ಬಾಬಾಸಾಹೇಬರ ಎಚ್ಚರದ ನುಡಿ ರಾಜಕೀಯದಲ್ಲಿ ವ್ಯಕ್ತಿಪೂಜೆ ಎಂಬುದು ಅವನತಿಯ ಹಾದಿ

ಭಾರತದ ವಿಷಯದಲ್ಲಿ ಈ ಎಚ್ಚರಿಕೆ ಹೆಚ್ಚು ಅಗತ್ಯ ಎಂದು ಅಂಬೇಡ್ಕರ್ ಒತ್ತಿ ಹೇಳಿದ್ದರು. ಭಾರತದ ರಾಜಕಾರಣದಲ್ಲಿ, ಭಕ್ತಿ, ಅಥವಾ ವ್ಯಕ್ತಿಪೂಜೆ ಎಂಬುದು ವಹಿಸುವ ಪಾತ್ರವನ್ನು ಗಮನಿಸಿದರೆ, ಜಗತ್ತಿನ ಇತರ ದೇಶದ ರಾಜಕಾರಣದಲ್ಲಿನ ಇಂತಹ ಬೆಳವಣಿಗೆಗಳ ಪ್ರಮಾಣ ನಮ್ಮ ದೇಶದ ಮುಂದೆ ಏನೂ ಅಲ್ಲ ಎನ್ನುವಷ್ಟು ಕಡಿಮೆ.

ಬಾಬಾಸಾಹೇಬ್ ಅಂಬೇಡ್ಕರ್ ಎಂದೇ ಹೆಸರಾದ ಭೀಮರಾವ್ ರಾಮ್‍ಜೀ ಅಂಬೇಡ್ಕರ್ ನಮ್ಮ ಸಂವಿಧಾನ ರಚನೆಯ ಪ್ರಮುಖ ಶಿಲ್ಪಿ. ಸ್ವತಂತ್ರ ಭಾರತದ ಸಂವಿಧಾನವನ್ನು ರೂಪಿಸುವುದು ಒಂದು ಅಸಾಧಾರಣ ಕಾರ್ಯ. ಈ ಉದ್ದೇಶಕ್ಕಾಗಿ ಡಿಸೆಂಬರ್ 6, 1946 ರಂದು ಮೊದಲ ಸಂವಿಧಾನ ಸಭೆ ನಡೆದು, ಆಗಸ್ಟ್ 29, 1947 ರಂದು ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾಗಿ ಅಂಬೇಡ್ಕರ್ ಆಯ್ಕೆಯಾದರು. ಮೂಲಭೂತ ಹಕ್ಕುಗಳನ್ನು ಸಂಘಟಿತವಾಗಿ ಸಂವಿಧಾನದಲ್ಲಿ ಅಳವಡಿಸುವುದರ ಜತೆಗೆ ಆ ಎಲ್ಲಾ ಹಕ್ಕು ಹಾಗೂ ಪರಿಹಾರಗಳನ್ನು ಸ್ಪಷ್ಟ, ಸುಲಭ ಹಾಗೂ ತ್ವರಿತವಾಗಿ ಜಾರಿಗೊಳಿಸುವಂತೆ ಅವರು ಒತ್ತಾಯಿಸಿದ್ದರು. ಅಂಬೇಡ್ಕರ್ ಮಾತಿನಲ್ಲೇ ಹೇಳುವುದಾದರೆ ಈ ಅಂಶವನ್ನೇ ಮುಖ್ಯವಾಗಿಸಿಕೊಂಡು ಪ್ರಸ್ತುತ ವಿಧಿ 32ಕ್ಕೆ ಅನುಗುಣವಾದ 25ನೇ ಕರಡನ್ನು ಸಂಯೋಜಿಸಲಾಗಿದೆ.

‘ಭಾರತದ ಸಂವಿಧಾನದಲ್ಲಿ ಅತ್ಯಂತ ಮುಖ್ಯ ಎನಿಸುವ ಯಾವುದಾದರೂ ಒಂದು ವಿಧಿಯನ್ನು ಹೆಸರಿಸಲು ನನಗೆ ಸೂಚಿಸಿದರೆ, ನಾನು ಇದೇ ವಿಧಿಯನ್ನು ಸೂಚಿಸುತ್ತೇನೆ. ಏಕೆಂದರೆ, ಇದು ಸಂವಿಧಾನದ ಆತ್ಮ ಮತ್ತು ಹೃದಯ. ಈ ವಿಧಿಯನ್ನು ಪ್ರತ್ಯೇಕಿಸಿ ನೋಡಿದರೆ ಇಡೀ ಸಂವಿಧಾನವೇ ಶೂನ್ಯವಾಗಿರುತ್ತದೆ. ಹೀಗಾಗಿ ಈ ವಿಧಿಯನ್ನು ಹೊರತುಪಡಿಸಿ ಮತ್ತೆ ಯಾವ ವಿಧಿಯನ್ನೂ ನಾನು ಉಲ್ಲೇಖಿಸಲು ಸಾಧ್ಯವಿಲ್ಲ’.

ಸಂವಿಧಾನವನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸುವ ವಿಚಾರದಲ್ಲಿ, ಅಸಮಾನತೆ, ತುಳಿತಕ್ಕೊಳಗಾದ ವರ್ಗ ಅಥವಾ ನಿಗ್ರಹಿಸಲಾದ ವರ್ಗ ಇರಬಾರದು. ಸಂವಿಧಾನದ ನೈತಿಕ ಮೌಲ್ಯಗಳನ್ನು ಅಂಗೀಕರಿಸದ ಹೊರತು, ನಮ್ಮ ಯಾವುದೇ ಭವ್ಯವಾದ ಮಾತುಗಳು ಜನಸಾಮಾನ್ಯರ ಸ್ವಾತಂತ್ರ್ಯ ಅಥವಾ ಪ್ರಜಾಪ್ರಭುತ್ವ ಮೌಲ್ಯಗಳನ್ನು ರಕ್ಷಿಸುವುದು ಅಸಾಧ್ಯವೆಂದು ಅಂಬೇಡ್ಕರ್ ಬಲವಾಗಿ ನಂಬಿದ್ದರು. ಸಂವಿಧಾನವನ್ನು ರೂಪುಗೊಳಿಸುವ ಕಾರ್ಯದಲ್ಲಿ ಸಾಂವಿಧಾನಿಕ ನೈತಿಕತೆಗೆ ಹೆಚ್ಚಿನ ಪ್ರಾಮುಖ್ಯವನ್ನು ಅಂಬೇಡ್ಕರ್ ನೀಡಿದ್ದಾರೆ.

ಮುಕ್ತ ಭಾಷಣದ ಅಭ್ಯಾಸದೊಂದಿಗೆ, ಕ್ರಿಯೆಯ ವಿಷಯದ ನಿರ್ದಿಷ್ಟ ಕಾನೂನು ನಿಯಂತ್ರಣ ಸೇರಿದಂತೆ ಎಲ್ಲಾ ಬಗೆಯ ಸಾರ್ವಜನಿಕ ಕಾರ್ಯಗಳಿಗೆ ಸಂಬಂಧಿಸಿದಂತೆ ಆ ಅಧಿಕಾರಿಗಳ ಅನಿಯಂತ್ರಿತ ಕ್ರಮವನ್ನು ಖಂಡಿಸಲಾಗಿತ್ತು.

ಈ ನಡೆಯ ಸ್ಥೂಲ ಅರ್ಥ ಏನೆಂದರೆ ‘ಸಂವಿಧಾನದ ಸ್ವರೂಪಕ್ಕೆ ಶ್ರೇಷ್ಠ ಸ್ಥಾನವನ್ನು ನೀಡುವಂತೆ, ಈ ಸ್ವರೂಪಗಳ ಅಡಿಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಗಳಿಗೆ ವಿಧೇಯತೆಯನ್ನು ಜಾರಿಗೊಳಿಸುವುದು’ ಎನ್ನುವುದೇ ಆಗಿತ್ತು. ಆದರೆ ಮುಕ್ತ ಭಾಷಣದ ಅಭ್ಯಾಸದೊಂದಿಗೆ, ಕ್ರಿಯೆಯ ವಿಷಯದ ನಿರ್ದಿಷ್ಟ ಕಾನೂನು ನಿಯಂತ್ರಣ ಸೇರಿದಂತೆ ಎಲ್ಲಾ ಬಗೆಯ ಸಾರ್ವಜನಿಕ ಕಾರ್ಯಗಳಿಗೆ ಸಂಬಂಧಿಸಿದಂತೆ ಆ ಅಧಿಕಾರಿಗಳ ಅನಿಯಂತ್ರಿತ ಕ್ರಮವನ್ನು ಖಂಡಿಸಲಾಗಿತ್ತು. ಅಂಬೇಡ್ಕರ್ ದೃಷ್ಟಿಯಲ್ಲಿ ಸಾಂವಿಧಾನಿಕ ನೈತಿಕತೆ ಎನ್ನುವುದು ‘ಸ್ವಾಭಾವಿಕ ಭಾವನೆಯಾಗಿರದೇ, ಅದು ಬೆಳೆಯುವ ಗುಣವನ್ನು ಹೊಂದಿರಬೇಕಿತ್ತು. ಈ ಅಂಶದಿಂದ ದೂರವೇ ಉಳಿದಿರುವ ನಮ್ಮ ಜನರು ಇದನ್ನು ಇನ್ನೂ ಕಲಿಯಬೇಕಿದೆ ಎಂಬ ಅರಿವು ನಮಗಿರಬೇಕು’.

ಸಂವಿಧಾನ ಸಭೆಯ ಮುಕ್ತಾಯದ ನವೆಂಬರ್ 26, 1949ರಂದು ಭಾರತದ ಪ್ರಜಾಪ್ರಭುತ್ವ ಸಾಧಿಸಿದ ಯಶಸ್ವಿ ಕಾರ್ಯವೈಖರಿಯ ಬಗ್ಗೆ ಅಂಬೇಡ್ಕರ್ ತಮ್ಮ ಆತಂಕಗಳನ್ನು ಹೀಗೆ ವ್ಯಕ್ತಪಡಿಸಿದ್ದರು: ‘ಸದ್ಯ ಒಂದು ಅಲೋಚನೆ ನನ್ನ ಮನಸ್ಸಿಗೆ ಬರುತ್ತಿದೆ. ಭಾರತೀಯ ಪ್ರಜಾಪ್ರಭುತ್ವ ಸಂವಿಧಾನ ಏನಾಗಬಹುದು? ಭಾರತೀಯತೆ ಈ ಸಂವಿಧಾನವನ್ನು ನಿರ್ವಹಿಸಲು ಸಾಧ್ಯವಾಗಬಹುದಾ ಅಥವಾ ಇದನ್ನು ಕಳೆದುಕೊಳ್ಳಬಹುದಾ? ಯಾವಾಗ ಆರ್ಥಿಕ ಮತ್ತು ಸಾಮಾಜಿಕ ಉದ್ದೇಶಗಳನ್ನು ಸಾಂವಿಧಾನಿಕವಾಗಿ ಪೂರೈಸಿಕೊಳ್ಳಲು ಮಾರ್ಗಗಳು ಕಾಣುವುದಿಲ್ಲವೋ ಆಗೆಲ್ಲಾ, ಅಸಾಂವಿಧಾನಿಕ ವಿಧಾನಗಳಿಗೆ ಹೆಚ್ಚಿನ ಸಮರ್ಥನೆ ದೊರೆಯುತ್ತದೆ. ಆದರೆ ಸಾಂವಿಧಾನಿಕ ವಿಧಾನಗಳು ಮುಕ್ತವಾಗಿರುವಲ್ಲಿ, ಈ ಬಗೆಯ ಅಸಾಂವಿಧಾನಿಕ ನಡೆಗಳಿಗೆ ಯಾವುದೇ ಸಮರ್ಥನೆ ಸಾಧ್ಯವಿಲ್ಲ. ಈ ವಿಧಾನಗಳು ಅರಾಜಕತೆಯ ವ್ಯಾಕರಣದಿಂದ ಕೂಡಿದ್ದು, ಈ ಎಲ್ಲವನ್ನೂ ತುರ್ತಾಗಿ ಕೈಬಿಡುವುದು ನಮ್ಮ ಹಿತದೃಷ್ಟಿಯಿಂದ ಉತ್ತಮ’. ವಿಪಯರ್ಯಾಸವೆಂದರೆ, ಈ ಅರಾಜಕತೆಯ ವ್ಯಾಕರಣ ಇಂದಿಗೂ ಚಾಲ್ತಿಯಲ್ಲಿದ್ದು ಇದನ್ನು ಕೈಬಿಡಲಾಗುವುದು ಎಂಬ ಅಂಬೇಡ್ಕರ್ ಅವರ ಆಶಯ ಮಾತ್ರ ಫಲಪ್ರದವಾಗಲೇ ಇಲ್ಲ.

ಇಲ್ಲಿರುವ ಅಪಾಯವೆಂದರೆ, ಈ ಪ್ರಕ್ರಿಯೆಯಲ್ಲಿ ಅಂತಹ ವ್ಯಕ್ತಿಗಳನ್ನು ಯಾವುದೇ ವಿಮರ್ಶೆಯ ಮೂಲಕ ಶೋಧಿಸದೇ, ಹೊಣೆಗಾರಿಕೆ ಏನು ಎಂಬುದನ್ನು ಅರ್ಥೈಸಿಕೊಡದೆ ಅಪಾರವಾದ ಅಧಿಕಾರವನ್ನು ವಹಿಸಿಕೊಡುವುದು.

ನಾಯಕನ ಆರಾಧನೆ ಭಾರತದಲ್ಲಿ ಸಾಮಾನ್ಯವಾಗಿದ್ದು, ವ್ಯಕ್ತಿತ್ವ ಆರಾಧನೆಯಿಂದ ಗಟ್ಟಿಗೊಳ್ಳುತ್ತದೆ. ನಮ್ಮ ನಾಯಕರನ್ನು ವೀರರಂತೆ ಮೆಚ್ಚಿ ಆರಾಧಿಸುವುದರಲ್ಲಿ ಯಾವುದೇ ಲೋಪವಿಲ್ಲ. ಆದರೆ ಇಲ್ಲಿರುವ ಅಪಾಯವೆಂದರೆ, ಈ ಪ್ರಕ್ರಿಯೆಯಲ್ಲಿ ಅಂತಹ ವ್ಯಕ್ತಿಗಳನ್ನು ಯಾವುದೇ ವಿಮರ್ಶೆಯ ಮೂಲಕ ಶೋಧಿಸದೇ, ಹೊಣೆಗಾರಿಕೆ ಏನು ಎಂಬುದನ್ನು ಅರ್ಥೈಸಿಕೊಡದೆ ಅಪಾರವಾದ ಅಧಿಕಾರವನ್ನು ವಹಿಸಿಕೊಡುವುದು.

ಈ ಸುಪ್ತ ಅಪಾಯಗಳ ಬಗ್ಗೆ ಅಂಬೇಡ್ಕರ್ ಜಾಗೃತರಾಗಿದ್ದರು. ಪ್ರಜಾಪ್ರಭುತ್ವದ ನಿರ್ವಹಣೆಯಲ್ಲಿ ಆಸಕ್ತಿಯನ್ನು ಹೊಂದಿರುವ ಪ್ರತಿಯೊಬ್ಬರಿಗೂ ಜಾನ್ ಸ್ಟುವರ್ಟ್ ಮಿಲ್ ಹೇಳಿರುವ ಮಾತುಗಳ ಪ್ರಾಮುಖ್ಯವನ್ನು ಅಂಬೇಡ್ಕರ್ ಒತ್ತಿಹೇಳಿದ್ದಾರೆ. ‘ನಮ್ಮ ಸ್ವಾತಂತ್ರ್ಯವನ್ನು ಒಬ್ಬ ಮಹಾನ್ ವ್ಯಕ್ತಿಯ ಪಾದಗಳ ಅಡಿಯಲ್ಲಿಡುವುದು ಅಥವಾ ಅವರ ಪ್ರತಿಷ್ಠಾಪನೆಯನ್ನು ಬುಡಮೇಲು ಮಾಡುವ ಅವನ ಸಕ್ರಿಯ ಅಧಿಕಾರಗಳನ್ನು ನಂಬುವುದು’. ಇಲ್ಲಿ ತಮ್ಮ ಇಡೀ ಜೀವಮಾನವನ್ನೇ ದೇಶಕ್ಕಾಗಿ ಸವೆಸಿದ ಮಹಾನ್ ನಾಯಕ ಅಥವಾ ಪುರಷರಿಗೆ ಕೃತಜ್ಞರಾಗಿರುವುದರಲ್ಲಿ ಯಾವುದೇ ದೋಷವಿಲ್ಲ. ಆದರೆ ಕೃತಜ್ಞತೆಗಳಿಗೂ ಒಂದು ಮಿತಿ ಎಂಬ ಅರಿವು ಬೇಕು.

ಭಾರತದ ವಿಷಯದಲ್ಲಿ ಈ ಎಚ್ಚರಿಕೆ ಬಹುಮುಖ್ಯವಾದದ್ದು ಎಂದು ಅಂಬೇಡ್ಕರ್ ಹೇಳಿದ್ದರು. ಭಾರತದಲ್ಲಿ ವ್ಯಕ್ತಿಪೂಜೆ, ನಾಯಕನ ಆರಾಧನೆ ಮತ್ತು ಭಕ್ತಿ ಎನ್ನುವುದು ರಾಜಕೀಯದಲ್ಲಿ ಬಹುಮುಖ್ಯ ಪಾತ್ರವನ್ನು ನಿರ್ವಹಿಸುತ್ತದೆ. ಇದು ಉಳಿದ ರಾಷ್ಟ್ರಗಳ ರಾಜಕಾರಣಕ್ಕಿಂತ ಬಹುದೊಡ್ಡ ಪ್ರಮಾಣದಲ್ಲಿ ಇಲ್ಲಿ ನಡೆಯುತ್ತದೆ. ಭಕ್ತಿ ಎನ್ನುವುದು, ಧರ್ಮದಲ್ಲಿ ಮೋಕ್ಷಕ್ಕೆ ಮಾರ್ಗವಾಗಿರಬಹುದು. ಆದರೆ ರಾಜಕೀಯದಲ್ಲಿ, ಭಕ್ತಿ ಅಥವಾ ನಾಯಕನ ಆರಾಧನೆ ಎನ್ನುವುದು ಮಾತ್ರ ಖಚಿತವಾಗಿ ಅವನತಿ ಮತ್ತು ಸರ್ವಾಧಿಕಾರಕ್ಕೆ ಹಾದಿಯಾಗಿರುತ್ತದೆ.

ವಿರೋಧಾಭಾಸಗಳನ್ನು ಸಾಧ್ಯವಾದಷ್ಟು ತ್ವರಿತವಾಗಿ ನಿಷ್ಕ್ರಿಯಗೊಳಿಸದಿದ್ದರೆ, ಈಗಾಗಲೇ ಅಸಮಾನತೆಯಿಂದ ಬಳಲುತ್ತಿರುವವರು ದೀರ್ಘಕಾಲದ ಶ್ರಮದಿಂದ ನಿರ್ಮಿಸಿರುವ ಈ ವಿಧಾನಸಭೆಯು ರಾಜಕೀಯ ಪ್ರಜಾಪ್ರಭುತ್ವದ ರಚನೆಯನ್ನೇ ಸ್ಫೋಟಿಸುತ್ತದೆ’.

ಸಂವಿಧಾನ ಸಭೆಯ ಕಡೆಯ ದಿನ, ಅಂದರೆ ಜನವರಿ 26, 1950 ರಂದು, ‘ವಿರೋಧಾಭಾಸಗಳ ಜೀವನ’ದ ಅಪಾಯಗಳ ಕುರಿತ ತಮ್ಮ ಮಾತುಗಳಲ್ಲಿ ಅಂಬೇಡ್ಕರ್ ಗಮನಸೆಳೆದರು. ‘ರಾಜಕೀಯವಾಗಿ ನಮಗೆ ಸಮಾನತೆ ದೊರೆತರೂ ಸಾಮಾಜಿಕ ಮತ್ತು ಆರ್ಥಿಕವಾಗಿ ಮಾತ್ರ ಅಸಮಾನತೆ ಎನ್ನುವುದು ಇದ್ದೇ ಇರುತ್ತದೆ. ಇಂದಿನಿಂದ ಇಂತಹ ವಿರೋಧಾಬಾಸದ ಜೀವನಕ್ಕೆ ನಾವುಗಳು ಪ್ರವೇಶಸಲಿದ್ದೇವೆ. ಆದರೆ ರಾಜಕೀಯವಾಗಿ ನಾವು ಏಕವ್ಯಕ್ತಿ, ಒಂದುಮತ ಮತ್ತು ಒಂದು-ಮೌಲ್ಯದ ತತ್ವವನ್ನು ಗುರುತಿಸಲಿದ್ದೇವೆ’ ಎಂದಿದ್ದರು. ‘ನಮ್ಮ ಸಾಮಾಜಿಕ ಮತ್ತು ಆರ್ಥಿಕ ರಚನೆಯ ಕಾರಣದಿಂದಾಗಿ, ನಮ್ಮ ಜೀವನದಲ್ಲಿ ಏಕ ವ್ಯಕ್ತಿ- ಏಕ ಮೌಲ್ಯದ ತತ್ವವನ್ನು ನಿರಾಕರಿಸುವುದನ್ನು ಮುಂದುವರಿಸುತ್ತೇವೆ. ನಮ್ಮ ಸಾಮಾಜಿಕ ಮತ್ತು ಆರ್ಥಿಕ ಜೀವನದಲ್ಲಿ ಸಮಾನತೆಯನ್ನು ನಿರಾಕರಿಸುವುದನ್ನು ನಾವು ಇನ್ನೆಷ್ಟು ದಿನ ಮುಂದುವರೆಸಬೇಕು? ನಾವು ಇದನ್ನು ದೀರ್ಘಕಾಲದವರೆಗೆ ನಿರಾಕರಿಸುತ್ತಿದ್ದರೆ, ಹಾಗೆ ಮಾಡುವ ಮೂಲಕ ನಮ್ಮ ರಾಜಕೀಯ ಪ್ರಜಾಪ್ರಭುತ್ವವನ್ನು ಅಪಾಯಕ್ಕೆ ಸಿಲುಕಿಸುತ್ತೇವೆ. ಇಂತಹ ವಿರೋಧಾಭಾಸಗಳನ್ನು ಸಾಧ್ಯವಾದಷ್ಟು ತ್ವರಿತವಾಗಿ ನಿಷ್ಕ್ರಿಯಗೊಳಿಸದಿದ್ದರೆ, ಈಗಾಗಲೇ ಅಸಮಾನತೆಯಿಂದ ಬಳಲುತ್ತಿರುವವರು ದೀರ್ಘಕಾಲದ ಶ್ರಮದಿಂದ ನಿರ್ಮಿಸಿರುವ ಈ ವಿಧಾನಸಭೆಯು ರಾಜಕೀಯ ಪ್ರಜಾಪ್ರಭುತ್ವದ ರಚನೆಯನ್ನೇ ಸ್ಫೋಟಿಸುತ್ತದೆ’.

ಅತ್ಯಂತ ನೋವಿನಿಂದ ಅಂಬೇಡ್ಕರ್ ಕೇಳಿದ ಪ್ರಶ್ನೆಗಳು ನಮ್ಮನ್ನು ಕಾಡುತ್ತಲೇ ಇರುತ್ತವೆ. ಸಮಾನತೆ, ತಾರತಮ್ಯದ ಬಹಿಷ್ಕಾರಗಳು, ಅಸ್ಪೃಶ್ಯತೆಯ ನಿರ್ಮೂಲನೆ ಮತ್ತು ಅದಕ್ಕೆ ಅಂಟಿಕೊಂಡಿರುವ ಅಮಾನವೀಯ ಆಚರಣೆಗಳು ಅಂಬೇಡ್ಕರ್ ಅವರ ಮನಸ್ಸಿನ ಮುನ್ನೆಲೆಯಲ್ಲಿದ್ದವು. ಹೀಗಾಗದಿರಲು ಹೇಗೆ ಸಾಧ್ಯ? ಅಸ್ಪೃಶ್ಯತೆಯ ಅರಿವನ್ನು ಹೊಂದಿದ್ದಂತೆ ಅದರಿಂದ ಸಾಕಷ್ಟು ನೋವು ಹಾಗೂ ಮುಜುಗರವನ್ನು ಓರ್ವ ಅಸ್ಪೃಶ್ಯನಾಗಿ ಅನುಭವಿಸಿದ್ದರು. ಹೀಗಾಗಿ ‘ಅಸ್ಪೃಶ್ಯತೆ’ಯ ಕಾರಣದಿಂದಾಗಿ ಬಹಿಷ್ಕಾರಕ್ಕೊಳಗಾದವರ ನೋವುಗಳ ಬಗ್ಗೆಯೂ ಅಂಬೇಡ್ಕರ್ ನೊಂದಿದ್ದರು.

ಸಾಮಾಜಿಕ ನ್ಯಾಯ ಎನ್ನುವ ನಮ್ಮ ಸಂವಿಧಾನದ ಮುಖ್ಯ ಆಶಯ ಇಂದಿಗೂ ದೂರವೇ ಉಳಿದಿದೆ. ರಾಜಕೀಯ ಮುಖಂಡರು, ಬುದ್ಧಿಜೀವಿಗಳು ಎಂದು ಗುರುತಿಸಿಕೊಳ್ಳಲು ಹವಣಿಸುವವರು, ಪ್ರಖ್ಯಾತ ಪತ್ರಕರ್ತರು ಸಾಂವಿಧಾನಿಕ ನೈತಿಕತೆಯನ್ನು ಗಮನಿಸುವುದೇ ಇಲ್ಲ. ಆದರೂ, ಸಾಮಾಜಿಕ ನ್ಯಾಯಕ್ಕಾಗಿ ನಡೆಯುತ್ತಿರುವ ಹೋರಾಟ ಮಾತ್ರ ದೃಢನಿಶ್ಚಯವಾಗಿ ಮುಂದುವರೆಯಬೇಕು. ಅದನ್ನು ಸಾಧಿಸುವುದೇ ಭಾರತದ ಶ್ರೇಷ್ಠ ಪುತ್ರರಲ್ಲಿ ಒಬ್ಬರಾದ ಬಾಬಾಸಾಹೇಬ್ ಭೀಮರಾವ್ ಅಂಬೇಡ್ಕರ್ ಅವರಿಗೆ ನಾವು ಸಲ್ಲಿಸಬಹುದಾದ ಅತ್ಯುತ್ತಮ ಗೌರವವಾಗಿರುತ್ತದೆ.

*ಲೇಖಕರು ಭಾರತದ ಮಾಜಿ ಅಟಾರ್ನಿ ಜನರಲ್.
ಸೌಜನ್ಯ: ಇಂಡಿಯನ್ ಎಕ್ಸ್‍ಪ್ರೆಸ್ ಅನುವಾದ: ಸಂದೀಪ ಈಶಾನ್ಯ

Leave a Reply

Your email address will not be published.