ಬಿಜೆಪಿಯ ರಾಜಕೀಯ ಬಲವರ್ಧನೆಗಾಗಿ ಇತಿಹಾಸದ ವಿವಾದಗಳ ಬಳಕೆ

-ಬದ್ರಿ ನಾರಾಯಣ್

ಹಿಂದುತ್ವ ರಾಜಕಾರಣದ ವಿಶಿಷ್ಟ ಪ್ರಯತ್ನವೆಂದರೆ ಇತಿಹಾಸದ ಸ್ಮøತಿಪಟಲ ಸೇರಿಹೋಗಿರುವ ವಿವಾದಿತ ಅಂಶಗಳನ್ನು ಪುನಶ್ಚೇತನಗೊಳಿಸಿ, ಅವುಗಳನ್ನು ನಂಬಿಕೆಯ ತಾಣಗಳನ್ನಾಗಿಸಿ, ಸಾಂಸ್ಕೃತಿಕ ರಾಷ್ಟ್ರೀಯತೆಯ ಸಂಕೇತಗಳಾಗಿ ಬಳಸುವುದು.

ಬಿಜೆಪಿ ತನ್ನ ರಾಜಕೀಯವನ್ನು ನಿರಂತರವಾಗಿ ಮರುಶೋಧಿಸುತ್ತಿದೆ. ಈ ಮರುಶೋಧನೆಯನ್ನು ಅದರ ಅಭಿವೃದ್ಧಿ ಮತ್ತು ಸಾಂಸ್ಕೃತಿಕ ರಾಜಕಾರಣದಲ್ಲಿ ಗಮನಿಸಬಹುದು. ಸದÀ್ಯ, ಪಕ್ಷವು ಸಾಂಸ್ಕೃತಿಕ ನೆನಪುಗಳನ್ನು ಜಾಗೃತಗೊಳಿಸಿ, ಅವುಗಳ ಮೂಲಕ ಅಭಿವೃದ್ಧಿ ಪ್ರಜ್ಞೆಯನ್ನು ಪಸರಿಸಿ, ರಾಜಕೀಯ ಸನ್ನದ್ಧತೆಗೆ ಬಳಸಿಕೊಳ್ಳಲು ಪ್ರಯತ್ನಿಸುತ್ತಿದೆ. ಈ ಕಾರ್ಯತಂತ್ರಗಳು ಯಾವಾಗಲೂ ಯಶಸ್ಸು ತಂದುಕೊಡುವುದಿಲ್ಲವೆಂಬ ಮಾತೇನೋ ನಿಜ.

ಆದರೆ, ಇಂತಹ ವಿನೂತನ ತಂತ್ರಗಳ ನಿರಂತರ ಆವಿಷ್ಕಾರವು, ಹಿಂದುತ್ವ ರಾಜಕೀಯದಲ್ಲಿರುವ ಅದಮ್ಯ ಚೈತನ್ಯವನ್ನು ತೋರಿಸುತ್ತದೆ. ಸಾಮಾನ್ಯವಾಗಿ, ಒಂದು ಪಕ್ಷ ದೀರ್ಘಕಾಲ ಅಧಿಕಾರದಲ್ಲಿದ್ದರೆ ಇಂತಹ ಚೈತನ್ಯವು ನಿಧಾನವಾಗಿ ಸಾಯುತ್ತದೆ. ಆದರೆ, ಹಿಂದುತ್ವ ರಾಜಕಾರಣದ ನೆಲೆಯ ಮೂಲವನ್ನು ಸಾಂಸ್ಕೃತಿಕ ಕ್ಷೇತ್ರದಲ್ಲಿ ಕಂಡುಕೊಂಡಿದ್ದರಿಂದ, ಪಕ್ಷವು ಸಾಂಸ್ಕೃತಿಕ ವಿಷಯಗಳನ್ನು ಬಳಸುವಲ್ಲಿ ತನ್ನ ಪ್ರತಿಸ್ಪರ್ಧಿಗಳಿಗಿಂತ ಹೆಚ್ಚು ಸಮರ್ಥವಾಗಿದೆ. ಪರಿಣಾಮವಾಗಿ, ತನ್ನ ಸಿದ್ಧಾಂತವನ್ನು ಹರಡಲು ಇದು ನಿರಂತರವಾಗಿ, ಸಾಂಸ್ಕೃತಿಕ ನೆನಪುಗಳು, ಪ್ರತಿಮೆಗಳು ಮತ್ತು ಪುರಾಣಗಳನ್ನು ಬಳಸಿಕೊಳ್ಳುತ್ತಾ ಬಂದಿದೆ.

ಹಿಂದುತ್ವ ರಾಜಕೀಯವು ಪ್ರತಿಮೆಗಳು ಮತ್ತು ಇತರ ಸಾಂಸ್ಕೃತಿಕ ಸಂಕೇತಗಳ ಮೂಲಕ ಸಾಂಸ್ಕೃತಿಕ ರಾಷ್ಟ್ರೀಯತೆಯ ಕಲ್ಪನೆಗೆ ಒಂದು ಆಯಾಮ ಕಲ್ಪಿಸಿತು. ಈ ಸಾಂಕೇತಿಕ ಪಿರಮಿಡ್ಡಿನ ಅಡಿಪಾಯದಲ್ಲಿ, ರಾಮ, ಕೃಷ್ಣ ಮತ್ತು ಬುದ್ಧನಂತಹ ಧಾರ್ಮಿಕ ಚಿಹ್ನೆಗಳಿದ್ದರೆ, ಎರಡನೇ ಸ್ಥರದಲ್ಲಿ, ರಾಜಾ ಸುಹೆಲ್ದೇವ್, ಗೊಕುಲ್ ಜಾಟ್, ಬಾಲ್ಡಿಯೊ ಪಾಸೀ ಮುಂತಾದ ಮುಸ್ಲಿಂ ದಾಳಿಕೋರರನ್ನು ಸೋಲಿಸಿದ ಅಥವಾ ಹೋರಾಡಿದ ಮಧ್ಯಕಾಲೀನ ರಾಜರು ಸ್ಥಾನ ಪಡೆಯುತ್ತಾರೆ. ಸಮಾನಂತರವಾಗಿ, ಗಾಂಧಿ-ನೆಹರೂ ಕಾಲದಲ್ಲಿ ಮುಖ್ಯವಾಹಿನಿಯಿಂದ ದೂರಕ್ಕಿಟ್ಟ ರಾಷ್ಟ್ರೀಯತೆಯ ಅಂಶಗಳನ್ನು ಅನ್ವೇಷಿಸಿ, ತನ್ನ ಸಾಂಸ್ಕೃತಿಕ ರಾಷ್ಟ್ರೀಯತೆಯ ಪ್ರವಚನಕ್ಕೆ ಅವುಗಳನ್ನು ಸೇರಿಸಿಕೊಳ್ಳುತ್ತದೆ.

ಬಿಜೆಪಿ ಮತ್ತು ಅದರ ಹಿಂದುತ್ವ ಸಂಸ್ಥೆಗಳು ತಮ್ಮ ರಾಜಕೀಯ ಅಸ್ತ್ರವಾಗಿ ಎಷ್ಟು ಸಾಧ್ಯವೋ ಅಷ್ಟು ಪ್ರತಿಮೆಗಳು ಮತ್ತು ಪರಂಪರೆಗಳನ್ನು ನಿರಂತರವಾಗಿ ಸ್ವಾಧೀನಪಡಿಸಿಕೊಳ್ಳುತ್ತಿವೆ. ಹಿಂದುತ್ವ ರಾಜಕಾರಣ ಅಳವಡಿಸಿಕೊಂಡಿರುವ ಈ ಸ್ಮೃತಿಗಳ ನಿರ್ವಹಣೆಯ ಪ್ರಮುಖ ತಂತ್ರವೆಂದರೆ, ಜಾತ್ಯತೀತ ನಿರೂಪಣೆಯೊಳಗೆ ತುಳಿತಕ್ಕೊಳಗಾದ ಸಾಮಾಜಿಕ, ಸಾಂಸ್ಕøತಿಕ ಮತ್ತು ರಾಜಕೀಯ ಅಂಶಗಳನ್ನು ಅನ್ವೇಷಿಸಿ ಅವುಗಳನ್ನು ಪುನರ್ ವ್ಯಾಖ್ಯಾನಗೊಳಿಸುವುದು. ಬಿಜೆಪಿ ಮತ್ತು ಹಿಂದುತ್ವ ರಾಜಕೀಯವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅವರು ಆಯಾಯ ಪ್ರಸಿದ್ಧರ ಕ್ಷೇತ್ರಾಧಾರಿತ ಪ್ರಭಾವದ ಮೇಲೆ “ಸ್ಮೃತಿ ವಲಯಗಳನ್ನು” ಗುರುತಿಸಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತದೆ.

ಉದಾಹರಣೆಗೆ ಮಧ್ಯ ಮತ್ತು ಪೂರ್ವ ಉತ್ತರಪ್ರದೇಶದಲ್ಲಿ ಸುಹೆಲ್ದೇವ್ ಮತ್ತು ಪಶ್ಚಿಮ ಉತ್ತರಪ್ರದೇಶದಲ್ಲಿ ಗೋಕುಲ್ ಜಾಟ್. ಈ ಸ್ಮೃತಿ ವಲಯಗಳನ್ನು ಆಧರಿಸಿ, ಬಿಜೆಪಿ ನೇತೃತ್ವದ ಸರ್ಕಾರದ ಯೋಜನೆಗಳು “ಸ್ಮಾರಕ ರಾಜಕಾರಣ”ವನ್ನು ಮಾಡುತ್ತಿವೆ. ಮುಂದುವರಿದಂತೆ, ತಮ್ಮ ರಾಜಕೀಯಕ್ಕೆ ಅನುಕೂಲವಾಗುವಂತೆ ಇನ್ನೂ ಕೆಲವು ಜಾತಿ ಮತ್ತು ಸಮುದಾಯ ಆಧಾರಿತ ವೀರರು ಮತ್ತು ಪ್ರತಿಮೆಗಳನ್ನು ಅನ್ವೇಷಿಸುತ್ತಿದ್ದಾರೆ.

ಉದಾಹರಣೆಗೆ, ಮಹಾರಾಜ ಸುಹೆಲ್ದೇವ್ ಅವರ ಹೆಸರನ್ನೇ ತೆಗೆದುಕೊಳ್ಳೋಣ. ಇತ್ತೀಚಿಗೆ, ಪ್ರಧಾನಿ ನರೇಂದ್ರ ಮೋದಿಯವರು, ಮಹಾರಾಜರ ಜನ್ಮ ದಿನಾಚರಣೆಯಂದು ಚಿತ್ತೌರಾ ಸರೋವರದಲ್ಲಿ 40 ಅಡಿಗಳ ಸ್ಮಾರಕ ಮತ್ತು ಅಭಿವೃದ್ಧಿ ಯೋಜನೆಗೆ ಅಡಿಪಾಯ ಹಾಕಿದರು. ಸುಹೆಲ್ದೇವ್ ಮಧ್ಯಕಾಲೀನ ಯುಗದ ರಾಜನಾಗಿದ್ದು, ಮುಸ್ಲಿಂ ದಾಳಿಕೋರರನ್ನು ಸೋಲಿಸಿದ್ದಕ್ಕಾಗಿ ಮಧ್ಯ ಮತ್ತು ಪೂರ್ವ ಉತ್ತರಪ್ರದೇಶದ ಜನರು ನೆನಪಿಸಿಕೊಳ್ಳುತ್ತಾರೆ. ಕೆಲವು ದಿನಗಳ ಹಿಂದೆ, ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಚೌರಿ ಚೌರಾ ಹಿಂಸಾಚಾರದ ಸ್ಮರಣೆಯನ್ನು ಪುನರುಜ್ಜೀವನಗೊಳಿಸುವ ಅಭಿಯಾನವನ್ನು ಪ್ರಾರಂಭಿಸಿದರು.

ಈ ಘಟನೆಯು, ಗಾಂಧಿ ನೇತೃತ್ವದ ಸ್ವಾತಂತ್ರ್ಯ ಚಳವಳಿಯ ನಿರೂಪಣೆಯಲ್ಲಿ ಹೆಚ್ಚಿನ ಪ್ರಾಶಸ್ತ್ಯ ಪಡೆದಿಲ್ಲ. ಇತ್ತೀಚೆಗೆ, ಪ್ರಧಾನಿ ಮೋದಿ ಅಯೋಧ್ಯೆಯ ರಾಮ ಜನ್ಮಭೂಮಿ ದೇವಸ್ಥಾನದ ಶಂಕುಸ್ಥಾಪನೆ ಮಾಡಿದರು. ಪ್ರಸಕ್ತ ರೈತರ ನಿರಂತರ ಪ್ರತಿಭಟನೆಗಳ ನಡುವೆಯೂ, ಉತ್ತರಪ್ರದೇಶ ಸರ್ಕಾರ, ಮಧ್ಯಯುಗದಲ್ಲಿ ಮುಸ್ಲಿಂ ರಾಜರೊಂದಿಗೆ ಹೋರಾಡಿದ ಪಶ್ಚಿಮ ಉತ್ತರಪ್ರದೇಶದ ಗೋಕುಲ್ ಜಾಟ್ ಅವರ ಬೃಹತ್ ಪ್ರತಿಮೆಯನ್ನು ಸ್ಥಾಪಿಸಲು ಮುಂದಾಗಿದೆ. ಈ ಎಲ್ಲಾ ಚಟುವಟಿಕೆಗಳಲ್ಲಿ, ಉತ್ತರಪ್ರದೇಶದಲ್ಲಿ ಸ್ಮಾರಕ ರಾಜಕಾರಣದಲ್ಲಿ ಪಕ್ಷದ ಸಂಘಟನೆ ಮತ್ತು ಬಿಜೆಪಿ ನೇತೃತ್ವದ ಸರ್ಕಾರ ಹೇಗೆ ಒಟ್ಟಾಗಿ ಕಾರ್ಯನಿರ್ವಹಿಸುತ್ತಿವೆ ಎಂಬುದನ್ನು ಗಮನಿಸಬಹುದು.

ಒಟ್ಟಾರೆ, ಬಿಜೆಪಿಯ ಸಾಂಸ್ಕೃತಿಕ ರಾಜಕಾರಣದ ತಿರುಳೆಂದರೆ ಹಿಂದೂ ಧಾರ್ಮಿಕ ಮತ್ತು ಸಾಂಸ್ಕೃತಿಕ ಸಂಕೇತಗಳನ್ನು ಮರುಶೋಧಿಸುವುದು ಮತ್ತು ರಾಜಕೀಯ ಅನುಕೂಲಕ್ಕಾಗಿ ಹೊಸ ವ್ಯಾಖ್ಯಾನಗಳನ್ನು ಕೊಡುವುದು. ಉದಾಹರಣೆಗೆ, ಮಧ್ಯಕಾಲೀನ ಇತಿಹಾಸದಿಂದ ಹೊಸ ಸಂಕೇತಗಳನ್ನು ಅನ್ವೇಷಿಸುವುದು. ಪ್ರಸ್ತುತ ಹೆಚ್ಚಾಗಿ, ಈ ಅನ್ವೇಷಣೆ ನಡೆಯುತ್ತಿರುವುದು ಹಿಂದುಳಿದ ಜಾತಿಗಳಿಗೆ ಸಂಬಂಧಿತ ಜಾನಪದ ಸಂಸ್ಕೃತಿ ಮತ್ತು ಜನಪ್ರಿಯ ಸ್ಮೃತಿಗಳಲ್ಲಿ.   

ಭಾರತದ ಸ್ಮಾರಕ ರಾಜಕಾರಣದ ಕುರಿತಂತೆ ನಾವು ವಿಶೇಷವಾಗಿ ಗಮನಿಸುವ ಸಂಗತಿಯೆಂದರೆ, ಸ್ವಲ್ಪ ಕಾಲದ ನಂತರ, ಈ ಹೆಚ್ಚಿನ ಸ್ಮಾರಕಗಳು ಮಹತ್ವದ್ದಾಗಿ ಉಳಿಯುವುದಿಲ್ಲ. ಯಾಕೆಂದರೆ, ಯಾರೂ ಅಲ್ಲಿಗೆ ಹೋಗುವುದೂ ಇಲ್ಲ ಮತ್ತು ಪ್ರತಿಮೆಗಳ ನಿರ್ವಹಣೆ ಕುರಿತು ಯಾರೂ ಕಾಳಜಿ ವಹಿಸುವುದೂ ಇಲ್ಲ. ಸ್ಮಾರಕವಾಗಿರುವ ಈ ಪ್ರಸಿದ್ಧ ವಕ್ತಿಗಳ ಜನನ ಮತ್ತು ಮರಣ ವಾರ್ಷಿಕೋತ್ಸವಗಳಂದು ಮಾತ್ರ ಕೆಲವು ಜನರು ಈ ಜಾಗಗಳಿಗೆ ಭೇಟಿ ನೀಡಬಹುದು. ವಿಶೇಷವೆಂದರೆ, ಬಿಜೆಪಿ, ಈ ಸ್ಮಾರಕಗಳನ್ನು ಪ್ರವಾಸಿ ಆಕರ್ಷಣ ಕೇಂದ್ರಗಳಾಗಿ ನಿರೂಪಿಸಲು ಪ್ರಯತ್ನಿಸುತ್ತಿದೆ. ಈ ಸ್ಮಾರಕಗಳಿಗೆ ಪ್ರಯಾಣಿಸಲು ಸೌಲಭ್ಯಗಳನ್ನು ಸರ್ಕಾರ ಒದಗಿಸುತ್ತಿದೆ. ಪ್ರವಾಸಿಗರ ಮನರಂಜನೆ ಮತ್ತು ಸೌಕರ್ಯಗಳಿಗಾಗಿ ಉತ್ತರಪ್ರದೇಶ ಸರ್ಕಾರ ವಿವಿಧ ವ್ಯವಸ್ಥೆಗಳನ್ನು ಮಾಡಲು ಪ್ರಯತ್ನಿಸುತ್ತಿದೆ.

ಒಬ್ಬ ಹಿಂದುತ್ವ ಕಾರ್ಯಕರ್ತ ವಿವರಿಸಿದಂತೆ, ಈ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ, ವಿವಿಧ ಸಮುದಾಯಗಳ ಜನರಲ್ಲಿ ಆ ಪ್ರಸಿದ್ಧ ವ್ಯಕ್ತಿಯ ಬಗ್ಗೆ ಅಭಿಮಾನವನ್ನು ಮೂಡಿಸಲು ಪ್ರಯತ್ನಿಸುವುದು. ಇದು, ಈ ಸ್ಮಾರಕಗಳನ್ನು ಭೇಟಿ ನೀಡಲು ಪ್ರೇರೇಪಿಸುತ್ತದೆ. ಮತ್ತೊಂದು ತಂತ್ರವೆಂದರೆ, ಈ ಸ್ಮಾರಕಗಳಿಗೆ ಹೆಚ್ಚಿನ ಜನರನ್ನು ಆಕರ್ಷಿಸಲು, ಪ್ರವಾಸೋದ್ಯಮದ ಆಧುನಿಕ ಆಕರ್ಷಣೆಗಳೊಂದಿಗೆ ತೀರ್ಥಗಳ ಸಾಂಪ್ರದಾಯಿಕ ನೆನಪುಗಳನ್ನು ಜೋಡಿಸುವುದು. ಉದಾಹರಣೆಗೆ, ಬಿ.ಆರ್.ಅಂಬೇಡ್ಕರ್‍ಗೆ ಸಂಬಂಧಿಸಿದ ಪುಣ್ಯಭೂಮಿಗಳ ಸುತ್ತ “ಪಂಚ ತೀರ್ಥಗಳು” ಎಂಬ ಪರಿಕಲ್ಪನೆಯನ್ನು ಅಭಿವೃದ್ಧಿಪಡಿಸಲು ಬಿಜೆಪಿ ಕಾರ್ಯನಿರ್ವಹಿಸುತ್ತಿದೆ.

ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರೊಬ್ಬರು ಹೇಳಿದಂತೆ, ರಾಜಾ ಸುಹೆಲ್ದೇವ್ ಸ್ಮಾರಕಗಳನ್ನು ಅವರ ಮೌಲ್ಯಗಳಲ್ಲಿ ನಂಬಿಕೆ ಇರುವವರಿಗಾಗಿ ತೀರ್ಥ ಸ್ಥಾನಗಳಾಗಿ ಅಭಿವೃದ್ಧಿಪಡಿಸಲು ಪ್ರಯತ್ನಗಳಾಗುತ್ತಿವೆ.  ಈ ಹೆಮ್ಮೆಯ ಪ್ರಜ್ಞೆಯೊಂದಿಗೆ, ಈ ಸ್ಮಾರಕ ಸ್ಥಳಗಳನ್ನು ನಂಬಿಕೆಯ ಕೇಂದ್ರಗಳಾಗಿ ಪರಿವರ್ತಿಸಲು ಬಿಜೆಪಿ ಕೆಲಸ ಮಾಡುತ್ತಿದೆ. ಇನ್ನೊಬ್ಬ ಹಿಂದುತ್ವ ಕಾರ್ಯಕರ್ತ ಹೇಳುವಂತೆ, ಈ ಸ್ಮಾರಕಗಳನ್ನು ಗಮನಿಸದೆ ಇರಲು ಸಾಧ್ಯವೇ ಇಲ್ಲ. ಅವುಗಳನ್ನು ನಂಬಿಕೆಯ ಮತ್ತು ಹೆಮ್ಮೆಯ ಸ್ಥಳಗಳನ್ನಾಗಿ ಪರಿವರ್ತಿಸಲು ಪ್ರಯತ್ನಗಳಾಗುತ್ತಿವೆ. ಈ ರೀತಿ, ಉತ್ತರಪ್ರದೇಶ ಸರ್ಕಾರಕ್ಕೆ ಸಂಸ್ಕೃತಿಯು ರಾಜಕಾರಣದ ಒಂದು ಭಾಗ ಮಾತ್ರವಲ್ಲ, ಬಿಜೆಪಿಯ ಸಾಂಸ್ಥಿಕ ಕಾರ್ಯತಂತ್ರದ ಪ್ರಮುಖ ಅಂಶವೂ ಆಗಿದೆ ಎನ್ನುವುದು ಇಲ್ಲಿ ಮುಖ್ಯ. ಈ ಪ್ರಯತ್ನಗಳು ಜನರಲ್ಲಿ ಸಾಂಸ್ಕೃತಿಕ ರಾಷ್ಟ್ರೀಯತೆಯ ಭಾವನೆಯನ್ನು ನಿಧಾನವಾಗಿ ಬಲಪಡಿಸುತ್ತದೆ ಎಂಬುವುದು ಪಕ್ಷದ ನಂಬಿಕೆ.

ಅಂತಿಮವಾಗಿ, ಹಿಂದುತ್ವ ರಾಜಕಾರಣದ ವಿಶಿಷ್ಟ ಪ್ರಯತ್ನವೆಂದರೆ, ಇತಿಹಾಸದ ಅಮುಖ್ಯ ಆದರೆ, ವಿವಾದಾತ್ಮಕ ಸ್ಮೃತಿಗಳನ್ನು ಜನರಿಗೆ ಪುನರ್ ಮನನ ಮಾಡಿಸಿ, ನಂಬಿಕೆಯ ತಾಣಗಳನ್ನಾಗಿ ಸ್ಥಾಪಿಸಿ ಮತ್ತು ಅವುಗಳನ್ನು ಸಾಂಸ್ಕೃತಿಕ ರಾಷ್ಟ್ರೀಯತೆಯ ಸಂಕೇತಗಳಾಗಿ ಬಳಸುವುದು.

ಮೂಲ: ದ ಇಂಡಿಯನ್ ಎಕ್ಸ್‍ಪ್ರೆಸ್

*ಲೇಖಕರು ಅಲಹಾಬಾದ್ ನಲ್ಲಿರುವ ಜಿಬಿ ಪಂತ್ ಸಮಾಜ ವಿಜ್ಞಾನ ಸಂಸ್ಥೆಯ ನಿರ್ದೇಶಕರು.

Leave a Reply

Your email address will not be published.