ಬಾಬ್ರಿ ಮಸೀದಿ ಧ್ವಂಸ ನ್ಯಾಯಾಲಯದ ತೀರ್ಪಿನ ಸುತ್ತಮುತ್ತ…

-ಡಾ.ವೆಂಕಟಾಚಲ ಹೆಗಡೆ

ಬಾಬ್ರಿ ಮಸೀದಿ ನೆಲಸಮದ ಘಟನೆಯು ‘ಸ್ವಯಂಪ್ರೇರಿತ’ ವಾದದ್ದು ಮತ್ತು ಅದಕ್ಕೆ ಸಮಾಜವಿರೋಧಿ ಶಕ್ತಿಗಳೆ ಕಾರಣವೆಂಬ ವಾಖ್ಯಾನವನ್ನು ಲಖ್ನೋ ಸಿಬಿಐ ನ್ಯಾಯಾಲಯ ತನ್ನ ತೀರ್ಪಿನಲ್ಲಿ ಮುಂದಿಟ್ಟಿದೆ!

ಸಾಮಾನ್ಯವಾಗಿ ಇತಿಹಾಸ ಮತ್ತು ಚರಿತ್ರೆಗಳ ಸತ್ಯಾಸತ್ಯತೆಗಳನ್ನು ಹಿನ್ನೆಲೆಯಾಗಿಟ್ಟುಕೊಂಡು ನ್ಯಾಯಾಂಗ, ಅದರಲ್ಲೂ ಸರ್ವೋಚ್ಚ ನ್ಯಾಯಾಲಯ ತನ್ನ ತೀರ್ಪಿನ ಮುಖ್ಯ ಅಂಶಗಳನ್ನು ರೂಪಿಸುವುದಿಲ್ಲ. ಅದರ ನಿಶ್ಚಯಗಳ ಎಲ್ಲ ನೆಲೆಗಳು ಪಕ್ಕಾ ಕಾನೂನಿನ ತಳಹದಿಯಲ್ಲೆ ರೂಪಗೊಳ್ಳುವುದು ಸಹಜವಾದ ಪ್ರಕ್ರಿಯೆ. ಯಾಕೆಂದರೆ ಕಾನೂನಿನ್ವಯ ದೇಶದ ಮತ್ತು ಜನಸಮುದಾಯದ ಎಲ್ಲ ವಿವಾದಗಳನ್ನು ಬಗೆಹರಿಸುವುದು ನ್ಯಾಯಾಂಗದ ಮೇಲೆ ಸಂವಿಧಾನ ಹೊರಿಸಿರುವ ಗುರುತರ ಜವಾಬ್ದಾರಿಯಾಗಿದೆ. ಇದು ದೇಶದ ಎಲ್ಲ ಸ್ತರಗಳ ನ್ಯಾಯಪಾಲಿಕೆಗಳಿಗೆ ಅನ್ವಯವಾಗುವ ವಿಚಾರ.

ಆದರೆ, ಕಳೆದ ವರ್ಷ ನವೆಂಬರ 9 ರಂದು ಬಾಬ್ರಿ ಮಸೀದಿ ಮತ್ತು ರಾಮಮಂದಿರ ಕುರಿತಾದ ಜಾಗೆಯ ಬಟವಾಡೆಯ ವಿವಾದವನ್ನು ಬಗೆಹರಿಸಲು ಸರ್ವೋಚ್ಚ ನ್ಯಾಯಾಲಯ ನೀಡಿದ ತೀರ್ಪು ಮತ್ತು ನಂತರದಲ್ಲಿ ಲಖ್ನೊದ ಸಿಬಿಐ ನ್ಯಾಯಾಲಯ 1992ರ ಬಾಬ್ರಿ ಮಸೀದಿಯ ಧ್ವಂಸದ ಕುರಿತಾಗಿ ಕಳೆದ ತಿಂಗಳು ಸೆಪ್ಟೆಂಬರ 30ರಂದು ನೀಡಿದ ತೀರ್ಪನ್ನು ಗಮನಿಸಿದಾಗ ನಮ್ಮ ವಿವಿಧ ಸ್ತರಗಳ ನ್ಯಾಯಪಾಲಿಕೆಗಳ ಹಲವಾರು ಇತಿಮಿತಿಗಳು ಅರಿವಾಗುತ್ತವೆ. ರಾಜಕೀಯ ಮತ್ತು ಧಾರ್ಮಿಕ ಅಂಶಗಳು ಒಂದಾಗಿ ತಮ್ಮ ಸ್ವನಿರ್ಮಿತ ಇತಿಹಾಸವನ್ನು ಕಾನೂನಿನ ಚೌಕಟ್ಟಿಗೆ ಸಿಲುಕಿಸಿ ಅದರಿಂದ ಉದ್ಭವವಾದ ವಿವಾದವನ್ನು ಬಗೆಹರಿಸುವತ್ತ ನ್ಯಾಯಪಾಲಿಕೆಗೆ ಅನಿವಾರ್ಯತೆಯನ್ನು ಸೃಷ್ಟಿಸುವ ಪರಿಯನ್ನು ನಾವು ಗಂಭೀರವಾಗಿ ಪರಿಗಣಿಸಬೇಕಾದ ಅಗತ್ಯವಿದೆ.

ಹಾಗೆಂದು ನ್ಯಾಯಾಲಯಗಳು, ಅದರಲ್ಲೂ ಸರ್ವೂಚ್ಚ ನ್ಯಾಯಾಲಯ, ಧಾರ್ಮಿಕ ಅಂಶಗಳನ್ನೊಳಗೊಂಡ ಇತಿಹಾಸಗಳನ್ನು ತಮ್ಮ ನಿಷ್ಕರ್ಷೆಗೆ ಹಲವಾರು ಬಾರಿ ಒಳಪಡಿಸಿದ್ದನ್ನು ನಾವು ಕಾಣಬಹುದು. ನಮ್ಮ ಭರತಖಂಡದಲ್ಲಿ ಸಾವಿರಾರು ವರ್ಷಗಳ ಇತಿಹಾಸವಿರುವ ಮತ್ತು ಆಸ್ತಿಪಾಸ್ತಿಗಳನ್ನು ಹೊಂದಿರುವ ದೇವಗಣಗಳ ಸಂಖ್ಯೆ ಎಣಿಕೆಗೆ ದಕ್ಕದ್ದು. ಸರಕಾರಗಳು ತರುವ ಹಲವಾರು ಹೊಸ ಕಾನೂನು ಕಟ್ಟಲೆಗಳು, ಅದರಲ್ಲೂ ಭೂಸುಧಾರಣಾ ಕಾನೂನುಗಳು ದೇಗುಲಗಳ ಮತ್ತು ಮಠಗಳ ಆಸ್ತಿಪಾಸ್ತಿಗಳನ್ನು ನ್ಯಾಯಾಂಗದ ಕಟ್ಟೆಯೇರುವಂತೆ ಮಾಡಿವೆ. ಕೆಲವೊಂದು ಮೊಕದ್ದಮೆಗಳಲ್ಲಿ ದೇವರೆ ನ್ಯಾಯಾಲಯದ ಅರ್ಜಿಗಳಲ್ಲಿ ಮತ್ತು ಕಟಾಂಗಣಗಳಲ್ಲಿ ತನ್ನ ಸ್ವತಂತ್ರವಾದ ಅಸ್ತಿತ್ವವನ್ನು ಸಾಬೀತು ಪಡಿಸಬೇಕಾದ ಪವಾಡಗಳು ನಡೆದಿವೆ.

ರಾಮಮಂದಿರ ಮತ್ತು ಬಾಬ್ರಿ ಮಸೀದಿಯ ವಿವಾದವೂ ಸಹ ಅಯೋಧ್ಯಾದಲ್ಲಿನ ಒಂದು ನಿರ್ದಿಷ್ಟವಾದ ಜಾಗೆಯ ಬಟವಡೆಯ ಕುರಿತಾಗಿ ಕಾನೂನಿನ ಮೂಸೆಯಿಂದ ಹೊರಬರಬೇಕಾಗಿತ್ತು. ಆದರೆ, ಕಾಲಾಂತರದಲ್ಲಿ ಈ ವಿವಾದದ ಸುಳಿಯಲ್ಲಿ ಎರಡು ಸಮಸ್ಯೆಗಳು ಉದ್ಭವವಾದವು. ಒಂದನೆಯದಾಗಿ, ಎಲ್ಲಿ ನಾನೂರೈವತ್ತು ವರ್ಷಗಳ ಹಿಂದೆ ಕಟ್ಟಲ್ಪಟ್ಟ ಬಾಬ್ರಿ ಮಸೀದಿಯಿತ್ತೊ ಅಲ್ಲೆ ರಾಮ ದೇವರ ಜನ್ಮಸ್ಥಾನವೂ ಇದೆಯೆಂಬ ಬಲವಾದ ನಂಬಿಕೆ; ಎರಡನೆಯದಾಗಿ, ಈ ನಂಬಿಕೆಯ ಸೆಲೆಯನ್ನು ಹಿಡಿದುಕೊಂಡು ಎಬ್ಬಿಸಲ್ಪಟ್ಟ ಅಪ್ಪಟ ರಾಜಕೀಯ ಮತ್ತು ಧಾರ್ಮಿಕ ಬಿರುಗಾಳಿ. ಈ ಎರಡು ಅಂಶಗಳಿಂದಾಗಿ, ಅದರಲ್ಲೂ ಮುಖ್ಯವಾಗಿ 1990ರ ಆಸುಪಾಸಿನಲ್ಲಿ ರಥಯಾತ್ರೆಯ ಮೂಲಕ ‘ಎಬ್ಬಿಸಲ್ಪಟ್ಟ ಬಿರುಗಾಳಿ’ ಯ ಪ್ರಕೋಪದಿಂದಾಗಿ 1992 ಡಿಸೆಂಬರ 6 ರಂದು ಬಾಬ್ರಿ ಮಸೀದಿಯನ್ನು ಸಾವಿರಾರು ಜನರ ಮತ್ತು ರಥಯಾತ್ರೆಯ ಹರಿಕಾರರಾದ ಹಲವಾರು ರಾಜಕೀಯ ನೇತಾರರ ಕಣ್ಣೆದುರೆ ಪೂರಾ ನೆಲಸಮ ಮಾಡಲಾಯಿತು.

ಆ ಸಂದರ್ಭದಲ್ಲಿ ಬಾಬ್ರಿ ಮಸೀದಿಯ ಪರಿಸರವನ್ನು ಇದ್ದಹಾಗೆ ಕಾಯ್ದುಕೊಳ್ಳಬೇಕೆಂದು ಸರ್ವೋಚ್ಚ ನ್ಯಾಯಾಲಯ ಕೇಂದ್ರ ಮತ್ತು ಉತ್ತರ ಪ್ರದೇಶದ ಸರಕಾರಗಳಿಗೆ ಬಿಗುವಿನಿಂದ ತಾಕೀತು ಮಾಡಿದ್ದರೂ ಈ ನೆಲಸಮದ ಕಾರ್ಯ ಕೆಲವೆ ಘಂಟೆಗಳಲ್ಲಿ ನಡೆದುಹೋಯಿತು. ತನ್ನ ಅಣತಿಯನ್ನು ಪಾಲಿಸದಿದ್ದಕ್ಕಾಗಿ ಸರ್ವೋಚ್ಚ ನ್ಯಾಯಾಲಯ ಆಗಿನ ಉತ್ತರ ಪ್ರದೇಶದ ಮುಖ್ಯಮಂತ್ರಿ ಕಲ್ಯಾಣ ಸಿಂಗರನ್ನು ಶಿಕ್ಷಿಸಲು ಮುಂದಾಯಿತು. ಅದೆ ವೇಳೆಯಲ್ಲಿ ಅಯೋಧ್ಯಾ-ಫೈಜಾಬಾದ್ ಪೊಲೀಸು ಠಾಣೆಯಲ್ಲಿ ಬಾಬ್ರಿ ಮಸೀದಿಯ ಪ್ರಕರಣದ ಕುರಿತಾಗಿ ಎಫ್.ಆಯ್.ಆರ್. ದಾಖಲಿಸಲಾಯಿತು. ಅದರಲ್ಲಿ ಯಾರೊಬ್ಬರನ್ನು ದೋಷಿಗಳೆಂದು ಹೇಳದಿದ್ದರಿಂದ, ಸ್ವಲ್ಪ ಸಮಯದ ನಂತರ ಇನ್ನೊಂದು ಎಫ್.ಆಯ್.ಆರ್ ದಾಖಲು ಮಾಡಿ ಅದರಲ್ಲಿ 32 ಜನರನ್ನು ಬಾಬ್ರಿ ಮಸೀದಿಯ ಧ್ವಂಸದ ಫಿತೂರಿಯ ಆರೋಪಿಗಳೆಂದು ಹೆಸರಿಸಲಾಯಿತು. ಅದರಲ್ಲಿ ಅದ್ವಾನಿ, ಮುರಳಿ ಮನೋಹರ ಜೋಶಿ ಮತ್ತು ಹಲವು ಬಿಜೆಪಿ ಮತ್ತು ವಿಶ್ವ ಹಿಂದೂ ಪರಿಷತ್ತಿನ ಮುಂದಾಳುಗಳನ್ನು ಹೆಸರಿಸಲಾಗಿತ್ತು.

ನಂತರ ಈ ಮೊಕದ್ದಮೆಯ ಹೊಣೆಯನ್ನು ಸಿಬಿಐಗೆ ವಹಿಸಲಾಯಿತು. ಸುಮಾರು 25 ವರ್ಷಗಳ ನಂತರ ಬಾಬ್ರಿ ಮಸೀದಿಯನ್ನು ನೆಲಸಮ ಮಾಡಲು ಪಿತೂರಿ ಮಾಡಿದ ಅಪರಾಧಿಕ ಹೊಣೆಗಾರಿಕೆಯನ್ನು ಎಲ್ಲ 32 ಆರೋಪಿಗಳ ಮೇಲೆ ಸಾಬೀತು ಮಾಡಲು ಸಾಕಷ್ಟು ಪುರಾವೆಗಳಿಲ್ಲವೆಂಬ ಕಾರಣಕ್ಕೆ ಲಖ್ನೊದ ಸಿಬಿಐ ನ್ಯಾಯಾಲಯ 30 ಸೆಪ್ಟಂಬರ್ 2020 ರಂದು ಎಲ್ಲ ಅರೋಪಿಗಳನ್ನು ಖುಲಾಸೆಗೊಳಿಸಿ ನೀಡಿದ ತೀರ್ಪು ಸಾಕಷ್ಟು ವಿವಾದಗಳಿಗೆ ಎಡೆ ಮಾಡಿಕೊಟ್ಟಿದೆ. ಮುಖ್ಯವಾಗಿ 1992 ಡಿಸೆಂಬರ್ 6ನೇ ತಾರೀಖಿನಂದು ನಡೆದ ಬಾಬ್ರಿ ಮಸೀದಿಯ ನೆಲಸಮದ ಘಟನೆಯು ‘ಸ್ವಯಂಪ್ರೇರಿತ’ ವಾದದ್ದು ಮತ್ತು ಅದಕ್ಕೆ ಸಮಾಜವಿರೋಧಿ ಶಕ್ತಿಗಳೆ ಕಾರಣವೆಂಬ ತನ್ನ ವಾಖ್ಯಾನವನ್ನು ತೀರ್ಪಿನಲ್ಲಿ ಮುಂದಿಟ್ಟಿದೆ. ಹಾಗಾದರೆ, ಈ ಎಲ್ಲ ಘಟನಾವಳಿಗಳಿಗೆ ಅಲ್ಲಿದ್ದವರಾರೂ ಕಾರಣರಲ್ಲವೆಂದಾದರೆ ಇನ್ಯಾರು ಕಾರಣರು ಎಂಬ ಪ್ರಶ್ನೆಗೆ ಅದು ಹಲವಾರು ಊಹಾಪೋಹಗಳ ಪರಿಧಿಯಲ್ಲಿ ತೀರ್ಪನ್ನು ಮಂಡಿಸಿದೆ.

ಸುಮಾರು 2300 ಪುಟಗಳ ಬಾಬ್ರಿ ಮಸೀದಿ ಧ್ವಂಸ ಕುರಿತಾದ ತೀರ್ಪು ನೀಡಿದ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಸುರೇಂದ್ರ ಕುಮಾರ ಯಾದವ್ ಅವರು ಉತ್ತರ ಪ್ರದೇಶದವರು. ಕಳೆದ ವರ್ಷವೇ ಅವರು ತಮ್ಮ ನ್ಯಾಯಪೀಠದ ಕೆಲಸದಿಂದ ನಿವೃತ್ತಿ ಹೊಂದುವವರಿದ್ದರು. ಸುಮಾರು 25 ವರ್ಷಗಳಿಂದ ಯಾವುದೆ ನಿರ್ಣಯವಿಲ್ಲದೆ ನೆನೆಗುದಿಗೆ ಬಿದ್ದಿದ್ದ ಈ ಮೊಕದ್ದಮೆಯನ್ನು ನಿರ್ದಿಷ್ಟವಾದ ವೇಳಾಪಟ್ಟಿಯ ಪ್ರಕಾರ ಅಗಸ್ಟ್ 2019ರ ಹೊತ್ತಿಗೆ ಮುಗಿಸಬೇಕೆಂದು 2017ರಲ್ಲಿ ಸರ್ವೋಚ್ಚ ನ್ಯಾಯಾಲಯ ತಾಕೀತು ಮಾಡಿತ್ತು. ಲಖ್ನೊ ಸಿಬಿಐ ಕೋರ್ಟಿನ ತೀರ್ಪು ಈ ಬಗೆಯಲ್ಲಾದರೂ ಹೊರಬಂತೆಂದು ನಾವೆಲ್ಲ ಸಮಾಧಾನ ಮಾಡಿಕೊಳ್ಳಬೇಕು. ಹಿಂದಿಯಲ್ಲಿರುವ ಈ ತೀರ್ಪನ್ನು ಓದಿ ಅರ್ಥೈಸಿಕೊಳ್ಳುವ ಕೆಲಸವನ್ನು ಕೇಂದ್ರ ತನಿಖಾ ಆಯೋಗವೆ ಮಾಡಬೇಕು. ಯಾಕೆಂದರೆ, ನ್ಯಾಯಮೂರ್ತಿ ಯಾದವರವರ ಪ್ರಕಾರ ಸಿಬಿಐ ಅವರ ಮುಂದೆ ಮಂಡಿಸಿದ ಪುರಾವೆಗಳು ಅಪೂರ್ಣ ಮತ್ತು ಅಸ್ಪಷ್ಟವಾಗಿದ್ದರಿಂದ ‘ಪಿತೂರಿ’ ಯ ಸೆಲೆಗಳನ್ನು ಅಪರಾಧಿಕ ದಂಡ ಸಂಹಿತೆಯ ಅಡಿಯಲ್ಲಿ ಆರೋಪಿಗಳ ವಿರುದ್ಧ ಸಾಬೀತು ಮಾಡಲು ವಿಫಲವಾಗಿವೆ.

ಇದು ಈ ತೀರ್ಪಿನ ಒಂದು ಮುಖವಾದರೆ, ಇನ್ನೊಂದು ಮುಖದಲ್ಲಿ ಈ ಎಲ್ಲ ಆರೋಪಿಗಳು ಬಾಬ್ರಿ ಮಸೀದಿಯನ್ನು ನೆಲಸಮ ಮಾಡದಂತೆ ಅಲ್ಲಿ ನೆರೆದಿದ್ದ ಲಕ್ಷಾಂತರ ಕಾರಸೇವಕರನ್ನು ತಡೆಯಲು ಎಲ್ಲ ಬಗೆಯ ಪ್ರಯತ್ನವನ್ನು ಮಾಡಿದ್ದರು ಎಂಬ ಮಾತುಗಳು ಇವೆ. ಹೀಗಾಗಿ ಅವರ ವಿರುದ್ಧ ಯಾವುದೆ ಬಗೆಯ ಫಿತೂರಿಯ ವಾದಗಳನ್ನು ಒಪ್ಪಿಕೊಳ್ಳುವುದು ಸಾಧ್ಯವಿಲ್ಲವೆಂಬುದು ನ್ಯಾಯಮೂರ್ತಿ ಯಾದವ ಅವರ ವಾಖ್ಯಾನವಾಗಿದೆ. ಈ ತೀರ್ಪಿನ ತಿರುಳಿನಲ್ಲಿ ನಾಲ್ಕು ನೂರು ವರ್ಷಗಳಿಗೂ ಮೀರಿ ಅಲ್ಲಿದ್ದ ಈ ಬಾಬ್ರಿ ಮಸೀದಿಯನ್ನು ಕೆಡವಿದವರು ಯಾರೊ ತಂಟೇಕೊರರು ಮತ್ತು ಈ ಎಲ್ಲದರಲ್ಲಿ ಯಾವುದೊ ಅಂತರರಾಷ್ಟ್ರಿಯ ಫಿತೂರಿಯೂ ಇದ್ದಂತೆ ಮೇಲ್ನೊಟಕ್ಕೆ ತೋರುತ್ತಿದೆಯೆಂಬ ಮಾತುಗಳಿವೆ.

ಇಪ್ಪತ್ತೈದು ವರ್ಷಗಳ ನಂತರ ಬಂದ ಬಾಬ್ರಿ ಮಸೀದಿ ಧ್ವಂಸ ಕುರಿತ ಈ ಬಗೆಯ ತೀರ್ಪು ನಮ್ಮ ನ್ಯಾಯಪದ್ಧತಿಯ ಮೂಲಭೂತ ಅಂಶಗಳಾದ ವಸ್ತುನಿಷ್ಠತೆ, ಕಾರ್ಯತತ್ಪರತೆ ಮತ್ತು ಎಲ್ಲದಕ್ಕೂ ಮಿಗಿಲಾಗಿ ನ್ಯಾಯದ ಅನ್ವೇಷಣಾ ಕ್ರಮಗಳನ್ನು ಪ್ರಶ್ನಿಸುವಂತಾಗಿದೆ. ಸಿಬಿಐ ನ್ಯಾಯಾಲಯ ನಮ್ಮ ಅಪರಾಧಿಕಾ ವಿಚಾರಣಾ ನ್ಯಾಯಾಂಗ ವ್ಯವಸ್ಥೆಯಲ್ಲಿ ಮೊದಲ ಮೆಟ್ಟಿಲು. ಈ ನ್ಯಾಯಾಲಯದ ಮೇಲೆ ಮೊಕದ್ಧಮೆಗೆ ಸಂಬಂಧಪಟ್ಟ ತನಿಖೆಗಳ ಎಲ್ಲ ವಿವರಗಳನ್ನು ಕರಾರುವಾಕ್ಕಾಗಿ ನಮೂದಿಸುವ ಮತ್ತು ದಾಖಲಿಸುವ ಕಾರ್ಯವನ್ನು ವಸ್ತುನಿಷ್ಠತೆಯಿಂದ ಮಾಡಬೇಕಾದ ಜವಾಬ್ದಾರಿಯಿದೆ.

ಇಲ್ಲಿಂದ ಈ ಮೊಕದ್ದಮೆ ಉಚ್ಚ ಮತ್ತು ಸರ್ವೋಚ್ಚ ನ್ಯಾಯಾಲಯದತ್ತ ತನ್ನ ಪಯಣವನ್ನು ಬೆಳೆಸಿದರೆ ಅದಕ್ಕೆ ಬೇಕಾದ ಎಲ್ಲ ಮೂಲಭೂತ ಸತ್ಯಗಳನ್ನು ಮತ್ತು ವಿವರಣೆಗಳನ್ನು ಈ ತಳಸ್ತರದ ನ್ಯಾಯಪಾಲಿಕೆಗಳು ಔಚಿತ್ಯಪೂರ್ಣವಾಗಿ ದಾಖಲಿಸದಿದ್ದರೆ ಈ ನ್ಯೂನತೆಗಳನ್ನು ಸರಿಪಡಿಸಲು ಮತ್ತೆ ಹಲವಾರು ವರ್ಷಗಳೆ ಬೇಕಾಗಬಹುದು. ಹೀಗಾದರೆ, ನಮ್ಮ ದೇಶದ ದುರ್ಬಲ ಮತ್ತು ಅಲ್ಪಸಂಖ್ಯಾತ ಜನಸಮುದಾಯಗಳಿಗೆ ನಮ್ಮ ನ್ಯಾಯಾಂಗ ವ್ಯವಸ್ಥೆ ಸಂವಿಧಾನದ ಪ್ರಕಾರ ನೀಡಬೇಕಾದ ಸ್ಫಟಿಕದಂತಹ ‘ನ್ಯಾಯ ಪರಿಪಾಲನೆ’ಯಲ್ಲಿ ನ್ಯೂನತೆಗಳು ಹುಟ್ಟಿಕೊಳ್ಳುತ್ತವೆ. ನ್ಯಾಯ ಪರಿಪಾಲನಾ ಮತ್ತು ನೀಡುವಿಕೆಯಲ್ಲಿ ನ್ಯಾಯಾಂಗದ ಪ್ರಮುಖ ಉದ್ದೇಶವೆಂದರೆ ಬರೀ “ನ್ಯಾಯ ನೀಡುವುದೊಂದೆ ಅಲ್ಲ, ಅದು ನೀಡಿದಂತೆ ಕಾಣಬೇಕು”. ಈ ಮಾತು ಸಿಬಿಐ ನ್ಯಾಯಾಲಯ ನೀಡಿದ ತೀರ್ಪಿಗೆ ಯಾವ ರೀತಿಯಲ್ಲೂ ಅನ್ವಯವಾಗುವಂತೆ ತೋರುವುದಿಲ್ಲ.

ಬಾಬ್ರಿ ಮಸೀದಿಯ ಧ್ವಂಸದ ಕುರಿತಾಗಿ ವಸ್ತುನಿಷ್ಠತೆಗೆ ವೈರುಧ್ಯದ ಅಂಶಗಳೊಂದಿಗೆ ಕೂಡಿಕೊಂಡು ಬಂದ ಸಿಬಿಐ ನ್ಯಾಯಾಲಯದ ಈ ತೀರ್ಪು ಈಗಿನ ರಾಜಕೀಯ ಕಾಲಮಾನದ ಪ್ರಕ್ರಿಯೆಯ ಪರಿಣಾಮವಾಗಿ ಬಂದದ್ದೆಂಬುದರಲ್ಲಿ ಯಾವ ಅನುಮಾನಗಳಿಲ್ಲ. ಈಗಿರುವ ರಾಜಕೀಯ ಸಮೀಕರಣ ಬದಲಾದರೆ ಈ ತೀರ್ಪಿನ ಹೂರಣವೂ ಬದಲಾಗುವುದರಲ್ಲಿ ಯಾವ ಸಂಶಯವೂ ಇಲ್ಲ. ನಮ್ಮ ತಳಸ್ತರದ ನ್ಯಾಯಾಂಗ ವ್ಯವಸ್ಥೆಯಲ್ಲಿ ಪ್ರವಾಹದ ವಿರುದ್ಧ ಈಜಬಲ್ಲ ಮತ್ತು ಅದರಲ್ಲಿ ಜಯಶೀಲರಾಗಬಲ್ಲ ಎದೆಗಾರಿಕೆ ಎಲ್ಲ ನ್ಯಾಯದಾತರಲ್ಲಿಲ್ಲ. ಅದು ವ್ಯಕ್ತಿತ್ವದ ಸಮಗ್ರತೆ ಮತ್ತು ನ್ಯಾಯ ಸಮತೋಲನದ ವಿಚಾರಗಳಿಂದ ಬರುವಂತಹುದು. ಉಚ್ಚ ಮತ್ತು ಸರ್ವೋಚ್ಚ ನ್ಯಾಯಾಧೀಶರಿಗೆ ಇರುವ ಸಂವಿಧಾನಾತ್ಮಕ ಸಂರಕ್ಷಣೆ ಮತ್ತು ಬಲ ತಳಸ್ತರದ ನ್ಯಾಯದಾತರಿಗಿಲ್ಲವೆಂಬುದನ್ನು ನಾವು ಪರಿಗಣಿಸಬೇಕು. ನಮ್ಮ ದೇಶದ ಬದಲಾಗುತ್ತಿರುವ ರಾಜಕೀಯ ಮತ್ತು ಸಾಮಾಜಿಕ ಸಂದರ್ಭದಲ್ಲಿ ಇದು ಸಹಜವೇನೊ ಎಂಬ ಪ್ರಶ್ನೆ ನಮ್ಮನ್ನೆಲ್ಲ ಕಾಡಬೇಕು.

ಸರ್ವೋಚ್ಚ ನ್ಯಾಯಾಲಯ 9ನೆಯ ನವೆಂಬರ 2019ರಲ್ಲಿ ರಾಮಮಂದಿರದ ಕುರಿತಾಗಿ ನೀಡಿದ ತನ್ನ ಸಾವಿರ ಪುಟಗಳ ತೀರ್ಪಿನಲ್ಲಿ (800ನೇ ಪ್ಯಾರಾ) ಹತ್ತಾರು ಮಾತುಗಳನ್ನು ಬಾಬ್ರಿ ಮಸೀದಿಯನ್ನು ಧ್ವಂಸ ಮಾಡಿದ್ದವರ ಕುರಿತಾಗಿ ಮತ್ತು ಆ ಘಟನಾವಳಿಗಳಿಗೆ ಕಾನೂನುಬದ್ಧವಾದ ನಿರ್ಧಾರಗಳನ್ನು ತೆಗೆದುಕೊಳ್ಳುವುದರ ಬಗ್ಗೆ ತನ್ನ ಟಿಪ್ಪಣಿಗಳನ್ನು ನೀಡಿದ್ದನ್ನು ನಾವು ಗಮನಿಸಬೇಕು. ಆದರೆ, ಇದಾವುದೂ ಸಿಬಿಐ ವಿಶೇಷ ನ್ಯಾಯಪೀಠದ ನ್ಯಾಯಮೂರ್ತಿ ಯಾದವರ ಗಮನಕ್ಕೆ ಬಂದಂತಿಲ್ಲ. ಬಂದರೂ ಅದನ್ನು ಮೀರಿ ನಡೆಯುವ ಸ್ವಾತಂತ್ರ್ಯ ಅವರಿಗೆ ನಮ್ಮ ಕಾನೂನು ವ್ಯವಸ್ಥೆಯಲ್ಲಿದೆ.

ಕೊನೆಯಲ್ಲಿ, ಇಲ್ಲಿಂದ ಈ ತೀರ್ಪಿನ ಪಯಣ ಎತ್ತ ಸಾಗಬಹುದು? ಈ ತೀರ್ಪನ್ನು ಉಚ್ಚತಮ ನ್ಯಾಯಾಲಯದಲ್ಲಿ ದಾಖಲಿಸುವ ಕೆಲಸವನ್ನು ಸಿಬಿಐ ಮುತುವರ್ಜಿಯಿಂದ ಮಾಡಬೇಕಾಗಿದೆ. ಒಂದು ವೇಳೆ ಇದಕ್ಕೆ ಸಿಬಿಐ ಮೀನಮೇಷವೆಣಿಸಿದರೆ ಉಚ್ಚ-ಸರ್ವೋಚ್ಚ ನ್ಯಾಯಾಲಯಗಳು ಸ್ವಯಂಪ್ರೇರಿತರಾಗಿ ಈ ಮೊಕದ್ದಮೆಯನ್ನು ದಾಖಲೆಗೊಳಿಸಿಕೊಳ್ಳುವದರಲ್ಲಿ ಯಾವ ಅಡಚಣಿಗಳೂ ಇಲ್ಲ. ಉಚ್ಚ ನ್ಯಾಯಾಲಯ ತನ್ನ ಮುಂದೆ ಬರುವ ಎಲ್ಲ ಪುರಾವೆಗಳನ್ನು ಮತ್ತೊಮ್ಮೆ ಸಾರ್ವಜನಿಕವಾಗಿ ದೊರೆಯುವ ಮತ್ತು ಆ ವೇಳೆಯಲ್ಲಿ ಘಟನಾ ಸ್ಥಳದಲ್ಲಿ ಇದ್ದ ಪತ್ರಕರ್ತರ  ವರದಿಗಳ ಮೇಲೆ ಪುನರಚಿಸುವ ಕಾರ್ಯವನ್ನೂ ಮಾಡಬಹುದು. ಇವೆಲ್ಲವೂ ಸಾಧ್ಯವಾಗದಿದ್ದರೆ ಮತ್ತೊಮ್ಮೆ ಈ ಎಲ್ಲ ಪುರಾವೆಗಳನ್ನು ಪುನಃ ಪರಿಶೀಲಿಸಲು ಸಿಬಿಐ ನ್ಯಾಯಾಲಕ್ಕೆ ಮತ್ತೆ ಒಪ್ಪಿಸಬಹುದು. ಆಗ ಮತ್ತೊಮ್ಮೆ ದೇಶ ಇನ್ನೊಂದು ಇಪ್ಪತೈದು ವರ್ಷಗಳ ಕಾಲ ಇನ್ನೊಂದು ತೀರ್ಪಿಗಾಗಿ ಕಾಯುವ ಕಾಯಕದಲ್ಲಿ ತೊಡಗಿಕೊಳ್ಳಬಹುದು!

*ಲೇಖಕರು ನವದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಅಂತರರಾಷ್ಟ್ರೀಯ ಕಾನೂನು ವಿಷಯದ ಪ್ರಾಧ್ಯಾಪಕರು. ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷರು.

 

Leave a Reply

Your email address will not be published.