ಬಾಬಾಗೌಡ ಎಂಬ ಹೋರಾಟಗಾರನ ದ್ವಂದ್ವಗಳು

ಬೆಳಗಾವಿ ಜಿಲ್ಲೆಯ ಚಿಕ್ಕಬಾಗೇವಾಡಿ ಹೆಸರಿಗೆ ತಕ್ಕಂತೆ ಚಿಕ್ಕ ಊರು. ಅಲ್ಲಿ ಹುಟ್ಟಿದ ವ್ಯಕ್ತಿಯೊಬ್ಬ ದೊಡ್ಡ ಹೋರಾಟಗಾರನಾಗಿ ಬೆಳೆದು ಒಮ್ಮೆ ವಿಧಾನಸಭೆಯನ್ನು ಮತ್ತು ಒಮ್ಮೆ ಲೋಕಸಭೆಯನ್ನು ಪ್ರವೇಶಿಸಿದ್ದು ಹಾಗೂ ಆ ಒಮ್ಮೆ ಲೋಕಸಭೆ ಪ್ರವೇಶಿಸಿದಾಗಲೇ ಕೇಂದ್ರದಲ್ಲಿ ಸ್ವತಂತ್ರ ಖಾತೆಯ ಸಚಿವರೂ ಆದುದು ಸಣ್ಣ ಹೆಮ್ಮೆಯಲ್ಲ. ಈ ಹೆಮ್ಮೆಗೆ ಭಾಜನರಾದವರು ಮೊನ್ನೆ ನಿಧನರಾದ ಬಾಬಾಗೌಡ ರುದ್ರಗೌಡ ಪಾಟೀಲ (77).

-ಪದ್ಮರಾಜ ದಂಡಾವತಿ

1980 ರ ಜುಲೈನಲ್ಲಿ ತಮ್ಮ ಬೇಡಿಕೆಗಳನ್ನು ಆಗ್ರಹಿಸಿ ಆಂದೋಲನ ಮಾಡುತ್ತಿದ್ದ ನರಗುಂದದ ರೈತರ ಮೇಲೆ ಗುಂಡೂರಾವ್ ಸರ್ಕಾರ ಗೋಲಿಬಾರ್ ಮಾಡಿತ್ತು. ಅದರಲ್ಲಿ 21 ಜನರು ಸತ್ತಿದ್ದರು. ಅದು ಕರ್ನಾಟಕದಲ್ಲಿ ರೈತ ಚಳವಳಿ ಅತ್ಯಂತ ಪ್ರಬಲವಾಗಿ ಹಬ್ಬಲು ಕಾರಣವಾಯಿತು. ಬೆಂಗಳೂರಿನ ಕಬ್ಬನ್ ಪಾರ್ಕಿನಲ್ಲಿ ಆಗ ನಡೆಯುತ್ತಿದ್ದ ಸಭೆಗಳಲ್ಲಿ ಲಕ್ಷಗಟ್ಟಲೆ ರೈತರು ಸೇರುತ್ತಿದ್ದರು. ಆ ಸಭೆಗಳಲ್ಲಿ ಮುಂಚೂಣಿ ಸಾಲಿನಲ್ಲಿ ನಿಂತು ಮಾತನಾಡುತಿದ್ದವರಲ್ಲಿ ಬಾಬಾಗೌಡರೂ ಒಬ್ಬರಾಗಿದ್ದರು. ಎಚ್.ಎಸ್.ರುದ್ರಪ್ಪ, ಎಂ.ಡಿ.ನಂಜುಂಡಸ್ವಾಮಿ, ಎನ್.ಡಿ.ಸುಂದರೇಶ್ ಇತರ ನೇತಾರರಾಗಿದ್ದರು. ಇವರೆಲ್ಲ ನೇರವಾಗಿ ವಿಧಾನಸೌಧಕ್ಕೆ ನುಗ್ಗಿ ಧರಣಿ ಮಾಡಬಲ್ಲಷ್ಟು, ಸಚಿವರ ಅಂಗಿ ಕಾಲರ್ ಹಿಡಿದು ಪ್ರಶ್ನೆ ಕೇಳಬಲ್ಲಷ್ಟು ಸಮರ್ಥರೂ, ನೈತಿಕರೂ ಆಗಿದ್ದರು.

ರೈತರ ಸಮಸ್ಯೆಗಳಿಗೆ ಆಡಳಿತ ಸೌಧದಲ್ಲಿ ಪರಿಹಾರ ಕಂಡುಕೊಳ್ಳಬೇಕು ಎಂಬ ಕನಸಿನ ಪರಿಣಾಮವಾಗಿ ಬಾಬಾಗೌಡರು ವಿಧಾನಸೌಧ ಪ್ರವೇಶಿಸಿದರು. 1989 ರಲ್ಲಿ ಅವರು ಕಿತ್ತೂರು ಮತ್ತು ಧಾರವಾಡ ಗ್ರಾಮೀಣ ಕ್ಷೇತ್ರಗಳಿಂದ ವಿಧಾನಸಭೆಗೆ ಆಯ್ಕೆಯಾದರು. ಧಾರವಾಡ ಗ್ರಾಮೀಣ ಕ್ಷೇತ್ರಕ್ಕೆ ರಾಜೀನಾಮೆ ಕೊಟ್ಟು ಅಲ್ಲಿಂದ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರನ್ನು ಗೆಲ್ಲಿಸಿಕೊಂಡು ಬಂದರು.

ರೈತರ ಸಮಸ್ಯೆಗಳ ಕುರಿತು ಇಬ್ಬರೂ ಖಡಾಖಂಡಿತವಾಗಿ ಮಾತನಾಡುತ್ತಿದ್ದುದು ಸದನವನ್ನು ಬೆರಗುಗೊಳಿಸುತ್ತಿತ್ತು. ಆಶ್ಚರ್ಯ ಎಂದರೆ 1994 ರ ವಿಧಾನಸಭೆ ಚುನಾವಣೆಯಲ್ಲಿ ಇಬ್ಬರನ್ನೂ ಅದೇ ಮತಕ್ಷೇತ್ರಗಳಲ್ಲಿ ಜನರು ತಿರಸ್ಕರಿಸಿದರು. ಶಾಸಕರಾದ ಕೂಡಲೇ ಬಾಬಾಗೌಡರು ಬಿಸ್ಲೇರಿ ನೀರು ಕುಡಿಯಲು ಆರಂಭಿಸಿದ್ದು ರೈತರಿಗೆ ಸರಿ ಕಂಡಿರಲಿಲ್ಲ. ಗೌಡರು ಅದಕ್ಕೆ ಕೊಟ್ಟ ಸಮರ್ಥನೆಯನ್ನೂ ಅವರು ಒಪ್ಪಿರಲಿಲ್ಲ. ಜನರ ನಾನಾ ಬಗೆಯ ಅಪೇಕ್ಷೆಗಳನ್ನು ಈಡೇರಿಸುವಂಥ ಶಾಸಕರೂ ಅವರು ಆಗಿರಲಿಲ್ಲವೇನೋ?

ಈ ನಡುವೆ ರೈತ ಸಂಘಟನೆಯಲ್ಲಿ ವಿಘಟನೆಯ ಪ್ರಕ್ರಿಯೆ ಆರಂಭವಾಗಿತ್ತು. ಅದಕ್ಕೆ ಎಂ.ಡಿ.ಎನ್ ಅವರು ಕೆಂಟುಕಿ ಚಿಕನ್ ವಿರುದ್ಧ ಹೋರಾಟ ಮಾಡಿದ್ದುದು ಕಾರಣವಾಯಿತು. ಬಾಬಾಗೌಡರಿಗೆ ಅದು ಇಷ್ಟ ಇರಲಿಲ್ಲ. ಎಂ.ಡಿ.ಎನ್ ಮತ್ತು ಬಾಬಾಗೌಡರ ದಾರಿಗಳು ಬೇರೆ ಬೇರೆಯಾದುವು.

ಅತ್ತ ಸಂಘಟನೆ ಶಿಥಿಲವಾದಾಗಲೂ ಬಾಬಾಗೌಡರು ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಕರ್ನಾಟಕ ರೈತ ಸಂಘದ ಅಭ್ಯರ್ಥಿಯಾಗಿ 1991 ರಲ್ಲಿ ಸ್ಪರ್ಧಿಸಿದ್ದರು. ನಂತರ ಅವರು ರೈತ ಸಂಘ ತೊರೆದು 1996 ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತರು. 1998 ರಲ್ಲಿ ಮತ್ತೆ ಬಿಜೆಪಿ ಅಭ್ಯರ್ಥಿಯಾಗಿಯೇ ಗೆದ್ದರು. ಗೆದ್ದ ಮೊದಲ ಸಾರಿಯೇ ಎ.ಬಿ.ವಾಜಪೇಯಿ ಸರ್ಕಾರದಲ್ಲಿ ಗ್ರಾಮೀಣ ಅಭಿವೃದ್ಧಿ ಸಚಿವರೂ ಆದರು. ಹೊಲಗಳಿಗೆ ರಸ್ತೆ ನಿರ್ಮಿಸುವ ಅಪರೂಪದ ಕಾರ್ಯಕ್ರಮ ರೂಪಿಸಿದರು. ತಮ್ಮ ಆಸ್ತಿಪಾಸ್ತಿಯ ದಾಖಲೆಗಳನ್ನು ಸಿವಿಲ್ ನ್ಯಾಯಾಲಯದಲ್ಲಿ ಘೋಷಣೆ ಮಾಡಿದರು. ಒಬ್ಬ ಜನಪ್ರತಿನಿಧಿಯಾದವರು ಹೀಗೆ ನ್ಯಾಯಾಲಯದಲ್ಲಿ ತಮ್ಮ ಆಸ್ತಿಪಾಸ್ತಿ ಘೋಷಣೆ ಮಾಡಿದ್ದು ಅದೇ ಮೊದಲು, ಅದೇ ಕೊನೆ. ಅವರ ಪಕ್ಷದವರಿಗೆ ಇದು ಅಷ್ಟು ಇಷ್ಟದ ಸಂಗತಿಯಾಗಿರಲಿಲ್ಲ.

1999ರಲ್ಲಿ ಬಾಬಾಗೌಡರು ಮತ್ತೆ ಲೋಕಸಭೆಗೆ ಸ್ಪರ್ಧಿಸಿ ಸೋತರು. ಈ ಸೋಲನ್ನು ಅವರು ನಿರೀಕ್ಷಿಸಿರಲಿಲ್ಲ. ಮುಂದೆ ಬಿಜೆಪಿಯಲ್ಲಿ ಅವರಿಗೆ ಸರಿ ಹೋಗಲಿಲ್ಲ. ಅವರನ್ನು ಕಂಡರೆ ಆಗದವರಲ್ಲಿ ಅನಂತಕುಮಾರ್ ಅವರೂ ಒಬ್ಬರಾಗಿದ್ದರು. ಬಾಬಾಗೌಡರು ಬಹಳ ಎತ್ತರ ಬೆಳೆಯಬಹುದಾದ ನಾಯಕ ಎಂದು ಅವರಿಗೆ ಅನಿಸತೊಡಗಿತ್ತು. ಹೋಗು ಎನ್ನದೆ ಹೊಗೆ ಹಾಕಿದರು. ಗೌಡರು ಹೊರಗೆ ಬಂದರು.

1999ರ ಚುನಾವಣೆಯಲ್ಲಿ ಆದ ಸೋಲು, ಬಿಜೆಪಿ ಬಿಡಬೇಕಾಗಿ ಬಂದ ಸಂದರ್ಭ ಇತ್ಯಾದಿ ಹತಾಶೆಗಳಲ್ಲಿಯೇ ಬಾಬಾಗೌಡರು ಪಕ್ಷಗಳನ್ನು ಬದಲಿಸುತ್ತ ಹೋದರು. ಪಕ್ಷಗಳನ್ನು ಬದಲಿಸಬಾರದು ಎಂಬುದು ಅವರಿಗೆ ಕೊನೆಯವರೆಗೂ ತಿಳಿಯಲೇ ಇಲ್ಲ. ಮೊದಲು ಜೆ.ಡಿ (ಎಸ್) ಸೇರಿದರು. ಅಲ್ಲಿ, ‘ಆತ್ಮಗೌರವಕ್ಕೆ ಬೆಲೆ ಇಲ್ಲ’ ಎಂದು ಹೊರಗೆ ಬಂದರು. ನಂತರ ಕಾಂಗ್ರೆಸ್ ಸೇರಿದರು. ಅದಕ್ಕಂತೂ ಯಾವ ತರ್ಕವೂ ಇರಲಿಲ್ಲ. ಏಕೆಂದರೆ ಆ ಪಕ್ಷದ ವಿರುದ್ಧವೇ ಅವರು ಹೋರಾಡಿದ್ದರು. ಈಚೆಗೆ ಹುಬ್ಬಳ್ಳಿ ಧಾರವಾಡ ಲೋಕಸಭೆಯ ಬಿಜೆಪಿ ಅಭ್ಯರ್ಥಿ ಪರ ಕೆಲಸ ಮಾಡಿದ್ದರು. ಮತ್ತೆ ಕಾಂಗ್ರೆಸ್ಸಿಗೆ ಮರಳಿದ್ದರು. ಈ ನಡುವೆ ಅಖಂಡ ಕರ್ನಾಟಕ ರೈತ ಸಂಘ ಎಂದು ಸಂಘಟನೆ ಕಟ್ಟಿ ಓಡಾಡುತ್ತಿದ್ದರು…

ಕೊಂಚ ಮುಂಗೋಪದ, ಇದ್ದುದನ್ನು ಇದ್ದಂತೆಯೇ ಮಾತನಾಡುತ್ತಿದ್ದ ಬಾಬಾಗೌಡರು ಸರಳ ವ್ಯಕ್ತಿಯಾಗಿದ್ದರು. ಅವರು ತಮ್ಮ ಒಳಗಿನ ದ್ವಂದ್ವದ ಕನ್ನಡಿಯಾಗಿದ್ದರೋ ಅಥವಾ ಒಟ್ಟು ರಾಜಕೀಯ ವ್ಯವಸ್ಥೆಯ ದ್ವಂದ್ವದ ಕನ್ನಡಿಯಾಗಿದ್ದರೋ? ಹೇಳುವುದು ಕಷ್ಟ.

Leave a Reply

Your email address will not be published.