ಬಾಬಾ ಸಾಹೇಬರ ಬೆಳಕಿನಲ್ಲಿ ಚಳವಳಿ ಸಾಗಲಿ

ಸಾಮಾಜಿಕ-ರಾಜಕೀಯ ವಸ್ತುಸ್ಥಿತಿ ಬದಲಾದಂತೆ ಅದರ ರಾಜಕೀಯ ಅರಿವಿನಲ್ಲಿ ಚಳವಳಿಯೂ ಬದಲಾಗುತ್ತಾ, ಬೆಳೆಯುತ್ತಾ ಹೋಗಬೇಕಿತ್ತು. ಇದು ಆಗಲಿಲ್ಲ; ಈ ಮಾತು ಎಲ್ಲಾ ಚಳವಳಿಗಳಿಗೂ ಅನ್ವಯಿಸುತ್ತದೆ. 

ಕರ್ನಾಟಕದಲ್ಲಿ ದಲಿತ ಚಳುವಳಿ ದಿಕ್ಕು ತಪ್ಪಿದ್ದೆಲ್ಲಿ? ಎಂಬ ಶೀರ್ಷಿಕೆ ಮೂಲಕ ಮೊದಲೇ ಒಂದು ತೀರ್ಮಾನವನ್ನು ಕೊಡಲಾಗಿದ್ದು, ಅದು ದುರ್ಬಲವಾಗಿದೆ. ಶೀರ್ಷಿಕೆಯಲ್ಲೆ ಪೂರ್ವತೀರ್ಮಾನವಿರುವುದರಿಂದ ಅದಕ್ಕೆ ವಿವರಗಳನ್ನು ಕೊಟ್ಟು, ಸಮರ್ಥಿಸುವುದು ಉಳಿದಿರುವ ಕೆಲಸ. ಇದೇ ಶೀರ್ಷಿಕೆಯನ್ನು ದಿಕ್ಕು ತಪ್ಪಿದ್ದು ಹೇಗೆ? ದಿಕ್ಕು ತಪ್ಪಿದ್ದು ಯಾಕೆ? ದಿಕ್ಕು ತಪ್ಪಿಸಿದ್ದು ಯಾರು? ಅಂತಲೂ ರೂಪಿಸಬಹುದು. ವಾಸ್ತವವಾಗಿ ಈ ಚೌಕಟ್ಟು ಪ್ರಜಾಪ್ರಭುತ್ವವಾದಿ ಆಲೋಚನೆಗೆ ವಿರುದ್ಧವಾದುದು. ಯಾರೋ ಮಾಡಿರುವ ತೀರ್ಮಾನಕ್ಕೆ ಪುರಾವೆ ಒದಗಿಸುವ ವಿಧಾನವು ಆಳು-ಒಡೆಯ ಶೋಷಣೆಯ ಸಂಬಂಧದ ಮತ್ತೊಂದು ರೂಪವಷ್ಟೆ. ಇದು ಅಕಾಡೆಮಿಕ್ ಚಿಂತನೆಯನ್ನು ಸೃಜನಶೀಲಗೊಳಿಸುವುದಿಲ್ಲ; ಬೆಳೆಸುವುದಿಲ್ಲ. ಅಲ್ಲದೆ ವಿಷಯದ ಸಂಕೀರ್ಣತೆ, ಆಳ, ಮಹತ್ವ ಮತ್ತು ಅದನ್ನು ವಿವಿಧ ಕೋನಗಳಿಂದ ಪರಿಶೀಲಿಸಬೇಕಾದ ಅಕಾಡೆಮಿಕ್ ಅಗತ್ಯದ ದೃಷ್ಟಿಯಿಂದ ಈ ಲೇಖನಕ್ಕೆ ಸಮಾಜಮುಖಿ ಸೂಚಿಸಿದ ಪದಗಳ ವ್ಯಾಪ್ತಿ ಕೂಡ ಕಡಿಮೆಯಾಯಿತು.

ದಲಿತರನ್ನು, ಮಹಿಳೆಯರನ್ನು ನೋಡಲು-ಮೌಲ್ಯಮಾಪನ ಮಾಡಲು ಸಿದ್ಧಮಾದರಿಯ ಮಾನದಂಡಗಳು ಬಳಕೆಯಾಗುತ್ತಿವೆ. ಇವರನ್ನು ಅನುಮಾನ, ಅಪಮಾನ, ದ್ವೇಷ, ದೂಷಣೆ, ನಿರಾಕರಣೆ ಮತ್ತು ತಿರಸ್ಕಾರದ ದೃಷ್ಟಿಯಲ್ಲೇ ನೋಡಲಾಗುತ್ತ್ತಿದೆ. ಇವರನ್ನು ಕುರಿತ ಮಾತುಕತೆ ಹಾಗೂ ಬರವಣಿಗೆ ಉಗ್ರಟೀಕೆ ಹಾಗೂ ಘನ ಉಪದೇಶದ ಮಾದರಿಯಲ್ಲಿದೆ. ಈ ಆಲೋಚನಾ ಧೋರಣೆ ಹಾಗೂ ಸ್ವಭಾವವನ್ನು ಬಾಬಾಸಾಹೇಬರು ಭಾರತದ ಮೇಲ್ಜಾತಿ ಹಿಂದೂಗಳ ಸಾಮಾಜಿಕ ಮನಶಾಸ್ತ್ರ ಎಂದು ಕರೆದಿದ್ದಾರೆ. ಮುಂದುವರಿದು ಎಲ್ಲಾ ಕೆಳಜಾತಿಗಳನ್ನು ಅಪಮಾನಿಸಲು, ಹಿಂಸಿಸಲು ಮತ್ತು ಇದಕ್ಕೆ ವಿರುದ್ಧವಾಗಿ ಇದೇ ಕೆಳಜಾತಿಗಳಿಂದಲೇ ಗೌರವ ಪಡೆಯಲು ಮೇಲ್ಜಾತಿಗಳಲ್ಲಿ ಸ್ಪರ್ಧೆ ನಡೆಯುತ್ತಿದೆ ಎಂದಿದ್ದಾರೆ. ಈ ಮನಶಾಸ್ತ್ರವೆ ಕರ್ನಾಟಕದ ದಲಿತ ಚಳವಳಿಯನ್ನು ಕುರಿತ ಆಲೋಚನೆಗಳನ್ನು ಪ್ರಭಾವಿಸುತ್ತದೆ ಮತ್ತು ನಿಯಂತ್ರಿಸುತ್ತದೆ.

ಆರೋಪಗಳೇ ಮೌಲ್ಯಮಾಪನಗಳಾಗಿ, ಅಭಿಪ್ರಾಯಗಳೇ  ಆಲೋಚನೆಗಳಾಗಿ, ಚಳವಳಿಯನ್ನು ಕುರಿತ ಚರ್ಚೆಗಳನ್ನು ಆಳುತ್ತಿವೆ. ಈ ಆಳ್ವಿಕೆ ಕಂಠಪಾಠವಾಗಿ ಸರ್ವಂತರ್ಯಾಮಿಯಾಗಿ ಹರಿದಾಡುತ್ತಿದೆ.

ದಲಿತ ಚಳವಳಿ ದಿಕ್ಕು ತಪ್ಪಿದೆ ಎಂದು ತೀರ್ಮಾನಿಸಲು ಸೈದ್ಧಾಂತಿಕವಾದ-ಆಚರಣಾತ್ಮಕವಾದ ಯಾವ ಕಾರಣಗಳಿವೆ? ಅದನ್ನು ತೀರ್ಮಾನಿಸಬೇಕಾದರೆ, ಅದರ ದಿಕ್ಕು ಯಾವುದಾಗಿತ್ತು ಎಂಬುದರ ಸ್ಪಷ್ಟತೆ ಇರಬೇಕು. ನಮ್ಮಲ್ಲಿ ಚಳವಳಿಯನ್ನು ಚರ್ಚಿಸಲು ಮತ್ತು ಮೌಲ್ಯಮಾಪನ ಮಾಡಲು ಶಕ್ತಿಶಾಲಿಯಾದ ಅಕಾಡೆಮಿಕ್ ಮಾನದಂಡಗಳು ಸೃಷ್ಟಿಯಾಗಿಲ್ಲ. ಹಾಗಾಗಿ ಆರೋಪಗಳೇ ಮೌಲ್ಯಮಾಪನಗಳಾಗಿ, ಅಭಿಪ್ರಾಯಗಳೇ  ಆಲೋಚನೆಗಳಾಗಿ, ಚಳವಳಿಯನ್ನು ಕುರಿತ ಚರ್ಚೆಗಳನ್ನು ಆಳುತ್ತಿವೆ. ಈ ಆಳ್ವಿಕೆ ಕಂಠಪಾಠವಾಗಿ ಸರ್ವಂತರ್ಯಾಮಿಯಾಗಿ ಹರಿದಾಡುತ್ತಿದೆ. ಇದು ದುರಂತ. ಇದರಿಂದ ಚಳವಳಿ ದಿಕ್ಕು ತಪ್ಪಿದೆ ಎಂಬ ಚರ್ಚೆಯ ಆಲೋಚನೆಗಳೇ ದಿಕ್ಕು ತಪ್ಪಬಹುದು; ಇಲ್ಲವೆ ದಿಕ್ಕು ತಪ್ಪಿದ ಆಲೋಚನೆಗಳ ಮೂಲಕ ಚರ್ಚೆ ನಡೆಯಬಹುದು. ಇದು ಅಪಾಯ.

ಕರ್ನಾಟಕದ ದಲಿತ ಚಳವಳಿ ಅಸಮಾನತೆ-ಅನ್ಯಾಯ ಶೋಷಣೆಗಳಿಂದ ಕೂಡಿರುವ ಭಾರತದ ಒಂದು ಭಾಗ. ಹಾಗಾಗಿ ಭಾರತದ ಪರಂಪರೆ ಮತ್ತು ವರ್ತಮಾನವನ್ನು ಬದಿಗಿಟ್ಟು ಇದನ್ನು ಚರ್ಚಿಸಲು ಬರುವುದಿಲ್ಲ. ಭಾರತದಲ್ಲಿ ಸುಮಾರು ಐದೂವರೆ ಸಾವಿರ ವರ್ಷಗಳಿಂದ ಅಸ್ಪೃಶ್ಯರನ್ನು ಕಾರಣವೇ ಇಲ್ಲದೆ ಪಶುಪ್ರಾಣಿಗಳಿಗಿಂತ ಕಡೆಯಾಗಿ ನಡೆಸಿಕೊಳ್ಳಲಾಗಿದೆ. ಈ ಕ್ರೌರ್ಯ ಈಗಲೂ ಮುಂದುವರಿದಿದೆ. ಅಸ್ಪೃಶ್ಯರನ್ನು ಹೊರತುಪಡಿಸಿ ಭಾರತದ ಯಾವ ಜಾತಿಯ ಜನರೂ ತಲೆಯ ಮೇಲೆ ಹೇಲು ಹೊತ್ತಿಲ್ಲ; ಬೇರೆ ಯಾವ ಜಾತಿಯ ಜನರ ತಲೆಯ ಮೇಲೂ ಹೇಲು ಹೊರಿಸಿಲ್ಲ. ಯಾವ ತಪ್ಪನ್ನೂ, ಯಾವ ಅಪರಾಧವನ್ನೂ ಮಾಡದೆ, ಎಲ್ಲಾ ಮೇಲ್ಜಾತಿಗಳಿಗೆ ಬಿಟ್ಟಿಚಾಕರಿ ಮಾಡಿದವರನ್ನು ಶೋಷಣೆ-ಅಪಮಾನ ಮತ್ತು ಹಿಂಸೆಯಿಂದ ನಡೆಸಿಕೊಂಡಿರುವುದೇ ಎಲ್ಲಾ ಮೇಲ್ಜಾತಿಗಳು ಮಾಡಿರುವ ದೊಡ್ಡ ಅಪರಾಧ. ಅವರ ಈ ಅಪರಾಧಕ್ಕೆ ಐದೂವರೆ ಸಾವಿರ ವರ್ಷಗಳ ಪರಂಪರೆಯಿದೆ. ಅದನ್ನು ಈಗಲೂ ಮುಂದುವರಿಸಿದ್ದಾರೆ. ಅವರಿಗೆ ಆತ್ಮಸಾಕ್ಷಿ, ಆತ್ಮವಿಮರ್ಶೆ, ಅಪರಾಧಿ ಪ್ರಜ್ಞೆ ಇವು ಯಾವುದಾದರೂ ಇವೆಯೇ ಎಂಬ ಪ್ರಶ್ನೆ ಹುಟ್ಟುತ್ತದೆ.

ಕರ್ನಾಟಕದ ಒಟ್ಟು ದಲಿತರಲ್ಲಿ ದಲಿತ ಚಳವಳಿಯ ಕಾರ್ಯಕರ್ತರು ಬಹಳ ಕಡಿಮೆ. ಅತ್ಯಂತ ಕಡಿಮೆ ಪ್ರಮಾಣದ ದಲಿತರಿರುವ ದಲಿತ ಚಳವಳಿಯನ್ನು ಅತ್ಯಂತ ಎಚ್ಚರಿಕೆಯಿಂದಲೇ ಪರಿಶೀಲನೆ ಮಾಡಬೇಕಾಗುತ್ತದೆ.

ಭಾರತದ/ಕರ್ನಾಟಕದ ಜನಸಂಖ್ಯೆಯಲ್ಲಿ ಅಸ್ಪೃಶ್ಯರ ಪ್ರಮಾಣ ಒಂದಿದೆ. ಇದು ಲೆಕ್ಕಕ್ಕೆ ಸಿಗುತ್ತದೆ. ಅವರನ್ನು ಕ್ರೂರವಾಗಿ ನಡೆಸಿಕೊಂಡಿರುವ ಪ್ರಮಾಣ ಮತ್ತೊಂದಿದೆ. ಇದು ಯಾವ ಲೆಕ್ಕಕ್ಕೂ ಸಿಗುವುದಿಲ್ಲ. ಕರ್ನಾಟಕದ ಒಟ್ಟು ದಲಿತರಲ್ಲಿ ದಲಿತ ಚಳವಳಿಯ ಕಾರ್ಯಕರ್ತರು ಬಹಳ ಕಡಿಮೆ. ಅತ್ಯಂತ ಕಡಿಮೆ ಪ್ರಮಾಣದ ದಲಿತರಿರುವ ದಲಿತ ಚಳವಳಿಯನ್ನು ಅತ್ಯಂತ ಎಚ್ಚರಿಕೆಯಿಂದಲೇ ಪರಿಶೀಲನೆ ಮಾಡಬೇಕಾಗುತ್ತದೆ. ಚಳವಳಿಯನ್ನು ಕುರಿತ ಚರ್ಚೆಯು ಕೆಲವು ನಾಯಕರ ಮೇಲಿನ ಟೀಕೆ ಮತ್ತು ಉಪದೇಶಕ್ಕೆ ಸೀಮಿತವಾದರೆ ಅದು ಚರ್ಚೆಯಾಗುವುದಿಲ್ಲ. ಆದರೆ ಬಹುತೇಕ ಚರ್ಚೆಗಳ ಬಂಡವಾಳ ಇದೇ ಆಗಿರುವುದು ದುರಂತ.

ಸುಮಾರು 45 ವರ್ಷಗಳ ಹಿಂದೆ ಕರ್ನಾಟಕದ ದಲಿತರು ಮತ್ತು ದಲಿತೇತರ ಪ್ರಗತಿಪರರು ಸೇರಿ ದಲಿತ ಸಂಘಟನೆಯನ್ನು ಕಟ್ಟಿದರು. ಇದಕ್ಕಾಗಿ ನೂರಾರು ದಲಿತರು ಉನ್ನತ ಶಿಕ್ಷಣಕ್ಕೆ ತಿಲಾಂಜಲಿ ಇಟ್ಟರು; ಇನ್ನು ಕೆಲವರು ನೌಕರಿ ಬಿಟ್ಟರು; ಮತ್ತೆ ಕೆಲವರು ನೌಕರಿಗೆ ಹೋಗಬಹುದಾಗಿದ್ದರೂ ಹೋಗಲಿಲ್ಲ. ಅಂತೂ ಚಳವಳಿಯನ್ನು ಕೆಲವು ಕಾಲ ಮುನ್ನಡೆಸಿದರು. ಸಾಮಾಜಿಕ-ರಾಜಕೀಯ ವಸ್ತುಸ್ಥಿತಿ ಬದಲಾದಂತೆ ಅದರ ರಾಜಕೀಯ ಅರಿವಿನಲ್ಲಿ ಚಳವಳಿಯೂ ಬದಲಾಗುತ್ತಾ, ಬೆಳೆಯುತ್ತಾ ಹೋಗಬೇಕಿತ್ತು. ಇದು ಆಗಲಿಲ್ಲ; ಈ ಮಾತು ಎಲ್ಲಾ ಚಳವಳಿಗಳಿಗೂ ಅನ್ವಯಿಸುತ್ತದೆ.

ದಲಿತರಲ್ಲಿ ಸ್ವಾಭಿಮಾನ, ಸಂಘಟನೆ, ಪ್ರತಿರೋಧ ಹಾಗೂ ಹೋರಾಟದ ಕೆಚ್ಚನ್ನು ಹುಟ್ಟಸಿತು. ಇದನ್ನು ಕಂಡು ತುಳಿಯುವ ಜನರು ಬೆಚ್ಚಿಬಿದ್ದರು; ಸುಡುವ ಕೆಂಡವಾದರು. ದಲಿತರ ಮೇಲಿನ ದ್ವೇಷ ಸಂಘಟಿತ ರೂಪ ಪಡೆಯಿತು. 

ದಲಿತ ಚಳವಳಿ ಮುಖ್ಯವಾಗಿ ಬಾಬಾಸಾಹೇಬರನ್ನು ನಾಡಿನ ಕೇರಿಗಳಿಗೆ ಪರಿಚಯಿಸಿತು. ಭೂಮಾಲಿಕ ಜಾತಿಗಳು, ದಲಿತರ ಸ್ವಾಭಿಮಾನವನ್ನು ಕಿತ್ತುಕೊಂಡು ಅವರ ಬದುಕನ್ನು ಶೋಷಣೆ ಮಾಡುತ್ತಿರುವ ಹೊಸ ಅರಿವನ್ನು ಕೊಟ್ಟಿತು. ದಲಿತರಲ್ಲಿ ಸ್ವಾಭಿಮಾನ, ಸಂಘಟನೆ, ಪ್ರತಿರೋಧ ಹಾಗೂ ಹೋರಾಟದ ಕೆಚ್ಚನ್ನು ಹುಟ್ಟಸಿತು. ಇದನ್ನು ಕಂಡು ತುಳಿಯುವ ಜನರು ಬೆಚ್ಚಿಬಿದ್ದರು; ಸುಡುವ ಕೆಂಡವಾದರು. ದಲಿತರ ಮೇಲಿನ ದ್ವೇಷ ಸಂಘಟಿತ ರೂಪ ಪಡೆಯಿತು. 

ಮುಂದೆ ಚಳವಳಿಯ ಕಾರ್ಯಕರ್ತರ ಹಾಗೂ ನಾಯಕರ ಮೇಲೆ ಹಲ್ಲೆ ನಡೆಸಿದರು. ಭೂಹೋರಾಟಕ್ಕೆ ಮುಂದಾದಾಗ `ದಲಿತರೇ ನಿಮ್ಮ ಶತ್ರುಗಳು ಭೂಮಾಲೀಕರಲ್ಲ; ಬ್ರಾಹ್ಮಣರು ಮತ್ತು ಪುರೋಹಿತಶಾಹಿಗಳು’ ಎಂಬ ನಕಲಿ ಪ್ರಜ್ಞೆಯನ್ನು ದಲಿತ ಸಾಹಿತಿ-ಚಿಂತಕ-ಹೋರಾಟಗಾರರ ಮೆದುಳಿಗೆ ತುಂಬಿದರು. ನಿಜಶತ್ರುವಾದ ಭೂಮಾಲೀಕವರ್ಗವನ್ನು ಮುಚ್ಚಿಟ್ಟು, ಬ್ರಾಹ್ಮಣಶಾಹಿಯೆಂಬ ಹುಸಿಶತ್ರುವನ್ನು ತೋರಿಸಿದರು. ಭೂಹೋರಾಟವನ್ನು ಹಳ್ಳಹಿಡಿಸಿದರು.

ರಾಮಕೃಷ್ಣ ಹೆಗಡೆ ನೇತೃತ್ವದ ಜನತಾ ಪರಿವಾರ ಚುನಾವಣೆ ರುಚಿ ತೋರಿಸಿತು. 1985ರ ನಂತರ ಎಲ್ಲಾ ಪ್ರಗತಿಪರ ಚಳವಳಿಗಳು ಪ್ರಭುತ್ವದ ಭಾಗವಾದವು. ಎನ್.ಜಿ.ಓ. ಆಲೋಚನೆಗಳು ಚಳವಳಿಯೊಳಗೆ ತೂರಿ ಬಂದವು. ಎಡ-ಬಲ ಪ್ರಜ್ಞೆಯನ್ನು ಹುಟ್ಟಿಸಿದವು. ಅಲ್ಲಿಂದಲೇ ಚಳವಳಿ ಹಲವು ಕವಲುಗಳಾಗತೊಡಗಿತು. ದಲಿತರ ಮೇಲೆ ಜಾಗತೀಕರಣದ ಪರಿಣಾಮ ಏನೆಂದು ತಿಳಿಯದಾಯಿತು. ಯಾವುದಕ್ಕಾಗಿ ಹೋರಾಟ, ಯಾರ ವಿರುದ್ಧ ಹೋರಾಟ ಎಂಬ ಗೊಂದಲ ಎದುರಾಯಿತು. ಮುಂದೆ ಚಳವಳಿ ಹಲವು ಬಣಗಳಾಗಿ ಶಕ್ತಿಗುಂದತೊಡಗಿತು.

ಸಂವಿಧಾನದ ಕರ್ತೃಗಳ ಪ್ರಕಾರ ಮೀಸಲಾತಿಯು ರಾಷ್ಟ್ರ ನಿರ್ಮಾಣದಲ್ಲಿ 
ಎಲ್ಲರೂ ತೊಡಗಬೇಕು ಎಂಬುದಾಗಿತ್ತು. ಈ ಆಶಯವನ್ನು ಇಂದು ಸಂಪೂರ್ಣ ತಿರುಚಲಾಗಿದೆ.

ಮೂಲತಃ ಆಸ್ತಿ, ಸಂಪತ್ತು ಮತ್ತು ಅಧಿಕಾರದಿಂದ ವಂಚನೆಗೊಂಡ ಜನರಿಗೆ ಮೀಸಲಾತಿ ಮತ್ತು ಸರಕಾರಿ ಸವಲತ್ತುಗಳು ಕೊನೆಯ ಆಸರೆ. ಆದರೆ ಎಲ್ಲಾ ಸವಲತ್ತುಗಳು ಇವರ ಹೆಸರಿನಲ್ಲಿ ಬೇರೆಯವರ ಪಾಲಾಗುತ್ತಿರುವುದು ಗುಟ್ಟಿನ ವಿಷಯವಾಗಿ ಉಳಿದಿಲ್ಲ. ಸರಕಾರಿ ಸವಲತ್ತುಗಳು ಮತ್ತು ಮೀಸಲಾತಿಯ ಸೌಲಭ್ಯ ಎಲ್ಲಾ ದಲಿತರಿಗೆ ಇನ್ನೂ ಸಿಕ್ಕಿಲ್ಲ. ಅದರಿಂದ ದಲಿತರು ಉದ್ದಾರವಾಗುವುದೂ ಇಲ್ಲ. ಸಂವಿಧಾನದ ಕರ್ತೃಗಳ ಪ್ರಕಾರ ಮೀಸಲಾತಿಯು ರಾಷ್ಟ್ರ ನಿರ್ಮಾಣದಲ್ಲಿ 
ಎಲ್ಲರೂ ತೊಡಗಬೇಕು ಎಂಬುದಾಗಿತ್ತು. ಈ ಆಶಯವನ್ನು ಇಂದು ಸಂಪೂರ್ಣ ತಿರುಚಲಾಗಿದೆ.

ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ದಲಿತ ಚಿಂತಕರು, ಹೋರಾಟಗಾರರು ಓದಿದ್ದಾರೆಯೆ ಎಂಬುದು ಮುಖ್ಯ ಪ್ರಶ್ನೆ. ಆದರೆ ಅಂಬೇಡ್ಕರರನ್ನು ದಲಿತರೇ ಓದಬೇಕೆಂದು ಅಪೇಕ್ಷಿಸುವುದು ಸರಿಯಲ್ಲ. ಬಾಬಾಸಾಹೇಬರನ್ನು ದಲಿತರಲ್ಲದವರು ಎಷ್ಟು ಜನ ಓದಿದ್ದಾರೆ? ಹಿಂದೂಕೋಡ್ ಬಿಲ್ ಪಾಸ್ ಆಗದಿದ್ದುದಕ್ಕೆ ಬಾಬಾಸಾಹೇಬರು ತಮ್ಮ ಮಂತ್ರಿ ಪದವಿಗೆ ರಾಜೀನಾಮೆ ಕೊಟ್ಟರು. ಅದರ ಫಲವನ್ನು ಇವತ್ತು ದಲಿತೇತರ ಜಾತಿಗಳ ಆಸ್ತಿವುಳ್ಳ ಕುಟುಂಬದ ಸದಸ್ಯರು ಪಡೆಯುತ್ತಿದ್ದಾರೆ. ಆದರೆ ಯಾವೊಬ್ಬ ಮಹಿಳಾ ಚಿಂತಕರು, ಹೋರಾಟಗಾರ್ತಿಯರು ಅಂಬೇಡ್ಕರರ ಈ ಮಹತ್ವದ ಪಾತ್ರವನ್ನು ಹೇಳುತ್ತಾರೆಯೆ? ಸಮಾನತೆಯ ಭಾರತದ ನಿರ್ಮಾಣಕ್ಕೆ ಅಗತ್ಯವಾಗಿರುವ ಬಾಬಾಸಾಹೇಬರ ಶಕ್ತಿಶಾಲಿಯಾದ ಜ್ಞಾನವನ್ನು ಇಡೀ ಶಿಕ್ಷಣದಿಂದಲೇ ಬಹಿಷ್ಕರಿಸಿರುವುದು ಯಾರು ಮತ್ತು ಯಾಕೆ? ಬಾಬಾಸಾಹೇಬರ ಆಲೋಚನೆಗಳು ಕೇವಲ ದಲಿತರಿಗೆ ಮಾತ್ರ ಬೇಕಾದವಲ್ಲ; ಸಮಾನತೆಯ ಸಮಾಜ ನಿರ್ಮಾಣ ಮಾಡಬೇಕೆಂದು ಆಲೋಚಿಸುವ ಎಲ್ಲರಿಗೂ ಬೇಕು.

ಅಸಮಾನತೆ ಮತ್ತು ಶೋಷಣೆಯ ವ್ಯವಸ್ಥೆಯನ್ನು ಸಮಗ್ರವಾಗಿ ಬದಲಾಯಿಸಬೇಕೆಂಬುದು ಅವರ ಆಲೋಚನೆಯಾಗಿರಲಿಲ್ಲ. ಹಳೆಯ ಉತ್ಪಾದನೆಗಳು, ಹಳೆಯ ಸಾಮಾಜಿಕ ಸಂಬಂಧಗಳನ್ನು ಹಾಗೇ ಮುಂದುವರಿಸಬೇಕು ಎಂಬುದಾಗಿತ್ತು. ಇದರಿಂದ ಗಾಂಧಿಯವರ ಆಲೋಚನೆ ಪ್ರಸ್ತುತ ಅಥವಾ ಪರ್ಯಾಯ ಎನಿಸುವುದಿಲ್ಲ.

ಸಾಮ್ರಾಜ್ಯಶಾಹಿ ಜಾಗತೀಕರಣದ ಕಾಲದಲ್ಲಿ ಕಮ್ಯುನಿಸ್ಟ್ ಸಿದ್ಧಾಂತ ಎನ್ನುವುದಕ್ಕಿಂತಲೂ, ಸಮಾನತೆಯ ಸಮಾಜ ನಿರ್ಮಾಣಕ್ಕಾಗಿ ಮಾರ್ಕ್ಸ್ ವಾದವನ್ನು ಅನ್ವಯಿಸುವುದು ಬಹಳ ಅಗತ್ಯವಿದೆ. ಸ್ವತಃ ಬಾಬಾಸಾಹೇಬರೇ ಇಂಡಿಯಾದ ಬಹಳ ದೊಡ್ಡ ಮಾರ್ಕ್ಸ್ ವಾದಿ ಚಿಂತಕರು. ಬೌದ್ಧಧರ್ಮವನ್ನು ಮತ್ತು ಗಾಂಧಿವಾದವನ್ನು ಅವರು ಮಾರ್ಕ್ಸ್ ವಾದಿ ತಿಳಿವಳಿಕೆಯಲ್ಲಿ ಮರುವ್ಯಾಖ್ಯಾನಿಸಿದರು. ಅವರು ಬೌದ್ಧಧರ್ಮವನ್ನು ಕೇವಲ ಧರ್ಮವೆನ್ನಲಿಲ್ಲ; ಸ್ವಾತಂತ್ರ್ಯ, ಸಹಬಾಳ್ವೆ ಮತ್ತು ಸಮಾನತೆಯ ಬದುಕು ಎಂದರು. ಇಂದ್ರಿಯಗಳಿಗೆ ಗುಲಾಮರಾಗಬಾರದು ಎಂಬುದು ಗಾಂಧಿಯವರ ಒಂದು ಶಕ್ತಿಶಾಲಿ ಆಲೋಚನೆ. ಬುದ್ಧನ ಚಿಂತನೆಯ ಮೂಲತಿರುಳೂ ಕೂಡಾ ಇದೇ ಆಗಿದೆ. ಹಾಗಾಗಿ ಇದು ಗಾಂಧಿಯವರ ಹೊಸ ಚಿಂತನೆ ಅಲ್ಲ. 

ಜಾಗತೀಕರಣದ ಮಾರುಕಟ್ಟೆ ಇಂದ್ರಿಯಗಳನ್ನು ಪ್ರಚೋದಿಸುತ್ತಿದೆ; ಅದರ ಸುಖಕ್ಕೆ ಉಪಭೋಗದ ಸರಕುಗಳನ್ನು ಉತ್ಪಾದಿಸಿ ಮಾರುತ್ತಿದೆ. ಈ ನೆಲೆಯಲ್ಲಿ ಗಾಂಧಿ ಪ್ರಣೀತ ಆಲೋಚನೆ ಪ್ರಸ್ತುತ ಎಂಬ ಅಭಿಪ್ರಾಯವನ್ನು ರೂಪಿಸಲಾಗಿದೆ. ಆದರೆ ಅಸಮಾನತೆ ಮತ್ತು ಶೋಷಣೆಯ ವ್ಯವಸ್ಥೆಯನ್ನು ಸಮಗ್ರವಾಗಿ ಬದಲಾಯಿಸಬೇಕೆಂಬುದು ಅವರ ಆಲೋಚನೆಯಾಗಿರಲಿಲ್ಲ. ಹಳೆಯ ಉತ್ಪಾದನೆಗಳು, ಹಳೆಯ ಸಾಮಾಜಿಕ ಸಂಬಂಧಗಳನ್ನು ಹಾಗೇ ಮುಂದುವರಿಸಬೇಕು ಎಂಬುದಾಗಿತ್ತು. ಇದರಿಂದ ಗಾಂಧಿಯವರ ಆಲೋಚನೆ ಪ್ರಸ್ತುತ ಅಥವಾ ಪರ್ಯಾಯ ಎನಿಸುವುದಿಲ್ಲ.

ದಲಿತ ಚಳವಳಿ ದಲಿತರ ನಿಜಶತ್ರುಗಳು ಯಾರು, ಹೇಗೆ ಎಂಬುದನ್ನು ಅರಿಯಬೇಕಾಗಿದೆ. ಜಾಗತೀಕರಣವು ವರವೋ, ಶಾಪವೋ ಎಂಬುದನ್ನು ಬಗೆಹರಿಸಿಕೊಳ್ಳಬೇಕಿದೆ. ಬುದ್ಧ, ಕಾರ್ಲ್‍ಮಾರ್ಕ್ಸ್ ಮತ್ತು ಬಾಬಾಸಾಹೇಬರ ದಾರಿಯಲ್ಲಿ ದಲಿತ ಚಳವಳಿ ಮುನ್ನಡೆಯುವ ಅಗತ್ಯವಿದೆ. ಸ್ವಾತಂತ್ರ್ಯ, ಸಮಾನತೆ ಮತ್ತು ಸಹಬಾಳ್ವೆಯ ಬದುಕಿನ ನಿರ್ಮಾಣದ ಕೆಲಸಕ್ಕೆ ದಲಿತರು ಮಾತ್ರವಲ್ಲ; ದಲಿತೇತರರೂ ತೊಡಗಬೇಕು. ಇದು ಬಾಬಾಸಾಹೇಬರು ತೋರಿಸಿರುವ ಪರ್ಯಾಯ.

*ಲೇಖಕರು ಚಿಕ್ಕಮಗಳೂರು ತಾಲೂಕಿನ, ಬಾಸಾಪುರ ಗ್ರಾಮದವರು; ಹಂಪಿ ಕನ್ನಡ ವಿವಿಯಲ್ಲಿ ಪ್ರಾಧ್ಯಾಪಕರು, ಕುಪ್ಪಳಿಯ ಕುವೆಂಪು ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿದ್ದಾರೆ. ಸಾಹಿತ್ಯ ವಿಮರ್ಶೆ, ಸಾಹಿತ್ಯ ಮೀಮಾಂಸೆ, ಸಂಸ್ಕೃತಿ ಚಿಂತನೆ, ಸಂಶೋಧನೆ, ತತ್ವಶಾಸ್ತ್ರ, ರಾಜಕೀಯ ಅರ್ಥಶಾಸ್ತ್ರ, ಚಳವಳಿಗಳಲ್ಲಿ ಆಸಕ್ತಿ.

Leave a Reply

Your email address will not be published.