ಬಿಜೆಪಿ ಸರ್ಕಾರಗಳ ಅನೈತಿಕ ನಡೆಗೆ ಸಂಘದ ಸಮ್ಮತಿಯ ಮುದ್ರೆ?

-ಕೆ.ಪಿ.ಸುರೇಶ

ರಾಜ್ಯಾಧಿಕಾರ ಗಳಿಸಿ ಉಳಿಸಿಕೊಳ್ಳುವುದು ತನ್ನ ಅಜೆಂಡಾಕ್ಕೆ ಬಲು ಮುಖ್ಯ ಎಂದು ಆರೆಸ್ಸೆಸ್ ಭಾವಿಸಿದ ಕ್ಷಣವೇ ಅದಕ್ಕಿದ್ದ ಆತ್ಮ ಶುದ್ಧತೆ ಮಾಯವಾಯಿತು. ಈಗೇನಿದ್ದರೂ ಮುಸ್ಲಿಂ ವಿರೋಧಿ ಪ್ರಚಾರ ನಡೆಸುತ್ತಾ ಚುನಾವಣೆಯಲ್ಲಿ ಭಾಜಪವನ್ನು ಗೆಲ್ಲಿಸುವುದಷ್ಟೇ ಆರೆಸ್ಸೆಸ್ಸಿನ ಕೆಲಸ. ಅಧಿಕಾರ ಪಡೆದ ತನ್ನ ಪಕ್ಷ ಏನು ಮಾಡುತ್ತಿದೆ ಎಂಬುದನ್ನು ಮಾನಿಟರ್ ಮಾಡುವ ಕೆಲಸವನ್ನು ಆರೆಸ್ಸೆಸ್ ಎಂದೋ ಕೈಬಿಟ್ಟಾಗಿದೆ.

ಆರೆಸ್ಸೆಸ್ಸಿಗೆ ತಾನು ಪ್ರತಿಪಾದಿಸುವ “ನೈಜ ರಾಷ್ಟ್ರೀಯತೆ” (ಹಾಗೊಂದು ಇಲ್ಲ! ಆದರೂ) ಬಗ್ಗೆ ಕೂಡಾ ತುಂಬಾ ಬದ್ಧತೆ ಇರುವಂತೆ ಕಂಡಿಲ್ಲ. ಅಮೆರಿಕೆಯ ಶ್ವೇತ ಶ್ರೇಷ್ಠತೆಯ ಕ್ಲು ಕ್ಲುಕ್ಸ್ ಕ್ಲಾನ್, ಅಥವಾ ನಾಜಿವಾದ ಸಂಪೂರ್ಣ ಮನುಷ್ಯ ವಿರೋಧಿಯಾಗಿದ್ದಾಗಲೂ ಅದರ ಬೆಂಬಲಿಗರಿಗೆ ಜನಾಂಗೀಯ ಹಿರಿಮೆ ಎಂಬುದು ಸರಿ ಎಂದು ಅನ್ನಿಸಿತ್ತು. ಕರಿಯರು ಜೆನೆಟಿಕ್ ಆಗಿ ಕಳಪೆ, ಇತ್ಯಾದಿ ವಾದಗಳನ್ನು ಆ ಕಾಲದಲ್ಲೂ ಹರಿಬಿಡಲಾಗಿತ್ತು.

ನಮ್ಮಲ್ಲಿ ಇಷ್ಟೆಲ್ಲಾ ಕಷ್ಟಪಡಬೇಕಾಗಿಲ್ಲ. ನಮ್ಮ ವರ್ಣಾಶ್ರಮ ಧರ್ಮವೇ ಇದನ್ನು ಅಧಿಕೃತಗೊಳಿಸಿದೆ. ಹುಟ್ಟಿನ ಕಾರಣಕ್ಕೇ ಸಾಮಥ್ರ್ಯದಿಂದ ಹಿಡಿದು ಕೌಶಲ್ಯದವರೆಗೆ ನಿರ್ಣಯವಾಗುವ ಸಾಮಾಜಿಕ ಕಟ್ಟಳೆ ಇದೆ.   

ಆರೆಸ್ಸೆಸ್ ಯಾಕೆ ಅತ್ಯಂತ ನಿಶ್ಶಕ್ತ ಸೈದ್ಧಾಂತಿಕ ನೆಲೆಯಲ್ಲಿ ನಿಂತಿದೆ ಎಂಬುದನ್ನೂ ಗಮನಿಸಬೇಕು. ಅದು ಬಾಯುಪಚಾರಕ್ಕೆ ಹಿಂದೂ, ನಾವೆಲ್ಲ ಒಂದೂ ಅಂದಾಗ ನಮ್ಮ ಜಾತಿ ಮತ್ತು ವರ್ಣದ ಸುಪ್ರಮಸಿಯನ್ನು ಕ್ರಿಟಿಕಲಾಗಿ ಎದುರಿಸಿದ್ದೇ ಇಲ್ಲ. ಬದಲಿಗೆ ಅದನ್ನು ಪೋಷಿಸುತ್ತಾ ಬಂದಿದೆ. ಯವುದೇ ಜಾತಿ ವಿನಾಶದ ಅಥವಾ ಜಾತಿ ದಮನದ ವಿರುದ್ಧದ ಹೋರಾಟಗಳಲ್ಲಿ ಆರೆಸ್ಸೆಸ್ ಭಾಗವಹಿಸಿದ ಉದಾಹರಣೆಯೇ ಇಲ್ಲ. ಅಂಥಾ ನೂರಾರು ಪ್ರಕರಣಗಳು ಸದಾ ನಡೆಯುತ್ತಿದ್ದಾಗ ಅದು ಅಲ್ಲೆಲ್ಲೂ ಕಾಣಿಸಿಕೊಳ್ಳದೇ ಯಥಾಸ್ಥಿತಿಯ ಮುಂದುವರಿಕೆಗೆ ತನ್ನ ಸಮ್ಮತಿ ಒತ್ತಿದೆ. ಈ ಮೂಲಕ ಅದು ಈ ಯಜಮಾನಿಕೆಯ ಜಾತಿ/ ವರ್ಣಗಳ ಪ್ರೀತಿ, ಸಹಕಾರ ಗಳಿಸಿದೆ.

ಅದರ ಮೂರು ಘೋಷಿತ ಗುರಿಗಳು: 1. ಮುಸ್ಲಿಂ ದ್ವೇಷ. 2. ಕಾಂಗ್ರೆಸ್ ದ್ವೇಷ 3. ಕಮ್ಯುನಿಸಂನ ದ್ವೇಷ. ಮುಸ್ಲಿಂ ಸಮುದಾಯ ಜಾಗತಿಕವಾಗಿ ಕುರುಡು ಧರ್ಮಾಂಧತೆಯ ಗುಂಪುಗಳನ್ನು ಹುಟ್ಟು ಹಾಕುತ್ತಿದ್ದಂತೆ, ಲಿಬರಲ್ ಮುಸ್ಲಿಂರು ಬಹುಸಂಖ್ಯೆಯಲ್ಲಿದ್ದಾಗಲೂ ಅವರು ಈ ವಿಕೃತ ಬೆಳವಣಿಗೆಯನ್ನು ಕ್ರಿಯಾಶೀಲವಾಗಿ ಎದುರಿಸಲಿಲ್ಲ. ಬಹುತೇಕ ಮುಸ್ಲಿಂ ಬಾಹುಳ್ಯದ ದೇಶಗಳಲ್ಲಿ ಪ್ರಜಾಸತ್ತೆ ಜಾರಿಯಲ್ಲಿ ಇಲ್ಲ ಎನ್ನುವ ಚಾರಿತ್ರಿಕ ಅಂಶವನ್ನು ನಾವು ಗಮನಿಸಬೇಕು. ಈ ಬೆಳವಣಿಗೆ ಆರೆಸ್ಸೆಸ್ ಮತ್ತು ಅಮೆರಿಕೆಯ ಶ್ವೇತ ವರ್ಣೀಯ ರಾಜಕಾರಣಕ್ಕೆ ಅನುಕೂಲವಾಯಿತು.

ಹಾಗೇ ನಮ್ಮಲ್ಲೇ ಕಾಂಗ್ರೆಸ್ ದಶಕಗಳ ಆಡಳಿತದ ರುಚಿ ಉಂಡು ತನ್ನ ಸೈದ್ಧಾಂತಿಕ ಒಳ ತಿರುಳನ್ನೇ ಕಳೆದುಕೊಂಡು ಎಡಬಿಡಂಗಿ ಪಕ್ಷವಾಯಿತು. ಇಂದಿಗೂ ಕಾಂಗ್ರೆಸ್ಸಿಗೆ ತನಗೆ ಯಾಕೆ ಜನ ಮತ ಹಾಕಬೇಕೆನ್ನುವ ಸೈದ್ಧಾಂತಿಕ ಕಾರಣವನ್ನು ಸಶಕ್ತವಾಗಿ ಮುಂದಿಡಲು ಸಾಧ್ಯವೇ ಆಗುತ್ತಿಲ್ಲ. ಅಷ್ಟರ ಮಟ್ಟಿಗೆ ಅದಕ್ಕೊಂದು ತಾತ್ವಿಕ ಉಗ್ಗು ಆವರಿಸಿದೆ. ಇನ್ನು ಜಾಗತಿಕವಾಗಿ ಹತ್ತು ಹಲವು ಕಾರಣಗಳಿಂದ ಕಮ್ಯುನಿಸಂ ಉಡುಗಿದ್ದು ಆರೆಸ್ಸೆಸ್ಸಿಗೆ ವರವಾಯಿತು. ಇದು ಆರೆಸ್ಸೆಸ್ ದೇಶವಿಡೀ ಹಬ್ಬಲು ಕಾರಣವಾಯಿತು. ಧಾರ್ಮಿಕ ಮುಖವಾಡದ ಬಹುಸಂಖ್ಯಾತ ಯಜಮಾನಿಕೆಯ ರಾಜಕಾರಣವೊಂದನ್ನು ಸದಾ ಧ್ಯಾನಿಸುತ್ತಿದ್ದ ಆರೆಸ್ಸೆಸ್ಸಿಗೆ ಅಧಿಕಾರ ಗ್ರಹಣವೊಂದೇ ತನ್ನ ಕಾರ್ಯಸೂಚಿ ಆಯಿತು.

ನಾನು ಎಳವೆಯಲ್ಲಿ ಆರೆಸ್ಸೆಸ್ಸಿನಲ್ಲಿದ್ದೆ. ನನ್ನ ಸರೀಕರೆಲ್ಲಾ ಆರೆಸ್ಸೆಸ್ಸಿನಲ್ಲಿ ದೊಡ್ಡ ನಿಯಂತ್ರಕ ಹುದ್ದೆ ಹೊಂದಿದ್ದಾರೆ. ತನ್ನ ರಾಜಕೀಯ ಮುಖವಾದ ಭಾಜಪವನ್ನು ನಿಯಂತ್ರಿಸಿ “ಸರಿಯಾದ ಹಾದಿಯಲ್ಲಿ ಒಯ್ಯಲು” ಆರೆಸ್ಸೆಸ್ ಆಗಿಂದಾಗ್ಗೆ ತನ್ನ ಪ್ರಚಾರಕರನ್ನು ಭಾಜಪಕ್ಕೆ ನೇಮಿಸುತ್ತಿತ್ತು. ಅಷ್ಟೇ ಅಲ್ಲ, ಇಂಥವರನ್ನು ಕಣಕ್ಕಿಳಿಸಿ ಸಹಕಾರಿ ಸಂಸ್ಥೆಗಳನ್ನೂ ನಿಯಂತ್ರಿಸುತ್ತಿತ್ತು. ಇದರಿಂದ ಏನು ಪ್ರಯೋಜನ ಆಯಿತು ಗೊತ್ತಿಲ್ಲ. ಉದಾ: ನನ್ನ ಸರೀಕನಾಗಿದ್ದ ಪುತ್ತೂರಿನ ಆರೆಸ್ಸೆಸ್ ಪ್ರಚಾರಕ ಕ್ಯಾಂಪ್ಕೋ ಅಧ್ಯಕ್ಷನಾಗಿ ಬಳಿಕ ಕೆ.ಪಿ.ಎಸ್.ಸಿ. ಸದಸ್ಯನೂ ಆದ. ಕೆ.ಪಿ.ಎಸ್.ಸಿ. ಶುದ್ಧವಾದದ್ದು ಕಾಣಲಿಲ್ಲ. ಆದರೆ ಕೆಲವು ಅಭ್ಯರ್ಥಿಗಳಿಗೆ ಕೆಲಸ ಕೊಡಿಸಿದ ಎಂಬ ಮೆಚ್ಚುಗೆ ಆತನ ಬಗ್ಗೆ ಬಂತು!

ತನ್ನ ಬೆಳವಣಿಗೆ ಮತ್ತು ಹಬ್ಬುವಿಕೆಗೆ ಆರೆಸ್ಸೆಸ್ ನೆಚ್ಚಿಕೊಂಡಿದ್ದೇ ವ್ಯಾಪಾರೀ ವರ್ಗವನ್ನು, ಮತ್ತು ಮೇಲ್ಜಾತಿಗಳನ್ನು; ಅವುಗಳ ಮಠಗಳನ್ನು.  ಅದರ ವಿಸ್ತರಣೆಯಾಗಿ ಈಗ ನವ ಉದಾರವಾದದ ಫಲವಾಗಿ ಹೊಸ ಉದ್ಯಮಿಗಳು ಹುಟ್ಟಿಕೊಂಡಿದ್ದೇ ಅವರ ಆಶ್ರಯ ಪಡೆದುಕೊಂಡಿತು. ಅಷ್ಟೇಕೆ ಬಳ್ಳಾರಿ ರಿಪಬ್ಲಿಕ್ ಉಚ್ಛ್ರಾಯದಲ್ಲಿದ್ದಾಗ ಆರೆಸ್ಸೆಸ್ ನಮ್ಮ ನೆಲದ ಅಕ್ರಮ ಸೂರೆ ಬಗ್ಗೆ ಕೆಮ್ಮಲೂ ಇಲ್ಲ. ಸ್ವತಃ ಕಲ್ಲಡ್ಕದ ಭಟ್ಟರು ತಮ್ಮ ಶಾಲೆಗೆ ರೆಡ್ಡಿಯ ದೇಣಿಗೆಯನ್ನು ಅದೊಂದು ಸತ್ಕಾರ್ಯ ಎಂಬಂತೆ ವೈಭವೀಕರಿಸಿ ಸ್ವೀಕರಿಸಿದರು. ದುಡ್ಡಿಗೆ ಮೈಲಿಗೆ ಇದೆಯಾ?

ಇದೇ ಆರೆಸ್ಸೆಸ್ ಆರಂಭದಲ್ಲಿ ಗುರುದಕ್ಷಿಣೆ ಎಂಬ ಹೆಸರಿನ ಕಾಣಿಕೆ/ದೇಣಿಗೆ ಕಾರ್ಯಕ್ರಮದಲ್ಲಿ ಬಡವನ ಒಂದು ರೂಪಾಯಿ ಶ್ರೀಮಂತನ ಕೋಟಿ ರೂಪಾಯಿಗಿಂತ ಮೇಲೆ ಎಂದೆಲ್ಲಾ ತನ್ನ ಬೌದ್ಧಿಕ್ ಪ್ರಮುಖರÀ ಮೂಲಕ ಹೇಳಿಸುತ್ತಿತ್ತು.

ರಾಜ್ಯಾಧಿಕಾರ ಗಳಿಸಿ ಉಳಿಸಿಕೊಳ್ಳುವುದು ತನ್ನ ಅಜೆಂಡಾಕ್ಕೆ ಬಲು ಮುಖ್ಯ ಎಂದು ಆರೆಸ್ಸೆಸ್ ಭಾವಿಸಿದ ಕ್ಷಣವೇ ಅದಕ್ಕಿದ್ದ ಆತ್ಮ ಶುದ್ಧತೆ ಮಾಯವಾಯಿತು. ಈಗೇನಿದ್ದರೂ ಮುಸ್ಲಿಂ ವಿರೋಧಿ ಕೋಮು ಪ್ರಚಾರ ನಡೆಸುತ್ತಾ ಚುನಾವಣೆಯಲ್ಲಿ ಭಾಜಪವನ್ನು ಗೆಲ್ಲಿಸುವುದಷ್ಟೇ ಆರೆಸ್ಸೆಸ್ಸಿನ ಕೆಲಸವಾಗಿದೆ. ಗೆದ್ದು ಅಧಿಕಾರ ಪಡೆದ ತನ್ನ ಪಕ್ಷ ಏನು ಮಾಡುತ್ತಿದೆ? ಅದೇನಾದರೂ ಜನಕಲ್ಯಾಣದ ಕೆಲಸ ಮಾಡುತ್ತಿದೆಯಾ? ಪಕ್ಷಕ್ಕೊಂದು ಪ್ರಣಾಳಿಕೆ ಅಂತಿರುತ್ತಲ್ಲಾ? ಅದನ್ನಿಟ್ಟುಕೊಂಡು ಏನಾದರೂ ಒಳ್ಳೆಯ ಕೆಲಸ ಮಾಡುತ್ತಿದೆಯಾ ಎಂಬುದನ್ನು ಮಾನಿಟರ್ ಮಾಡುವ ಕೆಲಸವನ್ನು ಆರೆಸ್ಸೆಸ್ ಎಂದೋ ಕೈಬಿಟ್ಟಾಗಿದೆ. ಆರೆಸ್ಸೆಸ್ ಮತ್ತು ಅದರ ಮುಖ್ಯ ಉಪ ಸಂಘಟನೆಗಳ ಪ್ರಣಾಳಿಕೆಯಲ್ಲಿ ಪ್ರಗತಿಪರರು ಹೇಳಿಕೊಂಡು ಬಂದ ಅಂಶಗಳೆಲ್ಲಾ ಕಾಪಿ ಪೇಸ್ಟ್ ಆಗಿ ಎಂದೋ ಕೂತಿವೆ. ಪರಿಸರ ರಕ್ಷಣೆ, ಪರ್ಯಾಯ ಕೃಷಿ, ಗ್ರಾಮೀಣ ಕೈಗಾರಿಕೆಗಳ ಉತ್ಥಾನ, ಬಹುರಾಷ್ಟ್ರೀಯ ಕಂಪೆನಿಗಳ ಪ್ರವೇಶ ಮತ್ತು ಅತಿ ವ್ಯಾಪ್ತಿಗೆ ವಿರೋಧ- ಹೀಗೆ.

ಆದರೆ ಬಿಜೆಪಿ ಅಧಿಕಾರ ಹಿಡಿದಾಗ ಆರೆಸ್ಸೆಸ್ ಈ ಅಂಶಗಳ ಅನುಷ್ಠಾನದ ಬಗ್ಗೆ ದನಿಯೆತ್ತಿದ್ದಿಲ್ಲ! ಒಂದೋ ಈ ಅಧಿಕಾರ ಹಿಡಿದವರನ್ನು ನಿಯಂತ್ರಿಸುವ ಶಕ್ತಿ ಆರೆಸ್ಸೆಸ್ ಕಳೆದುಕೊಂಡಿದೆ ಎಂದು ನಾವು ಭಾವಿಸಬೇಕು; ಇಲ್ಲಾ ಆರೆಸ್ಸೆಸ್ಸಿಗೆ ಬಿಜೆಪಿ ಸರಕಾರ ಜಾರಿಗೊಳಿಸುತ್ತಿರುವ ಎಲ್ಲಾ ಕಾರ್ಯಕ್ರಮಗಳ ಬಗ್ಗೆ ಸಮ್ಮತಿ ಇದೆ ಎಂದರ್ಥ. ಇಲ್ಲವಾದರೆ ಅತ್ಯಂತ ಕುಲಗೆಟ್ಟ ಅಧಿಕಾರ ನೀಡಿದಾಗಲೂ ಚುನಾವಣೆ ಬಂದಾಗ ಯಾಕೆ ಆರೆಸ್ಸೆಸ್ ಭಾಜಪ ಪರವಾಗಿ ಪ್ರಚಾರಕ್ಕಿಳಿಯುತ್ತದೆ?

ಆರೆಸ್ಸೆಸ್ಸಿನ ನೈತಿಕ ಗಟ್ಟಿತನದ ಲಂಗೋಟಿ ಸೋದಾಹರಣ ಪೂರ್ವಕ ಉದುರಿದ್ದು ಪುತ್ತೂರಿನಲ್ಲಿ ಅದರ ಅತ್ಯಂತ ಗೌರವಾನ್ವಿತ ನಾಯಕರಲ್ಲೊಬ್ಬರಾದ ಉರಿಮಜಲು ರಾಮ ಭಟ್ಟರು ಕಲ್ಲಡ್ಕ ವಿರುದ್ಧ ಸಿಡಿದೆದ್ದಾಗ. ಕಲ್ಲಡ್ಕ, ಈ ಹಿರಿಯ ಸಜ್ಜನ ಜನಸಂಘದ ರಾಜಕಾರಣಿಯ ಭಾವ. ಆದರೆ ಕಲ್ಲಡ್ಕ ಅವರ ರಾಜಕಾರಣದ ಅನೈತಿಕತೆ ಬಗ್ಗೆ ಸ್ವತಃ ಭಾಜಪದ ಶಾಸಕರಾಗಿದ್ದ ರಾಮಭಟ್ಟರು ವಿರೋಧ ವ್ಯಕ್ತಪಡಿಸಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದಾಗ ಆರೆಸ್ಸೆಸ್ ತನ್ನೆಲ್ಲಾ ಶಕ್ತಿಯನ್ನೂ ಬಳಸಿ ಅವರನ್ನು ಸೋಲಿಸಿತು. ಬಳ್ಳಾರಿ ಧಣಿಗಳ ಹತ್ತೈವತ್ತು ಟಾಟಾ ಸುಮೋಗಳು ಪುತ್ತೂರಲ್ಲಿ ಪ್ರಚಾರಕ್ಕೆ ಪ್ರತ್ಯಕ್ಷವಾದಾಗ ಜನ ದಂಗಾಗಿದ್ದರು.

ಈ ಅಧಿಕಾರ ಮುಖ್ಯ ಎಂಬ ನಿಲುವನ್ನು ತನ್ನ ಪಕ್ಷೀಯರಲ್ಲಿ ಆರೆಸ್ಸೆಸ್ ಎಷ್ಟು ಆಳವಾಗಿ ಊರಿಸಿಬಿಟ್ಟಿತ್ತೆಂದರೆ ರಾಮ ಭಟ್ಟರಿಗೆ ಐದು ಸಾವಿರ ಮತವೂ ಬರಲಿಲ್ಲ. ಅಂದರೆ ಆರೆಸ್ಸೆಸ್ ತನ್ನ ಮತದಾರರನ್ನೂ ನೈತಿಕವಾಗಿ ಕಿಲುಬುಗೊಳಿಸಿತ್ತು. ಇಂದೀಗ ಭಾಜಪದ ಐಟಿ ಸೆಲ್ ಸಹಿತ ಇತರ ಭಕ್ತಾದಿಗಳ ಪಡೆ ಅಟ್ಟಹಾಸ ಮಾಡುತ್ತಿರುವುದರ ಹಿಂದೇ ಆರೆಸ್ಸೆಸ್ಸಿನ ಈ ಕೀ ಕೆಲಸ ಮಾಡಿದೆ. ಭಾಜಪದ ಮತದಾರರೇ ಪಕ್ಷದ ಅಂತಸ್ಸಾಕ್ಷಿಯಂತಿದ್ದ ಈ ವಯೋವೃದ್ಧರನ್ನು ಸೋಲಿಸಿ ಅಂತಸ್ಸಾಕ್ಷಿಗೆ ಜೀವಂತ ಸಮಾಧಿ ಕಟ್ಟಿದರು. ಇಡೀ ದೇಶದಲ್ಲಿ ನಡೆದಿದ್ದು ಇದರ ಪುನರಾವರ್ತನೆ ಅಷ್ಟೇ.

ಆಪರೇಶನ್ ಕಮಲದಂಥಾ ವಿಕೃತ ಅನೈತಿಕ ಕೆಲಸಕ್ಕೆ ಭಾಜಪ ಕೈ ಹಾಕಿದಾಗ ಆರೆಸ್ಸೆಸ್ ತೆಪ್ಪಗಿತ್ತು ಎಂಬುದು ಏನನ್ನು ತೋರಿಸುತ್ತದೆ? ಮಾತೃ ಸಂಘಟನೆ ಎಂಬ ಹೆಮ್ಮೆಯನ್ನು ಎದೆಗೇರಿಸಿ ಓಡಾಡುವಾಗ ಈ ರಾಜಕಾರಣದ ಗಬ್ಬು ವಾಸನೆ ಮೈ ತುಂಬಾ ಅತ್ತರಿನ ಹಾಗೆ ಹರಡಿ ಕೂತಿದ್ದು ಆರೆಸ್ಸೆಸ್ಸಿಗೆ ಗೊತ್ತಿದೆ.

ಈಗ ಆರೆಸ್ಸೆಸ್ಸಿನ ಕಾರ್ಯಸೂಚಿಯ ಪ್ರಮೇಯ ಸರಳ ಮತ್ತು ನೇರ. ಬಿಜೆಪಿ ಅಧಿಕಾರಕ್ಕೆ ಬಂದು ಕಾರ್ಪೋರೇಟ್ ಹಿತಾಸಕ್ತಿಯ ಏನೇ ರಾಜಕಾರಣ ಮಾಡಿದರೂ ಅದಕ್ಕೆ ಸಮ್ಮತಿ ಸೂಚಿಸುವುದು. ಇದಕ್ಕೆ ಪ್ರತಿಯಾಗಿ ಈ ಸರಕಾರ ತನ್ನ ಸಾಂಸ್ಕøತಿಕ, ಸಾಮಾಜಿಕ ಯಜಮಾನಿಕೆಯ ಕಾರ್ಯಸೂಚಿಗೆ ಕ್ರಿಯಾಶೀಲ ಬೆಂಬಲ ಮತ್ತು ರಕ್ಷಣೆ ಪಡೆಯುವುದು.

ಇದು ಪರಸ್ಪರ ಒಪ್ಪಿತ ನಿಲುವು. ಆದ್ದರಿಂದಲೇ ಮಂದಿರ, ಗೋವು, ಸಂಸ್ಕøತಿಯ ಹೆಸರಿನಲ್ಲಿ ವೈಚಾರಿಕತೆಯನ್ನು ದಮನಿಸುವುದು ಇತ್ಯಾದಿ ಕಾರ್ಯಸೂಚಿಯನ್ನು ಚಾಲ್ತಿಯಲ್ಲಿಟ್ಟು ಆರೆಸ್ಸೆಸ್ ಕೆಲಸ ಮಾಡುತ್ತಿದೆ. ಅತ್ತ ಸರಕಾರ ಕಾರ್ಪೋರೇಟ್ ಹಿತಾಸಕ್ತಿಯನ್ನು ಜಾರಿಗೆ ತರಲು ಶ್ರಮಿಸುತ್ತಿದೆ. ಇವೆರಡರ ಮಧ್ಯೆ ವೈರುಧ್ಯ ಇಲ್ಲ. ಇತಿಹಾಸದಲ್ಲೂ ಧಾರ್ಮಿಕ ಯಜಮಾನಿಕೆಯ ಹವಣಿಕೆ ಹೊಂದಿದ್ದವರಿಗೆ ಬಂಡವಾಳಶಾಹಿ/ ವ್ಯಾಪಾರಿ ವರ್ಗದ ಬಗ್ಗೆ ಆಕ್ಷೇಪ ಏನೂ ಇರಲಿಲ್ಲ. ನಮ್ಮಲ್ಲಿ ಈ ವರ್ಗ ವರ್ಣಾಶ್ರಮದ ಭಾಗವಾಗಿರುವ ಕಾರಣ ಸಮಸ್ಯೆಯೂ ಇಲ್ಲ.

ಕಮ್ಯುನಿಸಂ ಬಗ್ಗೆ ಇರುವ ದ್ವೇಷ ಮೂಲತಃ ಸಮಾಜವಾದೀ ಆಶಯಗಳ ಬಗ್ಗೆ ಇರುವ ದ್ವೇಷ.  ಆದ್ದರಿಂದಲೇ ಸಮುದಾಯದ ಮೂಲಭೂತ ಆಶಯಗಳಾದ ನೆಲ, ಜಲ, ಆಹಾರ, ಶಿಕ್ಷಣ, ಸಮಾನತೆ, ಭ್ರಾತೃತ್ವ ಇವೆಲ್ಲಾ ಆರೆಸ್ಸೆಸ್ಸಿನ ಕಾರ್ಯಸೂಚಿಯ ಭಾಗವಾಗಲು ಸಾಧ್ಯವಿಲ್ಲ. ಇಂಥಾ ಕಾರ್ಯಸೂಚಿ ಮುನ್ನೆಲೆಗೆ ಬಂದಾಗಲೆಲ್ಲಾ ಆರೆಸ್ಸೆಸ್ ಹಿಂದಡಿ ಇಡಬೇಕಾಗಿ ಬಂದಿತ್ತು. ಆದ್ದರಿಂದ ಇವನ್ನು ಸಕ್ರಿಯವಾಗಿ ಬಗ್ಗು ಬಡಿಯುವುದೂ ಆರೆಸ್ಸೆಸ್ಸಿನ ಅನಿವಾರ್ಯ ಹೆಜ್ಜೆಯೂ ಆಗಿದೆ.

ನೈತಿಕತೆಗೆ ತಿಲಾಂಜಲಿ ಕೊಡದೇ ಯಜಮಾನಿಕೆಯನ್ನು ಸ್ಥಾಪಿಸುವುದು ಸಾಧ್ಯವಿಲ್ಲ. ಈಗ ಆರೆಸ್ಸೆಸ್ ಒಂದು ತಲೆಮಾರಿನ ಮೇಲೆ ಸಾಧಿಸಿರುವ ಮಾನಸಿಕ ಹಿಡಿತವೂ ಆತ್ಯಂತಿಕವಾಗಿ ಉಳಿಯಲಾರದು. ಯಾಕೆಂದರೆ ವರ್ತಮಾನದ ಮಥನ ಇಂಥಾ ಅಲ್ಪಕಾಲೀನ ವಿಸ್ಮøತಿಯನ್ನೂ ಸಮ್ಮೋಹನವನ್ನೂ ಇಲ್ಲವಾಗಿಸುತ್ತದೆ. ಆದರೆ ಅಂಥಾ ಒಂದು ಪ್ರಜ್ಞೆ ಮರಳಿದಾಗ ದೇಶದ ಮನುಷ್ಯ ಸಂಬಂಧದ ಮೇಲೆ ತೀವ್ರ ಘಾಸಿಯಾಗಿರುತ್ತದೆ.

ಜರ್ಮನಿಯಲ್ಲಿ ನಾಜೀ ವಾದ ನಾಶವಾದಾಗ ಸತ್ತು ಹೋದ ಲಕ್ಷಾಂತರ ಯೆಹೂದಿಗಳ ಜೀವ ಮರಳಿ ಬರಲಿಲ್ಲವಷ್ಟೇ.

Leave a Reply

Your email address will not be published.