿದರೆ ಭಾರತದಲ್ಲಿ ಹೂಡಿಕೆ ಲಾಭದಾಯಕ. ಹೀಗಾಗಿ ಫಾರಿನ್ ಇನ್ಸ್ಟಿಟ್ಯೂಷನಲ್ ಇನ್ಸೆಸ್ಟರ್ಸ್ ಕೊರೋನೋತ್ತರ ಅಳೆದು ತೂಗಿ ಭಾರತದಲ್ಲಿ ಹೂಡಿಕೆ ಮಾಡುವ ಸಾಧ್ಯತೆಗಳಿವೆ. ಇಂತಹ ಸಂಕಷ್ಟದ ದಿನಗಳಲ್ಲಿ ಕೊರೋನವನ್ನ ಇಲ್ಲಿಯ ತನಕ ಕಂಟ್ರೋಲ್ ಮಾಡಿದ ರೀತಿ, ಆರ್ಥಿಕ ಕುಸಿತಕ್ಕೆ ಹೆದರದೆ ಪೂರ್ಣ ಲಾಕ್ ಡೌನ್ ಘೋಷಿಸಿದ ರೀತಿ, ಕೋಮುಗಲಭೆಗೆ ತುತ್ತಾಗಬಹುದಿದ್ದ ದೇಶವನ್ನ ದೀಪವನ್ನ ಬೆಳಗಿಸಿ ತಹಬದಿಗೆ ತಂದ ರೀತಿ ಇವೆಲ್ಲವೂ ವಿಶ್ವಕ್ಕೆ ಭಾರತ ಮಾದರಿ ಎನ್ನುವ ಭಾವನೆಯನ್ನ ತಂದಿವೆ.

*ಲೇಖಕರು ಆಂತರಿಕ ಲೆಕ್ಕ ಪರಿಶೋಧಕರಾಗಿ ದುಬೈ ಮತ್ತು ಯೂರೋಪಿನ ವಿತ್ತ ಪ್ರಪಂಚ ಕಂಡಿದ್ದಾರೆ; ಐವತ್ತಕ್ಕೂ ಹೆಚ್ಚು ದೇಶಗಳನ್ನು ಸುತ್ತಿದ್ದಾರೆ. ಯೂರೋಪ್, ಮಧ್ಯಪ್ರಾಚ್ಯ, ಏಷ್ಯಾ, ಅಮೆರಿಕಾ ಮತ್ತು ಇತರ ದೇಶಗಳಲ್ಲಿ ಆರ್ಥಿಕ ಸಲಹೆಗಾರರಾಗಿ ಹಲವು ಸಂಸ್ಥೆ ಮತ್ತು ವ್ಯಕ್ತಿಗಳಿಗೆ ಸೇವೆ ನೀಡುತ್ತಿದ್ದಾರೆ.

Leave a Reply

Your email address will not be published.