ಬನವಾಸಿಯಲ್ಲಿ ಸಮಾಜಮುಖಿ ನಡಿಗೆ

ಸಮಾಜಮುಖಿ ಬಳಗದ “ನಡೆದು ನೋಡಿ ಕರ್ನಾಟಕ’’ ಸರಣಿಯ ನಾಲ್ಕನೆಯ ನಡಿಗೆಯನ್ನು ಬನವಾಸಿ ಪರಿಸರದಲ್ಲಿ ಜೂನ್ 7 ರಿಂದ 9ರವರೆಗೆ ಹಮ್ಮಿಕೊಳ್ಳಲಾಗಿತ್ತು. ಜೂನ್ 7ರಂದು ಬೆಳಿಗ್ಗೆ 9 ಗಂಟೆಗೆ ಹಾವೇರಿಯಲ್ಲಿ ಸಮಾಜಮುಖಿ ಬಳಗದ ಪರಿಸರವಾದಿ ಮಾಧುರಿ ದೇವಧರ, ಪತ್ರಕರ್ತ ಮಾಲತೇಶ ಅಂಗೂರ ಮತ್ತು ಸಾಹಿತಿ ಸತೀಶ ಕುಲಕರ್ಣಿ ನಡಿಗೆಗೆ ಚಾಲನೆ ನೀಡಿದರು. ಅಲ್ಲಿಂದ ಬನವಾಸಿಯತ್ತ ನಡಿಗೆ ತಂಡ ಪಯಣ ಬೆಳೆಸಿತು.

ಬನವಾಸಿಯ ಮಧುಕೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ತಂಡಕ್ಕೆ ಇತಿಹಾಸ ತಜ್ಞ ಲಕ್ಷ್ಮೀಶ ಹೆಗಡೆ ಮಾರ್ಗದರ್ಶಿಯಾಗಿದ್ದರು. ಕ್ರಿ.ಶ.325ರಲ್ಲಿ ತಮ್ಮ ಮನೆಯಲ್ಲಿ ಪೂಜಿಸುತ್ತಿದ್ದ ಕದಂಬ ವೃಕ್ಷದ ಹೆಸರಿನಲ್ಲಿ ಮಯೂರ ವರ್ಮ ಮೊಟ್ಟಮೊದಲ ಕನ್ನಡ ಸಾಮ್ರಾಜ್ಯವನ್ನು ಸ್ಥಾಪಿಸಿದ; ವಿವಿಧ ರಾಜರು ಆಳ್ವಿಕೆ ನಡೆಸಿದ್ದಕ್ಕೆ, ಪ್ರಸಿದ್ದ ಕವಿಗಳು ಭೇಟಿ ನೀಡಿದ್ದಕ್ಕೆ ಹಾಗೂ ಹಲವು ಧರ್ಮೀಯರಿಗೆ ಇಲ್ಲಿ ಆಶ್ರಯ ದೊರೆತಿತ್ತು ಎಂಬುದಕ್ಕೆ ಸ್ಪಷ್ಟ ದಾಖಲೆಗಳಿವೆ; ಈ ಪ್ರದೇಶದಲ್ಲಿ 40 ಶಾಸನಗಳು ದೊರೆತಿದ್ದು ಅವುಗಳ ಆಧಾರದಲ್ಲಿ ಇತಿಹಾಸ ರಚನೆಯಾಗಿದೆ ಎಂಬುದನ್ನು ಲಕ್ಷ್ಮೀಶ ಹೆಗಡೆ ವಿವರಿಸಿದರು.

ಬಳಿಕ ಗುಡ್ನಾಪುರದಲ್ಲಿರುವ 15-16ನೇ ಶತಮಾನದ ವೀರಭದ್ರ ದೇವಾಲಯ, ಅದರೊಳಗೆ ಇಟ್ಟಿರುವ 6ನೇ ಶತಮಾನದ ಹಳೆಯ ಶಾಸನಗಳು, ವಿಗ್ರಹಗಳು, ಶಿವಲಿಂಗ ಹಾಗೂ ಮಯೂರ ವರ್ಮನ
ರಾಣಿ ನಿವಾಸದ ಅವಶೇಷಗಳ ದರ್ಶನವಾಯ್ತು. ಅಲ್ಲಿಂದ ಶಿರಸಿ ಮಾರಿಕಾಂಬ ದೇವಸ್ಥಾನಕ್ಕೆ ಭೇಟಿ.

ಸಿದ್ಧಿ ಸಮುದಾಯ

ಸಿದ್ದಿ ಜನಾಂಗ ಮೂಲತಃ ಆಫ್ರಿಕಾ ಖಂಡದ ಬಂಟು ಸಮುದಾಯಕ್ಕೆ ಸೇರಿದವರು. ಪೋರ್ಚುಗೀಜರು 16ನೆಯ ಶತಮಾನದಲ್ಲಿ ಭಾರತಕ್ಕೆ ಬಂದಾಗ ತಮ್ಮ ಕೆಲಸದ ಅನುಕೂಲಕ್ಕಾಗಿ ಸಿದ್ಧಿಗಳನ್ನು ಗುಲಾಮರನ್ನಾಗಿ ಇಲ್ಲಿಗೆ ಕರೆತಂದಿದ್ದರು. ಗೋವಾ ಸ್ವತಂತ್ರಗೊಂಡಾಗ ಕೆಲವರು ತಪ್ಪಿಸಿಕೊಂಡು ಇಲ್ಲಿಯೇ ಉಳಿದರು. ಈಗ ಇವರು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ, ಶಿರಸಿ, ಅಂಕೋಲ, ಮುಂಡಗೋಡ ಹಾಗೂ ಹಳಿಯಾಳ ತಾಲ್ಲೂಕುಗಳಲ್ಲಿ ಮತ್ತು ಬೆಳಗಾವಿಯ ಖಾನಾಪುರ, ಧಾರವಾಡದ ಕಲಘಟಗಿ ತಾಲ್ಲೂಕುಗಳಲ್ಲಿ ಕಾಣಸಿಗುತ್ತಾರೆ. ಕನ್ನಡ ಭಾಷೆಯನ್ನು ಮಾತನಾಡುವ ಸಿದ್ದಿಗಳ ಮನೆ ಭಾಷೆ ಮಾತ್ರ ಕೊಂಕಣಿ. ಕಾಡಿನ ಉತ್ಪನ್ನಗಳನ್ನು ಮಾರಾಟ ಮಾಡಿ ಬದುಕುತ್ತಿದ್ದ ಈ ಜನಾಂಗ ಈಗ ಬೇರೆಯವರ ಮನೆ ಆಳುಗಳಾಗಿ ಮತ್ತು ಕೂಲಿಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಸರಕಾರ ಇವರ ಬಗ್ಗೆ ಇನ್ನೂ ಗಮನ ಹರಿಸಿಲ್ಲ.

ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮವಿದ್ದದ್ದು ಶಿರಸಿಯ ಟಿ.ಎಂ.ಎಸ್ ಸಭಾಂಗಣದಲ್ಲಿ. ಕು.ಅಮೃತಾ ಮಹೇಶ್, ಗಾಯತ್ರಿ ರಾಘವೇಂದ್ರ, ರಮೇಶ್ ಗಬ್ಬೂರು ಭಾವಗೀತೆ ಹಾಡಿದರು. ನಿರೂಪಣೆ ಜಾಜಿ ದೇವೇಂದ್ರಪ್ಪ ಅವರದು. ಸಮಾಜಮುಖಿ ಜೂನ್ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದ ಹಿರಿಯ ಸಾಹಿತಿ ಸಿದ್ಧಲಿಂಗ ಪಟ್ಟಣಶೆಟ್ಟಿ ವಿಶ್ವವಿದ್ಯಾನಿಲಯಗಳ ಪ್ರಾಧ್ಯಾಪಕರು ಒಬ್ಬೊಬ್ಬರು ಎರಡು ಚಂದಾ ಮಾಡಿದರೆ ಪತ್ರಿಕೆ ಸಾಕಷ್ಟು ಬೆಳೆಯುತ್ತದೆ. ಅದನ್ನು ಪ್ರತಿಯೊಬ್ಬ ಪ್ರಾಧ್ಯಾಪಕರು ಮಾಡಬೇಕು ಎಂದು ಕರೆ ನೀಡಿದರು. ಸಾಹಿತಿ ಸುಬ್ರಾಯ ಮತ್ತಿಹಳ್ಳಿ, ಕವಯತ್ರಿ ಮಾಧವಿ ಭಂಡಾರಿ ಪತ್ರಿಕೆ ಕುರಿತು ಮಾತನಾಡಿದರು. ಅನಂತರ ನಡೆದ ಕೇಶವ ಹೆಗಡೆ ಕೊಳಗಿ ತಂಡದವರಿಂದ ‘ಶರಸೇತು ಬಂದ’ ಯಕ್ಷಗಾನ ಪ್ರದರ್ಶನ. ವರ್ತಮಾನಕ್ಕೆ ತಕ್ಕಂತೆ ಕಲಾವಿದ ಸಂಭಾಷಣೆಯನ್ನು ಆಗಿಂದಾಗಲೇ ಹೊಸೆದು ಎಲ್ಲೂ ತಪ್ಪದಂತೆ ಹೇಳುವ ಕಲೆ ಅದ್ಭುತವಾಗಿತ್ತು. ಕಾರ್ಯಕ್ರಮದ ನಂತರ ಶಿರಸಿಯಿಂದ ಎಂಟು ಕಿ.ಮೀ. ದೂರದ ಕಾಡಿನಲ್ಲಿರುವ ಬಕುಲ ಹೋಂಸ್ಟೇ ಯಲ್ಲಿ ಹವ್ಯಕ ಶೈಲಿಯ ಭೋಜನ, ವಿಶ್ರಾಂತಿ.

ಎರಡನೆಯ ದಿನ ಬೆಳಿಗ್ಗೆ, ಮಲೆನಾಡಿನ ವಿಶೇಷ ಹಲಸಿನೆಲೆಯಲ್ಲಿ ಸುತ್ತಿದ ಕಡಬು, ಚಟ್ನಿ, ಸಾಂಭಾರು ಸೇವಿಸಿ ಭೀಮನವಾರೆಗುಡ್ಡದತ್ತ ಪಯಣ. ಕಾಡಿನಲ್ಲಿ ಮಾರ್ಗದರ್ಶನ ಮಾಡಲು ಜೊತೆಯಾದವರು ಪತ್ರಕರ್ತ ಮಂಜುನಾಥ ಸಾಯಿಮನೆ. ಗುಡ್ಡದ ತುದಿಯ ಮೇಲಿನ 360 ಡಿಗ್ರಿ ನೋಟದಲ್ಲಿ ಕಾಡಿನ ಸೌಂದರ್ಯ ಕಣ್ತುಂಬಿತು. ಅಲ್ಲಿಂದ ವಾಟೆಹಳ್ಳಕ್ಕೆ ಹೋಗುವ ಮಾರ್ಗದಲ್ಲಿ ನೀಲಗುಂದ ಗ್ರಾಮದ ಸುಬ್ರಾಯ ಹೆಗಡೆಯವರ ತೋಟದ ಮನೆಗೆ ಭೇಟಿ. ಹೆಗಡೆ ಮತ್ತು ಅವರ ಪತ್ನಿ ಹಲಸಿನ ಹಣ್ಣು ಕಿತ್ತು, ತೊಳೆಬಿಡಿಸಿಕೊಟ್ಟು ಉಪಚರಿಸಿದ್ದು ಮರೆಯಲಾರದ ಆತಿಥ್ಯ. ಬಳಿಕ ಅಘನಾಸಿನಿಯ ಉಪನದಿಯಾದ ವಾಟೆ ಹಳ್ಳದಗುಂಟ ಪಶ್ಚಿಮಘಟ್ಟದ ದಟ್ಟ ಕಾಡಿನಲ್ಲಿ ನಡೆದು ಬಂದಿದ್ದು ವಿಶಿಷ್ಟ ಅನುಭವ.

ಅನಂತರ ಶಿರಸಿಯ ವಿಶಿಷ್ಟ ರುದ್ರಭೂಮಿ ‘ನೆಮ್ಮದಿ’ಗೆ ಭೇಟಿ. ಹಾಗೆಯೇ ಜೇನುಕೃಷಿಯ ಬಗ್ಗೆ ಜೇನು ತಜ್ಞ ಆರ್.ಪಿ.ಹೆಗಡೆ ಮಾಹಿತಿ ನೀಡಿದರು. ಅಲ್ಲಿಂದ ಟಿ.ಎಸ್.ಎಸ್. ಸಹಕಾರಿ ಕೃಷಿ ಮಾರುಕಟ್ಟೆಗೆ ಭೇಟಿ; ಅಡಿಕೆ, ಮೆಣಸು, ಅರಿಷಿಣ ಮತ್ತು ಯಾಲಕ್ಕಿ ಬೆಳೆಗಳ ಮಾರಾಟ ವ್ಯವಸ್ಥೆ, ಮಲೆನಾಡ ಜನರ ಜೀವನಕ್ರಮದ ಪರಿಚಯ.

ಬಕುಲ ತಂಗುದಾಣಕ್ಕೆ ಮರಳಿದಾಗ ಕೋಟೆಮನೆಯ ಸಿದ್ಧಿ ಜನಾಂಗದ ತಂಡದಿಂದ ಕಲಾಪ್ರದ ರ್ಶನ ಏರ್ಪಾಟಾಗಿತ್ತು. ರಾಜ್ಯ ಯಕ್ಷಗಾನ ಅಕಾಡೆಮಿಯ ಸದಸ್ಯ ನಾಗರಾಜ ಜೋಶಿ ಸಿದ್ಧಿ ಜನಾಂಗ ಮತ್ತು ಅವರ ಕಲೆ ಪರಿಚಯಿಸಿದರು. ಕಲಾವಿದರು ಹಸಿ ರೆಲೆ ಕಟ್ಟಿಕೊಂಡು ಪ್ರದರ್ಶಿಸಿದ ದಮಾಮಿ ಹಾಗೂ ಪುಗಡಿ ನೃತ್ಯ ವಿಶಿಷ್ಟವಾಗಿತ್ತು.

ಕೊನೆಯ ದಿನ ಬೆಳಿಗ್ಗೆ ಅಘನಾಶಿನಿ ನದಿಯ ಉಗಮ ಸ್ಥಾನ ಶಿರಸಿಯ ಶಂಕರಹೊಂಡಕ್ಕೆ ಭೇಟಿ. ಉದ್ಯಮಿ ಶ್ರೀನಿವಾಸ ಹೆಬ್ಬಾರ್ ಮತ್ತು ‘ಜೀವಜಲ ಕಾರ್ಯಪಡೆ’ ತಂಡ ಶಂಕರ ಹೊಂಡವನ್ನು ಅಭಿವೃದ್ಧಿಪಡಿಸಿದ್ದಾರೆ.

ಅಲ್ಲಿಂದ ಕದಂಬ ಸಹಕಾರ ಸಂಘಕ್ಕೆ ಭೇಟಿ ನೀಡಿದಾಗ ಶಿರಸಿಯ ವಿಶೇಷ ಬಾವಿಕೈ ಪೇಡೆ ಮತ್ತು ಸಾವಯವ ಉತ್ಪನ್ನಗಳ ಪರಿಚಯವಾಯಿತು. ಅನಂತರ ತಂಡದ ಪಯಣ ಯಲ್ಲಾಪುರದ ಕಡೆಗೆ. ಮಾರ್ಗಮಧ್ಯೆ ಕೋಟೆಮನೆಯ ಸಿದ್ಧಿ ಜನರ ಹಾಡಿ ಮತ್ತು ರಾಜೀವಾಡದ ಗೌಳಿ ಜನರ ಹಟ್ಟಿಗಳಲ್ಲಿ ನಡೆದಾಟ.

ಗೌಳಿ ಜನಾಂಗ

ಉತ್ತರ ಕನ್ನಡ ಜಿಲ್ಲೆಯಲ್ಲಿ ಕಂಡುಬರುವ ಇನ್ನೊಂದು ವಿಶೇಷ ಜನಾಂಗವೆಂದರೆ ಗೌಳಿ. ಮಹಾರಾಷ್ಟ್ರ ಮೂಲದ ಈ ಜನರು ಉತ್ತರ ಕರ್ನಾಟಕದ ಬಹುತೇಕ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಹಿಂಡುಹಿಂಡು ದನಗಳನ್ನು ಸಾಕುವ ಈ ಜನರ ಕುಲಕಸಬು ಹೈನುಗಾರಿಕೆ. ಆದರೆ ನಿರಂತರ ಬರ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಗೌಳಿಗರ ಹೈನುಗಾರಿಕೆಗೆ ಸಂಚಕಾರ ಬಂದಿದೆ. ಅದಕ್ಕಾಗಿ ಈ ಜನ ಇತ್ತೀಚೆಗೆ ಪರ್ಯಾಯ ಉದ್ಯೋಗಗಳನ್ನು ಕಂಡುಕೊಳ್ಳುತ್ತಿದ್ದಾರೆ. ಹಾಗೆಯೇ ಸ್ವಲ್ಪಮಟ್ಟಿಗೆ ಸಂಘಟಿತರಾಗುತ್ತಿದ್ದಾರೆ. ಮುಖದ ಮೇಲೆ ಉದ್ದನೆಯ ಕೊಕ್ಕರೆ ಮೀಸೆ, ತಲೆ ಮೇಲೊಂದು ಪೇಟ, ಮೈಮೇಲೆ ಲಂಡ ತೋಳಿನ ಅಂಗಿ ಮತ್ತು ಚಡ್ಡಿ ತೊಟ್ಟು, ಬಾಯಲ್ಲಿ ಎಲೆ ಅಡಿಕೆ ಹಾಕಿದ ವ್ಯಕ್ತಿ ಎದುರಿಗೆ ಸಿಕ್ಕರೆ ಅವನನ್ನು ಗೌಳಿ ಜನಾಂಗದ ವ್ಯಕ್ತಿ ಎಂದು ಥಟ್ಟನೆ ಹೇಳಬಹುದು. ಇವರ ಮನೆಭಾಷೆ ಮರಾಠಿ; ಕನ್ನಡ ಮಾತನಾಡುತ್ತಾರೆ.

ತಂಡ ಭೇಟಿ ನೀಡಿದಂದು ರಾಜೀವಾಡದಲ್ಲಿ ಗ್ರಾಮಪಂಚಾಯಿತಿ ಅಧ್ಯಕ್ಷ ಮಾಸ್ತೆಪ್ಪ ಮಡಿವಾಳರ ಗೃಹಪ್ರವೇಶವಿತ್ತು. ಅವರು ಅಪರಿಚಿತರಾದರೂ ಇಡೀ ನಡಿಗೆ ತಂಡವನ್ನು ಊಟಕ್ಕೆ ಆಹ್ವಾನಿಸಿ ಸತ್ಕರಿಸಿದರು. ಹೀಗೆ ಅನಿರೀಕ್ಷಿತ ಆಥಿತ್ಯ ಸ್ವೀಕರಿಸಿದ ಸಮಾಜಮುಖಿ ನಡಿಗೆ ತಂಡ ಮುಂಡಗೋಡಕ್ಕೆ ತೆರಳಿ ಬೌದ್ಧ ಮಂದಿರಕ್ಕೆ ಭೇಟಿ ನೀಡಿತು. ಅಲ್ಲಿಂದ ಹಾವೇರಿಗೆ ಮರುಪಯಣ, ಮೂರು ದಿನಗಳ ನಡಿಗೆ ಮುಕ್ತಾಯ. ಬನವಾಸಿ ನಡಿಗೆಗೆ ನೆರವಾದ ಸ್ಥಳೀಯರಾದ ರಾಘವೇಂದ್ರ ಬೆಟ್ಟಕೊಪ್ಪ, ಲಕ್ಷ್ಮೀಶ ಸೋಂದ, ನಾಗರಾಜ ಜೋಶಿ, ಮಂಜುನಾಥ ಸಾಯಿಮನೆ ಅವರಿಗೆ ವಿಶೇಷ ನೆನೆಕೆ.

ನಡಿಗೆ ತಂಡ: ಎಂದಿನಂತೆ ಬನವಾಸಿ ನಡಿಗೆ ತಂಡವು ವೈವಿಧ್ಯಮಯವಾಗಿತ್ತು. 30 ರಿಂದ 83 ವರ್ಷದವರು ತಂಡದಲ್ಲಿದ್ದರು. ವೃತ್ತಿಯಿಂದ 14 ಪ್ರಾಧ್ಯಾಪಕರು, ಮೂವರು ವಕೀಲರು, ಇಬ್ಬರು ವೈದ್ಯರು, ನಾಲ್ವರು ಇಂಜಿನಿಯರುಗಳು, ಒಬ್ಬರು ಛಾಯಾಗ್ರಾಹಕರು, ನಾಲ್ವರು ಸರಕಾರಿ ಅಧಿಕಾರಿಗಳು ಹಾಗೂ ಇತರರು ಹೆಜ್ಜೆ ಹಾಕಿದರು.

One Response to "ಬನವಾಸಿಯಲ್ಲಿ ಸಮಾಜಮುಖಿ ನಡಿಗೆ"

Leave a Reply

Your email address will not be published.