ಬಾಪು ನೆನಪಿನಲ್ಲಿ

ನಾವು ನಿನ್ನ ನೋಡುವ ಹೊತ್ತಿಗಾಗಲೇ
ಅರೆಬೆತ್ತಲಾಗಿ ಕೋಲು ಹಿಡಿದು ನಡೆದಾಡುತ್ತಿದ್ದೆ
ಇಬ್ಬರು ಹುಡುಗಿಯರ ಭುಜ ಹಿಡಿದು ಬಂದು
ಕೂತು ಪ್ರಾರ್ಥನೆ ನಡೆಸುತ್ತಿದ್ದೆ ಪ್ರವಚನ ನೀಡುತ್ತಿದ್ದೆ

ನಾನು ಚಿಕ್ಕವನಿದ್ದಾಗ ಪಿಕೆಟಿಂಗ್‍ಗೆ ಹೋಗಿ
ಈಚಲಮರಕ್ಕೆ ಕಟ್ಟಿದ್ದ ಹೆಂಡದ ಗಡಿಗೆಗಳ ಒಡೆದು
ಸಂಜೆವರೆಗೂ ಪೋಲೀಸ್‍ಠಾಣೆಯಲ್ಲಿ ಕೂತು ಬಂದಿದ್ದೆ
ನೀನು ನಮ್ಮೂರಿಗೆ ಬಂದಾಗ ನೆಟ್ಟ ತೆಂಗಿನಮರಗಳ
ನೆರಳಲ್ಲಿ ನಡೆದಾಡಿ ಎಳನೀರು ಕುಡಿದಿದ್ದೇನೆ

ನೀನು ಕೂರುವ ಭಂಗಿಯಲ್ಲಿ ಕುಳಿತು ನಟಿಸಲು
ಬೆನ್ ಕಿಂಗ್‍ಸ್ಲೆ ಅದೆಷ್ಟುದಿನ ಅಭ್ಯಾಸ ಮಾಡಿದ್ದ
ಕುಡಿಯುವುದು ಬಿಟ್ಟಿದ್ದ ತಿನ್ನುವುದು ಬಿಟ್ಟಿದ್ದ ನಿನ್ನಂತೆ
ಸಾತ್ವಿಕ ಆಹಾರಿಯಾಗಿ ನೀನೇ ಆಗಿಬಿಟ್ಟಿದ್ದನಂತೆ

ಬೋಧಿ ಚಂದ್ರನ ದೊಂದಿ ಹಿಡಿದು
ನಡೆದೇ ನಡೆದೆ ನೀನೇನೋ ಹಿಡಿ ಉಪ್ಪಿಗಾಗಿ
ಅವನು ಟಾಟಾ ಕಂಪನಿಯ ಅಯೊಡೈಯ್‍ಡ್
ಉಪ್ಪು ತಿಂದು ಕೋಲಾ ಕುಡಿದು ತಾತನೇ ಆಗಿದ್ದ
ಅವನಂತೆ ಇನ್ನೂ ಎಷ್ಟೋಜನ ನಟಿಸಿದ್ದಾರೆ
ಭರತಮಾತೆಯ ಸುಪುತ್ರರು

*

ನಮಗೆ ಅದುಬೇಕು ಇದುಬೇಕು ಇನ್ನಷ್ಟು ಮತ್ತಷ್ಟು
ಬೇಕೇಬೇಕು ಪ್ರಕೃತಿ ಕೊಟ್ಟದ್ದಷ್ಟೇ ಸಾಕೇ? ಅಸಂಖ್ಯ
ನಮ್ಮೀ ಬಕಾಸುರ ಹೊಟ್ಟೆಗೆ ವಿಲಾಸಿನಿಯರಲಂಕಾರಕ್ಕೆ
ಆಭರಣ ಉಡಿಗೆ ತೊಡಿಗೆಗೆ ಸ್ವದೇಶಿಯಷ್ಟೇ ಸಾಕೆ?

ತಕಲಿಯಲ್ಲಿ ಹತ್ತಿ ಎಳೆ ಎಳೆ ನೂಲು
ಶಾಂತಿ ಅಹಿಂಸೆಯ ಚರಕಸಂಹಿತೆಸೂತ್ರ
ಸರಳ ಜೀವನ ಮಾನವ ಪರ್ಯಾವರಣ
ಸಸ್ಯ ಶಾಮಲೆ ಜೀವಸಂಕುಲ ಅನುಸಂಧಾನದಲ್ಲಿ
ಆತ್ಮ ಶುದ್ಧಿಯ ಧ್ಯಾನ ನಿರತ ಸತ್ಯ ಶೋಧಕ ಬಾಪು

ಜೀವನದಿ ಬತ್ತಿದರೇನು? ಬೆಳ್ಳಂದೂರು ಕೆರೆ ನೊರೆ ಹರಿಸಿ
ಭೋಗನಗರಿ ಯೋಗನಗರಿಗಳಲ್ಲಿ ಜಾರುತ್ತಾ ಹಾರುತ್ತಾ
ನಡೆದಂತೆ ನಟಿಸುತ್ತಾ ಹೊರಟಿದ್ದೇವೆ ಚಂದ್ರನಲ್ಲಿಗೆ
ಬಾವುಟವ ಹಾರಿಸಿ ಸ್ವದೇಶಿ ಡಿಸ್ಕವರರ್ ತೇರನೆಳೆಯಲು
ಪೈಪೋಟಿಯಲ್ಲಿ ಬಿಗ್‍ಬಾಸ್‍ಗಳಿಗೆ ಸಡ್ಡುಹೊಡೆದು
ಚರಕದಮುಂದೆ ಕುಳಿತು ಕಟ್ಟಸಿದ ಗುಹೆಯಲ್ಲಿ ಧ್ಯಾನ

ಭಂಗಿಯನ್ನು ವಾಹಿನಿಗಳಲ್ಲಿ ಬಿತ್ತರಿಸಿ
ನೆರಮನೆಯವರು ತತ್ತರಿಸುವಂತೆ
ಸ್ವದೇಶಿ ಕ್ಷಿಪಣಿ ಮಿಸೈಲ್‍ಗಳ ಹಾರಿಸುತ್ತಾ
ಗಳಹುತ್ತಿರುವ ಟ್ವಿಟರ್ ಹಕ್ಕಿಗಳು

Leave a Reply

Your email address will not be published.