ಬದುಕುವುದು ಹೇಗೆ?

ಇಂದು ಅಂತರಂಗದ ಇಲ್ಲವೇ ಬಹಿರಂಗದ ಯಾವುದೇ ಬಗೆಯ ಕೌಶಲಗಳನ್ನು ಕಲಿಸಿಕೊಡುವ ದುಸ್ಥಿತಿ ಏಕೆ ಸೃಶ್ಟಿಯಾಗಿದೆ? ಇತರೆ ಜೀವಜಾತಿಗಳಿಗೆ ಯಾರು ಬದುಕುವ ಈ ಕಲೆಯನ್ನು ಕಲಿಸಿಕೊಡುತ್ತಾರೆ?

ದುಕು ‘ಅತ್ಯುತ್ತಮ’ವಾದುದು. ಮಾನವರು ಬದುಕುವುದು ಕಲಿಯಬೇಕಷ್ಟೆ. ಆದರೆ ಇಂದು ಇದನ್ನು ಕಲಿಸಿಕೊಡುವುದು ಒಂದು ಉದ್ಯಮವಾಗಿಬಿಟ್ಟಿದೆ. ‘ಬದುಕುವುದನ್ನು ಕಲಿಯಿರಿ’, ‘ವ್ಯಕ್ತಿತ್ವ ವಿಕಸನ’, ‘ಜೀವನ ಕೌಶಲಗಳು’ ಮುಂತಾದ ಹೆಸರುಗಳಲ್ಲಿ ಸಾವಿರಾರು ಪುಸ್ತಕಗಳು ಪ್ರತಿ ವರುಶ ಪ್ರಕಟವಾಗುತ್ತವೆ. ಕಲಿಸಿಕೊಡಲು ಅನೇಕ ಶ್ರೀಶ್ರೀಗಳು ಹುಟ್ಟಿಕೊಂಡಿದ್ದಾರೆ. ಕಂಪನಿಗಳು, ವೃತ್ತಿಪರ ತರಬೇತುದಾರರು ಹುಟ್ಟಿಕೊಂಡು ಸಾವಿರಾರು ಶಿಬಿರಗಳನ್ನು ನಡೆಸುತ್ತಾರೆ. ಇದಕ್ಕಾಗಿ ಸಾವಿರಾರು ರೂಪಾಯಿ ಶುಲ್ಕವನ್ನು ವಸೂಲು ಮಾಡುತ್ತಾರೆ. ಇದನ್ನು ಕಲಿಸಿಕೊಡಲು ಶಾಲಾಕಾಲೇಜುಗಳಲ್ಲಿ ವ್ಯಾಲ್ಯೂ ಎಜುಕೇಶನ್ ತರಗತಿಗಳನ್ನು ಹೆಚ್ಚುವರಿಯಾಗಿ ನಡೆಸಲಾಗುತ್ತಿದೆ. ಹೀಗೆ ಅನೇಕ ಬಗೆಗಳಲ್ಲಿ ಬದುಕುವ ಕೌಶಲವನ್ನು ಕಲಿಸಿಕೊಡಲು ಪ್ರಯತ್ನಿಸಲಾಗುತ್ತಿದೆ! ತಮಾಶೆಯೆಂದರೆ, ಇಲ್ಲೆಲ್ಲಾ ಮಾತನಾಡುವುದು ಹೇಗೆ? ಉಡುಗೆ ತೊಡುಗೆಗಳನ್ನು ಹೇಗೆ ಧರಿಸಬೇಕು? ಹಣ ಗಳಿಸುವುದು ಹೇಗೆ? ನಗುವುದು ಹೇಗೆ? ಊಟ ಮಾಡುವುದು ಹೇಗೆ? ಮುಂತಾದವುಗಳ ಬಗೆಗೆ ಗಮನಹರಿಸುತ್ತ ಅವೇ ಬದುಕಿನ ನಿಜವಾದ ಕೌಶಲಗಳು ಎಂದು ಬಿಂಬಿಸಿ ಜನರನ್ನು ಯಾಮಾರಿಸಲಾಗುತ್ತಿದೆ.

ಒಂದು ವೇಳೆ ಇವುಗಳನ್ನು ಒಪ್ಪಿಕೊಂಡರೂ ಇವು ಮಾನವರ ಭೌತಿಕ ಸ್ಥಿತಿಗೆ ಸಂಬಂಧಿಸಿದ ಸಂಗತಿಗಳು. ಆದರೆ ಮಾನವರ ಬದುಕುಬಾಳುವೆಗಳ ಔನ್ನತ್ಯ-ಔಚಿತ್ಯಗಳು ಅಂತರಂಗದ ಅರಿವು ಗಳಿಕೆಯ ಮೇಲೆ ಆಧರಿಸಿರುತ್ತವೆ. ಒಬ್ಬ ವ್ಯಕ್ತಿಯ ಗಾತ್ರದ ಮೇಲೆ, ಶಾರೀರಿಕ ಅಂದಚಂದದ ಮೇಲೆ ಯಾರೂ ಒಬ್ಬರ ವ್ಯಕ್ತಿತ್ವವನ್ನು, ಅವರ ಬಾಳ್ವೆಯನ್ನು ಅಳತೆ ಮಾಡುವುದಿಲ್ಲ. ಅಂತಹ ಭೌತಿಕ ರೂಪ ಮತ್ತು ಸಂಪತ್ತಿನ ಆಧಾರ ದಲ್ಲಿ ಮೌಲ್ಯಮಾಪನಗೊಂಡು ಬಿಂಬಿತವಾದ ಯಾವ ವ್ಯಕ್ತಿತ್ವವೂ ಹೆಚ್ಚುಕಾಲ ಉಳಿಯುವುದಿಲ್ಲ. ಅಂತರಂಗದ ಅರಿವು ಮಾನವರ ಬದುಕಿಗೆ ಬಹಳ ಮುಖ್ಯವೆಂದು ಯಾವ ತರಬೇತುದಾರರು, ಶ್ರೀಶ್ರೀಗಳು ಹೇಳಿಕೊಡುವುದಿಲ್ಲ. ಅದನ್ನು ಮರೆಮಾಚಲಾಗುತ್ತದೆ. ಯಾಕೆಂದರೆ ಅರಿವನ್ನು ಮಾರಲು ಸಾಧ್ಯವಿಲ್ಲ; ಅದನ್ನು ಪ್ರತಿಯೊಬ್ಬ ವ್ಯಕ್ತಿಯೂ ತಮ್ಮಲ್ಲಿ ತಾವೇ ಕಂಡುಕೊಳ್ಳಬೇಕಿರುತ್ತದೆ. ಜನರಿಗೆ ಅವರ ಪಾಡಿಗೆ ಅವರು ಅರಿತುಕೊಳ್ಳುವ ದಾರಿ ತೋರಿಸಿದರೆ ಮಾರುವ ದಲ್ಲಾಳಿಗಳಿಗೇನು ಲಾಭ? ಪುಸ್ತಕಗಳನ್ನು ಕೊಂಡು ತರಬಹುದೇ ಹೊರತು, ಅರಿವನ್ನು ಕೊಂಡು ತರಲು ಸಾಧ್ಯವೇ? ನಿಜವಾದ ಅರಿವನ್ನು ನಮ್ಮಲ್ಲಿ ನಾವೇ ಕಂಡುಕೊಳ್ಳಬೇಕಿರುತ್ತದೆ. ಅದಕ್ಕಾಗಿ ಬಹಳ ಎಚ್ಚರಿಕೆಯಿಂದ ನಿರಂತರವಾಗಿ ಪ್ರಯತ್ನ ಮಾಡಬೇಕಶ್ಟೇ. ಅದನ್ನು ಅರಿತುಕೊಳ್ಳಲು ಕೆಲವರ ನೆರವು ಬೇಕಾಗುತ್ತದೆ. ಅಲ್ಲದೆ ಇಂದು ಅಂತರಂಗದ ಇಲ್ಲವೇ ಬಹಿರಂಗದ ಯಾವುದೇ ಬಗೆಯ ಕೌಶಲಗಳನ್ನು ಕಲಿಸಿಕೊಡುವ ದುಸ್ಥಿತಿ ಏಕೆ ಸೃಶ್ಟಿಯಾಗಿದೆ? ಇತರೆ ಜೀವಜಾತಿಗಳಿಗೆ ಯಾರು ಬದುಕುವ ಈ ಕಲೆಯನ್ನು ಕಲಿಸಿಕೊಡುತ್ತಾರೆ?

ಮಾನವರು ನೆಮ್ಮದಿಯಾಗಿ ಬದುಕಲು ಬೇಕಾದ ಕೆಲವು ಮೂಲಭೂತ ‘ಸತ್ಯ’ಗಳನ್ನು ತಿಳಿದು ಜೀವಿಸುವುದರಿಂದ ಬದುಕುವ ಕಲೆ ಸಿದ್ದಿಸುತ್ತದೆ. ಬೋಧಿಸುವ ಕಲೆ ಬದುಕುವ ಕಲೆಯಾಗುವುದು ಅಸಾಧ್ಯ. ಹಾಗಾಗಿಯೇ ಗಾಂಧೀಜಿ ತಮ್ಮ ಜೀವನದಲ್ಲಿ ಬೋಧನೆಯ ಜೊತೆಗೆ ಬದುಕುವುದನ್ನು ಕಲಿಯಲು ಪ್ರಯತ್ನಿಸಿದರು.

ಈ ಜಗತ್ತಿನಲ್ಲಿ ಜನರು ಹೇಗೆ ಬದುಕಬೇಕೆಂದು, ಹೇಳುವುದರಿಂದ ಹೇಳುವವರಿಗೂ ಬರುವುದಿಲ್ಲ; ಕೇಳುವುದರಿಂದ ಕೇಳುವವರಿಗೂ ಬರುವುದಿಲ್ಲ. ಅದು ನಮ್ಮ ಶಿಕ್ಷಣದಿಂದಲೂ ಬರುತ್ತಿಲ್ಲ. ಹಾಗೆ ಬರುವುದಾಗಿದ್ದರೆ ನಮ್ಮ ಇಂದಿನ ಶಿಕ್ಷಣದ ಮೂಲಕವೇ ಎಲ್ಲವೂ ಸಾಧ್ಯವಾಗಬೇಕಿತ್ತು. ಅದು ಸಾಧ್ಯವಾಗಿಲ್ಲ ಯಾಕೆ? ಇಂದಿನ ಶಿಕ್ಶಣದ ಉದ್ದೇಶ ವಿದ್ಯಾರ್ಥಿಗಳನ್ನು ಪರೀಕ್ಶೆಯಲ್ಲಿ ಪಾಸು ಮಾಡಿಸುವಶ್ಟಕ್ಕೆ ಮಾತ್ರ ಸೀಮಿತವಾಗಿದೆ. ವಿದ್ಯಾರ್ಥಿಗಳಿಗೂ ಶಿಕ್ಷಣವೆಂಬುದು ಪರೀಕ್ಶೆಯೆಂಬ ಒಂದು ಶಾಸ್ತ್ರವನ್ನು ಮುಗಿಸುವುದಶ್ಟೇ ಉದ್ದೇಶವಾಗಿದೆ. ಅರಿವು ಮತ್ತು ವ್ಯಕ್ತಿತ್ವ ರೂಪಿಸುವ ಒಂದು ಮುಖ್ಯ ದಾರಿಯಾಗಿ ಶಿಕ್ಶಣವನ್ನು ಭಾವಿಸಿಯೇ ಇಲ್ಲ. ಮಾರಾಟ ಮತ್ತು ಖರೀದಿದಾರ ನಡುವಿನ ಸಂಬಂಧವೇ ಕಲಿಸುವ ಮತ್ತು ಕಲಿಯುವವರ ನಡುವೆ ಇರುವುದು.

ಶಿಕ್ಶಣ ಇಂದು ಒಂದು ವ್ಯಾಪಾರಿ ಸರಕು. ಹಾಗಾಗಿ ಇಲ್ಲಿ ಹೆಚ್ಚಿನದನ್ನು ನಿರೀಕ್ಶಿಸುವಂತಿಲ್ಲ. ಯಾರೋ ಹೇಳಿದ್ದನ್ನು ಕೇಳುವುದರಿಂದ ಇಲ್ಲವೇ ಬರೆದದ್ದನ್ನು ಪರಿಶ್ರಮದ ಓದಿನಿಂದ ಪ್ರೇರಣೆ ದೊರೆಯಬಹುದಶ್ಟೇ. ಪ್ರೇರಣೆಯೇ ಬದುಕಲ್ಲ; ಸಿದ್ದಿ ಸಾಧನೆಯಲ್ಲ. ಅದು ಏರಲಿರುವ ಗುರಿಗೆ ಏಣಿಯ ಒಂದು ಮೆಟ್ಟಿಲಶ್ಟೇ. ಅಂತಿಮವಾಗಿ ಬದುಕಬೇಕಾದವರು ನಾವೇ ಅಲ್ಲವೇ? ನಮ್ಮ ನಮ್ಮ ಬದುಕನ್ನು ನಾವೇ ಬದುಕಬೇಕಲ್ಲವೇ?

ನಮ್ಮ ನಮ್ಮ ಆಹಾರವನ್ನು ನಾವೇ ತಿನ್ನುವಂತೆ ನಮ್ಮ ನಮ್ಮ ಕೆಲಸವನ್ನು ನಾವೇ ಮಾಡಿಕೊಳ್ಳಬೇಕಲ್ಲವೇ? ಅಂತಹ ಕೆಲಸದಿಂದಲೇ ನಿಜವಾದ ಜೀವನ ಪಾಠ ಮತ್ತು ಕೌಶಲಗಳು ರೂಪುಗೊಳ್ಳುತ್ತಿರುತ್ತವೆ. ನಮಗೆ ಬೇಕಾದ ಕೌಶಲಗಳನ್ನು ನಾವು ಕಂಡುಕೊಳ್ಳಬೇಕಲ್ಲದೆ, ಕೊಂಡು ತರಲು ಸಾಧ್ಯವೇ?

ಮಾನವರು ನೆಮ್ಮದಿಯಾಗಿ ಬದುಕಲು ಬೇಕಾದ ಕೆಲವು ಮೂಲಭೂತ ‘ಸತ್ಯ’ಗಳನ್ನು ತಿಳಿದು ಜೀವಿಸುವುದರಿಂದ ಬದುಕುವ ಕಲೆ ಸಿದ್ದಿಸುತ್ತದೆ. ಬೋಧಿಸುವ ಕಲೆ ಬದುಕುವ ಕಲೆಯಾಗುವುದು ಅಸಾಧ್ಯ. ಹಾಗಾಗಿಯೇ ಗಾಂಧೀಜಿ ತಮ್ಮ ಜೀವನದಲ್ಲಿ ಬೋಧನೆಯ ಜೊತೆಗೆ ಬದುಕುವುದನ್ನು ಕಲಿಯಲು ಪ್ರಯತ್ನಿಸಿದರು. ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳುವುದನ್ನು ಕಲಿತರು. ವಿಚಾರ ಆಚಾರವಾಗಿ ನುಡಿ ನಡೆಯಾಗುವ ಬಗೆಯನ್ನು ತಮ್ಮ ಬದುಕಿನಲ್ಲಿ ತೋರಿಸಿಕೊಡಲು ಯತ್ನಿಸಿದರು. ‘ನನ್ನ ಜೀವನವೇ ನನ್ನ ಸಂದೇಶ’ ಎಂಬ ಮಾತಿನ ಮೂಲಕ ಅದನ್ನು ಸಾಧಿಸಿ ತೋರಿಸಲು ಯತ್ನಿಸಿದರು. ಪುಕ್ಕಟೆ ಸಂದೇಶ ನೀಡಲಿಲ್ಲ.

ಶರಣರು ಇಂತಹದ್ದೇ ವಿಚಾರಗಳನ್ನು ತೋರಿಸಿಕೊಟ್ಟರು ಮತ್ತು ಹಾಗೆಯೇ ಬದುಕಿ ಬಾಳಿದರು. ‘ನುಡಿಯೊಳಗಾಗಿ ನಡೆಯದಿದ್ದರೆ’ ಕೂಡಲ ಸಂಗಮದೇವ ಮೆಚ್ಚಲಾರನೆಂದರು ಬಸವಣ್ಣ. ಇಂತಹ ದಿಟ್ಟತೆ ಪ್ರಾಮಾಣಿಕತೆ ಅದೆಶ್ಟು ರಾಜಕಾರಣಿಗಳಿಗೆ, ಬೋಧಕರಿಗೆ, ಶ್ರೀಶ್ರೀಗಳಿಗೆ, ತರಬೇತುದಾರರಿಗೆ, ಸಮಾಜ ಸುಧಾರಕರಿಗೆ, ಕೊನೆಗೆ ‘ನಮಗೆ’ ಇದೆ? ಅಂದರೆ ಬದುಕನ್ನು ಅರಿತು ಬಾಳುವುದು ಬಹಳ ಮುಖ್ಯ. ನಮ್ಮ ಸಮಾಜದಲ್ಲಿ ಅರಿತು ಬಾಳುವವರ ಸಂಖ್ಯೆ ಬಹಳ ಕಡಿಮೆ. ಅವರು ಹಾಗೆ ಬದುಕುತ್ತಿದ್ದಾರೆ; ಇವರು ಹೀಗೆ ಬದುಕುತ್ತಿದ್ದಾರೆ; ನಾನು ಅವರಂತೆ ಬದುಕಬೇಕು ಎಂದು ಬಯಸುವ ಕಾಪಿಕ್ಯಾಟುಗಳೇ ಹೆಚ್ಚು. ಸ್ವತಂತ್ರವಾಗಿ ಚಿಂತಿಸುವ, ತಮಗೆ ಬೇಕಾದಂತೆ ಬದುಕಲು ಪ್ರಯತ್ನಿಸುವವರೇ ಕಡಿಮೆ. ಮಾನವರಿಗೆ ಬುದ್ಧಿ ಮತ್ತು ಆಲೋಚನೆ ಮಾಡುವ ಸಾಮರ್ಥ್ಯ ಇದೆ ಎಂದ ಮೇಲೆ ಯೋಚಿಸಿ ಬದುಕಬೇಕಲ್ಲವೇ?

‘ಅತ್ಯುತ್ತಮ’ ಬದುಕನ್ನು ನಿಸರ್ಗ ಮಾನವರಿಗೆ ನೀಡಿದೆ. ಆದರೆ ಅದನ್ನು ಬಳಸಿಕೊಳ್ಳುತ್ತಿಲ್ಲ ಎಂಬುದಶ್ಟೇ ಸಮಸ್ಯೆ. ಬೇರೆ ಜೀವಿಗಳು ನಿಸರ್ಗದ ವಿವೇಕದಿಂದ ಜೀವಿಸುತ್ತಿವೆ.

ತಿಳಿದು ಜೀವಿಸುವುದು

ತಿಳಿದು ಜೀವಿಸುವುದು ಎಂದರೇನು? ಎಂಬ ಕೇಳ್ವಿ ಮಾನವರ ನೆಲೆಯಿಂದ ಬಹಳ ಮುಖ್ಯ. ಇದು ಇತರೆ ಇರುವೆಂಬತ್ತು ಕೋಟಿ ಜೀವರಾಶಿಗಳಿಗಲ್ಲ. ಯಾಕೆಂದರೆ, ಅಂತಹ ತಿಳಿದು ಜೀವಿಸುವ ‘ಅತ್ಯುತ್ತಮ’ ಬದುಕನ್ನು ನಿಸರ್ಗ ಮಾನವರಿಗೆ ನೀಡಿದೆ. ಆದರೆ ಅದನ್ನು ಬಳಸಿಕೊಳ್ಳುತ್ತಿಲ್ಲ ಎಂಬುದಶ್ಟೇ ಸಮಸ್ಯೆ. ಬೇರೆ ಜೀವಿಗಳು ನಿಸರ್ಗದ ವಿವೇಕದಿಂದ ಜೀವಿಸುತ್ತಿವೆ. ನೈಸರ್ಗಿಕವಾಗಿ, ತಮ್ಮ ಜಾತಿಯಿಂದ ಹೊರತಾದ ಅನ್ಯ ಜೀವಿಗಳಿಂದ ಒದಗಿ ಬರುವ ಅಪಾಯಗಳು, ಅನಾರೋಗ್ಯ ಮುಂತಾದ ಸವಾಲುಗಳನ್ನು ಬಿಟ್ಟರೆ ಉಳಿದಂತೆ ಅವುಗಳ ಬದುಕು ತೀರ ಸರಳ ಮತ್ತು ಸಹಜವಾದುದು; ಹಾಗೂ ಸವಾಲಿನದೂ.

ಅಲ್ಲಿ ಕಪಟವಿಲ್ಲ; ಅವುಗಳಿಗೆ ಕೂಡಿಡುವ ಚಿಂತೆಯಿಲ್ಲ. ಅದನ್ನು ಉಳಿಸಿಕೊಳ್ಳಲು ಸೈನ್ಯ ಕಟ್ಟುವ ಅಗತ್ಯವೂ ಇಲ್ಲ. ಕಳ್ಳತನವಿಲ್ಲ; ಕಾನೂನು ರೂಪಿಸಬೇಕಿಲ್ಲ. ಅವುಗಳನ್ನು ಉಲ್ಲಂಘಿಸುವ ಅಗತ್ಯವೂ ಬರುವುದಿಲ್ಲ. ಜೈಲುಗಳನ್ನು ಸ್ಥಾಪಿಸುವ ಅನಿವಾರ್ಯವಿಲ್ಲ. ದಂಡ ವಿಧಿಸುವುದು; ಜೀವಾವಧಿ ಮತ್ತು ಮರಣ ದಂಡನೆ ವಿಧಿಸುವ ಸಂದರ್ಭವೂ ಒದಗಿಬರುವುದಿಲ್ಲ. ಪರಿಸರ ಮಾಲಿನ್ಯವಿಲ್ಲ; ಜಾಗತಿಕ ತಾಪಮಾನ ಏರಿಕೆಯ ಭಯವಿಲ್ಲ;

ಜಾತಿ-ಧರ್ಮಗಳ ಒಳಜಗಳವಿಲ್ಲ. ದೇಶಭಕ್ತಿ ತೋರಿ ಸಬೇಕಿಲ್ಲ. ಮಾರಾಟ ಮಾಡಿ ಲಾಭ ದೋಚುವ ದರ್ದಿಲ್ಲ; ಕೊಳ್ಳುಬಾಕತನ ಮೊದಲೇ ಇಲ್ಲ. ಅಂದಂದಿನ ಅಗತ್ಯವನ್ನು ಪೂರೈಸಿಕೊಂಡು ಸರಳವಾಗಿ ಬಾಳುತ್ತವೆ.

ಆದರೆ ತಮ್ಮದಲ್ಲದ ತಪ್ಪಿಗೆ ಮಾನವರ ದುರಾಸೆ ಮತ್ತು ಒತ್ತುವರಿತನದಿಂದ ವಿನಾಶದ ಭೀತಿಯಲ್ಲಿ ದಿನದೂಡುವ ಆತಂಕ ಜೀವಸಂಕುಲಕ್ಕೆ ಎದುರಾಗಿದೆ. ಜೀವಸಂಕುಲಕ್ಕೆ ಭಯೋತ್ಪದಕರಂತೆ ಕಾಣದೆ, ಮಾನವ ಕೇಂದ್ರಿತ ನೆಲೆಯ ಬದಲು ಜೀವಕೇಂದ್ರಿತ ನೆಲೆಯಲ್ಲಿ ಬಾಳುವ ಬಗೆಯೇ ಇಂದಿನ ಮಾನವರು ಸಿದ್ದಿಸಿಕೊಳ್ಳಬೇಕಾದ ನಿಜವಾದ ಬದುಕುವ ಕಲೆ. ಕೆಲವರ ಸ್ವಾರ್ಥಕ್ಕೆ ಬಹುಸಂಖ್ಯಾತರು ದಂಡ ತೆರಬೇಕಾದ ಇಂದಿನ ದಿನಮಾನದಲ್ಲಿ ನಿಸ್ವಾರ್ಥಿಗಳಾಗಿ ಬಾಳಿ ಎಲ್ಲರೂ ಬಾಳುವ ಬದುಕುವ ಕಲೆಯನ್ನು ತಮ್ಮ ಪ್ರಾಮಾಣಿಕ ಪ್ರಯತ್ನದಿಂದ ಕಲಿತುಕೊಳ್ಳಬೇಕಿದೆ.

ಶ್ರಮ ವಿಭಜನೆಯ ಹೆಸರಲ್ಲಿ ಒಬ್ಬರು ಇನ್ನೊಬ್ಬರ ನೆತ್ತರು ಕುಡಿವ ಕಲೆಯನ್ನು ರೂಪಿಸಿಕೊಳ್ಳಲಾಗಿದೆ. ಅರಸ ಆಳಿನದು, ಮಾಲೀಕ ಕಾರ್ಮಿಕನದು, ಗಂಡ ಹೆಂಡತಿಯದು, ದನಿಕರು ದಮನಿತರದು, ಸೃಶ್ಯರು ಅಸ್ಪಶ್ಯರದು; ಹೀಗೆ ನಾನಾ ಬಗೆಯಲ್ಲಿ ಒಬ್ಬರು ಇನ್ನೊಬ್ಬರನ್ನು ಹೀರುತ್ತಾರೆ.

ಆದರೆ ನಿಸ್ವಾರ್ಥದಿಂದ ಮತ್ತು ನಿಸರ್ಗ ಸಹಜ ವಿವೇಕದಿಂದ ಬದುಕುವ ಕಲೆಯನ್ನು ಮಾನವರ ಸಮಾಜ ಶ್ರಮವಿಭಜನೆಯ ಹೆಸರಲ್ಲಿ ಕಳೆದುಕೊಂಡುಬಿಟ್ಟಿದೆ. ಶ್ರಮ ವಿಭಜನೆಯ ಹೆಸರಲ್ಲಿ ಒಬ್ಬರು ಇನ್ನೊಬ್ಬರ ನೆತ್ತರು ಕುಡಿವ ಕಲೆಯನ್ನು ರೂಪಿಸಿಕೊಳ್ಳಲಾಗಿದೆ. ಅರಸ ಆಳಿನದು, ಮಾಲೀಕ ಕಾರ್ಮಿಕನದು, ಗಂಡ ಹೆಂಡತಿಯದು, ದನಿಕರು ದಮನಿತರದು, ಸೃಶ್ಯರು ಅಸ್ಪಶ್ಯರದು; ಹೀಗೆ ನಾನಾ ಬಗೆಯಲ್ಲಿ ಒಬ್ಬರು ಇನ್ನೊಬ್ಬರನ್ನು ಹೀರುತ್ತಾರೆ. ಸೇವೆ ಮಾಡಿಸಿಕೊಂಡು ತುಳಿಯುತ್ತಾರೆ. ಇದನ್ನು ಒಂದು ನಾಗರಿಕ ವ್ಯವಸ್ಥೆ ಎಂಬ ಹೆಸರಿನಲ್ಲಿ ನಿರಂತರವಾಗಿ ಉಳಿಸಿಕೊಂಡು ಹೋಗಲು ಪ್ರಯತ್ನಿಸಲಾಗುತ್ತದೆ. ಇದನ್ನು ಮುರಿದು ಹೊಸದು ಕಟ್ಟಿಕೊಳ್ಳುವ ಪ್ರಯತ್ನಗಳು ‘ಸಂಸ್ಕೃತಿ’, ‘ಸಂಪ್ರದಾಯ’ ಇಲ್ಲವೇ ಧರ್ಮ ಭಂಜನೆಯಂತಹ ಕೃತ್ಯಗಳಾಗಿ ಕಾಣುತ್ತವೆ. ಬದಲಾವಣೆಗೆ ತುಡಿದವರ ತಲೆ ಕಡಿವ ಕೆಲಸವನ್ನು ಮಾಡಲಾಗುತ್ತದೆ.

ಕೆಲವರ ಸ್ವಾರ್ಥಕ್ಕಾಗಿ ಬದುಕನ್ನು ಹಾಳುಗೆಡವಿದ ಕಾರಣಕ್ಕಾಗಿಯೇ ಇಂದಿನ ದೈನಂದಿನ ಬದುಕು ಬೇರೆ ಜೀವಿಗಳಿಗಿಂತಲೂ ಹೆಚ್ಚು ಹಿಂಸಾಮಯವಾಗಿದೆ. ಹೆಚ್ಚು ಸಂಘರ್ಶದಿಂದ ಕೂಡಿದೆ. ಸಾಮೂಹಿಕ ಮತ್ತು ಸೌಹಾರ್ದದ ಬದುಕು ಚಿದ್ರಗೊಂಡಿದೆ. ಯುದ್ಧವೆಂಬ ಭೀಕರ ಹಿಂಸಾಕಾಂಡವನ್ನು ಮಾನವರು ಬಿಟ್ಟರೆ ಬೇರೆ ಯಾವ ಜೀವಿಯೂ ರೂಪಿಸಿಲ್ಲ. ಅಶ್ಟೆಲ್ಲಾ ಹಿಂಸೆ ಮಾಡಿಯೂ ಮಾನವರು ನಾಗರಿಕರು! ಸುಸಂಸ್ಕೃತರು!! ಒಂದೆಡೆ ನಿರಂತರ ಹಿಂಸೆಯನ್ನು ವ್ಯವಸ್ಥಿತವಾಗಿ ಸೃಶ್ಟಿಸಿ ಮತ್ತೊಂದೆಡೆ ಅಹಿಂಸೆಯ ಮಂತ್ರ ಪಠಿಸಿದರೆ ಏನು ಪ್ರಯೋಜನ? ಹಿಂಸಾವಾದಿಗಳು ಮತ್ತು ಅಹಿಂಸಾವಾದಿಗಳ ನಡುವೆಯೇ ನಿತ್ಯ ಕದನ ನಡೆಯುತ್ತಿದೆ.

ಇಂದಿನ ಮಾನವರಿಗೆ ‘ಸ್ವರ್ಗಗಳು’ ಸೇರಿದಂತೆ ಎಲ್ಲ ಬಗೆಯ ಸರಕುಗಳು ದೊರೆಯುತ್ತವೆ. ವಿವಿಧ ಗ್ರಹಗಳು ದೊರೆಯುತ್ತಿವೆ! ಸಹಜ ಮಾನವರ ಕಿರಿಕರಿ ಬೇಡವೆನ್ನಿಸಿದರೆ ಯಂತ್ರ ಮಾನವರನ್ನು ಮದುವೆಯಾಗಿ ಜೀವಿಸಬಹುದು. ಜೀತದಾಳನ್ನು ಮಾಡಿಕೊಳ್ಳಬಹುದು. ಸೈನಿಕರನ್ನಾಗಿಸಿಕೊಳ್ಳಬಹುದು. ಮನೆಗೆಲಸದವರನ್ನು ಆಗಿಸಿಕೊಳ್ಳಬಹುದು. ಆದರೆ ಒಂದನ್ನು ಬಿಟ್ಟು; ಅದು ಸಹಜ ಬದುಕು ಮತ್ತು ನೆಮ್ಮದಿ. ಎಷ್ಟೇ ಹಣವನ್ನು ಕೊಟ್ಟರು ಬಾಳಿನ ನೆಮ್ಮದಿಯನ್ನು ಯಾವುದೇ ಫಳಫಳ ಹೊಳೆವ ಮಳಿಗೆಗಳಿಂದ, ದೇಶೀ, ವಿದೇಶಿ ಕಂಪನಿಗಳಿಂದ ತಯಾರಿಸಿ ಖರೀದಿಸಿ ತರಲು ಸಾಧ್ಯವಿಲ್ಲ. ಅವುಗಳಿಗೆ ಸರಕನ್ನಲ್ಲದೆ ನೆಮ್ಮದಿಯನ್ನು ಸಂತೋಶವನ್ನು ತಯಾರಿಸಲು ಸಾಧ್ಯವೇ ಇಲ್ಲ. ಸಂತೋಶ ಮತ್ತು ನೆಮ್ಮದಿ ಎನ್ನುವುದು ಒಂದು ಮನಸ್ಥಿತಿ. ಅದು ಸರಕಲ್ಲ.

ಎಲ್ಲಕ್ಕೂ ರೂಢಿಯೇ ಮೈಲಿಗಲ್ಲು! ಅದಕ್ಕಾಗಿಯೇ ಜೀವನ ನರಕವೆನ್ನಿಸುತ್ತದೆ. ಅದು ನಿಜಕ್ಕೂ ನರಕವಲ್ಲ; ಅದನ್ನು ನರಕವಾಗಿಸಲಾಗಿದೆ. ನಿಸರ್ಗ ಸಹಜವಾದ ಬದುಕನ್ನು ಕೆಲವರ ಸ್ವಾರ್ಥದ ಕೃತಕ ನೀತಿಗಳಿಂದ, ಆಸೆ ಆಮಿಶಗಳಿಂದ ನರಕವಾಗಿಸಲಾಗಿದೆ.

ನಾವು ಬದುಕನ್ನು ಹೇಗೆ ವಿವರಿಸಿ ಕೊಳ್ಳುತ್ತೇವೆಯೋ ಹಾಗೆ ಬದುಕಿನಲ್ಲಿ ನೆಮ್ಮದಿ ಕಾಣಿಸುತ್ತದೆ. ನಾವು ಬದುಕನ್ನು ವಿವರಿಸಿ ಕೊಳ್ಳುವ ಬಗೆಯಲ್ಲಿ, ಕಲ್ಪನೆಯಲ್ಲಿಯೇ ದೋಶವಿದ್ದರೆ ಸಂತಸದ ಬದುಕು ನಡೆಸುವುದು ಹೇಗೆ ಸಾಧ್ಯ? ನಮಗೆ ನಮ್ಮ ಬದುಕನ್ನು ಹೇಗೆ ಬದುಕಬೇಕೆಂಬುದೇ ತಿಳಿದಿಲ್ಲ. ಅನ್ಯರು ವಿವರಿಸಿಕೊಟ್ಟಂತೆ ನಾವು ಬದುಕುವುದೇ ಹೆಚ್ಚು. ತಾವು ಹೇಗೆ ಬದುಕುತ್ತಿದ್ದೇವೆ? ಹೇಗೆ ಬದುಕಬೇಕಿದೆ? ಎಂಬುದರ ಬಗೆಗೆ ಎಚ್ಚರವೇ ಇರುವುದಿಲ್ಲ. ಎಲ್ಲಕ್ಕೂ ರೂಢಿಯೇ ಮೈಲಿಗಲ್ಲು! ಅದಕ್ಕಾಗಿಯೇ ಜೀವನ ನರಕವೆನ್ನಿಸುತ್ತದೆ. ಅದು ನಿಜಕ್ಕೂ ನರಕವಲ್ಲ; ಅದನ್ನು ನರಕವಾಗಿಸಲಾಗಿದೆ. ನಿಸರ್ಗ ಸಹಜವಾದ ಬದುಕನ್ನು ಕೆಲವರ ಸ್ವಾರ್ಥದ ಕೃತಕ ನೀತಿಗಳಿಂದ, ಆಸೆ ಆಮಿಶಗಳಿಂದ ನರಕವಾಗಿಸಲಾಗಿದೆ. ಇಂದು ಎಲ್ಲ ಸ್ವತಂತ್ರದಂತೆ ಮುಕ್ತವಾಗಿರುವಂತೆ ಕಂಡರೂ ಎಲ್ಲವೂ ನಿರ್ಬಂಧಿತ. ಜೇಡರ ಹುಳು ಬೇಟೆಯನ್ನು ಬಲೆಯೊಳಗೆ ಸಿಕ್ಕಿಸಿಕೊಂಡು ಕೊಂಚ ಕೊಂಚವೇ ಕಿತ್ತುಕಿತ್ತು ತಿನ್ನುವಂತೆ ದಿನವೂ ತಿನ್ನುವುದರಿಂದ ಜನರ ಬದುಕು ನರಕವಾಗಿದೆ. ಉಳ್ಳವರ ಸ್ವಾರ್ಥದ ನಿರ್ಬಂಧಗಳು ಜನಸಾಮಾನ್ಯರ ಬದುಕನ್ನು ಜೇಡನಂತೆ ಕಿತ್ತು ತಿನ್ನುತ್ತವೆ.

ಉದಾಹರಣೆಗೆ, ಇಂದು ಸರಕುಗಳನ್ನು ಸ್ವಾಧೀನಪಡಿಸಿಕೊಂಡು ಅನುಭೋಗಿಸುವುದರಿಂದ ಸುಖ-ಶಾಂತಿ ನೆಮ್ಮದಿಗಳು ಪ್ರಾಪ್ತವಾಗಿಬಿಡುತ್ತವೆ, ಇವೇ ಸುಖದ ಮೂಲವೆಂದು ನಂಬಿಸಲಾಗಿದೆ. ಹಾಗೆ ನಂಬಿಸಲೆಂದೇ ಮಾಧ್ಯಮಗಳು ಹಗಲಿರುಳು ದುಡಿಯುತ್ತಿವೆ. ನಿಜಕ್ಕೂ ಸರಕು ಅನುಭೋಗದಿಂದ ನೆಮ್ಮದಿ ದೊರೆಯುತ್ತದೆಯೇ? ‘ದೊರೆಯುತ್ತದೆ’ ಎಂಬ ಭ್ರಮೆ ಹುಟ್ಟಿಸಿದ ಕಾರಣಕ್ಕೆ ದಿನವೂ ಮಾರುಕಟ್ಟೆಗೆ ಪ್ರವೇಶಿಸುವ ಹೊಸ ಹೊಸ ಸರಕುಗಳನ್ನು ಖರೀದಿಸಲು ಜನರು ಮುಂದಾಗುತ್ತಾರೆ. ಹಣ ಇದ್ದವರು ತಾವು ದುಡಿದ ಹಣವನ್ನೆಲ್ಲ ಸುರಿದು ಖರೀದಿಸುತ್ತಾರೆ. ಹಣ ಇಲ್ಲದವರು ಅವರನ್ನು ನೋಡಿ ಕೊರಗುತ್ತಾರೆ. ಕೀಳರಿಮೆ ಅನುಭವಿಸುತ್ತಾರೆ. ಉಳ್ಳವರು ಇಲ್ಲದವರ ನಡುವೆ ನೋಡ ನೋಡುತ್ತಲೇ ಅಂತರ ಬೆಳೆದುಬಿಟ್ಟಿರುತ್ತದೆ. ಇನ್ನು ಕೆಲವರು ಸಾಲ ಮಾಡುತ್ತಾರೆ. ಅದಕ್ಕೆ ಬಡ್ಡಿ ಕಟ್ಟುತ್ತಾರೆ. ಅದು ಎಂದಿಗೂ ತೀರದಾದಾಗ ದುಃಖಿಸುತ್ತಾರೆ. ನೆರಮನೆಯವರಿಗೆ ಹೋಲಿಕೆ ಮಾಡಿಕೊಂಡು ಮತ್ತೂ ಕೊರಗುತ್ತಾರೆ. ಅದು ಎಸ್ಟೋ ಜನ ರಿಗೆ ಸಾವಿನ ಮನೆ ತೋರಿಸಿದ್ದೂ ಇದೆ. ಸಾಯುವ ಮೊದಲೇ ಅದಕ್ಕಿಂತ ಹೆಚ್ಚು ದುಃಖ ಅನುಭವಿಸಿದ್ದೂ ಇದೆ. ಇದಾವುದನ್ನೂ ಮುಖ್ಯವಾಹಿನಿಯ ಯಾವ ಮಾಧ್ಯಮಗಳು ತಿಳಿಸಿಕೊಡುವುದಿಲ್ಲ. ಇದರ ಬಗೆಗೆ ಜಾಗೃತಿ ಮೂಡಿಸಿಲ್ಲ.

ಮನುಶ್ಯರು ಮನುಶ್ಯರನ್ನು ವಂಚಿಸಿ ಬದುಕುವ ಜಾಲದ ಆಟವಿದು. ಆದರೆ ಇದು ಜನಸಾಮಾನ್ಯರಿಗೆ ಗೋಚರಿಸುವುದೇ ಇಲ್ಲ. ತಮ್ಮ ಬದುಕಿಗೆ ಯಾರೋ ತೋಡಿದ ಹಳ್ಳದಲ್ಲಿ ಬಿದ್ದು ನರಳುತ್ತಾರೆ. ಇದರಿಂದ ಹೊರಗೆ ಬರುವ ನಿರಂತರ ಗುದ್ದಾಟದಲ್ಲಿಯೇ ಜನರ ಬದುಕು ಮುಗಿದುಹೋಗಿರುತ್ತದೆ. ಅಂದರೆ ನಮ್ಮ ಆಯ್ಕೆಯಲ್ಲದ ಇನ್ನಾರೋ ರೂಪಿಸಿಕೊಟ್ಟ ಜೀವನದ ಮಾದರಿಗೆ ಮರುಳಾಗಿ ಅದರಲ್ಲಿ ಸಿಕ್ಕಿಕೊಂಡು ಬದುಕನ್ನು ನರಕವಾಗಿಸುತ್ತಿರುವುದೇ ಹೆಚ್ಚು.

ಇದು ಕಳ್ಳರಕೂಟ. ಇಲ್ಲಿ ಪ್ರಜ್ಞಾಪೂರ್ವಕವಾಗಿ ಒಬ್ಬ ಮನುಶ್ಯ ಇನ್ನೊಬ್ಬ ಮನುಶ್ಯನನ್ನು ವಂಚಿಸುವ ಬಲಿಗೊಡುವ ಬಗೆ ಯೋಜಿತವಾಗಿ ನಡೆಯುತ್ತದೆ. ಇದು ಬೇರೆ ಪ್ರಾಣಿಗಳಿಗಿಂತ ಮಾನವರು ಮಾನವರ ಮೇಲೆ ನಡೆಸುವ ಈ ಹಿಂಸೆ ಅತ್ಯಂತ ಹೆಚ್ಚು ಕ್ರೂರವಾದುದು. ಇಂತಹ ಹಿಂಸೆಯಿಂದ ಮಾನವರ ಬಾಳಿಗೆ ಬಿಡುಗಡೆ ಬೇಕಿದೆ. ಅವರ ಬದುಕಿಗೆ ನೆಮ್ಮದಿ ಬೇಕಿದೆ.

ಇಂತಹ ವಂಚನೆ ಬೇರೆ ಯಾವುದೇ ‘ಅನಾಗರಿಕ’ ಪ್ರಾಣಿ ಜಗತ್ತಿನಲ್ಲಿ ನಡೆಯುವುದಿಲ್ಲ. ಅನಾಗರಿಕ ಜೀವಜಾಲಕ್ಕೆ ಯಾವುದೇ ಲಾಭದ ಅಗತ್ಯವಿಲ್ಲ. ಬೇರೆಯವರನ್ನು ದುಡಿಸಿ ತಾವು ಸುಖವಾಗಿರಬೇಕಿಲ್ಲ. ತಮ್ಮ ಬದುಕು ತಮ್ಮದೇ ಶ್ರಮದ ಮೇಲೆ ಅವಲಂಬಿಸಿರುತ್ತದೆ. ಆದರೆ ಜನರನ್ನು ನಂಬಿಸುವ ಈ ಉದ್ಯಮದಲ್ಲಿ ತೊಡಗಿರುವ ಎಲ್ಲರಿಗೂ ಲಾಭವಿದೆ. ಇವರ ಸ್ವಾರ್ಥಕ್ಕೆ, ಲಾಭದ ಏರಿಕೆಗೆ ಅಮಾಯಕರನ್ನು ವಂಚಿಸುವ ಬಲಿಗೊಡುವ ಜಾಲದಲ್ಲಿ ಕೆಲವರು ಗೊತ್ತಿದ್ದೂ ಸೇರಿಕೊಳ್ಳುತ್ತಾರೆ. ಹಾಗಾಗಿ ಇದು ಕಳ್ಳರಕೂಟ. ಇಲ್ಲಿ ಪ್ರಜ್ಞಾಪೂರ್ವಕವಾಗಿ ಒಬ್ಬ ಮನುಶ್ಯ ಇನ್ನೊಬ್ಬ ಮನುಶ್ಯನನ್ನು ವಂಚಿಸುವ ಬಲಿಗೊಡುವ ಬಗೆ ಯೋಜಿತವಾಗಿ ನಡೆಯುತ್ತದೆ. ಇದು ಬೇರೆ ಪ್ರಾಣಿಗಳಿಗಿಂತ ಮಾನವರು ಮಾನವರ ಮೇಲೆ ನಡೆಸುವ ಈ ಹಿಂಸೆ ಅತ್ಯಂತ ಹೆಚ್ಚು ಕ್ರೂರವಾದುದು. ಇಂತಹ ಹಿಂಸೆಯಿಂದ ಮಾನವರ ಬಾಳಿಗೆ ಬಿಡುಗಡೆ ಬೇಕಿದೆ. ಅವರ ಬದುಕಿಗೆ ನೆಮ್ಮದಿ ಬೇಕಿದೆ.

ಆದರೆ ಸ್ವಾರ್ಥಿಗಳು ಕಟ್ಟಿಕೊಟ್ಟ ಪೊಳ್ಳು ಜೀವನದ ಮಾದರಿಯನ್ನು ನಂಬಿದವರು ಅದನ್ನು ನಡೆಸಲು ನಿರಂತರವಾಗಿ ಪರದಾಡುವುದನ್ನು ನೋಡಬಹುದು. ಸದಾ ಸಂಕಟದಲ್ಲಿ, ಅತೃಪ್ತಿಯಲ್ಲಿ ಮುಳುಗೇಳುತ್ತಿರುವುದನ್ನು ನೋಡಬಹುದು. ಸಮಸ್ಯೆಗಳ ಸುಳಿಯಲ್ಲಿ ಸಿಕ್ಕಿ ನರಳುವುದನ್ನು ಕಾಣಬಹುದು. ಇದಕ್ಕೆ ಸಾವೇ ಪರಿಹಾರ ಎಂದು ಜನರು ತಮ್ಮ ತಮ್ಮಲ್ಲಿ ಮಾತನಾಡಿಕೊಳ್ಳುವುದನ್ನು ಕೇಳಿರುವುದುಂಟು. ಇಂತಹ ಹಿಂಸೆ ನೋವು ನರಳಿಕೆ ಕಷ್ಟಗಳು ಯಾವುದೋ ಪೂರ್ವಜನ್ಮದ ತಪ್ಪಿನ ಫಲ ಎಂಬಂತೆಯೂ ನಂಬಿಸಲಾಗಿದೆ. ಕರ್ಮಸಿದ್ಧಾಂತ ನಮ್ಮ ದೇಶದ ಜನರ ಮನಸ್ಸನ್ನು ಆಳುತ್ತಿದೆ. ಇದಕ್ಕೆ ಅವತಾರ ಪುರುಶರ ಮಠಮಾನ್ಯಗಳ ಬೆಂಬಲವೂ ಮಾನ್ಯತೆಯೂ ಇದೆ. ಸಾಲದೆಂಬಂತೆ, ದೇವರೇ ಪೂರ್ವಜನ್ಮದ ತಪ್ಪಿಗೆ ಇಂತಹ ಶಿಕ್ಷೆ ನೀಡುತ್ತಿದ್ದಾನೆ ಎಂಬ ಸಮರ್ಥನೆಯ ಮಾತುಗಳು ಬೇರೆ. ಇದರ ಪರಿಹಾರಕ್ಕಾಗಿ ಕಂಡ ಕಂಡ ದೇವಾಲಯಗಳಿಗೆ ತೀರ್ಥಯಾತ್ರೆ! ಕಾಣಿಕೆ ಸೇವೆ. ಇದಕ್ಕೆ ಮತ್ತಷ್ಟು ಸಾಲ; ಮತ್ತಷ್ಟು ಸಂಕಟ.

ಹೀಗೆ ನಿರಂತರವಾಗಿ ಮಾನರ ಬದುಕು ದುಃಖದ ಮಡುವಿನಲ್ಲಿಯೇ ಅದ್ದಿ ತೆಗೆದಂತಿದೆ. ಇಂತಹ ಹಿಂಸಾತ್ಮಕ ಮತ್ತು ಹಳಿ ತಪ್ಪಿದ ಬದುಕನ್ನು ಕಂಡ ದಾರ್ಶನಿಕರು ಅದನ್ನು ಸರಿ ದಾರಿಗೆ ತರಲು ಸೂಕ್ತ ಮಾರ್ಗದರ್ಶನವನ್ನೂ ನೀಡಿದ್ದಾರೆ. ಅವರ ಚಿಂತನೆಗಳು ಬೆಳಕಿನಂತೆ ಇವೆ. ಅದೇ ದೊಡ್ಡ ಪರಂಪರೆಯಾಗಿ ನಮ್ಮ ನೆಲದಲ್ಲಿ ಇಂದಿಗೂ ಉಳಿದು ಬೆಳೆದು ಬಂದಿದೆ. ಬುದ್ಧ ಬೆಳಕಾಗಿದ್ದಾನೆ. ಬಸವ ಜ್ಯೋತಿಯಾಗಿದ್ದಾನೆ. ಅಲ್ಲಮ ಗುರುವಾಗಿದ್ದಾನೆ. ಹೀಗೆ ಇನ್ನೆಷ್ಟೋ ಜನರು ನಮ್ಮ ದಾರಿಗಿದ್ದಾರೆ. ಆದರೆ ಬೆಳಕಿನ ನೆರಳಿನಲ್ಲಿ ನಡೆವ ಕೌಶಲವನ್ನು ಬೆಳೆಸಿಕೊಳ್ಳಬೇಕಶ್ಟೇ.

ಇಂದಿನ ಜನರು ಅದರಿಂದ ತಮ್ಮ ತಮ್ಮ ಬೆಳಕಿನ ದೊಂದಿಗಳನ್ನು ಹೊತ್ತಿಸಿಕೊಳ್ಳುವ ಬದಲು ತಮಂಧದಿಂದ ತಮಂಧದತ್ತ ಸಾಗುವ ಕೆಲಸವನ್ನೇ ಮಾಡುತ್ತಿದ್ದಾರೆ. ಇದೇ ಬದುಕನ್ನು ನರಕವಾಗಿಸಿರುವುದು. ‘ಅಲ್ಲಿದೆ ನಮ್ಮನೆ ಇಲ್ಲಿ ಬಂದೇ ಸುಮ್ಮನೆ’ ಎಂಬ ದಾಸವಾಣಿಯಿದ್ದರೂ ಜೀವಿಗಳಿಗೆ ಇರುವುದು ಒಂದೇ ಮನೆ. ಅದು ಭೂಮಿ. ಅವರಿಗೆ, ಅವಕ್ಕೆ ಈ ಭೂಮಿಯೇ ಸ್ವರ್ಗ, ಈ ಭೂಮಿಯೇ ನರಕ. ಶರಣವಾಣಿ ಹೇಳಿದಂತೆ, ‘ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟ ಶಾಲೆ’. ಎಲ್ಲ ಜೀವಿಗಳಿಗೆ ಏನೇ ಆಗುವುದಿದ್ದರೂ ಅದು ಈ ಕಮ್ಮಟ ಶಾಲೆಯಲ್ಲಿಯೇ ಆಗಬೇಕು. ಇದರಾಚೆಗೆ ಯೋಚಿಸುವುದೆಲ್ಲವೂ ಕಲ್ಪನೆ. ಕೆಲವೊಮ್ಮೆ ಭ್ರಮೆ. ಮತ್ತೆ ಕೆಲವೊಮ್ಮೆ ಆದರ್ಶ.

‘ನಿನ್ನನ್ನು ನೀ ತಿಳಿಕೋ’ ಎಂಬ ನೆಲೆಗೆ ಎಲ್ಲರೂ ಬಂದು ಮುಟ್ಟಿದ್ದಾರೆ. ದೇಹವೇ ದೇಗುಲವಾಗಿದೆ. ಕಾಯಕವೇ ಕೈಲಾಸವಾಗಿದೆ. ಇದನ್ನು ಅರಿಯುವ ಇಚ್ಚೆಯಿಲ್ಲದೆ ಎಲ್ಲ ಹೊಲಸು ಮನದ ಹೊಸ್ತಿಲನ್ನು ದಾಟಿ ಒಳಹೊಕ್ಕು ನಡುಮನೆಯಲ್ಲಿ ವಿರಾಜಮಾನಿಸಿದೆ. ಅಲ್ಲಿಂದ ಆ ಹೊಲಸನ್ನು ತೆಗೆಯದ ಹೊರತು ಯಾರ ಬಾಳು ಹಸನಾಗುವುದಿಲ್ಲ. ಯಾರಿಗೂ ನೆಮ್ಮದಿಯಿಲ್ಲ.

‘ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ’ ಎಂಬ ಕವಿವಾಣಿಯಂತೆ ನಿರಂತರವಾಗಿ ಇನ್ನೊಂದು ಲೋಕದ ಬಗೆಗೆ ಯೋಚಿಸುವುದು ಮಾನವರ ಬೌದ್ಧಿಕ ಸಾಮರ್ಥ್ಯದ ದ್ಯೋತಕ. ನಿರಂತರ ಅನ್ವೇಶಣೆ ನಡದೇ ಇರುತ್ತದೆ. ಇದು ನಡೆಯುತ್ತಲೇ ಇರಬೇಕು. ಅದು ನಿಜದ ಸತ್ಯದ ನೆಲೆಯಲ್ಲಿಯೇ ಹೊರತು ಮೂಢನಂಬಿಕೆ ಮತ್ತು ಜನರನ್ನು ಬಲವಂತವಾಗಿ ನಂಬಿಸುವ ಮತ್ತು ಅದನ್ನು ಹೇರುವ ಮೂಲಕವಲ್ಲ. ಅಂತಹ ಅನ್ವೇಶಣೆಯಲ್ಲಿ ತೊಡಗಿದವರು ನಮ್ಮ ನೆಲದ ತತ್ವಪದಕಾರರು. ಅವರು ಪರದ ಬಗೆಗೆ ತಮ್ಮ ಯಾನ ಆರಂಭಿಸಿದರೂ ಕೊನೆಗೆ ಬಂದು ಮುಟ್ಟಿದ್ದು ಈ ನೆಲಮನೆಗೆಯೇ. ‘ನಿನ್ನನ್ನು ನೀ ತಿಳಿಕೋ’ ಎಂಬ ನೆಲೆಗೆ ಎಲ್ಲರೂ ಬಂದು ಮುಟ್ಟಿದ್ದಾರೆ. ದೇಹವೇ ದೇಗುಲವಾಗಿದೆ. ಕಾಯಕವೇ ಕೈಲಾಸವಾಗಿದೆ. ಇದನ್ನು ಅರಿಯುವ ಇಚ್ಚೆಯಿಲ್ಲದೆ ಎಲ್ಲ ಹೊಲಸು ಮನದ ಹೊಸ್ತಿಲನ್ನು ದಾಟಿ ಒಳಹೊಕ್ಕು ನಡುಮನೆಯಲ್ಲಿ ವಿರಾಜಮಾನಿಸಿದೆ. ಅಲ್ಲಿಂದ ಆ ಹೊಲಸನ್ನು ತೆಗೆಯದ ಹೊರತು ಯಾರ ಬಾಳು ಹಸನಾಗುವುದಿಲ್ಲ. ಯಾರಿಗೂ ನೆಮ್ಮದಿಯಿಲ್ಲ. ಅದನ್ನು ತೆಗೆಯುವುದೇ ಬದುಕುವ ಕಲೆ. ಆ ಕಲೆಯನ್ನು ಸಿದ್ದಿಸಿಕೊಂಡರು ನಿಜಕ್ಕೂ ಸುಖಿಗಳಾಗಿ ಬಾಳುವೆಯನ್ನು ನಡೆಸುತ್ತಾರೆ.

ಕೊನೆಗೊಂದು ಮಾತು: ಮಾನವರು ಸಂಘ ಜೀವಿಗಳು ಎನ್ನಲಾಗುತ್ತದೆ. ಎಲ್ಲ ಜೀವಿಗಳು ಸಂಘ ಜೀವಿಗಳೇ ಹೌದು. ಸಂಘವಿಲ್ಲದೆ ಸಂಘರ್ಶವಿಲ್ಲ, ಈ ಭೂಮಂಡಲದಲ್ಲಿ ಯಾವ ಜೀವಿಯೂ ಜೀವಿಸುತ್ತಿಲ್ಲ. ನಿರಂತರ ಸಂಘ ಮತ್ತು ಸಂಘರ್ಶದಿಂದ ಜೀವಜಗತ್ತು ಬದುಕುತ್ತಿದೆ. ಆದರೆ ಮಾನವರು ಮಾತ್ರ ಸಂಘಟನೆಗೊಳ್ಳುವ ಹಂತದಲ್ಲಿ ಬದುಕನ್ನು ಕೆಡಿಸಿಕೊಂಡಿದ್ದಾರೆ. ಪ್ರಾಣಿಗಳು ತಾವು ವಾಸಿಸುವ ಜಾಗದಲ್ಲಿ ಹಿಕ್ಕೆಪಿಕ್ಕೆಗಳನ್ನು ಹಾಕಿ ಹೊಲಸು ಮಾಡಿರಬಹುದು; ಅವುಗಳ ಬದುಕನ್ನಲ್ಲ. ಮಾನವರು ವಾಸಿಸುವ ಜಾಗವನ್ನು ಶುಚಿಯಾಗಿಟ್ಟಿರಬಹುದು; ಆದರೆ ತಮ್ಮ ವೈಯಕ್ತಿಕ ಮತ್ತು ಸಾಮಾಜಿಕ ಬದುಕನ್ನು ಶುಚಿಯಾಗಿಟ್ಟುಕೊಂಡಿಲ್ಲ.

ಜಾತಿ, ಧರ್ಮ, ವರ್ಗ, ಹೆಣ್ಣು ಗಂಡುಗಳ ನಡುವಿನ ಲಿಂಗತಾರತಮ್ಯ, ಬಡವ ಶ್ರೀಮಂತರ ನಡುವಿನ ವರ್ಗ ತಾರತಮ್ಯ, ಸ್ಪರ್ಶ ಅಸ್ಪಶ್ಯ ಅನೇಕ ತಾರತಮ್ಯಗಳಿವೆ. ಅಲ್ಲದೆ ಕುಟುಂಬದಲ್ಲಿ ಮತ್ತು ದಾಂಪತ್ಯ ಜೀವನದಲ್ಲಿ ನಾನಾ ಬಗೆಯ ಸಮಸ್ಯೆಗಳನ್ನು ಸೃಶ್ಟಿಸಲಾಗಿದೆ. ಇದು ದಿನನಿತ್ಯದ ಬದುಕನ್ನು ಹಿಂಸಾಮಯವಾಗಿಸಿದೆ. ನಾಗರಿಕತೆಯ ಹೆಸರಿನಲ್ಲಿ ಕಟ್ಟಿರುವ ಸಂಸ್ಥೆಗಳು ನರಕ ಸದೃಶ್ಯ ಕೇಂದ್ರಗಳಾಗಿ ಬದಲಾಗಿರುವುದೇ ಮಾನವರ ದುರಂತ. ನಿರಂತರ ಪರಿಶ್ರಮದ ಮೂಲಕ ಇವುಗಳಿಂದ ಬಿಡುಗಡೆಗೊಳ್ಳದಿದ್ದರೆ ಬದುಕು ನಿಜಕ್ಕೂ ನರಕವಾಗಿಯೇ ಇರುತ್ತದೆ. ಈ ಬಗೆಗೆ ಹೆಚ್ಚು ಯೋಚಿಸಬೇಕಿದೆ. ಅದಿಲ್ಲದೆ ಕೃತಕವಾಗಿ ನಗುವುದು, ಅಳುವುದು, ಯಾರನ್ನೋ ಮೆಚ್ಚಿಸುವುದಕ್ಕೆ ಬದುಕಲು ಹೋಗಿ ಜೀವನವಿಡೀ ನರಳುವುದು ಉತ್ತಮ ಜೀವನವಲ್ಲ.

(ಗಮನಿಸಿ: ಈ ಲೇಖನದಲ್ಲಿ ಶ ಮತ್ತು ಷ ಗಳನ್ನು ಪೂರಕವಾಗಿ ಒಂದಕ್ಕೆ ಮತ್ತೊಂದು ಬದಲಿಯಾಗಿ ಬಳಸಲಾಗಿದೆ; ಇವು ಮುದ್ರಣ ದೋಶಗಳಲ್ಲ. ಬರಹಕ್ಕೆ ಸಂಬಂಧಿಸಿದಂತೆ ಲೇಖಕರಿಗೆ ಬೇರೆಯದೇ ಅಭಿಪ್ರಾಯವಿರುವುದು ಇದಕ್ಕೆ ಕಾರಣ)

*ಲೇಖಕರು ಮೂಲತಃ ದೊಡ್ಡಬಳ್ಳಾಪುರ ತಾಲ್ಲೂಕು ಕಂಟನಕುಂಟೆಯವರು. ನಾಲ್ಕು ಕವನ ಸಂಕಲನಗಳು ಹೊರಬಂದಿವೆ. ಓದಿನ ಜಾಡು, ಸೇನೆಯಿಲ್ಲದ ಕದನ, ಜನರ ವ್ಯಾಕರಣ, ಜನಭಾಶೆ ಮತ್ತು ಪ್ರಭುತ್ವ ಭಾಷೆಗಳ ನಡುವಿನ ಸಂಘರ್ಷ, ಅರಿವಿನ ಅಡಿಗೆ ಪ್ರಕಟಿತ ಲೇಖನಗಳ ಸಂಕಲನಗಳು. ಹೊನ್ನಾವರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಾಯಕ ಕನ್ನಡ ಪ್ರಾಧ್ಯಾಪಕರು.

Leave a Reply

Your email address will not be published.