ಬಾಜು ಮನಿ ಕಾಕು ಸೋನು ವೇಣುಗೋಪಾಲ್

ಸೋನು ವೇಣುಗೋಪಾಲ್, ಉತ್ತರ ಕರ್ನಾಟಕದವರ ಅಚ್ಚುಮೆಚ್ಚಿನ ಸೋಶಿಯಲ್ ಮೀಡಿಯಾ ಕ್ವೀನ್ ಬಾಜು ಮನಿ ಕಾಕು ಸೃಷ್ಟಿಕರ್ತೆ. ಬೆಂಗಳೂರಿನ ಫೀವರ್ 104 ಎಫ್‍ಎಂನಲ್ಲಿ ಬಾಲಿವುಡ್ ಕಫೆ, ರೇಡಿಯೋ ಸಿಟಿ ಎಫ್‍ಎಂ 91ನಲ್ಲಿಯ “ಐತ್ತಲಕಡಿ ಮಾರ್ನಿಂಗ್” ಹಾಗೂ ಪ್ರಸ್ತುತ “ಸಿಟಿ ಮಾತು” ಕಾರ್ಯಕ್ರಮಗಳಲ್ಲಿ ಕನ್ನಡಿಗರ ಮನ ಮುಟ್ಟಿದ ರೇಡಿಯೋ ಜಾಕಿ. ಕನ್ನಡ ಕಟ್ಟುವ ಹೊಸ ಹೂರಣದ ಕುರಿತು ನಡೆಸಿದ ಸಂದರ್ಶನದಲ್ಲಿ ಮನಬಿಚ್ಚಿ ಚಚ್ಚಿದ್ದಾರೆ!

ಕನ್ನಡ ಬಳಸುವ-ಬೆಳೆಸುವ ವಿಚಾರದಲ್ಲಿ ರೇಡಿಯೋ ಜಾಕಿ ಅವರ ಪಾತ್ರದ ಬಗ್ಗೆ ತಿಳಿಸಿ.

ಯಾವುದೇ ಭಾಷೆ ಹೆಚ್ಚಾಗಿ ಬಳಸುವುದರಿಂದ ಬೆಳೆಯುತ್ತದೆ -ಕನ್ನಡವೂ ಹಾಗೆಯೇ. ಎಲ್ಲ ಜನರ ದೈನಂದಿನ ಬಳಕೆಯಲ್ಲಿ ಕನ್ನಡ ಹೆಚ್ಚಾದರೆ ಮಾತ್ರ ಅದು ಒಂದು ಜೀವಂತ ಭಾಷೆಯಾಗಿ ಉಳಿಯಲು ಸಾಧ್ಯ. ಈ ನಿಟ್ಟಿನಲ್ಲಿ ಕನ್ನಡ ರೇಡಿಯೋ ಚಾನೆಲ್ ನಲ್ಲಿ ರೇಡಿಯೋ ಜಾಕಿ ಅವರ ಪಾತ್ರ ಕನ್ನಡವನ್ನು ಎಲ್ಲರ ಕಿವಿಗೆ ತಲುಪಿಸುವಂತದ್ದು. ಕನ್ನಡದಲ್ಲಿ ಸಂಭಾಷಣೆ, ಹಾಡುಗಳು, ಕನ್ನಡದ ಸುತ್ತಲಿನ ಕಾರ್ಯಕ್ರಮಗಳು ಹಾಗು ಕನ್ನಡಿಗರ ಜೊತೆ ಮಾತುಕತೆಯೊಂದಿಗೆ ಅವರು ಎಲ್ಲರಿಗೂ ಕನ್ನಡವನ್ನು ತಲುಪಿಸುವ ಕೆಲಸ ಮಾಡ್ತಾರೆ. ಅಷ್ಠೆ ಅಲ್ಲದೆ ಕನ್ನಡದಲ್ಲಿ ಪ್ರಸ್ತುತವಾದ, ಹೊಸದಾಗಿ ಹುಟ್ಟುವಂತಹ ಪ್ರಯೋಗ, ಪದಗಳು ಹಾಗು ಪದಗುಚ್ಛಗಳನ್ನು ಅವರು ತಮ್ಮ ಮಾತಿನಲ್ಲಿ ಅಳವಡಿಸಿಕೊಂಡು ಭಾಷೆಯನ್ನೂ ಜೀವಂತವಾಗಿ ಇರಿಸುತ್ತಾರೆ.

ನಿಮ್ಮ “ಬಾಜು ಮನಿ ಕಾಕು” ಯೂಟೂಬ್ ಬಹಳಷ್ಟು ಪ್ರಸಿದ್ಧಿಯಾಗಿದೆ. ಇದರಿಂದ ನೀವು ಉತ್ತರ ಕರ್ನಾಟಕದ ಭಾಷೆಯ ಸೊಗಡನ್ನು ಚೆನ್ನಾಗಿ ಪರಿಚಯಿಸಿದ್ದೀರಿ. ಕನ್ನಡ ಬಳಸುವ-ಬೆಳೆಸುವ ಕಾಯಕದಲ್ಲಿ ಉತ್ತರ ಕರ್ನಾಟಕ ಹಾಗು ದಕ್ಷಿಣ ಕರ್ನಾಟಕದಲ್ಲಿ ವ್ಯತ್ಯಾಸವೇನು?

“ಬಾಜು ಮನಿ ಕಾಕು” ನಲ್ಲಿ ನಾನು ಉತ್ತರ ಕರ್ನಾಟಕದ ಕನ್ನಡದ ಸೊಗಡನ್ನು ಹೊರತರುವ ಒಂದು ಚಿಕ್ಕ ಪ್ರಯತ್ನ ಮಾಡಿದ್ದೇನೆ. ಹಾಗೆ ನೋಡೋದಾದ್ರೆ ಉತ್ತರ ಹಾಗು ದಕ್ಷಿಣ ಕರ್ನಾಟಕ -ಎರಡೂ ಕಡೆ ಕನ್ನಡವನ್ನು ಬಳಸುವ-ಬೆಳೆಸುವ ಕಾಯಕ ನಿರಂತರವಾಗಿ ನಡೀತಾ ಬಂದಿದೆ. ಕನ್ನಡಕ್ಕೆ ಸಿಕ್ಕಿರುವ ಜ್ಞಾನಪೀಠಗಳನ್ನೇ ನೋಡಿ. ಅವು ರಾಜ್ಯದ ಎಲ್ಲ ಭಾಗಗಳನ್ನು ಪ್ರತಿನಿಧಿಸುತ್ತವೆ.ಭಾಷೆಯ ಸೊಗಡಿನಲ್ಲಿ ವ್ಯತ್ಯಾಸಗಳಿದ್ದರೂ, ಈ ಎರಡೂ ಭಾಗಗಳ ಕನ್ನಡ ಬೆಳೆಸುವ ಕಾರ್ಯದಲ್ಲಿ ನನಗೆ ಯಾವುದೇ ವ್ಯತ್ಯಾಸ ಕಾಣಲ್ಲ. “ಕನ್ನಡ ಬೆಳೆಸೋಣ ಬನ್ನಿ, ಕನ್ನಡ ಬೆಳೆಸುವ ಬನ್ನಿ ಮಾರಾಯ್ರೆ, ಬರ್ರಿ ಕನ್ನಡ ಬೆಳೆಸೋಣು” -ಹೀಗೆ ಬೇರೆಬೇರೆಯಾಗಿ ಹೇಳಿಕೊಂಡೇ ನಾಡಿನ ಬೇರೆ ಬೇರೆ ಭಾಗದ ಜನರು ಆ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ!

“ಬಾಜು ಮನಿ ಕಾಕು” ಒಂದು ಹೊಸ ಪ್ರಯೋಗ. ಅದನ್ನು ಮಾಡುವ ಯೋಚನೆ ಮೊಟ್ಟಮೊದಲು ಬಂದದ್ದು ಹೇಗೆ?

ನಮ್ಮ ಸುತ್ತಮುತ್ತಲಿನ ಕಾಕು ಮೌಶಿ ಮಾಮಿ ಅವರ ಚುರುಕು ಸಂಭಾಷಣೆ ಮತ್ತು ಅವರ ತೀಕ್ಷ್ಣ ಬುದ್ಧಿ ನನಗೆ ಮೊದಲಿಂದಾನೂ ಸಾಕಷ್ಟು ಆಸಕ್ತಿ ಮೂಡಿಸಿತ್ತು. ಜೊತೆಗೆ ಅವಕಾಶ ಸಿಕ್ಕಾಗ ನಮ್ಮ ಸುತ್ತ ನಡೆಯುವ ಹಲವಾರು ಚಿಕ್ಕ ಪುಟ್ಟ ಘಟನೆಗಳನ್ನು ಫೋಣಿಸುತ್ತ ನನಗೆ ಹೆಚ್ಚು ಪರಿಚಯ ಇರುವ ಉತ್ತರ ಕರ್ನಾಟಕದ ಭಾಷೆಯಲ್ಲಿ “ಬಾಜು ಮನಿ ಕಾಕು”ವಿನ ಜನ್ಮವಾಯ್ತು. ಕಾಕು ಕಾರಣಕ್ಕೆ ನಾನು ಈಗ ಸ್ವಲ್ಪವಾಗಿಯಾದ್ರು ಉತ್ತರ ಕರ್ನಾಟಕದ ವಿಶೇಷ ಪದಗಳು, ಪ್ರಯೋಗಗಳನ್ನು ಹೊಸದಾಗಿ ಕಲಿತಿದ್ದೇನೆ. ಅಲ್ಲಿನ ಜನರ ಭಾಷೆ/ಅಡುಗೆ/ಸಂಸ್ಕೃತಿಯ ವಿಶೇಷಗಳನ್ನು ನಮ್ಮ ಅಜ್ಜ, ಅಜ್ಜಿ, ಮತ್ತಿತರ ಹಿರಿಯರ ಮೂಲಕ ತಿಳಿದು ಮತ್ತೆ ರೂಢಿಗೆ ತರುವ ಒಂದು ಯೋಚನೆ ಕೂಡ ಇದೆ.

ಕನ್ನಡ ಕಟ್ಟುವ ಕೆಲಸದಲ್ಲಿ ಹಳೆಯ ತಲೆಮಾರಿನ ಚಿಂತನೆಗಳು ಇಂದು ಪ್ರಸ್ತುತತೆ ಉಳಿಸಿಕೊಂಡಿಲ್ಲ. ಸ್ಟೇಲ್ ಆಗಿವೆ. ಹೀಗಾಗಿ ನಿಮ್ಮ ಪ್ರಕಾರ ಹಸ ದಾರಿ ಏನು?

ನಾನು ಮೊದಲೇ ಹೇಳಿದ ಹಾಗೆ ಜನರ ಜೊತೆಯಲ್ಲಿ ಭಾಷೆಯೂ ಕೂಡ ಪರಿವರ್ತನೆಗೊಳ್ಳೋದು ಸಹಜ. ಆಗ ಆ ಭಾಷೆ ಬೆಳೆಯುತ್ತ ನಡೆಯುತ್ತೆ. ಜನರು ಬೆಳೆಯುತ್ತ ಭಾಷೆಯನ್ನೂ ತಮ್ಮ ಜೊತೆ ಬೆಳೆಸಲು ಅದನ್ನು ಅವರ ಮಾತು ಚಿಂತನೆಗಳಲ್ಲಿ ಸೇರಿಸುವುದೇ ಹೊಸ ದಾರಿ ಎಂಬುದು ನನ್ನ ಅಭಿಪ್ರಾಯ. ಹೀಗಾಗಿ ಕೆಲವು ಹಳೆಯ ತಲೆಮಾರಿನ ಚಿಂತನೆಗಳು ಈಗ ಅಪ್ರಸ್ತುತವಾಗಿ ಕಂಡರೂ, ಅವುಗಳ ಹಿಂದಿನ ಭಾವವನ್ನು ನಾವು ಈಗಿನ ಕಾಲಕ್ಕೆ ತಕ್ಕಂತೆ ಅನುವಾದಿಸಿ ಮುನ್ನಡೆಯಬೇಕಾಗಿದೆ. ಕನ್ನಡದ ಸಾಹಿತ್ಯ ವೈವಿಧ್ಯವನ್ನು ಈಗಿನ ಸಾಮಾಜಿಕ ದೃಷ್ಟಿಕೋನಕ್ಕೆ ಅನುವಾಗಿ ಬೆಳೆಸುವುದು ಹೊಸ ದಾರಿ ಎಂಬುದು ನನ್ನ ಭಾವನೆ.

ಆರ್‍ಜೆ ಆಗಿ ನೀವು ಕನ್ನಡಪರ ಹಲವಾರು ಕೆಲಸಗಳನ್ನು ಮಾಡಿದ್ದೀರಿ ಎಂದು ಕೇಳಿದ್ದೇನೆ. ಕನ್ನಡವನ್ನು ಇನ್ನಷ್ಟು ಆಸಕ್ತಿಕರವಾಗಿ ಬೆಳೆಸುವ ನಿಟ್ಟಿನಲ್ಲಿ ನೀವು ಬಳಸಿಕೊಂಡ ದಾರಿ ಹಾಗು ಅದರಲ್ಲಿ ಯಶಸ್ವಿಯಾದ ಬಗ್ಗೆ ತಿಳಿಸುತ್ತೀರಾ?

ಕನ್ನಡವನ್ನು ಈಗಿನ ಪೀಳಿಗೆಗೆ ಆಸಕ್ತಿಕರವಾಗಿ ಮಾಡುವ ನಿಟ್ಟಿನಲ್ಲಿ ನನ್ನ ಪ್ರಯತ್ನ ಬಹುತೇಕ ಕನ್ನಡದಲ್ಲಿ ಹಾಸ್ಯವನ್ನು ಪ್ರಸ್ತುತಗೊಳಿಸುವಲ್ಲಿ ತೊಡಗಿದೆ. ರೇಡಿಯೋ ಮಾಧ್ಯಮದಲ್ಲಿ ಕನ್ನಡವನ್ನು ಮನೆಮಾತಾಗಿಸುವುದಲ್ಲದೆ, ನಾನು ಕನ್ನಡ ಹಾಸ್ಯರಂಗದಲ್ಲಿ ಹಲವು ಪ್ರಯತ್ನಗಳನ್ನು ಕೈಗೊಂಡಿದ್ದೇನೆ. “ಬಾಜು ಮನಿ ಕಾಕು” ಅಲ್ಲದೆ ಮತ್ತಷ್ಟು ಹೊಸ ಹಾಸ್ಯ ಪಾತ್ರಗಳನ್ನು ಪರಿಚಯಿಸಿ ಹೊಸ ಹಾಸ್ಯ ವಿಡಿಯೋಗಳನ್ನು ನಿರ್ಮಿಸುವ ಪ್ರಯತ್ನ ಈಗ ನಡೆದಿದೆ. ಲೋಧನ್ ಲೈವ್ ನ ಸಹಕಾರದಿಂದ ನಿರೂಪ್ ಮೋಹನ್ ಹಾಗು ಸುಹಾಸ್ ನವರತ್ನ ಜೊತೆಯಲ್ಲಿ “ಗಾಂಧಿ ಕ್ಲಾಸ್” ಎಂಬ ಕನ್ನಡ ಸ್ಟ್ಯಾಂಡಪ್ ಹಾಸ್ಯದ ಗುಂಪಿನ ಭಾಗವಾಗಿ ರಾಜ್ಯದ ಹಲವೆಡೆ ನಾವು ಕನ್ನಡದಲ್ಲಿ ಸ್ಟ್ಯಾಂಡಪ್ ಕಾಮಿಡಿಯನ್ನು ಜನಪ್ರಿಯಗೊಳಿಸ್ತಾ ಇದ್ದೇವೆ. ಇವೆಲ್ಲ ಪ್ರಯತ್ನಗಳಿಗೆ ಜನರು ಸಕಾರಾತ್ಮಕವಾಗಿ ಸ್ಪಂದಿಸುತ್ತ ಇರೋದು ಹಾಗು ಕನ್ನಡದಲ್ಲಿ ಹಾಸ್ಯಕ್ಕೆ ಇಷ್ಟು ಆಸಕ್ತಿ ಇರೋದು ಬಹಳ ಸಂತೋಷದ ವಿಷಯ.

ಆರ್ ಜೆ ಆಗಬಯಸುವ ಹೊಸ ಪೀಳಿಗೆಯ ಯುವಕರಿಗೆ ಕನ್ನಡ ಕಟ್ಟುವ ನಿಟ್ಟಿನಲ್ಲಿ ನಿಮ್ಮ ಸಲಹೆಗಳೇನು?

ಆರ್ ಜೆ ಆಗುವ ಆಸಕ್ತಿಯಿದ್ದಲ್ಲಿ ಪ್ರಸ್ತುತ ನಡೆಯುವ ಹಲವಾರು ವಿಷಯದ ಬಗ್ಗೆ ಓದಿ ಕಲಿಯುತ್ತಿರಿ. ಆರ್ ಜೆ ಆಗಿ ನೀವು ಕನ್ನಡ ಕಲಿಯುವ ಹಾಗು ಕನ್ನಡ ಮಾತಾಡುವ ಕೇಳುಗರಿಗೆ ಮಾದರಿ ಆಗ್ತೀರಿ. ಹಾಗಾಗಿ ಕನ್ನಡದ ಪದಗಳ ಸ್ಪಷ್ಟ ಉಚ್ಚಾರಣೆ ಹಾಗು ಭಾಷೆ ಸಾಮಥ್ರ್ಯವನ್ನು ಬೆಳೆಸಿಕೊಳ್ಳಿ. ಕನ್ನಡದಲ್ಲಿನ ಹಳೆಯ ಹಾಗು ಸಮಕಾಲೀನ ಸಾಹಿತ್ಯದ ಪರಿಚಯ ಮಾಡಿಕೊಳ್ಳಿ.

ತಂತ್ರಜ್ಞಾನ ಬಳಕೆಯಿಂದ ಕನ್ನಡದ ಬೆಳವಣಿಗೆ ಆಗ್ತಾ ಇದೆಯಾ? ಸೋಶಿಯಲ್ ಮೀಡಿಯಾದಲ್ಲಿ ಕನ್ನಡ ಅಕ್ಷರಗಳು ಹರಿದಾಡ್ತಿವೆ. ಕನ್ನಡದ ಬಳಕೆಗೆ ಇನ್ನೂ ಹೆಚ್ಚಿನ ಬದಲಾವಣೆಗಳು ಬೇಕು ಅಂತ ಅನಿಸ್ತಿದೆಯಾ?

ಹತ್ತು ವರ್ಷದ ಹಿಂದಿನ ಸ್ಥಿತಿಗೂ ಈಗಿನ ಸ್ಥಿತಿಗೂ ಹೋಲಿಕೆ ಮಾಡಿ ನೋಡಿದರೆ ಕನ್ನಡ ಸುತ್ತಲಿನ ತಂತ್ರಜ್ಞಾನ ಸಾಕಷ್ಟು ಬೆಳೆದಿದೆ. ಕನ್ನಡದಲ್ಲಿ ಬರೆಯಲು, ಮಾತನಾಡಲು, ಮನೆಮನೆಗೆ ತಲುಪಿಸಲು ಹೊಸ ತಂತ್ರಜ್ಞಾನ ಪರಿಕರಗಳು ಲಭ್ಯವಿವೆ. ಇಂಟರ್ನೆಟ್ ನಲ್ಲಿ ನೀವೇ ಹೇಳಿದ ಹಾಗೆ ಹಲವಾರು ಕನ್ನಡ ಬ್ಲಾಗ್ ಗಳಿವೆ, ಕನ್ನಡ ಚಾನೆಲ್ ಗಳು ಈಗ ಲೈವ್ ಸ್ಟ್ರೀಮ್ ನಲ್ಲಿ ಲಭ್ಯವಾಗಿವೆ. ಸೋಶಿಯಲ್ ಮೀಡಿಯಾ ದಲ್ಲಿ ಕನ್ನಡ ಚಟುವಟಿಕೆ ಬೆಳೀತಾ ಇದೆ. ಇದೆಲ್ಲಕ್ಕೆ ಪೂರಕವಾಗಿ ಜನರಲ್ಲಿ ಈ ಎಲ್ಲ ಮಾಧ್ಯಮಗಳ ಬಗ್ಗೆ ಅರಿವು ಹೆಚ್ಚಾಗಿ ಅವರು ಆ ತಂತ್ರಜ್ಞಾನಗಳನ್ನು ಹೆಚ್ಚು ಬಳಸಿ ಕನ್ನಡ ಚಟುವಟಿಕೆಗಳನ್ನು ಪ್ರೊತ್ಸಾಹಿಸಬೇಕು. ಈ ಒಂದು ಬದಲಾವಣೆಯನ್ನು ನಾನು ಕಾಣಲು ಇಷ್ಟ ಪಡ್ತೀನಿ.

ನೀವು ಅನೇಕ ದೇಶಗಳನ್ನು ಕಂಡವರು. ಅಲ್ಲಿ ಕನ್ನಡಿಗರನ್ನು ಮಾತನಾಡಿಸಿದವರು. ಅವರಲ್ಲಿರುವ ಕನ್ನಡದ ಆಸಕ್ತಿ ಬಗ್ಗೆ ತಿಳಿಸುವಿರಾ?

ವಿದೇಶದಲ್ಲಿರುವಾಗ ಜನರ ಬಾಯಲ್ಲಿ ಕನ್ನಡ ಕೇಳುವುದು ಬಹಳ ಸಂತೋಷ ನೀಡುತ್ತದೆ! ವಿದೇಶದ ಕನ್ನಡಿಗರು ಕನ್ನಡದಲ್ಲಿ ಆಸಕ್ತಿಯನ್ನು ಕಾಪಾಡಿಕೊಂಡು ಬಂದಿದ್ದಾರೆ. ಶಾಲೆಗಳಲ್ಲಿ ಕನ್ನಡ ಕಲಿಯುವ ಅವಕಾಶ ಇಲ್ಲದಿದ್ದರೂ, ಮನೆಯಲ್ಲಿ ತಮ್ಮ ಮಕ್ಕಳಿಗೆ ಕನ್ನಡವನ್ನು ಕಲಿಸುತ್ತಿದ್ದಾರೆ. ಪ್ರತಿ ವರ್ಷ ರಾಜ್ಯೋತ್ಸವ, ದಸರಾ, ದಾಸರ ಆರಾಧನೆ ಮುಂತಾದ ಕಾರ್ಯಕ್ರಮಗಳಿಂದ ಕನ್ನಡವನ್ನು ತಮ್ಮ ತಮ್ಮ ಸುತ್ತಮುತ್ತಲಿನ ಜನರಿಗೆ ಪರಿಚಯಿಸುತ್ತಿದ್ದಾರೆ. ಕನ್ನಡ ಸಾಹಿತ್ಯದಲ್ಲಿ ಕೂಡ ಆಸಕ್ತಿ ಬೆಳಿತಾ ಇದೆ. ಭಾರತದಿಂದ ಹಲವಾರು ಕನ್ನಡ ಪುಸ್ತಕಗಳನ್ನು ನಾನು ಸ್ನೇಹಿತರಿಗೆ ಅವರ ಕೋರಿಕೆಯ ಮೇರೆಗೆ ತೆಗೆದುಕೊಂಡು ಹೋಗಿ ನೀಡಿದ್ದೇನೆ!

ಬೆಳೆಯುತ್ತಿರುವ ಐಟಿ ಯುಗದಲ್ಲಿ ಪರಭಾಷಿಗರಿಂದ ಕನ್ನಡದ ಬಳಕೆ ಕಡಿಮೆ ಆಗ್ತಾ ಇದೆ ಅನ್ನೋ ಮಾತು ಕೇಳಿ ಬರ್ತಿದೆಯಲ್ಲಾ?

ಐಟಿ ಯುಗದಲ್ಲಿ ಲಕ್ಷಾಂತರ ಪರಭಾಷಿಗರು ಕರ್ನಾಟಕಕ್ಕೆ ವಲಸೆ ಬಂದಿರುವುದು ಈ ಅಭಿಪ್ರಾಯಕ್ಕೆ ಕಾರಣ ಇರಬಹುದು. ಕರ್ನಾಟಕಕ್ಕೆ ವಲಸೆ ಬರುವ ಪರಭಾಷಿಗರಿಂದ ಹೊಸತರಲ್ಲಿ ಕನ್ನಡ ಬಳಕೆಯ ಅಪೇಕ್ಷೆ ಸಮಂಜಸವಲ್ಲ. ನಾನೇ ಕಂಡಂತೆ ಹಲವಾರು ಪರಭಾಷಿಗರು ನಿಧಾನವಾಗಿ ಕನ್ನಡ ಕಲಿತು ಅದನ್ನೇ ಮಾತಾಡುತ್ತಿದ್ದಾರೆ. ಕನ್ನಡಿಗರು ಸಂವೇದನೆಯಿಂದ ಪರಭಾಷಿಗರಿಗೆ ಕನ್ನಡವನ್ನು ಕಲಿಸುವ ಪ್ರಯತ್ನ ಮುಂದುವರೆದಂತೆ ಕನ್ನಡ ನಾಡಿನ ಎಲ್ಲರ ಬಳಕೆಯ ಭಾಷೆಯಾಗಿ ಬೆಳೆಯಲಿದೆ.

ಇಂಗ್ಲಿಷ್ ಕಲಿಕೆ-ಬಳಕೆ ಕನ್ನಡ ಪ್ರಗತಿಗೆ ಅಡ್ಡಲಾಗಿದೆಯೇ?

ಪ್ರತಿ ಭಾಷೆಗೂ ಅದರದೇ ಆದ ಮಹತ್ವ ಇದೆ. ಇಂಗ್ಲಿಷ್ ಬಳಕೆ ನಮ್ಮ ಶಾಲಾ-ಕಚೇರಿಗಳಲ್ಲಿ ಹೆಚ್ಚಾಗಿದ್ರೂ ಕೂಡ, ಅದು ಕನ್ನಡದ ಪ್ರಗತಿಗೆ ಅಡ್ಡವಾಗಬೇಕು ಅಂತ ಏನಿಲ್ಲ. ಅಲ್ಲದೆ, ಮುಂಚೆಗಿಂತಲೂ ಇತ್ತೀಚಿಗೆ ಕನ್ನಡ ಬಳಸಲು ನಾಡಿನ ಎಲ್ಲೆಡೆ ಅವಕಾಶಗಳು ಹೆಚ್ಚಾಗಿವೆ. ಕನ್ನಡದ ಪುಸ್ತಕಗಳು, ಸಿನಿಮಾ, ಸ್ಟ್ಯಾಂಡಪ್ ಹಾಸ್ಯ, ರೇಡಿಯೋ ಹಾಗು ಟಿವಿ ಮಾಧ್ಯಮಗಳು ಬೆಳೀತಾ ಇವೆ. ಕನ್ನಡ ಇಂಗ್ಲಿಷ್ ಎರಡೂ ಒಟ್ಟಿಗೆ ಒಂದಕ್ಕೆ ಇನ್ನೊಂದು ಅಡ್ಡವಾಗದೆ ಬೆಳೆಯುವ ಮಾರ್ಗಗಳನ್ನು ನಾವು ಅನುಸರಿಸಬೇಕು.

ಸಂದರ್ಶನ: ಹನುಮಂತರಾವ್ ಕೌಜಲಗಿ

Leave a Reply

Your email address will not be published.