ಬಿಹಾರ ಚುನಾವಣೆ: ಸೋತು ಗೆದ್ದ ತೇಜಸ್ವಿ

-ಡಿ.ಉಮಾಪತಿ

ತೇಜಸ್ವಿ ಯಾದವ್ ಮುಂಬರುವ ದಿನಗಳ ರಾಜಕಾರಣದಲ್ಲಿ ಗಮನಿಸಬೇಕಾದ ಪ್ರತಿಭೆ ಎಂಬುದನ್ನು ರುಜುವಾತು ಮಾಡಿ ತೋರಿದ್ದಾರೆ. ಗೆಲುವಿನ ಗೆರೆಯ ಬಳಿ ಸಾರಿ ಕಾಲು ಸೋತ ಸಾರಥಿ ತೇಜಸ್ವಿ.

ಚುನಾವಣಾ ಸಮೀಕ್ಷೆಗಳು ಮತ್ತು ಮತಗಟ್ಟೆ ಸಮೀಕ್ಷೆಗಳನ್ನು ಸುಳ್ಳು ಮಾಡಿರುವ ಬಿಹಾರ ವಿಧಾನಸಭಾ ಚುನಾವಣೆ ಪ್ರತಿಸ್ಪರ್ಧಿಗಳನ್ನು ಸೋಲು ಗೆಲುವುಗಳ ನಡುವೆ ತೂಗುಯ್ಯಾಲೆ ಆಡಿಸಿತು. ಆರಂಭದಲ್ಲಿ ಎನ್.ಡಿ.ಎ.ಗೆ ಭಾರೀ ಗೆಲುವಿನ ಭವಿಷ್ಯ ನುಡಿದು, ಮತಗಟ್ಟೆ ಸಮೀಕ್ಷೆಗಳಲ್ಲಿ ಮಹಾಮೈತ್ರಿಗೆ ವಿಜಯಮಾಲೆ ಹಾಕಿದ್ದ ಸಮೀಕ್ಷೆಗಳು ಹುಸಿಯಾದವು. ಸೋಲು ಗೆಲುವುಗಳು ಕೂದಲೆಳೆಯ ಅಂತರದಿAದ ತೀರ್ಮಾನವಾದವು.

ಒಂದೆಡೆ ಲೋಕಜನಶಕ್ತಿಯು ಸಂಯುಕ್ತ ಜನತಾದಳಕ್ಕೆ ಒಳಹೊಡೆತ ನೀಡದೆ ಇದ್ದಲ್ಲಿ, ಮತ್ತೊಂದೆಡೆ ಕಾಂಗ್ರೆಸ್ ಸಾಧನೆ ಇಷ್ಟು ಕಳಪೆಯಾಗಿರದೆ ಹೋಗಿದ್ದರೆ ಈ ಫಲಿತಾಂಶಗಳಿಗೆ ಕೂದಲೆಳೆ ಅಂತರದ ಸ್ವರೂಪ ಬರುತ್ತಿರಲಿಲ್ಲ.

ನಾಲ್ಕು ತಿಂಗಳ ಸನಿಹದಲ್ಲೇ ಅಸ್ಸಾಮ್, ಕೇರಳ, ಪುದುಚೆರಿ, ತಮಿಳುನಾಡು, ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಗಳು ಕದ ಬಡಿಯಲಿರುವ ಈ ಹಂತದಲ್ಲಿ ಪ್ರಕಟವಾಗಿರುವ ಬಿಹಾರ ಫಲಿತಾಂಶ ರಾಜಕೀಯ ಪಕ್ಷಗಳ ರಣತಂತ್ರ ಮತ್ತು ಮೈತ್ರಿಗಳನ್ನು ಪ್ರಭಾವಿಸಲಿದೆ.

ಬಿಹಾರದಲ್ಲಿ ಬಿಜೆಪಿಯ ಗೆಲುವನ್ನು ಮಹಾಗೆಲುವು ಎಂದು ಬಣ್ಣಿಸುವ ಸಮೂಹ ಮಾಧ್ಯಮಗಳಿವೆ. 2015ರ ಚುನಾವಣೆಗಳಲ್ಲಿ 157 ಸೀಟುಗಳಲ್ಲಿ ಸ್ಪರ್ಧಿಸಿ 53ರಲ್ಲಿ ಗೆದ್ದಿದ್ದ ಬಿಜೆಪಿ ಈ ಸಲ 121ರಲ್ಲಿ ಸ್ಪರ್ಧಿಸಿ 74 ಗೆದ್ದಿದೆ ಎಂಬುದು ಇವುಗಳ ವ್ಯಾಖ್ಯಾನ. ಆದರೆ 2015ರಲ್ಲಿ ನಿತೀಶ್ ಕುಮಾರ್ ಅವರು ದೂರ ಸರಿದಿದ್ದ ಕಾರಣ ಸಂಯುಕ್ತ ಜನತಾದಳದ ಗೆಳೆತನವಿಲ್ಲದೆ ಸ್ವತಂತ್ರವಾಗಿ ಸ್ಪರ್ಧಿಸಬೇಕಾಗಿತ್ತು ಬಿಜೆಪಿ. ಈ ಸಲ ಪುನಃ ಸಂಯುಕ್ತ ಜನತಾದಳದ ಬೆಂಬಲದೊAದಿಗೆ ಕಣಕ್ಕಿಳಿದಿತ್ತು ಎಂಬ ಬಹುಮುಖ್ಯ ಅಂಶವನ್ನು ಈ ಸಮೂಹ ಮಾಧ್ಯಮಗಳು ನಿರ್ಲಕ್ಷಿಸಿವೆ.

ಮೈತ್ರಿಯ ಕಿರಿಯ ಪಾಲುದಾರನಾಗಿದ್ದ ಬಿಜೆಪಿ ಮೊತ್ತ ಮೊದಲ ಬಾರಿಗೆ ಸಂಯುಕ್ತ ಜನತಾದಳವನ್ನು ಹಿರಿಯಣ್ಣನ ಪಟ್ಟದಿಂದ ಕೆಳಗಿಳಿಸಿ ತಾನು ಅಲ್ಲಿ ವಿರಾಜಮಾನವಾಗಿರುವುದು ಹೌದು. ಈ ದೃಷ್ಟಿಯಿಂದ ಹೇಳುವುದಾದರೆ ಬಿಜೆಪಿಯ ಈ ಸಲದ ಗೆಲುವು ಮಹತ್ವದ್ದು. ಮಿತ್ರಪಕ್ಷಗಳ ಊರುಗೋಲನ್ನು ಕಾಲಕ್ರಮೇಣ ದೂರ ಸರಿಸಿ ಸ್ವಂತ ಕಾಲಮೇಲೆ ನಿಲ್ಲುವ ದೆಸೆಯಲ್ಲಿ ಇರಿಸಿರುವ ದಾಪುಗಾಲು ಎನ್ನುವುದು ಸರಿ. ಆದರೆ ಮತ್ತೊಂದು ಮಿತ್ರಪಕ್ಷವಾದ ಲೋಕಜನಶಕ್ತಿಯನ್ನು ಬಳಸಿಕೊಂಡು ನಿತೀಶ್ ಕುಮಾರ್ ಅವರ ರೆಕ್ಕೆಪುಕ್ಕ ಕತ್ತರಿಸಿ ಮೂಗುದಾರ ತೊಡಿಸಿರುವ ತಂತ್ರ ನೈತಿಕವೆಂದು ಕರೆಯಿಸಿಕೊಳ್ಳುವುದಿಲ್ಲ. ಆದರೆ ತನ್ನನ್ನು ‘ಪಾರ್ಟಿ ವಿತ್ ಎ ಡಿಫರೆನ್ಸ್’ ಎಂದು ಕರೆದುಕೊಳ್ಳುವ ಬಿಜೆಪಿ ಹಿಂದುತ್ವದ ಹೆದ್ದರೆಗಳನ್ನು ಏರಿ ನಡೆಸಿರುವ ಹಲ್ಲಾಹಲ್ಲಿಯ ರಾಜಕಾರಣದಲ್ಲಿ ನೈತಿಕ ಮತ್ತು ಅನೈತಿಕ ನಡುವಣ ಗೆರೆಗಳು ಮಸಕಾಗಿ ಬಹಳ ಕಾಲವಾಯಿತಲ್ಲ. ಗೆಲುವೊಂದೇ ಮುಖ್ಯ.

ಬಿಜೆಪಿಯ ಹಿರಿಯಣ್ಣನ ವರಸೆಗಳು ಈಗಾಗಲೇ ಬಿಹಾರದ ದೋಸ್ತಿ ಸರ್ಕಾರದಲ್ಲಿ ಢಾಳಾಗಿ ಕಾಣಿಸಿಕೊಂಡಿವೆ. ಮುಂದೆಯೂ ಕಾಣಿಸಿಕೊಳ್ಳಲಿವೆ. ನಿತೀಶ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ ಬಿಜೆಪಿಯ ಮುಖ್ಯಮಂತ್ರಿಯನ್ನು ಕೂರಿಸುವ ತನಕವೂ, ಆನಂತರವೂ ಈ ವರಸೆಗಳು ಮುಂದುವರೆಯಲಿವೆ. ಅವಹೇಳನಗಳನ್ನು ನುಂಗಿಕೊಳ್ಳುವುದನ್ನು ನಿತೀಶ್ ಮತ್ತು ಅವರ ಸಂಗಾತಿಗಳು ಚುರುಕಾಗಿ ಅಭ್ಯಾಸ ಮಾಡಿಕೊಳ್ಳಬೇಕಿದೆ. ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು. ಆದರೆ ಸದ್ಯಕ್ಕೆ ಅವರ ಮುಂದಿರುವ ಆಯ್ಕೆಗಳು ಅತ್ಯಂತ ಸೀಮಿತ.

ಕಳೆದ ಸುತ್ತಿನಲ್ಲಿ ಮಹಾರಾಷ್ಟç, ಛತ್ತೀಸಗಢ, ಝಾರ್ಖಂಡ್, ಮಧ್ಯಪ್ರದೇಶ, ರಾಜಸ್ತಾನವನ್ನು ಕಳೆದುಕೊಂಡಿತ್ತು ಬಿಜೆಪಿ. ಈ ಸಲ ಬಿಹಾರದಲ್ಲಿ ಮುಖಭಂಗ ತಪ್ಪಿಸಿಕೊಳ್ಳುವುದು ಅತ್ಯಗತ್ಯವಾಗಿತ್ತು. ಅಷ್ಟರಮಟ್ಟಿಗೆ ಯಶಸ್ಸು ಕಂಡಿದೆ. ಮೈತ್ರಿಯ ಹಿರಿಯಣ್ಣನ ಸ್ಥಾನ ಕಸಿದುಕೊಂಡಿದೆ. ಇದೇ ಹಿರಿಮೆಯನ್ನು ಧರಿಸಿ ಪಶ್ಚಿಮಬಂಗಾಳದ `ರಣಾಂಗಣ’ಕ್ಕೆ ಕಾಲಿರಿಸಿದೆ. ಮಮತಾ ಬ್ಯಾನರ್ಜಿಯವರ ಪದಚ್ಯುತಿಯ ಹಂಚಿಕೆ ಹಾಕಿಕೊಂಡಿದೆ. ಬಾಂಗ್ಲಾದೇಶದೊAದಿಗೆ ಗಡಿಯನ್ನು ಹಂಚಿಕೊಳ್ಳುವ ಪಶ್ಚಿಮಬಂಗಾಳದಲ್ಲಿ ಆಕ್ರಮಣಕಾರಿ ಹಿಂದುತ್ವದ ಜೊತೆಗೆ ಅಕ್ರಮ ಮುಸ್ಲಿಮ್ ವಲಸೆಗಾರರ ವಿಷಯವನ್ನು ಬಳಸಿಕೊಂಡು ಕೋಮುವಾದಿ ಕುಲುಮೆಯ ತಿದಿಯೊತ್ತಲಿದೆ.

ಬಿಹಾರ ಮತ್ತು ರಾಷ್ಟ್ರದಲ್ಲಿ ಯಶಸ್ಸಿನ ರುಚಿ ಕಂಡಿರುವ ಓವೈಸಿಯವರ ಎಐಎಂಐಎಂ ಪಕ್ಷ ಪಶ್ಚಿಮ ಬಂಗಾಳದಲ್ಲಿ ಸ್ಪರ್ಧಿಸುವ ಕುರಿತು ಇನ್ನೂ ತೀರ್ಮಾನಿಸಿಲ್ಲ. ಒಂದು ವೇಳೆ ಈ ಪಕ್ಷ ಕಣಕ್ಕಿಳಿದರೆ ಮಮತಾ ಬ್ಯಾನರ್ಜಿಯವರ ಮುಸ್ಲಿಮ್ ನೆಲೆಯಲ್ಲಿ ಬಿರುಕುಗಳು ಕಾಣಿಸಿಕೊಳ್ಳುವುದು ನಿಶ್ಚಿತ. ಹಿಂದೂ ಮತಗಳು ಅರ್ಧದಷ್ಟಾದರೂ ಬಿಜೆಪಿ ಪರವಾಗಿ, ಮುಸ್ಲಿಮ್ ನೆಲೆಯಲ್ಲಿ ಬಿರುಕುಗಳು ಕಾಣಿಸಿದರೆ ಬಿಜೆಪಿಯೇ ಅದರ ಫಲಾನುಭವಿ.

ಹತ್ತು ವರ್ಷಗಳಿಂದ ಅಧಿಕಾರದಲ್ಲಿರುವ ಮಮತಾ ಬ್ಯಾನರ್ಜಿ ಅವರ ವಿರುದ್ಧ ಆಡಳಿತವಿರೋಧಿ ಭಾವನೆಯ ಲಾಭ ಪಡೆಯುವ ಎಲ್ಲ ಪ್ರಯತ್ನ ನಡೆಸಲಿದೆ. ಆದರೆ ಈ ಆಡಳಿತವಿರೋಧಿ ಮತಗಳು ಬಿಜೆಪಿ ಮತ್ತು ಎಡರಂಗ-ಕಾAಗ್ರೆಸ್ ಮೈತ್ರಿಯ ನಡುವೆ ಹಂಚಿಹೋಗುವ ಸಾಧ್ಯತೆಗಳನ್ನು ತಳ್ಳಿಹಾಕಲು ಬರುವುದಿಲ್ಲ. ಅಸ್ಸಾಮಿನಲ್ಲಿ ಕಾಂಗ್ರೆಸ್ ಚೇತರಿಕೆಯ ಸೂಚನೆಗಳು ಕಂಡಿಲ್ಲ. ಹೀಗಾಗಿ ಮತ್ತೊಮ್ಮೆ ಬಿಜೆಪಿ ಆರಿಸಿ ಬಂದರೆ ಆಶ್ಚರ್ಯವಿಲ್ಲ. ತಮಿಳುನಾಡು ಮತ್ತು ಕೇರಳದಲ್ಲಿ ಬಿಜೆಪಿಯ ಪ್ರಭಾವ ನಗಣ್ಯ. ತನ್ನ ಮತಗಳಿಕೆಯನ್ನು ಹೆಚ್ಚಿಸಿಕೊಂಡು ಕೆಲವು ಸೀಟು ಗೆದ್ದರೆ ಅದೇ ಸಾಧನೆಯೆಂದು ತೃಪ್ತಿಪಡಬೇಕು.

ಕೋವಿಡ್ ದಾಳಿಯನ್ನು ಎದುರಿಸುವಲ್ಲಿ ತೋರಿದ ಅಸಾಮರ್ಥ್ಯ, ಆರ್ಥಿಕ ಹಿಂಜರಿತ, ಚೀನಾ ಆಕ್ರಮಣ, ಲಾಕ್ ಡೌನ್- ಮಹಾವಲಸೆಯ ಸಂಕಟಗಳ ನಡುವೆಯೂ ಪ್ರಧಾನಿ ಮೋದಿಯವರು ಬಿಹಾರದ ಮತದಾರರ ಒಲವನ್ನು ಉಳಿಸಿಕೊಂಡಿರುವುದು ಈ ಚುನಾವಣೆಯಲ್ಲಿ ಎದ್ದು ತೋರಿರುವ ಮತ್ತೊಂದು ಮುಖ್ಯ ಅಂಶ. ವಿಶೇಷವಾಗಿ ವಿಧಾನಸಭಾ ಚುನಾವಣೆಗಳು ಒಂದಕ್ಕಿತ ಮತ್ತೊಂದು ಭಿನ್ನ ಎಂಬ ಮಾತು ನಿಜ. ಆದರೂ ಮೋದಿ ಜನಪ್ರಿಯತೆಯ ಸಮಾನ ಎಳೆ ಬಿಜೆಪಿಯನ್ನು ಎಲ್ಲಿಯತನಕ ಕಾಯುತ್ತದೆ ಎಂಬುದು ಕಾದು ನೋಡಬೇಕಿರುವ ಕುತೂಹಲಕರ ಅಂಶ.

ವಿಶೇಷವಾಗಿ ಪಶ್ಚಿಮ ಬಂಗಾಳದಲ್ಲಿ ದಶಕದ ಹಿಂದೆ ಧೂಳೀಪಟವಾದ ಎಡಪಕ್ಷಗಳ ರಾಜಕಾರಣ ನೈತಿಕ ಸ್ಥೆರ್ಯವನ್ನೇ ಕಳೆದುಕೊಂಡಿದೆ.

ಈ ಹಿನ್ನೆಲೆಯಲ್ಲಿ ಬಿಹಾರ ಹದಿನಾರು ಮಂದಿ ಎಡಪಂಥೀಯ ಶಾಸಕರನ್ನು ವಿಧಾನಸಭೆಗೆ ಆರಿಸಿ ಕಳಿಸಿರುವುದು ಈ ಚುನಾವಣೆಯ ವಿಶೇಷ ಸಂಗತಿ. ಮಹಾಮೈತ್ರಿಯ ಸೀಟು ಹೊಂದಾಣಿಕೆಯಲ್ಲಿ ಎಡಪಕ್ಷಗಳಿಗೆ ಬಿಟ್ಟುಕೊಡಲಾಗಿದ್ದ ಒಟ್ಟು ಕ್ಷೇತ್ರಗಳು 30. ಶೇ.50ಕ್ಕಿಂತ ಹೆಚ್ಚು ಗೆಲುವು ಸಾಧಿಸಿರುವುದು ಎಡಪಕ್ಷಗಳು ಶೋಷಿತ ದಮನಿತರ ನಡುವಿದ್ದುಕೊಂಡು ಕಟ್ಟಿರುವ ಜನಪರ ಹೋರಾಟಗಳಿಗೆ ದಕ್ಕಿದ ಮನ್ನಣೆ. ತಿಂಗಳುಗಳ ದೂರದಲ್ಲಿರುವ ಬಂಗಾಳ-ಕೇರಳ ಚುನಾವಣೆಗಳ ಎದುರಿಸಲು ದೊರೆತ ಕಿರು ಪ್ರೋತ್ಸಾಹ. ಎಡಪಕ್ಷಗಳ ಈ ಗೆಲುವಿನ ಹಿನ್ನೆಲೆಯಲ್ಲಿ ಎಪ್ಪತ್ತು ಸೀಟುಗಳ ಪೈಕಿ ಇಪ್ಪತ್ತಕ್ಕೂ ಕಮ್ಮಿ ಸೀಟು ಗೆದ್ದಿರುವ ಕಾಂಗ್ರೆಸ್ ಪಕ್ಷ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.

ಮತ ಎಣಿಕೆಯ ದಿನದಂದು ದೆಹಲಿಯ ಬಿಜೆಪಿ ಮುಖ್ಯಕಚೇರಿಯ ಅವರಣದಲ್ಲಿ ಸಂಜೆ ಆರಕ್ಕೆ ಆರಂಭ ಆಗಬೇಕಿದ್ದ ವಿಜಯೋತ್ಸವ ಮುಂದೆ ಹೋಯಿತು. ಪ್ರಧಾನಮಂತ್ರಿ ಮೋದಿ, ಗೃಹಮಂತ್ರಿ ಅಮಿತ್ ಶಾ, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಈ ಸಭೆಯಲ್ಲಿ ಪಾಲ್ಗೊಳ್ಳಲು ಎಲ್ಲ ಸಿದ್ಧತೆಗಳೂ ನಡೆದಿದ್ದವು. ಪಕ್ಷದ ಈ ಪರಮ ನಾಯಕರ ನಿರೀಕ್ಷೆಯಲ್ಲಿ ರಾತ್ರಿ ಎಂಟೂವರೆಯ ನಂತರವೂ ಇಲ್ಲಿ ನೆರೆದಿದ್ದ ಕಾರ್ಯಕರ್ತರು ಹನುಮಾನ್ ಚಾಲೀಸಾ ಹಾಡತೊಡಗಿದ್ದರು. ಅಂತಿಮವಾಗಿ ಮರುದಿನ ವಿಜಯೋತ್ಸವ ಘನವಾಗಿಯೇ ಜರುಗಿತು. ಆದರೆ ಅಷ್ಟರಮಟ್ಟಿಗೆ ಕೇಸರಿಪಕ್ಷದ ಅತಿಯಾದ ಆತ್ಮವಿಶ್ವಾಸಕ್ಕೆ ಬ್ರೇಕ್ ಹಾಕಿದ್ದವು ಬಿಹಾರದ ಫಲಿತಾಂಶಗಳು.

2019ರ ಲೋಕಸಭಾ ಫಲಿತಾಂಶಕ್ಕೆ ಹೋಲಿಸಿದರೆ ಇಂದಿನ ಫಲಿತಾಂಶ ಬಿಜೆಪಿಗೆ ದೊಡ್ಡ ಹಿನ್ನಡೆ. ಅದೇ ಜನಬೆಂಬಲ ಮುಂದುವರೆದಿದ್ದರೆ ಈ ಚುನಾವಣೆಗಳಲ್ಲಿ ಗೆಲುವಿಗಾಗಿ ತಿಣುಕಬೇಕಾಗಿರಲಿಲ್ಲ. ಆದರೆ ಹಾಲಿ ಜನಾದೇಶ ಮಹಾಮೈತ್ರಿಕೂಟದ ಪರವಾಗಿಯೂ ಹೊರಬಿದ್ದಿಲ್ಲ ಎಂಬುದನ್ನು ಗಮನಿಸಬೇಕು. ಬಿಜೆಪಿಯ ವರ್ಚಸ್ವೀ ಜೋಡಿ ಮೋದಿ-ಶಾ ಜೋಡಿ ರಾಷ್ಟ್ರೀಯ ಚುನಾವಣೆಗಳ ಗೆಲುವನ್ನು ರಾಜ್ಯ ವಿಧಾನಸಭಾ ಚುನಾವಣೆಗಳಲ್ಲಿ ಪುನರಾವರ್ತನೆಗೊಳಿಸಲು ಅಸಮರ್ಥವಾಗಿದೆ. ಲೋಕಸಭಾ ಚುನಾವಣೆಗಳಲ್ಲಿ ಬಿಹಾರದ ಎಲ್ಲ ಸ್ಥಾನಗಳನ್ನೂ ಗೆದ್ದು ಗುಡಿಸಿಹಾಕಿತ್ತು ಈ ಜೋಡಿ.

ರಾಮಮಂದಿರ, ಕಾಶ್ಮೀರ, ಸುಶಾಂತಸಿoಗ್, ಪಾಕಿಸ್ತಾನದ ಪ್ರಸ್ತಾಪವೂ ಎನ್.ಡಿ.ಎ.ಗೆ ಸಲೀಸು ಗೆಲುವನ್ನು ಗಳಿಸಿಕೊಡಲಿಲ್ಲ. ಬಿಹಾರ ಉತ್ತರಪ್ರದೇಶವಲ್ಲ. ಒಂದೊಮ್ಮೆ ದೇಶ ರಾಜಕಾರಣದ ಕಂಪನಕೇOದ್ರ ಎನಿಸಿದ್ದ ಬಿಹಾರದಲ್ಲಿ ಕೋಮು ಧೃವೀಕರಣದ ರಾಜಕಾರಣಕ್ಕೆ ಇತಿಮಿತಿಗಳಿವೆ ಎಂಬುದನ್ನು ಫಲಿತಾಂಶಗಳು ತೋರಿಸಿಕೊಟ್ಟಿವೆ.

ಮಹಾಮೈತ್ರಿ ಎದುರಿಸಿದ ಹಿನ್ನಡೆಗೆ ತನ್ನ ಕಳಪೆ ಸಾಧನೆಯೇ ಕಾರಣ ಎಂಬ ಟೀಕೆಯನ್ನು ಕಾಂಗ್ರೆಸ್ ಎದುರಿಸಿದೆ. ತಾನು ಸ್ಪರ್ಧಿಸಿದ 70 ಸೀಟುಗಳ ಪೈಕಿ ಮುನ್ನಡೆ ಗಳಿಸಿದ್ದು ಕೇವಲ 20ರಲ್ಲಿ. ಕಾಂಗ್ರೆಸ್ ಮಹಾಮೈತ್ರಿಯ ಕಾಲಿಗೆ ಬಿಗಿದ ಒರಳುಕಲ್ಲಾಗಿ ಪರಿಣಮಿಸಿದೆ. ಈ ಸೀಟುಗಳು ಬಿಜೆಪಿಯ ಕಟ್ಟರ್ ಬೆಂಬಲ ನೆಲೆಗಳು ಎಂಬ ಕಾಂಗ್ರೆಸ್ ಸಮಜಾಯಿಷಿಯಲ್ಲಿ ಶಕ್ತಿಯಿಲ್ಲ.

ಚಿರಾಗ್ ಪಾಸ್ವಾನ್ ಅವರ ಲೋಕಜನಶಕ್ತಿ ಪಾರ್ಟಿಯ ಸ್ಪರ್ಧೆಯು ಎರಡಲಗಿನ ಕತ್ತಿಯಾಗಿ ಸಂಯುಕ್ತ ಜನತಾದಳ ಮತ್ತು ರಾಷ್ಟಿçÃಯ ಜನತಾದಳ ಎರಡನ್ನೂ ಕೊಯ್ದಿದೆ. ಆದರೆ ರಾಷ್ಟ್ರೀಯ ಜನತಾದಳಕ್ಕಿಂತ ಹೆಚ್ಚಾಗಿ ಸಂಯುಕ್ತ ಜನತಾದಳಕ್ಕೆ ಹೆಚ್ಚಿನ ಹಾನಿಯನ್ನು ಉಂಟು ಮಾಡಿರುವ ಲೆಕ್ಕಾಚಾರಗಳಿವೆ. 30-35 ಸೀಟುಗಳಲ್ಲಿ ನಿತೀಶ್ ಸೋಲನ್ನು ಬರೆದಿದ್ದಾರೆ ಚಿರಾಗ್ ಪಾಸ್ವಾನ್. ನಿತೀಶ್ ಅವರನ್ನು ತನ್ನ ಅಳತೆಗೆ ತಕ್ಕಂತೆ ಕತ್ತರಿಸುವ ಬಿಜೆಪಿಯ ಅಪಾಯಕಾರಿ ತಂತ್ರ ಆ ಮಟ್ಟಿಗೆ ಫಲ ನೀಡಿದೆ. ಆದರೆ ಈ ಗಂಡಾOತರಕಾರಿ ಆಟದಲ್ಲಿ ತಾನು ಹಚ್ಚಿದ ಬೆಂಕಿಯ ಬಿಸಿ ತನ್ನ ಕೈಯನ್ನೇ ಸುಡುವಷ್ಟು ಹತ್ತಿರ ಬಂದು ಬೆದರಿಸಿದೆ. ಚಿರಾಗ್ ತಮ್ಮ ಚುನಾವಣಾ ಸೌಧಕ್ಕೂ ಬೆಂಕಿ ಇಟ್ಟುಕೊಂಡಿದ್ದಾರೆ. ಅವರಿಗೆ ಒಂದು ಸೀಟೂ ದಕ್ಕಿಲ್ಲ. ಆದರೆ ಈ ಸೋಲು ಅವರನ್ನು ಹೆಚ್ಚಾಗಿ ಬಾಧಿಸುವುದಿಲ್ಲ. ಯಾಕೆಂದರೆ ಈ ನಷ್ಟಕ್ಕೆ ಬಿಜೆಪಿಯಲ್ಲಿ ಅವರು ಮುಂಚಿತವಾಗಿಯೇ ವಿಮೆ ಮಾಡಿಸಿದ್ದರು. ಅವರನ್ನು ಈ ಆಟಕ್ಕೆ ಬೆನ್ನುತಟ್ಟಿ ಹುರಿದುಂಬಿಸಿ ಇಳಿಸಿದ್ದು ಬಿಜೆಪಿಯೇ. ಹೀಗಾಗಿ ಅವರ `ನಷ್ಟ’ವನ್ನು ಮೋದಿ-ಅಮಿತ್ ಶಾ `ತುಂಬಿ’ಕೊಡಲಿದ್ದಾರೆ.

ಇದೇ ರೀತಿ ಮುಸ್ಲಿಮ್ ಮತದಾರರ ಸಂಖ್ಯೆ ಹೆಚ್ಚಿರುವ ಸೀಮಾಂಚಲ ಮತ್ತಿತರೆ ಸೀಮೆಗಳಲ್ಲಿ ಅಸಾದುದ್ದೀನ್ ಓವೈಸಿ ಅವರ ಪಕ್ಷ ರಾಷ್ಟಿçÃಯ ಜನತಾದಳಕ್ಕೆ ಏಟು ನೀಡಿದೆ. ಓವೈಸಿ ಕಣಕ್ಕೆ ಇಳಿಯದೆ ಹೋಗಿದ್ದರೆ ಮುಸ್ಲಿಮ್ ಮತಗಳು ರಾಷ್ಟಿçÃಯ ಜನತಾ ಪಕ್ಷಕ್ಕೆ ಬೀಳುವುದು ನಿಶ್ಚಿತವಿತ್ತು. ಅವರು 24 ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಐದು ಕ್ಷೇತ್ರಗಳಲ್ಲಿ ಗೆದ್ದಿದ್ದಾರೆ. ಬಿಜೆಪಿ ಪ್ರಬಲವಾಗುತ್ತ ಪ್ರಚಂಡವಾಗುತ್ತ ನಡೆದಿರುವಂತೆ ಮುಸ್ಲಿಮ್ ಮತದಾರರು ತಮ್ಮ ಸಮುದಾಯ ಹಿತಗಳನ್ನು ನಿಚ್ಚಳ ಮಾತುಗಳಲ್ಲಿ ಅಭಿವ್ಯಕ್ತಿಸುವ ತಮ್ಮದೇ ರಾಜಕೀಯ ಪಕ್ಷದತ್ತ ಒಲವು ತೋರುವತ್ತ ಓವೈಸಿ ಗೆಲವು ಬೆರಳು ಮಾಡಿ ತೋರುತ್ತಿದೆಯೇ ಇಲ್ಲವೇ ಎಂಬುದನ್ನು ಮುಂದಿನ ದಿನಗಳು ನಿಚ್ಚಳಗೊಳಿಸಲಿವೆ.

ಒಂದು ಕಾಲಕ್ಕೆ ಮೈತ್ರಿಕೂಟದ ‘ದೊಡ್ಡಣ್ಣ’ನಾಗಿದ್ದ ನಿತೀಶ್ ಕುಮಾರ್ (ಸಂಯುಕ್ತ ಜನತಾದಳ) ಅವರನ್ನು ಆ ಪಟ್ಟದಿಂದ ಕೆಳಗಿಳಿಸುವ ಬಿಜೆಪಿಯ ಹಂಚಿಕೆ ಕೈಗೂಡಿರುವುದು ಇಂದಿನ ಫಲಿತಾಂಶಗಳ ಮತ್ತೊಂದು ಮಹತ್ವದ ಬೆಳವಣಿಗೆ. ಇದೀಗ ಬಿಹಾರದ ಎನ್.ಡಿ.ಎ. ಮೈತ್ರಿಕೂಟದಲ್ಲಿ ಬಿಜೆಪಿಯೇ ‘ದೊಡ್ಡಣ್ಣ’. ಸಂಯುಕ್ತ ಜನತಾದಳ ಕಡಿಮೆ ಸೀಟುಗಳನ್ನು ಗೆದ್ದರೂ ಅವರೇ ಮುಖ್ಯಮಂತ್ರಿ ಎಂದು ಬಿಜೆಪಿ ಘೋಷಿಸಿತ್ತು. ಬಿಜೆಪಿ ಗಳಿಸಿದ ಅರ್ಧದಷ್ಟು ಸ್ಥಾನಗಳನ್ನು ಮಾತ್ರವೇ ಗೆದ್ದಿರುವ ನಿತೀಶ್ ಇದೀಗ ಬಿಜೆಪಿಯ ಪಾಲಿಗೆ ಸಂಪೂರ್ಣ ಹಲ್ಲು ಕಿತ್ತ ಹಾವು. ಕೈಗೊಂಬೆ ಮುಖ್ಯಮಂತ್ರಿಯಾಗಿ ವರ್ಷದೊಪ್ಪತ್ತು ಇರಿಸಿಕೊಂಡು ಅವರ ಕುರ್ಚಿಯನ್ನು ಕಿತ್ತುಕೊಳ್ಳುವುದು ಗೋಡೆ ಮೇಲಿನ ಬರೆಹ. ತನ್ನ ಮಿತ್ರಪಕ್ಷಗಳನ್ನು ಭಕ್ಷಿಸಿ ಕಾಲಕ್ರಮೇಣ ಅವುಗಳ ರಾಜಕೀಯ ಆವರಣವನ್ನು ತಾನೇ ಆಕ್ರಮಿಸುವ ಆಕ್ರಮಣಕಾರಿ ರಾಜಕಾರಣ ಬಿಜೆಪಿಯದು. ಕರ್ನಾಟಕವೂ ಸೇರಿದಂತೆ ಹಲವು ರಾಜ್ಯಗಳು ಈ ಮಾತಿಗೆ ಉದಾಹರಣೆ. ಈಗಿನ ಮೋದಿ-ಶಾ ಕಟ್ಟಿರುವ ಬಿಜೆಪಿಯದು ಲವಲೇಶ ಕರುಣೆಯಿಲ್ಲದ ಕಾಠಿಣ್ಯ. 2015ರಲ್ಲಿ ನಿತೀಶ್ ದೂರವಾಗಿ ರಾಷ್ಟ್ರೀಯ ಜನತಾದಳ- ಕಾಂಗ್ರೆಸ್ ಸಖ್ಯ ಬೆಳೆಸಿದಾಗ ಬಿಜೆಪಿ ಶೋಚನೀಯ ಸೋಲನ್ನು ಎದುರಿಸಿತ್ತು. ಅಂದಿನಿAದಲೇ ನಿತೀಶ್ ಅವರನ್ನು ತಿಂದು ಅವರ ಶಕ್ತಿಯನ್ನು ತಾನು ಧರಿಸುವ ಪಣ ತೊಟ್ಟಿರಬೇಕು ಮೋದಿ-ಶಾ ಅವರ ಬಿಜೆಪಿ.

ಚಿರಾಗ್ ಪಾಸ್ವಾನ್ ಅವರನ್ನು ತಮ್ಮ ವಿರುದ್ಧ ಬೆನ್ನುತಟ್ಟಿ ಹುರಿದುಂಬಿಸಿದ ಬಿಜೆಪಿಯ ರಣತಂತ್ರ ನಿತೀಶ್ ಗಮನಕ್ಕೆ ಬಾರದೆ ಇರದು. ಮೋದಿಯವರನ್ನು ಬಿಜೆಪಿಯನ್ನು ವಿರೋಧಿಸಿ ಪುನಃ ಬೆಂಬಲಿಸಿ ತಬ್ಬಿಕೊಂಡ ಅವರ ರಾಜಕಾರಣ ವಿಶ್ವಸನೀಯತೆಯನ್ನು ಕಳೆದುಕೊಂಡಿದೆ. ಮಹಾರಾಷ್ಟçದಲ್ಲಿ ಶಿವಸೇನೆ ಕೂಡ ಒಂದು ಕಾಲದಲ್ಲಿ ಬಿಜೆಪಿ ಮೈತ್ರಿಕೂಟದ ದೊಡ್ಡಣ್ಣನಾಗಿತ್ತು. ಆದರೆ ನಿತೀಶ್ ಅವರನ್ನು ಕತ್ತರಿಸಿದಂತೆ ಸೇನೆಯನ್ನೂ ಕತ್ತರಿಸಿ ತಾನು ದೊಡ್ಡಣ್ಣನ ಸ್ಥಾನದಲ್ಲಿ ಕುಳಿತಿದೆ ಬಿಜೆಪಿ. ಈ ಹಂಚಿಕೆಯ ವಿರುದ್ಧ ಬಂಡೆದ್ದ ಸೇನೆ ಕಾಂಗ್ರೆಸ್-ಎನ್.ಸಿ.ಪಿ. ಜೊತೆ ಕೈಜೋಡಿಸಿ ಸರ್ಕಾರ ರಚಿಸಿತು. ತಮ್ಮನ್ನು ಮೂಲೆಗುಂಪು ಮಾಡುವ ಬಿಜೆಪಿ ಹುನ್ನಾರದ ಮುಂದೆ ಇದೀಗ ನಿತೀಶ್ ಅಸಹಾಯಕರು. ತಮ್ಮ ಕೈಕಾಲುಗಳನ್ನು ತಾವೇ ಕಟ್ಟಿ ಹಾಕಿಕೊಂಡಿದ್ದಾರೆ. 2017ರಲ್ಲಿ ರಾಷ್ಟ್ರೀಯ ಜನತಾದಳದೊಂದಿಗೆ ಮೈತ್ರಿ ಮುರಿದು ಪುನಃ ಬಿಜೆಪಿಯನ್ನು ತಬ್ಬಿಕೊಂಡ ಅವರ ಮುಂದೆ ಹೆಚ್ಚಿನ ಆಯ್ಕೆಗಳಿಲ್ಲ. ಸತ್ತರೂ ಸರಿ, ಬಿಜೆಪಿಯೊಂದಿಗೆ ಮತ್ತೆ ಗೆಳೆತನ ಬೆಳೆಸುವುದಿಲ್ಲ ಎಂದು ಬಹಿರಂಗವಾಗಿ ಸಾರಿದ್ದರು ನಿತೀಶ್. ಆದರೆ ಅಂತಿಮವಾಗಿ ಅಧಿಕಾರವೇ ಪರಮ ಎಂಬ ಅವಕಾಶವಾದಿತನ ಮೆರೆದರು. ಅದಕ್ಕೆ ಶಿಕ್ಷೆಯನ್ನೂ ಎದುರಿಸಿದ್ದಾರೆ.

ರಾಜಕಾರಣ ಕುರಿತ ದೇಶಾವರಿ ಚರ್ಚೆ ನಡೆದಾಗ ಉತ್ತರಪ್ರದೇಶ ಮತ್ತು ಬಿಹಾರ ರಾಜ್ಯಗಳನ್ನು ಒಟ್ಟೊಟ್ಟಿಗೆ ಪ್ರಸ್ತಾಪಿಸುವ ರೂಢಿಯುಂಟು. ಜನಸಂಖ್ಯೆ, ಹಿಂದುಳಿದಿರುವಿಕೆ, ಊಳಿಗಮಾನ್ಯ ವ್ಯವಸ್ಥೆ, ದಟ್ಟ ಜಾತಿ ರಾಜಕಾರಣ ಎರಡೂ ರಾಜ್ಯಗಳ ಸಮಾನ ಅಂಶಗಳು. ಹೋಲಿಕೆ ಇಲ್ಲಿ ಅಂತ್ಯಗೊಳ್ಳುತ್ತದೆ.

ವಿಶೇಷವಾಗಿ ಕಳೆದ ಎರಡು ದಶಕಗಳಲ್ಲಿ ಉತ್ತರಪ್ರದೇಶದಲ್ಲಿ ಏಕಪಕ್ಷ ಸರ್ಕಾರಗಳು ಅಧಿಕಾರ ನಡೆಸಿವೆ. ಹಾಲಿ ಭಾರತೀಯ ಜನತಾಪಾರ್ಟಿಯ ಸರ್ಕಾರ ದೈತ್ಯಜನಮತ ಹೊಂದಿದೆ. ಬಿಹಾರ ರಾಜಕಾರಣಕ್ಕೆ ಸಮ್ಮಿಶ್ರ ಸರ್ಕಾರಗಳು ಇಲ್ಲವೇ ಮೈತ್ರಿಕೂಟಗಳ ಸರ್ಕಾರಗಳು- ಮೈತ್ರಿಕೂಟ ರಾಜಕಾರಣ ಅನಿವಾರ್ಯ ಆಗಿದೆ. ಬಿಜೆಪಿಯ ಬೆಂಬಲಿಗ ಮೇಲ್ಜಾತಿಗಳಿಗೆ ಬಿಹಾರದಲ್ಲಿ ಜನಸಂಖ್ಯಾಬಲವಿಲ್ಲ. ಉತ್ತರಪ್ರದೇಶದಲ್ಲಿ ಅವುಗಳ ಜನಸಂಖ್ಯೆ ಗಣನೀಯ. ಬಿಹಾರ ರಾಜಕಾರಣ ಹೀಗೆ ಹಲವು ಪಕ್ಷಗಳಲ್ಲಿ ಹಂಚಿಹೋಗಿರುವ ಕಾರಣವಾಗಿ ಮೈತ್ರಿ ರಾಜಕಾರಣ ಇಲ್ಲಿ ಬೇರು ಬಿಟ್ಟಿದೆ. ರಾಷ್ಟ್ರೀಯ ಜನತಾದಳ, ಸಂಯುಕ್ತ ಜನತಾದಳ ಹಾಗೂ ಬಿಜೆಪಿ ಈ ರಾಜಕಾರಣದ ಮೂರು ಮುಖ್ಯ ಪಾತ್ರಧಾರಿಗಳು. ಈ ಪೈಕಿ ಇಬ್ಬರು ಒಂದಾದರೆ ಮೂರನೆಯವರು ತಿಣುಕಬೇಕಾಗುವ ಸ್ಥಿತಿ.

ಸಂಯುಕ್ತ ಜನತಾದಳ ಮತ್ತು ಬಿಜೆಪಿ ಮೈತ್ರಿಯು ಲಾಲೂಪ್ರಸಾದ್ ಯಾದವ್ ಅವರ ರಾಷ್ಟ್ರೀಯ ಜನತಾದಳವನ್ನು ಕಳೆದ 15 ವರ್ಷಗಳ ಕಾಲ ಅಧಿಕಾರದಿಂದ ದೂರ ಇರಿಸಿದೆ. ಹಾಲಿ ಚುನಾವಣೆಯಲ್ಲಿ ಹಲವಾರು ಆತಂಕಗಳ ನಡುವೆಯೂ ಬಿಜೆಪಿ-ಸಂಯುಕ್ತ ಜನತಾದಳ ಗೆಲುವಿನ ಗೆರೆಯತ್ತ ತೆವಳುವುದು ಸಾಧ್ಯವಾಗಿದ್ದರೆ ಅದಕ್ಕೆ ಈ ಮೈತ್ರಿಯೇ ಕಾರಣ. ಈ ಮೈತ್ರಿಯ ಹಿಂದೆ ಕೆಲಸ ಮಾಡುವ ವ್ಯಾಪಕ ತಳಹದಿಯ ಪ್ರಬಲ ಜಾತಿ ಸಮೀಕರಣವೇ ಕಾರಣ.

ಮುಸಲ್ಮಾನರು ಮತ್ತು ಯಾದವರು ರಾಷ್ಟ್ರೀಯ ಜನತಾದಳದ ಪಾರಂಪರಿಕ ಬೆನ್ನೆಲುಬು. ಈ ಪೈಕಿ 2019ರ ಲೋಕಸಭಾ ಚುನಾವಣೆಗಳಲ್ಲಿ ಲಾಲೂ ಪಕ್ಷದಿಂದ ದೂರ ಸರಿದಿದ್ದ ಯಾದವರು ಈ ಸಲ ಭಾರೀ ಪ್ರಮಾಣದಲ್ಲಿ ತೇಜಸ್ವಿ ಯಾದವ್ ಮತ್ತು ಮಹಾಮೈತ್ರಿಯ ಬೆನ್ನ ಹಿಂದೆ ನಿಂತಿರುವುದು ನಿಚ್ಚಳವಾಗಿದೆ. ವಿಶೇಷವಾಗಿ ಮೊದಲ ಎರಡು ಹಂತಗಳ ಮತದಾನದಲ್ಲಿ ಯಾದವ್-ಮುಸ್ಲಿಮ್ ಬೆಂಬಲ ಹೆಬ್ಬಂಡೆಯOತೆ ತೇಜಸ್ವಿಯವರ ತಲೆ ಕಾಯ್ದಿದೆ. ಆರ್.ಜೆ.ಡಿ. ಪರವಾಗಿ ಮತ ಚಲಾಯಿಸಿದ್ದಾರೆ. ಹತ್ತು ಮಂದಿ ಯಾದವರ ಪೈಕಿ ಒಂಬತ್ತು ಮಂದಿ ತೇಜಸ್ವಿಯವರನ್ನು ಬೆಂಬಲಿಸಿದ್ದಾರೆ. ನಾಲ್ಕನೆಯ ಮೂರು ಭಾಗದಷ್ಟು ಮುಸ್ಲಿಮರು ಮೂರನೆಯ ಹಂತದಲ್ಲಿ ಸೀಮಾಂಚಲದ ಮುಸ್ಲಿಮ್ ಮತಗಳು ಓವೈಸಿ ಅವರ ಎಐಎಂಐಎಂ ಪಾರ್ಟಿ ಮತ್ತು ರಾಷ್ಟ್ರೀಯ ಜನತಾದಳದ ನಡುವೆ ಹಂಚಿ ಹೋಗಿವೆ. ಸಿ.ಎಸ್.ಡಿ.ಎಸ್-ಲೋಕನೀತಿ ನಡೆಸಿದ ಚುನಾವಣಾ ನಂತರದ ಸಮೀಕ್ಷೆಗಳಲ್ಲಿ ಈ ಅಂಶ ಕಂಡು ಬಂದಿದೆ.

ಕಮ್ಯೂನಿಸ್ಟ್ ಪಕ್ಷಗಳ ಜೊತೆಗಿನ ಚುನಾವಣಾ ಹೊಂದಾಣಿಕೆಯ ಕಾರಣ ಮಹಾಮೈತ್ರಿಯು ಮೊದಲ ಎರಡು ಹಂತಗಳಲ್ಲಿ ದಲಿತ ಮತಗಳನ್ನು ದೊಡ್ಡ ಸಂಖ್ಯೆಯಲ್ಲಿ ಸೆಳೆದಿದೆ. ಈ ಮತಗಳು ಪ್ರಧಾನವಾಗಿ ರವಿದಾಸ ಪಂಗಡಕ್ಕೆ ಸೇರಿದವು. ಉಳಿದಂತೆ ದುಸಾಧ- ಮೂಸಾಹರ ಸಮುದಾಯಗಳು ಬಹುತೇಕ ಎನ್.ಡಿ.ಎ. ಅಭ್ಯರ್ಥಿಗಳನ್ನು ಬೆಂಬಲಿಸಿವೆ. ಬ್ರಾಹ್ಮಣ, ಭೂಮಿಹಾರ, ರಜಪೂತ ಮುಂತಾದ ಸವರ್ಣೀಯ ಜಾತಿಗಳ ಜೊತೆಗೆ ನಿತೀಶ್ ನಿರ್ಮಿಸಿದ ಯಾದವೇತರ ಓಬಿಸಿ ಜಾತಿಗಳು, ನಿತೀಶ್ ಅವರದೇ ಜಾತಿ ಕುರ್ಮಿ-ಕೋಯರಿಗಳ ಎನ್.ಡಿ.ಎ. ನಿಷ್ಠೆ ಅಲುಗಿಲ್ಲ.

ನಿತೀಶ್ ಕುಮಾರ್ ವಿರುದ್ಧ ಮತದಾರರಲ್ಲಿ ಅಸಮಾಧಾನ ಇದ್ದದ್ದು ಸ್ಪಷ್ಟವಾಗಿದೆ. ಬಿಜೆಪಿಯ ಪಾರಂಪರಿಕ ಮತದಾರರ ಪೈಕಿ ಶೇ.50ರಷ್ಟು ಮಂದಿ ಸಂಯುಕ್ತ ಜನತಾದಳದ ಅಭ್ಯರ್ಥಿಗಳಿಗೆ ಮತ ನೀಡಿಲ್ಲ. ಈ ಪೈಕಿ ಶೇ. 13ರಷ್ಟು ಮತಗಳು ಚಿರಾಗ್ ಪಾಸ್ವಾನ್ ಅವರ ಲೋಕಜನಶಕ್ತಿ ಪಾರ್ಟಿಯ ಪಾಲಾಗಿವೆ. ನಿತೀಶ್ ಪಕ್ಷ ಏಟು ತಿಂದಿದೆ. ಆದರೆ ಸಂಯುಕ್ತ ಜನತಾದಳದ ಬೆಂಬಲಿಗರು ಬಿಜೆಪಿಯ ಅಭ್ಯರ್ಥಿಗಳನ್ನು ಬಿಡದೆ ಬೆಂಬಲಿಸಿದ್ದಾರೆ.

ನಿರುದ್ಯೋಗವನ್ನು ಮುಖ್ಯ ಚುನಾವಣಾ ವಿಷಯಗಳ ಸಾಲಿಗೆ ಸೇರಿಸಿ ಯುವಜನರನ್ನು ಸೆಳೆಯುವಲ್ಲಿ ಯಶಸ್ವಿಯಾದರು ತೇಜಸ್ವಿ. ಈ ಯುವಜನರು ಜಾತಿ ಸಮೀಕರಣಗಳಿಂದ ಹೊರಬಂದು ಮಹಾಮೈತ್ರಿಯ ಅಭ್ಯರ್ಥಿಗಳನ್ನು ಬೆಂಬಲಿಸಿದ್ದು ಹೌದು. ಆದರೆ ಈ ಬೆಂಬಲ ಯುವಕರಿಗೆ ಮಾತ್ರವೇ ಸೀಮಿತವಾಗಿತ್ತು. ಯುವತಿಯರು ನಿತೀಶ್ ಪರವಾಗಿ ನಿಂತದ್ದು ಕಂಡು ಬಂದಿದೆ. `ಮೇಲ್ಜಾತಿ’ಗಳ ಪೈಕಿ ಶೇ.15ರಷ್ಟು ಬ್ರಾಹ್ಮಣರು, ಶೇ.19ರಷ್ಟು ಭೂಮಿಹಾರರು, ಶೇ.9ರಷ್ಟು ರಜಪೂತರು, ಶೇ.16ರಷ್ಟು ಇತರೆ `ಮೇಲ್ಜಾತಿ’ಗಳು ಶೇ.11ರಷ್ಟು ಕುರ್ಮಿಗಳು, ಶೇ.16ರಷ್ಟು ಕೋಯರಿಗಳು, ಶೇ.18ರಷ್ಟು ತೀವ್ರ ಹಿಂದುಳಿದ ವರ್ಗಗಳವರು, ಶೇ.76ರಷ್ಟು ಮುಸ್ಲಿಮರು ಹಾಗೂ ಶೇ.83ರಷ್ಟು ಯಾದವರು ಮಹಾಮೈತ್ರಿಯನ್ನು ಬೆಂಬಲಿಸಿದ್ದಾರೆ.

ಲಾಕ್ ಡೌನ್ ಹಿನ್ನೆಲೆಯಲ್ಲಿ ಶ್ರಮಿಕ ವರ್ಗದ ಮಹಾವಲಸೆಯ ಸಂಕಟ ಎನ್.ಡಿ.ಎ.ಯನ್ನು ತುಸುಮಟ್ಟಿಗೆ ಬಾಧಿಸಿದ್ದರೂ ಗೆಲುವನ್ನು ನಿರಾಕರಿಸುವ ಪ್ರಮಾಣಕ್ಕೆ ಹಿಗ್ಗಿಲ್ಲ ಎಂಬುದು ಗಮನಾರ್ಹ.

ತಿಂಗಳ ಹಿಂದೆ ಮೋದಿ-ನಿತೀಶ್ ಮೈತ್ರಿಯ ಗೆಲುವು ಸಲೀಸು ಎಂದು ಸಮೂಹ ಮಾಧ್ಯಮಗಳ ಸಮೀಕ್ಷೆಗಳು ಮಾತ್ರವೇ ಅಲ್ಲದೆ ರಾಜಕೀಯ ವಲಯವೂ ಅಂದಾಜು ಮಾಡಿತ್ತು. ಈ ಅಂದಾಜಿನ ಹಿಂದೆ ಇದ್ದ ಸಮರ್ಥನೆ ಜಾತಿ ಸಮೀಕರಣದ ವ್ಯಾಪಕ ಬೆಂಬಲ ನೆಲೆ. ರಾಷ್ಟಿçÃಯ ಜನತಾದಳ-ಕಾಂಗ್ರೆಸ್-ಎಡಪಕ್ಷಗಳ ಮಹಾಮೈತ್ರಿಕೂಟ ಗೆಲ್ಲುವುದಿರಲಿ, ಬಲವಾದ ಸ್ಪರ್ಧೆಯನ್ನು ನೀಡುತ್ತದೆ ಎಂಬ ನಿರೀಕ್ಷೆ ಕೂಡ ಇರಲಿಲ್ಲ. ಲಾಲೂ ಯಾದವ್ ಅವರ ಮಗ ತೇಜಸ್ವಿ ಯಾದವ್ ಹಠಾತ್ತನೆ ಚುನಾವಣಾ ಕಣದಲ್ಲಿ ಧೂಳೆಬ್ಬಿಸಿದರು. ಕರೋನಾ ಮಹಾಮಾರಿ ಉಂಟು ಮಾಡಿದ ನಿರುದ್ಯೋಗ ಮತ್ತು ಮಹಾವಲಸೆಯಿಂದ ತತ್ತರಿಸಿದ್ದ ಯುವಜನ ಸಮೂಹದ ಭಾವನೆಗಳನ್ನು ಚುನಾವಣಾ ವಿಷಯವಾಗಿಸಿದರು. ಭಾರೀ ಜನಸ್ತೋಮಗಳ ಪ್ರತಿಸ್ಪಂದನೆಯೂ ಅವರಿಗೆ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ದೊರೆಯಿತು. ಜನ ಕಿಕ್ಕಿರಿದು ಸೇರಿದರು. ಜನಸಭೆಗಳ ಜೊತೆ ತೇಜಸ್ವಿ ಸಂವಾದ ನಡೆಸಿದರು. ದಿನವೊಂದರಲ್ಲಿ 19 ಪ್ರಚಾರಸಭೆಗಳನ್ನು ಉದ್ದೇಶಿಸಿ ಭಾಷಣ ಮಾಡಿದ್ದು ಅವರ ಚೈತನ್ಯ

ಉತ್ಸಾಹದ ದ್ಯೋತಕವಾಗಿತ್ತು.

ಮಹಾಮೈತ್ರಿಕೂಟ ಅಧಿಕಾರಕ್ಕೆ ಬಂದರೆ 10 ಲಕ್ಷ ಸರ್ಕಾರಿ ನೌಕರಿಗಳಿಗೆ ನೇಮಕದ ಆಶ್ವಾಸನೆ ನೀಡಿದರು. ನಿರುದ್ಯೋಗದ ಸುತ್ತಲೇ ಚುನಾವಣಾ ಪ್ರಚಾರದ ಸಂವಾದವನ್ನು ಕಟ್ಟಿ ಬೆಳೆಸಿದರು. ಮಹಾರಥಿ ಮೋದಿ ಮತ್ತು ಅವರ ಸೇನಾಪತಿಗಳು ನಡೆಸಿದ ಕೋಮು ಧೃವೀಕರಣದ ಹೇಳಿಕೆಗಳಿಗೆ, ಲಾಲೂ-ರಬಡಿದೇವಿ ಅವರ ಜಂಗಲ್ ರಾಜ್ಯ ಸರ್ಕಾರಗಳ ರಾಜಕುಮಾರ ಎಂಬ ಚುಚ್ಚುಮಾತುಗಳಿಗೆ ಪ್ರತಿಕ್ರಿಯೆಯನ್ನೇ ನೀಡದೆ ಸಂಯಮ ತೋರಿದರು. ಕೇವಲ 31 ವರ್ಷ ಪ್ರಾಯದ ಈ ಯುವಕ ಸುತ್ತಮುತ್ತ ದಾರಿ ತೋರುವ ಯಾವುದೇ ಹಿರಿಯ ಮಾರ್ಗದರ್ಶಕರಿಲ್ಲದೆ ಚುನಾವಣೆಯನ್ನು ಎದುರಿಸಿದ ರೀತಿ ಅನನ್ಯವಾದದ್ದು. ಸೋತರೆ ಚಿಂತೆಯಿಲ್ಲ, ಸಾಕಷ್ಟು ವಯಸ್ಸು ಬಾಕಿಯಿದೆ ಎಂಬ ಮಾತಿನ ವಯಸ್ಸಿಗೆ ಮೀರಿದ ಪರಿಪಕ್ವತೆಯನ್ನು ತೋರಿದ್ದರು. ಮೋದಿ-ಶಾ ಅವರಂತಹ ಹೇಮಾ ಹೇಮಿಗಳನ್ನು ಧೃವೀಕರಣದ ಹಾದಿಯಿಂದ ತಮ್ಮ ನಿರುದ್ಯೋಗ ಚರ್ಚೆಯ ಹಾದಿಗೆ ಎಳೆದು ತಂದ ಈ ತರುಣ ರಾಜಕಾರಣಿಯ ಸಾಧನೆ ಸಾಮಾನ್ಯವಲ್ಲ. ಭೋಜಪುರ ಮತ್ತು ಸುತ್ತಮುತ್ತಲ ಸೀಮೆಯಲ್ಲಿ ತಳವರ್ಗಗಳ ಜನರ ನಡುವೆ ಬೇರು ಬಿಟ್ಟಿರುವ ಎಡಪಕ್ಷಗಳನ್ನು ಮೈತ್ರಿಕೂಟಕ್ಕೆ ಸೇರಿಸಿಕೊಂಡು ಅವರಿಗೆ 30 ಸ್ಥಾನಗಳನ್ನು ಬಿಟ್ಟುಕೊಟ್ಟದ್ದು ಜಾಣ ರಾಜಕಾರಣ. ಎಡಪಕ್ಷಗಳು ಇವರ ನಿರೀಕ್ಷೆಯನ್ನು ಸುಳ್ಳಾಗಿಸಿಲ್ಲ ಎಂಬುದು ಗಮನಾರ್ಹ.

ತೇಜಸ್ವಿ ಯಾದವ್ ಮುಂಬರುವ ದಿನಗಳ ರಾಜಕಾರಣದಲ್ಲಿ ಗಮನಿಸಬೇಕಾದ ಪ್ರತಿಭೆ ಎಂಬುದನ್ನು ರುಜುವಾತು ಮಾಡಿ ತೋರಿದ್ದಾರೆ. ಗೆಲುವಿನ ಗೆರೆಯ ಬಳಿ ಸಾರಿ ಕಾಲು ಸೋತ ಸಾರಥಿ ತೇಜಸ್ವಿ.

ಬಿಹಾರದ ಈ ಚುನಾವಣೆಯಲ್ಲಿ ಅತಿರಥ- ಮಹಾರಥರನ್ನು ಹೊಂದಿದ ಬಿಜೆಪಿ-ಸಂಯುಕ್ತ ಜನತಾದಳ ಮೈತ್ರಿಕೂಟ ಗೆಲುವಿಗಾಗಿ ಬೆವರು ಹರಿಸುವಂತೆ ಮಾಡಿದ ಸಾಧನೆ ಅವರದು.

ತಂದೆ ಲಾಲೂ ಅವರ ದೈತ್ಯ ನೆರಳಿನಿಂದ ಹೊರಬಂದು ಸ್ವತಂತ್ರ ಅಸ್ತಿತ್ವ ರೂಪಿಸಿಕೊಂಡಿರುವುದು ಸಣ್ಣ ಸಾಧನೆಯೇನೂ ಅಲ್ಲ. ಬಿಜೆಪಿಯ ಮೋದಿ-ಶಾ ಮಹಾದೈತ್ಯ ಜೋಡಿಯ ಎದುರು ನಿಂತು ರಾಷ್ಟ್ರೀಯ  ಜನತಾದಳವನ್ನು ಅತಿ ಹೆಚ್ಚಿನ ಶಾಸಕ ಬಲದ ಪಕ್ಷವನ್ನಾಗಿ ಹೊಮ್ಮಿಸಿರುವ ದೊಡ್ಡ ಶ್ರೇಯಸ್ಸು ಅವರದು. ಇನ್ನೂ ಕಿರಿಯ ವಯಸ್ಸಿನ ಈ ರಾಜಕಾರಣಿಯ ಮುಂದೆ ಭವಿಷ್ಯ ಅಗಾಧವಾಗಿ ಹಾಸಿ ಬಿದ್ದಿದೆ. ಎಚ್ಚರದಿಂದ ಹೆಜ್ಜೆ ಇರಿಸಿದರೆ ಯಶಸ್ಸಿನ ಸೋಪಾನಗಳು ಸಲೀಸು ಆದಾವು. ಈ ಚುನಾವಣೆಯಲ್ಲಿ ಅವರು ಸೋತು ಗೆದ್ದಿದ್ದಾರೆ.

*ಲೇಖಕರು ಹಿರಿಯ ಪತ್ರಕರ್ತರು; ಪ್ರಸ್ತುತ ದೆಹಲಿಯಲ್ಲಿದ್ದುಕೊಂಡೇ ಪತ್ರಿಕೆಗಳು, ವೆಬ್‌ಸೈಟ್‌ಗಳಿಗೆ ಫ್ರೀಲಾನ್ಸ್ ಬರೆಹ ಮತ್ತು ಪುಸ್ತಕಗಳ ಅನುವಾದದಲ್ಲಿ ತೊಡಗಿಸಿಕೊಂಡಿದ್ದಾರೆ.

Leave a Reply

Your email address will not be published.