ಬಿಜೆಪಿ ಮುಕ್ತ ಭಾರತ ಆಗಬೇಕಿದೆ!

-ವೈ.ಎಸ್.ವಿ.ದತ್ತ, ಜೆಡಿಎಸ್ ನಾಯಕರು.

ದೇಶದಲ್ಲಿ ಪ್ರಸ್ತುತ ಆಗಬೇಕಿರುವುದು ಕಾಂಗ್ರೆಸ್ ಮುಕ್ತ ಭಾರತವಲ್ಲ, ಬದಲಿಗೆ ಬಿಜೆಪಿ ಮುಕ್ತ ಭಾರತ. ಇದಕ್ಕೆ ಪ್ರಮುಖ ಕಾರಣ ಬಿಜೆಪಿಯ ಒಡೆದು ಆಳುವ ನೀತಿ, ವಾಮಮಾರ್ಗದ ರಾಜಕಾರಣ, ಸಮಾಜದ ಒಂದು ಸೀಮಿತ ವರ್ಗದ ಓಲೈಕೆ, ಅಲ್ಪಸಂಖ್ಯಾತರು, ಹಿಂದುಳಿದವರು, ದೀನದಲಿತರನ್ನು ಕಡೆಗಣಿಸುವ ಮೂಲಕ ದೇಶವನ್ನು ಛಿದ್ರಗೊಳಿಸಲು ಹೊರಟಿರುವುದು.

ಯಾವುದೇ ಒಂದು ಸಣ್ಣ ಅಥವಾ ದೊಡ್ಡ ಪಕ್ಷವನ್ನು ನಿರ್ನಾಮ ಮಾಡುವುದಾಗಲೀ ಅಥವಾ ಅದರ ಅಸ್ತಿತ್ವವನ್ನು ನಾಶ ಮಾಡುವ ಶಕ್ತಿ ಯಾವ ಪಕ್ಷಕ್ಕೂ ಇಲ್ಲ. ಅದು ಸಾಧ್ಯವೂ ಆಗುವುದಿಲ್ಲ. ಕಾಂಗ್ರೆಸ್ ಆಗಲಿ, ಜಾತ್ಯತೀತ ಜನತಾದಳವಾಗಲೀ -ಎಲ್ಲಾ ಪಕ್ಷಗಳಿಗೂ ತನ್ನದೇ ಆದ ಕಾರ್ಯಕರ್ತರ ಮೂಲ ಇರುತ್ತದೆ, ಅಸ್ತಿತ್ವ ಇರುತ್ತದೆ. ಚುನಾವಣೆ ಎಂದರೆ ಸೋಲು-ಗೆಲುವು ಇದ್ದದ್ದೇ. ಒಂದು ಪಕ್ಷದ ಕೈ ಮೇಲಾಗುತ್ತದೆ, ಮತ್ತೊಂದು ಪಕ್ಷಕ್ಕೆ ಸೋಲುಂಟಾಗುತ್ತದೆ. ಇದು ಪ್ರಕೃತಿಯ ನಿಯಮ.

ಪ್ರಸ್ತುತ ಕಾಂಗ್ರೆಸ್ ಪಕ್ಷ ಕೆಲವು ರಾಜ್ಯಗಳಲ್ಲಿ ಸೋಲನುಭವಿಸಿದಾಕ್ಷಣಕ್ಕೆ ಅದನ್ನು ಭಾರತದಿಂದಲೇ ಮೂಲೋತ್ಪಾಟನೆ ಮಾಡಲಾಗುತ್ತದೆ ಎಂದು ಬಿಜೆಪಿ ನಾಯಕರು ಭ್ರಮಾಲೋಕದಲ್ಲಿ ತೇಲುತ್ತಿದ್ದಾರೆ. ಯಾವುದೇ ಪಕ್ಷವನ್ನು ಮೂಲೋತ್ಪಾಟನೆ ಅಥವಾ ಅದರ ಅಸ್ತಿತ್ವವನ್ನು ದುರ್ಬಲಗೊಳಿಸುವ ಸಾಮರ್ಥ್ಯ ಮತದಾರರಿಗೆ ಮಾತ್ರವಿದೆಯೇ ಹೊರತು, ಯಾವುದೇ ಪಕ್ಷಕ್ಕೆ ಸಾಧ್ಯವಾಗುವುದಿಲ್ಲ.

ಕೋಮು ಭಾವನೆ ಕೆರಳಿಸುತ್ತಾ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಕೆಲವು ರಾಜ್ಯಗಳಲ್ಲಿ ಗೆಲುವು ಸಾಧಿಸಿದೆ ಮತ್ತು ಗೋವಾ ಹಾಗೂ ಕರ್ನಾಟಕದಂತಹ ಕೆಲವು ರಾಜ್ಯಗಳಲ್ಲಿ ವಾಮಮಾರ್ಗದಲ್ಲಿ ಅಧಿಕಾರಕ್ಕೆ ಬಂದು ಬೀಗುತ್ತಿದೆ. ಇದೇ ಗುಂಗಿನಲ್ಲಿ ಕಾಂಗ್ರೆಸ್ ಪಕ್ಷವನ್ನು ನಿರ್ನಾಮ ಮಾಡುತ್ತೇವೆಂದು ಬಿಜೆಪಿ ನಾಯಕರು ಬಾಲಿಶವಾದ ಹೇಳಿಕೆಗಳನ್ನು ನೀಡುತ್ತಿದ್ದಾರೆ.

ಆದರೆ, ಕಾಲಚಕ್ರ ತಿರುಗುತ್ತಲೇ ಇರುತ್ತದೆ ಎಂಬುದನ್ನು ಬಿಜೆಪಿ ನಾಯಕರು ಅರ್ಥ ಮಾಡಿಕೊಳ್ಳಬೇಕು. ಈ ಚಕ್ರದ ತುದಿಯಲ್ಲಿ ನಿಂತು ಬೀಗುತ್ತಿದ್ದಾರೆ. ಇಂದಲ್ಲಾ ನಾಳೆ ಅವರೂ ಸಹ ಕೆಳಗೆ ಬಂದೇ ಬರುತ್ತಾರೆ ಎಂಬುದು ವಿಧಿಲಿಖಿತವಾಗಿರುತ್ತದೆ. ಸೋಲು ಗೆಲುವು ಯಾರೊಬ್ಬರ ಆಸ್ತಿಯಲ್ಲ. ಇಂದು ಮತದಾರರು ಬಿಜೆಪಿಯನ್ನು ಗೆಲ್ಲಿಸಿದ್ದಾರೆ. ನಾಳೆ ಅವರು ಕಾಂಗ್ರೆಸ್ ಅಥವಾ ಮತ್ತಿನ್ಯಾವುದೇ ಪಕ್ಷವನ್ನು ಗೆಲ್ಲಿಸದೇ ಇರಲಾರರು.

ಹೀಗಾಗಿ ಒಂದು ರಾಜಕೀಯ ಪಕ್ಷವನ್ನು ನಿರ್ನಾಮ ಮಾಡುತ್ತೇನೆ ಎಂಬುದು ಹುಂಬುತನ ಎನಿಸುತ್ತದೆ. ನಾನು ವೈಯಕ್ತಿಕವಾಗಿ ಹೇಳಬೇಕೆಂದರೆ, ಜಾತ್ಯತೀತ ನಿಲುವುಗಳನ್ನು ಹೊಂದಿರುವ ಎಡಪಂಥೀಯ ವಾದವನ್ನು ಮೈಗೂಡಿಸಿಕೊಂಡು ಜನರ ಆಶೋತ್ತರಗಳಿಗೆ ಸ್ಪಂದಿಸುವ ಧೋರಣೆಯನ್ನು ಹೊಂದಿರುವ ಕಾಂಗ್ರೆಸ್ ನಂತಹ ಪಕ್ಷ ತನ್ನ ಅಸ್ತಿತ್ವವನ್ನು ಗಟ್ಟಿಗೊಳಿಸಿಕೊಂಡು ಮುಂದುವರಿಯಬೇಕು. ಇದರ ಮೂಲಕ ತನ್ನದೇ ರೀತಿಯಲ್ಲಿ ತತ್ತ÷್ವ, ಧೋರಣೆಗಳನ್ನು ಹೊಂದಿರುವ ಪಕ್ಷಗಳ ಜೊತೆ ಕೈಜೋಡಿಸಿ ದೇಶದಲ್ಲಿ ಮತ್ತೊಮ್ಮೆ ಪ್ರವರ್ಧಮಾನಕ್ಕೆ ಬರಬೇಕಾಗಿದೆ.

ಜಾತ್ಯತೀತ  ತತ್ತ÷್ವದ ನೆಲೆಗಟ್ಟಿನಲ್ಲಿರುವ, ಪ್ರಜಾಪ್ರಭುತ್ವಕ್ಕೆ ಬೆಲೆ ಕೊಡುವಂತಹ ಕಾಂಗ್ರೆಸ್, ಜಾತ್ಯತೀತ ಜನತಾದಳದಂತಹ ಪಕ್ಷಗಳು ಉಳಿಯಬೇಕು ಮತ್ತು ಬೆಳೆಯಬೇಕಾಗಿದೆ.

ವಂಶ ಪಾರಂಪರ್ಯ ರಾಜಕಾರಣ ಎಂಬ ಪದವನ್ನು ಹುಟ್ಟು ಹಾಕಿರುವುದೂ ಇದೇ ಬಿಜೆಪಿ. ಹಿಂದೆ ಕೆಲವು ವರ್ಷಗಳ ಹಿಂದೆ ಅಮಿತ್ ಶಾ, ನರೇಂದ್ರ ಮೋದಿಯಂತಹವರು ಕಾಂಗ್ರೆಸ್ ಪಕ್ಷದಲ್ಲಿನ ಕುಟುಂಬ ರಾಜಕಾರಣವನ್ನು ಗುರಿಯಾಗಿಟ್ಟುಕೊಂಡು ಈ ಮಾತನ್ನು ಹೇಳಿದ್ದರು. ಈಗ ಅದನ್ನೇ ಮುಂದುವರಿಸಿಕೊOಡು ಬರುತ್ತಿದ್ದಾರೆ. ಆದರೆ, ಈ ವಂಶ ಪಾರಂಪರ್ಯ ಎಂಬುದು ಬಿಜೆಪಿಯನ್ನೂ ಬಿಟ್ಟಿಲ್ಲ.

ಪ್ರಮುಖವಾಗಿ ಹೇಳಬೇಕೆಂದರೆ, ಕರ್ನಾಟಕದಲ್ಲಿ ಮುಖ್ಯಮಂತ್ರಿ ಯಾದಿಯಾಗಿ, ಅರ್ಧ ಡಜನ್‌ಗೂ ಹೆಚ್ಚು ಮಂತ್ರಿಗಳು, ಸಂಸದರ ಕುಟುಂಬ ಸದಸ್ಯರೇ ಅಧಿಕಾರ ಅನುಭವಿಸುತ್ತಿದ್ದಾರಲ್ಲಾ? ಈ ಅಂಗೈ ಹುಣ್ಣು ಬಿಜೆಪಿಯವರಿಗೆ ಕಾಣುತ್ತಿಲ್ಲವೇ?

ಈ ವಂಶ ಪಾರಂಪರ್ಯ ಎಂಬುದು ಯಾವುದೇ ಪಕ್ಷವನ್ನೂ ಬಿಟ್ಟಿಲ್ಲ. ಪಕ್ಷದಲ್ಲಿ ಶಕ್ತಿಶಾಲಿಯಾದ ಮುಖಂಡರು ತಮ್ಮದೇ ಕುಟುಂಬ ಸದಸ್ಯರನ್ನು ರಾಜಕೀಯವಾಗಿ ಬೆಳೆಸುವುದೂ ಸಹ ರಾಜಕಾರಣ ಎಂದು ಭಾವಿಸಿದ್ದಾರೆ. ಅದು ಕಾಂಗ್ರೆಸ್ ಆಗಲಿ, ಬಿಜೆಪಿಯಾಗಲೀ ಅಥವಾ ಜೆಡಿಎಸ್ ಆಗಲೀ, ಅಥವಾ ಇನ್ನಾವುದೇ ಪಕ್ಷವಾಗಲೀ, ಯಾವುದೇ ಪಕ್ಷಕ್ಕೂ ಹೊರತಾಗಿಲ್ಲ.

ಹೀಗಾಗಿ ವಂಶಪಾರOಪರ್ಯ ವಿಚಾರವನ್ನು ಪ್ರಸ್ತಾಪ ಮಾಡುವ ನೈತಿಕತೆ ಬಹುತೇಕ ಯಾವುದೇ ಪಕ್ಷಕ್ಕಾಗಲೀ ಅಥವಾ ಪಕ್ಷಗಳ ನಾಯಕರಿಗಾಗಲೀ ಇಲ್ಲ.

Leave a Reply

Your email address will not be published.