ಬಿಡಿ ಘಟನೆಯಾಗಿ ಉಳಿಯುವ ಪಿಡುಗು!

ಒಂದು ಅನುಭವವು ಗಂಭೀರ ಸಾಹಿತ್ಯದಲ್ಲಿ ವಸ್ತುವಾಗಿ ಬರಬೇಕಾದರೆ ಅದು ನಮ್ಮನ್ನು ತೀವ್ರವಾಗಿ ಕದಕಿರಬೇಕು. ನಮ್ಮ ಪ್ರಜ್ಞೆಯ ಎಲ್ಲಾ ಪಾತÀಳಿಗಳನ್ನು ಅದು ಹೊಕ್ಕಿರಬೇಕು. ಹಾಗೆ ಆಗಲು ಸೂಕ್ಷ್ಮವಾದ ಸಂವೇದನೆ ಬೇಕು. ಸಾಮಾಜಿಕ ನೈತಿಕ ಪ್ರಜ್ಞೆ ಬೇಕು.

ಶ್ರೀನಿವಾಸ ವೈದ್ಯರ ‘ಹಳ್ಳ ಬಂತು ಹಳ್ಳ’ ಕಾದಂಬರಿಯಲ್ಲಿ ಊರಿಗೆ ಪ್ಲೇಗ್ ಬಂದ ಹೊಸತರಲ್ಲಿ ಜನರ ಪ್ರತಿಕ್ರಿಯೆ ಹೀಗಿರುತ್ತದೆ. “ಇದೇನು ಬಿಡು ದಸರೇ, ದೀಪಾವಳಿ ಹಬ್ಬದ ಹಂಗೆ ವರಷಾ ಬರೂದ”.

ಈ ತಾತ್ಸಾರಕ್ಕೆ ಕಾರಣವನ್ನು ನಿರೂಪಕರು ಹೀಗೆ ಕೊಡುತ್ತಾರೆ:

“ಆವಾಗ ಕೆಲವು ವರ್ಷ ನಿಯಮಿತವಾಗಿ ವರ್ಷಂಪ್ರತಿ ಬರುವ ಹಬ್ಬ, ಹುಣ್ಣಿಮೆ ಹಂಗೆ, ಪ್ಲೇಗು, ಕಾಲರಾ ಬರುತ್ತಿದ್ದವು”.

ಭಾರತದ ಬ್ರಿಟಿಷ್ ಆಳ್ವಿಕೆಯ ಇತಿಹಾಸಕಾರರು ವಿವರಿಸುವಂತೆ ಇದು ನಿಜವೂ ಆಗಿತ್ತು. ಬಹುಪಾಲು ಬರಗಾಲಗಳು ನಿಸರ್ಗದಲ್ಲಿನ ಏರುಪೇರುಗಳಿಂದ ಬಂದರೂ ಆಡಳಿತದ ಕ್ರೂರ ನಿರ್ವಹಣೆಯಿಂದಾಗಿ ಅವು ಮನುಷ್ಯ ನಿರ್ಮಿತ ಬರಗಳೆ ಆಗಿದ್ದವು. ‘ಕಾಲರಾ’ ಪಿಡುಗಂತೂ ಅತ್ಯಂತ ಸಾಮಾನ್ಯವಾಗಿತ್ತು. ಕುಂಭಮೇಳಗಳು, ಜಾತ್ರೆಗಳು ಇವುಗಳಿಂದಾಗಿ ಕಾಲರಾ ಪಿಡುಗು ಕಾಡಬೆಂಕಿಯಂತೆ ಹರಡಿ ಲೆಕ್ಕವಿಲ್ಲದಷ್ಟು ಜನ ಸಾಯುತ್ತಿದ್ದರು.

ಮಹಾಶ್ವೇತಾದೇವಿಯವರ ‘ರುಡಾಲಿ’ ಕೃತಿಯಲ್ಲಿ ಒಂದು ದಾರುಣವಾದ ಸನ್ನಿವೇಶ ಬರುತ್ತದೆ. ಬರಿ ಕಷ್ಟಗಳನ್ನೇ ಕಂಡಿದ್ದ ಶನಿಚರಿ ಮತ್ತು ಅವಳ ಗಂಡ ಸ್ವಲ್ಪ ನೆಮ್ಮದಿ ಸಿಕ್ಕು ಜಾತ್ರೆಗೆ ಬರುತ್ತಾರೆ. ಅಲ್ಲಿ ದೇವರ ವಿಗ್ರಹಕ್ಕೆ ಎರೆದ ಹಾಲನ್ನೇ ಪ್ರಸಾದವಾಗಿ ಸ್ವೀಕರಿಸಿದ ಅವಳ ಗಂಡನಿಗೆ ಕಾಲರಾ ಬರುತ್ತದೆ. ಸರಕಾರದವರು ಒಂದು ಬೇಲಿ ಹಾಕಿಸಿ ಅದರ ಆವರಣದೊಳಗೆ ಕಾಲರಾ ಬಂದಿರುವವರನ್ನು ಕ್ವಾರಂಟೈನ್ ಮಾಡುತ್ತಾರೆ. ಅಲ್ಲಿಂದ ಅವನು ಹೊರಗೆ ಬರುವುದು ಶವವಾಗಿಯೆ. ಶವಸಂಸ್ಕಾರಕ್ಕೂ ದುಡ್ಡಿರದ ಶನಿಚರಿಯ ಕಷ್ಟಪರಂಪರೆಗಳು ಮತ್ತೆ ಆರಂಭವಾಗುತ್ತವೆ. ಕೃತಿಯಲ್ಲಿ ಬರುವ ಕೆಲವೇ ಸಾಲುಗಳ ವರ್ಣನೆಯನ್ನು ನೋಡಿದರೆ ಇಂದಿನಂತೆ ಆಗಲೂ ಅಂಧಭಕ್ತಿ ಮತ್ತು ನೈರ್ಮಲ್ಯವಿಲ್ಲದಿರುವುದರಿಂದ ಪಿಡುಗು ಹಬ್ಬುತ್ತದೆ. ಆದರೆ ಶನಿಚರಿಯಂಥ ಕಡುಬಡವಳು, ಕೆಳಜಾತಿಯವಳಿಗೆ ಆಗುವ ಅನೇಕ ದುರ್ಘಟನೆಗಳ ನಡುವೆ ಇದೊಂದು.

ನನಗನ್ನಿಸುವಂತೆ ಈಗ ನೂರಾರು ಮೈಲು ನಡೆಯುತ್ತ ಮನೆಯ ಕಡೆಗೆ ಹೊರಟಿರುವ ವಲಸೆ ಕಾರ್ಮಿಕರ ಮನಸ್ಥಿತಿಯೂ ಶನಿಚರಿಯ ಮನಸ್ಥಿತಿಯಂತೇ ಇರುತ್ತದೆ. ನಮಗೆ ಮಧ್ಯಮ ವರ್ಗದವರಿಗೆ ಕರೋನಾ ಮನುಷ್ಯ ಇತಿಹಾಸದಲ್ಲಿಯೇ ವಿಶಿಷ್ಟವಾದುದು; ಅದು ನಮ್ಮ ಕಾಲದಲ್ಲಿ ನಮ್ಮ ಊರಿಗೆ ಬರುತ್ತದೆ ಎನ್ನುವುದು ಬಹುದೊಡ್ಡ ದುರಂತವಾಗಿ ಕಾಣುತ್ತದೆ. “ನಾವೇ ಏಕೆ” (why us?) ಎನ್ನುವುದು ನಮ್ಮ ವ್ಯಕ್ತಿನಿಷ್ಠತೆಯ ಮಾನಸಿಕ ಅಭಿವ್ಯಕ್ತಿಯಾಗಿದೆ. ವೈದ್ಯರ ಕಾದಂಬರಿಯ ನವಲಗುಂದದ ಜನರಿಗೆ ಪಿಡುಗುಗಳು ವರ್ಷಕ್ಕೊಮ್ಮೆ ಬರುವ ಹಬ್ಬದ ಹಾಗೆ ಸಾಮಾನ್ಯವಾಗಿವೆ.

ಕಾದಂಬರಿಯಲ್ಲಿ ಬರುವ ಪ್ಲೇಗ್ ಮಹಾಮಾರಿ ಊರನ್ನೇ ಸ್ಮಶಾನವಾಗಿಸಿಬಿಡುತ್ತದೆ. ಜನ ಊರಿಂದ ದೂರ ತಗಡಿನ ಶೆಡ್‌ಗಳಲ್ಲಿ ವಾಸಮಾಡಬೇಕಾಗುತ್ತದೆ. ಯಾವುದೇ ಪಿಡುಗು ಬಂದರೂ ಅದು ಸಹನೆ ಹಾಗೂ ಜಿಗುಟುತನದ ಪರೀಕ್ಷೆಯಾಗಿರುತ್ತದೆ. ಃಚಿಣಣಟe oಜಿ ಟಿeಡಿves ಅನ್ನುತ್ತಾರಲ್ಲ ಹಾಗೆ. ಕಾದಂಬರಿಯ ಎರಡು ಅದ್ಭುತವಾದ ಚಿತ್ರಗಳು ಮನುಷ್ಯರಲ್ಲಿ ಇಂಥ ಸಂದರ್ಭದಲ್ಲಿ ಸಾಕ್ಷಾತ್ಕಾರವಾಗುವ ಅದ್ಭುತ ಶಕ್ತಿಗಳ ಪವಾಡವನ್ನು ಮನದಟ್ಟು ಮಾಡಿಕೊಡುತ್ತವೆ. ಕಾದಂಬರಿಯ ಪ್ರಧಾನಪಾತ್ರವಾಗಿರುವ ವಾಸುದೇವಾಚಾರ್ಯರು ಮಹಾಸಿಡುಕಿನ, ತಿರಸಸ್ಟ ಮನುಷ್ಯ. ಅವಸರದಲ್ಲಿ ಶೆಡ್ಡಿಗೆ ಬಂದಿದ್ದರಿಂದ ಅವರು ತಮ್ಮ ನಾಟಿ ಮತ್ತು ಆಯುರ್ವೇದ ಔಷಧಿಗಳನ್ನು ಖಾಲಿ ಮಾಡಿಕೊಂಡಿದ್ದಾರೆ. ಹೀಗಾಗಿ ವಿಪರೀತ ಹೊಟ್ಟೆನೋವಿಂದ ನರಳುತ್ತ ಬಂದವನು “ಔಷಧಿ ಕೊಡರಿ, ಇಲ್ಲದಿದ್ದರ ವಿಷಾ ಕೊಡರಿ” ಅಂದಾಗ ಆಚಾರ್ಯರು “ವಿಷಾ ಇದ್ದರ ನಿನಗ್ಯಾಕ ಕೊಡತಿದ್ದೆ, ನಾನs ತಗೋತಿದ್ದೆ” ಅನ್ನುತ್ತಾರೆ. ಅನಿವಾರ್ಯವಾಗಿ ತೀರ್ಥವನ್ನು ಕೊಡುತ್ತಾರೆ. ಅದೇ ಔಷಧಿಯೆಂದು ಎಲ್ಲರೂ ದುಂಬಾಲು ಬೀಳುತ್ತಾರೆ. ಕೇಳಲು ಬಂದವರಿಗೆ “ರಡೇ ಮಕ್ಕಳಾ” ಎಂದು ಬಯ್ಯುವ ಆಚಾರ್ಯರು ತಾವು ಕೊಡುತ್ತಿರುವುದು ಔಷಧಿಯಲ್ಲವೆನ್ನುವ ಒಳತೋಟಿಯ ನಡುವೆ ತೀರ್ಥವನ್ನು ಯಾವ ನಂಬಿಕೆಯಿಂದ ಕೊಡುತ್ತಿದ್ದಾರೆನ್ನುವುದು ಅವರಿಗೂ ಗೊತ್ತಿಲ್ಲ.

ಕೊರೋನಾದಿಂದಾಗಿ ಇಂದು ಜಗತ್ತು ಒಂದಾಗುತ್ತದೆ; ಮತ್ತೆ ನಾವು ಸಮುದಾಯ ಜೀವಿಗಳಾಗುತ್ತೇವೆ ಎನ್ನುವ ಮೈಲುದ್ಧ ಬರಹಗಳನ್ನು ಪ್ರತಿದಿನ ಓದುತ್ತಿದ್ದೇನೆ. ಇದೆಲ್ಲಾ ಸುಳ್ಳು, ಕರೋನಾ ಪಿಡುಗು ದೇವರೇ ಕಳಿಸಿದ ವರವೆಂದುಕೊಂಡು ಜಗತ್ತಿನ ಎಲ್ಲಾ ಬಲಪಂಥೀಯ ಸರಕಾರಗಳು ಮನುಷ್ಯರನ್ನು ಮತ್ತು ಪ್ರಜಾಪ್ರಭುತ್ವöವನ್ನು ನಿರ್ದಯವಾಗಿ ತುಳಿದುಹಾಕುತ್ತಿವೆ. ಬಂಡವಾಳಶಾಹಿಗೆ ದೇಶವನ್ನು ಮಾರಲು ಬೇಕಾದ ಎಲ್ಲಾ ಕಾನೂನುಗಳನ್ನು ಲಾಕ್‌ಡೌನ್‌ನಲ್ಲಿ ಜಾರಿಗೆ ತರುತ್ತಿವೆ. ಕೊರೋನಾ ನಂತರ ಶ್ರಮಿಕರಿಗೆ, ರೈತರಿಗೆ ಬಡವರಿಗೆ ಜೀವನವೇ ನರಕವಾಗುತ್ತದೆ. ವೈರಸ್‌ನಿಂದ ಸಾಯಲಿಲ್ಲವಲ್ಲವೆಂದು ಹಲುಬುವಂತಾಗುತ್ತದೆ. ನನಗೆ ಈ ವಿಷಯದಲ್ಲಿ ಯಾವ ಅನುಮಾನವೂ ಇಲ್ಲ. ಆದರೆ ವೈದ್ಯರ ಕಾದಂಬರಿಯ ಕತೆ ನಡೆಯುವುದು ನಿರೂಪಕರೇ ಹೇಳುವಂತೆ “ದುಡ್ಡಿನ ಕಾಲ” ಬರುವ ಮೊದಲು. ಹೀಗಾಗಿ ಆಚಾರ್ಯರ ಕುಟುಂಬದ ವೆಂಕಟೇಶ್, ಹಳಬರ ಹುಚ್ಚ ಮತ್ತು ಇತರ ಕೆಲವರು ಬಿಟ್ಟುಬಂದ ಊರಿನಲ್ಲಿ ಸತ್ತವರ ಕೊಳೆತ ಹೆಣಗಳನ್ನು ಹೊರತಂದು ಯಾವ ಧರ್ಮ, ಸಂಸ್ಕಾರ ಕೇಳದೇ ಶವಸಂಸ್ಕಾರ ಮಾಡುತ್ತಾರೆ. ಕೊನೆಗೆ ಅವರೇ ಪ್ಲೇಗ್‌ಗೆ ಬಲಿಯಾಗುತ್ತಾರೆ. ಪ್ಲೇಗ್‌ನ ಕಳವಳದಲ್ಲಿ ಜಗಳವಾಡುವ ಜನರ ಜೊತೆಗೆ ವೆಂಕಟೇಶ್‌ನಂಥವರು ಇದ್ದ ಆ ಕಾಲದ ಊರುಗಳು ಇವು.

ಕಾರಂತರ ‘ಮರಳಿ ಮಣ್ಣಿಗೆ’ ಕಾದಂಬರಿಯಲ್ಲಿ ಗಣಗುದ್ದ್ಡಿಗೆಯೆನ್ನುವ ಹೊಸ ಬೇನೆಯು ಊರು ಊರುಗಳನ್ನೇ ತಿಂದು ಹಾಕುತ್ತದೆ. ಹೊರ ಜಗತ್ತಿನಿಂದ ದೂರವೇ ಉಳಿದಿರುವ ಕೋಡಿಯಲ್ಲಿ ಅದು ಯಾವ ಜ್ವರ ಯಾವ ಬೇನೆ ಎಂದು ಹೇಳುವವರಿಲ್ಲ. ನಾಗವೇಣಿ ಸತ್ಯಭಾಮೆಯರಿಗೆ ನೆರೆಹೊರೆಯ ಮನೆಗಳ ರೋದನದಿಂದಲೇ ರೋಗದ ಭೀಕರತೆ ಅರಿವಿಗೆ ಬರುತ್ತದೆ. ಸತ್ಯಭಾಮೆ ತೀರಿಹೋದಾಗ ನಾಗವೇಣಿಗೆ ಎಚ್ಚರವೇ ಬಂದಿರುವುದಿಲ್ಲ. ಮತ್ತೆ ಅವಳ ಸಹಾಯಕ್ಕೆ ಬರುವವರು ಅವಳ ಚಿಕ್ಕಪ್ಪ ಮತ್ತು ಅವಳ ತೌರುಮನೆಯವರೆ. ಅತ್ಯಂತ ಸೂಕ್ಷ್ಮಮವಾಗಿ ಕಾರಂತರು ಈ ಪಿಡುಗು ನಾಗವೇಣಿ ಮತ್ತು ರಾಮನ ಬದುಕಿನಲ್ಲಿ ತರುವ ಬದಲಾವಣೆಗಳನ್ನು ನಿರೂಪಿಸುತ್ತಾರೆ, ಅವರದೇ ಆದ ಮಿತವಾದ ಭಾಷೆಯಲ್ಲಿ. ಓದಿದಾಗ ಮತ್ತೆ ಅನ್ನಿಸುವುದು ಅದೇ.

ಮುಖ್ಯವಾದದ್ದು ನಮ್ಮ ಸ್ವಂತ ಬದುಕಿನ ನಮ್ಮದೇ ಆದ ನಂಬಿಕೆ, ನೈತಿಕತೆ ನಡವಳಿಕೆಗಳಲ್ಲವೆ? ನಾಗವೇಣಿ ಸ್ವಾಭಿಮಾನಿ. ತನ್ನ ಕುಟುಂಬದವರ ಪ್ರೀತಿ ಒಪ್ಪುತ್ತಾಳೆಯೆ ಹೊರತು ಸಹಾಯವನ್ನಲ್ಲ, ಸರಸೋತಿ, ಪಾರೋತಿ, ಸತ್ಯಭಾಮ, ನಾಗವೇಣಿ ಇವರಲ್ಲಿ ತಾವು ಬಯಸಿದ ಎಲ್ಲಾ ಮೌಲ್ಯಗಳನ್ನು ಅದೆಷ್ಟು ಧಾರಾಳವಾಗಿ ಕಾರಂತರು ಎರೆದುಬಿಟ್ಟಿದ್ದಾರೆಂದರೆ ವೈದೇಹಿ ಹೇಳಿದಂತೆ ಕುವೆಂಪು ಕಾರಂತರೇ ನಮ್ಮ ಪ್ರಧಾನ ಮಹಿಳಾ ಬರಹಗಾರರು. ಆಮೇಲೆ ಬಂದ ಲಚ್ಚ ತಾಯಿ ಸತ್ಯಭಾಮೆಯ ಕ್ರಿಯೆಗಳಿಗೆ ಬ್ರಾಹ್ಮಣರಿಗೆ ದಾನಕೊಟ್ಟು ಮತ್ತೆ ಹೊರಟುಹೋಗುತ್ತಾನೆ.

‘ಭುಜಂಗಯ್ಯನ ದಶಾವತಾರಗಳು’ ಕಾದಂಬರಿಯಲ್ಲಿ ಶ್ರೀಕೃಷ್ಣ ಆಲನಹಳ್ಳಿ ಒಂದು ದೀರ್ಘವಾದ ಅಧ್ಯಾಯದಲ್ಲಿ ಮಾದಳ್ಳಿಗೆ ಕಾಲರಾ ಪಿಡುಗು ಬಂದದ್ದನ್ನು ವರ್ಣಿಸಿದ್ದಾರೆ. ಯಾವ ಸವಾಲಿಗೂ ಹೆದರದ ಭುಜಂಗಯ್ಯನ ಎದೆಯೂ ನಡುಗುವಂಥ ಭೀಕರವಾದ ಕಾಲರಾ ಅದು. ಇಡೀ ಕಾದಂಬರಿಯಲ್ಲಿ ಮಾದಳ್ಳಿಯ ಜನ ವಿನಾಕಾರಣವಾಗಿ ಭುಜಂಗಯ್ಯನನ್ನು ಹಿಂಸಿಸುತ್ತಾರೆ. ಅಕಾರಣವಾದ ಸೇಡು ತೀರಿಸಿಕೊಳ್ಳುತ್ತಾರೆ. ಆದರೆ ಅವನಿಗೆ ಮಾದಳ್ಳಿ ಕೂಡ ಬಿಡಿಸಲಾಗದಂಥ ನಂಟು, ಅದು ಅವನ ಶಾಪ ಹಾಗೂ ಗೀಳು. ಈ ಪಿಡುಗಿನ ಸಂದರ್ಭದಲ್ಲಿಯೂ ಅವನಿಗೆ ಕಾಣುವುದು ಹಳ್ಳಿ, ಅಲ್ಲಿಯ ಜನ ಹಾಗೂ ಕುಟುಂಬಗಳೇ.

ಜಾತಿಕಾರಣಗಳಿಗಾಗಿ ಊರನ್ನೇ ಸುಡಲು ತೈಯಾರಿರುವ ಜನರು ಈಗ ಕೇವಲ ಹೆಣಗಳಾಗಿದ್ದಾರೆ. ಬರಗಾಲದಿಂದ ಕಳೇಬರಗಳಂತಾಗಿರುವವರು ಈಗ ಕಾಲರಾ ಪಿಡುಗಿನಲ್ಲಿ ಪಡುವ ನೋವನ್ನೂ ಹೇಳುವ ಸ್ಥಿತಿಯಲ್ಲಿಲ್ಲ. ಭುಜಂಗಯ್ಯ ಜನರ ಮನವೊಲಿಸಿ ದೂರದ ಶೆಡ್‌ಗಳಿಗೆ ಅವರನ್ನು ಸಾಗಿಸುತ್ತಾನೆ. ಚುಚ್ಚುಮದ್ದನ್ನು ಕೊಡಿಸುತ್ತಾನೆ. ಮತ್ತೆ ಕೆಲವು ದಿನಗಳಲ್ಲಿ ಬದುಕು ತನ್ನ ಸಾಮಾನ್ಯ ಲಯಕ್ಕೆ ಹಿಂದಿರುಗುತ್ತದೆ. ಪಿಡುಗು ನಮ್ಮ ಬರಹಗಾರರಿಗೆ ಒಂದು ಘಟನೆ, ಒಂದು episode ಮಾತ್ರವಾಗಿದೆ. ಅದನ್ನೇ ಒಂದು ಕಾದಂಬರಿಯನ್ನಾಗಿ ಅವರು ಮಾಡುವುದಿಲ್ಲ.  ಈ ಕೃತಿಗಳನ್ನು ನನ್ನ ಜೊತೆ ಫೋನ್ ನಲ್ಲಿ ಚರ್ಚೆ ಮಾಡಿದ ಪ್ರತಿಭಾವಂತ ಯುವ ಬರಹಗಾರರಾದ ಮಾಧವ ಚಿಪ್ಪಳ್ಳಿ ಅವರು ಹೇಳಿದ್ದೆಂದರೆ ಪ್ರಾಯಶಃ ನಮ್ಮ ಬರಹಗಾರರಿಗೆ ಎಲ್ಲಾ ಕತ್ತಲೆಗಳ ನಡುವೆ ಒಂದು ಆಶಾವಾದವಿದೆ; ಅಥವಾ ಪಿಡುಗನ್ನು ಸೋಲಿಸಬೇಕೆನ್ನುವ ಛಲದಲ್ಲಿ ನಂಬಿಕೆ ಇದೆ. ಮಾಧವ ಅವರು ಈ ಒಳನೋಟವನ್ನು ವಿಸ್ತರಿಸಿ ಬರೆಯುವುದನ್ನು ಕಾಯುತ್ತಿದ್ದೇನೆ.

ನನಗೆ ಅನ್ನಿಸುವುದು ಹೀಗೆ. ಆಧುನಿಕತೆಯು ತಂದಿರುವ ಒಂದು ಮನೋಭಾವವೆಂದರೆ ನಾವು ವಿಶಿಷ್ಟರು ಎನ್ನುವ ವ್ಯಕ್ತಿವಾದ. ಇದರ ಹಿಂದೆ ದೀರ್ಘವಾದ ಪಶ್ಚಿಮದ ಚಿಂತನೆಯ ಪರಂಪರೆ ಇದೆ. ಇದು ಸಮಸ್ಯಾತ್ಮಕವಾದ ಮಾನವಕೇಂದ್ರಿತ ಚಿಂತನೆಯಾಗಿದೆ (Anthropocentrism). ಅಮಿತಾವ್ ಘೋಷ್ ಹೇಳುವಂತೆ ಈ ತಾತ್ವಿಕ ಚಿಂತನೆಯಿಂದಾಗಿ ಪರಿಸರ, ನಿಸರ್ಗ, ಭೂಮಿ ಇವೆಲ್ಲಾ ನಮಗಾಗಿಯೇ ಇವೆಯೆನ್ನುವ ಧೋರಣೆ ಬೆಳೆದುಬಂದಿದೆ. ಹೀಗಾಗಿ ಈ ಜಗತ್ತು ವೈರಸ್ ಗಳಿಗಾಗಿಯೂ ಇದೆಯೆಂದು ನಾವು ಕಲ್ಪಿಸಿಕೊಳ್ಳಲಾರೆವು. ಆದ್ದರಿಂದಲೇ ಕರೋನಾ ಬಂದಾಗ “ನಾವೇ ಏಕೆ” ಎಂದು ಅಸ್ತಿತ್ವವಾದಿ ಸಂಕಟದಲ್ಲಿ ಕುದಿಯುತ್ತೇವೆ. ಹಸಿವಿನಿಂದ ಸಾಯುವ ಲಕ್ಷಗಟ್ಟಲೇ ಜನರು ಹಾಗೂ ಶಿಶುಗಳ ಕುರಿತು ನಾವು ಈ ಪ್ರಶ್ನೆಯನ್ನು ಕೇಳುವುದಿಲ್ಲ, ನಮಗೆ ಅದು ಒಂದು ನೈತಿಕ ಪ್ರಶ್ನೆಯಾಗಿಯೂ ಕಾಣುವುದಿಲ್ಲ.

ಅನಂತಮೂರ್ತಿಯವರ ಸಂಸ್ಕಾರದಲ್ಲಿ ಪ್ಲೇಗ್ ಏಕಕಾಲಕ್ಕೆ ವಾಸ್ತವಿಕ ಸಂಗತಿಯೂ, ಅಗ್ರಹಾರದ ಅವನತಿಯ ಸಂಕೇತವೂ ಆಗಿದೆ. ನಾರಣಪ್ಪ ಶಿವಮೊಗ್ಗೆಗೆ ಹೋಗಿ ಬಂದು ಸೋಂಕು ತಗಲಿಸಿಕೊಂಡು ಅಗ್ರಹಾರದ ಪ್ಲೇಗ್ ರೋಗದ ಮೊದಲ ಬಲಿಯಾಗುತ್ತಾನೆ. ಪಾರಿಜಾತಪುರದ ಮಂಜಯ್ಯನವರಿಗೆ ಅಗ್ರಹಾರದ ಬ್ರಾಹ್ಮಣರು ಬಂದು ಅವನ ಸಾವಿನ ಬಗ್ಗೆ ಹೇಳಿದಾಗ ಅವರ ಮನಸ್ಸಿಗೆ “ಎರಡು ಅಕ್ಷರದ ಭೀಕರ ರೋಗದ ಹೆಸರು” ಬಂದರೂ ಅವರು ಸುಮ್ಮನಾಗುತ್ತಾರೆ. ಮುಂದೆ ‘ತಾಯಿನಾಡು’ ಪತ್ರಿಕೆಯಲ್ಲಿ ‘ಶಿವಮೊಗ್ಗೆಯಲ್ಲಿ ಪ್ಲೇಗ್’ ಸುದ್ದಿಯನ್ನು ನೋಡಿ ತೀರ್ಥಳ್ಳಿಗೆ ಗಾಡಿ ಕಟ್ಟಿಸುತ್ತಾರೆ. ಅಗ್ರಹಾರದ ಛಾವಣಿಗಳ ಮೇಲೆ ಬಂದು ಕೂರುವ ಹದ್ದುಗಳು, ಅವುಗಳನ್ನು ಬೆದರಿಸಲು ಶಂಖ, ಜಾಗಟೆ ಸದ್ದು ಮಾಡಿ ದಣಿಯುವ ಬ್ರಾಹ್ಮಣರು, ಇಲಿಗಳ ಸಾವು ಅಗ್ರಹಾರದ ಬ್ರಾಹ್ಮಣರ ಸಾವು -ಇವೆಲ್ಲವು ಮೂರ್ತವಾಗಿ ಬಂದಿವೆ.

ಆದರೆ ಇನ್ನೊಂದು ಅರ್ಥದಲ್ಲಿ ಕಾದಂಬರಿ ಪ್ಲೇಗ್ ಬಗ್ಗೆ ಅಲ್ಲ; ಇಡಿ ಅಗ್ರಹಾರವೇ ಅವನತಿಯ ಪಿಡುಗಿನಲ್ಲಿ ಸಿಲುಕಿದೆ ಎನ್ನುವ ಸಾಂಕೇತಿಕತೆಯ ಹೊರತಾಗಿ ಅದು ಮುಖ್ಯವಾಗಿಲ್ಲ. ನಾರಣಪ್ಪನ ಸಾವಿನಿಂದಾಗಿ ಒಂದು ತೀವ್ರತೆಗೆ ಬಂದಿರುವ ನಂಬಿಕೆಗಳ ಸಂಘರ್ಷಕ್ಕೆ ಒಂದು ಅವಶ್ಯಕವಾದ ಹಿನ್ನಲೆಯಲ್ಲಿ ಅದು ಬಂದಿದೆ. ಅಲ್ಲದೆ ಅದು ಪ್ಲೇಗ್ ಎಂದು ಗೊತ್ತಾಗುವ ಮೊದಲೇ ಅಗ್ರಹಾರದಿಂದ ಹೊರಟುಬಿಡುವ ಪ್ರಾಣೇಶಾಚಾರ್ಯರ ಆಂತರಿಕ ಜಿಜ್ಞಾಸೆಯಲ್ಲಿ ಅದು ಭಾಗಿಯಾಗುವ ಅವಕಾಶವೇ ಇಲ್ಲ. ಕಾಕತಾಳೀಯ ಸಂಗತಿಯೆಂದರೆ ‘ಸಂಸ್ಕಾರ’ ಚಲನಚಿತ್ರದಲ್ಲಿ ನಾರಣಪ್ಪನ ಪಾತ್ರ ವಹಿಸಿದ ಲಂಕೇಶ್‌ರು ಬಾಲ್ಯದಲ್ಲಿ ಪ್ಲೇಗ್ ಪಿಡುಗಿನಿಂದ ಪಾರಾಗಿದ್ದರು! ‘ಹುಳಿ ಮಾವಿನ ಮರ’ ದಲ್ಲಿ ‘ಅವ್ವ’ ಅವರನ್ನು ಉಳಿಸಲು ಮಾಡಿದ ಹೋರಾಟದ ಪ್ರಸ್ತಾಪವಿದೆ.

ಇತ್ತೀಚಿನ ಒಂದು ಸಂದರ್ಶನದಲ್ಲಿ ಅಮಿತಾವ್ ಘೋಷ್ ಇನ್ನು ಮುಂದೆ ಕೊರೋನಾ ಪಿಡುಗಿನ ಬಗ್ಗೆ ಅನೇಕ ಕಾದಂಬರಿಗಳು ಬರಬಹುದೆಂದು ಹೇಳಿದ್ದಾರೆ. ಈ ಹಿಂದೆ ಅವರ ಮುಖ್ಯ ಕೃತಿಯೊಂದರಲ್ಲಿ ಗಂಭೀರ ಸಾಹಿತ್ಯವು ಪರಿಸರಸಂಬಂಧಿ ಅವಘಡಗಳ ಬಗ್ಗೆ ವೈಜ್ಞಾನಿಕ ಕಾದಂಬರಿಗಳಲ್ಲಿ, ಜನಪ್ರಿಯ ಕಾದಂಬರಿಗಳಲ್ಲಿ ಬರೆಯಲಾಗಿದೆಯೆ ಹೊರತು ಗಂಭೀರ ಸಾಹಿತ್ಯದಲ್ಲಿ ಅಲ್ಲ ಎಂದು ಹೇಳಿ ಅದಕ್ಕೆ ಕಾರಣಗಳನ್ನು ಕೊಟ್ಟಿದ್ದರು.

ಅವರ ಇಂದಿನ ಹೇಳಿಕೆಯ ಬಗ್ಗೆ ನನಗೆ ಅನುಮಾನಗಳಿವೆ. ಒಂದು ಅನುಭವವು ಗಂಭೀರ ಸಾಹಿತ್ಯದಲ್ಲಿ ವಸ್ತುವಾಗಿ ಬರಬೇಕಾದರೆ ಅದು ನಮ್ಮನ್ನು ತೀವ್ರವಾಗಿ ಕದಕಿರಬೇಕು. ನಮ್ಮ ಪ್ರಜ್ಞೆಯ ಎಲ್ಲಾ ಪಾತಳಿಗಳನ್ನು ಅದು ಹೊಕ್ಕಿರಬೇಕು. ಹಾಗೆ ಆಗಲು ಸೂಕ್ಷ್ಮಮವಾದ ಸಂವೇದನೆ ಬೇಕು. ಸಾಮಾಜಿಕ ನೈತಿಕ ಪ್ರಜ್ಞೆ ಬೇಕು. ಕರೋನಾ ಭಾರತದಲ್ಲಿ ಅಂಥ ಅನುಭವವನ್ನು ಕೊಟ್ಟಿದೆಯೆ? ನನ್ನ ಪ್ರಕಾರ ಇಲ್ಲ. ಸಾವುಗಳು ಬರೀ ಸಂಖ್ಯೆಗಳಾದಾಗ, ಕಾರ್ಮಿಕರು ಬರಿ ನಮ್ಮ ಮೊಬೈಲ್ ಮೇಲಿನ ಚಿತ್ರಗಳಾದಾಗ ನಮ್ಮ ಸಹಜೀವಿಗಳ ಹತಾಶೆ, ಹಸಿವು, ಅವಮಾನ ಇವು ಬರೀ ಚರ್ಚೆಯ ವಿಷಯಗಳಾದಾಗ ಅವು ಅನುಭವಗಳಾಗುವುದಿಲ್ಲ.

ಉಳಿದವರ ಉಸಾಬರಿ ನನಗೇಕೆ ಬೇಕು? ನಾನು ಬರಹಗಾರ. ಕೊರೋನಾ ಲಾಕ್‌ಡೌನ್‌ನಿಂದಾಗಿ ಸುದೀರ್ಘ ವಿರಾಮವನ್ನು, ಆರಾಮವನ್ನು ಅನುಭವಿಸುತ್ತಿರುವ ವರ್ಗದವನು. 3 ಕಿಲೋಮೀಟರ್ ಉದ್ದದ ಸಾಲಿನಲ್ಲಿ ನಿಂತು ತನ್ನ ಕುಟುಂಬಕ್ಕೆ ಊಟದ ಪ್ಯಾಕೆಟ್ ಪಡೆದ ಮಹಿಳೆ ತುಂಬಾ ನಾಚಿಕೆ ಹಾಗೂ ಸಂಕೋಚದಿಂದ “ಇಲ್ಲಿ ಒಳ್ಳೆಯ ಊಟ ಕೊಟ್ಟಿದ್ದಾರೆ, ಆದರೆ ನಾವು ಕೆಲಸ ಮಾಡಿ ಊಟ ಪಡೆಯುವ ಜನ” ಎಂದು ಹೇಳಿದ್ದನ್ನು ನಮ್ಮ ಸಾಹಿತ್ಯ ನಿರೂಪಿಸಬಲ್ಲದು ಎನ್ನುವ ನಂಬಿಕೆ ನನಗೆ ಇನ್ನೂ ಬಂದಿಲ್ಲ. ಮನುಷ್ಯರಿಗೆ ಬಡತನವನ್ನೂ ಘನತೆಯನ್ನೂ ಒಟ್ಟಿಗೆ ಕೊಡುವ ಬದುಕಿನ ಬಗ್ಗೆ ವಿಹ್ವಲನಾಗಿದ್ದೇನೆ. ಹಸಿವನ್ನೂ ಆತ್ಮಾಭಿಮಾನವನ್ನೂ ಒಟ್ಟಿಗೆ ಕೊಟ್ಟಿರುವ ಜಗತ್ತಿನ ಹಿಂಸೆಯಿಂದ ತಬ್ಬಿಬ್ಬಾಗಿದ್ದೇನೆ. ಎಲ್ಲಾ ಪಿಡುಗುಗಳು ಘಟನೆಗಳಷ್ಟೆ, ಮುಕ್ತಾಯವಲ್ಲವೆಂದು ನೋಡಿದ ಈ ಹಿಂದಿನ ಕನ್ನಡ ಬರಹಗಳಿಂದ ಕಲಿಯಲು ಆರಂಭಿಸಿದ್ದೇನೆ.

*ಲೇಖಕರು ಕನ್ನಡದ ಪ್ರಮುಖ ವಿಮರ್ಶಕರು, ಕಥೆಗಾರರು. ಹುಟ್ಟೂರು ಧಾರವಾಡ. ಕುವೆಂಪು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದರು. ಈಗ ಶಿವಮೊಗ್ಗೆಯ ಮಾನಸ ಸಾಂಸ್ಕೃತಿಕ ಅಧ್ಯಯನಗಳ ಕೇಂದ್ರದ ನಿರ್ದೇಶಕರು. 

Leave a Reply

Your email address will not be published.