ಬದುಕಿನ ಮೂಲ ಕೆದಕುವ ‘ದ ರೂಡೆಸ್ಟ್ ಬುಕ್ ಎವರ್’

ಶೀರ್ಷಿಕೆಯ ಟ್ಯಾಗ್ ಲೈನಿನಲ್ಲಿ ಹೇಳಿದಂತೆ ಓದುಗನೊಬ್ಬ ತನ್ನ ಭಾವನೆಗಳಿಗೆ, ನಂಬಿಕೆಗಳಿಗೆ, ಪೂರ್ವಗ್ರಹಗಳಿಗೆ ಬೀಳಲಿರುವ ಹೊಡೆತವನ್ನು ತಾಳಿಕೊಳ್ಳಲು ಸಿದ್ಧನಾಗಿದ್ದರೆ ಮಾತ್ರ ಈ ಕೃತಿಯನ್ನು ಎತ್ತಿಕೊಳ್ಳಬೇಕು; ಇದು ಉಳಿದವರಿಗಲ್ಲ!

ಪ್ರಸಾದ್ ನಾಯ್ಕ್

“ನಾನಿಲ್ಲಿ ನಿಮಗೆ ಪ್ರೇರಣೆಯನ್ನು ನೀಡಲು ಬಂದಿಲ್ಲ. ಬದಲಾಗಿ ಅದರ ವಿರುದ್ಧವಾದುದನ್ನು ನೀಡಲು ಬಂದಿದ್ದೇನೆ!’’

‘ಪ್ರಜ್ಞೆ’ ಎಂಬ ಪುಟ್ಟ ಪದದ, ಆದರೆ ವ್ಯವಸ್ಥಿತವಾಗಿ ಬಳಸಿಕೊಂಡರೆ ಬದುಕನ್ನೇ ಬದಲಿಸಬಲ್ಲ ಸಂಗತಿಯೊಂದರ ಬಗ್ಗೆ ಅಂದು ವಾಗ್ಮಿ ವಿನೀತ್ ಅಗರ್ವಾಲ್ ಹೀಗೆ ಮಾತನಾಡುತ್ತಿದ್ದರೆ ನಮ್ಮೆಲ್ಲರ ಮೊಗದಲ್ಲೂ ನಗೆಯೊಂದು ಮೂಡಿ ಮರೆಯಾಗಿತ್ತು. ಏಕೆಂದರೆ ‘ಮೋಟಿವೇಷನ್’ (ಪ್ರೇರಣೆ) ಮತ್ತು ಅದರ ಆಸುಪಾಸಿನ ಸಂಗತಿಗಳ ಮೇಲಷ್ಟೇ ಇಂದು ಬಿಲಿಯನ್ ಗಟ್ಟಲೆ ಡಾಲರುಗಳ ಉದ್ಯಮವು ಸೃಷ್ಟಿಯಾಗಿದೆ. ಇದರ ಪುಸ್ತಕಗಳಿಗಾಗಲಿ, ವೀಡಿಯೋಗಳಿಗಾಗಲಿ, ಆಡಿಯೋಗಳಾಗಲಿ ಡಿಮಾಂಡಪ್ಪೋ ಡಿಮಾಂಡು. ವಿಶ್ವದೆಲ್ಲೆಡೆ ನಡೆಸಲಾಗುವ ದುಬಾರಿ ಕೋರ್ಸುಗಳು ಬೇರೆ. ಅಂಥದ್ದರಲ್ಲಿ ವ್ಯಕ್ತಿಯೊಬ್ಬ ಬರೋಬ್ಬರಿ ಮೂರು ತಾಸುಗಳ ಉಪನ್ಯಾಸವನ್ನು ಆಸಕ್ತರಿಗಾಗಿ ಉಚಿತವಾಗಿ ನೀಡುತ್ತಿದ್ದ. ಎಲ್ಲದಕ್ಕಿಂತಲೂ ಮೇಲಾಗಿ ‘ನಾನೊಬ್ಬ ಮೋಟಿವೇಟರ್ ಅಲ್ಲ. ಡಿಮೋಟಿವೇಟರ್’ ಅನ್ನುತ್ತಿದ್ದ.

ಆಕಸ್ಮಿಕವಾಗಿ ಪುಸ್ತಕದಂಗಡಿಯಲ್ಲಿ ಸಿಕ್ಕಿದ್ದ, ಶ್ವೇತಾಭ್ ಗಂಗ್ವಾರ್ ಅವರ ‘ದ ರೂಡೆಸ್ಟ್ ಬುಕ್ ಎವರ್’ ಕೃತಿಯನ್ನು ಓದುವಾಗಲೂ ನನಗೆ ಇಂಥದ್ದೇ ಅನುಭವವಾಗಿತ್ತು. ಓದುಗನೊಬ್ಬನನ್ನು ಪುಸಲಾಯಿಸುತ್ತಾ ನೂರು-ನೂರೈವತ್ತು ಪುಟಗಳ ನಂತರ ಮುಖ್ಯ ವಿಷಯಕ್ಕೆ ಬರುವ ಕೆಲವು ಸೆಲ್ಫ್-ಹೆಲ್ಪ್ ಕೃತಿಗಳನ್ನು ನಾನು ಕಂಡಿದ್ದೇನೆ. ಆದರೆ ಅದಕ್ಕೆಲ್ಲಾ ಟೈಮಿಲ್ಲ ಎನ್ನುವಂತೆ ಶ್ವೇತಾಭ್ ನೇರವಾಗಿ ವಿಷಯಕ್ಕೆ ಬರುತ್ತಾರೆ. ನಾನು ನಿಮಗಿಲ್ಲಿ ಬಿಟ್ಟಿ ಬೋಧನೆಯನ್ನು ನೀಡಲು ಬಂದಿಲ್ಲ. ಬದಲಾಗಿ ನಿಮ್ಮ ಕೈಗೊಂದು ಕನ್ನಡಿಯನ್ನು ಕೊಟ್ಟು ನಿಮ್ಮದೇ ಅಸಲಿ ಮುಖವನ್ನು ತೋರಿಸುತ್ತಿದ್ದೇನೆ ಎಂದು ಕಪಾಳಕ್ಕೆ ಹೊಡೆದಂತೆ ಬರೆಯುತ್ತಾರೆ. ಮುಖಪುಟದಲ್ಲಿ ಅವರೇ ನೀಡಿರುವ ಟ್ಯಾಗ್ ಲೈನಿನಂತೆ ಓದುಗನೊಬ್ಬ ತನ್ನ ಭಾವನೆಗಳಿಗೆ, ನಂಬಿಕೆಗಳಿಗೆ, ಪೂರ್ವಾಗ್ರಹಗಳಿಗೆ ಬೀಳಲಿರುವ ಹೊಡೆತವನ್ನು ತಾಳಿಕೊಳ್ಳಲು ಸಿದ್ಧನಾಗಿದ್ದರೆ ಮಾತ್ರ ಈ ಕೃತಿಯನ್ನು ಎತ್ತಿಕೊಳ್ಳಬೇಕು. ಇದು ಉಳಿದವರಿಗಲ್ಲ.

ಬಹುಶಃ ಇದರ ಹಿಂದಿರುವ ತರ್ಕವು ಲೇಖಕರಿಗೆ ಚೆನ್ನಾಗಿ ತಿಳಿದಿದೆ. ಅದೇನೆಂದರೆ ಬದುಕು ಸುಖಾಸುಮ್ಮನೆ ಪೂಸಿ ಹೊಡೆದು ಕಲಿಸುವುದಿಲ್ಲ. ಬದುಕಿನ ಕಲಿಕಾವಿಧಾನಕ್ಕೆ ಅದರದ್ದೇ ಆದ ರೀತಿಯಿದೆ. ಅದು ನೋವಾಗಿರಬಹುದು, ಆಘಾತವಾಗಿರಬಹುದು, ಕಹಿ ಅನುಭವಗಳಾಗಿರಬಹುದು. ಬದುಕಿಗೆ ತನ್ನ ವಿಧಾನಗಳ ಬಗ್ಗೆ ಮುಲಾಜಿಲ್ಲ. ಬದುಕನ್ನು ಜಯಿಸುವವರು ಅದೆಷ್ಟೇ ಹೊಡೆತಗಳು ಬಿದ್ದ ನಂತರವೂ ಜಯಶಾಲಿಯಾಗುತ್ತಾರೆ. ತೀರಾ ಮಣ್ಣುಮುಕ್ಕಿದಂತೆ ಹೊರಜಗತ್ತಿಗೆ ಒಂದು ಕ್ಷಣ ಕಂಡರೂ ಹಿಂದೆಂದೂ ಕಾಣದ ವೇಗ ಮತ್ತು ರಭಸದಲ್ಲಿ ಮತ್ತಷ್ಟು ಶಕ್ತಿವಂತರಾಗಿ ಮೇಲೇಳುತ್ತಾರೆ. ಹಾಗಿಲ್ಲವಾದಲ್ಲಿ ಗಾಂಧಿ, ಮಂಡೇಲಾ, ಮಾಯಾ ಆಂಜೆಲೋರಂಥಾ ಮಹಾಸಾಧಕರು ನಮ್ಮ ನಡುವೆ ಇರುತ್ತಲೇ ಇರಲಿಲ್ಲ. ಈ ನಿಟ್ಟಿನಲ್ಲಿ ಬದುಕಿಗೂ, ಇಂಥಾ ಮಹನೀಯರಿಗೂ ಒಂದು ಥ್ಯಾಂಕ್ಸ್ ಹೇಳಲೇಬೇಕು.

‘’ಪ್ರೇರಣಾತ್ಮಕ ಭಾಷಣಗಳನ್ನು ಕೇಳಲು, ಪುಸ್ತಕಗಳನ್ನು ಓದಲು ಸೊಗಸಾಗಿರುತ್ತದೆ. ಕೆಲ ತಾಸುಗಳ ಅಥವಾ ದಿನಗಳ ಮಟ್ಟಿಗೆ ನಾವು ಸಂಪೂರ್ಣವಾಗಿ ಚಾರ್ಜ್ ಆಗಿರುವ ಬ್ಯಾಟರಿಯಂತೆ ಮೈಕೊಡವಿಕೊಂಡು ಏನೇನೋ ಮಾಡಲು ಹೊರಡುತ್ತೇವೆ ಕೂಡ. ಆದರೆ ಒಂದಷ್ಟು ಸಮಯದ ನಂತರ ಉತ್ಸಾಹವೆಲ್ಲಾ ಮಕಾಡೆ ಮಲಗಿರುತ್ತದೆ. ಮೆಲ್ಲನೆ ರಾಯರ ಕುದುರೆಯಾಗಲು ಅಣಿಯಾಗುತ್ತಿದ್ದ ವ್ಯಕ್ತಿತ್ವವು ಮತ್ತೆ ಕತ್ತೆಯಾಗತೊಡಗುತ್ತದೆ. ಏನು ಮಾಡಬೇಕೆಂದೇ ತಿಳಿಯುವುದಿಲ್ಲ’’, ಎಂದು ಬಹಳಷ್ಟು ಮಂದಿ ಹೇಳುವುದನ್ನು ಕಂಡಿದ್ದೇನೆ. ಇದು ನಮ್ಮೆಲ್ಲರ ಸಮಸ್ಯೆಯೂ ಹೌದು.

ಶ್ವೇತಾಭ್ ತನ್ನ ಕೃತಿಯಲ್ಲಿ ಹೇಳುವ ಕನ್ನಡಿ ಹಿಡಿಯುವ ಕೆಲಸವೆಂದರೆ ಇದೇ. ಅದು ಆತ್ಮಾವಲೋಕನ. ತೀರಾ ಖಾಸಗಿಯೂ, ವೈಯಕ್ತಿಕವೂ ಆಗಿರುವಂಥದ್ದು. ಸಾಮಾನ್ಯವಾಗಿ ನಮ್ಮ ವ್ಯಕ್ತಿತ್ವಕ್ಕೆ ನಾವು ಕನ್ನಡಿಯನ್ನು ಹಿಡಿದುಕೊಂಡಾಗಷ್ಟೇ ನಮ್ಮೊಳಗಿನ ಕೊರತೆಗಳು ಸ್ಪಷ್ಟವಾಗಿ ಕಾಣತೊಡಗುತ್ತವೆ. ಲೋಕದೆದುರು ನಾವು ತೋರ್ಪಡಿಸುವ ಮುಖಕ್ಕೂ, ನಮ್ಮ ಅಸಲಿ ಮುಖಕ್ಕೂ ಇರುವ ವ್ಯತ್ಯಾಸವು ಕಣ್ಣಿಗೆ ರಾಚುವಂತೆ ಕಾಣತೊಡಗುತ್ತದೆ. ಅದನ್ನು ಒಪ್ಪಿಕೊಳ್ಳಲು ಮಾತ್ರ ನಿಜಕ್ಕೂ ಗುಂಡಿಗೆ ಬೇಕು.

ಏಕೆಂದರೆ ಈ ಒಪ್ಪಿಕೊಳ್ಳುವಿಕೆಯೇ ಬದುಕನ್ನು ಬದಲಿಸುವತ್ತ ನಮ್ಮಂತಹ ಸಾಮಾನ್ಯರು ಇಡಬಹುದಾದ ಮೊದಲ ಹೆಜ್ಜೆ. ಉದಾಹರಣೆಗೆ ಬದುಕಿನುದ್ದಕ್ಕೂ ನಾವು ಬಹಳಷ್ಟು ಸುಳ್ಳುಗಳನ್ನು ನಮಗೆ ನಾವೇ ಹೇಳಿಕೊಳ್ಳುತ್ತಿರುತ್ತೇವೆ. ಜಂಕ್ ಫುಡ್ ಸೇವನೆಯು ತನ್ನ ತೂಕ ಇಳಿಸಿಕೊಳ್ಳುವಿಕೆಯ ಗುರಿಗೆ ಕೊಳ್ಳಿಯಿಡಬಲ್ಲದು ಎಂಬ ಬಗ್ಗೆ ಅರಿವಿದ್ದರೂ ಒಂದು ಬರ್ಗರ್ ತಿಂದರೆ ತಲೆಹೋಗುವಂಥದ್ದೇನಿಲ್ಲ ಎಂದು ನಮ್ಮನ್ನು ನಾವೇ ಸಂತೈಸಿಕೊಳ್ಳುತ್ತೇವೆ. ಒಳ್ಳೆಯ ಸಂಗಾತಿ ಜೊತೆಗಿದ್ದರೂ, ಅವಕಾಶ ಸಿಕ್ಕರೆ ಕೆಲವೇ ನಿಮಿಷಗಳ ದೇಹಸುಖಕ್ಕಾಗಿ ಇನ್ಯಾರದ್ದೋ ತೆಕ್ಕೆಯಲ್ಲಿ ಶುದ್ಧ ಅವಿವೇಕಿಗಳಂತೆ ಥಟ್ಟನೆ ಬಿದ್ದುಬಿಡುತ್ತೇವೆ. ಪ್ರತೀವರ್ಷದ ಆರಂಭದಲ್ಲಿ ಅವೇ ಹಳಸಿಹೋದ ರೆಸೊಲ್ಯೂಷನ್ನುಗಳನ್ನು ಬರೆದಿಡುತ್ತಾ ನಂತರ ಅವುಗಳಿಗೂ, ತಮಗೂ ಸಂಬಂಧವೇ ಇಲ್ಲವೆಂಬಂತೆ ನಮ್ಮದೇ ಲೋಕದಲ್ಲಿ ಮೈಮರೆಯುತ್ತೇವೆ.

ಹೊರಜಗತ್ತಿಗಾಗಿ ನಾವು ಅದೆಷ್ಟೋ ಸುಳ್ಳುಗಳನ್ನು ಹೇಳುತ್ತಾ, ಭ್ರಮೆಗಳನ್ನು ಸೃಷ್ಟಿಸುತ್ತಾ ಬದುಕಬಹುದು. ಆದರೆ ನಮಗೆ ನಾವೇ ಹೇಳುವ ಸುಳ್ಳುಗಳು? ಲೇಖಕರು ಎತ್ತಿ ತೋರಿಸುವ ನಮ್ಮದೇ ಕೊರತೆಗಳ, ಕೆಲಸಕ್ಕೆ ಬಾರದ ಭ್ರಮೆಗಳ, ಪೂರ್ವಗ್ರಹಗಳನ್ನು ಹೊಂದಿದ ತಲೆಬುಡಗಳಿಲ್ಲದ ನಂಬಿಕೆಗಳ ಕನ್ನಡಿಯೇ ಇದು.

ಅಸಲಿಗೆ ಒಬ್ಬ ಸಾಧಕನಿಗೂ, ಸಾಮಾನ್ಯನಿಗೂ ಇರುವ ಮೂಲ ವ್ಯತ್ಯಾಸವೆಂದರೆ ಇದುವೇ. ಇಂದು ಸಾಧಕರೆಂದು ನಮ್ಮ ಮುಂದಿರುವ ಹಲವು ಮುಖಗಳನ್ನು ನಾವು ಒಂದು ಭರ್ಜರಿ ಅಂತಿಮ ಫಲಿತಾಂಶವನ್ನಾಗಿ ನೋಡುತ್ತೇವೆಯೇ ಹೊರತು ಅದರ ಹಿಂದಿರುವ ಏಳುಬೀಳಿನ ಪಯಣವನ್ನಲ್ಲ. ಕೆಲವೇ ವರ್ಷಗಳ ಹಿಂದಿನ ಮಾತು. ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪದಕವನ್ನೆತ್ತಿದಾಗ ದೇಶಕ್ಕೆ ದೇಶವೇ ಹೆಮ್ಮೆಯಿಂದ ಬೀಗಿತು. ಅಂದು ಮಾಧ್ಯಮಗಳು ಸಿಂಧು ನಡೆದುಕೊಂಡು ಬಂದ ಅಸಾಮಾನ್ಯ ಹಾದಿಯ ಬಗ್ಗೆ ಸವಿವರವಾಗಿ ಬರೆದವು. ಆಕೆಯ ಮಹಾಶಿಸ್ತಿನ ಜೀವನಶೈಲಿ, ಆಕೆಯ ವಯಸ್ಸಿನ ಎಲ್ಲಾ ಮಕ್ಕಳು ತಮ್ಮದೇ ಲೋಕದಲ್ಲಿ ಹಾಯಾಗಿದ್ದರೆ ಜಗವನ್ನೇ ಮರೆತವಳಂತೆ ತನ್ನ ಗುರಿಯನ್ನು ಸಾಧಿಸಲು ಸಿಂಧು ಮುನ್ನಡೆಯುತ್ತಿದ್ದ ಬಗೆ, ಕಾಡುಹರಟೆ, ಐಸ್-ಕ್ರೀಂ, ಸ್ಮಾಟ್ರ್ಫೋನುಗಳಂಥಾ ಪುಟ್ಟ ವಯೋಸಹಜ ಖುಷಿಗಳನ್ನು ಬದಿಗೊತ್ತಿ ಬದುಕಬೇಕಿದ್ದ ಅನಿವಾರ್ಯತೆ… ಹೀಗೆ ಒಂದೇ, ಎರಡೇ? ನಾಲ್ಕು ವರ್ಷಗಳಿಗೊಮ್ಮೆ ಬರುವ ಆ ಬೆರಳೆಣಿಕೆಯ ಅತ್ಯಮೂಲ್ಯ ಒಂಬತ್ತು ಸೆಕೆಂಡುಗಳಿಗೋಸ್ಕರ ಉಸೇನ್ ಬೋಲ್ಟ್ ತನ್ನಿಡೀ ಬದುಕನ್ನು ಸವೆಸುತ್ತಾನಲ್ಲವೇ, ಇದಕ್ಕೇನನ್ನೋಣ? 

ಹೀಗೆ ಯಶಸ್ಸಿಗಾಗಿ ಇಷ್ಟೆಲ್ಲಾ ತ್ಯಾಗಗಳನ್ನು ಮಾಡಲು ಸಾಮಾನ್ಯನೊಬ್ಬ ತಯಾರಾಗುತ್ತಾನೆಯೇ? ಆಗುವುದಿಲ್ಲವೆಂದರೆ ಯಶಸ್ಸು ನಿಮಗೆಷ್ಟು ಮುಖ್ಯ? ನನ್ನ ಬದುಕಿನಲ್ಲಿ ‘ಇಂಥವೆಲ್ಲಾ’ ಇದ್ದರೆ ನಾನು ‘ಇಷ್ಟಿಷ್ಟು’ ಸಾಧಿಸಬಹುದಿತ್ತು ಎಂದೆಲ್ಲಾ ಸ್ವಾನುಕಂಪದ ಹೇಳಿಕೆಗಳನ್ನು ತಮ್ಮ ಸೋಲಿಗೆ ಕಾರಣಗಳನ್ನಾಗಿ ಕೊಡುವವರು ಮಾಡುವುದು ವೃಥಾ ಗೊಣಗಾಟವಲ್ಲದೆ ಇನ್ನೇನು? ಹೀಗೆ ಬಹಳಷ್ಟು ಕಾಡುವ ಪ್ರಶ್ನೆಗಳು ಇಲ್ಲಿ ಓದುಗನನ್ನು ಅಣಕಿಸುವಷ್ಟು ತೀವ್ರತೆಯಲ್ಲಿ ಕೆಣಕುತ್ತವೆ.

ಹಾಗೆಂದು ಇದು ಯಶಸ್ಸೆಂಬ ಕೊಪ್ಪರಿಗೆಯನ್ನು ಪಡೆದುಕೊಳ್ಳಲು ಬೇಕಾಗಿರುವ ಸಿದ್ಧಸೂತ್ರಗಳಿಗಷ್ಟೇ ಸೀಮಿತವಲ್ಲ. ದುರಾದೃಷ್ಟವೆಂದರೆ ಇಂದು ಯಶಸ್ಸಿನ ವ್ಯಾಖ್ಯಾನವು ಕೇವಲ ಆರ್ಥಿಕ ಯಶಸ್ಸಷ್ಟೇ ಎನ್ನುವಂತಾಗಿದೆ. ಒಳ್ಳೆಯ ಶಿಕ್ಷಕನೊಬ್ಬನಿಗೆ ಹಿಂದೆ ನಮ್ಮ ಸಮಾಜದಲ್ಲಿ ಅದೆಷ್ಟು ಗೌರವವಿತ್ತು! ಆ ಮಟ್ಟಿಗೆ ಆತನೋರ್ವ ಯಶಸ್ವಿ ಶಿಕ್ಷಕನೇ. ಆದರೆ ಇಂದು ಯಶಸ್ಸೆಂಬುದು ಬ್ಯಾಂಕ್ ಬ್ಯಾಲೆನ್ಸುಗಳ ಸೊತ್ತಾಗಿವೆ. ‘’ಮೇರೇ ಪಾಸ್ ಗಾಡಿ ಹೈ, ಬಂಗ್ಲಾ ಹೈ, ಪೈಸಾ ಹೈ… ತುಮ್ಹಾರೆ ಪಾಸ್ ಕ್ಯಾ ಹೈ?’’, ಎಂದು ಚಲನಚಿತ್ರದ ಪಾತ್ರವೊಂದು ಕೇಳುತ್ತದೆ. ‘’ಮೇರೆ ಪಾಸ್ ಮಾ ಹೈ’’, ಎನ್ನುತ್ತದೆ ಮತ್ತೊಂದು ಪಾತ್ರ.

ಅಸಲಿಗೆ ಸಾಮಾನ್ಯನೊಬ್ಬ ಯಶಸ್ವಿ ಉದ್ಯಮಿಯಾಗಲು ಅದೆಷ್ಟು ಕಷ್ಟಪಡಬೇಕೋ, ತನ್ನ ತಾಯಿಗೆ ಓರ್ವ ಒಳ್ಳೆಯ ಮಗನಾಗಲೂ ಅಷ್ಟೇ ಶ್ರಮವನ್ನು ಪಡಬೇಕು. ನಮ್ಮ ಸಂಬಂಧಗಳೂ ಸಮಯ, ಕಾಳಜಿ ಮತ್ತು ಪ್ರೀತಿಯ ರೂಪದಲ್ಲಿ ನಮ್ಮಿಂದ ಕಂದಾಯವನ್ನು ಕೇಳುತ್ತವೆ. ಸೈನಿಕನೊಬ್ಬ ಗಡಿಯಲ್ಲಿ ಪಡಬೇಕಾದ ಶ್ರಮಕ್ಕೂ, ಗುಮಾಸ್ತನೊಬ್ಬ ತನ್ನ ಸಾಮಥ್ರ್ಯ, ಅವಕಾಶಗಳಂಥಾ ಪರಿಧಿಯಲ್ಲಿ ಸಮಾಜಕ್ಕೆ ನೀಡುವ ಕೊಡುಗೆಗೂ ತಾಳೆ ಹಾಕಲು ಸಾಧ್ಯವಿಲ್ಲ. ಅಂಥಾ ಬಾಲಿಶ ಹೋಲಿಕೆಗಳನ್ನು ಮಾಡಲೂಬಾರದು. ಹೀಗಿದ್ದಾಗ ಯಶಸ್ಸೆಂದರೆ ಇಷ್ಟೇ ಎಂದು ಷರಾ ಬರೆದಿಡುವುದು ದಡ್ಡತನವೇ ಸರಿ.

‘’ಈ ಸಂಬಂಧವೂ ಶಾಶ್ವತವಾಗಿ ಉಳಿಯಲಿಲ್ಲ’’, ಎಂದು ಇತ್ತೀಚೆಗೆ ಆತ್ಮೀಯರೊಬ್ಬರು ನನ್ನಲ್ಲಿ ಕೊರಗುತ್ತಾ ಹೇಳುತ್ತಿದ್ದರು. ‘’ಅಷ್ಟಕ್ಕೂ ಈ ಬದುಕಿನಲ್ಲಿ ಶಾಶ್ವತವೆನ್ನುವುದು ಏನಿದೆ?’’, ಎಂದು ನಾನಾಗ ಕೇಳಿದ್ದೆ. ಯಾವ ರೀತಿಯಲ್ಲೂ ಇದು ವೈರಾಗ್ಯದ ಮಾತಲ್ಲ ಎಂದು ನಾನವರಿಗೆ ಪ್ರತೀಬಾರಿಯೂ ಹೇಳುತ್ತಲಿರುತ್ತೇನೆ. ಬದುಕನ್ನು ತೀರಾ ರೊಮ್ಯಾಂಟಿಕ್ ಆಗಿ ನೋಡುವುದು ಒಂದು ಮಟ್ಟಿಗೆ ಖುಷಿಯನ್ನು ತರಬಹುದು. ಹಾಗೆಂದು ಆ ಗುಂಗಿನಲ್ಲೇ ಉಳಿದುಬಿಡುವುದು ಕಷ್ಟ. ಬಹಳಷ್ಟು ಬಾರಿ ನಾವು ದಾರಿ ತಪ್ಪುವುದು ಇಂಥಾ ಭ್ರಮಾಲೋಕದಲ್ಲಿ ಅಗತ್ಯಕ್ಕಿಂತ ಹೆಚ್ಚು ಕಾಲ ವಿಹರಿಸುತ್ತಿರುವಾಗಲೇ!

ಶ್ವೇತಾಭ್ ಅವರ ಕಟುಸತ್ಯಗಳನ್ನೊಳಗೊಂಡ ಈ ಕೃತಿಯು ಓದುಗನಿಗೆ ಪರಿಚಯಿಸುವುದು ಬದುಕಿನ ಇಂಥದ್ದೇ ಮೂಲ ಅಂಶಗಳನ್ನು. ನಮ್ಮ ಶಿಕ್ಷಣವ್ಯವಸ್ಥೆಯು ದುರಾದೃಷ್ಟವಶಾತ್ ಕಲಿಸಿಕೊಡದ ಬದುಕಿನ ಅಸಂಖ್ಯಾತ ಮುಖಗಳನ್ನು. ‘ಏನನ್ನು ಯೋಚಿಸಬೇಕು?’ ಎನ್ನುವುದನ್ನೇ ನಾವು ಬದುಕಿನುದ್ದಕ್ಕೂ ನಮ್ಮ ಹೆತ್ತವರಿಂದ, ಶಿಕ್ಷಣದಿಂದ, ಸಮಾಜದಿಂದ ಕಲಿಯುತ್ತಾ ಬಂದಿದ್ದೇವೆ. ಧರ್ಮ, ಸಂಪ್ರದಾಯ, ನಂಬಿಕೆ, ಪರಂಪರೆಗಳ ಹೆಸರಿನಲ್ಲಿ ಬದುಕಿನ ಪರಿಕಲ್ಪನೆಗಳ ಅಂದವನ್ನೇ ರೂಪುಗೆಡಿಸುವಷ್ಟರ ಮಟ್ಟಿಗೆ ಇವುಗಳನ್ನು ನಿರಂತರವಾಗಿ ತಿರುಚಲಾಗಿದೆ.

ಹೀಗಾಗಿ ನಮಗಿಂದು ಬೇಕಿರುವುದು ‘ಹೇಗೆ ಯೋಚಿಸಬೇಕು?’ ಎನ್ನುವ ಹೊಸತನದ ಮತ್ತು ಪ್ರಾಯೋಗಿಕ ಹೆಜ್ಜೆಗಳನ್ನಿಡಬೇಕಾದ ಅನಿವಾರ್ಯತೆ. ಗುಂಪಿನಲ್ಲಿ ಗೋವಿಂದನಾಗುವುದು ಸುಲಭ. ಆದರೆ ಆ ಚೌಕಟ್ಟಿನಿಂದ ಹೊರಬಂದು ತನ್ನದೇ ಆದ ಹಾದಿಯನ್ನು ನಿರ್ಮಿಸಲು ಧೈರ್ಯ, ತಾಳ್ಮೆ, ಜೀವನಪ್ರೀತಿಗಳೆಲ್ಲವೂ ಬೇಕು.    

ಬದುಕೆಂಬುದು ಒಣ ಥಿಯರಿಯಲ್ಲ. ಹೀಗಾಗಿ ಬದುಕಿನ ಸವಾಲುಗಳನ್ನು ಎದುರಿಸಲು ನಮಗಿಂದು ಪ್ರಾಕ್ಟಿಕಲ್ ಮಾರ್ಗಗಳ ಅವಶ್ಯಕತೆಯಿದೆ. ಥಿಯರಿಯನ್ನು ಓದಲು, ಕೇಳಲು ಅಜ್ಜಿಕಥೆಯಂತೆ ಸೊಗಸು. ಆದರೆ ಹಾಯೆನಿಸುವ ಥಿಯಾರಿಟಿಕಲ್ ಅಂಶಗಳನ್ನು ನಿತ್ಯದ ಬದುಕಿನಲ್ಲಿ ಪ್ರಾಯೋಗಿಕವಾಗಿ ಅಳವಡಿಸಿಕೊಳ್ಳುವುದು ಶುದ್ಧ ತಪಸ್ಸೇ ಸರಿ. 

ಹೀಗಾಗಿಯೇ ಮತ್ತೊಮ್ಮೆ ಬರೆಯುತ್ತಿದ್ದೇನೆ: ಈ ‘ರೂಡೆಸ್ಟ್’ ಕೃತಿಯು ಎಲ್ಲರೂ ಅಷ್ಟು ಸುಲಭವಾಗಿ ಅರಗಿಸಿಕೊಳ್ಳುವಂಥದ್ದಲ್ಲ. ಇನ್ನು ಲೇಖಕರೇ ಸ್ವತಃ ಹೇಳುವಂತೆ ನೀವಾಯಿತು, ನಿಮ್ಮ ಬದುಕಾಯಿತು!

*ಲೇಖಕರು ಮೂಲತಃ ದಕ್ಷಿಣ ಕನ್ನಡದ ಕಿನ್ನಿಗೋಳಿಯವರು, ವೃತ್ತಿಯಿಂದ ಇಂಜಿನಿಯರು. ಪ್ರವೃತ್ತಿಯಿಂದ ಲೇಖಕರು ಮತ್ತು ಅಂಕಣಕಾರರು. ಆಫ್ರಿಕಾ ಪ್ರವಾಸ ಕಥನವಾಗಿರುವ ‘ಹಾಯ್ ಅಂಗೋಲಾ!’ ಚೊಚ್ಚಲ ಕೃತಿ. ಪ್ರಸ್ತುತ ಹರಿಯಾಣಾದ ಗುರುಗ್ರಾಮದ ನಿವಾಸಿ.

One Response to " ಬದುಕಿನ ಮೂಲ ಕೆದಕುವ ‘ದ ರೂಡೆಸ್ಟ್ ಬುಕ್ ಎವರ್’

ಪ್ರಸಾದ್ ನಾಯ್ಕ್

"

Leave a Reply

Your email address will not be published.