ಬದುಕು ಕಟ್ಟಿಕೊಂಡ ರೇವತಿ

–  ತಾರಾನಾಥ್ ಮೇಸ್ತ ಶಿರೂರ

ರೇವತಿ ಅಕ್ಕ ಶ್ರೀದುರ್ಗಾ ಹೆಸರಿನಿಂದ ತಯಾರಿಸುವ ರೊಟ್ಟಿ ಉತ್ಪನ್ನವು ಕರಾವಳಿ ಭಾಗದಲ್ಲಿ ರುಚಿಕರ, ಉತ್ತಮ ಗುಣಮಟ್ಟದ ಕಾರಣದಿಂದ ಮನೆಮಾತಾಗಿದೆ.

ಮಹಿಳೆಯೋರ್ವಳು ಮನೆಯಲ್ಲಿಯೇ ಕೋರಿರೊಟ್ಟಿ ತಯಾರಿಸುವ ಕುಟೀರ ಸ್ಥಾಪಿಸಿ, ಸಂಸಾರರಥ ಸಾಗಿಸಲು ಅರ್ಥ ವ್ಯವಸ್ಥೆಯನ್ನು ಗಟ್ಟಿಗೊಳಿಸಿಕೊಂಡು ಸ್ವಾವಲಂಬನೆಯ ಬದುಕು ಸಾಗಿಸುತ್ತ ನಾಗರಿಕ ಸಮಾಜದಲ್ಲಿ ಸ್ಥಿತಿವಂತರಾಗಿ ನೆಲೆಕಂಡಿದ್ದಾರೆ, ಆ ದಿಟ್ಟ ಮಾದರಿ ಮಹಿಳೆಯ ಹೆಸರು ರೇವತಿ ಪೂಜಾರಿ, ಉಡುಪಿ ನಗರದ ಮಠದಬೆಟ್ಟು ವಾರ್ಡಿನಲ್ಲಿ ವಾಸವಾಗಿದ್ದಾರೆ. ಕಳೆದ ಹತ್ತು ವರ್ಷಗಳಿಂದ ರೊಟ್ಟಿ ಗೃಹೋದ್ಯಮ ಸ್ಥಾಪಿಸಿ ಸ್ವಉದ್ಯೋಗದಲ್ಲಿ ಯಶಸ್ಸು ಕಂಡಿದ್ದಾರೆ. ‘ಮಹಿಳೆ ಅಬಲೆ ಅಲ್ಲ, ಸಾಧಿಸುವ ಛಲ ಹೊಂದಿದ್ದರೆ, ಸಬಲೆಯಾಗಬಲ್ಲಳು’ ಎಂದು ನಾಗರಿಕ ಸಮಾಜಕ್ಕೂ ಸಂದೇಶ ರವಾನಿಸಿದ್ದಾರೆ. ನಗರದ ಎಲ್ಲಾ ಅಂಗಡಿಗಳಿಗೂ ರೇವತಿ ಪೂಜಾರಿ ತಯಾರಿಸಿದ ಕೋರಿರೊಟ್ಟಿ ಪಾಕೇಟುಗಳು ವಿತರಣೆಗೊಳ್ಳುತ್ತಿವೆ. ಮದುವೆ, ಸೀಮಂತ, ಬೀಗರ ಔತಣ, ಇನ್ನಿತರ ಸಾವಿರಾರು ಜನರು ಸೇರುವ ಸಭೆಸಮಾರಂಭಗಳಿಗೂ ಇವರು ತಯಾರಿಸಿದ ಕೋರಿರೊಟ್ಟಿ ಪಾಕೇಟುಗಳು ಖರೀದಿಸಲ್ಪಡುತ್ತಿವೆ. ರೇವತಿ ಅಕ್ಕ ಶ್ರೀದುರ್ಗಾ ಹೆಸರಿನಿಂದ ತಯಾರಿಸುವ ರೊಟ್ಟಿ ಉತ್ಪನ್ನವು ಕರಾವಳಿ ಭಾಗದಲ್ಲಿ ರುಚಿಕರ, ಉತ್ತಮ ಗುಣಮಟ್ಟದ ಕಾರಣದಿಂದ ಮನೆಮಾತಾಗಿದೆ.

ಏನಿದು ಕೋರಿರೊಟ್ಟಿ?
‘ಕೋರಿ’ ಅಂದರೆ ತುಳು ಭಾಷೆಯಲ್ಲಿ ಕೋಳಿ ಎಂದರ್ಥ. ಕೋಳಿ ಮಾಂಸದ ಖಾದ್ಯಗಳೊಂದಿಗೆ ಅಕ್ಕಿರೊಟ್ಟಿಯನ್ನು ತಿನ್ನಲು ತುಳುನಾಡಿನಲ್ಲಿ ಬಳಸುತ್ತಾರೆ. ಹಾಗಾಗಿ ಅಕ್ಕಿಯಿಂದ ತಯಾರಾದ ಈ ರೊಟ್ಟಿಗೆ ಕೋರಿರೊಟ್ಟಿ ಎಂದು ತುಳುವರು ಕರೆಯುತ್ತಾರೆ. ಕರಾವಳಿಯ ಕನ್ನಡಿಗರು ‘ಕೋಳಿರೊಟ್ಟಿ’ ಎಂದೂ ಕರೆಯುತ್ತಾರೆ. ಕೋರಿರೊಟ್ಟಿಯು ತುಳುನಾಡಿನ ಜನರ ಬಹಳ ಇಷ್ಟದ ಆಹಾರವಾಗಿದೆ. ಸಮಾರಂಭಗಳ ಊಟದ ಭಕ್ಷ್ಯಗಳಲ್ಲಿ ಕೋರಿರೊಟ್ಟಿ ವಿಶೇಷ ಸ್ಥಾನ ಪಡೆದಿರುತ್ತದೆ. ಕೋರಿರೊಟ್ಟಿ ಸಂಪೂರ್ಣ ಸಸ್ಯ ಆಹಾರವಾಗಿರುತ್ತದೆ. ಅದನ್ನು ತರಕಾರಿ ಆಹಾರ ಪದಾರ್ಥಗಳ ಜೊತೆಗೂ ತಿನ್ನಲು ಬಳಸಬಹುದು. ಆದರೆ ಕೋರಿರೊಟ್ಟಿಯನ್ನು ಹೆಚ್ಚಾಗಿ ಮಾಂಸದ ಖಾದ್ಯಗಳೊಂದಿಗೆ ಬಳಸುತ್ತಾರೆ. ಇದು ತಿನ್ನುವಾಗ ಕುರುಂ ಕುರುಂ ಶಬ್ಧ ಬರುತ್ತದೆ. ರೊಟ್ಟಿ ತಯಾರಿಸಿ ದಾಸ್ತಾನು ಇಟ್ಟರೆ, ಬಹಳ ಸಮಯದವರೆಗೆ ಕೆಡದಂತೆ ಇರುತ್ತದೆ.

ತಯಾರಿಕೆ ಹೀಗೆ ದಿನ ಒಂದಕ್ಕೆ 30 ಕೆ.ಜಿ. ಅಕ್ಕಿಯಿಂದ ರೇವತಿ ಅವರು ರೊಟ್ಟಿ ತಯಾರಿಸುತ್ತಾರೆ. ಉತ್ತಮ ಗುಣಮಟ್ಟದ ಸೋನಾ ಮಸೂರಿ ಅಕ್ಕಿಯನ್ನು ಮುಂಜಾನೆ 5 ಗಂಟೆ ಸುಮಾರಿಗೆ ನೀರಿನಲ್ಲಿ ನೆನೆಸಿ ಹಾಕುತ್ತಾರೆ. ಪ್ರತೇಕ ಪಾತ್ರೆಯಲ್ಲಿ 3 ಕೆ.ಜಿ. ಉದ್ದಿನಬೆಳೆಯನ್ನು ನೀರಿನಲ್ಲಿ ನೆನೆಸಿ ಹಾಕುತ್ತಾರೆ. ಅಕ್ಕಿ, ಉದ್ದಿನ ಬೆಳೆ ಮೃದುಗೊಂಡ ಬಳಿಕ ಚೆನ್ನಾಗಿ ತೊಳೆಯುತ್ತಾರೆ. ರುಬ್ಬುವ ಯಂತ್ರದಲ್ಲಿ ನೆನೆದ 9 ಕೆ.ಜಿ. ಅಕ್ಕಿಯನ್ನು ರುಬ್ಬಲು ಹಾಕುತ್ತಾರೆ. ಒಂದು ಕೆ.ಜಿ. ಅಕ್ಕಿಗೆ ನೂರು ಗ್ರಾಂ ಉದ್ದಿನ ಬೆಳೆ, ಒಂದು ಚಮಚ ಜೀರಿಗೆ, ರುಚಿಗೆ ಬೇಕಾದ ಉಪ್ಪನ್ನು ಸೂತ್ರದ ಪ್ರಮಾಣದಲ್ಲಿ ಹಿಟ್ಟಿನೊಂದಿಗೆ ಕಡೆಯಲು ಹಾಕುತ್ತಾರೆ. ಹಿಟ್ಟು ಸರಿಯಾದ ಹದಕ್ಕೆ ಬರಲು ಒಂದು ಕಾಲು ಗಂಟೆ ಹಿಡಿಯುತ್ತದೆ. ಸೌದೆ ಬೆಂಕಿಯಲ್ಲಿ ಕಾದ 5 ಅಡಿ ಸುತ್ತಳತೆಯ ಕಬ್ಬಿಣದ ದೊಡ್ಡ ಕಾವಲಿಯ ಮೇಲೆ, ಬೇಕಾದ ಪ್ರಮಾಣದಲ್ಲಿ ಲೋಟೆಯಿಂದ ಹಿಟ್ಟು ಸುರಿಯುತ್ತಾರೆ. ಅಂಡಾಕೃತಿಯಲ್ಲಿ ತೆಳು ಪದರದಂತೆ, ಕಾವಲಿಯ ವಿಸ್ತಾರದ ವರೆಗೆ, ಮಸಾಲೆ ದೋಸೆಯಂತೆ ಲೋಟೆ ಬಳಸಿ ಹಿಟ್ಟನ್ನು ತೀಡಬೇಕಾಗುತ್ತದೆ. 5 ನಿಮಿಷದೊಳಗೆ ಮಾರುದ್ದದ ರೊಟ್ಟಿ ತಯಾರಾಗುತ್ತದೆ. ಅದನ್ನು ತುಂಡರಿಸಿ ಆ ಬಳಿಕ 500 ಗ್ರಾಂ ತೂಕದ ರೊಟ್ಟಿ ಪಾಕೇಟುಗಳು ತಯಾರಾಗುತ್ತವೆ.

ರೇವತಿಯರು ಉರುವಲಿಗೆ ತೆಂಗಿನ ಮರದ ಒಣಗಿದ ಗರಿ, ತೆಂಗಿನ ಸಿಪ್ಪೆ, ಕಟ್ಟಿಗೆ, ಕರಟಗಳು ಬಳಸುತ್ತಾರೆ. ಮಳೆಗಾಲದ ಸಮಯಕ್ಕೆ ಬೇಕಾದ ಊರುವಲುಗಳನ್ನು ದಾಸ್ತಾನು ಮಾಡಿಟ್ಟುಕೊಳ್ಳುತ್ತಾರೆ. ಅವರು ಓರ್ವ ಸಹಾಯಕ ಮಹಿಳೆಗೂ ಖಾಯಂ ಉದ್ಯೋಗವನ್ನು ನೀಡಿದ್ದಾರೆ. ಪತಿ ಸಂಜೀವ ಪೂಜಾರಿ ಅವರು ಪತ್ನಿ ತಯಾರಿಸಿದ ರೊಟ್ಟಿ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ವಿತರಿಸುತ್ತಾರೆ. ದೊಡ್ಡ ಸಮಾರಂಭಗಳಿಗಾಗಿ ಗ್ರಾಹಕರು ಮನೆಗೆ ಬಂದು ಖರೀದಿಸುತ್ತಾರೆ. ಬೇಕಾದ ರೊಟ್ಟಿ ಪ್ರಮಾಣವನ್ನು ಮುಂಗಡವಾಗಿಯೂ ಹೇಳಿಡುತ್ತಾರೆ. ಬೇಡಿಕೆಯಂತೆ ರೇವತಿಯವರು ರೊಟ್ಟಿ ತಯಾರಿಸಿ ನೀಡುತ್ತಾರೆ. ರೇವತಿಯವರು ರೊಟ್ಟಿ ತಯಾರಿಸುವ ಉದ್ಯೋಗದಿಂದ ಜೀವನದಲ್ಲಿ ಸಂತೃಪ್ತಿ ಕಂಡಿದ್ದೆನೆ ಎಂದು ಹೇಳಿ ಗೆಲುವಿನ ನಗೆ ಬೀರುತ್ತಾರೆ.

Leave a Reply

Your email address will not be published.