ಬಿರಿಯಾನಿ: ಮುಸ್ಲಿಂ ಮಹಿಳೆಯ ಸಂಕಟಗಳ ಸರಮಾಲೆ

ಈ ಚಲನಚಿತ್ರ ಮುಸ್ಲಿಂ ಮಹಿಳೆಯರ ಅಸಹಾಯಕತೆ ಮತ್ತು ಅತಂತ್ರ ಬದುಕಿನ ಕರಾಳ ಮುಖಗಳನ್ನು ಬಿಚ್ಚಿಡುತ್ತ ಪ್ರೇಕ್ಷಕರಲ್ಲಿ ಗಾಢ ವಿಷಾದ ಭಾವವನ್ನು ಹುಟ್ಟಿಸಿಬಿಡುತ್ತದೆ. ಇದು ದೇಶದ ಇನ್ಯಾವುದೇ ಭಾರತೀಯ ಭಾಷೆಯಲ್ಲಿ ನಿರ್ಮಾಣವಾಗಿದ್ದರೂ ಅದು ದೊಡ್ಡ ಪ್ರತಿಭಟನೆಯನ್ನು ಎದುರಿಸಬೇಕಾಗುತ್ತಿತ್ತು!

 ಭಯೋತ್ಪಾದನೆ, ತ್ರಿವಳಿ ತಲಾಖ್‌ನಂತಹ ಸಮಸ್ಯೆಗಳು ಮುಸ್ಲಿಂ ಮಹಿಳೆಯರ ಅಸ್ತಿತ್ವವನ್ನೇ ಅಲುಗಾಡಿಸುತ್ತಿವೆ. ಈ ಕಟು ವಾಸ್ತವವನ್ನು ಹೇಳಲು ಸಿನಿಮಾಕ್ಕಿಂತ ಪ್ರಭಾವಶಾಲಿ ಮಾಧ್ಯಮ ಇನ್ನೊಂದಿಲ್ಲ. ಸಾಹಿತ್ಯಕ್ಕೆ ಈ ಶಕ್ತಿ ಇದೆಯಾದರೂ ಅದಕ್ಕೆ ದೇಶ, ಖಂಡಗಳ ಗಡಿ ದಾಟುವ ಶಕ್ತಿ ಇಲ್ಲ. ಏಕಕಾಲಕ್ಕೆ ಅಸಂಖ್ಯ ಜನರನ್ನು ತಲುಪುವ ಶಕ್ತಿ ಇರುವುದು ಸಿನಿಮಾಕ್ಕೆ ಮಾತ್ರ. ಸಕಾರಾತ್ಮಕ ಹಾಗೂ ನಕಾರಾತ್ಮಕ ಭಾವಗಳನ್ನು ಏಕಕಾಲಕ್ಕೆ ಹುಟ್ಟಿಸುವ ಶಕ್ತಿ ಇರುವುದೂ ಸಿನಿಮಾಕ್ಕೇ. ಹೀಗಾಗಿಯೇ ಸಿನಿಮಾಗಳು ಈಗ ಹೆಚ್ಚು ಮುಖ್ಯವಾಗುತ್ತಿವೆ.

ಹಲವು ದೇಶಗಳಲ್ಲಿ ಸಮಕಾಲೀನ ಸಿನಿಮಾ ನಿರ್ದೇಶಕರು ಮುಸ್ಲಿಂ ಮಹಿಳೆಯರ ಸಂಕಟಗಳನ್ನು ತೆರೆಯ ಮೇಲೆ ಕಟ್ಟಿಕೊಡುವ ಪ್ರಯತ್ನ ಮಾಡುತ್ತಿದ್ದಾರೆ. ಭಯೋತ್ಪಾದನೆಯ ದುಷ್ಟ ಪರಿಣಾಮಗಳು, ಅದರಿಂದ ನಲುಗಿಹೋದ ಕುಟುಂಬಗಳ ಸ್ಥಿತಿಗತಿಗಳ ಮೇಲೆ ಬೆಳಕು ಚೆಲ್ಲುತ್ತಿದ್ದಾರೆ. ತಲಾಖ್‌ನ ಪರೋಕ್ಷ ಪರಿಣಾಮಗಳನ್ನು ಹೇಳುವ ಹತ್ತಕ್ಕೂ ಹೆಚ್ಚು ಸಿನಿಮಾಗಳು 2019ರಲ್ಲಿ ನಿರ್ಮಾಣವಾಗಿವೆ!

ಮುಸ್ಲಿಂ ಮಹಿಳೆಯರ ಸಂಕಟಗಳ ಸರಮಾಲೆಯನ್ನು ತೆರೆಯ ಮೇಲೆ ತೋರಿಸುವ ವಿಷಯದಲ್ಲಿ ಭಾರತೀಯ ಸಿನಿಮಾ ನಿರ್ದೇಶಕರು ಹಿಂದೆ ಬಿದ್ದಿಲ್ಲ. ಈ ನಿಟ್ಟಿನಲ್ಲಿ ಮಲಯಾಳಂ ನಿರ್ದೇಶಕರು ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ.

ಕೇರಳ, ಮುಸ್ಲಿಂ ಜನ ಬಾಹುಳ್ಯಕ್ಕೆ ಹೆಸರಾದ ರಾಜ್ಯ. ಅಲ್ಲಿ ಮತೀಯ ಸಾಮರಸ್ಯ ಇದೆ. ಎಡಪಂಥೀಯ ಚಿಂತನೆಗಳನ್ನು ಆ ರಾಜ್ಯದ ಬಹುಜನರು ಮೈಗೂಡಿಸಿಕೊಂಡಿದ್ದಾರೆ. ಹೀಗಾಗಿ ಮುಸ್ಲಿಂ ಮಹಿಳೆಯರ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ಮತ್ತು ಶೋಷಣೆ ಇತ್ಯಾದಿಗಳನ್ನು ಮುಕ್ತವಾಗಿ ಚರ್ಚಿಸುವ ವಾತಾವರಣ ಅಲ್ಲಿದೆ. ಈ ಅವಕಾಶವನ್ನು ಮಲಯಾಳಂ ಸಿನಿಮಾ ನಿರ್ದೇಶಕರು ಬಳಸಿಕೊಳ್ಳುತ್ತಿದ್ದಾರೆ.

ಅನೇಕರಿಗೆ ಗೊತ್ತಿರುವಂತೆ 70ರ ದಶಕದಲ್ಲಿ ಬಂದ ಮಲಯಾಳಂ ಸಿನಿಮಾಗಳು ಹಸಿಹಸಿ ಕಾಮದ ಸರಕುಗಳಂತಿದ್ದವು. ಒಂದೆರಡು ದಶಕಗಳ ನಂತರ ಅಲ್ಲಿನ ಸಿನಿಮಾಗಳಲ್ಲಿ ದೊಡ್ಡ ಬದಲಾವಣೆ ಆಯಿತು. ಈಗ ಅಲ್ಲಿನ ನಿರ್ದೇಶಕರು ಸಮಕಾಲೀನ ಸಾಮಾಜಿಕ ಸಮಸ್ಯೆಗಳಿಗೆ ದೊಡ್ಡ ಮಟ್ಟದಲ್ಲಿ ಅವರು ತೆರೆದುಕೊಂಡಿದ್ದಾರೆ. ಈ ಪರಿವರ್ತನೆ ನಿಜಕ್ಕೂ ಅಚ್ಚರಿ ಹುಟ್ಟಿಸುವಂಥದು. ಇಂಥ ಬದಲಾವಣೆಗಳು ಭಾರತೀಯ ಭಾಷಾ ಸಿನಿಮಾಗಳಲ್ಲಿ ಆಗಿದ್ದರೂ ಮಲಯಾಳಂ ಸಿನಿಮಾಗಳಲ್ಲಿ ಆದಷ್ಟು ಬೇರೆಡೆ ಆಗಿಲ್ಲ. 

ಇತ್ತೀಚೆಗೆ ನಡೆದ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವದಲ್ಲಿ ಸಾಜಿನ್‌ಬಾಬು ಎಂಬ ಯುವ ನಿರ್ದೇಶಕನ ಮಲಯಾಳಂ ಸಿನಿಮಾ ‘ಬಿರಿಯಾನಿ’ ದೊಡ್ಡ ಸದ್ದು ಮಾಡಿತಲ್ಲದೆ, ಮಡಿವಂತ ವೀಕ್ಷಕರಿಗೆ ದೊಡ್ಡ ಆಘಾತವನ್ನೇ ನೀಡಿತು. ಭಾರತೀಯ ನಟಿಯೊಬ್ಬಳು ಸಂಭೋಗ ದೃಶ್ಯಗಳಲ್ಲಿ ಮೈಚಳಿ ಬಿಟ್ಟು ನಟಿಸುವುದನ್ನು ಊಹಿಸಲೂ ಸಾಧ್ಯವಿಲ್ಲ. ಈ ಕಾರಣದಿಂದ ಬಿರಿಯಾನಿ ಕೆಲವರಿಗೆ ಇಷ್ಟವಾಗಿರಬಹುದು. ‘ಬಿರಿಯಾನಿ’ ದೇಶದ ಇನ್ಯಾವುದೇ ಭಾರತೀಯ ಭಾಷೆಯಲ್ಲಿ ನಿರ್ಮಾಣವಾಗಿದ್ದರೂ ಅದು ದೊಡ್ಡ ಪ್ರತಿಭಟನೆಯನ್ನು ಎದುರಿಸಬೇಕಾಗುತ್ತಿತ್ತು. ತಿರುವನಂತಪುರದಲ್ಲಿ ನಡೆದ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಈ ಸಿನಿಮಾ ಪ್ರದರ್ಶನವಾಗಿದೆ. ರೋಮ್ ಚಿತ್ರೋತ್ಸವದಲ್ಲಿ ನೆಟ್‌ಪ್ಯಾಕ್ ಪ್ರಶಸ್ತಿಯನ್ನೂ ಪಡೆದುಕೊಂಡು ಅಂತರರಾಷ್ಟಿçÃಯ ಮಟ್ಟದಲ್ಲಿ ಗಮನ ಸೆಳೆದಿದೆ.

ನಗ್ನತೆ, ಸಂಭೋಗದ ದೃಶ್ಯಗಳನ್ನು ಹೊರಗಿಟ್ಟು ಈ ಸಿನಿಮಾ ನೋಡಿದರೂ ಅದು ವಿಶಿಷ್ಟ ಅನ್ನಿಸುತ್ತದೆ. ಐಸಿಸ್ ಭಯೋತ್ಪಾದಕ ಸಂಘಟನೆ ಸೇರಿದ ಯುವಕನೊಬ್ಬನ ಅಕ್ಕ, ತಾಯಿ ಹಾಗೂ ಅವರ ಕುಟುಂಬ, ಪೊಲೀಸರು ಮತ್ತು ಸಮಾಜದ ಕೆಂಗಣ್ಣಿಗೆ ಗುರಿಯಾಗಿ ಅನುಭವಿಸುವ ಯಾತನೆಗಳ ಸರಮಾಲೆಯನ್ನು ಅತ್ಯಂತ ದಾರುಣವಾಗಿ ಕಟ್ಟಿಕೊಡುತ್ತದೆ. ಮುಸ್ಲಿಂ ಮಹಿಳೆಯರ ಅಸಹಾಯಕತೆ ಮತ್ತು ಅತಂತ್ರ ಬದುಕಿನ ಕರಾಳ ಮುಖಗಳನ್ನು ಬಿಚ್ಚಿಡುತ್ತ ಪ್ರೇಕ್ಷಕರಲ್ಲಿ ಗಾಢ ವಿಷಾದ ಭಾವವನ್ನು ಹುಟ್ಟಿಸಿಬಿಡುತ್ತದೆ. ಇದೇ ಬಿರಿಯಾನಿ ಚಿತ್ರದ ಯಶಸ್ಸು.

ಭಯೋತ್ಪಾದಕರ ಜತೆ ಕೈಜೋಡಿಸಿದವರ ಕುಟುಂಬದ ಸದಸ್ಯರನ್ನು ಮುಸ್ಲಿಂ ಸಮಾಜ ಹೇಗೆ ನಡೆಸಿಕೊಳ್ಳುತ್ತದೆ ಎನ್ನುವುದರ ಪರಿಚಯ ಅನೇಕರಿಗೆ ಇಲ್ಲ. ಅಂಥ ಮಹಿಳೆಯರು ಅವರದೇ ಕುಟುಂಬದ ಒಳಗೇ ತಿರಸ್ಕಾರಕ್ಕೆ ತುತ್ತಾಗುತ್ತಾರೆ. ಅವರು ಅಮಾಯಕರು ಎನ್ನುವುದು ಗೊತ್ತಿದ್ದರೂ ಅವರ ಬಗ್ಗೆ ಅನುಕಂಪ ಹುಟ್ಟುವುದಿಲ್ಲ. ಎಲ್ಲ ಮುಸ್ಲಿಮರೂ ಭಯೋತ್ಪಾದಕರು. ಅವರನ್ನು ನಂಬುವುದು ಕಷ್ಟ ಎನ್ನುವ ಭಾವನೆ ಅನೇಕ ಮುಸ್ಲಿಮೇತರರಲ್ಲಿ ಇರುವ ಈ ಹೊತ್ತಿನಲ್ಲಿ ಒಟ್ಟಾರೆ ಸಮಾಜದ ಅನುಕಂಪವೂ ಅವರಿಗೆ ಸಿಗುವುದಿಲ್ಲ. ಅವರ ಸಂಕಟಗಳೆಲ್ಲ ನೇಪಥ್ಯದಲ್ಲೇ ಉಳಿದುಬಿಡುತ್ತವೆ.

ಸಾಜಿನ್‌ಬಾಬು ಈ ಸಂಗತಿಗಳನ್ನು ಇಟ್ಟಕೊಂಡು ‘ಬಿರಿಯಾನಿ’ ಸಿನಿಮಾ ಮಾಡಿದ್ದಾರೆ. ತನ್ನದಲ್ಲದ ತಪ್ಪಿಗಾಗಿ ಮಹಿಳೆ ನೆಲೆ ಕಳೆದುಕೊಂಡು ಸಮಾಜದ ಕಣ್ಣಿನಲ್ಲಿ ನಿಕೃಷ್ಟಳಾಗಿ ಬದುಕುವ ಹೀನ ಸ್ಥಿತಿ ತಲುಪಿಬಿಡುತ್ತಾಳೆ. ಅವರ ದುಃಸ್ಥಿತಿಗೆ ಕಾರಣರಾದವರಿಗೆ ವಿಶಿಷ್ಟ ಬಗೆಯ ಬಿರಿಯಾನಿ ತಿನ್ನಿಸುವ ಮೂಲಕ ಸೇಡು ತೀರಿಸಿಕೊಳ್ಳುತ್ತಾಳೆ.

‘ಬಿರಿಯಾನಿ’ ಸಿನಿಮಾದ ಕಥೆಯನ್ನು ಇಲ್ಲಿ ವಿವರವಾಗಿ ಹೇಳದಿದ್ದರೆ ಸಿನಿಮಾ ನೋಡದವರಿಗೆ ಅದರ ತೀವ್ರತೆ ಅರ್ಥವಾಗುವುದಿಲ್ಲ. ಖದೀಜಾ, ಈ ಸಿನಿಮಾದ ಕೇಂದ್ರ ಪಾತ್ರ. 35ರ ಹರೆಯದ ಅವಳು ಸುಶಿಕ್ಷಿತೆ. ಅವಳಿಗೆ ಜೀವನ ಯಾಂತ್ರಿಕ ಅನ್ನಿಸಲು ಶುರುವಾಗಿದೆ -ಗಂಡನ ಜತೆಗಿನ ಲೈಂಗಿಕ ಸುಖ ಹಂಚಿಕೊಳ್ಳುವ ವಿಷಯದಲ್ಲೂ. ಅವಳಿಗೆ 10 ವರ್ಷದ ಮಗ ಇದ್ದಾನೆ. ಅವಳ ಒಬ್ಬನೇ ತಮ್ಮ ಐಸಿಸ್ ಸಂಘಟನೆ ಸೇರಿ ನಾಪತ್ತೆಯಾದ ಸುದ್ದಿ ಪತ್ರಿಕೆಯಲ್ಲಿ ಪ್ರಕಟವಾಗುತ್ತದೆ. ಅಲ್ಲಿಂದ ಅವಳ ದುರಂತದ ಬದುಕು ಆರಂಭವಾಗುತ್ತದೆ. ಗಂಡ ಮತ್ತು ಅತ್ತೆಯ ಅನಾದರಕ್ಕೆ ಒಳಗಾಗುತ್ತ ಹೋಗುತ್ತಾಳೆ. ಅವಳ ತಾಯಿ ಮಾನಸಿಕ ರೋಗಿ. ಅವಳಿಗೆ ನೆರವಾಗಲು ಖದೀಜಾ ತಾಯಿ ಮನೆಗೆ ಬರುತ್ತಾಳೆ.

ಖದೀಜಾಳ ತಮ್ಮ ಭಯೋತ್ಪಾದಕ ಸಂಘಟನೆ ಸೇರಿದ ವಿಷಯ ತಿಳಿದ ಪೊಲೀಸರು ತನಿಖೆಗೆ ಬರುತ್ತಾರೆ. ಖದೀಜಾ, ಅವಳ ಗಂಡನ ವಿಚಾರಣೆ ಮಾಡುತ್ತಾರೆ. ಅದರಿಂದ ಕುಟುಂಬದ ಮಾನಹೋಯಿತೆಂದು ಅತ್ತೆ ತಕರಾರು ತೆಗೆಯುತ್ತಾಳೆ. ಖದೀಜಾಗೆ ತಲಾಖ್ ನೀಡುವಂತೆ ಮಗನನ್ನು ಒತ್ತಾಯಿಸುತ್ತಾಳೆ. ಗಂಡ ಸೆಲ್‌ಫೋನ್‌ನಲ್ಲಿ ಸಂದೇಶ ಕಳಿಸಿ ತಲಾಖ್ ಕೊಡುತ್ತಾನೆ!

ನಂತರ ತಾಯಿ ಮನೆಯಲ್ಲಿ ಉಳಿಯುವ ಖದೀಜಾ ಅಮ್ಮನನ್ನು ಸಂಭಾಳಿಸಲು ಹೆಣಗುತ್ತ, ಸುತ್ತಲಿನ ಜನರಿಗೆ ಉತ್ತರ ಹೇಳಲಾಗದ ಅಸಹಾಯಕ ಸ್ಥಿತಿ ತಲುಪುತ್ತಾಳೆ. ಮಾನಸಿಕ ರೋಗಿ ಅಮ್ಮ ತನ್ನದೇ ಗುಡಿಸಲಿಗೆ ಬೆಂಕಿ  ಹಾಕಿಬಿಡುತ್ತಾಳೆ. ನೆಲೆ ಕಳೆದುಕೊಂಡು ಖದೀಜಾ ಅಮ್ಮನ ಜತೆ ಮಸೀದಿಯೊಂದರಲ್ಲಿ ಆಶ್ರಯ ಪಡೆಯುತ್ತಾಳೆ. ಮಸೀದಿಯ ಮೇಲ್ವಿಚಾರಕನೊಬ್ಬ ಅವರ ನೆರವಿಗೆ ಬರುತ್ತಾನೆ. ಖದೀಜಾ ಮತ್ತು ಅವಳ ಅಮ್ಮನಿಗೆ ತನ್ನ ಹಳ್ಳಿಯ ಮನೆಯಲ್ಲಿ ನೆಲೆ ಒದಗಿಸುತ್ತಾನೆ.

ಪತ್ರಕರ್ತೆಯೊಬ್ಬಳು ಖದೀಜಾಳ ನೆರವಿಗೆ ಬರುತ್ತಾಳೆ. ಸಂದರ್ಶನ ಪ್ರಕಟಿಸುತ್ತಾಳೆ. ಅದು ಅಮ್ಮನಿಗೆ ಇಷ್ಟವಾಗುವುದಿಲ್ಲ. ನಂತರ ಒಂದೆರಡು ದಿನಗಳಲ್ಲಿ ಅಮ್ಮ ಸಾಯುತ್ತಾಳೆ. ಒಂಟಿಯಾಗುವ ಖದೀಜಾಳ ಮೇಲೆ ಹಲವರ ಕಣ್ಣು ಬೀಳುತ್ತದೆ. ಖದೀಜಾ ಲೈಂಗಿಕ ಕಾರ್ಯಕರ್ತೆಯಾಗುವ ಅನಿರ್ವಾಯ ಸೃಷ್ಟಿಯಾಗುತ್ತದೆ.  ಅದು ಅವಳೇ ಸೃಷ್ಟಿಸಿಕೊಂಡ ಸಂದರ್ಭ. ಹಳ್ಳಿಯ ಹೊಟೇಲ್ ಮಾಲೀಕ, ಉದ್ಯಮಿ, ರಾಜಕಾರಣಿ, ಹಿಂದೂ ಸಂಘಟನೆಯ ಮುಖಂಡ, ಸರ್ಕಾರಿ ಅಧಿಕಾರಿ, ಪೊಲೀಸರು ಹೀಗೆ ಹತ್ತಾರು ಜನರ ಲೈಂಗಿಕ ದಾಹ ತಣಿಸುವ ಯಂತ್ರವಾಗಿಬಿಡುತ್ತಾಳೆ.  ಹಣವನ್ನೂ ಗಳಿಸುತ್ತ ಹೋಗುತ್ತಾಳೆ. ಇಸ್ಲಾಮಿಕ್ ಸೆಕ್ಸ್ ಹೆಸರಿನ ಪುಸ್ತಕ ಓದುತ್ತಾಳೆ. ಆ ಮೇಲೂ ಅದೇ ಧಂಧೆಯಲ್ಲಿ ಮುಂದುವರಿಯುವುದು ಮಾರ್ಮಿಕವಾಗಿದೆ. ಕೊನೆಗೆ ಗರ್ಭಿಣಿಯೂ ಆಗುತ್ತಾಳೆ.

ಸತ್ತ ಅಪ್ಪನ ನೆನಪಿನಲ್ಲಿ ತನ್ನ ಊರವರಿಗೆ ಆಡಿನ ಬಿರಿಯಾನಿ ಔತಣ ಹಾಕಿಸಬೇಕು ಎನ್ನುವುದು ಅವಳ ಅಮ್ಮನ ಕೊನೆಯ ಆಸೆಯಾಗಿತ್ತು. ಅದನ್ನು ಈಡೇರಿಸಲು ಖದೀಜಾ ಊರಿಗೆ ಬರುತ್ತಾಳೆ. ಅಪ್ಪನ ತಿಥಿಯ ಬದಲು ರಂಜಾನ್ ಹಬ್ಬದ ಒಂದು ಸಂಜೆ ಇಫ್ತಿಯಾರ್ ಔತಣ ನೀಡಲು ಸಿದ್ಧತೆ ಮಾಡಿಕೊಳ್ಳುತ್ತಾಳೆ. ಖದೀಜಾ ಊರಿಗೆ ಬಂದ ಸುದ್ದಿ ತಿಳಿದು ಸ್ಥಳೀಯ ಪೊಲೀಸರು ಅವಳ ವಿಚಾರಣೆಗೆ ಬರುತ್ತಾರೆ. ಅವಳನ್ನು ಲೈಂಗಿಕವಾಗಿ ಬಳಸಿಕೊಳ್ಳುವ ದುರುದ್ದೇಶ ಅವರದು. ಅವಳ ಮೇಲೆ ಲೈಂಗಿಕ ಹಲ್ಲೆ ಪ್ರಯತ್ನದಲ್ಲಿ ಅವಳ ಬಸಿರು ಒಡೆದು ರಕ್ತಸ್ರಾವವಾಗುತ್ತದೆ. ಪೊಲೀಸರೇ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುತ್ತಾರೆ. ಅಲ್ಲಿ ಅವಳಿಗೆ ಗರ್ಭಪಾತವಾಗುತ್ತದೆ. ಚೇತರಿಸಿಕೊಂಡ ಖದೀಜಾ ಇಫ್ತಿಯಾರ್ ಕೂಟದ ಸಿದ್ಧತೆಗೆ ಮುಂದಾಗುತ್ತಾಳೆ. ಅವಳೇ ಖುದ್ದಾಗಿ ಆಮಂತ್ರಣ ಪತ್ರ ಹಂಚುತ್ತಾಳೆ.

ಊರ ಮುಖಂಡರು, ಅವಳ ಮಾಜಿ ಗಂಡ, ಮುಸ್ಲಿಂ ಸಮಾಜದ ಪ್ರಮುಖರು, ಮಸೀದಿ ಮುಖ್ಯಸ್ಥರು, ಪೊಲೀಸ್ ಅಧಿಕಾರಿಗಳು, ಹಿಂದೂ ಸಂಘಟನೆಯ ಮುಖಂಡ ಹೀಗೆ ಎಲ್ಲರನ್ನೂ ಔತಣಕ್ಕೆ ಆಹ್ವಾನಿಸುತ್ತಾಳೆ.  ಔತಣ ಕೂಟಕ್ಕೆ ಭರ್ಜರಿ ಸಿದ್ಧತೆಗಳು ನಡೆಯುತ್ತವೆ. ಆಡಿನ ಬಿರಿಯಾನಿ, ಬಗೆ ಬಗೆಯ ಹಣ್ಣುಗಳು, ಪಾನೀಯಗಳನ್ನು ಅತಿಥಿಗಳಿಗೆ ಪೂರೈಸುವ ತಯಾರಿ ನಡೆಯುತ್ತದೆ.

ಯಾರು ಈ ಖದೀಜಾ?

‘ಬಿರಿಯಾನಿ’ ಚಿತ್ರದ ಖದೀಜಾ ಪಾತ್ರದಲ್ಲಿ ನಟಿಸಿದ ಕಲಾವಿದೆ ಹೆಸರು ಕನಿ ಕುಸ್ರುತಿ. ಕಿರುತೆರೆ, ಸಿನಿಮಾ, ರಂಗಭೂಮಿ, ಸಾಮಾಜಿಕ ಚಳವಳಿಗಳ ಮೂಲಕ ಕೇರಳ ಜನರಿಗೆ ಕುಸ್ರುತಿ ಪರಿಚಿತರು. ಕುಸ್ರುತಿ ಎಂದರೆ ಮಲಯಾಳಂನಲ್ಲಿ ತುಂಟಿ ಎಂಬ ಅರ್ಥ ಇದೆಯಂತೆ. ಕುಸ್ರುತಿ ತುಂಟಿ ಹೌದೋ ಅಲ್ಲವೋ ಗೊತ್ತಿಲ್ಲ. ಆದರೆ ಆಕೆ ಅತ್ಯಂತ ದಿಟ್ಟತನದ ಕಲಾವಿದೆ.

ಪ್ರಗತಿಪರ ಮನೋಧರ್ಮದ ಡಾ.ಜಯಶ್ರೀ, ಮೈತ್ರೇಯನ್ ದಂಪತಿಯ ಮಗಳು ಕನಿ, ತ್ರಿಶೂರಿನ ಡ್ರಾಮಾ ಸ್ಕೂಲ್ ಮತ್ತು ಅಭಿನಯ ರಿಸರ್ಚ್ ಸೆಂಟರ್‌ಗಳಲ್ಲಿ ಆರಂಭದ ರಂಗಶಿಕ್ಷಣ ಪಡೆದರು. ನಂತರ ಕೆಲ ನಾಟಕಗಳಲ್ಲಿ ಅಭಿನಯಿಸಿದರು; ರಂಗಭೂಮಿ, ಕಿರುಚಿತ್ರ ಹಾಗೂ ಟಿವಿ ಧಾರಾವಾಹಿಗಳಲ್ಲಿ ತೊಡಗಿಸಿಕೊಂಡರು. ಮಲಯಾಳಂ, ತಮಿಳು, ಹಿಂದಿ, ಮರಾಠಿ ಭಾಷೆಗಳ ಸುಮಾರು 15ಕ್ಕೂ ಹೆಚ್ಚು ಕಿರುಚಿತ್ರಗಳು, ಮೂರ್ನಾಲ್ಕು ಟಿವಿ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಇಂಡಿಯಾ ಮತ್ತು ಪೋಲಂಡ್ ಸಹಯೋಗದಲ್ಲಿ ನಿರ್ಮಾಣವಾದ ‘ಬರ್ನಿಂಗ್ ಫ್ಲವರ್ಸ್’; ‘ಸೆವೆನ್ ಡ್ರೀಮ್ಸ್ ಆಫ್ ಎ ವುಮನ್’ ಇಂಗ್ಲಿಷ್ ಚಿತ್ರಕ್ಕೆ ಕನಿ ಕೆಲಸ ಮಾಡಿದ್ದಾರೆ ಮತ್ತು ನಟಿಸಿದ್ದಾರೆ.

ಮೋಹನ್‌ಲಾಲ್ ನಾಯಕರಾಗಿ ನಟಿಸಿದ್ದ ‘ಶಿಕಾರ್ ಫಾರ್ ನಕ್ಸಲೈಟ್’ (2010) ಚಿತ್ರದ ಮೂಲಕ ಕನಿ ಸಿನಿಮಾಕ್ಕೆ ಬಂದರು. 2010ರಲ್ಲೇ ತೆರೆಗೆ ಬಂದ ಕಾಕ್‌ಟೇಲ್ ಚಿತ್ರದಲ್ಲಿ ಕನಿ ಅವರದ್ದು ಲೈಂಗಿಕ ಕಾರ್ಯಕರ್ತೆಯ ಪಾತ್ರ. ಈ ಚಿತ್ರದ ಮೂಲಕ ಅವರು ಮಲಯಾಳಂ ಸಿನಿಮಾರಂಗದ ಮತ್ತು ವೀಕ್ಷಕರ ಗಮನ ಸೆಳೆದರು. ಶಾಜಿ ಕರಣ್ ನಿರ್ದೇಶನದ ಓಳು ಚಿತ್ರದಲ್ಲೂ ಅವರಿಗೊಂದು ಪಾತ್ರವಿತ್ತು.

ಸಾಜಿನ್‌ಬಾಬು ‘ಬಿರಿಯಾನಿ’ ಚಿತ್ರದ ಖದೀಜಾಳ ಪಾತ್ರದ ನಟಿಗಾಗಿ ಹುಡುಕಾಟ ಆರಂಭಿಸಿದಾಗ ಅವರಿಗೆ ಮೊದಲು ನೆನಪಾದದ್ದು ಕನಿ ಕುಸ್ರುತಿಯಂತೆ. ಕನಿ ತಮ್ಮ ಸಿನಿಮಾದಲ್ಲಿ ನಟಿಸಲು ಒಪ್ಪುವ ವಿಶ್ವಾಸ ಸಾಜಿನ್ ಅವರಿಗೆ ಇತ್ತಂತೆ. ಚಿತ್ರದಲ್ಲಿ ನಗ್ನತೆ, ಸಂಭೋಗದ ದೃಶ್ಯಗಳಿವೆ ಎಂದಾಗಲೂ ಹಿಂಜರಿಯದೆ, ಕನಿ ನಟಿಸಲು ಒಪ್ಪಿದರಂತೆ. ಬೇರೆ ಯಾವ ನಟಿಯೂ ‘ಬಿರಿಯಾನಿ’ ಚಿತ್ರದಲ್ಲಿ ನಟಿಸುವ ಸಾಧ್ಯತೆ ಇರಲಿಲ್ಲ ಎಂದು ಸಾಜಿನ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

‘ಕಾಕ್‌ಟೇಲ್’ ಚಿತ್ರದಲ್ಲಿ ನಟಿಸಿದ ಮೇಲೆ ಕನಿ ಅವರಿಗೆ ಲೈಂಗಿಕ ಕಾರ್ಯಕರ್ತೆಯ ಪಾತ್ರಗಳಲ್ಲಿ ನಟಿಸುವಂತೆ ಹಲವಾರು ನಿರ್ದೇಶಕರು ದುಂಬಾಲು ಬಿದ್ದರಂತೆ. ಲೈಂಗಿಕ ಕಾರ್ಯಕರ್ತೆಯ ಪಾತ್ರಕ್ಕೆ ಬ್ರಾಂಡ್ ಆಗಿಬಿಡುವ ಸಾಧ್ಯತೆ ಇದ್ದುದರಿಂದ ಕನಿ ಈ ಅವಕಾಶಗಳನ್ನೆಲ್ಲ ನಿರಾಕರಿಸಿದರು. ಅದೇ ಸಂದರ್ಭದಲ್ಲಿ ಕೆಲವು ಸಿನಿಮಾ ಮಂದಿ ಅವರನ್ನು ದುರುಪಯೋಗ ಪಡಿಸಿಕೊಳ್ಳಲೂ ಮುಂದಾಗಿದ್ದರಂತೆ. ಇದರಿಂದ ಬೇಸತ್ತ ಅವರು ಇನ್ನು ಮುಂದೆ ಸಿನಿಮಾಗಳಲ್ಲಿ ನಟಿಸುವುದಿಲ್ಲ ಎಂಬ ನಿರ್ಧಾರವನ್ನೂ ಪ್ರಕಟಿಸಿದ್ದರು.

2019ರಲ್ಲಿ ದೇಶದಲ್ಲಿ ನಡೆದ ಲಿಂಚಿಂಗ್ ಪ್ರಕರಣಗಳ ವಿರುದ್ಧ ಧ್ವನಿ ಎತ್ತಿ, ಪ್ರಧಾನಮಂತ್ರಿ ಅವರಿಗೆ ಬಹಿರಂಗ ಪತ್ರ ಬರೆದ ದೇಶದ 48 ಮಂದಿ ಪ್ರಮುಖ ಕಲಾವಿದರಲ್ಲಿ ಕನಿ ಕುಸ್ರುತಿಯೂ ಒಬ್ಬರು. ಕುಸ್ರುತಿ ಅವರಿಗೆ ವಿವಾಹವಾಗಿದ್ದು, ಅವರೀಗ ಗಂಡನ ಜತೆ ಮುಂಬೈನಲ್ಲಿ ನೆಲೆಸಿದ್ದಾರೆ.

ಖದೀಜಾಗೆ ಆಸ್ಪತ್ರೆಯಲ್ಲಿ ಗರ್ಭಪಾತವಾದಾಗ ಹೊರತೆಗೆದ ಭ್ರೂಣವನ್ನು ಗುಟ್ಟಾಗಿ ಚೀಲದಲ್ಲಿ ಅಡಗಿಸಿ ತಂದಿರುತ್ತಾಳೆ. ಅದನ್ನು ಅಡಿಗೆಯವರ ಕಣ್ಣು ತಪ್ಪಿಸಿ ಬಿರಿಯಾನಿ ಪಾತ್ರೆಗೆ ಹಾಕಿ ಬೇಯಿಸುತ್ತಾಳೆ! ಬಿರಿಯಾನಿಯಲ್ಲಿ ತನ್ನ ಮಲವನ್ನು ಬೆರೆಸಲು ಮುಂದಾಗಿ ಕೊನೇ ಕ್ಷಣದಲ್ಲಿ ಹಿಂಜರಿಯುತ್ತಾಳೆ!

ಇಫ್ತಿಯಾರ್ ಕೂಟಕ್ಕೆ ಒಬ್ಬೊಬ್ಬರೇ ಬರುತ್ತಾರೆ. ಸಂಜೆ ಪ್ರಾರ್ಥನೆ ಮುಗಿಸಿ ಉಪವಾಸ ಕೈಬಿಟ್ಟು ಬಿರಿಯಾನಿ ತಿನ್ನಲು ಮುಂದಾಗುತ್ತಾರೆ. ಖದೀಜಾ ತನ್ನದೇ ಭ್ರೂಣ ಬೆರೆತ ಬಿರಿಯಾನಿ ಬಡಿಸಿ ಉಪಚರಿಸುತ್ತಾಳೆ! ಸಿನಿಮಾದ ಅತ್ಯಂತ ದಾರುಣ ಅನ್ನಿಸುವಂತಹ ದೃಶ್ಯಭಾಗ ಇದೇ. ಅತಿಥಿಗಳೆಲ್ಲ ಬಿರಿಯಾನಿ ತಿಂದು ಸಂತೋಷದಿಂದ ಹಿಂದಿರುಗುತ್ತಾರೆ. ಖದೀಜಾಗೆ ತನ್ನ ದುರಂತ ಬದುಕಿಗೆ ಕಾರಣರಾದವರೆಲ್ಲ ನೆನಪಾಗುತ್ತಾರೆ. ಅವಳಲ್ಲಿ ಜುಗುಪ್ಸೆಯ ಭಾವ ಸ್ಥಾಯಿಯಾಗುತ್ತದೆ. ಒಬ್ಬಳೇ ರೈಲ್ವೆ ಸೇತುವೆ ಮೇಲೆ ನಡೆಯುತ್ತ, ಇದ್ದಕ್ಕಿದ್ದ ಹಾಗೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ.

ಇಫ್ತಿಯಾರ್ ದೃಶ್ಯಗಳಿಗೆ ಮುಸ್ಲಿಂ ಸಮುದಾಯದ ಪ್ರತಿಕ್ರಿಯೆ ಏನು ಎನ್ನುವುದು ವ್ಯಕ್ತವಾಗಿಲ್ಲ. ಖತೀಜಾಳ ತಮ್ಮ ಐಸಿಸ್ ಸೇರಲು ಅವಳು ಕಾರಣ ಅಲ್ಲ. ಆದರೆ ಸಮಾಜ ಅವಳನ್ನು ಅಪರಾಧಿಯಂತೆ ನೋಡುತ್ತದೆ. ಅವಳು ನಿರಪರಾಧಿ ಎಂಬುದು ಪೊಲೀಸರಿಗೂ ಗೊತ್ತು. ಖದೀಜಾಳಂಥ ಮಹಿಳೆಯರಿಗೆ ಕಾನೂನಿನ ನೆರವು ಸಿಗುವುದಿಲ್ಲ. ಅವಳ ಪರ ನಿಲ್ಲಲು ಅವಳ ಗಂಡ, ಸಂಬಂಧಿಕರು ಮುಂದಾಗುವುದಿಲ್ಲ. ಮಸೀದಿಯೊಂದರಲ್ಲಿ ತಾತ್ಕಾಲಿಕವಾಗಿ ಆಸರೆ ಪಡೆದ ಸಂದರ್ಭದಲ್ಲಿ ಅವಳನ್ನು ಲೈಂಗಿಕತೆಗೆ ಬಳಸಿಕೊಳ್ಳುವ ಪ್ರಯತ್ನ ನಡೆಯುತ್ತದೆ. ಇಡೀ ಪುರುಷ ವ್ಯವಸ್ಥೆ ಖದೀಜಾಳ ದೇಹ ಮತ್ತು ಮನಸ್ಸು ಎರಡನ್ನೂ ನುಂಗಿ ಕೇಕೆ ಹಾಕುತ್ತದೆ. ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಖದೀಜಾಳಂಥ ಅಸಂಖ್ಯ ಮಹಿಳೆಯರು ನಿತ್ಯ ಇಂತಹ ಶೋಷಣೆಗೆ ಒಳಗಾಗುತ್ತಲೇ ಇದ್ದಾರೆ. ಭಯೋತ್ಪಾದನೆಯನ್ನು ಧಾರ್ಮಿಕತೆ ಹಿನ್ನೆಲೆಯಲ್ಲಿ ನೋಡುವುದರ ಪರಿಣಾಮಗಳನ್ನು ಈ ಸಿನಿಮಾ ಹೇಳುತ್ತಲೇ ಅಂಥ ಪ್ರಯತ್ನಗಳಿಗೆ ಅಮಾಯಕರು ಬಲಿಯಾಗುತ್ತಿದ್ದಾರೆ ಎನ್ನುವುದನ್ನು ಅತ್ಯಂತ ಶಕ್ತಿಯುತವಾಗಿ ಧ್ವನಿಸುತ್ತದೆ.

‘ಬಿರಿಯಾನಿ’ ಮುಸ್ಲಿಂ ಮಹಿಳೆಯ ದುರಂತವನ್ನು ಕಟ್ಟಿಕೊಡುವ ಸಿನಿಮಾ ಮಾತ್ರವೇ ಆಗಿ ಉಳಿಯುವುದಿಲ್ಲ. ಖದೀಜಾ ಲಕ್ಷಾಂತರ ಭಾರತೀಯ ಮಹಿಳೆಯರ ಪ್ರತಿನಿಧಿಯಂತೆ ಕಾಣುತ್ತಾಳೆ. ನಾನಾ ಕಾರಣಗಳಿಗೆ ಒಂಟಿಯಾಗಿಬಿಡುವ ಇತರ ಧರ್ಮಗಳ ಮಹಿಳೆಯರೂ ಖದೀಜಾಳಂತೆ ಶೋಷಣೆಗೆ ತುತ್ತಾಗುತ್ತಿರುವ ಅಸಂಖ್ಯ ನಿದರ್ಶನಗಳನ್ನು ಈಗ ಎಲ್ಲಾ ಕಡೆ ಕಾಣಬಹುದು.

ಅಂತರರಾಷ್ಟಿಯ ಸಿನಿಮೋತ್ಸವಗಳಲ್ಲಿ ಪ್ರದರ್ಶನವಾಗುವ ಸಿನಿಮಾಗಳು ಸೆನ್ಸಾರ್‌ಗೆ ಒಳಪಟ್ಟಿರುವುದಿಲ್ಲ.  ಆದರೂ ಬಹುತೇಕ ಭಾರತೀಯ ಸಿನಿಮಾಗಳು ಸೆನ್ಸಾರ್ ಮಂಡಳಿಯ ಸರ್ಟಿಫಿಕೇಟ್ ಪಡೆದ ನಂತರವೇ ಅಲ್ಲಿ ಪ್ರದರ್ಶನಗೊಳ್ಳುತ್ತವೆ.

ಬೆಂಗಳೂರು ಚಿತ್ರೋತ್ಸವದಲ್ಲಿ ಮೊದಲ ಪ್ರದರ್ಶನದಲ್ಲಿ ಸೆನ್ಸಾರ್ ಆಗದ ‘ಬಿರಿಯಾನಿ’ಯನ್ನು ಜನ ನೋಡಿದರು! ಕೊನೆಯ ದಿನ ರಿಪೀಟ್ ಶೋ ಇತ್ತು. ನಿರ್ದೇಶಕ ಸಾಜಿನ್‌ಬಾಬು ಪ್ರೇಕ್ಷಕರ ಎದುರು ನಿಂತು ಮಾತನಾಡುತ್ತ, ನೀವು ಈಗ ನೋಡಲಿರುವ ‘ಬಿರಿಯಾನಿ’ ಸೆನ್ಸಾರ್‌ಗೆ ಒಳಗಾಗಿದೆ ಎಂದರು. ತಕ್ಷಣವೇ ಪ್ರೇಕ್ಷಕರೊಬ್ಬರು ವೆಜ್ ಬಿರಿಯಾನಿ ಎಂದು ಪ್ರತಿಕ್ರಿಯಿಸಿದರು!

ರೀಪೀಟ್ ಶೋನಲ್ಲಿ ನೋಡಿದ ‘ಬಿರಿಯಾನಿ’ಯಲ್ಲಿ ಎರಡು ಸಂಭೋಗದ ದೃಶ್ಯಗಳು ಇದ್ದವು. ಮೊದಲ ಸಲ ಪ್ರದರ್ಶನವಾದ ‘ಬಿರಿಯಾನಿ’ಯಲ್ಲಿ ಏನಿತ್ತು ಎನ್ನುವ ಕುತೂಹಲ ಅನೇಕರಿಗೆ ಇದ್ದಿರಬಹುದು. ಈ ದೃಶ್ಯಗಳನ್ನು ಕತ್ತರಿಸಿದ್ದರೂ ಸಿನಿಮಾದ ಒಟ್ಟಾರೆ ಪರಿಣಾಮಕ್ಕೆ ಧಕ್ಕೆಯೇನೂ ಆಗುತ್ತಿರಲಿಲ್ಲ.

ಶೋಷಣೆಯ ಹಲವು ಮುಖಗಳನ್ನೂ ವಿವರವಾಗಿ ಹೇಳಿ, ಲೈಂಗಿಕ ಶೋಷಣೆಯನ್ನು ಸಾಂಕೇತಿಕವಾಗಿ ತೋರಿಸುವ ಅಗತ್ಯ ಇಲ್ಲ ಎನ್ನುವುದು ನಿರ್ದೇಶಕ ಸಾಜಿನ್‌ಬಾಬು ಅವರ ನಿಲುವಿರಬಹುದು. ಇದೆಲ್ಲಕ್ಕಿಂತ ಅಚ್ಚರಿ ಎಂದರೆ ಸಂಭೋಗ ದೃಶ್ಯಗಳಲ್ಲಿ ಕ್ಯಾಮೆರಾ ಎದುರು ನಿಸ್ಸಂಕೋಚವಾಗಿ ನಟಿಸಲು ರಂಗಭೂಮಿ ಹಿನ್ನೆಲೆಯ ನಟಿ ಕನಿ ಕುಸ್ರುತಿ ಮುಂದಾದದ್ದು.

ಇನ್ನು ಮುಂದೆ ಮಲಯಾಳಂ ಸಿನಿಮಾಗಳಲ್ಲಿ ಲೈಂಗಿಕ ಶೋಷಣೆಯನ್ನು ಇನ್ನಷ್ಟು ವೈಭವೀಕರಿಸುವ ಪ್ರಯತ್ನಗಳು ಆಗಬಹುದು. ಇದಕ್ಕೆ ಜನರು, ಪ್ರಭುತ್ವ, ಮಹಿಳೆಯರು, ಮಹಿಳಾ ಸಂಘಟನೆಗಳು ಹೇಗೆ ಪ್ರತಿಕ್ರಿಯಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕು.

 

Leave a Reply

Your email address will not be published.