ಭಾಷೆ ಬೇರ್ಪಡಿಸದಿರಲಿ

– ಸಾರಾ ಅಬೂಬಕ್ಕರ

ಬೆಸೆಯುವ ಭಾಷೆ ಬೇರ್ಪಡಿಸದಿರಲಿ

ಕನ್ನಡವೆಂದರೆ ಅಸ್ಮಿತೆ, ಕನ್ನಡವೆಂದರೆ ಅನನ್ಯತೆ, ಕನ್ನಡವೆಂದರೆ ಆದ್ಯತೆ ಎಂದೆಲ್ಲಾ ಹೇಳಲಾಗುತ್ತದೆ. ಆದರೆ ಇಂದು ಕರ್ನಾಟಕದಲ್ಲಿ ಕನ್ನಡ ಭಾಷೆ ಉಳಿಯುತ್ತದೆಯೇ ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತದೆ. ಬೆಂಗಳೂರಿ ನಲ್ಲಿ ಕನ್ನಡ ಭಾಷೆಯನ್ನು ಹುಡುಕುವ ಪರಿಸ್ಥಿತಿ ಇದೆಯೆನ್ನಲಾಗುತ್ತಿದೆ. ಮಂಗಳೂರಿನಲ್ಲಿ ಪರಿಸ್ಥಿತಿ ಅಷ್ಟು ಕೆಟ್ಟಿಲ್ಲವಾದರೂ ಉತ್ತಮವಾಗಿಯೇನೂ ಇಲ್ಲ. ಲಿಪಿ ಇಲ್ಲದ ಕೆಲವು ಭಾಷೆಗಳು ಮಂಗಳೂರಿನಲ್ಲಿರುವುದರಿಂದ ಹಾಗೂ ಆ ಭಾಷೆಗಳಲ್ಲಿ ಸಾಹಿತ್ಯ ಅಕಾಡೆಮಿಗಳಿರುವುದರಿಂದ ಈ ಲಿಪಿಯನ್ನು ಜನರು ಮರೆಯಲಾರರು. ಆದರೆ ಕನ್ನಡ ಭಾಷೆಯ ಸಾಹಿತ್ಯದ ಕುರಿತು ಚಿಂತಿಸುವಾಗ ಈ ಭಾಷೆಯ ಭವಿಷ್ಯದ ಕುರಿತು ಚಿಂತಿಸಬೇಕಾಗುತ್ತದೆ.

ಯಾವುದೇ ಭಾಷೆ ಉಳಿದು ಬೆಳೆಯಬೇಕಾದರೆ ಆ ಭಾಷೆಯಲ್ಲಿ ವಿಪುಲವಾದ ಸಾಹಿತ್ಯ ಕೃತಿಗಳ ರಚನೆಯಾಗಬೇಕು. ಕಳೆದ ಶತಮಾನದಲ್ಲಿ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಹೇಳಿಕೊಳ್ಳುವಂತಹ ತೊಂದರೆ ಇರಲಿಲ್ಲ. ಆದರೆ 21ನೇ ಶತಮಾನದಲ್ಲಿ ಕನ್ನಡ ಭಾಷೆಯ ದುರ್ದೆಸೆ ಪ್ರಾರಂಭವಾಯಿತು. ಸಾಹಿತ್ಯ ಕೃತಿಗಳ ರಚನೆಯಾಗುವುದಿಲ್ಲವೆಂದಲ್ಲ. ಆದರೆ ಅವುಗಳನ್ನು ಕೊಂಡು ಓದುವವರ ಸಂಖ್ಯೆ ಕಡಿಮೆಯಾಗಿದೆ. ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡ ಹಲವಾರು ಮಾಧ್ಯಮಗಳೂ ಜನರನ್ನು ಪುಸ್ತಕದ ಓದಿನಿಂದ ದೂರ ಸರಿಸುವಂತಾಯಿತು.

ದೇಶಕ್ಕೆ ಸ್ವಾತಂತ್ರ್ಯ ದೊರೆತ ಸಂದರ್ಭದಲ್ಲಿ ಕನ್ನಡ ಮತ್ತು ಇಂಗ್ಲಿಷ್ ಎಂಬ ಎರಡೇ ಭಾಷೆಗಳನ್ನು ಕಲಿಯಬೇಕಾಗಿದ್ದ ವಿದ್ಯಾರ್ಥಿಗಳ ಮೇಲೆ ನಿಧಾನವಾಗಿ ಉತ್ತರ ಭಾರತದ ಭಾಷೆಯಾದ ಹಿಂದಿಯನ್ನು ಹೇರಲಾಯಿತು. ಎಂಬತ್ತರ ದಶಕದಲ್ಲಿ ಮಾನ್ಯ ದೇವರಾಜ ಅರಸರು ಮುಖ್ಯ ಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಒಂದು ಸಾವಿರ ಕನ್ನಡ ಶಾಲೆಗಳಲ್ಲಿ ಉರ್ದು ತರಗತಿಗಳನ್ನು ಪ್ರಾರಂಭಿಸಲಾಯಿತು. ನಾನು ಆ ಸಂದರ್ಭದಲ್ಲಿ ರಾಯಚೂರಿನಲ್ಲಿದ್ದು ಅಲ್ಲಿನ ಒಂದು ಶಾಲೆಗೆ ಭೇಟಿ ನೀಡಿದ್ದೆ. ಅಲ್ಲಿ ಒಂದೇ ಕೋಣೆಯೊಳಗೆ ಅಧ್ಯಾಪಕರೊಬ್ಬರು ಮೂರು ಉರ್ದು ತರಗತಿಗಳನ್ನು ನಡೆಸುತ್ತಿದ್ದರು.

ಕನ್ನಡ ವಿದ್ಯಾರ್ಥಿಗಳು ಮತ್ತು ಉರ್ದು ವಿದ್ಯಾರ್ಥಿಗಳು ಪರಸ್ಪರ ಬೆರೆಯುತ್ತಾರಾ ಎಂದು ನಾನು ಅಧ್ಯಾಪಕಿಯೊಬ್ಬರಿಗೆ ಕೇಳಿದಾಗ, “ಗಂಟೆ ಹೊಡೆದೊಡನೆ ಉರ್ದು ಮಕ್ಕಳು ಮನೆಯೆಡೆಗೆ ಓಡುತ್ತಾರೆ” ಎಂದರು. ಸಿಲೆಬಸ್ ಒಂದೇ ರೀತಿ ಇದ್ದರೆ ವಿದ್ಯಾರ್ಥಿಗಳಲ್ಲಿ ಸೌಹಾರ್ದ ಇರುತ್ತದೆ; ಭಾಷೆಗಳ ಭಿನ್ನತೆಯಿಂದಾಗಿ ಸೌಹಾರ್ದ ಮಾಯವಾಗುತ್ತದೆ. ಈ ಉರ್ದು ತರಗತಿಯಿಂದಾಗಿ ಮುಸ್ಲಿಂ ವಿದ್ಯಾರ್ಥಿಗಳು ಇನ್ನೊಂದು ತೊಂದರೆಗೂ ಸಿಕ್ಕಿಕೊಳ್ಳಬೇಕಾಯಿತು. ಕೆಲವು ವರ್ಷಗಳ ಹಿಂದೆ ನನಗೆ ಶಿವಮೊಗ್ಗದ ಅಧ್ಯಾಪಕರೊಬ್ಬರು ಪತ್ರ ಬರೆದರು: “ಹನ್ನೆರಡನೇ ತರಗತಿಯ ಪರೀಕ್ಷಾ ಫಲಿತಾಂಶ ಬಂದ ದಿನ ನಮ್ಮ ಕಾಲೇಜಿನ ಗೇಟಿನ ಬಳಿಯಲ್ಲಿ ಮುಸ್ಲಿಂ ಹೆಣ್ಣು ಮಕ್ಕಳೆಲ್ಲರೂ ಅಳುತ್ತಾ ನಿಂತುಕೊಂಡಿದ್ದರು. ಕಾರಣ ಕೇಳಿದರೆ ಅವರೆಲ್ಲರೂ ಹತ್ತನೇ ತರಗತಿವರೆಗೂ ಉರ್ದು ಭಾಷೆಯಲ್ಲಿ ವ್ಯಾಸಂಗ ಮಾಡಿದವರು. ಈ ವರ್ಷ ಉರ್ದು ತರಗತಿ ಇಲ್ಲದ ಕಾರಣ ಅವರು ಕನ್ನಡದಲ್ಲಿ ಕಲಿಯಬೇಕಾಯಿತು. ಕನ್ನಡದಲ್ಲಿ ಶಿಕ್ಷಣ ಮುಂದುವರಿಸಲು ಸಾಧ್ಯವಾಗದೆ ಎಲ್ಲರೂ ಅಳುತ್ತಿದ್ದರು.” ಅವರು ಕನ್ನಡ ಭಾಷೆಯ ಕುರಿತು ಒಂದು ವಿಚಾರ ಸಂಕಿರಣವನ್ನೇರ್ಪಡಿಸಿ ನನ್ನನ್ನು ಶಿವಮೊಗ್ಗಕ್ಕೆ ಕರೆದಿದ್ದರು. ನಾನು ಕನ್ನಡ ಕುರಿತು ಮಾತನಾಡಿದಾಗ ಅಲ್ಲಿದ್ದ ಹಿರಿಯ ಮುಸ್ಲಿವiರೊಬ್ಬರು ಅದನ್ನು ವಿರೋಧಿಸಿದರು. ತಮ್ಮ ಸ್ವಾರ್ಥಕ್ಕಾಗಿ ಹೆಣ್ಣುಮಕ್ಕಳ ಶಿಕ್ಷಣವನ್ನು ತಡೆಯುತ್ತಿರುವುದನ್ನು ನಾನು ಕಂಡೆ. ಚಿಕ್ಕಂದಿನಲ್ಲಿಯೇ ಭಾಷೆಯ ಮೂಲಕ ಮಕ್ಕಳಲ್ಲಿ ವಿಭಜನೆ ಮಾಡಿದರೆ ಅವರ ಭವಿಷ್ಯವೇ ನಾಶವಾಗಬಹುದು ಎಂದು ತಿಳಿಸಲು ನನ್ನ ಈ ಅನುಭವ ಹೇಳಿದೆ.

ಇಂದು ಪುಸ್ತಕದ ಓದಿನಿಂದಲೇ ಯುವ ಜನರು ದೂರಸರಿ ದಿದ್ದಾರೆ. ಪುಸ್ತಕ ಓದದಿದ್ದರೆ ನಾವು ಮನುಷ್ಯರಾಗುವುದಿಲ್ಲ. ನಮ್ಮ ಸುತ್ತುಮುತ್ತಲೂ ಬದುಕುತ್ತಿರುವ ಹ¯ವಾರು ಸಮಾಜಗಳ ಪರಿಸ್ಥಿತಿ ಹೇಗಿದೇ? ಅವರ ಸಮಸ್ಯೆಗಳೇನು? ಅವರ ತೊಂದರೆಗಳೇನು? ಮುಂತಾದ ವಿಷಯಗಳನ್ನು ತಿಳಿದುಕೊಳ್ಳಲು ಸಾಹಿತ್ಯ ಕೃತಿಗಳಿಂದ ಮಾತ್ರ ಸಾಧ್ಯ ಎಂಬುದು ನನ್ನ ಅನಿಸಿಕೆ. ಶಿವರಾಮ ಕಾರಂತರು, ಕುವೆಂಪು, ಅನಂತಮೂರ್ತಿ ಮುಂತಾದ ನೂರಾರು ಲೇಖಕರು ನೂರಾರು ಲೇಖಕಿಯರು ಬರೆಯದೇ ಇದ್ದಿದ್ದರೆ ನಾವೆಲ್ಲರೂ ಮಾನವೀತೆಯ ಅರ್ಥ ತಿಳಿಯದೆ ಅಜ್ಞಾನಿಗಳಾಗಿರಬೇಕಿತ್ತು. ಮುಸ್ಲಿಂ ಮಹಿಳೆಯರ ಕುರಿತು ಕಾದಂಬರಿಗಳನ್ನು ನಾನು ಬರೆಯದೇ ಇದ್ದಿದ್ದರೆ ಇಲ್ಲಿನ ಮುಸ್ಲಿಂ ಮಹಿಳೆಯರ ಬದುಕಿನ ಕುರಿತು ಮುಸ್ಲಿಮೇತರರು ಅಜ್ಞಾನಿಗಳಾಗಿಯೇ ಇರುತ್ತಿದ್ದರು.

ಈಗಿನ ಪ್ರಾಥಮಿಕ ಶಿಕ್ಷಣವೂ ವಿದ್ಯಾರ್ಥಿಗಳನ್ನು ಓದಿನಿಂದ ದೂರ ಸರಿಸಿದೆ. ಹತ್ತನೇ ತರಗತಿ ತೇರ್ಗಡೆಯಾದ ಹ¯ವಾರು ವಿದ್ಯಾರ್ಥಿಗಳಿಗೂ ಸಮನಾಗಿ ಓದಲು ಬರೆಯಲು ಬರುವುದಿಲ್ಲ, ವಿದ್ಯಾರ್ಥಿಗಳಿಂದ ಸಮನಾಗಿ ಹೋಂವರ್ಕ್ ಮಾಡಿಸುವುದಿಲ್ಲ, ಕಾಪಿ ಬರೆಸಲಾಗುವುದಿಲ್ಲ ಎನ್ನಲಾಗುತ್ತದೆ. ಬರಹದಿಂದ ದೂರ ಸರಿದವರಿಗೆ ಓದು ಅಭ್ಯಾಸ ಮಾಡುವುದು ಕಷ್ಟವಾಗುತ್ತದೆ. ಕನ್ನಡ ಮಾಧ್ಯಮ ಮಾತ್ರವಲ್ಲ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ಪಡೆದವರ ಪರಿಸ್ಥಿತಿ ಕೂಡಾ ಇದೇ ಆಗಿದೆ. ಮಂಗಳೂರಿನಲ್ಲಿ ಕನ್ನಡ, ತುಳು, ಕೊಂಕಣಿ ಮತ್ತು ಬ್ಯಾರಿ ಭಾಷೆಯ ಸಾಹಿತ್ಯ ಅಕಾಡೆಮಿಗಳಿವೆ. ಈ ಎಲ್ಲಾ ಅಕಾಡೆಮಿಗಳೂ ಬರಹಕ್ಕಾಗಿ ಕನ್ನಡ ಲಿಪಿಯನ್ನೇ ಬಳಸಿಕೊಳ್ಳುತ್ತಿದ್ದಾರೆ. ಹೀಗಾಗಿ ಮಂಗಳೂರಿನಲ್ಲಿ ಇನ್ನೂ ಕನ್ನಡ ಉಳಿದಿದೆ ಎಂದೆನ್ನಿಸುತ್ತದೆ ಮತ್ತು ಈ ಬಹುತ್ವ ಕೂಡಾ ಕೋಮು ಸೌಹಾರ್ದಕ್ಕೆ ಉತ್ತಮ ಉದಾಹರಣೆಯಾಗಿದೆ.

Leave a Reply

Your email address will not be published.