ಬಾಂಗ್ಲಾ ಮಾದರಿ ಆಗಬಾರದೇಕೇ?

– ಹುರುಕಡ್ಲಿ ಶಿವಕುಮಾರ

ಪಾಕಿಸ್ತಾನ ತನ್ನ ಧಾರ್ಮಿಕ ಹಿನ್ನೆಲೆಯಲ್ಲಿ ಪೂರ್ವ ಪಾಕಿಸ್ತಾನದ ಮೇಲೆ ಉರ್ದು ಭಾಷೆಯನ್ನು ಹೇರಲು ಹೊರಟಾಗ ಆ ದೇಶದ ಜನ ತಮಗೆ ಧರ್ಮಕ್ಕಿಂತ ಭಾಷೆ ಮುಖ್ಯವೆಂದು ಹೋರಾಡಿ ಸ್ವತಂತ್ರ ಬಾಂಗ್ಲಾದೇಶ ಕಟ್ಟಿಕೊಂಡರು. ಇದು ವಿಶ್ವಕ್ಕೇ ಮಾದರಿ.

ಪ್ರಾಥಮಿಕ ಶಿಕ್ಷಣದ ಬಗ್ಗೆ ಚರ್ಚಿಸಿರುವುದು ತುಂಬ ಸರಿಯಾಗಿದೆ. ನನ್ನ ದೃಷ್ಟಿಯಲ್ಲಿ ಇದು ರೈತರ ಆತ್ಮಹತ್ಯೆ ಕುರಿತಾದ ಚಿಂತನೆಯಷ್ಟೇ ಗಂಭೀರ ಮತ್ತು ಮುಖ್ಯ. ಏಕೆಂದರೆ ‘ಯಾವುದೇ ಸಂಸ್ಕೃತಿಯನ್ನು ನಾಶಮಾಡಬೇಕೆಂದಿದ್ದರೆ ಅದಕ್ಕಾಗಿ ಯುದ್ಧ ಮಾಡಬೇಕಿಲ್ಲ; ಬದಲಾಗಿ ಆ ಜನಸಮುದಾಯ ಮಾತನಾಡುವ ಭಾಷೆಯನ್ನು ನಾಶಗೊಳಿಸಿದರೆ ಸಾಕು’ ಎನ್ನುತ್ತಾರೆ ಒಬ್ಬ ಭಾಷಾ ವಿಜ್ಞಾನಿ. ಆದರೂ ನಮ್ಮ ಸಂಸ್ಕೃತಿಯ ಪಾರಂಪಾರಿಕ ಹಕ್ಕುದಾರರೆಂಬಂತೆ ಸಮಾಜದಲ್ಲಿ ಬಿಂಬಿಸಿಕೊಳ್ಳುವ ಎಲ್ಲಾ ಧರ್ಮಗಳ ಮಠಾಧೀಶರೇ ಇಂಗ್ಲಿಷ್ ಶಾಲೆ ತೆರೆದು ನಮ್ಮ ಸಂಸ್ಕೃತಿಕ ಬದುಕಿಗೇ ಕೊಡಲಿ ಪೆಟ್ಟು ನೀಡುತ್ತಿರುವುದಕ್ಕೆ ನಾವು ಏನನ್ನಬೇಕು? ಆತ್ಮಹತ್ಯಾತ್ಮಕ ನಿಲುವೆನ್ನಬೇಕೆ? ಮಠಾಧೀಶರ ಲಜ್ಜೆಗೇಡಿ ವ್ಯಾಪಾರವೆನ್ನಬೇಕೆ?

ಇಲ್ಲಿ ಸರ್ಕಾರದ ಪಾತ್ರವೇನು? ಎಂಬುದು ಬಹಳ ಮುಖ್ಯವಾದ ಪ್ರಶ್ನೆ. ಏಕೆಂದರೆ ಪ್ರಾಥಮಿಕ ಶಾಲಾಶಿಕ್ಷಣದ ಹೊಣೆ ಸರಕಾರದ್ದೇ ಆಗಿದೆ ಎಂಬುದನ್ನು ಸಂವಿಧಾನವೇ ಒತ್ತಿಒತ್ತಿ ಹೇಳಿದೆ. ಆದರೆ ನಮ್ಮ ಹೊಣೆಗೇಡಿ ಸರ್ಕಾರಗಳು ಶಿಕ್ಷಣವನ್ನು ಕೂಡ ಖಾಸಗೀಕರಿಸಿ ಶಿಕ್ಷಣ ವ್ಯವಸ್ಥೆಯನ್ನೇ ಅಧ್ವಾನಗೊಳಿಸಿವೆ. ಹೀಗಾಗಿ ನಮ್ಮ ಮಾತೃಭಾಷಾ ಶಿಕ್ಷಣದ ತತ್ವಕ್ಕೆ ಕೊಡಲಿಪೆಟ್ಟು ಬೀಳುತ್ತಲೇ ಇದೆ. ಈ ನಡುವೆ ನಮ್ಮ ನ್ಯಾಯಾಲಯಗಳೂ ಮಗು ಯಾವ ಮಾಧ್ಯಮದಲ್ಲಿ ಓದಬೇಕೆಂಬ ಆಯ್ಕೆಯ ಅಧಿಕಾರ ಆ ಮಗುವಿನ ಪಾಲಕರಿಗೇ ಇರಬೇಕೆಂಬ ತೀರ್ಪು ನೀಡಿ ಇಂಗ್ಲಿಷ್ ಶಾಲೆಗಳ ವ್ಯಾಪಾರಕ್ಕೆ ಹಾದಿಯನ್ನು ಸುಗಮಗೊಳಿಸಿವೆ. ಮಗುವಿನ ಶಿಕ್ಷಣ ಮಾಧ್ಯಮದ ಆಯ್ಕೆ ಪಾಲಕರಿಗಿರುವುದಾದರೆ ಶಿಕ್ಷಣತಜ್ಞರು ಯಾಕಿರಬೇಕು? ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಯತ್ನವನ್ನು ನ್ಯಾಯಲಯವೂ ಮಾಡಲಿಲ್ಲ! ನ್ಯಾಯಾಲಯಕ್ಕೆ ಮನವರಿಕೆ ಮಾಡುವ ಯತ್ನವನ್ನು ಸರ್ಕಾರವೂ ಮಾಡಲಿಲ್ಲ! ಇದು ದುರಂತದ ಸಂಗತಿ.

ಕನ್ನಡ ಚಳವಳಿಗಾರರ ಕುರಿತು ಮುಖ್ಯಮಂತ್ರಿಯ ಅಭಿಪ್ರಾಯ ಅಜ್ಞಾನದಿಂದ ಕೂಡಿದೆ. ಏಕೆಂದರೆ ನಮ್ಮ ಕನ್ನಡ ಚಳವಳಿಗಾರರ ಮನೆಯ ಬಳಿ ಅನೇಕ ಕಿಲೋಮಿಟರ್ ವ್ಯಾಪ್ತಿಯಲ್ಲಿ ಒಂದೂ ಕನ್ನಡ ಮಾಧ್ಯಮದ ಶಾಲೆಗಳಿಲ್ಲ! ಸರ್ಕಾರಿ ಶಾಲೆಯೂ ಇಲ್ಲ! ಪರಿಸ್ಥಿತಿ ಹೀಗಿರುವಾಗ ಕನ್ನಡ ಹೋರಾಟಗಾರರು ತಮ್ಮ ಮನೆಗೆ ಹತ್ತಿರವಿರುವ ಇಂಗ್ಲಿಷ್ ಮಾಧ್ಯಮ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸಲೇಬೇಕಿರುವ ಅಸಹಾಯತೆ ಉಂಟಾಗಿದೆ. ಇದು ಬರೀ ಬೆಂಗಳೂರಿನ ಹೋರಾಟಗಾರರಿಗಷ್ಟೇ ಉಂಟಾಗಿರುವ ಸಮಸ್ಯೆಯಲ್ಲ. ಹಳದಿ ಬಸ್ ಓಡಾಡುವ ಕರ್ನಾಟಕದ ಹಳ್ಳಿಗಾಡಿನ ನನ್ನಂಥವರ ಸಮಸ್ಯೆಯೂ ಹೌದು. ಅಂದರೆ ಇಂಥ ಸಮಸ್ಯೆಯನ್ನು ಹುಟ್ಟುಹಾಕಿರುವುದು ನಮ್ಮ ಸರ್ಕಾರವೇ ಅಲ್ಲವೇ? ಶಿಕ್ಷಕರನ್ನು ನೇಮಕ
ಮಾಡದೆ, ಶಾಲೆಗಳನ್ನೇ ಮುಚ್ಚುತ್ತಿರುವುದು ಸರ್ಕಾರವೇ ಅಲ್ಲವೇ? ಮುಖ್ಯಮಂತ್ರಿ ಈ ವಾಸ್ತವವನ್ನು ಅರಿಯದೆ ಕನ್ನಡ ಹೋರಾಟಗಾರರ ಅರ್ಥಾತ್ ಮಾತೃಭಾಷಾ ಶಿಕ್ಷಣಕ್ಕಾಗಿ ಹೋರಾಡುತ್ತಿರುವವರ ತಲೆ ಮೇಲೆ ಗೂಬೆ ಕೂರಿಸಲು ಹೊರಟಿದ್ದಾರೆ.

ಅಂದಹಾಗೆ ಉನ್ನತ ಶಿಕ್ಷಣವನ್ನು ಮತ್ತು ವೃತ್ತಿಪರ ಶಿಕ್ಷಣವನ್ನು ಕನ್ನಡದಲ್ಲಿ ನೀಡಲಿಕ್ಕಾಗುವುದಿಲ್ಲ ಎಂಬ ವಾದವನ್ನು ನಾನು ಒಪ್ಪುವುದಿಲ್ಲ. ರಾಷ್ಟ್ರಕವಿ ಕುವೆಂಪು ಅವರು ಮೈಸೂರು ವಿಶ್ವವಿದ್ಯಾಲಯದಿಂದ ಉನ್ನತ ಶಿಕ್ಷಣದ ಪಠ್ಯವನ್ನು ಕನ್ನಡದಲ್ಲಿಯೇ ನೀಡಲು ಆರಂಭಿಸಿದ್ದರು. ಆದರೆ ಅದನ್ನು ನಂತರ ವಿಸ್ತರಿಸಲಿಲ್ಲ. ಅಜೀಂ ಪ್ರೇಮ್‍ಜೀ ಪ್ರತಿಷ್ಠಾನ ಇದೀಗ ಉನ್ನತಶಿಕ್ಷಣ ಮತ್ತು ತಾಂತ್ರಿಕಶಿಕ್ಷಣದ ಕನ್ನಡ ಪಠ್ಯವನ್ನು ರಚಿಸುವ ಕಾರ್ಯದಲ್ಲಿ ತೊಡಗಿಕೊಂಡಿದೆ ಎಂದು ನಾನು ಕೇಳಿಬಲ್ಲೆ. ಈ ಕಾರ್ಯ ಆದಷ್ಟು ಬೇಗ ಲೋಕಾರ್ಪಣೆಗೊಂಡರೆ ಅಂಥ ನಕಾರಾತ್ಮಕ ಚಿಂತಕರ ಬಾಯಿ ಮುಚ್ಚಿಸಲು ಸಾಧ್ಯವಾಗುತ್ತದೆ.

2000ನೇ ಇಸವಿಯಿಂದ ವಿಶ್ವಸಂಸ್ಥೆ ಫೆಬ್ರುವರಿ 21ನೇ ದಿನಾಂಕವನ್ನು ಮಾತೃಭಾಷಾ ದಿನವೆಂದು ಆಚರಿಸಲು ಕರೆನೀಡಿದೆ. ಅದಕ್ಕೆ ಕಾರಣ 1937ರಿಂದ ಬಾಂಗ್ಲಾದೇಶದಲ್ಲಿ ನಡೆದ ಮಾತೃಭಾಷಾ ಚಳವಳಿ. ಪಾಕಿಸ್ತಾನ ಉರ್ದು ಭಾಷೆಯನ್ನು ಹೇರಲು ಯತ್ನಿಸಿದಾಗ ಬಾಂಗ್ಲಾದೇಶದ ಜನ ಅದನ್ನು ಒಪ್ಪದೆ ತಮ್ಮ ಮಾತೃಭಾಷೆಯಾದ ಬಂಗಾಳಿ ಭಾಷೆಯನ್ನೇ ಉಳಿಸಿಕೊಳ್ಳಲು ಹೋರಾಡಿದರು. ಆ ಹೋರಾಟ ತೀವ್ರಗೊಂಡು ಪೊಲೀಸರ ಗುಂಡಿಗೆ ಐದಾರು ಜನ ಬಲಿಯಾದರು! ಆ ಹೋರಾಟಚಳವಳಿ ತೀವ್ರಗೊಂಡು ಭಾರತ ಬೆಂಬಲದಿಂದ ಯುದ್ಧವೂ ಆಗಿ 1971ರ ವೇಳೆಗೆ ಬಾಂಗ್ಲಾ ಸ್ವತಂತ್ರ ರಾಷ್ಟ್ರವಾಯಿತು.

ಪಾಕಿಸ್ತಾನ ತನ್ನ ಧಾರ್ಮಿಕ ಹಿನ್ನೆಲೆಯಲ್ಲಿ ಪೂರ್ವ ಪಾಕಿಸ್ತಾನ (ಇಂದಿನ ಬಾಂಗ್ಲಾದೇಶ)ದ ಮೇಲೆ ಉರ್ದು ಭಾಷೆಯನ್ನು ಹೇರಲು ಹೊರಟಾಗ ಆ ದೇಶದ ಜನ ನಮಗೆ ಧರ್ಮಕ್ಕಿಂತ ಭಾಷೆ ಮುಖ್ಯವೆಂದು ಹೇಳಿ ಹೋರಾಡಿ ಮತ್ತೆ ಆ ಕಾರಣಕ್ಕಾಗಿಯೇ ಪ್ರತ್ಯೇಕಗೊಂಡು ಸ್ವತಂತ್ರ ರಾಷ್ಟ್ರವನ್ನು ಕಟ್ಟಿಕೊಂಡರು. ಇದು ಒಂದು ಭಾಷೆಯ ಮಹತ್ವಕ್ಕೆ ದ್ಯೋತಕ. ಒಂದೇ ಧರ್ಮ, ಒಂದೇ ಸಂಸ್ಕೃತಿಯೆಂದು ಒಂದೇ ಭಾಷೆಯನ್ನು ಹೇರಲು ಹೊರಟಾಗ ಉಂಟಾದ ದೇಶದ ಇಬ್ಭಾಗವಿದು! ನಿಜಕ್ಕೂ ಇದು ವಿಶ್ವಕ್ಕೇ ಮಾದರಿಯಾಗಿದೆ.

ಮಾತೃಭಾಷೆಯ ಮಹತ್ವ ಹೀಗಿರುವಾಗ ನಮ್ಮ ಪ್ರಧಾನಮಂತ್ರಿ ಮತ್ತು ಮುಖ್ಯಮಂತ್ರಿಗಳು ಇಷ್ಟೊಂದು ಬೇಜವಾಬ್ದಾರಿಯಿಂದ ವರ್ತಿಸುತ್ತಿರುವುದು ಕಳವಳಕಾರಿ ಸಂಗತಿ.

Leave a Reply

Your email address will not be published.