ಬಲವಾಗಬೇಕು ಹಸಿರು ನ್ಯಾಯಪೀಠದ ಅಧಿಕಾರದ ಚಾಟಿ

ಹಸುರು ನ್ಯಾಯಪೀಠದ ತೀರ್ಪನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು. ಅಂದರೆ ಒಂದು ಹಂತದಲ್ಲಿ ಶಿಕ್ಷಿಸುವ ಅಧಿಕಾರ ನ್ಯಾಯಪೀಠಕ್ಕಿಲ್ಲ. ಈಗಲೂ ಸರ್ವೋಚ್ಚ ನ್ಯಾಯಾಲಯ ಹಸುರು ನ್ಯಾಯಪೀಠಕ್ಕೆ ಸರ್ವಾಧಿಕಾರವನ್ನು ಕೊಟ್ಟರೆ ಮಾತ್ರ ಸಂಸ್ಥೆಗೆ ಬಲಬಂದೀತು.

ಸರ್ವೋಚ್ಚ ನ್ಯಾಯಾಲಯ ಅಧಿಕೃತವಾಗಿಯೇ ಒಂದು ಮಾಹಿತಿಯನ್ನು ಇತ್ತೀಚೆಗೆ ಬಿಡುಗಡೆಮಾಡಿದೆ. ಈ ವರ್ಷದ ಫೆಬ್ರವರಿ 1ಕ್ಕೆ ಇನ್ನೂ ಇತ್ಯರ್ಥವಾಗದೆ ಉಳಿದಿರುವ ಮೊಕದ್ದಮೆಗಳ ಸಂಖ್ಯೆ 59,670. ಇದರಲ್ಲಿ ಸಿವಿಲ್, ಕ್ರಿಮಿನಲ್, ಸರ್ಕಾರಿ ಮೊಕದ್ದಮೆಗಳು ಸೇರಿವೆ. ದೇಶದ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು ಲೋಕಸಭೆಯಲ್ಲಿ ಸದಸ್ಯರೊಬ್ಬರು ಕೇಳಿದ ಪ್ರಶ್ನೆಗೆ ನಗುನಗುತ್ತಲೇ ಹೇಳಿದ್ದರು: `ದೇಶದ ಎಲ್ಲ ಉಚ್ಚ ನ್ಯಾಯಾಲಯಗಳಲ್ಲಿ ಒಟ್ಟು 43.55 ಲಕ್ಷ ಮೊಕದ್ದಮೆಗಳು ಇತ್ಯರ್ಥವಾಗದೆ ಬಾಕಿ ಉಳಿದಿವೆಯಂತೆ. ಗಾಬರಿ ಹುಟ್ಟಿಸುವುದು ಈ ಪೈಕಿ 12.15 ಲಕ್ಷ ಕ್ರಿಮಿನಲ್ ಕೇಸುಗಳಿವೆ! ಹತ್ತು ವರ್ಷವಾದರೂ ಇತ್ಯರ್ಥವಾಗಿರದ ಮೊಕದ್ದಮೆಗಳ ಸಂಖ್ಯೆ 8.35 ಲಕ್ಷ.’

ಈ ಮೊಕದ್ದಮೆಗಳ ಜೊತೆಗೆ ಪರಿಸರ ಸಂಬಂಧಿ ಮೊಕದ್ದಮೆಗಳು ಸರ್ವೋಚ್ಚ ನ್ಯಾಯಾಲಯದ ಅಥವಾ ಉಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿದರೆ ಬಗೆಹರಿಯುವ ಬಗೆಯಾದರೂ ಹೇಗೆ? ತೀರ್ಪು ಬರುವ ಹೊತ್ತಿಗೆ ಬಹುಶಃ ಪರಿಸರದ ಸ್ಥಿತಿಗತಿಯೇ ಬದಲಾಗಿಬಿಟ್ಟಿರುತ್ತದೆ. ಮೊಕದ್ದಮೆ ತನ್ನ ಅರ್ಥ ಕಳೆದುಕೊಂಡುಬಿಟ್ಟಿರುತ್ತದೆ.

ಈ ಹಿನ್ನೆಲೆಯಲ್ಲಿ ಸ್ಥಾಪಿತವಾದದ್ದು ರಾಷ್ಟಿಯ ಹಸುರು ನ್ಯಾಯಪೀಠ. ಅದಕ್ಕೊಂದು ಐತಿಹಾಸಿದ ಹಿನ್ನೆಲೆ ಇದೆ. 1992ರ ಜೂನ್ ತಿಂಗಳಲ್ಲಿ ಭಾರತವು ವಿಶ್ವಸಂಸ್ಥೆಯ ಪರಿಸರ ಮತ್ತು ಅಭಿವೃದ್ಧಿಯ ಗೋಷ್ಠಿಯಲ್ಲಿ ಪಾಲ್ಗೊಂಡಿತ್ತು. ಆಗ ರಾಷ್ಟçಮಟ್ಟದಲ್ಲಿ ಪರಿಸರ ಮಾಲಿನ್ಯಕ್ಕೆ ಬಲಿಯಾದವರಿಗೆ ಸೂಕ್ತ ಪರಿಹಾರ ಕೊಡುವ ಪ್ರಸ್ತಾಪ ಬಂದಾಗ ಭಾರತ ಒಪ್ಪಿಕೊಂಡಿತ್ತು. ಇದರ ಜೊತೆಗೆ ಮಾಲಿನ್ಯ ಮಾಡುವವರೇ ದಂಡ ತೆರಬೇಕು ಎಂಬ ನಿರ್ಣಯಕ್ಕೂ ಬೆಲೆ ಸಿಕ್ಕಿತ್ತು. ಉಷ್ಣವರ್ಧಕ ಅನಿಲಗಳ ಹೆಚ್ಚಳಕ್ಕೆ ಕಡಿವಾಣ ಹಾಕಬೇಕಾದರೆ ಅದಕ್ಕೊಂದು ಸ್ವತಂತ್ರ ಸಂಸ್ಥೆ ಕಾನೂನಿನಡಿ ಕೆಲಸಮಾಡಬೇಕು ಎಂಬ ಆಲೋಚನೆಯೂ ಭಾರತ ಸರ್ಕಾರಕ್ಕೆ ಬಂತು.

ಇದಲ್ಲದೆ ಉಚ್ಚ ನ್ಯಾಯಾಲಯ ಮತ್ತು ಸರ್ವೋಚ್ಚ ನ್ಯಾಯಾಲಯಗಳಲ್ಲಿ ಪರಿಸರ ಕುರಿತ ಮೊಕದ್ದಮೆಗಳ ಸಂಖ್ಯೆಯೂ ದೊಡ್ಡದಾಗಿಯೇ ಬೆಳೆಯಿತು. ಈ ಭಾರವನ್ನು ಇಳಿಸುವ ಇರಾದೆಯಿಂದ ಸರ್ಕಾರ ಉತ್ಸುಕತೆ ತೋರಿ ಸ್ಥಾಪಿಸಿದ್ದೇ `ರಾಷ್ಟ್ರೀಯ ಹಸುರು ನ್ಯಾಯಪೀಠ’. 2010ರ ಅಕ್ಟೋಬರ್‌ನಲ್ಲಿ ಕಾಯ್ದೆ-19ರ ಅಡಿ ಲೋಕಸಭೆಯ ಒಪ್ಪಿಗೆಯೊಂದಿಗೆ ಶಾಸನಬದ್ಧವಾಗಿ ಸ್ಥಾಪನೆಯಾದ ಪೀಠ ಇದು.

ಹಸುರು ನ್ಯಾಯಪೀಠದ ಚೌಕಟ್ಟು

ಇಲ್ಲಿ ಒಂದು ಅಂಶವನ್ನು ಮನಗಾಣಬೇಕು. ವಿಶ್ವಸಂಸ್ಥೆಯ ಸದಸ್ಯ ರಾಷ್ಟಗಳ ಸಂಖ್ಯೆ ಈಗ 193. ಆದರೆ ಭಾರತವನ್ನು ಹೊರತುಪಡಿಸಿದರೆ ಆಸ್ಟೆಲಿಯ ಮತ್ತು ನ್ಯೂಜಿಲೆಂಡ್ ದೇಶಗಳು ಮಾತ್ರ ಹಸುರು ನ್ಯಾಯಪೀಠ ಸ್ಥಾಪಿಸಿವೆ. ಸ್ಥಾಪನೆಯಾದಂದಿನಿಂದ ಈ ಪೀಠ ಭಾರಿ ಸುದ್ದಿಮಾಡುತ್ತಿದೆ. ಪರಸರ ಮಾಲಿನ್ಯ ಮಾಡಿದವರು ದಂಡ ತೆರಲೇಬೇಕು ಎಂಬುದು ಈ ಪೀಠದ ಮೂಲಮಂತ್ರ. ಇದನ್ನು ಚಾಚೂತಪ್ಪದೆ ಪಾಲಿಸುತ್ತ ಬಂದಿವೆ. ಪರಿಸರ ಕುರಿತು ಅರ್ಜಿ ಹಿಡಿದು ಎಲ್ಲರೂ ದೆಹಲಿಗೇ ದೌಡಾಯಿಸಲು ಆಗುವುದಿಲ್ಲ. ಇದು ಸರ್ಕಾರಕ್ಕೂ ಗೊತ್ತು. ಈ ಕಾರಣಕ್ಕಾಗಿ ದೆಹಲಿಯನ್ನು ಕೇಂದ್ರ ಕಚೇರಿ ಮಾಡಿಕೊಂಡು ಚೆನ್ನೆನಲ್ಲಿ ದಕ್ಷಿಣ ಶಾಖೆ, ಕೊಲ್ಕತ್ತದಲ್ಲಿ ಪೂರ್ವ ಶಾಖೆ, ಪುಣೆಯಲ್ಲಿ ಪಶ್ಚಿಮ ಶಾಖೆ, ಬೋಪಾಲದಲ್ಲಿ ಕೇಂದ್ರ ಶಾಖೆಗಳನ್ನು ತೆರೆದು ಪರಿಸರ ಹಂತಕರನ್ನು ಹೆಡೆಮುರಿ ಕಟ್ಟಿಸುತ್ತಿದೆ. ಕೋಟ್ಯಂತರ ರೂಪಾಯಿ ದಂಡ ವಿಧಿಸುತ್ತಿದೆ.

ಇಂಥ ಮಹತ್ವದ ನ್ಯಾಯಪೀಠದ ಮುಖ್ಯಸ್ಥರು ಸಹಜವಾಗಿಯೆ ಕಾನೂನು ತಜ್ಞರಾಗಿರಬೇಕು, ಅನುಭವಿಗಳಾಗಿರಬೇಕು. ಆ ಕಾರಣಕ್ಕಾಗಿ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳೇ ಈ ಹೊಣೆ ಹೊರಬೇಕು. ಇನ್ನು ಶಾಖೆಗಳಲ್ಲಿ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳಿರುತ್ತಾರೆ, ಹಾಗೆಯೇ ಕನಿಷ್ಠ 15 ವರ್ಷ ಪರಿಸರ ಕುರಿತು, ಅರಣ್ಯ ಸಂರಕ್ಷಣೆಯ ನೀತಿ ನಿಯಮ ಕುರಿತ ಅನುಭವ ಇರುವವರನ್ನು ಸದಸ್ಯರನ್ನಾಗಿ ಆಯ್ಕೆಮಾಡಲಾಗುತ್ತದೆ. ಮೊಕದ್ದಮೆಗಳನ್ನು ಆಧರಿಸಿ ಶಾಖೆಯ ಪೀಠಗಳು ಅನುಕೂಲಕರ ನಗರಗಳಿಗೆ ತಾತ್ಕಾಲಿಕವಾಗಿ ಸ್ಥಳಾಂತರವಾಗಬಹುದು.

ಈ ಕಾರಣದಿಂದಾಗಿಯೇ ದಕ್ಷಿಣದ ಚೆನ್ನೆ ಹಸುರು ನ್ಯಾಯಪೀಠ ಕೆಲವೊಮ್ಮೆ ಹೈದರಾಬಾದಿನಲ್ಲೂ, ಕೆಲವೊಮ್ಮೆ ಬೆಂಗಳೂರಿನಲ್ಲೂ ಬೈಠಕ್ ಮಾಡುವುದುಂಟು. ಈ ನ್ಯಾಯಪೀಠದ ಕೈಗಳು ಉದ್ದವಾಗಿವೆ. 1908ರಲ್ಲೇ `ಕೋಡ್ ಆಫ್ ಸಿವಿಲ್ ಪ್ರೊಸೀಜರ್’ ಅನುಸರಿಸುವಂತೆ ಕಾಯ್ದೆಗಳನ್ನು ಮಾಡಲಾಗಿತ್ತು. ಅದು ಈಗಿನ ಸಂದರ್ಭದಲ್ಲಿ ಉಪಯೋಗಕ್ಕೆ ಬಾರದು. ಹಸುರು ನ್ಯಾಯಪೀಠ ಇದನ್ನು ಬದಿಗೊತ್ತಿಯೇ ತೀರ್ಪುಕೊಡಬಹುದು. ಸಹಜ ತೀರ್ಪಿನ ಕಡೆಗೆ ಇದು ವಾಲುತ್ತದೆ, ಸಂದರ್ಭಗಳ ಹಿನ್ನೆಲೆಯನ್ನು ಪರಿಗಣಿಸಿ ನಿರ್ಣಯ ಕೊಡುತ್ತದೆ; ಈ ಸ್ವಾತಂತ್ರ್ಯ ಸಂಸ್ಥೆಗೆ ಬೇಕಾಗಿತ್ತು.

ಹಾಗಾದರೆ ಯಾವ ಯಾವ ಬಾಬತ್ತುಗಳನ್ನು ಇದು ಕೈಗೆತ್ತಿಕೊಳ್ಳಬಹುದು? ಇದನ್ನು ಹಸುರು ನ್ಯಾಯಪೀಠ, ಷೆಡ್ಯೂಲ್-1ರಲ್ಲೇ ಸ್ಪಷ್ಟವಾಗಿ ತಿಳಿಸಿದೆ. ನೀರಿನ ಮಾಲಿನ್ಯ ನಿಯಂತ್ರಣ, ಅರಣ್ಯ ಸಂರಕ್ಷಣೆ, ವಾಯುಮಾಲಿನ್ಯ ತಡೆ, ಪರಿಸರದ ಮೇಲಾಗುವ ಧಕ್ಕೆಗೆ ತಡೆ, ಸಾರ್ವಜನಿಕ ವಿಮಾ ಋಣಭಾರ, ಜೈವಿಕ ವೈವಿಧ್ಯ-ಈ ಎಲ್ಲ ಕ್ಷೇತ್ರಗಳ ಕಾಯ್ದೆಗಳು ಈಗ ಭಾರಿ ಬದಲಾವಣೆಗಳಾಗಿವೆ. ಕಾಲಕಾಲಕ್ಕೆ ತಿದ್ದುಪಡಿಗಳಾಗಿವೆ. ಇವೆಲ್ಲ ನ್ಯಾಯಪೀಠಕ್ಕೆ ಗೊತ್ತು. ಇಲ್ಲಿ ಒಂದು ಪ್ರಶ್ನೆಗೆ ಸಮಂಜಸ ಉತ್ತರ ಕೊಡಬೇಕಾಗುತ್ತದೆ. ನೀವು ವನ್ಯಜೀವಿಗಳ ಸಂರಕ್ಷಣೆಗೆ ಹೊರಟರೆ ಅದಕ್ಕೆ ಸ್ವಾಗತ. ಯಾವುದೋ ನದಿಗೆ ಅಣೆಕಟ್ಟು ಕಟ್ಟುವುದನ್ನು ವಿರೋಧಿಸಲೂಬಹುದು. ಆದರೆ ಈ ಅಂಶಗಳು ಹಸುರು ನ್ಯಾಯಪೀಠದ ಚೌಕಟ್ಟಿನಲ್ಲಿ ಬರುವುದಿಲ್ಲ. ಅವನ್ನೇನಿದ್ದರೂ ಉಚ್ಚ ನ್ಯಾಯಾಲಯ ಅಥವಾ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು.

ಹಸುರು ನ್ಯಾಯಪೀಠದ ಇನ್ನೊಂದು ಉದ್ದೇಶ ಮೊಕದ್ದಮೆಗಳನ್ನು ಇತ್ಯರ್ಥಪಡಿಸಲು ದೀರ್ಘಕಾಲ ತೆಗೆದುಕೊಳ್ಳಬೇಕಾಗಿಲ್ಲ. ಆದಷ್ಟೂ ಆರು ತಿಂಗಳುಗಳ ಒಳಗೆ ಪರಿಹರಿಸಬೇಕು. ಕರ್ನಾಟದಲ್ಲಿ ಹಲವು ಬಾರಿ ಆಳುವ ಸರ್ಕಾರವನ್ನೂ, ಮಾಲಿನ್ಯ ನಿಯಂತ್ರಣ ಮಂಡಳಿಯನ್ನೂ, ರಿಯಲ್ ಎಸ್ಟೇಟ್‌ನ ಭಾರಿ ಕುಳಗಳನ್ನೂ ತರಾಟೆಗೆ ತೆಗೆದುಕೊಂಡು ಹಸುರು ನ್ಯಾಯಪೀಠ ಭಾರಿ ಮೊತ್ತದ ದಂಡವನ್ನೇ ವಿಧಿಸಿದೆ. ಕರ್ನಾಟಕದ ಹೊರಗೂ ಈ ನ್ಯಾಯಪೀಠ ತನಗೆ ಎಷ್ಟು ತಾಕತ್ತಿದೆ ಎಂದು ಹಲವು ಬಾರಿ, ಹಲವು ಪ್ರಕರಣಗಳಲ್ಲಿ ತೋರಿಸಿಕೊಟ್ಟಿದೆ.

ಸಂಸ್ಥೆಗಳಿಗೆ ಚಾಟಿ

ಕಳೆದ ವರ್ಷ ಅಸ್ಸಾಂ ಬೆಹಾಮತ್‌ನಲ್ಲಿ ಸರ್ಕಾರಿ ಸ್ವಾಮ್ಯದ ತೈಲ ಮತ್ತು ನೈಸರ್ಗಿಕ ಅನಿಲ ನಿಗಮ ಆರು ತೈಲ ಬಾವಿಗಳ ಸುತ್ತ ಭಾರಿ ಪ್ರಮಾಣದ ಮಾಲಿನ್ಯ ಮಾಡಿತ್ತು. ಇದನ್ನು ಗಮನಿಸಿದ ರಾಷ್ಟಿಯ ಹಸುರು ನ್ಯಾಯಪೀಠ ಆ ಸಂಸ್ಥೆಗೆ 2.05 ಕೋಟಿ ರೂಪಾಯಿ ದಂಡ ವಿಧಿಸಿ ಒಂದು ತಿಂಗಳೊಳಗಾಗಿ ಹಣಕಟ್ಟಬೇಕೆಂದು ಆದೇಶ ನೀಡಿತ್ತು.

ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಾಗಲಿ, ಖಾಸಗಿ ಸಂಸ್ಥೆಗಳಾಗಲಿ, ಪರಿಸರಕ್ಕೆ ಧಕ್ಕೆ ತಂದರೆ ಯಾವ ಮುಲಾಜೂ ಇಲ್ಲದೆ ಹಸುರು ನ್ಯಾಯಪೀಠ ದಂಡ ವಿಧಿಸುತ್ತದೆ. ಯಾರ ಮಧ್ಯಪ್ರವೇಶವನ್ನೂ ಇದು ಪ್ರೋತ್ಸಾಹಿಸುವುದಿಲ್ಲ. ಅದೇ ವರ್ಷ ಮೇ ತಿಂಗಳಲ್ಲಿ ದೆಹಲಿಯಲ್ಲಿ ತನ್ನ ಡೀಸೆಲ್ ವಾಹನಗಳನ್ನು ರಸ್ತೆಗಿಳಿಸಿದ್ದ ಫೋಕ್ಸ್ ವ್ಯಾಗನ್ ಎಂಬ ಸಂಸ್ಥೆ ಸಿಕ್ಕಿಹಾಕಿಕೊಳ್ಳುವುದಿಲ್ಲವೆಂದು ಭಂಡ ಧೈರ್ಯದಿಂದ ಸರ್ಕಾರದ ಕಣ್ಣಿಗೆ ಮಣ್ಣೆರೆರಚಿತು. ಅದು ಮಾಡಿದ್ದೆಂದರೆ ವಾಹನ ಉತ್ಸರ್ಜನೆಯನ್ನು ವಾಸ್ತವಕ್ಕಿಂತ ಕಡಿಮೆ ತೋರಿಸುವಂತೆ ಅದರಲ್ಲಿ ಉಪಕರಣಗಳನ್ನು ಜೋಡಿಸಿತ್ತು. ಇದರ ಬಗ್ಗೆ ಗುಮಾನಿ ಹೊಂದಿದ್ದ ಹಸುರು ನ್ಯಾಯಪೀಠ ಅಲ್ಲಲ್ಲೇ ತಪಾಸಣೆಗೊಳಪಡಿಸಿ ಈ ಸಂಸ್ಥೆಯ ವಂಚನೆಯನ್ನು ಬಯಲಿಗೆ ತಂದು 500 ಕೋಟಿ ರೂಪಾಯಿ ದಂಡ ವಿಧಿಸಿತ್ತು.

ಇದರ ಪರಿಣಾಮ ಜೋರಾಗಿಯೇ ಇತ್ತು. ಈ ಸಂಸ್ಥೆ ಭಾರತದಾದ್ಯಂತ ಓಡಿಸುತ್ತಿದ್ದ 3,23,700 ಡೀಸೆಲ್ ವಾಹನಗಳನ್ನು ಹಿಂದಕ್ಕೆ ಪಡೆದು ಅಳವಡಿಸಿದ್ದ ಸಾಧನಗಳನ್ನು ತೆಗೆದುಹಾಕಬೇಕಾಯಿತು. ಉಚ್ಚ ನ್ಯಾಯಾಲಯದವರೆಗೂ ದಾವೆ ಹೋಯಿತು. ದಂಡ ಹಾಕುವುದನ್ನು ಸ್ವಲ್ಪ ನಿಧಾನಿಸಿ ಎಂದು ಹಸುರು ನ್ಯಾಯಪೀಠಕ್ಕೆ ಉಚ್ಚ ನ್ಯಾಯಾಲಯ ಸೂಚಿಸಿದ್ದರಿಂದ ಆ ಸಂಸ್ಥೆ ತಾತ್ಕಾಲಿಕವಾಗಿ ನಿಟ್ಟುಸಿರುಬಿಡುವಂತಾಯಿತು.

2016ರಲ್ಲಿ `ಆರ್ಟ್ ಆಫ್ ಲಿವಿಂಗ್’ನ ರವಿಶಂಕರ್ ಗುರೂಜಿ, ಯಮುನಾ ನದಿಯ ದಡದಲ್ಲಿ ಜಾಗತಿಕ ಸಾಂಸ್ಕೃತಿಕ ಹಬ್ಬವನ್ನು ಏರ್ಪಡಿಸಿದ್ದರು. ಹಸುರು ನ್ಯಾಯಪೀಠ, ಪರಿಸರಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕೆಂದು ಎಚ್ಚರಿಕೆಯನ್ನು ಕೊಟ್ಟಿತ್ತು. ಆದರೂ ಯಮುನಾ ನದಿಯ ಎಡದಂಡೆ ಮತ್ತು ಬಲದಂಡೆಗಳಲ್ಲಿ ಈ ಕಾರ್ಯಕ್ರಮದಿಂದಾಗಿ ದೊಡ್ಡ ಪ್ರಮಾಣದ ಪರಿಸರ ನಾಶವಾಗಿತ್ತು ಎಂದು ಖಚಿತಪಡಿಸಿಕೊಂಡ ಮೇಲೆ ಹಸುರು ನ್ಯಾಯಪೀಠ ಯಾವ ರಿಯಾಯತಿಯನ್ನೂ ತೋರಿಸದೆ `ಆರ್ಟ್ ಆಫ್ ಲಿವಿಂಗ್’ಗೆ ಐದು ಕೋಟಿ ರೂಪಾಯಿ ದಂಡ ವಿಧಿಸಿತ್ತು. ಆ ಸಂಸ್ಥೆ ಪ್ರತಿರೋಧ ತೋರಿತ್ತು.

ತಮ್ಮ ಸಂಸ್ಥೆಯನ್ನು ಇಂಥ ಹಬ್ಬ ಆಚರಿಸಲು ಆಸ್ಟೆçÃಲಿಯ ಆಹ್ವಾನ ಕೊಡುತ್ತಿದೆ. ರೋಮ್‌ನಲ್ಲಿ ಪೋಪ್ ಕೂಡ ಆಹ್ವಾನ ನೀಡಿದ್ದಾರೆ. ವಿಶ್ವ ಭ್ರಾತೃತ್ವವನ್ನು ಗಟ್ಟಿಗೊಳಿಸಲು ಇಂಥ ಸಮಾವೇಶ ಬೇಕು, `ನಾನು ಜೈಲಿಗೆ ಹೋದರೂ ಸರಿಯೇ ದಂಡವನ್ನು ಕಟ್ಟುವುದಿಲ್ಲ’ ಎಂದು ಬಹಿರಂಗವಾಗಿ ಸಾರಿದ್ದ ರವಿಶಂಕರ್ ಗುರೂಜಿ ಮೊದಲು 25 ಲಕ್ಷ ದಂಡವನ್ನು ಕಟ್ಟಿ ಉಳಿದದ್ದನ್ನು ಕಂತಿನಲ್ಲಿ ಕಟ್ಟುವೆ ಎಂಬ ನಿಲುವಿಗೆ ಬರಬೇಕಾಯಿತು. ಜೊತೆಗೆ ಸಂಸ್ಥೆ ಕಟ್ಟುತ್ತಿರುವ ಹಣ ದಂಡವಲ್ಲ ಬದಲು ಯಮುನಾ ನದಿಯ ಪರಿಸರವನ್ನು ಇನ್ನಷ್ಟು ಸುಧಾರಿಸಲು ನಾವು ಮುಂದಾಗಿದ್ದೇವೆ ಎಂದು ಜಾಣ ಉತ್ತರ ಕೊಟ್ಟಿದ್ದರು.

ಕರ್ನಾಟಕದ ಕಥೆ

ನಮ್ಮ ದೇಶದ ಎಲ್ಲ ರಾಜ್ಯಗಳೂ ಒಂದಲ್ಲ ಒಂದು ಹಂತದಲ್ಲಿ ಪರಿಸರವನ್ನು ಹದಗೆಡಿಸಿದ ರಾಜ್ಯಗಳೇ. ಈ ರಾಜ್ಯಗಳಿಗೆ ದಂಡ ತೆರಬೇಕೆಂಬ ವಿಚಾರ ಗೊತ್ತಿದ್ದರೂ ಹೇಗೋ ನುಣುಚಿಕೊಳ್ಳಬಹುದು ಎಂಬ ಭಂಡ ಧೈರ್ಯದಿಂದ ಪರಿಸರ ಕಾನೂನನ್ನೇ ಧಿಕ್ಕರಿಸಿವೆ. ಕರ್ನಾಟಕದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಸಕ್ರಿಯವಾಗಿದ್ದರೂ ಪರಿಸರ ಕುರಿತಂತೆ ಕಾನೂನು ಉಲ್ಲಂಘನೆಗಳೇನೂ ಕಡಿಮೆಯಾಗಿಲ್ಲ. ಇದು ಹೇಗೆಂದರೆ ಪೊಲೀಸ್ ಠಾಣೆಗಳು ದಿನೇ ದಿನೇ ಹೆಚ್ಚುತ್ತಿದ್ದರೂ ಅಪರಾಧದ ಸಂಖ್ಯೆಯೇನೂ ಕಡಿಮೆಯಾಗಿಲ್ಲ ಎನ್ನುವ ವಾಸ್ತವತೆಯಂತೆ,

ರಾಜಧಾನಿ ಬೆಂಗಳೂರು, ಮಾಲಿನ್ಯದ ವಿಚಾರ ಬಂದಾಗಲೆಲ್ಲ ದೊಡ್ಡ ಸುದ್ದಿ ಮಾಡುತ್ತದೆ. ಅದರಲ್ಲೂ ಬೆಳ್ಳಂದೂರು ಕೆರೆ, ಅಗರ ಮತ್ತು ವರ್ತೂರು ಕೆರೆಗಳು ಹೇಗೋ ಪ್ರತಿವರ್ಷವೂ ಸುದ್ದಿಯಲ್ಲಿರುತ್ತವೆ. ಬಹುಶಃ ಕೆಂಪೇಗೌಡ ನಿರ್ಮಿಸಿದ ಕೆಂಪಾಂಬುಧಿ ಕೆರೆ ಇಷ್ಟು ಸುದ್ದಿಯನ್ನೇನೂ ಎಂದೂ ಮಾಡಿಲ್ಲ. ಬೆಳ್ಳಂದೂರು ಕೆರೆ ಬುರುಬುರು ನೊರೆಯನ್ನು ಮೋಡವೆಂಬಂತೆ ಹೊತ್ತು ದಾರಿಹೋಕರಿಗೆ, ವಾಹನ ಸವಾರರಿಗೆ ಆಗಾಗ ಅಸಹನೀಯ ಅನುಭವವನ್ನು ಕೊಟ್ಟು ಸುದ್ದಿಯಲ್ಲಿರುತ್ತದೆ. ಮಹಾನಗರ ಪಾಲಿಕೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ ಹರಸಾಹಸ ಪಟ್ಟರೂ ಈ ಕೆರೆಯನ್ನು ಸಂಪೂರ್ಣವಾಗಿ ಮಾಲಿನ್ಯಮುಕ್ತ ಮಾಡುವುದರಲ್ಲಿ ಎಡವುತ್ತಿವೆ, ಸೋಲುತ್ತಿವೆ.

ಈ ಕೆರೆಯ ಮೇಲೆ ಹಸುರು ನ್ಯಾಯಪೀಠ ನಿಗಾ ಇಟ್ಟು ಮೇಲಿನ ಈ ಎಲ್ಲ ಸಂಸ್ಥೆಗಳನ್ನೂ ಪದೇ ಪದೇ ತರಾಟೆಗೆ ತೆಗೆದುಕೊಂಡಿದೆ. ಇವು ಕಾನೂನು ಪಾಲಿಸುತ್ತವೆ ಎಂದು ಭರವಸೆ ಇಟ್ಟದ್ದು ಹುಸಿಯಾಯಿತು ಎಂದು ಕಂಡಾಗ ಚಾಟಿಯನ್ನು ಬೀಸಲೇ ಬೇಕಾಯಿತು. ಈಗಿನ ವ್ಯವಸ್ಥೆ ಸುಲಭವಾಗಿ ಕಾನೂನಿಗೂ ಬಗ್ಗುವುದಿಲ್ಲ. ಕೊನೆಗೆ ಕಳೆದ ವರ್ಷ ಹಸುರು ನ್ಯಾಯಪೀಠ ಸರಿಯಾದ ಬರೆಯನ್ನೇ ಹಾಕಬೇಕಾಯಿತು. ಈ ಮೂರೂ ಕೆರೆಗಳ ಮುಖ್ಯ ಸಮಸ್ಯೆ ಎಂದರೆ ಗೃಹ ಮತ್ತು ಕೈಗಾರಿಕಾ ತ್ಯಾಜ್ಯವನ್ನು ಸಂಸ್ಕರಿಸದೆ ಇವಕ್ಕೆ ಬಿಡುವುದು. ಬರೀ ವಾಸನೆಯಷ್ಟೇ ಅಲ್ಲ, ಆ ರಸ್ತೆಗಳಲ್ಲಿ ಜನ, ವಾಹನ ಸಾಗದಂತಾಗಿ ರೋಸಿಹೋಗುವ ಸ್ಥಿತಿ ತಲುಪಿತ್ತು.

ಈ ಕೆರೆಗಳಿಗೆ ಎಷ್ಟು ಸಂಸ್ಕರಣ ಘಟಕಗಳನ್ನು ಸ್ಥಾಪಿಸಿದ್ದೀರಿ? ಎಲ್ಲಿ ಸ್ಥಾಪಿಸಿದ್ದೀರಿ? ಅತಿಕ್ರಮಣಕಾರರನ್ನು ತಡೆಯಲು ಬೇಲಿಯನ್ನೇಕೆ ಹಾಕಿಲ್ಲ? ಕೆರೆಯ ದಡದಲ್ಲಿ ಕಾನೂನುಬಾಹಿರವಾಗಿ ನೆಲೆಸಿರುವವರನ್ನು ಏಕೆ ಸ್ಥಳಾಂತರಮಾಡಿಲ್ಲ? ಈ ಕೆರೆಯ ಹೂಳನ್ನು ಇನ್ನೂ ಏಕೆ ಎತ್ತಿಲ್ಲ? ಜಲಸಸ್ಯಗಳು ಇನ್ನೂ ಅಲ್ಲಿ ತೇಲಾಡುತ್ತಿವೆ ಏಕೆ? ಎಂಬ ಪ್ರಶ್ನೆಗಳಿಗೆ ಉತ್ತರವೇ ಸಿಕ್ಕಲಿಲ್ಲ. ಹಸುರು ನ್ಯಾಯಪೀಠ 25 ಕೋಟಿ ದಂಡ ವಿಧಿಸಿತ್ತು. ರಾಜ್ಯದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರಿಗೂ ಬಿಸಿ ತಟ್ಟಿಸಿತು. ವಿಚಾರಣೆಗೆ ಹಾಜರಾಗಬೇಕೆಂಬ ಮೆಮೋ ಕೂಡ ಕೊಟ್ಟಿತ್ತು. ಹಲವು ನೆಪಗಳನ್ನು ಹೇಳಿ ಪ್ರತಿನಿಧಿಗಳು ತಪ್ಪೊಪ್ಪಿಗೆ ಮಾಡಿದರೂ ಹಸುರು ನ್ಯಾಯಪೀಠ ಕ್ಷಮಿಸಲಿಲ್ಲ. ಇದಾದನಂತರ ಆದ ಬೆಳವಣಿಗೆ ಎಂದರೆ ಕರ್ನಾಟಕ ಸರ್ಕಾರ ವಾದಮಂಡನೆಗಾಗಿ ನೇಮಿಸಿದ್ದ ಸರ್ಕಾರೀ ವಕೀಲರನ್ನೇ ವಜಾಮಾಡಿತ್ತು!

ವರ್ತೂರು ಕೆರೆಯಲ್ಲಿ ಇನ್ನೂ ಒಂದು ಬಗೆಯ ಸಮಸ್ಯೆ. 2015ರಲ್ಲಿ ಬೆಂಗಳೂರು ಮಹಾನಗರದ ಪರಿಷ್ಕರಿಸಿದ ನಕ್ಷೆಯಲ್ಲಿ ಕೆರೆಯ ಆಜುಬಾಜಿನಲ್ಲಿ ಮನೆಗಳನ್ನು ಕಟ್ಟುವ ಸಲುವಾಗಿ 30 ಮೀಟರ್ ಆಚೆಗೆ ಕಟ್ಟಬಹುದೆಂಬ ಸೂಚನೆ ಹೊರಡಿಸಿತ್ತು. ಅದನ್ನು ಅನುಸರಿಸಿ ದೊಡ್ಡ ದೊಡ್ಡ ` ಬಿಲ್ಡರ್ಸ್’ ಭರ್ಜರಿ ವಿಲ್ಲಾಗಳನ್ನೇ ಕಟ್ಟಿದ್ದರು. ಕೊನೆಗೆ ಸರ್ಕಾರೇತರ ಸಂಸ್ಥೆಯೊಂದು ಹಸುರು ನ್ಯಾಯಪೀಠಕ್ಕೆ ದೂರು ಕೊಟ್ಟು ಇದು ಪರಿಸರದ ಮೇಲೆ ಮಾಡಿದ ಪ್ರಹಾರ, ಕ್ರಮ ಕೈಗೊಳ್ಳಿ ಎಂದು ಪ್ರಾರ್ಥಿಸಿತ್ತು. ಒಡನೆಯೇ ಕಾರ್ಯೋನ್ಮುಖವಾದ ಪೀಠ, ಕೆರೆಯ ಅಂಚಿನಿಂದ 75 ಮೀಟರ್‌ವರೆಗೆ, ರಾಜಾಕಾಲುವೆಯಿಂದ 35 ಮೀಟರ್‌ವರೆಗೆ, ಉಪಕಾಲುವೆಗಳ ವಿಚಾರದಲ್ಲಿ 25 ಮೀಟರ್‌ವರೆಗೆ ಯಾವುದೇ ನಿರ್ಮಾಣ ಕಾರ್ಯ ಮಾಡಬಾರದೆಂದು ಎಚ್ಚರಿಕೆ ಕೊಟ್ಟಿತು. ಇದನ್ನು ಅನ್ವಯಿಸಿದ್ದರೆ `ಲ್ಯಾಂಡ್ ಶಾರ್ಕ್’ಗಳು ಕಟ್ಟಿದ್ದ ದೊಡ್ಡ ದೊಡ್ಡ ವಿಲ್ಲಾಗಳಿಗೆ ಸಂಚಕಾರ ಬಂದು ಅಲ್ಲಿ ವಾಸವಿದ್ದವರು ಆಶ್ರಯ ಕಳೆದುಕೊಳ್ಳಬೇಕಾದ ಪ್ರಸಂಗ ಎದುರಾಗುತ್ತಿತ್ತು.

ಕೊನೆಗೆ ಕರ್ನಾಟಕ ಸರ್ಕಾರ ಸರ್ವೋಚ್ಚ ನ್ಯಾಯಲಯದ ಮೆಟ್ಟಿಲು ಹತ್ತಿ ಹಿಂದಿನ ಶಾಸನ ವಿಧಿಸಿದಂತೆ ನಿಯಮಗಳನ್ನು ಕಾಪಾಡಬೇಕು ಎಂದು ಸೂಚಿಸಿದಾಗ ಕುಮಾರಸ್ವಾಮಿ ಸರ್ಕಾರ `ಅದು ಸರ್ಕಾರದ ಗೆಲುವು’ ಎಂದು ಬಿಂಬಿಸಿತ್ತು. ಆದರೆ ದೊಡ್ಡ ದೊಡ್ಡ ಗುತ್ತಿಗೆದಾರರು ವಿಶೇಷ ಆರ್ಥಿಕ ವಲಯ ಎಂಬ ಹಣೆಪಟ್ಟಿಯಲ್ಲಿ ಅಗರಂ ಮತ್ತು ಬೆಳ್ಳಂದೂರು ಕೆರೆಗಳ ನಡುವಿನ ಜಾಗದಲ್ಲಿ ದೊಡ್ಡ ಪ್ರಮಾಣದ ಅಪಾರ್ಟ್ಮೆಂಟುಗಳನ್ನು ಕಟ್ಟಿ ಬಚಾವಾಗಿದ್ದರು. ಆದರೆ ಹಸುರು ನ್ಯಾಯಪೀಠ ಮತ್ತೊಮ್ಮೆ ಸರ್ವೇ ಮಾಡಿಸಿ ಮಂತ್ರಿಟೆಕ್ ಮತ್ತು ಕೋರ್‌ಮೈಂಡ್ ಸಾಫ್ಟ್ವೇರ್ ಬಿಲ್ಡರ್ಸ್ ಗಳಿಗೆ ಕೆರೆ ಪರಿಸರವನ್ನು ನಾಶಪಡಿಸಿದ್ದಕ್ಕೆ 140 ಕೋಟಿ ರೂಪಾಯಿ ದಂಡವಿಧಿಸಿತ್ತು.

ಪರಿಸರ ಪ್ರೀತಿಸುವ ನಗರದ ಜನರಿಗೆ, ಸ್ವಯಂ ಸಂಸ್ಥೆಗಳಿಗೆ ಮತ್ತು ಸರ್ಕಾರೇತರ ಸಂಸ್ಥೆಗಳಿಗೆ ಹಸುರು ನ್ಯಾಯಪೀಠದ ಈ ನಡೆ ಅತ್ಯಂತ ಮೆಚ್ಚುಗೆಯಾಗಿದೆ. ಆದರೆ ಇಲ್ಲೊಂದು ದೊಡ್ಡ ಪ್ರತಿಬಂಧಕವಿದೆ. ಅದೆಂದರೆ ಹಸುರು ನ್ಯಾಯಪೀಠದ ತೀರ್ಪನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು. ಪೀಠ ಕೆಲಸ ಮಾಡಿದರೂ ಒಂದು ಹಂತದಲ್ಲಿ ಶಿಕ್ಷಿಸುವ ಅಧಿಕಾರ ಅದಕ್ಕಿಲ್ಲ. ಇದು ಹೇಗೆಂದರೆ ಪೊಲೀಸಿನವರು ಕಳ್ಳನನ್ನು ಮಾಲು ಸಮೇತ ಹಿಡಿಯಬಹುದು. ಆದರೆ ಜೈಲಿಗೆ ಕಳಿಸುವ ಅಧಿಕಾರ ಇಲ್ಲ ಎಂಬಂತಾಯಿತು. ಈಗಲೂ ಸರ್ವೋಚ್ಚ ನ್ಯಾಯಾಲಯ ಹಸುರು ನ್ಯಾಯಪೀಠಕ್ಕೆ ಸರ್ವಾಧಿಕಾರವನ್ನು ಕೊಟ್ಟರೆ ಮಾತ್ರ ಆ ಸಂಸ್ಥೆಗೆ ಬಲಬಂದೀತು.

*ಲೇಖಕರು ಭೂವಿಜ್ಞಾನಿಗಳು, ಸಂಶೋಧಕರು, ಸಂಕೀರ್ಣ ವಿಜ್ಞಾನವನ್ನು ಕಸ್ತೂರಿಕನ್ನಡದಲ್ಲಿ ನಿರೂಪಿಸಬಲ್ಲರು. ತುಮಕೂರು ಜಿಲ್ಲೆಯ ತಾಳಗುಂದ ಹುಟ್ಟೂರು.

Leave a Reply

Your email address will not be published.