ಬಳಕೆದಾರ, ಬಂಡವಾಳಗಾರರ ಸಂಬಂಧ ಬುಡಮೇಲು ಆಗಲಿದೆಯೇ…?

ಪಿಲಿಪ್ ಕೋಟ್ಲರ್ ಅವರನ್ನು ವಿಶ್ವಾದ್ಯಂತ ಆಧುನಿಕ ಮಾರುಕಟ್ಟೆ ವ್ಯವಸ್ಥೆಯ ಪಿತಾಮಹ ಎಂದು ಕರೆಯಲಾಗುತ್ತದೆ. ಅವರು ಜಗತ್ತಿನ ಬಹುಮುಖ್ಯ ಮಾರುಕಟ್ಟೆ ತಂತ್ರಜ್ಞಾನದ ಮಹಾನ್ ಪರಿಣತ ಎಂಬ ಮನ್ನಣೆ ಗಳಿಸಿಕೊಂಡಿದ್ದಾರೆ. ಅಮೆರಿಕನ್ ಮಾರ್ಕೆಟಿಂಗ್ ಅಸೋಸಿಯೇಶನ್ ಇವನನ್ನು ‘ಮಾರುಕಟ್ಟೆ ಚಿಂತನೆಯ ನಾಯಕ’ ಎಂದು ಮತದಾನದ ಮೂಲ ಆಯ್ಕೆ ಮಾಡಿದೆ ಮತ್ತು ‘ಹ್ಯಾಂಡ್ ಬುಕ್ ಆಫ್ ಮೇನೇಜ್‌ಮೆಂಟ್ ಥಿಂಕಿಂಗ್’ ಕೃತಿಯಲ್ಲಿ ಇವನನ್ನು ‘ಆಧುನಿಕ ಮಾರ್ಕೆಟ್‌ಂಗ್ ನಿರ್ವಹಣೆಯ ಸಂಸ್ಥಾಪಕ’ ಎಂದು ಉಲ್ಲೇಖಿಸಿದೆ. ಕೋವಿಡ್ 19 ಬಗ್ಗೆ ಸಾರಸೋಟ ಇನ್‌ಸ್ಟಿಟ್ಯೂಟ್ 04.06.2020ರಂದು ನಡೆಸಿದ ಸರಣಿ ವಿಚಾರ ವಿನಿಮಯ ಕಾರ್ಯಕ್ರಮದ ಭಾಗವಾಗಿ ಪ್ರಕಟವಾದ ಪಿಲಿಪ್ ಕೋಟ್ಲರ್ ಅವರ ‘ಉಪಭೋಗತಾವಾದ’ ಕುರಿತ ಪ್ರಬಂಧದ ಕನ್ನಡ ಅನುವಾದ ಇದು. ಇಲ್ಲಿ ಕೋಟ್ಲರ್ ಅವರು ಅಮೆರಿಕೆಯನ್ನು ನಿದಶವನ್ನಾಗಿಟ್ಟುಕೊಂಡು ಪ್ರಬಂಧ ರಚಿಸಿದ್ದಾರೆ. ಆದರೆ ಇದು ಇಂದಿನ ನಮ್ಮ ಆರ್ಥಿಕತೆಗೂ ಅಕ್ಷರಶಃ ಅನ್ವಯವಾಗುತ್ತದೆ. ಈ ಕಾರಣಕ್ಕೆ ಈ ಅನುವಾದ.

ಅನಿರ್ಬಂಧಿತವಾಗಿ ಕೊವಿಡ್ 19 ಜಗತ್ತಿನಾದ್ಯಂತ ಹಬ್ಬುತ್ತಿದೆ. ಇದು ಸಾವು-ನೋವು ಮತ್ತು ವಿನಾಶದ ಸರಮಾಲೆಯನ್ನೇ ಸೃಷ್ಟಿಸಿದೆ. ಜಾಗತಿಕವಾಗಿ ಕೋಟ್ಯಂತರ ದುಡಿಮೆಗಾರರು ನಿರುದ್ಯೋಗಕ್ಕೆ ತುತ್ತಾಗುತ್ತಿದ್ದಾರೆ. ಇದರಿಂದಾಗಿ ಜಗತ್ತಿನಲ್ಲಿ ‘ಮಹಾ ಕುಸಿತ’ ಉಂಟಾಗಿದೆ. ಇದರ ಪರಿಣಾಮ ಪ್ರಧಾನವಾಗಿ ಬಡವರ ಬದುಕಿನ ಮೇಲಾಗುತ್ತದೆ. ಅವರ ಆರೋಗ್ಯ ಮತ್ತು ದುಡಿಮೆಯನ್ನು ಇದು ಕಿತ್ತುಕೊಳ್ಳುತ್ತದೆ. ಅನೇಕರಿಗೆ ಕೈತೊಳೆದುಕೊಳ್ಳುವುದಕ್ಕೆ ಬೇಕಾದ ಖರ್ಚನ್ನು ಭರಿಸುವುದು ಸಾಧ್ಯವಾಗುತ್ತಿಲ್ಲ. ಏಕೆಂದರೆ ನೀರಿನ ಕೊರತೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಅನುಸರಿಸುವುದು ಸಾಧ್ಯವಿಲ್ಲದ ಕೋಟ್ಯಾಂತರ ಮಂದಿಯ ಬದುಕು ಏನಾಗುತ್ತದೆ? ಕೊಳೆಗೇರಿವಾಸಿಗಳನ್ನು, ಜೈಲುಗಳಲ್ಲಿರುವ ಖೈದಿಗಳನ್ನು ಮತ್ತು ನಿರಾಶ್ರಿತರನ್ನು ಡೇರೆಯೊಳಗೆ ಕೂಡಿಹಾಕಲಾಗಿದೆ.

ವ್ಯಾಪಾರ ಸ್ತಬ್ಧವಾಗುತ್ತಿದೆ. ಜನರನ್ನು ಮನೆಯಲ್ಲಿಯೇ ಕುಳಿತುಕೊಳ್ಳಲು ಕೇಳಿಕೊಳ್ಳಲಾಗುತ್ತಿದೆ. ಸಾಮಾಜಿಕ ಅಂತರವನ್ನು ಅನುಸರಿಸುವಂತೆ ತಾಕೀತು ಮಾಡಲಾಗುತ್ತಿದೆ. ಮತ್ತೆ ಮತ್ತೆ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಲು ಹೇಳಲಾಗುತ್ತಿದೆ. ದಿನನಿತ್ಯದ ಅವಶ್ಯಕತೆಗಳಾದ ಆಹಾರ ಮತ್ತು ಇತರೆ ಸರಕು-ಸರಂಜಾಮುಗಳನ್ನು ಜನರು ಸಂಗ್ರಹಿಸಿಕೊಳ್ಳುತ್ತಿದ್ದಾರೆ. ಎಲ್ಲಿ ಕೋವಿಡ್ 19 ಮುಂದಿನ ಅನೇಕ ವಾರಗಳ ಕಾಲ, ತಿಂಗಳುಗಳ ಕಾಲ ಅಥವಾ ವರ್ಷಗಟ್ಟಲೆ ಮುಂದುವರಿಯಬಹುದೆಂಬ ಭಯದಿಂದ ಕೆಲವರು ಮಾಸ್ಕುಗಳನ್ನು, ಸ್ನಾನದ ಸೋಪು ಮತ್ತು ಇತರೆ ದೈನಂದಿನ ಅವಶ್ಯಕತೆಗಳನ್ನು ದಾಸ್ತಾನು ಮಾಡಿಕೊಳ್ಳುತ್ತಿದ್ದಾರೆ.

ಇದೀಗ ಅಮೆರಿಕೆಯು 2 ಟ್ರಿಲಿಯನ್ ಡಾಲರ್ ನೆರವಿನ ಪ್ಯಾಕೇಜ್ ಪ್ರಕಟಿಸಿದೆ. ಇದರ ವಿವರಗಳನ್ನು ನೋಡಿದರೆ ಇದು ಮತ್ತೊಮ್ಮೆ ವಾಲ್ ಸ್ಟ್ರೀಟಿನ ಸಮಾಜವಾದದ ಕಥೆಯಾಗಿದೆ. ಇದು ಸಂಕಷ್ಟ ಪರಿಹಾರದ ಹಾಗೂ ದುಡಿಯುವ ವರ್ಗಕ್ಕೆ ವೇತನ ನೀಡುವ ಕಾರ್ಯಕ್ರಮವನ್ನು ಒಳಗೊಂಡಿದೆ. ಉಳಿದುದು ಇತರರಿಗೆ ಎಂದು ತಿಳಿಯಬಹುದು. ವರಮಾನ ಅಸಮಾನತೆಯು ಇನ್ನು ಒಂದು ಪಟ್ಟು ಉಲ್ಬಣಗೊಳ್ಳಬಹುದು.

ನನ್ನ ಊಹೆಯ ಪ್ರಕಾರ ಈ ದುಃಸ್ಥಿತಿ ಮತ್ತು ಭವಿಷ್ಯದ ಬಗೆಗಿನ ತಲ್ಲಣಗಳಿಂದಾಗಿ ಬಳಕೆದಾರರ ಮನೋಭಾವ ಮತ್ತು ವರ್ತನೆಗಳಲ್ಲಿ ಹೊಸ ಪರ್ವ ಉಂಟಾಗಬಹುದು. ಈ ಬದಲಾವಣೆಗಳು ಇಂದಿನ ಬಂಡವಾಳಶಾಹಿಯ ಸ್ವರೂವನ್ನೇ ಬದಲಾಯಿಸಬಹುದು. ಅಂತಿಮವಾಗಿ ಇದರಿಂದಾಗಿ ಗ್ರಾಹಕರು ತಾವು ಏನನ್ನು ಬಳಸುತ್ತಿದ್ದೇವೆ ಮತ್ತು ಎಷ್ಟು ಬಳಸುತ್ತಿದ್ದೇವೆ ಎಂಬುದನ್ನು ಮರುಹೊಂದಾಣಿಕೆ ಮಾಡಿಕೊಳ್ಳತೊಡಗುತ್ತಾರೆ. ಈ ಎಲ್ಲ ಬದಲಾವಣೆಗಳು ವರ್ಗ ಪ್ರತಿಷ್ಠೆ ಮತ್ತು ಅಸಮಾನತೆಯನ್ನು ಹೇಗೆ ಪ್ರಭಾವಿಸುತ್ತದೆ ಎಂಬ ಪ್ರಶ್ನೆ ನಮ್ಮ ಮುಂದಿದೆ. ಬಂಡವಾಳಶಾಹಿಯ ಆಶಯಗಳ ಬಗ್ಗೆ ಜನರು ಮರುಚಿಂತಿಸಬೇಕು. ಈ ಭಯಾನಕ ಪ್ರಕರಣದಿಂದ ಪಾಠ ಕಲಿತು ಹೆಚ್ಚು ಸಮಾನತೆಯಿಂದ ಕೂಡಿದ ಹೊಸ ಬಂಡವಾಳಶಾಹಿಯ ಬಗ್ಗೆ ಯೋಚಿಸಬೇಕು.

ಮಿತಿಮೀರಿದ ಅನುಭೋಗ

ಕೈಗಾರಿಕಾ ಕ್ರಾಂತಿಯು ಉದಯವಾದ ಕಾಲದ ಬಗ್ಗೆ ಮೊದಲು ಯೋಚಿಸೋಣ. ಜಗತ್ತಿನ ಜನರ ಕೈಗೆ ಅತ್ಯಧಿಕ ಪ್ರಮಾಣದಲ್ಲಿ ಸರಕು-ಸೇವೆಗಳನ್ನು ಕೈಗಾರಿಕಾ ಕ್ರಾಂತಿಯು ಒದಗಿಸಿತು. ಉಗಿಯಂತ್ರ, ರಸ್ತೆ-ರೈಲು ಸಾರಿಗೆ, ಹೊಸ ಯಂತ್ರಗಳು, ಕಾರ್ಖಾನೆಗಳು ಮತ್ತು ಸುಧಾರಿಸಿದ ಒಕ್ಕಲುತನ ಮುಂತಾದವು ಆರ್ಥಿಕತೆಯ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಿದವು. ಅಪರಿಮಿತ ಪ್ರಮಾಣದ ಉತ್ಪಾದನೆ ಎಂದರೆ ಅಪರಿಮಿತ ಅನುಭೋಗ. ಅಪರಿಮಿತ ಅನುಭೋಗವೆಂದರೆ ಹೆಚ್ಚು ಹೆಚ್ಚು ಬಂಡವಾಳ ಹೂಡಿಕೆ. ಬಂಡವಾಳ ಹೂಡಿಕೆಯು ಹೆಚ್ಚಾದುದರಿಂದ ಉತ್ಪಾದನೆಯು ಹೆಚ್ಚಾಯಿತು. ಸರಕು-ಸರಂಜಾಮಿನ ಜಗತ್ತು ವಿಸ್ತರಿಸುತ್ತಾ ನಡೆಯಿತು. ಅಪರಿಮಿತ ಸರಕುಗಳು ದೊರೆಯುವಂತಾದುದರಿಂದ ಮತ್ತು ಆಯ್ಕೆಯ ಅವಕಾಶಗಳು ವಿಸ್ತೃತಗೊಂಡಿದ್ದರಿಂದ ಜನರ ಸಂತೋಷಕ್ಕೆ ಪಾರವೇ ಇಲ್ಲದಂತಾಯಿತು. ಆಹಾರ, ಉಡುಪು, ವಸತಿಗಳ ಆಯ್ಕೆಯ ಅವಕಾಶಗಳು ವಿಸ್ತೃತಗೊಂಡಿದ್ದರಿಂದ ಜನರು ತಮ್ಮ ವ್ಯಕ್ತಿತ್ವವನ್ನು ವೈಯುಕ್ತೀಕರಣಗೊಳಿಸಿಕೊಳ್ಳ ತೊಡಗಿದರು. ಈಗ ಅವರು ಯಾವುದೇ ನಿರ್ಬಂಧವಿಲ್ಲದೆ ಮಾರುಕಟ್ಟೆಯಲ್ಲಿ ಖರೀದಿ ಮಾಡಬಹುದು. ಉತ್ಪಾದಕರು ನವನವೀನ ಸರಕು-ಸರಂಜಾಮುಗಳನ್ನು ನೀಡತೊಡಗಿದ್ದುದುರಿಂದ ಜನರ ಬದುಕು ಐಷಾರಾಮಿಯಾಗತೊಡಗಿತು.

ಪ್ರಜೆಗಳು ಹೆಚ್ಚು ಹೆಚ್ಚು ಉಪಭೋಗಿಗಳಾಗ ತೊಡಗಿದರು. ಉಪಭೋಗವು ಜನರ ಜೀವನ ಶೈಲಿ ಮತ್ತು ಸಂಸ್ಕೃತಿಯಾಗ ತೊಡಗಿತು. ಅನುಭೋಗಿಗಳ ಸಂಖ್ಯೆಯು ಹೆಚ್ಚಾದಂತೆ ಉತ್ಪಾದಕರ ಲಾಭ ಮೇರೆ ಮೀರಿತು. ಉತ್ಪಾದಕರು ಹೆಚ್ಚು ಹೆಚ್ಚು ಬೇಡಿಕೆ ಮತ್ತು ಹೆಚ್ಚು ಹೆಚ್ಚು ಉಪಭೋಗಕ್ಕೆ ಉತ್ತೇಜನ ನೀಡತೊಡಗಿದರು. ಈಗ ಅವರು ಜಾಹೀರಾತುಗಳನ್ನು ನೀಡುವ ಮತ್ತು ಮಾರಾಟ ಕೊಡುಗೆಗಳನ್ನು ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡರು. ಇದಕ್ಕೆ ಸಂಬಂಧಿಸಿದ ಮಾಧ್ಯಮವೂ ರೂಪುಗೊಂಡಿತು. ಮುಂದುವರಿದು ಟೆಲಿಫೋನ್ ಮಾರ್ಕೆಟಿಂಗ್, ರೇಡಿಯೋ ಮಾರ್ಕೆಟಿಂಗ್, ಟಿ.ವಿ.ಮಾರ್ಕೆಟಿಂಗ್ ಮತ್ತು ಅಂತರ್‌ಜಾಲ ಮಾರುಕಟ್ಟೆಯ ಕಡೆಗೆ ಗಮನ ಹರಿಸತೊಡಗಿದರು. ಅನುಭೋಗಿಗಳ ಆಸೆ ಆಕಾಂಕ್ಷೆಗಳನ್ನು ಮತ್ತು ಖರೀದಿ ಚಪಲತೆಯನ್ನು ಉತ್ತೇಜಿಸಿದಂತೆ ವ್ಯಾಪಾರಿ ಉದ್ದಿಮೆಗಳ ಲಾಭವೂ ಏರಿಕೆಯಾಗತೊಡಗಿತು.

ಉದಯಿಸುತ್ತಿದ್ದ ಕೊಳ್ಳುಬಾಕುತನದ ಬಗ್ಗೆ ಆರಂಭದಿಂದಲೂ ಅನೇಕ ವೀಕ್ಷಕರಿಗೆ ತಪ್ಪು ಕಲ್ಪನೆಗಳಿದ್ದವು. ನಾಗರಿಕರಲ್ಲಿ ಬೆಳೆಯುತ್ತಿರುವ ಲೌಕಿಕ ಸರಕು-ಸರಂಜಾಮುಗಳ ಬಗೆಗಿನ ಆಸಕ್ತಿಗಳು ಅನೇಕ ಧಾರ್ಮಿಕ ಮುಖ್ಯಸ್ಥರಿಗೆ ಧಾರ್ಮಿಕ ನಂಬಿಕೆಗಳು ಮತ್ತು ಆಧ್ಯಾತ್ಮಿಕ ಮೌಲ್ಯಗಳಿಗೆ ಪೈಪೂಟಿ ನೀಡುವ ಸಂಗತಿಗಳಾಗಿ ಕಂಡುಬಂದವು. ಕರ್ಮಠೀಯ ಮತ್ತು ಪರಿಶುದ್ಧ ಮೌಲ್ಯಗಳ ಪರಂಪರೆಯ ಮೂಲಕ ಜನಸಂಖ್ಯೆಯ ಕೆಲವು ಗುಂಪುಗಳನ್ನು ಕೊಳ್ಳುಬಾಕು ಸಂಸ್ಕೃತಿಗೆ ಬಲಿಯಾಗದಂತೆ ಮತ್ತು ಸಾಲದ ಬಲೆಗೆ ಬೀಳದಂತೆ ನೋಡಿಕೊಂಡವು. ಶ್ರೀಮಂತ ಅನುಭೋಗಿಗಳು ತಮ್ಮ ಶ್ರೀಮಂತಿಕೆಯನ್ನು ಪ್ರದರ್ಶನದ ಸಾಧನವಾಗಿ ಮಾಡಿಕೊಳ್ಳುತ್ತಿದ್ದುದನ್ನು ಅನೇಕರು ಟೀಕಿಸತೊಡಗಿದರು.

ಈ ಬಗ್ಗೆ ಅರ್ಥಶಾಸ್ತ್ರಜ್ಞ ಥೋರಸ್ಟನ್ ವೆಬ್ಲನ್ ಪ್ರಪ್ರಥಮವಾಗಿ ‘ಪ್ರದರ್ಶನಾತ್ಮಕ ಅನುಭೋಗ’ದ ಬಗ್ಗೆ ಗಮನ ಸೆಳೆದರು. ಆಧ್ಯಾತ್ಮವಾದಿ ಜೀವನಶೈಲಿಯಿಂದ ಜನರು ದೂರವಾಗುತ್ತಿದ್ದುದು ಅವನಿಗೆ ಒಂದು ‘ರೋಗ’ವಾಗಿ ಕಂಡುಬಂದಿತು. ಈ ಬಗೆಯ ಪ್ರದರ್ಶನ ಪ್ರತಿಷ್ಠೆಯ ರೋಗಗ್ರಸ್ತ ಮನೋಭಾವದ ಸಮಸ್ಯೆಯನ್ನು ಆತ ಬಯಲಿಗೆಳೆದ. ಫಿಲಿಪೈನ್ಸ್ ದೇಶದ ಇಮೆಲ್ಡಾ ಮಾರ್ಕೋಸ್ ಗಡಿಪಾರು ಜೀವನ ನಡೆಸುತ್ತಿದಾಗ ಅವಳ ಬಳಿಯಿದ್ದ 3000 ಕಾಲ್ಮುರಿಗಳ ಸುದ್ದಿಯು ಬಹಿರಂಗವಾದ ಸಮಯದಲ್ಲಿ ವೆಬ್ಲನ್ ಬದುಕಿದ್ದಿದ್ದರೆ ಅವನು ನಿಜವಾಗಲು ದಿಗ್ಭ್ರಮೆಗೊಳ್ಳುತ್ತಿದ್ದ.

ಕೊಳ್ಳುಬಾಕು ಸಂಸ್ಕೃತಿ ವಿರೋಧಿ ಪಡೆ

ಕೊಳ್ಳುಬಾಕು ಸಂಸ್ಕೃತಿಯ ವಿರುದ್ಧ ಬೆಳೆಯುತ್ತಿರುವ ಚಳವಳಿಯ ಸೂಚನೆಗಳು ಕಣ್ಣಿಗೆ ಕಾಣತೊಡಗಿವೆ. ಇವರಲ್ಲಿ ಐದು ಬಗೆಯ ಗುಂಪುಗಳನ್ನು ಗುರುತಿಸಬಹುದು.

 1. ಅನೇಕ ಅನುಭೋಗಿಗಳು ಸರಳ ಜೀವನ ನಡೆಸುವ ವ್ಯಕ್ತಿಗಳಾಗುತ್ತಿದ್ದಾರೆ. ಇವರ ನೀತಿ ‘ಕಡಿಮೆ ಭೋಗಿಸು: ಕಡಿಮೆ ಖರೀದಿಸು’. ಯದ್ವಾತದ್ವ ಬೆಳೆಯುತ್ತಿರುವ ಸರಕು ಸಂಸ್ಕೃತಿಗೆ ಇದು ಅವರ ಪ್ರತಿರೋಧ. ಇವರು ತಮ್ಮ ಸರಕುಗಳ ದಾಸ್ತಾನನ್ನು ಕಡಿಮೆ ಮಾಡಿಕೊಳ್ಳಲು ಬಯಸುತ್ತಾರೆ. ಏಕೆಂದರೆ ಅವುಗಳಲ್ಲಿ ಕೆಲವನ್ನು ಬಳಸುತ್ತಿಲ್ಲ ಮತ್ತು ಕೆಲವು ಅನಗತ್ಯ. ಸರಳ ಜೀವನಕ್ಕೆ ಬದ್ಧರಾದವರು ಸರಕುಗಳನ್ನು (ಉದಾ: ಕಾರು ಅಥವಾ ಮನೆ) ಖರೀದಿಸುವುದರ ಬಗೆಗಿನ ಆಸಕ್ತಿಯನ್ನು ಕಡಿಮೆಮಾಡಿಕೊಳ್ಳುತ್ತಿದ್ದಾರೆ. ಇವರು ಖರೀದಿಸುವುದಕ್ಕೆ ಅಥವಾ ಮಾಲೀಕರಾಗುವುದಕ್ಕ್ಕೆ ಪ್ರತಿಯಾಗಿ ಬಾಡಿಗೆ ಸರಕುಗಳನ್ನು ಪಡೆದುಕೊಳ್ಳುವುದನ್ನು ಇಷ್ಟಪಡುತ್ತಾರೆ.
 2. ಎರಡನೆಯ ಇನ್ನೊಂದು ಗುಂಪೆಂದರೆ ವರಮಾನ ಬೆಳವಣಿಗೆ ವಿರೋಧಿ ಕಾರ್ಯಕರ್ತರು. ಇವರು ಅನುಭೋಗಕ್ಕಾಗಿಯೇ ಅಪಾರ ಸಮಯ ಮತ್ತು ಶ್ರಮ ವಿನಿಯೋಜನೆಯಾಗುತ್ತಿದೆ ಎಂದು ಭಾವಿಸುತ್ತಾರೆ. ವರ್ಡ್ಸ್ ವರ್ತ್ ನ ಈ ಕವನವು ಇದನ್ನು ಸೂಕ್ಷ್ಮವಾಗಿ ಹಿಡಿದಿಟ್ಟಿದೆ.

ನಮ್ಮ ಬದುಕು ಲೌಕಿಕದಲ್ಲಿ ಮುಳುಗಿ ಹೋಗಿದೆ

ಗಳಿಸುವುದು, ಖರ್ಚು ಮಾಡುವುದು ಇದೇ ಆಗಿ ಹೋಗಿದೆ

ಸರಕುಗಳನ್ನು ಹಾಗೂ ನಮ್ಮ ಶ್ರಮಶಕ್ತಿಯನ್ನು ನಾವು ಪೋಲು ಮಾಡುತ್ತಿದ್ದೇವೆ

ಪ್ರಕೃತಿ ನಮ್ಮದು ಎನ್ನುವ ಭಾವ ಸ್ವಲ್ಪವೂ ನಮ್ಮಲಿಲ್ಲ

ನಮ್ಮ ಹೃದಯಗಳನ್ನು ಖಾಲಿಮಾಡಿಕೊಂಡಿದ್ದೇವೆ,

ಇದೊಂದು ಕೊಳಕು ವರವಾಗಿದೆ.

ವರಮಾನ ಬೆಳವಣಿಗೆ ವಿರೋಧಿ ಕಾರ್ಯಕರ್ತರ ಪ್ರಕಾರ ಭೂಮಿಯ ಸುಸ್ಥಿರ ಸಾಮಾರ್ಥ್ಯವನ್ನು ಅನುಭೋಗವು ಪಲ್ಲಟಗೊಳಿಸುತ್ತಿದೆ. ಜಗತ್ತಿನ ಜನಸಂಖ್ಯೆಯು 1970ರಲ್ಲಿ 3.7 ಬಿಲಿಯನ್. ಈ ಸಂಖ್ಯೆ 2011ರಲ್ಲಿ 7 ಬಿಲಿಯನ್ ಆಗಿದೆ. ಇಂದು (2020) ಜಗತ್ತಿನ ಜನಸಂಖ್ಯೆ 7.7 ಬಿಲಿಯನ್. ವಿಶ್ವಸಂಸ್ಥೆಯ ಮುನ್ನಂದಾಜಿನ ಪ್ರಕಾರ 2050ರಲ್ಲಿ ಜಗತ್ತಿನ ಜನಸಂಖ್ಯೆಯು 9.8 ಬಿಲಿಯನ್ ಆಗುತ್ತದೆ. ಇದರಿಂದ ಎದುರಾಗುವ ಅಪಾಯವೆಂದರೆ ಇಷ್ಟೊಂದು ಜನರಿಗೆ ಭೂಮಿ ಆಹಾರವನ್ನು ನೀಡಲಾಗದು. ಉಳುಮೆ ಮಾಡಬಹುದಾದ ಭೂಮಿಯ ವಿಸ್ತೀರ್ಣ ಪರಿಮಿತವಾಗಿದೆ. ಈ ಭೂಮಿಯ ಮೇಲ್ಪದರದ ಫಲವತ್ತೆಯ ಗುಣ ಕಡಿಮೆಯಾಗುತ್ತಿದೆ. ಮಹಾಸಾಗರಗಳ ಅನೇಕ ಭಾಗಗಳು ಜಲಚರಗಳಿಲ್ಲದ ನಿರ್ಜೀವಿ ಪ್ರದೇಶಗಳಾಗಿವೆ. ವರಮಾನ ಬೆಳವಣಿಗೆ ವಿರೋಧಿಗಳು ಸಂರಕ್ಷಣೆಗೆ ಮತ್ತು ಲೌಕಿಕ ಅಗತ್ಯಗಳನ್ನು ಕಡಿಮೆ ಮಾಡಿಕೊಳ್ಳುವುದರ ಬಗ್ಗೆ ಕರೆ ನೀಡುತ್ತಿದ್ದಾರೆ. ಮುಂದುವರಿದ ದೇಶಗಳ ಜನರು ಯಾವ ಪ್ರಮಾಣದ ಜೀವನಮಟ್ಟವನ್ನು ಸಾಧಿಸಿಕೊಂಡಿದ್ದಾರೋ ಅದೇ ಪ್ರಮಾಣದ ಜೀವನಮಟ್ಟವನ್ನು ಸಾಧಿಸಿಕೊಳ್ಳುವ ಗುರಿಯನ್ನು ಅಭಿವೃದ್ಧಿಶೀಲ ದೇಶಗಳ ಜನರೂ ಇಟ್ಟುಕೊಂಡಿದ್ದಾರೆ. ಇದು ಸಾಧ್ಯವಿಲ್ಲದ ಗುರಿ. ಅವರ ಪ್ರಕಾರ ಉತ್ಪಾದಕರು ಸುಸ್ಥಿರತೆ ಸಾಧ್ಯವಿಲ್ಲದ ಮತ್ತು ಭ್ರಮಾತ್ಮಕ ಅಗತ್ಯಗಳನ್ನು ಸೃಷ್ಟಿಸುತ್ತಿದಾರೆ.

 1. ಮೂರನೆಯ ಗುಂಪೆಂದರೆ ಪರಿಸರವಾದಿ ಕಾರ್ಯಕರ್ತರು. ಇವರ ಪ್ರಕಾರ ಖರೀದಿ ಸಂಸ್ಕೃತಿಯ ಆರಾಧಕರು ಅತ್ಯಧಿಕ ಇಂಗಾಲದ ಹೆಚ್ಚೆಗುರುತುಗಳನ್ನು ಬಿಡುವುದರ ಮೂಲಕ ನೀರಿನ ಮತ್ತು ಗಾಳಿಯ ಮಾಲಿನ್ಯಗಳನ್ನು ಉಂಟುಮಾಡುತ್ತಿದ್ದಾರೆ. ಇದು ಉಂಟುಮಾಡಬಹುದಾದ ಗಂಡಾಂತರಗಳ ಮತ್ತು ಹಾನಿಯ ಬಗ್ಗೆ ಚಿಂತಿತರಾಗಿದ್ದಾರೆ. ಪರಿಸರವಾದಿ ಕಾರ್ಯಕರ್ತರು ಪ್ರಕೃತಿ ಮತ್ತು ವಿಜ್ಞಾನಗಳ ಬಗ್ಗೆ ಅಪಾರ ಗೌರವವಿಟ್ಟುಕೊಂಡಿದ್ದಾರೆ. ನಮ್ಮ ಭೂಗ್ರಹದ ಭವಿಷ್ಯದ ಬಗ್ಗೆ ಇವರು ನಿಜ ಕಾಳಜಿ ಹೊಂದಿದ್ದಾರೆ.
 2. ನಾಲ್ಕನೆಯ ಗುಂಪಿನಲ್ಲಿ ಆಹಾರ ಸಂಸ್ಕೃತಿಯನ್ನು ಆಯ್ಕೆ ಮಾಡಿಕೊಳ್ಳುವವರಿದ್ದರೆ. ಇವರು ಸಸ್ಯಾಹಾರಿಗಳು ಮತ್ತು ಸಸ್ಯಾಹಾರದ ಪ್ರವರ್ತಕರು. ಆಹಾರಕ್ಕಾಗಿ ಪ್ರಾಣಿಗಳನ್ನು ಕೊಲ್ಲುವುದರ ಬಗ್ಗೆ ಇವರು ಕುಪಿತರಾಗಿ ಚಡಪಡಿಸುತ್ತಿದ್ದಾರೆ. ಈ ಗ್ರಹದಲ್ಲಿ ಪ್ರತಿಯೊಬ್ಬರೂ ಸಂತೃಪ್ತಿಯಿಂದ ಪೌಷ್ಟಿಕ ಸಸ್ಯಾಹಾರವನ್ನು ಮತ್ತು ಹಣ್ಣುಗಳನ್ನು ಸೇವಿಸಬಹುದು. ಜಾನುವಾರು ನಿರ್ವಾಹಕರು ಆಕಳು ಮತ್ತು ಕೋಳಿಗಳನ್ನು ವೇಗವಾಗಿ ಬೆಳೆದು ಕೊಬ್ಬುವಂತೆ ಮಾಡಿ ಲಾಭಕ್ಕಾಗಿ ಅವುಗಳನ್ನು ಕೊಂದು ಅದರ ಭಾಗಗಳನ್ನು ಮಾರಾಟ ಮಾಡುತ್ತಾರೆ. ಆಕಳುಗಳು ಮೀಥೇನ್ ಅನಿಲವನ್ನು ಬಿಡುವ ಮೂಲವಾಗಿವೆ. ಈ ಅನಿಲದಿಂದಾಗಿ ಭೂಮಿಯಲ್ಲಿ ಅತಿಶಾಖ ಉಂಟಾಗುತ್ತದೆ. ಇದರಿಂದಾಗಿ ಭೂಮಿಯಲ್ಲಿ ಉಷ್ಣಾಂಶ ಹೆಚ್ಚಾಗುತ್ತದೆ. ಇದಲ್ಲದೆ ಇದು ಹಿಮಗಡ್ಡೆಗಳಿಂದ ಕೂಡಿದ ನಿರ್ಗಲ್ಲುಗಳನ್ನು (ಗ್ಲೇಸಿರ‍್ಸ್) ಕರಗುವಂತೆ ಮಾಡಿಬಿಡುತ್ತದೆ ಹಾಗೂ ನಗರಗಳು ಮಹಾಪೂರ ಎದುರಿಬೇಕಾಗುತ್ತದೆ. ಒಂದು ಕಿಲೋಗ್ರಾಮ್ ದನದ ಮಾಂಸ ಉತ್ಪ್ಪಾದಿಸಲು 15 ರಿಂದ 20 ಸಾವಿರ ಲೀಟರ್ ನೀರು ಬೇಕಾಗುತ್ತದೆ. ಹಾಗೂ ಅವುಗಳಿಗೆ ಆಹಾರವಾಗಿ ಅಷ್ಟೇ ಪ್ರಮಾಣದ ಹಸಿರು ಮೇವು ಬೇಕಾಗುತ್ತದೆ.
 3. ಪ್ರಕೃತಿ ಸಂರಕ್ಷಕರ ಬಗ್ಗೆ ಕೇಳಿದ್ದೇವೆ. ಈ ಪ್ರಕೃತಿ ಸಂರಕ್ಷಕ ಕಾರ್ಯಕರ್ತರು ಲಭ್ಯವಿರುವ ಭೌತಿಕ ವಸ್ತುಗಳನ್ನು ನಾಶಮಾಡಬಾರದು ಎಂದು ಮನವಿ ಮಾಡಿಕೊಳ್ಳುತ್ತಾರೆ. ಅವುಗಳನ್ನು ನಾಶ ಮಾಡದೆ ಮರುಬಳಸಬೇಕು, ರಿಪೇರಿ ಮಾಡಿ ಬಳಕೆ ಮಾಡಬೇಕು, ಮರುಜೋಡಿಸಬೇಕು ಅಥವಾ ಅವುಗಳನ್ನು ಅಗತ್ಯವಿರುವವರಿಗೆ ನೀಡಬೇಕು ಎಂಬುದು ಇವರ ಅಭಿಯಾನ. ಈ ಕಾರ್ಯಕರ್ತರ ಪ್ರಕಾರ ಕಾರ್ಖಾನೆಗಳು ಉತ್ತಮವಾದ ರೀತಿಯಲ್ಲಿ ಮತ್ತು ವಿರಳವಾಗಿ ಬಾಳಿಕೆ ಬರುವಂತಹ ಸರಕುಗಳನ್ನು ಉತ್ಪಾದಿಸಬೇಕು. ಎರಡು ವಾರ ಮಾತ್ರ ಬಳಸಿ ಬಿಸಾಕಸಬಹುದಾದ ನವೀನ ಶೈಲಿಯ ಮಹಿಳೆಯರ ಹೊಸ ಹೊಸ ಉಡುಪನ್ನು ಪ್ರತಿ ಎರಡು ವಾರಕ್ಕೊಮ್ಮೆ ಉತ್ಪಾದಿಸಿ ಮಾರುಕಟ್ಟೆಗೆ ಸರಬರಾಜು ಮಾಡುವ ‘ಜರ’ ಉದ್ದಿಮೆಯ ಕಾರ್ಯವೈಖರಿಯನ್ನು ಇವರು ಟೀಕಿಸುತ್ತಾರೆ.

ಬಳಕೆಯಲ್ಲಿರುವ ಸರಕನ್ನು ಹಳೆಯದನ್ನಾಗಿ ಮಾಡಿ, ಉಪಭೋಗಕ್ಕೆ ಬಾರದನ್ನಾಗಿ ಮಾಡಿ ಅದರ ಸ್ಥಳದಲ್ಲಿ ಹೊಸದೊಂದನ್ನು ಉತ್ಪಾದಿಸುವ ಕ್ರಮವನ್ನು ಪರಿಸರವಾದಿ ಕಾರ್ಯಕರ್ತರು ಟೀಕಿಸುತ್ತಾರೆ. ಐಷಾರಾಮಿ ಸರಕುಗಳನ್ನು ಉತ್ಪಾದಿಸುವ ಕೈಗಾರಿಕೆಗಳನ್ನು ಇವರು ವಿರೋಧಿಸುತ್ತಾರೆ. ಇವರಲ್ಲಿ ಅನೇಕರು ಮೂಲತಃ ಪರಿಸರವಾದಿಗಳು ಮತ್ತು ಜಾಗತೀಕರಣ ವಿರೋಧಿಗಳು. ಉಪಭೋಗತಾ ವಿರೋಧಿ ಚಳವಳಿ ಬಗ್ಗೆ ಬರಹಗಳು, ಕೃತಿಗಳು ಅಧಿಕಾಧಿಕವಾಗಿ ಪ್ರಕಟವಾಗುತ್ತಿವೆ. ಉಪಭೋಗತಾವಾದದ ಕಡುವಿಮರ್ಶಕಿಯಾದ ನೋಮಿ ಕ್ಲಿನ್ ಅವರ ‘ದಿ ಲೋಗೋ’, ‘ದಸ್ ಚೇಂಜಸ್ ಎವೆರಿಥಿಂಗ್’, ‘ದಿ ಶಾಕ್ ಡಾಕ್‌ಟ್ರೀನ್’ ಮುಂತಾದವು ಪ್ರಸಿದ್ಧ ಕೃತಿಗಳು. ಆಸಕ್ತಿಯಿರುವವರು ಮಾರ್ಕ್ ಆಚಬರ್ ಮತ್ತು ಜೆನ್ನಿಫರ್ ಅಬೊಟ್ ಅವರ ಸಾಕ್ಷö್ಯಚಿತ್ರ ‘ದಿ ಕಾರ್ಪೋರೇಶನ್’ ನೋಡಬಹುದು.

ಅನುಭೋಗಿಗಳ ಮನೋಭಿಲಾಷೆಯನ್ನು ಹೇಗೆ ಕಾಯ್ದುಕೊಳ್ಳುತ್ತಾರೆ?

ಅಧಿಕ ಲಾಭ ಮಾಡಿಕೊಳ್ಳುವುದಕ್ಕಾಗಿ ಅನುಭೋಗವನ್ನು ಹೆಚ್ಚು ಮಾಡುವ ಹಿತಾಸಕ್ತಿ ಬಗ್ಗೆ ವಾಣಿಜ್ಯೋದ್ಯಮಗಳಿಗೆ ಅಂತರ್ಗತ ಉದ್ದೇಶವಿರುತ್ತದೆ. ಅನುಭೋಗವನ್ನು ಹೆಚ್ಚು ಮಾಡುವುದಕ್ಕೆ ಇವರು ಮೂರು ಜ್ಞಾನಶಿಸ್ತುಗಳನ್ನು ಬಳಸುತ್ತಾರೆ. ಮೊದಲನೆಯದು ಆಕರ್ಷಕ ಉತ್ಪನ್ನಗಳನ್ನು ಮತ್ತು ಬ್ರಾಂಡುಗಳನ್ನು ಉತ್ಪಾದಿಸಲು ಆವಿಷ್ಕಾರಗಳ ಮೊರೆ ಹೋಗುವುದು. ಎರಡನೆಯದು ಅನುಭೋಗಿಗಳಿಗೆ ಪ್ರಚೋದನೆ ನೀಡುವ ಮತ್ತು ಸರಕುಗಳನ್ನು ಖರೀದಿಸುವಂತೆ ಪ್ರೇರೇಪಿಸುವ ವಿವಿಧ ವಿಧಾನಗಳ ಮಾರ್ಕೆಟ್ಟೀಕರಣ. ಮೂರನೆಯದು ಕೆಳ ವರಮಾನದ ಅನುಭೋಗಿಗಳು ಸಾಮಾನ್ಯವಾಗಿ ಏನನ್ನು ಖರೀದಿಸುತ್ತಾರೋ ಅದಕ್ಕಿಂತ ಅಧಿಕ ಸರಕುಗಳನ್ನು ಖರೀದಿಸಲು ಅನುಕೂಲವಾಗುವಂತೆ ಅವರಿಗೆ ಸಾಲ ನೀಡುವ ವ್ಯವಸ್ಥೆ.

ವಾಣಿಜ್ಯೋದ್ಯಮಗಳ ಉದ್ದೇಶವೆಂದರೆ ಅನುಭೋಗವನ್ನು ಜೀವನ ಶೈಲಿಯನ್ನಾಗಿ ಮಾಡುವುದು. ತಮ್ಮ ಯಂತ್ರೋಪಕರಣಗಳು ಮತ್ತು ಕಾರ್ಖಾನೆಗಳು ನಿರಂತರ ಉತ್ಪಾದನಾ ಕ್ರಿಯೆಯಲ್ಲಿ ತೊಡಗಿರುವಂತೆ ಮಾಡಲು ಅನುಭೋಗಿಗಳ ವರ್ತನೆಯನ್ನು ವಿಧಿವಿಹಿತ ರೂಢಿಯನ್ನಾಗಿ ಮಾಡಬೇಕಾಗುತ್ತದೆ. ರಜಾ ದಿನಗಳು, ಕ್ರಿಸ್‌ಮಸ್, ಈಸ್ಟರ್ ಮದರ್ಸ್ ಡೇ, ಫಾದರ್ಸ್ ಡೇ ಮುಂತಾದ ಹಬ್ಬಹರಿದಿನಗಳ ಸಂದರ್ಭದಲ್ಲಿ ಖರೀದಿ ವ್ಯಾಮೋಹವನ್ನು ಉದ್ದೀಪನಗೊಳಿಸುವ ಕೆಲಸ ಮಾಡಲಾಗುತ್ತದೆ (ಭಾರತದ ಸಂದರ್ಭದಲ್ಲಿ ದೀಪಾವಳಿ, ಯುಗಾದಿ, ತೃತೀಯ ಏಕಾದಶಿ, ರಂಜಾನ್ ಮುಂತಾದವುಗಳ ಸಂದರ್ಭದಲ್ಲಿ ಚಿನ್ನ ಕೊಳ್ಳುವಂತೆ, ಬಟ್ಟೆ ಖರಿದಿಸುವಂತೆ ಗ್ರಾಹಕರನ್ನು ಪ್ರೇರೇಪಿಸುವುದು). ವಾಣಿಜ್ಯೋದ್ಯಮಗಳು ತಮ್ಮ ಸರಕು-ಸರಂಜಾಮುಗಳು ಬಿಕರಿಯಾಗಬೇಕು ಎಂದು ಬಯಸುತ್ತಾರೆ ಮಾತ್ರವಲ್ಲ ಖರೀದಿಸಿದ ಸರಕುಗಳು ಬೇಗ ಬೇಗ ಸವೆÀದು ಹೋಗುವಂತೆ, ಬಟ್ಟೆಯಾದರೆ ಬೇಗ ಹರಿದು ಹೋಗುವಂತೆ ಮತ್ತು ಜನರು ಬೇಸರ ಬಂದು ಬಿಸಾಕುವಂತೆ ಮಾಡುವುದನ್ನು ಬಯಸುತ್ತವೆ. 

ವಾಣಿಜ್ಯೋದ್ಯಮಗಳು ಜಾಹೀರಾತುಗಳ ಮೂಲಕ ಈ ಉತ್ಪನ್ನಗಳನ್ನು ಪಡೆದುಕೊಳ್ಳಲೇಬೇಕು ಎಂಬ ಉತ್ಪ್ರೇಕ್ಷಿತ ಭ್ರಮಾತ್ಮಕ ಜಗತ್ತೊಂದನ್ನು ಸೃಷ್ಟಿಸಿಬಿಡುತ್ತವೆ. ಈ ಸರಕುಗಳನ್ನು ಕೊಳ್ಳುವುದರಿಂದ ಸಂತೋಷವನ್ನು ಅನುಭವಿಸಬಹುದು ಮತ್ತು ಬದುಕು ಸುಖಮಯವಾಗುತ್ತದೆ ಎಂಬ ಭ್ರಮೆಯನ್ನು ಉಂಟುಮಾಡಲಾಗುತ್ತದೆ. ಉದ್ದಿಮೆಗಾರರು ಸರಕು-ಸರಂಜಾಮುಗಳನ್ನು ಗ್ರಾಹಕರ ಬದುಕಿಗೆ ಒಂದು ಅರ್ಥ ಬರುವಂತಹ ಮರುವಿನ್ಯಾಸಕ್ಕೆ ಒಳಪಡಿಸುತ್ತಲೇ ಇರುತ್ತಾರೆ.

ಒಬ್ಬರು ಆಯ್ಕೆ ಮಾಡಿಕೊಂಡ ಬ್ರಾಂಡು ಅವರು ಸಮಾಜದಲ್ಲಿ ಯಾರು ಎಂಬುದನ್ನು ಮತ್ತು ಅವರು ಯಾವುದಕ್ಕೆ ಮಾನ್ಯತೆ ನೀಡುತ್ತಾರೆ ಎಂಬುದನ್ನು ಇದು ನಿರ್ಧರಿಸುತ್ತದೆ. ಸರಕುಗಳ ಬ್ರಾಂಡುಗಳು ಅಪರಿಚಿತರನ್ನು ಒಟ್ಟಿಗೆ ತರುತ್ತದೆ. ಎಚ್ಚರಿಕೆಯಿಂದ ವ್ಯಕ್ತಿತ್ವವನ್ನು ಮತ್ತು ವಿಶಿಷ್ಟ ಅಥಗಳನ್ನು ಪ್ರತಿನಿಧಿಸುವ ವಿನ್ಯಾಸಗಳನ್ನು ಅವರು ಹಂಚಿಕೊಳ್ಳುತ್ತಾರೆ.  

ಉಪಭೋಗತಾವಾದದ ವಿರೋಧವು ಬಂಡವಾಳಶಾಹಿಯನ್ನು ಹೇಗೆ ಬದಲಾಯಿಸುತ್ತದೆ?

ಬಂಡವಾಳಶಾಹಿಯು ನಿರಂತರವಾದ ಮತ್ತು ಅಂತ್ಯವಿಲ್ಲದ ವರಮಾನ ಬೆಳವಣಿಗೆಯ ಒಂದು ಆರ್ಥಿಕ ವ್ಯವಸ್ಥೆ. ಇಲ್ಲಿ ಎರಡು ಊಹೆಗಳಿವೆ.

 1. ಹೆಚ್ಚು ಹೆಚ್ಚು ಸರಕು-ಸರಂಜಾಮುಗಳು ಬೇಕು ಎಂಬ ಜನರ ಅಪರಿಮಿತ ಹಸಿವು.
 2. ಅಪರಿಮಿತ ವರಮಾನ ಬೆಳವಣಿಗೆಯನ್ನು ಬೆಂಬಲಿಸುವ ಅಪರಿಮಿತ ಸಂಪನ್ಮೂಲಗಳು ಭೂಮಿಯಲ್ಲಿವೆ.

ಈ ಎರಡೂ ಭಾವನೆಗಳು ಇಂದು ಪ್ರಶ್ನೆಗೆ ಒಳಗಾಗಿವೆ. ಮೊದಲನೆಯದಾಗಿ ಸತತವಾಗಿ ಸರಕು-ಸರಂಜಾಮುಗಳನ್ನು ಅನುಭೋಗಿಸುವುದಕ್ಕೆ ಅಗತ್ಯವಾದ ಶ್ರಮಶಕ್ತಿ ರಿಕ್ತವಾಗಿದೆ ಮತ್ತು ಅನೇಕರು ಇದರಿಂದ ದಣಿದು ಹೋಗಿದ್ದಾರೆ. ಎರಡನೆಯದಾಗಿ ಭೂಮಿಯಲ್ಲಿನ ಸಂಪನ್ಮೂಲಗಳು ಪರಿಮಿತವಾಗಿವೆ ವಿನಾ ಅಪರಿಮಿತವಾಗಿಲ್ಲ. ಅಧಿಕ ಪ್ರಮಾಣದಲ್ಲಿ ಬೆಳೆಯುತ್ತಿರುವ ಉತ್ಪಾದನೆಯ ಜೊತೆಯಲ್ಲಿ ಬೆಳೆಯುತ್ತಿರುವ ಜಗತ್ತಿನ ಜನಸಂಖ್ಯೆಯ ಆಸೆ-ಬಯಕೆಗಳನ್ನು ಇಡೇರಿಸುವುದು ಸಾಧ್ಯವಿಲ್ಲ. 

ಅನೇಕ ದೇಶಗಳು ತಮ್ಮ ತಮ್ಮ ಆರ್ಥಿಕತೆಯ ಸಿದ್ಧಿ-ಸಾಧನೆಗಳನ್ನು ಮಾಪನ ಮಾಡಲು ಏಕೈಕ ಮಾಪನ ಬಳಸುತ್ತಿವೆ. ಆ ಮಾಪನವೆಂದರೆ ‘ಒಟ್ಟು ದೇಶೀಯ ಉತ್ಪನ್ನ’ (ಜಿಡಿಪಿ). ಒಂದು ದೇಶದ ಆರ್ಥಿಕತೆಯು ಒಂದು ವರ್ಷದಲ್ಲಿ ಉತ್ಪಾದಿಸಿದ ಸರಕು-ಸರಂಜಾಮುಗಳ ಒಟ್ಟು ಮೌಲ್ಯವೇ ಜಿಡಿಪಿ. ಆದರೆ ಜಿಡಿಪಿಯ ಬೆಳವಣಿಗೆ ಜೊತೆಯಲ್ಲಿ ಜನರ ಜೀವನ ಸುಖ-ಸಂತೋಷವೂ ಬೆಳೆಯುತ್ತಿದೆಯೇನು ಎಂಬುದನ್ನು ಇಲ್ಲಿ ಮಾಪನ ಮಾಡುತ್ತಿಲ್ಲ. 

ದುಡಿಮೆಗಾರರು ಕಷ್ಟಪಟ್ಟು ದುಡಿದಿದ್ದರಿಂದ ಮತ್ತು ನಿಗದಿಪಡಿಸಿದ ದುಡಿಮೆ ಅವಧಿಗಿಂತ ಹೆಚ್ಚು ಅವಧಿ ದುಡಿದುದರ ಪರಿಣಾಮವಾಗಿ ಜಿಡಿಪಿಯಲ್ಲಿ ಶೇ.2 ಅಥವಾ ಶೇ.3 ರಷ್ಟು ಬೆಳವಣಿಗೆಯಾಗಿದೆ ಎಂದು ಊಹಿಸಿಕೊಳ್ಳೋಣ. ವರ್ಷದಲ್ಲಿ ಎರಡು ವಾರಗಳು ಮಾತ್ರ ರಜೆ ಸೌಲಭ್ಯವಿದೆ. ದುಡಿಮೆಗಾರರಿಗೆ ವಿರಾಮ ಎನ್ನುವುದೇ ಇಲ್ಲ ಅಥವಾ ಪುನಶ್ಚೇತಕ್ಕೆ ಸಮಯವಿಲ್ಲ. ಅವರ ಬದುಕು ಅನಿರೀಕ್ಷಿತ ವೈದ್ಯಕೀಯ ಬಿಲ್ಲಿನಿಂದಾಗಿ ಒತ್ತಡಕ್ಕೆ ಒಳಗಾಗಿದೆ ಮತ್ತು ಅವರ ಉಳಿತಾಯವೆಲ್ಲ ಖಾಲಿಯಾಗಿದೆ.

ಅವರು ತಮ್ಮ ಮಕ್ಕಳನ್ನು ಕಾಲೇಜಿಗೆ ಕಳುಹಿಸಲು ಅಸಾಧ್ಯವಾಗದಿರಬಹುದು. ಇದರಿಂದಾಗಿ ಮಕ್ಕಳ ಗಳಿಕೆಯ ಸಾಮರ್ಥ್ಯ ಮತ್ತು ಕುಶಲತೆ ಕೆಳಮಟ್ಟದಲ್ಲ್ಲಿರುತ್ತದೆ. ಒಂದು ವೇಳೆ ಕಾಲೇಜಿಗೆ ಹೋಗಿ ಪದವೀಧರರಾದರೆ ಅವರ ಸಾಲದ ಮೊತ್ತ ಅಗಾಧವಾಗಿರುತ್ತದೆ. ಕಾಲೇಜು ಶಿಕ್ಷಣದ ಬಾಬ್ತು 1.2. ಟ್ರಿಲಿಯನ್ ಡಾಲರುಗಳ ಋಣ ಪದವೀಧರರ ತಲೆ ಮೇಲಿದೆ. ಅವರಿಗೆ ಪೀಠೋಪಕರಣಗಳನ್ನಾಗಲಿ ಅಥವಾ ಮನೆಯನ್ನಾಗಲಿ ಹೊಂದಲು ಸಾಧ್ಯವಾಗುತ್ತಿಲ್ಲ. ಅವರಿಗೆ ವಿವಾಹವಾಗುವುದು ಸಾಧ್ಯವಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಜಿಡಿಪಿಯಲ್ಲಿ ಬೆಳವಣಿಗೆಯಾಗಿದೆ ಎಂದು ಊಹಿಸಿಕೊಳ್ಳುತ್ತೇವೆ. ಆದರೆ ದೇಶದಲ್ಲಿ ಜನರ ಸರಾಸರಿ ಬದುಕಿನ ಸುಖ-ಸಂತೋಷ ಇಳಿಮುಖವಾಗಿದೆ.

ಆರ್ಥಿಕ ಬೆಳವಣಿಗೆಯ ಪರಿಣಾಮವನ್ನು ಮಾಪನ ಮಾಡಲು ನಾವು ಅನಿವಾರ್ಯವಾಗಿ ಹೊಸ ಮಾಪನವನ್ನು ರೂಪಿಸಿಕೊಳ್ಳಬೇಕಾಗಿದೆ. ಕೆಲವು ದೇಶಗಳು ಒಟ್ಟು ದೇಶಿಯ ಸುಖ ಅಥವಾ ಒಟ್ಟು ದೇಶೀಯ ಕ್ಷೇಮಾಭ್ಯುದಯ ಎಂಬ ವಾರ್ಷಿಕ ಮಾಪನಗಳನ್ನು ಸಿದ್ಧಪಡಿಸಿವೆ. ನಮಗೆ ತಿಳಿದಿರುವಂತೆ ಸ್ಕಾಂಡಿನೇವಿಯನ್ ದೇಶಗಳಲ್ಲಿ ಜನರು ಅಮೆರಿಕೆಯ ಜನರು ಅನುಭವಿಸುತ್ತಿರುವ ಸುಖ-ಸಂತೋಷದ ಬದುಕಿಗಿಂತ ಉನ್ನತಮಟ್ಟದ ಸಂತೋಷದ ಮತ್ತು ಸುಖದ ಬದುಕನ್ನು ಅನುಭವಿಸುತ್ತಿದ್ದಾರೆ. ಅವರ ಆರ್ಥಿಕತೆಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಲಾಗುತ್ತಿದೆ. ನಮ್ಮಲ್ಲಿ ನಾವೇನು ಅನುಭೋಗಿಸುತ್ತಿದ್ದೇವೆಯೋ ಅದೇ ನಮ್ಮನ್ನು ಅನುಭೋಗಿಸುತ್ತಿರುವಂತೆ ಕಾಣುತ್ತದೆ!

ಈ ಆರ್ಥಿಕ ಬೆಳವಣಿಗೆಯ ಒಂದು ಸಮಸ್ಯೆಯೆಂದರೆ ಉತ್ಪಾದಕತೆಯಿಂದ ಪ್ರಾಪ್ತವಾದ ಗಳಿಕೆಯ ಫಲಗಳು ಸಮಾನವಾಗಿ ಹಂಚಿಕೆಯಾಗುತ್ತಿಲ್ಲ. ಬಿಲಿಯನ್ನರ ಸಂಖ್ಯೆ ಏರಿಕೆಯಾಗುತ್ತಿರುವ ಮತ್ತು ಬಡ ಕಾರ್ಮಿಕರು ಅಪಾರ ಸಂಖ್ಯೆಯಲ್ಲಿರುವುದು ದೇಶದಲ್ಲಿ ಅಸಮಾನತೆ ಇರುವುದನ್ನು ಸ್ಪಷ್ಟವಾಗಿ ಸೂಚಿಸುತ್ತದೆ.

ಅನೇಕ ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಅವರ ಉದ್ದಿಮೆಯಲ್ಲಿ ಕೆಲಸ ಮಾಡುವ ಕಾರ್ಮಿಕರ ಸರಾಸರಿ ಸಂಬಳದ 300 ಪಟ್ಟು ಅಧಿಕ ಸಂಬಳ ಪಡೆಯುತ್ತಿದ್ದಾರೆ. ಕೆಲವರು ತಮ್ಮ ಕೈಕೆಳಗೆ ಕೆಲಸ ಮಾಡುವ ಕಾರ್ಮಿಕರ ಸಂಭಾವನೆಯ 1100 ಪಟ್ಟು ಅಧಿಕ ಸಂಭಾವನೆ ಪಡೆಯುತ್ತಿದ್ದಾರೆ. ಆರ್ಥಿಕ ವ್ಯವಸ್ಥೆಯನ್ನು ಭ್ರಷ್ಟಗೊಳಿಸಲಾಗಿದೆ. ಕಾರ್ಪೋರೇಶನ್ನುಗಳು ಕಾರ್ಮಿಕ ಸಂಘಗಳನ್ನು ಶಕ್ತಿಹೀನಗೊಳಿಸುವುದರಲ್ಲಿ ಯಶಸ್ವಿಯಾಗಿವೆ. ಇದರಿಂದಾಗಿ ಕಾರ್ಮಿಕರಿಗೆ ಅಥವಾ ಅವರ ಮುಖ್ಯಸ್ಥರಿಗೆ ಏನನ್ನು ಮತ್ತು ಎಷ್ಟು ಸಂಭಾವನೆ ನೀಡಬೇಕು ಎಂಬುದನ್ನು ನಿರ್ಧರಿಸುವುದರಲ್ಲಿ ಕಾರ್ಮಿಕರ ಪಾತ್ರವಿಲ್ಲದಂತೆ ಮಾಡಲಾಗಿದೆ.

ಈ ಬಗೆಯ ಅತ್ಯಂತ ತಾರತಮ್ಯದಿಂದ ಕೂಡಿದ ಸಂಭಾವನಾ ವ್ಯವಸ್ಥೆಯ ಬಗ್ಗೆ ಕೆಲವು ಬಿಲಿಯನ್ನರುಗಳು ತಮ್ಮ ಅಸಮಧಾನವನ್ನು ವ್ಯಕ್ತಪಡಿಸಿದ್ದಾರೆ. ಬಿಲ್ ಗೇಟ್ ಮತ್ತು ವಾರೆನ್ ಬಫೆಟ್ ಸಾರ್ವಜನಿಕವಾಗಿ ಉನ್ನತಮಟ್ಟದ ವರಮಾನ ತೆರಿಗೆ ದರಗಳನ್ನು ಹೆಚ್ಚಿಸುವಂತೆ ಕರೆ ನೀಡುತ್ತಿದ್ದಾರೆ. ಇಂದು 2018ರ ತೆರಿಗೆ ಸುಧಾರಣೆಯ ಫಲವಾಗಿ ಉನ್ನತಮಟ್ಟದಲ್ಲಿನ ವರಮಾನ ತೆರಿಗೆ ದರವು ಕಡಿಮೆಯಾಗಿ ಶೇ.37ರಷ್ಟಿದೆ. ಇದಕ್ಕೆ ಪ್ರತಿಯಾಗಿ ಸ್ಕಾಂಡಿನೇವಿಯನ್ ದೇಶಗಳಲ್ಲಿ ಶ್ರೀಮಂತ ನಾಗರಿಕರು ಶೇ.70 ರಷ್ಟು ವರಮಾನ ತೆರಿಗೆ ನೀಡುತ್ತಿದ್ದಾರೆ. ಆರೋಗ್ಯ ಮತ್ತು ಕಾಲೇಜು ಶಿಕ್ಷಣವನ್ನು ಉಚಿತ ಮಾಡಿ ತಮ್ಮ ಆರ್ಥಿಕತೆಯನ್ನು ಅವರು ಉತ್ತಮವಾಗಿ ನಿರ್ವಹಿಸುತ್ತಿದ್ದಾರೆ.

ಈ ಬಗ್ಗೆ ನಿಕ್ ಹನ್ನೌರ್ ಎಂಬ ಬಿಲಿಯನಿಯರ್ ಟಿಈಡ್ (ಟೆಕ್ನಾಲಜಿ, ಎಜುಕೇಶನ್ ಮತ್ತು ಡಿಸೈನ್) ಸಂಸ್ಥೆಯಲ್ಲಿ ಮಾತನಾಡಿದ್ದಾರೆ. ತನ್ನ ಸಹಬಿಲಿಯನ್ನರುಗಳನ್ನು ‘ಒಂದಕ್ಕಿಂತ ಹೆಚ್ಚು ಹಲ್ಲುಗಳಿರುವ ಕೊಡಲಿಗಳು ಅಟ್ಟಿಸಿಕೊಂಡು ಬರುತ್ತಿವೆ’ ಎಂದು ಎಚ್ಚರಿಸಿದ್ದಾರೆ. ಅಧಿಕ ಕೂಲಿ ಮತ್ತು ಆಧಿಕ ತೆರಿಗೆ ನೀಡುವಂತೆ ಮತ್ತು ಉತ್ಪಾದಕತಾ ಫಲಗಳನ್ನು ಹೆಚ್ಚು ಹೆಚ್ಚು ದುಡಿಯುವ ವರ್ಗದ ಜೊತೆಯಲ್ಲಿ ಹಂಚಿಕೊಳ್ಳುವಂತೆ ಅವನು ಮನವಿ ಮಾಡಿಕೊಳ್ಳುತ್ತಿದ್ದಾನೆ. ದುಡಿಯುವ ವರ್ಗವು ಹೊಟ್ಟೆತುಂಬ ಊಟ ಮಾಡುವುದಕ್ಕೆ, ಬಾಡಿಗೆ ಕಟ್ಟುವುದಕ್ಕೆ ಮತ್ತು ನಿವೃತ್ತ ಬದುಕನ್ನು ಸಾಗಿಸಲು ಅಗತ್ಯವಾಗುವಷ್ಟು ಉಳಿತಾಯ  ಮಾಡುವುದಕ್ಕೆ ಸಾಕಾಗುವಷ್ಟು ಗಳಿಸಬೇಕು. ಇಂದು ಅಪಾರ ಸಂಖ್ಯೆಯ ದುಡಿಮೆಗಾರರಿಗೆ ತಮ್ಮ ಬದುಕನ್ನು ನಿರ್ವಹಿಸಲು ಬೇಕಾದ ಖರ್ಚು-ವೆಚ್ಚಗಳನ್ನು ಭರಿಸಲು ಅಗತ್ಯವಾದ 400 ಡಾಲರ್ ವರಮಾನ ಗಳಿಸುವುದು ಸಾಧ್ಯವಾಗುತ್ತಿಲ್ಲ.

ಕೊವಿಡ್ 19 ಪಿಡುಗನ್ನು ಬಂಡವಾಳಶಾಹಿ ಎದುರಿಸಬೇಕಾಗುತ್ತದೆ

ಇನ್ನೂ ಬೇರೆ ಬೇರೆ ಕಾರಣಗಳಿಗೆ ಬಂಡವಾಳಶಾಹಿಯು ಬದಲಾಗುತ್ತದೆ. ಒಂದು ವೇಳೆ ಹೆಚ್ಚು ಹೆಚ್ಚು ಅನುಭೋಗಿಗಳು ಅದರ ವಿರೋಧಿ ಕಾರ್ಯಕರ್ತರಾದರೆ ಅವರೆಲ್ಲ ತಮ್ಮ ವೆಚ್ಚವನ್ನು ಕಡಿಮೆ ಮಾಡುತ್ತಾರೆ. ಸಾಂಪ್ರದಾಯಿಕವಾಗಿ ನಮ್ಮ ಆರ್ಥಿಕತೆಯ ಶೇ.70 ರಷ್ಟು ಬೆಂಬಲವು ಇವರ ವೆಚ್ಚದಿಂದ ಬರುತ್ತಿತ್ತು. ಈಗ ಇದು ಕುಸಿದರೆ ನಮ್ಮ ಆರ್ಥಿಕತೆಯ ಗಾತ್ರವು ಕುಗ್ಗುತ್ತದೆ. ಆರ್ಥಿಕ ಬೆಳವಣಿಗೆಯಲ್ಲಿನ ಮಂದಗತಿಯು ನಿರುದ್ಯೋಗ ಸಮಸ್ಯೆಯನ್ನು ಉಲ್ಬಣಗೊಳಸುತ್ತದೆ.

ಇದಲ್ಲದೆ ಕೃತಕ ಬುದ್ಧಿಮತ್ತೆ (ಏಐ) ಮತ್ತು ರೋಬೋಟುಗಳ ಪ್ರವೇಶದಿಂದಾಗಿ ಉದ್ಯೋಗಗಳು ಕಡಿಮೆಯಾಗುತ್ತಿವೆ. ಇದನ್ನು ಎದುರಿಸಲು ಬಂಡವಾಳಶಾಹಿಯು ನಿರುದ್ಯೋಗ ವಿಮೆ, ಸಾಮಾಜಿಕ ಭದ್ರತೆ, ಆಹಾರ ಸ್ಟಾಂಪುಗಳು ಮತ್ತು ಸಾಮಾಜಿಕ ನೆರವು ಮುಂತಾದವುಗಳ ಮೇಲೆ ಹೆಚ್ಚು ವೆಚ್ಚ ಮಾಡಬೇಕು. ಬಂಡವಾಳಶಾಹಿಯು ಹೆಚ್ಚು ಹೆಚ್ಚು ನೋಟುಗಳನ್ನು ಮುದ್ರಿಸಬೇಕು. ಈ ಕೋವಿಡ್-19 ದುರಂತದಿಂದ ದುಃಸ್ಥಿತಿ ಅನುಭವಿಸುತ್ತಿರುವ ದುಡಿಯುವ ವರ್ಗಕ್ಕೆ ಬೆಂಬಲ ನೀಡಲು ಕಾಂಗ್ರೆಸ್ ಅನುಮೋದಿಸಿರುವ 2 ಟ್ರಿಲಿಯನ್ ಡಾಲರ್ ಸಾರ್ವಜನಿಕ ವೆಚ್ಚವು ಈ ದೆಶೆಯಲ್ಲಿ ತೆಗೆದುಕೊಂಡ ಕ್ರಮವಾಗಿದೆ. ಈ 2 ಟ್ರಿಲಿಯನ್ ಡಾಲರ್ ವೆಚ್ಚವು ಅಲ್ಪಕಾಲಾವಧಿ ಸಮಸ್ಯೆಯನ್ನು ನಿರ್ವಹಿಸಲು ಸಾಕಾಗಬಹುದು. ಇನ್ನೂ ಅಧಿಕ ಟ್ರಲಿಯನ್ ಡಾಲರುಗಳನ್ನು ವೆಚ್ಚ ಮಾಡಬೇಕಾಗುತ್ತದೆ.

ಇದರರ್ಥ ವಿತ್ತೀಯ ಕೊರತೆಯು ಅನಿವಾರ್ಯ. ಈ ವಿತ್ತೀಯ ಕೊರತೆಯನ್ನು ಸದ್ಯದ ತೆರಿಗೆ ಸಂಪನ್ಮೂಲದಿಂದ ಭರಿಸಲು ಸಾಧ್ಯವಾಗುವುದಿಲ್ಲ. ಎಷ್ಟು ಸಾಧ್ಯವೋ ಅಷ್ಟು ತೆರಿಗೆ ದರಗಳನ್ನು ಗಣನೀಯವಾಗಿ ಏರಿಸಬೇಕಾಗುತ್ತದೆ. ಬಡವರ ಸಂಕಷ್ಟ ಮತ್ತು ನೋವಿನಿಂದ ಶ್ರೀಮಂತರ ಸಾಮಾನ್ಯ ಬದುಕು ಸಂಕಷ್ಟಕ್ಕೆ ಒಳಗಾಗಿಲ್ಲ. ಆದರೆ ಇಂದು ಶ್ರೀಮಂತರು ಹೆಚ್ಚು ಹೆಚ್ಚು ನೀಡಬೇಕಾದ ಮತ್ತು ಎಲ್ಲರ ಜೊತೆಯಲ್ಲಿ ಹಂಚಿಕೊಳ್ಳಬೇಕಾದ ಕಾಲ ಬಂದಿದೆ. ಈಗಿನ ಕ್ರೆöÊಸಿಸ್‌ನಲ್ಲಿ ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಮತ್ತು ಅಧಿಕ ವೇತನ ಪಡೆಯುತ್ತಿರುವ ಅಧಿಕಾರಿಗಳು ತಮ್ಮ ವೇತನವನ್ನು ಕಡಿತಗೊಳಿಸಿಕೊಳ್ಳಬೇಕು. ಇತ್ತೀಚಿಗೆ ಬೋಯಿಂಗ್ ಕಂಪನಿಯ ಕಾರ್ಯನಿರ್ವಹಣಾಧಿಕಾರಿಗಳು ಮುಂದೆ ಬರುವ ಕ್ರೈಸಿಸ್ ಸಂದರ್ಭದಲ್ಲಿ ವೇತನವಿಲ್ಲದೆ ದುಡಿಮೆ ಮಾಡುವುದಾಗಿ ಒಂದು ಉತ್ತಮ ಸಂಪ್ರದಾಯವನ್ನು ಹಾಕಿಕೊಟ್ಟಿದ್ದಾರೆ.

ಕೋವಿಡ್ ಕ್ರೈಸಿಸ್ ಪರಿಹಾರವಾದ ಮೇಲೆ ಬಂಡವಾಳಶಾಹಿಯು ಹೊಸ ಹಂತಕ್ಕೆ ಸಾಗಬೇಕಗುತ್ತದೆ. ಅನುಭೋಗಿಗಳು ತಾವೇನು ಅನುಭೋಗಿಸುತ್ತಿದ್ದೇವೆ ಮತ್ತು ಎಷ್ಟು ಅನುಭೋಗಿಸಬೇಕು ಎಂಬುದರ ಬಗ್ಗೆ ಚಿಂತನಾಶೀಲರಾಗುತ್ತಾರೆ. ಏನೆಲ್ಲ ಬೆಳವಣಿಗೆಗಳಾಗಬಹುದು ಎಂಬ ಸಂಗತಿಗಳ ಬಗ್ಗೆ ಒಂದು ನೋಟ ಇಲ್ಲಿದೆ:

 1. ಕೆಲವು ದುರ್ಬಲ ಕಂಪನಿಗಳು ಮತ್ತು ಬ್ರಾಂಡುಗಳು ಮರೆಯಾಗಿಬಿಡುತ್ತವೆ. ಅನುಭೋಗಿಗಳು ನಂಬಲರ್ಹವಾದ ಮತ್ತು ತೃಪ್ತಿ ನೀಡಬಹುದಾದ ಬದಲಿ ಬ್ರಾಂಡುಗಳನ್ನು ಹುಡುಕಿಕೊಳ್ಳಬೇಕಾಗುತ್ತದೆ.
 2. ನಮ್ಮ ಆರೋಗ್ಯವು ಎಷ್ಟು ಸೂಕ್ಷ್ಮ ಎಂಬ ಪಾಠವನ್ನು ಕೊರೋನಾ ವೈರಸ್ ನಮಗೆ ಕಲಿಸಿದೆ. ಸಮೂಹಗಳಲ್ಲಿ ನಮಗೆ ಸಾಂಕ್ರಾಮಿಕ ನೆಗಡಿ, ಶಿತ ಮುಂತಾದ ರೋಗಗಳು ಹರಡಬಹುದು. ನಾವು ಬೇರೆಯವರನ್ನು ಭೇಟಿ ಮಾಡಿದಾಗ ಮತ್ತು ಅವರಿಗೆ ಶುಭಾಶಯ ಹೇಳುವಾಗ ಹಸ್ತಲಾಘವ ನೀಡುವುದನ್ನು ನಿಲ್ಲಿಸಬೇಕಾಗುತ್ತದೆ. ಸಾಂಕ್ರಾಮಿಕ ಬ್ಯಾಕ್ಟೀರಿಯ ಅಥವಾ ವೈರಸ್‌ಗಳಿಗೆ ಹೆಚ್ಚು ಹೆಚ್ಚು ಪ್ರತಿರೋಧ ಒಡ್ಡುವಂತಹ ಶಕ್ತಿಯನ್ನು ಬೆಳೆಸಿಕೊಳ್ಳಲು ಸೂಕ್ತವಾದ ಆರೋಗ್ಯಕರ ಆಹಾರವನ್ನು ಸೇವಿಸಬೇಕು.
 3. ನಮ್ಮ ಆರೋಗ್ಯ ವ್ಯವಸ್ಥೆಯ ಕೊರತೆಯು ಆತಂಕ ಉಂಟು ಮಾಡುವ ರೀತಿಯಲ್ಲಿದೆ ಮತ್ತು ದುಬಾರಿ ವ್ಯವಸ್ಥೆಯಾಗಿದೆ. ನಾವು ಆಸ್ಪತ್ರೆಗಳಿಗೆ ಪ್ರವೇಶಿಸುವ ಪ್ರಮೇಯ ಬರದಂತೆ ನೋಡಿಕೊಳ್ಳಬೇಕು ಮತ್ತು ಸುರಕ್ಷಿತವಾಗಿರಬೇಕು.
 4. ಏಕದಂ ಕೆಲಸ ಹೋಗಿದ್ದರಿಂದ ದುಡಿಯುವ ವರ್ಗವು ಮಾನಸಿಕ ವ್ಯಥೆಗೆ ಒಳಗಾಗಿದೆ. ಇದು ಮತ್ತೆ ಕೆಲಸ ದೊರೆತರೂ ಇವರನ್ನು ಕಾಡುತ್ತಿರುತ್ತದೆ. ಆದ್ದರಿಂದ ನಾವು ನಮ್ಮ ಗಳಿಕೆಯಲ್ಲಿ ಉಳಿತಾಯ ಮಾಡಬೇಕು ಮತ್ತು ಹಣವನ್ನು ಎಚ್ಚರಿಕೆಯಿಂದ ವ್ಯಯಿಸಬೇಕು.
 5. ಮನೆಯಲ್ಲಿಯೇ ಬಂಧಿತರಾಗಿದ್ದರಿಂದ ಅನೇಕರು ಸ್ವಂತಕ್ಕೆ ಅಗತ್ಯವಾದ ಆಹಾರವನ್ನು ಉತ್ಪಾದಿಸುವವರಾಗಿದ್ದಾರೆ. ಮನೆಯಲ್ಲಿಯೇ ಆಹಾರ ತಯಾರಾಗುವುದು ಹೆಚ್ಚಬೇಕು, ಮನೆಯಂಗಳದಲ್ಲಿ ಕೈತೋಟ ಮಾಡುವುದು ಮತ್ತು ತರಕಾರಿ ಹಾಗೂ ಸೊಪ್ಪು ಕೈತೋಟದಲ್ಲಿ ಬೆಳೆದುಕೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಮನೆಯ ಹೊರಗೆ ಊಟಕ್ಕೆ ಹೋಗುವುದನ್ನು ಕಡಿಮೆ ಮಾಡಬೇಕು.
 6. ನಾವು ನಮ್ಮ ಕುಟುಂಬ, ಸ್ನೇಹಿತರು ಮತ್ತು ಸಮುದಾಯಗಳ ಅಗತ್ಯಗಳಿಗೆ ಹೆಚ್ಚು ಆದ್ಯತೆ ನೀಡುತ್ತೇವೆ. ಸಾಮಾಜಿಕ ಜಾಲತಾಣದ ಮೂಲಕ ನಮ್ಮ ಕುಟುಂಬಗಳಿಗೆ ಮತ್ತು ಸ್ನೇಹಿತರಿಗೆ ಯೋಗ್ಯ ಮತ್ತು ಆರೋಗ್ಯಕರ ಆಹಾರವನ್ನು ಆಯ್ಕೆ ಮಾಡಿಕೊಳ್ಳುವಂತೆ ಮತ್ತು ಹೆಚ್ಚು ವಿವೇಕಶೀಲವಾದ ರೀತಿಯಲ್ಲಿ ಉಡುಪುಗಳನ್ನು ಮತ್ತು ಸರಕುಗಳನ್ನು ಖರೀದಿಸುವಂತೆ ಒತ್ತಾಯಿಸಬೇಕು.
 7. ಬ್ರಾಂಡುಗಳು ಯಾವ ಉದ್ದೇಶಗಳನ್ನು ಇಡೇರಿಸುತ್ತವೆ ಮತ್ತು ಪ್ರತೀ ಸರಕು ಎಲ್ಲರ ಒಳಿತನ್ನು ಈಡೇರಿಸುತ್ತಿದೆಯೇ ಎಂಬುದರ ವಿವರಗಳನ್ನು ಬಹಿರಂಗ ಪಡಿಸಬೇಕೆಂದು ನಾವು ಬಯಸುತ್ತೇವೆ.
 8. ಭೂಗ್ರಹದ ಸೂಕ್ಷ್ಮ ಸಂವೇಧಿ ಗುಣದ ಬಗ್ಗೆ, ನೀರು ಮತ್ತು ವಾಯು ಮಾಲಿನ್ಯದ ಬಗ್ಗೆ, ನೀರಿನ ಕೊರತೆಯ ಬಗ್ಗೆ ಹಾಗೂ ಇತರೆ ಸಮಸ್ಯೆಗಳ ಬಗ್ಗೆ ಹೆಚ್ಚು ಪ್ರಜ್ಞಾವಂತರಾಗುತ್ತಿದ್ದಾರೆ.

ಅನೇಕರು ದುಡಿಮೆ, ಕುಟುಂಬ ಮತ್ತು ವಿರಾಮಗಳ ನಡುವೆ ಸಮತೋಲನವನ್ನು ಸಾಧಿಸಿಕೊಳ್ಳಲು ಪ್ರಯತ್ನಿಸುತ್ತಿರುತ್ತಾರೆ. ಲೌಕಿಕತೆಯ ವ್ಯಸನದಿಂದ ಒಳ್ಳೆಯ ಬದುಕನ್ನು ಸಾಧ್ಯಮಾಡುವ ಮಾದರಿಗಳ ಬಗ್ಗೆ ಯೋಚಿಸುತ್ತಾರೆ. ಇವರೆಲ್ಲ ಉಪಭೋಗತಾವಾದೋತ್ತರ ಘಟ್ಟಕ್ಕೆ ಪ್ರವೇಶಿಸುತ್ತಾರೆ.

ಬಂಡವಾಳಶಾಹಿಯ ಅತ್ಯುತ್ತಮ ಎಂಜಿನ್ ಎಂದರೆ ದಕ್ಷತೆಯಿಂದ ಕೂಡಿದ ಆರ್ಥಿಕ ಬೆಳವಣಿಗೆ. ಇದು ಸಮಾನತೆಯಿಂದ ಕೂಡಿದ ಆರ್ಥಿಕ ಬೆಳವಣಿಗೆಯ ಎಂಜಿನ್ನೂ ಹೌದು. ಶ್ರೀಮಂತರ ಮೇಲಿನ ತೆರಿಗೆಯನ್ನು ಹೆಚ್ಚು ಮಾಡಿದಾಕ್ಷಣ ಇದು ಸಮಾಜವಾದಕ್ಕೆ ಬದಲಾಗುವುದಿಲ್ಲ. ಶ್ರೀಮಂತರು ಹೆಚ್ಚು ಹೆಚ್ಚು ಶ್ರೀಮಂತರಾದರೆ ಬಡವರ ಬದುಕೂ ಉತ್ತಮವಾಗುತ್ತದೆ ಎಂಬ ಭ್ರಮಾತ್ಮಕ ಆರ್ಥಿಕ ವಿಚಾರ ಪ್ರಣಾಳಿಕೆಯನ್ನು ನಾವು ಬಿಟ್ಟುಕೊಟ್ಟಿದ್ದೇವೆ. ವಾಸ್ತವವಾಗಿ ದುಡಿಮೆಗಾರರ ಕೈಯಲ್ಲಿ ಹೆಚ್ಚು ಹೆಚ್ಚು ಹಣವಿದ್ದು ಅವರ ಕುಟುಂಬಗಳು ಹೆಚ್ಚು ಹೆಚ್ಚು ವೆಚ್ಚ ಮಾಡತೊಡಗಿದಾಗ ಶ್ರೀಮಂತರು ಹೆಚ್ಚು ಹೆಚ್ಚು ಶ್ರೀಮಂತರಾಗುತ್ತಾರೆ.

ಕೊರೋನ ಬಿಕ್ಕಟ್ಟು ತೋರಿಸುತ್ತಿರುವಂತೆ ಪ್ರಬಲ ಆರೋಗ್ಯ ವ್ಯವಸ್ಥೆಯು ಸಮಾಜದ ಎಲ್ಲರ ಹಿತಾಸಕ್ತಿಯ ದೃಷ್ಟಿಯಿಂದ -ಅವರು ಬಡವರಿರಲಿ ಅಥವಾ ಶ್ರೀಮಂತರಿರಲಿ- ಅತ್ಯುತ್ತಮ ವ್ಯವಸ್ಥೆಯಾಗಿದೆ. ಬಂಡವಾಳಶಾಹಿ ವ್ಯವಸ್ಥೆಯ ಬಗ್ಗೆ ಮರುಚಿಂತಿಸುವ ಮತ್ತು ಮರುರೂಪಿಸುವುದಕ್ಕೆ ಇದು ಸಕಾಲ. ಇದನ್ನು ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ನ್ಯಾಯಗಳ ಆಧಾರದ ಮೇಲೆ ಹೆಚ್ಚು ಸಮಾನತೆಯ ಸ್ವರೂಪಕ್ಕೆ ಪರಿವರ್ತಿಸಬೇಕಾಗಿದೆ. ನಾವು ಒಂದೋ ಸ್ಕ್ಯಾಂಡಿನೇವಿಯನ್ ದೇಶಗಳಂತೆ ಹಂಚಿಕೊಳ್ಳುವ ಪಾಠ ಕಲಿಯುತ್ತೇವೆ ಇಲ್ಲವೇ ‘ಬನಾನಾ ಗಣರಾಜ್ಯ’ಗಳಾಗುತ್ತೇವೆ. ಇದರಲ್ಲಿ ನಾವೆಲ್ಲರೂ ಸಮಾನ ಸ್ಥಿತಿಯಲ್ಲಿದ್ದೇವೆ. 

ಅನುದಾದ: ಡಾ.ಟಿ.ಆರ್.ಚಂದ್ರಶೇಖರ

Leave a Reply

Your email address will not be published.