ಬರ್ನಿಂಗ್ (2018) ಸದ್ಯದ ಬದುಕು, ಅಸ್ತಿತ್ವ ಮತ್ತು ಸೋಸಿಯಾಲಜಿ ಕುರಿತ ಪ್ರಶ್ನೆಯ ರೂಪಕ.

‘ಬಾರ್ನ್ ಬರ್ನಿಂಗ್’ ಎಂಬ ಸಣ್ಣ ಕಥೆಯಾಧರಿಸಿದ ಈ ಕೊರಿಯಾ ಚಿತ್ರ 2018ರ ಕಾನ್ ಚಿತ್ರೋತ್ಸವದಲ್ಲಿ ಅಧಿಕೃತ ಸ್ಪರ್ಧೆಯಲ್ಲಿತ್ತು. ಇದು ಮೊತ್ತಮೊದಲಬಾರಿಗೆ ಕೊರಿಯಾ ದೇಶವನ್ನು ಆಸ್ಕರ್‍ನಲ್ಲಿ ವಿದೇಶೀ ಚಿತ್ರ ವಿಭಾಗದಲ್ಲಿ ಪ್ರತಿನಿಧಿಸಿದೆ.

ಶ್ಯಾದ ರಾಷ್ಟ್ರಗಳ ಪೈಕಿ ಉತ್ತರ ಮತ್ತು ದಕ್ಷಿಣ ಕೊರಿಯಾಗಳು ಅತ್ಯಂತ ವಿಲಕ್ಷಣ ಚರಿತ್ರೆ ಮತ್ತು ವರ್ತಮಾನವನ್ನು ಹೊಂದಿವೆ. ಅಲ್ಲಿನ ಚರಿತ್ರೆ ಮತ್ತು ಅದಕ್ಕೆ ಅನುರೂಪವಾಗಿ ಒದಗಿರುವ ಕ್ರಿಯಾಶೀಲ ವೈವಿಧ್ಯದ ಅಭಿವ್ಯಕ್ತಿಗಳು ನಮಗೆ ಇಂತಹ ಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟಿವೆ. ವಸಾಹತೋತ್ತರ ಕೊರಿಯಾದ ಸಮಾಜದಲ್ಲಿ ಬಹಳ ಪ್ರಧಾನವಾಗಿ ಕಾಣಿಸುವ ‘ಹಿಂಸೆ’ ಅಲ್ಲಿನ ವರ್ತಮಾನದ ಅನುಷಂಗಿಕ ಗುಣವೆಂಬಂತೆ ಕಾಣಿಸುತ್ತದೆ. ಅದು ಅಲ್ಲಿನ ಸೃಜನಶೀಲ ರೂಪವಾದ ಸಾಹಿತ್ಯ ಮತ್ತು ಸಿನಿಮಾಗಳಿಗೆ ಕೇಂದ್ರದ್ರವ್ಯವಾಗಿ ಪ್ರಭಾವಶಾಲಿಯಾಗಿ ಹೊಮ್ಮಿರುವುದನ್ನು ಕೂಡಾ ನಾವು ಗಮನಿಸಬಹುದಾಗಿದೆ.

ಅವು ತನ್ಮೂಲಕ ಕೊರಿಯನ್ ಸಮಾಜದ ವಿಮರ್ಶೆಯನ್ನು ಗೈಯುತ್ತಾ, ಹಿಂಸೆ ಮತ್ತು ಕೊರಿಯನ್ ಸಮಾಜದ ನಡುವಿನ ಕಾರ್ಯಕಾರಣ ಸಂಬಂಧವನ್ನು ವಿವೇಚಿಸುತ್ತಾ ಸಾಗುತ್ತವೆ. ದಕ್ಷಿಣ ಕೊರಿಯಾದ ಪ್ರಸಿದ್ಧ ನಿರ್ದೇಶಕ ಬಾಂಗ್ ಜಾನ್ ವೂ ಸಮಾಜ, ಹಿಂಸೆ ಮತ್ತು ಚಲನಚಿತ್ರೀಯ ಕಥನವನ್ನು ಕುರಿತಂತೆ, ‘ಕೊರಿಯನ್ ಹಿಂಸೆ ಅಥವಾ ವಾೈಲನ್ಸ್ ಬಗೆಯ ಸಿನಿಮಾಗಳು ಇಲ್ಲಿನ ಸಾಮಾಜಿಕ ಪ್ರತಿಫಲನ. ಇಲ್ಲಿಯ ಸಮಾಜದಲ್ಲಿ ಆ ಬಗೆಯ ಹಿಂಸೆಯಿದೆ, ಈ ಕಾರಣದಿಂದ ಸಿನಿಮಾಗಳು ಸುಲಭವಾಗಿ ಎತ್ತಿಕೊಳ್ಳುತ್ತವೆ. ಅವುಗಳಿಗೆ ಸಾಮಾಜಿಕ ಆಯಾಮವಿದ್ದಂತೆ ಒಂದು ವಿಭಿನ್ನ ಬಗೆಯ ರಾಜಕೀಯ ನೆಲೆಯೂ ಇದೆ’ ಎನ್ನುತ್ತಾನೆ. ಹಿಂಸೆಯ ಜಾನ್ರಾ(ಬಗೆ)ಗಳು ಈ ಕಾರಣಕ್ಕಾಗಿ ಕೊರಿಯಾದಲ್ಲಿ ಸಮೃದ್ಧವಾಗಿವೆ. ಒಂದು ಸಾಮಾನ್ಯ ಲಕ್ಷಣವಾಗಿರುವ ಇದರಿಂದ ವಿಮೋಚನೆಗೊಂಡ ಸಿನಿಮಾ ಕಥನ ಸುಮಾರು ನಾಲ್ಕರಿಂದ ಐದು ವರ್ಷಗಳಿಂದೀಚೆಗೆ ಕೊರಿಯಾದಲ್ಲಿ ಕಾಣಿಸುತ್ತಿದೆ. ಅಂದರೆ ಸಂಪೂರ್ಣ ಹಿಂಸೆ ಮಾಯವಾಗಿವೆಯೆಂದಲ್ಲ. ಬದಲು ಹಿಂಸೆಯ ಸಣ್ಣ ಅಥವಾ ಉಪವೆನ್ನುವ ಎಳೆಯಿದ್ದಾಗ್ಯೂ ಪ್ರಭುತ್ವ, ಪ್ರಜಾಪ್ರಭುತ್ವ, ಪರಿಸರ, ಮಾಕ್ರ್ಸ್‍ವಾದ, ಅಭಿವೃದ್ಧಿಯೆಂಬ ಅನುಭವದ ಎಡ-ಬಲ ಮತ್ತು ಅದರ ಕೆಡಕುಗಳು, ಒಳಗೊಳ್ಳುವಿಕೆ, ಹೊರಗೊಳ್ಳುವಿಕೆ, ಭ್ರಷ್ಟಾಚಾರ, ಅಸ್ತಿತ್ವ, ಜಗತ್ತಿನ ಅತ್ಯಂತ ಸಾಮಾನ್ಯ ಅಂಶಗಳಾಗಿರುವ ಬಡತನ, ನಿರುದ್ಯೋಗ, ಶ್ರೀಮಂತ-ಬಡವ ಅಂತರ ಮುಂತಾದ ಅನೇಕ ವೈವಿಧ್ಯದ ವಸ್ತು ವಿಷಯಗಳನ್ನು ಅವು ಚರ್ಚಿಸುತ್ತಿವೆ.

ಲೀ-ಚಾಂಗ್-ಡಾಂಗ್‍ನ ಬರ್ನಿಂಗ್ (2018) ಈ ನೆಲೆಯಲ್ಲಿ ಕೊರಿಯಾದ ಸದ್ಯದ ಸ್ಥಿತಿಯನ್ನು ಜಗತ್ತಿಗೆ ಬೆಳಕಿಂಡಿಯಾಗಿ ಪರಿಚಯಿಸಬಲ್ಲ ಕೃತಿ ಅಥವಾ ಸಿನಿಮಾ. ಜಪಾನಿನ ಪ್ರಸಿದ್ಧ ಸಾಹಿತಿ ಹರೂಕಿ ಮುರಾಕಾಮಿಯವರ ‘ಬಾರ್ನ್ ಬರ್ನಿಂಗ್’ ಎಂಬ ಸಣ್ಣ ಕಥೆಯಾಧರಿಸಿದ ಈ ಚಿತ್ರ 2018ರ ಕಾನ್ ಚಿತ್ರೋತ್ಸವದಲ್ಲಿ ಅಧಿಕೃತ ಸ್ಪರ್ಧೆಯಲ್ಲಿತ್ತು. ಇದು 2018ರಲ್ಲಿ ಮೊತ್ತಮೊದಲಬಾರಿಗೆ ಕೊರಿಯಾ ದೇಶವನ್ನು ಆಸ್ಕರ್‍ನಲ್ಲಿ ವಿದೇಶೀ ಚಿತ್ರ ವಿಭಾಗದಲ್ಲಿ ಪ್ರತಿನಿಧಿಸಿದೆ. ಲೀ-ಚಾಂಗ್-ಡಾಂಗ್ ಸುಮಾರು 8 ವರ್ಷಗಳ ನಂತರ ನಿರ್ಮಿಸಿದ ಸಿನಿಮಾವಿದು. 2007ರ ಆತನ ‘ಸೀಕ್ರೆಟ್ ಸನ್‍ಶೈನ್’ ಮತ್ತು 2010ರ ‘ಪೋಯಟ್ರಿ’ ಯ ನಂತರದ ಆತನ ಪ್ರಮುಖವಾದ ಸಿನಿಮಾವೆಂದೇ ಇದನ್ನು ಬಗೆಯಲಾಗುತ್ತದೆ.

ಸಿನಿಮಾದ ಪ್ರಧಾನ ಪಾತ್ರವಾದ ಲೀ-ಜಾಂಗ್-ಸು ದಕ್ಷಿಣ ಕೊರಿಯಾದ ‘ಪಜು’ ಪಟ್ಟಣದಲ್ಲಿ ಉದರನಿಮಿತ್ತ ಸಣ್ಣ ಕೆಲಸ ಮಾಡಿಕೊಂಡಿರುತ್ತಾನೆ. ಆತ ಸಾಹಿತ್ಯದಲ್ಲಿ ಪದವಿಯನ್ನು ಪಡೆದಿದ್ದರೂ ಏತನ್ಮಧ್ಯೆ ತಾನೊಂದು ಕಾದಂಬರಿಯನ್ನು ಬರೆಯಲು ಯೋಜನೆ ಹಾಕಿಕೊಂಡಿರುತ್ತಾನೆ. ಪಟ್ಟಣದಲ್ಲಿ ಆತ ಒಮ್ಮೆ ತನ್ನ ಬಾಲ್ಯಕಾಲದ ಗೆಳತಿ ‘ಶಿನ್-ಹಾೈ-ಮಿ’ಯನ್ನು ಆಕಸ್ಮಿಕವಾಗಿ ಭೇಟಿಯಾಗುತ್ತಾನೆ. ಕ್ರಮೇಣ ಭೇಟಿಯು ಗಾಢ ಸ್ನೇಹವನ್ನು ಉಂಟುಮಾಡಿದ ಕಾರಣ ಆಕೆಯ ಮುಂಬರುವ ಆಫ್ರಿಕಾ ಪ್ರವಾಸದ ವೇಳೆಯಲ್ಲಿ ‘ಶಿನ್-ಹಾೈ-ಮಿ’ಯ ಬೆಕ್ಕನ್ನು ನೋಡಿಕೊಳ್ಳುವ ಹೊಣೆಯನ್ನು ಲೀ-ಜಾಂಗ್-ಸು ಹೊರುತ್ತಾನೆ. ಬೆಕ್ಕು ಪ್ರತ್ಯಕ್ಷವಾಗಿ ಕಾಣದಿದ್ದರೂ ಆತ ಪ್ರತಿದಿನವೂ ಆಹಾರ ಮತ್ತು ನೀರು ಇಡುವುದನ್ನು ತಪ್ಪಿಸುವುದಿಲ್ಲ. ಆಫ್ರಿಕಾ ಪ್ರವಾಸ ಮುಗಿಸಿ ನೈರೋಬಿ ಏರ್‍ಪೋರ್ಟ್‍ನಲ್ಲಿ ಮೂರುದಿನ ಉಗ್ರಗಾಮಿಗಳಿಂದ ಒತ್ತೆಯಾಳಾಗಿರಿಸಲ್ಪಟ್ಟು, ಆ ಹೊತ್ತಿಗೆ ಪರಿಚಯವಾದ ಕೊರಿಯನ್ ಸ್ನೇಹಿತ ಬೆನ್ ಜತೆಗೆ ಶಿನ-ಹಾೈ-ಮಿ ಸಿಯೋಲ್‍ನ ಏರ್‍ಪೋರ್ಟ್‍ಗೆ ಬಂದಿಳಿಯುತ್ತಾಳೆ. ಇತ್ತ ಶ್ರೀಮಂತ ಯುವಕ ಬೆನ್ ಜತೆಗೆ ಶಿನ್-ಹಾೈ-ಮಿ ಹೆಚ್ಚು ಅನುರಕ್ತವಾಗುವುದನ್ನು ಲೀ-ಜಾಂಗ್ ಸು ಸಹಿಸದೇ ಬೆನ್‍ನ ವಿರುದ್ಧ ಅಸಹನೆ ಮತ್ತು ದ್ವೇಷವನ್ನು ಸಾಧಿಸಲು ತೊಡಗುತ್ತಾನೆ. ಒಂದು ಬೆಳ್ಳಂಬೆಳಿಗ್ಗೆಯಿಂದ ಶಿನ್-ಹಾೈ-ಮಿ ಸಂಪೂರ್ಣ ಪತ್ತೆಯಿಲ್ಲದಂತಾಗಿ ಲೀ-ಜಾಂಗ್-ಸು ಜತೆಗೆ ಮೊಬೈಲ್ ಫೋನಿನ ಸಂಪರ್ಕದಲ್ಲಿ ಸಿಗದೇ ಇದ್ದಾಗ ಬೆನ್‍ನನ್ನು ದಟ್ಟವಾಗಿ ಅನುಮಾನಿಸತೊಡಗಿ ಆತನ ಅಪಾರ್ಟ್‍ಮೆಂಟ್‍ನ ವಾಶ್ ರೂಮ್ ನಲ್ಲಿಯ ಡ್ರಾವರ್‍ನಲ್ಲಿ ಶಿನ್-ಹಾೈ-ಮಿಯ ಆಭರಣವೂ ಸೇರಿದಂತೆ ಅನೇಕ ಮಹಿಳೆಯರ ಆಭರಣಗಳನ್ನು ಪತ್ತೆ ಹಚ್ಚುತ್ತಾನೆ. ಇದಾದ ಕೆಲವು ದಿನಗಳ ನಂತರ ಜಾಂಗ್‍ಸೂವನ್ನು ಬೆನ್‍ತನ್ನ ವೈಭವೋಪೇತ ಸಿಯೋಲ್ ನಗರದ ಅಪಾರ್ಟ್‍ಮೆಂಟ್‍ಗೆ ಪಾರ್ಟಿಗೆ ಕರೆಯುತ್ತಾನೆ. ಈ ಮೊದಲು ಶಿನ್-ಹಾೈ-ಮಿ, ಬೆನ್ ಮತ್ತು ಜಾಂಗ್ ಸೂ ಮೂರೂ ಜನ ಜಾಂಗ್‍ಸೂನ ಹಳ್ಳಿಯಲ್ಲಿ ಕೂತು, ಕುಡಿದು ಮಾತನಾಡುವಾಗ ಶಿಮಿಯು ಆಫ್ರಿಕಾದಲ್ಲಿನ ಬುಶ್‍ಮೆನ್ ಆದಿವಾಸಿಗಳ ‘ಹಸಿವಿನ ನೃತ್ಯ’ ವನ್ನು ಪ್ರಸ್ತಾಪಿಸಿ ನರ್ತಿಸುತ್ತಾಳೆ. ಅದನ್ನು ಬೆನ್ ತಿರಸ್ಕಾರದಿಂದ ನೋಡುತ್ತಾನೆ.

ಏತನ್ಮಧ್ಯೆ ಜಾಂಗ್ ಸೂ, ಬೆನ್ ಮತ್ತು ಶಿ-ಹ್ಯಾ-ಮಿ ಮೂರೂ ಜನ ಜಾಂಗ್ ಸೂ ನ ಹಳ್ಳಿಯಲ್ಲಿ ಭೇಟಿಯಾಗುತ್ತಾರೆ. ಪುನಃ ಶಿ-ಹ್ಯಾ-ಮಿ ‘ಹಸಿವಿನ ನೃತ್ಯ’ವನ್ನು ಮಾಡಿದಾಗಲೂ ಬೆನ್ ನಿರಾಸಕ್ತಿಯನ್ನು ತೋರಿಸುತ್ತಾನೆ. ಪ್ರತೀ ಮೂರು ತಿಂಗಳಿಗೊಮ್ಮೆ ಸಂಪೂರ್ಣ ಹಾಳಾದ ಗ್ರೀನ್ ಹೌಸ್‍ಗಳನ್ನು ಸುಡುವ ತನ್ನ ಹವ್ಯಾಸವನ್ನು ಬೆನ್ ಆಗ ಅರುಹುತ್ತಾನೆ. ಇದಾದ ಸ್ವಲ್ಪ ಸಮಯದಲ್ಲಿ ಶಿ-ಹ್ಯಾ-ಮಿ ನಾಪತ್ತೆಯಾಗುತ್ತಾಳೆ. ಜಾಂಗ್ ಸೂ ತನ್ನ ಹಳ್ಳಿಗೆ ಹೋಗಿ ಶಿ-ಹಾೈ-ಮಿಯನ್ನು ಪತ್ತೆ ಮಾಡಲೆತ್ನಿಸುತ್ತಾನೆ. ಆಗ ಆಕೆಯ ತಾಯಿ ಮತ್ತು ಮನೆಯವರು ಆಕೆ ಸಂಪರ್ಕಕ್ಕೆ ಸಿಗದೆ ಕಳೆದ ದೀರ್ಘ ದಿನಗಳನ್ನ ವಿವರಿಸುತ್ತಾರೆ. ಕೊನೆಗೂ ಆಕೆ ಪತ್ತೆಯಾಗುವುದೇ ಇಲ್ಲ. ಇದಾದ ಕೆಲವು ದಿನಗಳ ನಂತರ ಬೆನ್, ತನ್ನ ಮನೆಗೆ ಹೊಸ ಗೆಳತಿಯೊಂದಿಗಿನ ಪಾರ್ಟಿಗಾಗಿ ಆಹ್ವಾನಿಸಿದ ಸಂದರ್ಭದಲ್ಲಿ ಪುನಃ ಆತನ ಮನೆಯ ವಾಶ್ ರೂಮಿನ ಡ್ರಾಯರ್ ಅನ್ನು ಪರೀಕ್ಷಿಸಿದಾಗ ಆತನಿಗೆ ಶಿ-ಹಾೈ-ಮಿ ವಾಚ್ ಸಿಗುತ್ತದೆ. ಅಲ್ಲಿ ಕೂಡಾ ಆತನ ಹೊಸ ಸ್ನೇಹಿತೆ ಶಿ-ಹ್ಯಾ-ಮಿ ಹೇಳಿದ ಹಾಗೆ ಬೇರೊಂದು ಕಥೆ ಹೇಳಲು ತೊಡಗಿದಾಗ ಬೆನ್ ತಾತ್ಸಾರದಿಂದ ನಿದ್ದೆಗೈಯ್ಯಲಾರಂಭಿಸುತ್ತಾನೆ. ಕೊನೆಗೂ ಜಾಂಗ್‍ಸೂಗೆ ಬೆನ್ ಒಬ್ಬ ಸೀರಿಯಲ್ ಕಿಲ್ಲರ್ ಎಂದು ಅರಿವಾಗಿ ಆತನ ಹಳ್ಳಿಯ ಒಂದು ಜಾಗದಲ್ಲಿ ಆತನನ್ನು ಇರಿದು ಕೊಂದು, ಆತನ ವೈಭವದ ಕಾರನ್ನು ಸುಟ್ಟು, ತನ್ನ ಬಟ್ಟೆಯನ್ನೂ ಕೂಡಾ ಬೆಂಕಿಗೆಸೆದು ನಗ್ನವಾಗಿ ತನ್ನ ಮುರುಕು ಟ್ರಕ್ ಅನ್ನು ಹತ್ತಿ ಹೊರಡುತ್ತಾನೆ.

ಬರ್ನಿಂಗ್ ಸಿನಿಮಾ ಒಂದು ರೀತಿಯ ತ್ರಿಕೋನ ಪ್ರೇಮಕಥೆ ಮತ್ತು ಸಸ್ಪೆನ್ಸ್-ಕ್ರೈಂ ಥ್ರಿಲ್ಲರ್‍ನಂತೆ ಕಂಡರೂ ಸಂಪೂರ್ಣ ಸಮಾಜದಿಂದ ಭಿನ್ನವಾಗುವ, ಸಮಾಜದ ಜತೆ ಸಂಬಂಧವೇರ್ಪಡಿಸಿಕೊಳ್ಳದೇ ರಂಜಿಸುವ, ಕಲ್ಪಿತ ಕ್ರೈಂ ಥ್ರಿಲ್ಲರ್‍ನಂತಿಲ್ಲ. ಒಂದು ಮಿಸ್ಟರಿಯ ಕಥನದಂತೆ ಈ ಸಿನಿಮಾ ಕಾಣಬರುತ್ತಾದರೂ ನಿರ್ದೇಶಕ ಡಾಂಗ್ ತನ್ನ ಪಾತ್ರದ ಮೂಲಕ ಹೇಳಿಸುವ ಹಾಗೆ, ‘ಜಗತ್ತೇ ಒಂದು ಮಿಸ್ಟರಿ’. ಬಹುಶಃ ಈ ನೆಲೆ ಮತ್ತು ತಿಳಿವಳಿಕೆಯು ಸಮಕಾಲೀನ ಕೊರಿಯಾದ ಸಮಾಜ, ರಾಜಕೀಯ ಮತ್ತದರ ಬೇರೆ ಬೇರೆ ಸಾಧ್ಯತೆಗಳ ಕುರಿತು, ಅದರ ಮಿಸ್ಟರಿಯ ಕುರಿತು ಮಾತನಾಡುತ್ತದೆ. ಒಂದು ರೀತಿ ಅರಿಯಲಾರದ, ನಿಗೂಢ, ಸಂಕೀರ್ಣ, ವಿಕ್ಷಿಪ್ತ ಜಗತ್ತಿನಲ್ಲಿದ್ದೇವೆ ಎನ್ನುವುದನ್ನು ಬರ್ನಿಂಗ್ ಪ್ರಮಾಣವತ್ತಾಗಿ ಅರುಹುತ್ತದೆ.

ಚಾಂಗ್‍ಡಾಂಗ್ ಪ್ರಕಾರ, ಬೆಂಕಿಯು ಪಟಕ್ಕನೆ ಏನನ್ನಾದರೂ ಸುಡುವ ವಿದ್ಯಮಾನವು ಮಿಸ್ಟರಿಯಾಗಿ ಕಂಡರೂ, ಸುಡುವ ಸುತ್ತ ಹಲವು ಕಾರ್ಯಕಾರಣತೆ ಮತ್ತು ಇತಿ ವೃತ್ತಗಳಿವೆ. ಈ ಕಾರಣದಿಂದ ಪ್ರತೀ ಮಿಸ್ಟರಿಯೂ ಕೂಡಾ ಒಂದು ನೈಜತೆಯ ಪದರದಿಂದ ಒತ್ತರಿಸಿಕೊಳ್ಳುವುದು. ಮುರಾಕಾಮಿಯ ಕಥೆಯಲ್ಲಿ ಸಣ್ಣ ಮಟ್ಟದ ಮಿಸ್ಟರಿಯಿತ್ತು, ಆದರೆ ಚಾಂಗ್ ಡಾಂಗ್ ಮಾತ್ರ ಅವುಗಳನ್ನು ವಿಸ್ತರಿಸಿ ದೊಡ್ಡ ನೆಲೆಗೊಯ್ಯುತ್ತಾನೆ.

 

ಈ ಕಾರಣದಿಂದ ಸಿನಿಮಾ ಕಥನದ ಮುಖ್ಯ ಭಿತ್ತಿಯಾದ ಮಿಸ್ಟರಿಗಳಿಗೆ ಉತ್ತರ ಕೊಡುತ್ತದೆನ್ನುವುದಲ್ಲ, ಬದಲು ಅಂತಹ ಸ್ಥಿತಿ ಮತ್ತು ಜೀವನವನ್ನು ಆವರಿಸಿರುವ ಸದ್ಯದ ಬದುಕು, ರಾಜಕಾರಣ, ಆರ್ಥಿಕತೆ ಮತ್ತು ಸೋಸಿಯಾಲಜಿಯ ಕುರಿತು ಬಹಳ ಗಂಭೀರವಾದ ಪ್ರಶ್ನೆಗಳನ್ನು ಎತ್ತುತ್ತದೆ. ಇದೇ ಹೊತ್ತಿಗೆ ನಾವು ಏನನ್ನು ಕಾಣುತ್ತೇವೆ, ಏನನ್ನು ಕಾಣುವುದಿಲ್ಲ, ಏನು ಅಸ್ತಿತ್ವದಲ್ಲಿದೆ ಮತ್ತು ಏನು ಅಸ್ತಿತ್ವದಲ್ಲಿಲ್ಲ? ಎನ್ನುವ ಪ್ರಶ್ನೆಗಳನ್ನು ಕೂಡಾ ಎತ್ತುತ್ತದೆ. ಜಾಂಗ್ ಸೂ ನ ಬದುಕನ್ನೇ ಹಿಡಿದು ಅವಲೋಕಿಸುವುದಾದರೆ ಆತನ ಸದ್ಯದ ಸ್ಥಿತಿ, ಕಾರ್ಪಣ್ಯ ಮತ್ತು ಮಿಸ್ಟರಿಯ ಹಿಂದೆ ಆತ ಅತ್ಯಂತ ದೈನ್ಯದಿಂದ ಅನುಭವಿಸಿದ ಆತನ ಬಾಲ್ಯದ ನೈಜತೆಯಿದೆ. ಇದೇ ರೀತಿಯಲ್ಲಿ ಆತನ ತಂದೆಯ ಹಿಂಸೆಯ ಸ್ವಭಾವ ಮುಂತಾದುವು ಅದನ್ನು ರೂಪಿಸಿವೆ. ‘ಶಿನ್-ಹಾೈ-ಮಿ’ ಕೂಡಾ ಇದೇ ರೀತಿಯ ದುಸ್ತರ ಬದುಕನ್ನೇ ಕಂಡ ಪಾತ್ರ. ಕೊರಿಯಾದ ಒಂದು ವಿಘಟಿತ ಸಾಮಾನ್ಯ ಕುಟುಂಬದ ನಿದರ್ಶನ. ಆಕೆ, ಗೆಳೆಯ ಜಾಂಗ್ ಸೂ ಜತೆಯಲ್ಲಿ ಹೋಟೆಲ್‍ನಲ್ಲಿ ಆರೆಂಜ್ ತಿನ್ನುವಂತೆ ನಟಿಸುವ ಮೈಮ್ ಕೂಡಾ ಗಾಢವಾಗಿ ಕಂಡು ನಮ್ಮನ್ನು ಕಾಡುವುದು. ಅದು ಒಂದು ನಿಗೂಢವೆಂಬಂತೆ ಕಂಡರೂ ಕೂಡಾ ಆಕೆ ಬಾಲ್ಯದಿಂದ ಇಲ್ಲಿಯವರೆಗೂ ಅನುಭವಿಸಿದ ದೈನ್ಯ ಮತ್ತು ಸದ್ಯದ ಹಸಿವು ಅಂತಹ ಸಂಕೀರ್ಣತೆಯನ್ನು ಸೃಷ್ಟಿಸುವಂತೆ ಮಾಡಿರುತ್ತದೆ. ಇದಲ್ಲದೆ ಆಕೆ ಆಫ್ರಿಕಾದಿಂದ ಕಲಿತ ಹಸಿವಿನ ನೃತ್ಯವಂತೂ ಕೊರಿಯಾದ ಮಿಸ್ಟರಿಯನ್ನು ಒಳಗೊಂಡಂತೆ ಜಗತ್ತಿನ ಮಿಸ್ಟರಿಯೂ ಆಗಿದೆ. ಇದೇ ಹೊತ್ತಿಗೆ ಹಸಿವಿನ ನೃತ್ಯವನ್ನು ಮಹಾನ್ ಎಂದು ಬಗೆಯದೇ ತೀರಾ ಕ್ಷುಲ್ಲಕ ಎಂದು ಪರಿಗಣಿಸುವ ಬೆನ್ ಕೂಡಾ ಒಂದು ಸತ್ಯ, ಸ್ಥಿತಿ ಹಾಗೂ ಮಿಸ್ಟರಿ. ಬೆನ್‍ನ ಹವ್ಯಾಸ ಕೂಡಾ ಜಾಂಗ್ ಸೂ ಅಂತಹ ವ್ಯಕ್ತಿಗೆ ಮತ್ತು ಆತ ಪ್ರತಿನಿಧಿಸುವ ಕೊರಿಯಾದ ಸಾಮಾಜಿಕ ಸ್ತರಕ್ಕೆ ಒಂದು ಮಿಸ್ಟರಿ ಹಾಗೂ ಅದರ ರೂಪಕ. ಆತ ಒಂದು ಸಿರಿವಂತನ ಸ್ತರವನ್ನು ಪ್ರತಿನಿಧಿಸಿ ಐಹಿಕವಾಗಿ ಬದುಕುತ್ತಿದ್ದರೂ ಆತನ ಸಿರಿತನದ ಮೂಲದ ಕುರಿತು ಮತ್ತು ಆತನೊಳಗಡೆಯೇ ಎಲ್ಲಾ ಇದ್ದು ಇಲ್ಲದಿರುವ ಯಾವುದೋ ಗಾಢ ದುಃಖ ಕೂಡಾ ಒಂದು ನಿಗೂಢವೇ ಆಗಿದೆ. ಒಂದು ರೀತಿ ಬರ್ನಿಂಗ್ ಸಮಕಾಲೀನ ಬಂಡವಾಳಶಾಹೀ ಸಮಾಜದ, ವೈವಿಧ್ಯದ ಸ್ತರ ಬದುಕಿನ ದುರಿತಗಳ ಕನ್ನಡಿಯೂ ಹೌದು.

ಇದೇ ಹೊತ್ತಿಗೆ ಸಿನಿಮಾದ ಬಗೆ ಅಥವಾ ಜಾನ್ರಾ ಎನ್ನುವ ಪರಿಗಣನೆಯ ಹಂಗನ್ನೂ ಸಹ ಈ ಕೃತಿ ಒಡೆದು ಸಾಗುತ್ತದೆ. ಕೊರಿಯಾದ ಸದ್ಯದ ಸಮಾಜದ ಬಡತನ, ಬಡವ-ಶ್ರೀಮಂತರ ಅಂತರ, ಹಸಿವು ಮುಂತಾದ ವಸ್ತುಗಳನ್ನು ಮುನ್ನೆಲೆಗೆ ತರುತ್ತಲೇ ಕೊರಿಯಾವೆಂಬ ಒಂದು ಭೂಮಿ ಚಾರಿತ್ರಿಕವಾಗಿ ತುಂಡಾಗಿ ಎರಡಾಗಿ ಒಡೆದ ಪರಿಣಾಮವನ್ನು ಕಟ್ಟಿಕೊಡುತ್ತದೆ. ಇದು ಭಾರತದಂತಹ ಉಪಖಂಡದ ಹೇಯ-ಹೀನಾಯ ವಿಭಜನೆಯನ್ನು ಅನುಭವಿಸಿದ ನಮ್ಮಂತವರನ್ನೂ ಕಾಡುತ್ತದೆ, ಅಕ್ಷರಶ: ಉರಿಸುತ್ತದೆ.

* ಸಿನಿಮಾ, ಚರಿತ್ರೆ, ರಾಜಕೀಯ ತತ್ವಶಾಸ್ತ್ರ, ಚಿತ್ರಕತೆ ರಚನೆ ಲೇಖಕರ ಆಸಕ್ತಿಯ ಕ್ಷೇತ್ರಗಳು. ಸಿನಿಮಾ ರಸಗ್ರಹಣ ಕುರಿತು ಪುಣೆಯ ಫಿಲ್ಮ್ ಆಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ಶಿಕ್ಷಣ. ಪ್ರಸ್ತುತ ಬೈಂದೂರಿನ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಚರಿತ್ರೆ ಉಪನ್ಯಾಸಕರು.

Leave a Reply

Your email address will not be published.