ಬರಹಗಾರನ ಮನೋಧರ್ಮ ಬಿಂಬಿಸುವ ಕೃತಿ

ವಸುಧೇಂದ್ರ ‘ಕೆಂಪು ಗಿಣಿ’ಯಂತಹ ಕತೆಗಳನ್ನು ಬರೆದು, ಜಾಗತೀಕರಣದ ಕೇಡಿಗತವನ್ನು, ಅದರ ರೂಕ್ಷ ಕ್ರೌರ್ಯವನ್ನು ಈಗಲೂ ಓದುಗರು ಕೆಂಧೂಳು ಒದರಿಕೊಳ್ಳುವಂತೆ ಸಂವೇದನೆ ಉಂಟು ಮಾಡಿದ್ದಾರೆ. ಆದರೆ, ನಿಮ್ಮ ನಿಕಟ ಓದಿನ ಗ್ರಹಿಕೆಯಂತೆ ‘ತೇಜೋ ತುಂಗಭದ್ರ’ ಕಾದಂಬರಿಯಲ್ಲಿ ವಸುಧೇಂದ್ರ ಸನಾತನ ಮೌಲ್ಯಗಳನ್ನು ಮನ್ನಿಸುವಂತಿದ್ದರೆ, ನಿಜಕ್ಕೂ ಪ್ರತಿಗಾಮಿ ನಡೆಯೇ ಸರಿ.

ಆದರೆ ಕೃತಿಯ ವಸ್ತು ಮಧ್ಯಕಾಲೀನ ಕಾಲಘಟ್ಟವೇ ಆಗಿ ಆಯ್ಕೆಗೊಂಡಿರುವುದು ಯಾಕೆ? ಗತಮುಖಿಯಾದ ವಸ್ತು ಸಹಜವಾಗಿ ಮೇಲ್ವರ್ಗದ ನೆಲೆಯ ನಿರೂಪಣೆ ಆಗಿರಬಹುದೆ?

ಕಾದಂಬರಿಕಾರನ ವಸ್ತು ಆಯ್ಕೆಯು ಕೂಡ ಆತನ ಮನೋಧರ್ಮವನ್ನು ಎತ್ತಿಹಿಡಿಯುತ್ತದೆ ಅಲ್ವೆ?

ವಸ್ತು ಗತಕಾಲದ್ದಾದರೂ ಬರಹಗಾರ ವರ್ತಮಾನಿಗನಾಗಿ, ಶೋಧಿಸುವ ವಸ್ತುವಿಗೂ ಕೃತಿಕಾರನ ಕಾಲದ ಮೌಲ್ಯಗಳಿಗೂ ತಾತ್ವಿಕ ಸಂಘರ್ಷ ಏರ್ಪಡದಿದ್ದರೆ, ಕೃತಿ ಗತಮುಖಿಯಷ್ಟೇ ಅಲ್ಲ, ಪ್ರತಿಗಾಮಿಯೂ ಆಗುತ್ತದೆ. ಸೃಜನಶೀಲ ಕೃತಿ ಅಪ್ಪಟ ವೈಚಾರಿಕ ಕೃತಿಯಾಗಿರಬೇಕಿಲ್ಲ. ಅದರೆ ಮಾನವ ಅನುಭವಗಳು ಶೋಧಿತವಾಗುವಾಗ, ಮಾನವೀಯತೆಯ ಪಕ್ಷಪಾತಿಯಾಗಲೇ ಬೇಕು.

ನಿಜವಾದ ಸೃಜನಶೀಲತೆ ಮನುಷ್ಯರು ಕಟ್ಟಿಕೊಳ್ಳುವ ಏನೆಲ್ಲಾ ಚೌಕಟ್ಟಿನ ಕ್ರೌರ್ಯ, ಕೀಳುತನ, ದೌರ್ಬಲ್ಯ ಇತ್ಯಾದಿಗಳನ್ನು ಹುಡುಕುತ್ತದೆ. ಅದೇ ಕಾಲಕ್ಕೆ ತಣ್ಣಗೆ ನೊಂದು ನೋವಿಗೆ ಒಳಗಾದವರಿಗೆ ಮಿಡಿಯುತ್ತದೆ. ಹೀಗಿಲ್ಲದಿದ್ದರೆ ಕೃತಿ ರಚನೆ ಹಾಗೂ ಓದು ಅನವಶ್ಯಕ ಎನಿಸುತ್ತದೆ.

-ದೊಡ್ಡಿ ಶೇಖರ್, ಮಂಡ್ಯ.

ಬೇಡ ಎಂದರೂ ಬಿಚ್ಚಿಕೊಳ್ಳುವ ಮುಖವಾಡಗಳು

ವಿಮರ್ಶೆ ಎನ್ನುವ ಪದವೇ ಮರೆತುಹೋಗಿರುವಾಗ ಅದು ರಾಜಮಾನೆಯವರ ಬರಹದಿಂದ ಸ್ಮರಣೆಗೆ ಬಂದಿತು. ವಸುಧೇಂದ್ರ ಅವರ ಕಾದಂಬರಿ ನಾನು ಓದಿಲ್ಲ. ಆದರೆ, ತಾವು ವಿಮರ್ಶೆಗಾಗಿ ಕೋಟ್ ಮಾಡಿದ ನಿದರ್ಶನಗಳನ್ನು ಗಮನಿಸಿದಾಗ ನಗು ಬರುತ್ತೆ.

ಈ ರೀತಿ ಪುರೋಗಾಮಿ ಅಂತರಾತ್ಮದ ಪ್ರಜ್ಞಾನಶೀಲ ಮುಖ ಮನಸ್ಸುಗಳು ನಮ್ಮ ಮಧ್ಯೆ ಸಾಕಷ್ಟು ಹುಟ್ಟಿಕೊಂಡಿವೆ. ಸಾಹಿತ್ಯಿಕ ವಾಣಿಜ್ಯೀಕರಣ ಮತ್ತು ಸಾಂಸ್ಕೃತಿಕ ರಾಜಕೀಕರಣದ ಮಧ್ಯೆ ಸರಿಯಾಗಿ ಗಮನಿಸುತ್ತಿಲ್ಲ. ಗಮನಿಸಿದರೂ ಹೇಳುವ ಗೋಜಿಗೆ ಹೋಗುತ್ತಿಲ್ಲ. ವಿಮರ್ಶಕರು ಆ ಉಸಾಬರಿಗೆ ಹೋಗದೆ ವಸ್ತುಸ್ಥಿತಿಗೆ ಇಳಿದಿದ್ದಾರೆ. ಈ ಕಾರಣಕ್ಕಾಗಿ ಅವರ ಬರವಣಿಗೆಯನ್ನು ಗೌರವಿಸುವೆ.

ಸಾಂಸ್ಕೃತಿಕ ಸೃಜನಶೀಲ ಸಮಕಾಲೀನ ಒತ್ತಡದಿಂದಾಗಿ ನಮ್ಮಲ್ಲಿ ಈ ರೀತಿಯ ಅನೇಕರು ಪ್ರಗತಿಶೀಲತೆಯೊಂದಿಗೆ ಬರೆದರೂ ಮಾತನಾಡಿದರೂ ಅಂತರಂಗದಲ್ಲಿ ತದ್ವಿರುದ್ಧತೆ ಇರುತ್ತದೆ. ಅದಕ್ಕೂ ಒಂದು ಅವಕಾಶ ದೊರೆತಾಗ ಒಳಗಿನಿಂದ ಗುದ್ದಿಕೊಂಡುಬಂದು ಸ್ಫೋಟಗೊಳ್ಳುತ್ತದೆ. ಸ್ಫೋಟಿಸಿದ ಮನಸ್ಸಿಗೆ ಧನ್ಯತೆಯ ಭಾವ ಉಂಟಾದರೂ ಸ್ಫೋೀಟದ ಪರಿಣಾಮದ ನಂತರದ ಬೆಳವಣಿಗೆಗಳು ಲೇಖಕನ ಸೃಜನಶೀಲತೆಯನ್ನೇ ನುಂಗಿಬಿಡುತ್ತವೆ. ಇಂತಹ ಮುಖವಾಡಗಳು ಬೇಡ ಎಂದರೂ ತಾವೇ ಬೆತ್ತಲಾಗುತ್ತವೆ.

-ಕೆ.ಎನ್.ದೊಡ್ಡಮನಿ, ಬೆಂಗಳೂರು.

ಭಿನ್ನ ಆಲೋಚನೆಯ ದಿಟ್ಟ ವಿಮರ್ಶಕ

ಸುಭಾಷ್ ರಾಜಮಾನೆ ಅವರ ವಿಮರ್ಶೆಯನ್ನು ಆಸಕ್ತಿಯಿಂದ ಓದುತ್ತಿರುವೆ. ಈಗಿನ ಕಾಲದಲ್ಲಿ ತುಂಬಾ ಭಿನ್ನವಾಗಿ ಆಲೋಚಿಸಿ, ಅತ್ಯಂತ ದಿಟ್ಟತನದಿಂದ ಬರೆಯುತ್ತಿರುವ ವಿಮರ್ಶಕ ಅವರು.

‘ತೇಜೋ ತುಂಗಭದ್ರಾ’ ಕುರಿತು ತುಂಬಾ ಸ್ವೋಪಜ್ಞ ಮಾತುಗಳನ್ನು ಅವರು ಬರೆದಿದ್ದಾರೆ. ಅತ್ಯಂತ ಜನಪ್ರಿಯವಾದ, ಹಲವು ಮುದ್ರಣ ಕಂಡ ಈ ಕೃತಿಯನ್ನು ಹೀಗೂ ಓದಬಹುದು ಎಂದು ಅವರು ತಿಳಿಸಿಕೊಟ್ಟಿದ್ದಾರೆ. ಅವರಿಗೆ, ತಮಗೆ ಅಭಿನಂದನೆಗಳು. ಅವರ ಲೇಖನದಲ್ಲಿ ಎರಡು ಕಡೆ ತೆಂಕ ಎಂಬ ಶಬ್ದ ಬರುತ್ತದೆ.

ಅವರೇ ಹಾಗೆ ಬರೆದರೋ ಅಥವಾ ತಪ್ಪಾಗಿ ಮುದ್ರಿತವಾಗಿದೆಯೋ ತಿಳಿಯೆ. ಅದು ಲೆಂಕ ಎಂದು ಆಗಬೇಕು.

ರಾಜನಿಗಾಗಿ ಪ್ರಾಣ ಕೊಡುವವರಿಗೆ ಲೆಂಕವಾಳಿ, ಜೋಳವಾಳಿ ಎಂದು ಕರೆಯುತ್ತಿದ್ದರು. ಶಾಸನಗಳಲ್ಲಿ ಇಂತಹ ಲೆಂಕವಾಳಿ ಮತ್ತು ಜೋಳವಾಳಿಗಳ ಪ್ರಸ್ತಾಪ ಸಿಗುತ್ತದೆ. ತೇಜೋ… ಕಾದಂಬರಿಯ ಕೇಶವ ಅಂಥ ಲೆಂಕವಾಳಿ.

-ಪದ್ಮರಾಜ ದಂಡಾವತಿ, ಬೆಂಗಳೂರು.

ಕೆಲವು ಅನುವಾದ ದೋಷಗಳು

ಏಪ್ರಿಲ್ ಸಂಚಿಕೆಯಲ್ಲಿ ಪ್ರಕಟವಾದ ಪ್ರತಾಪ್ ಭಾನು ಮೆಹ್ತಾ ಅವರ ಪತ್ರದ ಅನುವಾದ (ಅನು: ಇಸ್ಮಾಯಿಲ್ ಬಾವಾಜಿ) ಕುರಿತು: We ಟive iಟಿ ಛಿomಠಿಟiಛಿಚಿಣeಜ ಣimes ಅನ್ನುವುದು, ನಾವು ಸಂಕೀರ್ಣ ಕಾಲದಲ್ಲಿ ವಾಸಿಸುತ್ತಿದ್ದೇವೆ ಎಂದು ಅನುವಾದಗೊಂಡದ್ದು ಹೇಗೆ?! ‘ನಾವು ತೊಡಕುತೊಡಕಿನ (ಅಥವಾ, ಜಟಿಲವಾದ) ಕಾಲದಲ್ಲಿ ಬದುಕಿದ್ದೇವೆ/ಇದ್ದೇವೆ’ ಎಂಬಂಥದಾಗಬೇಕು ಅದು. ಅಥವಾ, ಇನ್ನೂ ಸರಳವಾಗಿ, ಮೊನಚಾಗಿ ‘ನಮ್ಮಕಾಲ ಗೋಜಲು, ಗೊಂದಲದ ಕಾಲ’ ಎಂದಾಗಬಹುದು. ಇಲ್ಲಿ ಟive iಟಿ ಎಂದರೆ ಖಂಡಿತವಾಗಿಯೂ ವಾಸಿಸುವುದು ಎಂಬರ್ಥ ಬರುವುದಿಲ್ಲ. ಮೇಲಾಗಿ, ಛಿomಠಿಟex = ಸಂಕೀರ್ಣ. ಅomಠಿಟiಛಿಚಿಣeಜ = ಜಟಿಲ, ಗೋಜಲು… ಹೀಗೆ. ಕಾಂಪ್ಲೆಕ್ಸ್ ಅನ್ನುವುದು ಬೇರೆ, ಕಾಂಪ್ಲಿಕೇಟೆಡ್ ಅನ್ನುವುದು ಬೇರೆ.

-ರಘುನಂದನ, ಬೆಂಗಳೂರು.

ಭೌತಿಕ-ಬೌದ್ಧಿಕ ಗುಣಮಟ್ಟ

ಸಮಾಜಮುಖಿ ಸದ್ಯದ ಕನ್ನಡ ಪತ್ರಿಕಾಲೋಕದ ವಿಸ್ಮಯ. ಈ ಸಾಮಾಜಿಕ ಜಾಲತಾಣದ ಸ್ಪರ್ಧೆಯಲ್ಲಿ ಗೆದ್ದು, ಭೌತಿಕ – ಬೌದ್ಧಿಕ ಎರಡರಲ್ಲೂ ಗುಣಮಟ್ಟದ ಸಂಚಿಕೆಗಳನ್ನು ಕೈಗಿಡುತ್ತಿರುವ ತಾವು ಕತೆ ಪ್ರಕಟಿಸುವ ಮೂಲಕ ಮತ್ತೊಂದು ಪರಿಕ್ರಮ ಸಾಧಿಸಿದಿರಿ. ಅಭಿನಂದನೆಗಳು.

-ಡಿ.ಎಂ.ನದಾಫ, ಅಫಜಲಪುರ.

ಓದಿದೆ. ಪಕ್ವ ಒಳನೋಟಗಳಿರುವ ಬರೆಹ.

-ಮೂಡ್ನಾಕೂಡು ಚಿನ್ನಸ್ವಾಮಿ, ಬೆಂಗಳೂರು.

ಸಮಾನತೆಯ ಹೆಸರಲ್ಲಿ…!

ಏಪ್ರಿಲ್ 2021ರ ಸಮಾಜಮುಖಿಯಲ್ಲಿ ನಮ್ಮ ನಾಡಿನ ಪ್ರಖರ ವಿಚಾರವಾದಿ, ಎಡಪಂಥದ ಹರಿಕಾರ, ಅಭಿವೃದ್ಧಿ ಅರ್ಥಶಾಸ್ತ್ರಜ್ಞರೊಬ್ಬರು ತಮ್ಮ ಪತ್ರದಲ್ಲಿ ನನ್ನ ಹೆಸರನ್ನು ಉಲ್ಲೇಖಿಸಿದ್ದಾರೆ. “ಸಮಾಜಮುಖಿ ಪತ್ರಿಕೆಯ ಫೆಬ್ರವರಿ 2021ರ ಸಂಚಿಕೆಯಲ್ಲಿನ `ಜಾತ್ಯತೀತತೆ’ (ಧಾರ್ಮಿಕ ಪ್ರಣಾಳಿಕೆ) ನಡುವಿನ ಭಿನ್ನತೆಯೇ ತಿಳಿಯದೆ ವಿಷಪೂರಿತ ಹಿಂದುತ್ವದ ಬಗ್ಗೆ ಸಾಹಿತ್ಯ ಸಂಸ್ಥೆಯೊಂದರ ಮುಖಂಡರು ಬಿಟ್ಟಿರುವ ಭೀಷಣ ಭಾಷಣ ಪ್ರವಚನ ರೀತಿಯ ಲೇಖನವನ್ನು ನೋಡಿದರೆ ಸಾಕು ಇದು ಅರ್ಥವಾಗುತ್ತದೆ’’ ಎಂದಿದ್ದಾರೆ. ಅವರು ನನ್ನ ಲೇಖನವನ್ನು ನೋಡಿದ್ದಾರೆಯೇ ವಿನಾ ಓದಿಲ್ಲ ಎಂಬುದು ಅರ್ಥವಾಗುತ್ತದೆ.

ನನ್ನ ಲೇಖನದ ಯಾವುದಾದರೂ ಸಂಗತಿಯನ್ನು ತರ್ಕಬದ್ಧವಾಗಿ ಖಂಡಿಸಿ ಇದು ವಿಷಪೂರಿತ ಹಿಂದುತ್ವ ಎಂದಿದ್ದರೆ ಅವರ ವಿದ್ವತ್ತಿನ ಬಗ್ಗೆ ಗೌರವ ಮೂಡುತ್ತಿತ್ತು. ಆದರೆ, ಅವರು ಬಳಸಿರುವ `ಭೀಷಣ ಭಾಷಣ ಪ್ರವಚನ’ ಪದಗಳೇ ಅವರ ವಿಷಪೂರಿತ ಅಸ್ವಸ್ಥ ಮನಸ್ಸಿಗೆ ಕನ್ನಡಿಯಾಗಿದೆ. ಭಾಷಣ, ಪ್ರವಚನಗಳು ಭಾರತದ ಅತ್ಯುನ್ನತ ಸಾಂಸ್ಕøತಿಕ ಮೌಲ್ಯಗಳು ‘ಧರ್ಮ ಒಂದು ಅಫೀಮು’ ಎಂಬ ಮೌಢ್ಯದ ಅಫೀಮಿನ ಈ ಜನಕ್ಕೆ `ಮತ-ಧರ್ಮ’ಗಳ ನಡುವಿನ ವ್ಯತ್ಯಾಸ ತಿಳಿಯದು. ಹಾಗಾಗಿಯೇ ಭಾರತದ ಧಾರ್ಮಿಕ ಮೌಲ್ಯಗಳನ್ನು ಕಳೆದುಕೊಂಡು ಅಧರ್ಮಿಗಳಾದರು. ಅವರು ‘ಭೀಷಣ’ ಯಾವುದೆಂದು ತಿಳಿಸಿದರೆ ಶಿಷ್ಯನಂತೆ ತಿದ್ದಿಕೊಳ್ಳಲು ನಾನು ಸಿದ್ಧನಿದ್ದೇನೆ. ಏಕೆಂದರೆ ಇವರಂತೆ ಮೇಲ್ಜಾತಿಯ ಅಹಂಕಾರದ ಗುರುತ್ವದ “ಸ್ಟ್ಯಾಂಡರ್ಡ್’’ ನನಗಿಲ್ಲ. “ಕೀಳಿಂಗಲ್ಲದೆ ಹಯನು ಕರೆಯದು ಕಾಣಾ ರಾಮನಾಥ’’ ಎಂಬ ದಾಸ ಕುಲದವನು ನಾನು. ಹಾಗಾಗಿ ತಪ್ಪುಗಳನ್ನು ತಿದ್ದಿಕೊಳ್ಳಲು ಸದಾ ಸಿದ್ಧನಿದ್ದೇನೆ. ಹಾಗಾಗಿ ಅವರು ನನ್ನ ಲೇಖನದಲ್ಲಿ ಇರುವ `ವಿಷಪೂರಿತ ಹಿಂದುತ್ವ’ `ಭೀಷಣ’ ಸ್ಪಷ್ಟಪಡಿಸಿ ಬರೆಯಲಿ.

ಇನ್ನು ಅವರು ಸಂಪಾದಕರಿಗೆ ಬರೆದಿರುವ ‘ಕಾನ್ಫಿಡೆನ್ಶಿಯಲ್ ಪತ್ರ’ದಲ್ಲಿ ತಾವು ಕಳಿಸಿದ್ದ ಲೇಖನವನ್ನು ಪ್ರಕಟಿಸದಿರುವುದನ್ನು ಪ್ರಸ್ತಾಪಿಸುತ್ತ “ಈಗ ಪ್ರಕಟವಾಗಿರುವ ಪ್ರತಿಕ್ರಿಯೆಗಳಿಗಿಂತ ಲೋ ಸ್ಟ್ಯಾಂಡರ್ಡ್ ಪ್ರತಿಕ್ರಿಯೆಯಾಗಿತ್ತಾ ಅದು?’’ ಎಂದು ಪ್ರಶ್ನಿಸಿದ್ದಾರೆ. ಫೆಬ್ರವರಿ 2021ರ ಸಂಚಿಕೆಯಲ್ಲಿ ಪ್ರಕಟವಾದ ಎಲ್ಲಾ ಪ್ರತಿಕ್ರಿಯೆಗಳಿಗಿಂತ ತಮ್ಮ ಲೇಖನ ‘ಸ್ಟ್ಯಾಂಡರ್ಡ್’ ಎನ್ನುವ ಇಂಥ ಬೌದ್ಧಿಕ ಅಹಂಕಾರ ನನ್ನಂಥ ದಾಸಕುಲದವರಿಗೆ ಬರಲು ಹೇಗೆ ಸಾಧ್ಯ? ಆದರೂ ಇಂಥ ಬುದ್ಧಿಜೀವಿಗಳು ಬಾಯಲ್ಲಿ ಸಮಾನತೆಯನ್ನು ಹೇಳುತ್ತಾ ಆಚರಣೆಯಲ್ಲಿ ಅಸಮಾನತೆಯನ್ನು ಸೃಷ್ಟಿಸುವವರೆಂಬುದು ಮನವರಿಕೆಯಾಯಿತು. ಬಹುತ್ವದ ಬಗ್ಗೆ ರೀಲು ಬಿಡುವ ಇವರು ‘‘ಆರ್.ಎಸ್.ಎಸ್. ಎಂಬ ಸಂಸ್ಥೆ ಅಸ್ತಿತ್ವದಲ್ಲಿ ಇರುವುದೇ ತಪ್ಪು’’  ಎಂದಿರುವುದು ಫ್ಯಾಸಿಸಂ ಅಲ್ಲದೇ ಮತ್ತೇನು?

ಶ್ರೀಯುತರು 1969ರಿಂದ 1974ರವರೆಗೆ ಆರ್.ಎಸ್.ಎಸ್. ಕಾರ್ಯಕರ್ತರಾಗಿದ್ದರಂತೆ. ಆದರೆ, ಅಲ್ಲಿನ ಕಾರ್ಯಕರ್ತರಲ್ಲಿ ಇರುವ ಯಾವ ಧ್ಯೇಯಾದರ್ಶಗಳೂ ಇವರಲ್ಲಿ ಕಾಣುವುದಿಲ್ಲ. ಅಲ್ಲಿ ಏನನ್ನು ಕಲಿತರೋ ಗೊತ್ತಿಲ್ಲ. ದಲಿತೋದ್ಧಾರವೆಂದರೆ ದಲಿತರ ಹೆಸರಲ್ಲಿ ಹಣ, ಆಸ್ತಿ, ಕೀರ್ತಿ ಗಳಿಸುವುದಲ್ಲ, ಅವರ ಕಣ್ಣೀರನ್ನು ಒರೆಸುವುದು ಎಂದು ನನಗೆ ಆರ್.ಎಸ್.ಎಸ್. ಕಲಿಸಿದೆ.

ನನ್ನ ಹಳ್ಳಿಯಲ್ಲಿ ಕೆಲವರ ನಯವಂಚನೆಗಳನ್ನು ಕುರಿತಂತೆ ಹೇಳುವಾಗ ‘‘ಬಾಯಲ್ಲಿ ಬಸಪ್ಪ ಎದೆಯಲ್ಲಿ ವಿಷಪ್ಪ’’ಎನ್ನುತ್ತಿದ್ದರು. ಆ ಗಾದೆಯ ಮಾತಿನ ಮಹತ್ವ ಇಂಥವರನ್ನು ಕಂಡಾಗ ಹೆಚ್ಚು ಅರ್ಥವಾಗಿದೆ.

-ಡಾ.ಬಿ.ವಿ.ವಸಂತಕುಮಾರ್, ಮೈಸೂರು.

Leave a Reply

Your email address will not be published.