ಬಯೊ ಹ್ಯಾಕಿಂಗ್ ಮನುಷ್ಯ ಚಿರಾಯು ಆಗಬಹುದೇ?

ಕೆಲವರು ಬಯೋ ಹ್ಯಾಕಿಂಗ್ ಮೂಲಕ ಮನುಷ್ಯರ ಮಿದುಳು ಮತ್ತು ದೇಹವನ್ನು ಜೈವಿಕ ನಿಯಮಗಳಿಗೆ ವಿರುದ್ಧವಾಗಿ ಬದಲಿಸಲು ಹೊರಟಿದ್ದಾರೆ. ಬಯೊ ಹ್ಯಾಕಿಂಗ್ ಎಂದರೇನು, ಇದರಲ್ಲಿ ಯಾರೆಲ್ಲಾ ತೊಡಗಿಕೊಂಡಿದ್ದಾರೆ, ಇದಕ್ಕೆ ಕಾನೂನು ಸಮ್ಮತಿ ಇದೆಯೇ, ಇದರ ನಿಯಂತ್ರಣ ಸಾಧ್ಯವೇ, ಇದರ ಪರಿಣಾಮಗಳು ಏನು? ಈ ಬಗ್ಗೆ ನಾವೆಲ್ಲಾ ಇನ್ನಾದರೂ ಯೋಚಿಸಬೇಕಾದ ಅವಶ್ಯಕತೆ ಹೆಚ್ಚುತ್ತಿದೆ.

ವೈಜ್ಞಾನಿಕ ಜಗತ್ತಿನಲ್ಲಿ ಮಾತ್ರವಲ್ಲ ದೈನಂದಿನ ಬದುಕಿನಲ್ಲೂ ಚಲಾವಣೆಗೆ ಬರುತ್ತಿರುವ ಒಂದು ಪದವೆಂದರೆ ಬಯೋ ಹ್ಯಾಕಿಂಗ್. ಇದರ ಹೆಸರನ್ನು ಕೇಳದಿದ್ದರೂ ಸಹ ಒಂದಲ್ಲ ಒಂದು ರೀತಿಯಲ್ಲಿ ಇದನ್ನು ಕಂಡಿರುತ್ತೀರಿ ಅಥವಾ ಕೇಳಿರುತ್ತೀರಿ. ಉದಾಹರಣೆ ಟ್ವಿಟ್ಟರ್ ಸಂಸ್ಥೆಯ ಮುಖ್ಯಸ್ಥರಾದ ಜಾಕ್ ಡೊರ್ಸೆಯವರು ಉಪವಾಸ ಮಾಡುವ ಬಗ್ಗೆ ಮತ್ತು ಮುಂಜಾನೆಯಲ್ಲಿ “ಉಪ್ಪಿನ ರಸ” ಕುಡಿಯುವ ಬಗ್ಗೆ ಹೇಳಿರುವುದನ್ನು ಆ ದೇಶದ ಜನ ಕೇಳಿರುತ್ತಾರೆ. ಹಾಗೆಯೇ ನಾಸಾ (ನ್ಯಾಷನಲ್ ಏರೋನಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಟ್ರೇಶನ್- ಅಮೆರಿಕಾ) ಸಂಸ್ಥೆಯ ಉದ್ಯೋಗಿಯಾಗಿದ್ದ ಜೊಸಯ್ಯ ಜೊಯ್‍ನರ್ ಅವರು ಅನುವಂಶಿಕತೆಯ ಮೂಲ ಘಟಕವಾದ ಜೀನ್‍ಗಳನ್ನು ಬದಲಾಯಿಸುವ ತಂತ್ರಜ್ಞಾನದ ಬಗ್ಗೆ ಮಾತನಾಡಿರುವುದೂ ಅಲ್ಲಿ ಅನೇಕರಿಗೆ ಗೊತ್ತಿರುತ್ತದೆ.

ಕೆಲವರು ಮೆದುಳಿನ ಮುಖ್ಯ ರಸಾಯನಿಕವಾದ ಡೊಪಾಮಿನ್‍ನ ಉಪವಾಸದ ಬಗ್ಗೆಯೂ ಮಾತನಾಡುತ್ತಿದ್ದಾರೆ. ಇನ್ನು ಕೆಲವರು ಕೈನಲ್ಲಿ ವಿದ್ಯುನ್ಮಾನ ಚಿಪ್‍ಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಇಂಥ ಅನೇಕ ಚಟುವಟಿಕೆಗಳನ್ನು ಬಯೋ ಹ್ಯಾಕಿಂಗ್ ಎಂದು ಕರೆಯಲಾಗುತ್ತಿದೆ. ಇದರ ಪರಿಧಿಯಲ್ಲಿ ಯೀಸ್ಟ್ ಜೀವಕೋಶಗಳ ಮೇಲೆ ವೈಜ್ಞಾನಿಕ ಪ್ರಯೋಗ ಮಾಡುವುದರಿಂದ ಹಿಡಿದು, ನಿದ್ರೆ ಮತ್ತು ಆಹಾರವನ್ನು ನಿಯಂತ್ರಿಸುವುದು ಮತ್ತು ತಮ್ಮ ದೇಹಗಳ ಮೇಲೆ ತೀರಾ ಅತಿರೇಕದ ಪ್ರಯೋಗಗಳನ್ನು ಮಾಡಿಕೊಳ್ಳುವವರೆಗೂ ಅನೇಕ ವಿಧಗಳು ಸೇರಿವೆ.

ಬಯೊ ಹ್ಯಾಕಿಂಗ್ ಎಂದರೆ?

ಸಾಮಾನ್ಯವಾಗಿ ಸಾಂಪ್ರದಾಯಿಕವಾಗಿ ನಮ್ಮ ಸಮಾಜವು ಅಂಗೀಕರಿಸಿರುವ ವೈದ್ಯಪದ್ಧತಿಗಳ ಆಚೆಗೆ, ಮೆದುಳನ್ನು ಮತ್ತು ದೇಹವನ್ನು ಅತ್ಯುತ್ತಮ ಸಾಧನೆಗೆ ಸಿದ್ಧಪಡಿಸುವ ಪ್ರಯತ್ನಗಳನ್ನು ಬಯೋ ಹ್ಯಾಕಿಂಗ್ ಅಥವಾ ಜೈವಿಕ ತಿದ್ದುವಿಕೆ ಎನ್ನಬಹುದು. ಡೇವ್ ಆ್ಯಸ್ಟ್ರೆ ಎಂಬ ಇಂಥ ತಜ್ಞನೊಬ್ಬ ನಿಮ್ಮ ಜೈವಿಕ ಅಸ್ತಿತ್ವದ ಮೇಲೆ ನೀವೇ ಸಂಪೂರ್ಣ ನಿಯಂತ್ರಣ ಹೊಂದಲು ಸಾಧ್ಯವಾಗುವಂತೆ ದೇಹದ ಸುತ್ತಲಿನ ಹಾಗೂ ಒಳಗಿನ ವಾತಾವರಣವನ್ನು ಬದಲಾಯಿಸುವುದೇ ಜೈವಿಕ ಹ್ಯಾಕಿಂಗ್ ಎಂದು ಹೇಳಿಕೊಂಡಿದ್ದಾನೆ.

ಹ್ಯಾಕಿಂಗ್‍ನ ಸ್ವರೂಪಗಳು

ಕೆಲವೆಲ್ಲಾ ಬಹಳ ಸರಳವಾದ, ಅನೇಕ ದಿನಗಳಿಂದ ನಡೆಯುತ್ತಿರುವ ವಿಧಾನಗಳು. ಉದಾಹರಣೆಗೆ ಬಿಟ್ಟುಬಿಟ್ಟು ಮಾಡುವ ಉಪವಾಸ, ವಿಪಸ್ಸನ ಧ್ಯಾನ ಮುಂತಾದವು. ಕೆಲವರು ಇದನ್ನೆಲ್ಲಾ ಸೇರಿಸಿ ಒಂದು ಮಾದರಿಯನ್ನು ಸೃಷ್ಟಿಸಿಕೊಳ್ಳುತ್ತಾರೆ. ದಿನಕ್ಕೆರಡು ಬಾರಿ ಧ್ಯಾನ, ಒಂದೇ ಹೊತ್ತು ಊಟ ಇತ್ಯಾದಿ. ಇದು ‘ಊಟದ ಅವ್ಯವಸ್ಥೆ’ ಎಂಬ ವ್ಯಾಧಿಯ ಒಂದು ರೂಪ ಎಂಬ ಟೀಕೆಯೂ ಇದೆ. ಇದರೊಂದಿಗೆ ಮಂಜುಗಡ್ಡೆಯಂಥ ತಣ್ಣೀರಿನಲ್ಲಿ ಸ್ನಾನ, ಐದು ಮೈಲಿ ನಡಿಗೆ ಇವುಗಳನ್ನೆಲ್ಲಾ ಸೇರಿಸಿಕೊಂಡವರಿದ್ದಾರೆ. ಇದರ ಅನೇಕ ಸ್ವರೂಪಗಳು ಭಾರತದಲ್ಲೂ ನಮ್ಮ ನಡುವೆ ಕಾಣಿಸಿಕೊಂಡಿವೆ. ಇದರಲ್ಲಿ ಒಂದಿಷ್ಟು ಒಳ್ಳೆಯದಿರಬಹುದು, ಹಾನಿಕಾರಕ ಅಂಶಗಳು ಇರಬಹುದು.

ಇದಲ್ಲದೆ ಅನೇಕ ‘ವಯಸ್ಸಾಗದಂತೆ ತಡೆಯುವ’ ಗುಳಿಗೆಗಳನ್ನು ನುಂಗುವವರೂ ಇದ್ದಾರೆ. ಅನೇಕರು ಆಧುನಿಕ ತಾಂತ್ರಿಕ ಆವಿಷ್ಕಾರಗಳನ್ನು ಆಧರಿಸಿದ ಪುಟ್ಟ ಯಂತ್ರಗಳನ್ನು ದೇಹದ ಮೇಲೆ ಧರಿಸುತ್ತಾರೆ. ಉದಾಹರಣೆಗೆ ತಮ್ಮ ನಿದ್ರೆ ಪ್ರತಿದಿನ ಹೇಗೆ ಸಾಗುತ್ತದೆ ಎಂಬುದನ್ನು ವಿಶ್ಲೇಷಿಸಲು ತಾಂತ್ರಿಕತೆಯ ಮೊರೆ ಹೊಗುವವರು ಇದ್ದಾರೆ. ದೇಹವನ್ನು ಕೃತಕವಾಗಿ ತಣ್ಣಗಾಗಿಸಿಕೊಳ್ಳುವವರಿದ್ದಾರೆ. ಮೆದುಳಿನಲ್ಲಿನ ಅಲೆಗಳನ್ನು ನಿಯಂತ್ರಿಸಲೆತ್ನಿಸುವವರಿದ್ದಾರೆ. ದೇಹದ ಸುತ್ತಲೂ ದೈನಂದಿನ ಬದುಕಿನಲ್ಲಿ ಇರತಕ್ಕಂಥ ವಿದ್ಯುದಾಯಸ್ಕಾಂತ ಕಿರಣಗಳಿಂದ ತಪ್ಪಿಸಿಕೊಳ್ಳಲು ಇನ್ರೆಡ್ (ರಕ್ತವರ್ಣಾತೀತ) ಕಿರಣಗಳನ್ನು ಉಪಯೋಗಿಸುವವರಿದ್ದಾರೆ. ಇದೆಲ್ಲದರ ಹಿಂದೆ ಅನೇಕ ಹೊಸ ಸಿದ್ಧಾಂತಗಳಿರುತ್ತವೆ. ಈ ವಿಧಾನಗಳಿಂದ ಆಯುಷ್ಯವು ದೀರ್ಘವಾಗುತ್ತದೆ ಎಂಬುದು ಅವುಗಳ ತೀರ್ಮಾನ.

ಅನೇಕರು ದೇಹದಲ್ಲಿ ವಿದ್ಯುನ್ಮಾನ ಚಿಪ್‍ಗಳನ್ನು ಅಳವಡಿಸಿಕೊಂಡು ಅವುಗಳಿಂದ ಮನೆಯ ಬೀಗಗಳನ್ನು ತೆಗೆಯುವುದರಿಂದ ಹಿಡಿದು ಅನೇಕ ಕೆಲಸಗಳನ್ನು ನಿರ್ವಹಿಸುತ್ತಾ, ಒಂದು ರೀತಿಯಲ್ಲಿ ಅತಿಮಾನವ ಶಕ್ತಿಗಳನ್ನು ಸಂಪಾದಿಸಿಕೊಂಡಿದ್ದೇವೆಂದು ಖುಷಿಪಡುತ್ತಾರೆ. ಕೈ-ಕಾಲು ಇಲ್ಲದವರಿಗೆ ಇದು ನೆರವಾಗುತ್ತದೆ ಎಂಬುದೇನೋ ನಿಜ.

ಪ್ರೇರಣೆಗಳು

ಇದನ್ನೆಲ್ಲಾ ಜನ ಯಾಕೆ ಮಾಡುತ್ತಾರೆ ಎಂಬುದು ಪ್ರಸ್ತುತವಾದ ಪ್ರಶ್ನೆಯೇ. ಕೆಲವರಿಗೆ ತಮ್ಮ ದೇಹದ ಸಾಮಥ್ರ್ಯಗಳನ್ನು ಎಷ್ಟರಮಟ್ಟಿಗೆ ವಿಸ್ತರಿಸಿಕೊಳ್ಳಬಹುದೆಂಬುದನ್ನು ಅರಿಯುವ ಕುತೂಹಲ. ಅನೇಕರಿಗೆ ತಾವಿನ್ನೂ ಜಾಣರೂ, ಸಮರ್ಥರೂ ಆಗಬೇಕು ಎಂಬ ಆಸೆ. ಇನ್ನೂ ಅನೇಕರಿಗೆ ತಾವು ಅನಂತಕಾಲ ಬದುಕಬೇಕೆಂಬ ತೆವಲು. ನಮ್ಮ ಪುರಾಣಗಳಲ್ಲಿ, ವೈಜ್ಞಾನಿಕ ಕಥೆಗಳಲ್ಲಿ ನಾವಿಂಥವರನ್ನು ನೋಡಿದ್ದೇವಲ್ಲ! ರೋಗಮುಕ್ತರಾಗಬೇಕೆಂದು ಆಶಿಸಿ, ಆಧುನಿಕ ತಂತ್ರಜ್ಞಾನದ ಯಶಸ್ಸನ್ನು ಕಂಡ ಕೆಲವರು ಇದನ್ನು ಇಲ್ಲಿಗೆ ಏಕೆ ನಿಲ್ಲಿಸಬೇಕು, ನಾವೇಕೆ ಚಿರಂಜೀವಿಗಳಾಗಬಾರದು ಎಂದು ತಹತಹಿಸಲಾರಂಭಿಸುತ್ತಾರೆ.

ಆ್ಯಸ್ಟ್ರೆ ಎಂಬಾತನಿಗೆ ಪಾಶ್ರ್ವವಾಯು ಮತ್ತು ಹೃದಯದ ಕಾಯಿಲೆಯ ಅಪಾಯ ಇದೆ ಎಂದು ತಿಳಿಯಿತು. ಆತ ಸುಮಾರು ಮುನ್ನೂರು ಪೌಂಡ್ ತೂಕವಿದ್ದ; ನೋವು, ಖಿನ್ನತೆಗಳಿಂದ ಬಳಲಿದ್ದ ಅವನು ಬಯೋ ಹ್ಯಾಕಿಂಗ್ ವಿಧಾನಗಳಿಂದಲೇ ಗುಣಮುಖನಾದ. ಆನಂತರ ಅವನಿಗೆ ಬರೇ ಆರೋಗ್ಯದಿಂದಿದ್ದರೇನು ಉಪಯೋಗ, ಅಷ್ಟು ಸುಖ ಸಾಧಾರಣ ಮಟ್ಟದ್ದು, ನಾನು ಹೆಚ್ಚು ಸಾಧಿಸಬೇಕು ಎನ್ನಿಸಿತು. ಹ್ಯಾಕಿಂಗ್ ಅನ್ನು ಮುಂದುವರೆಸಿದ. ಅನೇಕರು ಸರ್ಕಾರ ಮತ್ತು ಕಾನೂನು ಜಾರಿ ಮಾಡುವ ಸಂಸ್ಥೆಗಳ ಕಣ್ಣು ತಪ್ಪಿಸಿ ತಮ್ಮ ಶರೀರದ ಮೇಲೆಯೇ ಇಂತಹ ಪ್ರಯೋಗಗಳನ್ನು ಮಾಡಿಕೊಳ್ಳುತ್ತಿರುತ್ತಾರೆ. ಹಾಗೆ ಮಾಡುವುದರಲ್ಲೇ ಅವರಿಗೆ ವಿಚಿತ್ರವಾದ ಆನಂದವಿದೆ.

ಒಂದು ಹೊಸ ಔಷಧಿಗೆ ಅಂಗೀಕಾರದ ಮುದ್ರೆ ಒತ್ತಲು, ಅಮೆರಿಕಾದ ಫೆಡರಲ್ ಡ್ರಗ್ ಏಜೆನ್ಸಿಯಂಥ (ಎಫ್ ಡಿಎ) ಸಂಸ್ಥೆ ಹತ್ತು ವರ್ಷಗಳಷ್ಟು ಕಾಲವನ್ನು ತೆಗೆದುಕೊಳ್ಳುತ್ತಾರಂತೆ. ಇದರಿಂದಾಗುವ ಹತಾಶೆಯನ್ನು ಮೀರಲು ಅನೇಕರು ಹ್ಯಾಕಿಂಗ್ ಅನ್ನು ಶುರು ಮಾಡಿಕೊಳ್ಳುತ್ತಾರೆ. ಹ್ಯಾಕಿಂಗ್‍ನಲ್ಲೇ ತೊಡಗಿರುವ ಸಮುದಾಯಗಳು ಉಂಟು. ಇದರಲ್ಲಿರುವರಿಗೆ ವಿದ್ರೋಹದ ಆನಂದವೂ ಉಂಟು, ತಮ್ಮಂಥವರೊಂದಿಗಿನ ಬಾಂಧವ್ಯದ ಬೆಚ್ಚನೆಯ ರಕ್ಷಣೆಯೂ ಉಂಟು!

ಸಂಶೋಧನೆಯ ಬೆಂಬಲವಿದೆಯೇ?

ಕೆಲವೊಂದು ರೀತಿಯ ಹ್ಯಾಕಿಂಗ್ ವಿಧಾನಗಳ ಹಿಂದೆ ಶತಮಾನಗಳ ದೀರ್ಘಕಾಲದ ಅನುಭವದ ಹಿನ್ನೆಲೆಯಿದೆ. ಇನ್ನು ಕೆಲವಕ್ಕೆ ಕಠಿಣ ವೈಜ್ಞಾನಿಕ ಸಂಶೋಧನೆ ಮತ್ತು ಪರೀಕ್ಷೆಗಳ ಬೆಂಬಲವೂ ಇದೆ. ಉದಾಹರಣೆಗೆ ಕೆಲವೊಂದು ಯೋಗ-ಧ್ಯಾನದ ವಿಧಾನಗಳಿಂದ ಖಿನ್ನತೆ ಮತ್ತು ವೇದನೆ ಕಡಿಮೆಯಾದ ಬಗ್ಗೆ ದಾಖಲೆಗಳಿವೆ. ಆದರೆ ಸಾಕ್ಷಿ ಪುರಾವೆಗಳಿಲ್ಲದ ಅನೇಕ ಹ್ಯಾಕಿಂಗ್ ವಿಧಾನಗಳು ನಿರುಪಯೋಗಿರುತ್ತವೆ. ಅಷ್ಟೇ ಅಲ್ಲದೆ ಅವು ಅಪಾಯಕಾರಿಯೂ ಆಗಬಹುದು.

ದೇಹದಲ್ಲಿರುವ ವಿಷವನ್ನೆಲ್ಲಾ ಹೊರಹಾಕಿ, ಜೀವಕೋಶಗಳ ಪುನರುಜ್ಜೀವನಕ್ಕೆ ಸಹಾಯವಾಗುತ್ತದೆ ಎಂದು ಪ್ರತಿಪಾದಿಸುತ್ತಾ ಡಾರ್ಸಿ ಎನ್ನುವಾತ ರಕ್ತವರ್ಣಾತೀತ ಕಿರಣಗಳ ತೊಟ್ಟಿಯನ್ನು (ಇನ್‍ಫ್ರಾ ರೆಡ್ ಸೌನಾ) ಮಾರುಕಟ್ಟೆಯಲ್ಲಿ ದುಬಾರಿ ಬೆಲೆಗೆ ಮಾರಿದ. ಆದರೆ ನ್ಯೂಯಾರ್ಕ್ ಟೈಂಸ್ ಪತ್ರಿಕೆಯು ಇದರ ಬಗ್ಗೆ ಅಧ್ಯಯನ ನಡೆಸಿ ಅದಕ್ಕೆ ಸೂಕ್ತ ಪುರಾವೆ ಇಲ್ಲ ಎಂದು ಘೋಷಿಸಿತು. ಹಾಗೆಯೇ ಡಾರ್ಸಿಯವರ ಉಪವಾಸ ಚಿಕಿತ್ಸೆಯೂ ಪ್ರಶ್ನಾರ್ಹವೇ. ಅವರು ಉಲ್ಲೇಖಿಸಿರುವ ಅನೇಕ ಅಧ್ಯಯನಗಳು ಇಲಿಗಳ ಮೇಲೆ ಮಾಡಿದ ಪ್ರಯೋಗಗಳನ್ನು ಆಧರಿಸಿದಂತಹವು. ಅವು ಮನುಷ್ಯರ ಮೇಲೆ ಸಹ ಪರಿಣಾಮಕಾರಿ ಎನ್ನುವುದಕ್ಕೆ ಸಂಶೋಧನಾ ಬೆಂಬಲ ಏನೇನೂ ಸಾಲದು.

ಅದೇ ರೀತಿಯಲ್ಲಿ ಆ್ಯಸ್ಟ್ರೆಯವರ ‘ಬುಲೆಟ್ ಪ್ರೂಫ್ ಡಯೆಟ್’ ಎಂಬ ವಿಧಾನವೂ ವಿವಾದಾಸ್ಪದ. ದಿನಕ್ಕೆ ಒಂದು ಪೌಂಡ್ ತೂಕ ಕಳೆದುಕೊಳ್ಳುವ ಮಾರ್ಗ ಎಂದು ಪ್ರಚಾರ ಮಾಡುವ ಈ ವಿಧಾನವು ಅನೇಕ ಆರೋಗ್ಯಕರ ಆಹಾರಗಳನ್ನು ವಿನಾಕಾರಣ ದೂಷಿಸುತ್ತದೆ ಮತ್ತು ತಮ್ಮ ಸಂಸ್ಥೆ ಮಾಡುವ ಉತ್ಪನ್ನಗಳನ್ನು ಕೊಳ್ಳಿರಿ ಎಂದು ಉಪದೇಶ ಮಾಡುತ್ತದೆ. ಆದರೆ ತಮಗೆ ಬೇಕಾದ ಅಂಶಗಳನ್ನಷ್ಟೇ ಆಯ್ದು ವಾದ ಮಂಡಿಸುವ ಮತ್ತು ಅನೇಕ ಸಾಬೀತಾದ ವೈಜ್ಞಾನಿಕ ಅಂಶಗಳನ್ನು ತಿರಸ್ಕರಿಸುವ ಇವರ ವಿಧಾನವನ್ನು ಒಪ್ಪುವುದು ಸಾಧ್ಯವಿಲ್ಲ.

ಅಪಾಯಕಾರಿ ಬಯೋ ಹ್ಯಾಕಿಂಗ್‍ಗಳು

ತೀರಾ ಕೆಟ್ಟ, ದೀರ್ಘಕಾಲೀನ ವ್ಯಾಧಿಗಳಿಂದಲೂ, ವೇದನೆಗಳಿಂದಲೂ ಬಳಲುತ್ತಿರುವ ಅನೇಕ ಜನ ಇಂಥ ಹ್ಯಾಕಿಂಗ್‍ಗೆ ಮರುಳಾಗುತ್ತಾರೆ ಅಥವಾ ಅದರಲ್ಲಿ ತೊಡಗಿಕೊಳ್ಳುತ್ತಾರೆ. ಅವರಿಗೆ ಸಾಂಪ್ರದಾಯಿಕ ವೈದ್ಯಪದ್ಧತಿಗಳಿಂದ ಪರಿಹಾರ ದೊರೆತಿರುವುದಿಲ್ಲವಾದ್ದರಿಂದ ಅವರನ್ನು ದೂಷಿಸಲು ಸಾಧ್ಯವಿಲ್ಲ. ಆದರೆ ಈ ಪರಿಹಾರಗಳಲ್ಲಿ ಕೆಲವು ಎಷ್ಟು ಅಪಾಯಕಾರಿಯಾಗಿರುತ್ತವೆಂದರೆ, ಅವುಗಳನ್ನು ಪ್ರಯತ್ನಿಸದಿರುವುದೇ ಒಳ್ಳೆಯದು.

ಇಂಥ ವಿಧಾನಗಳಲ್ಲಿ ಒಂದೆಂದರೆ ತರುಣರ ರಕ್ತದ ಪ್ಲಾಸ್ಮಾ (ಹೆಪ್ಪುಗಟ್ಟದ ನೀರಿನಂತಹ ಭಾಗ) ಅನ್ನು ವಯಸ್ಸಾದವರು ರಕ್ತ ವರ್ಗಾವಣೆ ಮಾಡಿಸಿಕೊಳ್ಳುವುದು. ಇದರ ಮೂಲಕ ವೃದ್ಧಾಪ್ಯವನ್ನು ಮುಂದೂಡಬಹುದು, ಅಲ್‍ಜೈಮರ್ಸ್, ಪಾರ್ಕಿನ್‍ಸನ್ ಮುಂತಾದ ರೋಗಗಳನ್ನು ತಡೆಗಟ್ಟಬಹುದು ಎಂಬ ಪ್ರಚಾರವಿದೆ. ಎಲ್ಲೋ ಅಷ್ಟಿಷ್ಟು ಪುರಾವೆ ದೊರೆತಿದೆ ಎನ್ನಲಾಗಿದೆಯಾದರೂ ಇದಕ್ಕೆ ನೈಜ ವಿಜ್ಞಾನದ ಬೆಂಬಲವಿಲ್ಲ. ಆದರೂ ಪರೀಕ್ಷಾರ್ಥ ಚಿಕಿತ್ಸೆಯ ಒಂದು ಭೇಟಿಗೇ ಅಮೆರಿಕಾದ ಸಿಲಿಕಾನ್ ವ್ಯಾಲಿ ಪ್ರದೇಶದ ಜನ ಎಂಟು ಸಾವಿರ ಡಾಲರ್ ತೆರಲು ತುದಿಗಾಲಿನಲ್ಲಿ ನಿಂತಿದ್ದಾರೆ. ಅಮೆರಿಕಾದ ಎಫ್.ಡಿ.ಎ. ಮಾತ್ರ ಇದಕ್ಕೆ ಯಾವ ಪುರಾವೆಯೂ ಇಲ್ಲ ಮಾತ್ರವಲ್ಲ, ಇದರಲ್ಲಿ ಅಪಾಯದ ಸಾಧ್ಯತೆಗಳಿವೆ ಎಂದು ಘೋಷಿಸಿದೆ.

ಜೀಯ್ನರ್ ಎಂಬಾತ ಆರೋಗ್ಯವಂತ ಮನುಷ್ಯರ ಮಲದ ಭಾಗವನ್ನು ಇನ್ನೊಬ್ಬ ವ್ಯಾಧಿಗ್ರಸ್ಥನ ಕರುಳಿಗೆ ವರ್ಗಾವಣೆ ಮಾಡುವ ಮೂಲಕ ಕೆಲವೊಂದು ರೋಗಗಳನ್ನು ತಡೆಗಟ್ಟಬಹುದೆಂದು ವಾದಿಸಿದ. ತನ್ನ ಮೇಲೆ ತಾನೇ ಮಾಡಿಕೊಂಡು ‘ಮಲವರ್ಗಾವಣೆ ವಿಧಾನ’ದಿಂದ ತನಗಿದ್ದ ಹೊಟ್ಟೆನೋವು ಕಡಿಮೆಯಾಯಿತೆಂದೂ ಸಾಧಿಸಿದ. ಆದರೆ ಇದು ಅತ್ಯಂತ ಅಪಾಯಕಾರಿಯೆಂದೂ, ಈ ಚಿಕಿತ್ಸೆಗೆ ಒಳಗಾದ ಇಬ್ಬರು ಔಷಧ ಪ್ರತಿರೋಧಕ ಬ್ಯಾಕ್ಟೀರಿಯಾ ಸೋಂಕಿನಿಂದ ನರಳಿ, ಅದರಲ್ಲೊಬ್ಬರು ಸತ್ತರೆಂದೂ ಹೇಳಿ ಇದನ್ನು ನಿಷೇಧಿಸಲಾಗಿದೆ.

ಸಿ.ಆರ್.ಐ.ಎಸ್.ಪಿ.ಆರ್. ಎಂಬ ಇನ್ನೊಂದು ತಂತ್ರಜ್ಞಾನ ಈಗ ಲಭ್ಯವಿದೆ. ಇದರಲ್ಲಿ ಮನುಷ್ಯರ ಜೀನೋಮ್ ಅನ್ನು ಬದಲಾಯಿಸುವ ಯತ್ನವಿದೆ. ಜೆಯ್‍ನರ್ ನಮ್ಮ ಜೀನೋಮ್‍ಗಳನ್ನು ನಾವೇ ಬದಲಾಯಿಸಿಕೊಳ್ಳಬಹುದು. ಅದರಿಂದ ಅನೇಕ ಅನುವಂಶಿಕ ರೋಗಗಳಿಗೆ ಪರಿಹಾರವಿದೆ ಎಂದು ಪ್ರಚಾರ ಮಾಡುತ್ತಾ ಅದಕ್ಕಾಗಿ ತಮ್ಮದೇ ಆದ ಕಿಟ್‍ಗಳನ್ನು ಮಾರಾಟಮಾಡಿದರು. ಆದರೆ ಇದೇ ಕ್ಷೇತ್ರದಲ್ಲಿ ಆಳವಾಗಿ ಸಂಶೋಧನೆ ನಡೆಸುತ್ತಿರುವ ತಜ್ಞರು ಇದರ ಅಪಾಯದ ಬಗ್ಗೆ ಗಂಭೀರವಾದ ಎಚ್ಚರಿಕೆಯನ್ನು ನೀಡಿದ್ದಾರೆ. ಸಿ.ಆರ್.ಐ.ಎಸ್.ಪಿ.ಆರ್. ಅತ್ಯಂತ ಹೊಸ ತಂತ್ರಜ್ಞಾನ. ಸ್ವಲ್ಪ ಎಡವಟ್ಟಾದರೂ ಜೀವಕೋಶಗಳು ಯದ್ವಾತದ್ವಾ ಬದಲಾಗಿ ಕ್ಯಾನ್ಸರ್ ಹುಟ್ಟಿಕೊಳ್ಳುವ ಸಾಧ್ಯತೆ ಇದೆ. ಇದು ಖಂಡಿತವಾಗಿ “ಮನೆಯಲ್ಲೇ ಮಾಡಿಕೊಳ್ಳಿ” ಚಿಕಿತ್ಸೆಯಾಗುವುದು ಸಾಧ್ಯವಿಲ್ಲ. ಇವೆಲ್ಲಾ ತೀರಾ ಬೇಜವಾಬ್ದಾರಿ ಘೋಷಣೆಗಳು ಎಂಬ ಟೀಕೆ ವ್ಯಕ್ತವಾಗಿದೆ.

ಈ ಬಯೋ ಹ್ಯಾಕಿಂಗ್‍ಗಳು ಕಾನೂನುಬದ್ಧವೇ?

ಈಗಿರುವ ಕಾನೂನು ಕಟ್ಟಳೆಗಳು ಬಯೋ ಹ್ಯಾಕಿಂಗ್ ಅನ್ನು ತಡೆಯಲು ಸಮರ್ಥವಾಗಿಲ್ಲ. ಏಕೆಂದರೆ ಈ ಹ್ಯಾಕಿಂಗ್ ಚಟುವಟಿಕೆಗಳು ಕಾನೂನಿನ ಬಿಳಿಯ ಆವರಣದಲ್ಲೂ ಬರದೆ, ಅಪರಾಧದ ಕಪ್ಪು ಪಟ್ಟಿಯಲ್ಲೂ ಸಿಗದೆ ಒಂದು ರೀತಿಯ ಬೂದುಬಣ್ಣದ ವಲಯದಲ್ಲಿವೆ. ಇದರ ಬಗ್ಗೆ ಎಫ್.ಡಿ.ಎ. ಅಸಮ್ಮತಿಯನ್ನು ಸೂಚಿಸಬಹುದು. ಆದರೆ ಇವುಗಳನ್ನು ನಿಷೇಧಿತ ಚಟುವಟಿಕೆ ಎನ್ನಲಾಗದು, ಅಪರಾಧ ಎಂದು ಕ್ರಮ ಕೈಗೊಳ್ಳಲಾಗದು. ಕಾನೂನನ್ನು ರಚಿಸುವ ತಜ್ಞರು ಇದನ್ನು ವ್ಯಾಖ್ಯಾನಿಸಲು ಪರದಾಡುತ್ತಿದ್ದಾರೆ.

ತರುಣರ ರಕ್ತದ ಪ್ಲಾಸ್ಮಾದ ವರ್ಗಾವಣೆಯಿಂದ ಜನತೆ ದೂರವಿರಬೇಕೆಂದು ಎಫ್.ಡಿ.ಎ. ಹೇಳಿದೆ. ಜೆಯ್‍ನರ್ ಅನುವಂಶಿಕತೆಯನ್ನೇ ಬದಲಾಯಿಸುವಂತೆ ಜೀನೋಮ್ ತಿದ್ದುವಿಕೆಯನ್ನು ಆರಂಭಿಸಿದ ಮೇಲೆ ಎಫ್.ಡಿ.ಎ. ಅದನ್ನು ಕಾನೂನಿನ ವಿರುದ್ಧ ಎಂದು ಸಾರಿತು. ಆದರೆ ಜೆಯ್‍ನರ್ ಅದಕ್ಕೆ ಸೊಪ್ಪು ಹಾಕದೆ ತನ್ನ ಚಟುವಟಿಕೆಯನ್ನು ಮುಂದುವರೆಸಿದ್ದಾರೆ. ಯಾವುದೇ ವೈದ್ಯಕೀಯ ಪದವಿ ಇಲ್ಲದೆ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಅವರ ಮೇಲೆ ಮೊಕದ್ದಮೆ ಹೂಡಲಾಗಿದೆ ಸಹ. ಅನೇಕ ಹ್ಯಾಕರ್‍ಗಳು ಇಂಥ ಚಟುವಟಿಕೆಗಳನ್ನು ಸರ್ಕಾರ ನಿಷೇಧಿಸಬಾರದೆಂದೂ, ಹಾಗೇನಾದರೂ ಮಾಡಿದಲ್ಲಿ ಕಳ್ಳ ಸಂಶೋಧನೆ ಮತ್ತು ದಂಧೆ ಹೆಚ್ಚಾಗುತ್ತದೆಂದೂ ವಾದಿಸಿದ್ದಾರೆ. ಅಲ್ಲದೆ ಅನೇಕ ಹ್ಯಾಕರ್‍ಗಳೂ ಆರೋಗ್ಯ ಭದ್ರತೆಯ ಬಗ್ಗೆ ಜಾಗೃತಿ ಹೊಂದಿರುವವರೆಂದೂ ವಾದಿಸಿದ್ದಾರೆ. ಒಟ್ಟಿನಲ್ಲಿ ಇಂಥ ಹ್ಯಾಕಿಂಗ್ ಚಟುವಟಿಕೆಗಳನ್ನು ನಿಷೇಧಿಸುವುದು ಸುಲಭವಲ್ಲ.

ಚಿರಂಜೀವಿಯಾಗುವ ಮಹತ್ವಾಕಾಂಕ್ಷೆ

ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಬಹಳ ಕಾಲ ತರುಣರಾಗಿಯೇ ಉಳಿಯಬೇಕೆಂಬ ಆಸೆಯಿಂದ ಹ್ಯಾಕರ್‍ಗಳಾಗುವವರು ಇದ್ದಾರೆ. ಆಬ್ರೆ ಡೆ ಗ್ರೆ ಎಂಬುವವರು ಸಾವಿರ ವರ್ಷದ ಆಯುಷ್ಯವನ್ನು ಗಳಿಸಿಕೊಳ್ಳುವುದು ಇನ್ನೇನು ಮನುಷ್ಯರ ಕೈಗೆಟುಕಲಿದೆ ಎಂದು ಹೇಳುತ್ತಾರೆ. ಹಾರ್ವರ್ಡ್ ವೈದ್ಯಕೀಯ ಶಾಲೆಯ ಪದವೀಧರರಾದ ಮೆಡ್ವೆಡಿಕ್ ಸಹ ಇಂಥ ಸಂಶೋಧನೆಗೆ ಅಗತ್ಯವಾದ ಅಪಾರ ಧನ ಸಹಾಯವನ್ನು ಸಮಾಜ ಹೊಂದಿಸುವುದಾದರೆ ಇದನ್ನು ಸಾಧಿಸಬಹುದು ಎಂದೇ ಹೇಳುತ್ತಾರೆ.

ದೀರ್ಘಾಯುಷ್ಯವನ್ನು ಬಯಸುವವರು ಎರಡು ದಿಕ್ಕಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಒಂದು, ದೇಹದಲ್ಲಿ ಬೆಳವಣಿಗೆ ನಿಂತು ವೃದ್ಧಾಪ್ಯಕ್ಕೆ ಕಾರಣವಾದ ಸೆನೆಸೆಂಟ್ ಜೀವಕೋಶಗಳನ್ನು ಹೊರಹಾಕಬಲ್ಲಂಥ ಆಹಾರ ಅಥವಾ ಔಷಧವನ್ನು ಸೇವಿಸುವುದು. ಇನ್ನೊಂದು, ಹೆಚ್ಚು ನಾಟಕೀಯವಾದ ಜೆನೆಟಿಕ್ ಎಂಜಿನಿಯರಿಂಗ್ ವಿಧಾನ. ಇದು ಇಲಿಗಳಲ್ಲಿ ಸ್ವಲ್ಪ ಮಟ್ಟಿಗೆ ಯಶಸ್ವಿಯಾಗಿದೆ. ಆದರೆ ಇದಕ್ಕೆಲ್ಲಾ ವೈದ್ಯಕೀಯ ಸಮುದಾಯದಿಂದ ಮತ್ತು ಅಧಿಕೃತ ಸಂಸ್ಥೆಗಳಿಂದ ಬೆಂಬಲ ಸಿಗುತ್ತಿಲ್ಲ ಎಂಬ ಹತಾಶೆ ಹ್ಯಾಕರ್‍ಗಳನ್ನು ಕಾಡುತ್ತಿದೆ.

ಪರೋಪಕಾರಿ ಹ್ಯಾಕರ್‍ಗಳು

ಅನೇಕ ಹ್ಯಾಕರ್‍ಗಳು ಯಾವುದೇ ಲಾಭದ ಆಸೆ ಇಲ್ಲದೆ, ಸ್ವಂತ ಆರೋಗ್ಯವನ್ನು, ಆಯುಷ್ಯವನ್ನು ಹೆಚ್ಚಿಸಿಕೊಳ್ಳುವ ಮಹತ್ವಾಕಾಂಕ್ಷೆಯಿಲ್ಲದೆ ಜಗತ್‍ಕಲ್ಯಾಣಕ್ಕೆ ಎಂಬಂತೆ ಹ್ಯಾಕಿಂಗ್ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಆದ್ದರಿಂದಲೇ ಇಂಥವರಿಗೆ ಕಾನೂನಿನ ಅಡೆತಡೆ ಇಲ್ಲದೆ ಸಂಶೋಧನೆಗೆ ಅವಕಾಶ ನೀಡಬೇಕು ಎಂಬ ವಾದ ಬಲವಾಗಿದೆ. ವಿಜ್ಞಾನ ಜನತಾಂತ್ರಿಕವಾಗಬೇಕು, ಜ್ಞಾನ ಎಲ್ಲರಿಗೂ ಸಿಗಬೇಕು, ಪರಿಣತರಲ್ಲದವರೂ ಸಂಶೋಧನೆ ಮಾಡಲು ಅವಕಾಶ ಇರಬೇಕೆಂದು ಅನೇಕರು ಪ್ರತಿಪಾದಿಸಿದ್ದಾರೆ.

ಅನೇಕ ರೀತಿಯ ಬೂಷ್ಟುಗಳಿಂದ ಪೀಠೋಪಕರಣವನ್ನು ತಯಾರಿಸುವುದು, ಒಣಗಿಹೋದ ಹೂವಿನ ದಳಗಳ ಡಿ.ಎನ್.ಎ. ಇಂದ ಮತ್ತೆ ಪರಿಮಳವನ್ನು ಉಂಟುಮಾಡುವುದು, ಕಪ್ಪೆಯ ಜೀವಕೋಶದಿಂದ ಕೃತಕ ಮಾಂಸವನ್ನು ಕಲಾಪ್ರದರ್ಶನಗಳಿಗಾಗಿ ತಯಾರಿಸುವುದು, ಕೊಳೆಯಬಲ್ಲ ಪ್ಲಾಸ್ಟಿಕ್‍ಗಳನ್ನು ಉತ್ಪಾದಿಸುವುದು ಇಂಥ ಚಟುವಟಿಕೆಗಳನ್ನು ಅನೇಕರು ಮಾಡಿಕೊಂಡಿದ್ದಾರೆ. ಹಾಗಾಗಿ ಇವರನ್ನೆಲ್ಲಾ ನಿಷೇಧಿಸಬಾರದು ಎಂಬ ದನಿಯೂ ಗಟ್ಟಿಯಾಗಿದೆ.

ಆತಂಕದ ಬೆಳವಣಿಗೆಯೇ?

ರಕ್ತದ ಪ್ಲಾಸ್ಮಾದ ವರ್ಗಾವಣೆ, ಚಿರಂಜೀವಿಗಳಾಗಲು ಜಿನೋಮ್ ತಿದ್ದುವುದು ಇವುಗಳನ್ನೆಲ್ಲಾ ನೋಡಿದಾಗ ನಮಗೆ ಹೀಗೆ ನಿಸರ್ಗದೊಂದಿಗೆ ಚೆಲ್ಲಾಟ ನಡೆಸುವುದು ಬೇಡ ಅನಿಸುತ್ತದೆ. ವಿಚಿತ್ರ ಪ್ರಯೋಗಗಳನ್ನು ನೋಡಿದಾಗ ತಲೆ ತಿರುಗಿದಂತಾಗುತ್ತದೆ. ಆದರೆ ನಿಜಕ್ಕೂ ಹೇಳಬೇಕೆಂದರೆ ಮನುಷ್ಯನು ಅನಾದಿ ಕಾಲದಿಂದಲೂ ಪ್ರಕೃತಿಯನ್ನು ಪಳಗಿಸುತ್ತಲೇ ಬಂದಿದ್ದಾನೆ ಅಲ್ಲವೇ?

ಉದಾಹರಣೆಗೆ ತನ್ನಷ್ಟಕ್ಕೇ ಬೆಳೆಯುತ್ತಿದ್ದ ಧಾನ್ಯಗಳನ್ನು ಸೇವಿಸುತ್ತಿದ್ದ ಮಾನವನು, ಕೃಷಿ ಆರಂಭಿಸಿದ್ದು, ಒಂದು ನಿಸರ್ಗದ ಪ್ರಕ್ರಿಯೆಯೊಳಗೆ ಮಧ್ಯಪ್ರವೇಶ ಮಾಡಿದಂತೆಯೇ. ಅಷ್ಟೇಕೆ ಕೆಲವೇ ದಶಕಗಳ ಹಿಂದೆ ನಮಗೆ ಪ್ರನಾಳ ಶಿಶು ಎಂಬ ಪರಿಕಲ್ಪನೆಯೇ ವಿಚಿತ್ರವೆನಿಸಿತ್ತು. ಕೃತಕ ಪ್ರಕ್ರಿಯೆ ಎನಿಸಿತ್ತು. ಆದರೆ ಇಂದು ಅದು ಅನೇಕ ಮಕ್ಕಳಿಲ್ಲದ ದಂಪತಿಗಳಿಗೆ ಸಂತಾನ ಒದಗಿಸಿದೆ ಎಂದು ನಾವು ಅದರ ಬಗ್ಗೆ ಕೃತಜ್ಞರಾಗಿದ್ದೇವೆ. ಕಳೆದ ಒಂದೆರೆಡು ಸಾವಿರ ವರ್ಷಗಳಲ್ಲಿ ನಾವು ಅದೆಷ್ಟು ಬದಲಾಗಿದ್ದೇವಲ್ಲ! ಮಾನವ ನಾಗರಿಕತೆ ಎಂದೂ ನಿಶ್ಚಲವಲ್ಲ. ಈಗಾಗಲೇ ನಾವು ಹೆಚ್ಚು ವರ್ಷ ಬದುಕುತ್ತಿದ್ದೇವೆ, ಸರಾಸರಿ ಎತ್ತರ ಹೆಚ್ಚಾಗಿದೆ, ಖಂಡಾಂತರವೂ, ಧರ್ಮಾಂತರವೂ, ವರ್ಣಾಂತರವೂ ಆದ ದಾಂಪತ್ಯಗಳು ಸುಖವಾಗಿ ನಡೆಯುತ್ತಿವೆ. ಹಾಗಾಗಿ ನಾವು ಬದಲಾವಣೆಯನ್ನಂತೂ, ಅದೆಷ್ಟೇ ತೀವ್ರಗಾಮಿಯಾಗಿದ್ದರೂ, ವಿರೋಧಿಸಲಾಗದು.

ಇಷ್ಟಾಗಿ ಬಯೋ ಹ್ಯಾಕಿಂಗ್ ಇದೆಲ್ಲಕ್ಕಿಂತ ವಿಪರೀತವಾದದ್ದೇ, ಅತಿಯಾದದ್ದೇ ಎಂಬ ಆತಂಕವೂ ಇದೆ. ಜೈವಿಕ ಹ್ಯಾಕಿಂಗ್‍ನಿಂದ ಶ್ರೀಮಂತರು ಮಾತ್ರ ‘ಅತಿಮಾನವ’ರಾಗಬಹುದೇ ಎಂಬ ಪ್ರಶ್ನೆಯೂ ಹುಟ್ಟುತ್ತದೆ. ಮಾನವ ಕುಲ ತೀರಾ ಭಿನ್ನವಾಗಿ ರೂಪುಗೊಂಡರೆ ಅದರಿಂದ ಉಂಟಾಗುವ ಸಾಮಾಜಿಕ-ಸಾಂಸ್ಕತಿಕ ಪರಿಣಾಮಗಳು ಎಂಥವು, ಅದಕ್ಕೆ ಮಾನವ ನಾಗರಿಕತೆ ಸಿದ್ಧವಾಗಿದೆಯೇ ಎಂಬುದು ಒಂದು ದೊಡ್ಡ ಪ್ರಶ್ನೆ. ಯದ್ವಾ ತದ್ವಾ ಬದಲಾದ ತಳಿಯಿಂದ ಏನೆಲ್ಲಾ ವ್ಯಾಧಿಗಳು, ಸಮಸ್ಯೆಗಳು ಹುಟ್ಟಿಕೊಳ್ಳಬಹುದು ಎಂಬುದೂ ಆತಂಕಪಡುವ ಸಂಗತಿಯೇ.

ಇದೆಲ್ಲವನ್ನೂ ಮನುಕುಲ ಇಂದಲ್ಲ ನಾಳೆ ಉತ್ತರಿಸಿಕೊಳ್ಳಲೇ ಬೇಕು. ವಾಸ್ತವದಿಂದ ಪಲಾಯನ ಮಾಡಲು ಸಾಧ್ಯವಿಲ್ಲ.
ಆಧಾರ: ವೋಕ್ಸ್ ಜಾಲತಾಣ

Leave a Reply

Your email address will not be published.