ಬುಸ್ಬುಸ್ ಗೌಡರ ಪಂಚಾಯಿತಿ ಪುರಾಣ

-ಎಸ್. ಮೆಣಸಿನಕಾಯಿ

ಕೊನೆಯ ಮೇಜಿನಲ್ಲಿ `ಸಭೆ’ ನಡೆಸುತ್ತಿದ್ದ ಸಿಟ್ರಾಮ, ಡಿಕ್ಕೇಶಿ, ಪರಮೇಶಿ, ಕುಮಾರರಾಮ, ಉರಳುಹೊಳಿ ಇದೇ ಅವಕಾಶ ಬಳಸಿಕೊಂಡು, “ಏನಪಾ ಮಂಜಣ್ಣ, ನಿನ್ನ ನಾಟಕಕ್ಕ ಡೈರೆಕ್ಟರ್ ಯಾರೋ?” ಅಂತ ಕೇಳಿ, ಕಿಡಿ ಹೊತ್ತಿಸಿದರು!

“ನೋಡಲು ಮರೆಯದಿರಿ, ಮರೆತು ನಿರಾಶರಾಗದಿರಿ… ಪ್ರಖ್ಯಾತ ನಟ ಸಿಡಿಯೂರಪ್ಪ ನಾಯಕನ ಪಾತ್ರದಲ್ಲಿ ಅಭಿನಯಿಸಿರುವ ಹೊಚ್ಚ ಹೊಸ ನಾಟಕ `ಮುನಿಗಳ ಕಾಟ’ ಅರ್ಥಾತ್ `ಮಾಡಿದ್ದುಣ್ಣೋ ಮಹಾರಾಯ’, ಇಂದು ರಾತ್ರಿ 10 ಗಂಟೆಗೆ ನಾಟಕ ಪ್ರಾರಂಭ…” ಕೈಯಲ್ಲೊಂದು ಸಣ್ಣ ಲೌಡ್‌ಸ್ಪೀಕರ್ ಹಿಡಿದುಕೊಂಡು ಕೂಗುತ್ತ ಬಂದ ಮಂಜಣ್ಣ.

ಚಹಾ ಕುಡಿಯುತ್ತಿದ್ದವರು, ಬೀಡಿ ಸೇದುತ್ತಿದ್ದವರು, ಗಿರಮಿಟ್ಟಿ ಸವಿಯುತ್ತಿದ್ದವರು ಒಂದು ಕ್ಷಣ ಆಶ್ಚರ್ಯಚಕಿತರಾಗಿ ಕಿವಿಕೊಟ್ಟು ಆಲಿಸತೊಡಗಿದರು. ಮೊನ್ನೆಮೊನ್ನೆಯಷ್ಟೇ ಗ್ರಾಮ ಪಂಚಾಯಿತಿ ಎಲೆಕ್ಷನ್‌ನಲ್ಲಿ ಹತ್ತೇ ಹತ್ತು ಮತ ಗಿಟ್ಟಿಸಿದ್ದ ಮಂಜಣ್ಣ ತಮಾಷೆಗಾಗಿ ಈ ಅನೌನ್ಸ್ಮೆಂಟ್ ಮಾಡತೊಡಗಿದ್ದ. `ಮಾಡರ್ನ್ ಹೋಟೆಲ್’ ಪ್ರವೇಶಿಸಿದ ಮಂಜಣ್ಣನಿಗೆ, “ನಿನ್ನೆಯ ಪಂಚಾಯಿತಿ ಮೆಂರ‍್ಸ್ ಸನ್ಮಾನ ಕಾರ್ಯಕ್ರಮದ ಲೌಡ್‌ಸ್ಪೀಕರ್ ನಿನ್ನ ಕೈಯಾಗ ಯಾರ ಕೊಟ್ಟರೋ ಮಂಜಣ್ಣ?” ಹೋಟೆಲ್ ಮಾಲಕಿ ಗಿರಿಜವ್ವ ಕೇಳಿದಳು.

ಕೊನೆಯ ಮೇಜಿನಲ್ಲಿ `ಸಭೆ’ ನಡೆಸುತ್ತಿದ್ದ ಸಿಟ್ರಾಮ, ಡಿಕ್ಕೇಶಿ, ಪರಮೇಶಿ, ಕುಮಾರರಾಮ, ಉರಳುಹೊಳಿ ಇದೇ ಅವಕಾಶ ಬಳಸಿಕೊಂಡು, “ಏನಪಾ ಮಂಜಣ್ಣ, ನಿನ್ನ ನಾಟಕಕ್ಕ ಡೈರೆಕ್ಟರ್ ಯಾರೋ?” ಅಂತ ಕೇಳಿ, ಕಿಡಿ ಹೊತ್ತಿಸಿದರು. “ಮಕ್ಕಳಾ, ನಾನು ಬುಸ್ ಬುಸ್ ಗೌಡನ ಪಕ್ಕಾ ಶಿಷ್ಯ… ನಾಟಕದಾಗ ನಿಮ್ಮೆಲ್ಲರ ರ‍್ಯಾದೆ ತೆಗಿತೀನಿ… ನನ್ನ ಏನು ಅಂತ ತಿಳಕೊಂಡೀರಿ?” ಮುಂಗೈ ತೋಳು ಇರದಿದ್ದರೂ ಏರಿಸುತ್ತ ಅವರ ಕಡೆ ಹೋದ ಮಂಜಣ್ಣ.

“ತೋಳು ಇದ್ದಿದ್ದರ ಭಾಳ ಹಾರಾಡತಿದ್ದಿ ಮಗನಾ… ಬಾ ಮಿರ್ಚಿ ತಿಂದು ಚಾ ಕುಡಿ ಬಾ… ಎಲೆಕ್ಷನ್ ಪ್ರಚಾರ ಮಾಡಿ ಸುಸ್ತಾಗಿರಬೇಕು” ಮತ್ತ ಕಾಲೆಳೆದ ಸಿಟ್ರಾಮ. “ಲೇ ಸಿಟ್ಯಾ… ನಿನ್ನ ಮಿರ್ಚಿ ತಿಂದು ಎಷ್ಟು ಮಂದಿ ಹಾಳಾಗ್ಯಾರ ಗೊತ್ತಿಲ್ಲನು? ಮಗನಾ… ಹಿಂದ ಗ್ರಾಮ ಪಂಚಾಯಿತಿ ಅಧ್ಯಕ್ಷರ ಎಲೆಕ್ಷನ್ಯಾಗ ಇದೇ ಉರಳುಹೊಳಿನ್ನ ಎಲ್ಲಿಗೆ ಕಳಿಸಿದ್ದಿ ಗೊತ್ತಿಲ್ಲನು? ನನ್ನ ಕಡೆ ಸಿ.ಡಿ. ಅದಾವು ಸಿ.ಡಿ.” ಮಂಜಣ್ಣನ ನೆತ್ತಿ ಉರಿಯತೊಡಗಿತ್ತು.

ಸಿಟ್ರಾಮನಿಗೆ ಅದೇನೋ ಖುಷಿ. “ಅಲ್ಲಲೇ ಮಂಜ್ಯಾ, ನಿಮ್ಮ ಬುಸ್‌ಬುಸ್‌ಗೌಡಾ ಅದೇನೋ ಸಂಕ್ರಾಂತಿ ಬರಲಿ ರತ್ತೋ ರತ್ತೋ… ಪ್ರೆಸಿಡೆಂಡ್ ಖುರ್ಚಿ ನನಗೆ ಬಿತ್ತೋ ಬಿತ್ತೋ…” ಅಂತ ಹಾಡತಿದ್ದನಲ್ಲ… ಅದೇನಲೇ?” ಕೇಳಿಯೇ ಬಿಟ್ಟ. ಮಂಜಣ್ಣನಿಗೆ ಹೊಟ್ಟೆಯಲ್ಲಿ ಖಾರ ಕಲಸಿದಂತಾಯಿತು. “ನಮ್ಮ ಬುಸ್‌ಬುಸ್ ಗೌಡನ ಲೇವೆಲ್ ಏನು, ನಿನ್ನ ಲೇವಲ್ ಏನು? ಅವನ ಬಗ್ಗೆ ಮಾತಾಡಾಕ ನಿನಗ ಯೋಗ್ಯತೆ ಆದರೂ ಎಲ್ಲೈತಿ? ಅವ ಮೌಲ್ಯಾಧಾರಿತ ರಾಜಕಾರಣಿ… ಅವ ಏನು ಅಂತ ಅವನ ಮತದಾರರಿಗೆ ಅಷ್ಟ ಗೊತ್ತು… ಅಂವ ಇವತ್ತಲ್ಲ ನಾಳೆ ಈ ಪಂಚಾಯಿತಿಗೆ ಅಧ್ಯಕ್ಷ ಆಗತಾನ… ಅವಗ ನಮ್ಮ ಪಾರ್ಟಿ ರಾಜ್ಯಾಧ್ಯಕ್ಷರೇ ಆಶ್ವಾಸನೆ ಕೊಟ್ಟಾರ…” ಮಂಜಣ್ಣನ ಮಾತಿಗೆ ಎಲ್ಲರೂ ಬಿದ್ದುಬಿದ್ದು ನಗತೊಡಗಿದರು.

ಎಲ್ಲರ ಹಣೆಗೆ ಡಿಕ್ಕಿ ಹೊಡೆದು ಹೊಡೆದು ಡಿಕ್ಕೇಶಿ ಅಂತಾನೇ ಫೇಮಸ್ ಆಗಿರುವ ಡಿಕ್ಕೇಶಿ ತನ್ನ ಜಾಗ ಬಿಟ್ಟು ಎದ್ದು ಬಂದು ಮಂಜಣ್ಣನ ಹಣೆಗೆ ಡಿಕ್ಕಿ ಹೊಡೆಯುತ್ತ ತನ್ನ ಅನುಭವವನ್ನೆಲ್ಲ ಧಾರೆ ಎರೆದ- “ಲೇ ಮಂಜ್ಯಾ… ನಿಮ್ಮ ರಾಜ್ಯಾಧ್ಯಕ್ಷಗ ಗ್ರಾಮ ಪಂಚಾಯಿತಿ ಅಧ್ಯಕ್ಷನ್ನ ಆರಿಸಾಕ ಅಧಿಕಾರ ಇರೂದಲ್ಲಲೇ, ಇಲ್ಲಿನ ಗ್ರಾಮ ಪಂಚಾಯಿತಿ ಸದಸ್ಯರಿಗೆ ಆ ಅಧಿಕಾರ ಇರತ್ತ… ಬರೇ ರಾಜ್ಯಾಧ್ಯಕ್ಷ ನನ್ನ ಕಡೆ ಅದಾನ ಅಂತ ಹೇಳಕೋಂತ ಅಡ್ಡಾಡಿದರ ಅಧ್ಯಕ್ಷಗಿರಿ ಸಿಗೂದಿಲ್ಲಪಾ… ಮೇಂರ‍್ಸ್ನ ಎಲ್ಲೆರ ರೆಸಾರ್ಟ್ಗೆ ಕರಕೊಂಡು ಹೋಗಿ ಅವರಿಗೆ ಎಲ್ಲ ವ್ಯವಸ್ಥಾ ಮಾಡಿದರ ನಿಮ್ಮ ಗೌಡ ಅಧ್ಯಕ್ಷ ಆಗತಾನ..”

“ಪಾಪ ಇದೆಲ್ಲ ಅವನಿಗೇನು ಗೊತ್ತು? ಯಾಕ ಅವನ ಗೋಳು ಹುಯ್ಕೊಳ್ತೀರಿ ಬಿಡ್ರೋ…” ಪರಿಸ್ಥಿತಿ ತಿಳಿಗೊಳಿಸಲು ಮುಂದಾದ ಕುಮಾರರಾಮ. ಮಂಜಣ್ಣ ಅವನಿಗೂ ತರಾಟೆಗೆ ತೊಗೊಂಡ. “ಲೇ ನೀನು ಒಮ್ಮೆರ ನಿನ್ನ ಮಂದಿ ಗೆಲ್ಲಿಸಿದಾಂವ ಅಲ್ಲ. ಯರ‍್ಯಾರೋ ಗೆದ್ದಾಗ ಅವರಿವರಗೂಡ ಸಮ್ಮಿಶ್ರಗೊಂಡು ಅಧ್ಯಕ್ಷ ಆಗಿ ಅಧಿಕಾರ ಅನುಭವಿಸಿದಾಂವ… ನಿನ್ನ ಮುಂದ ನಮ್ಮ ಬುಸ್‌ಬುಸ್‌ಗೌಡ ಎಷ್ಟೋ ಚೊಲೊ”. ಕುಮಾಮರಾಮ ಮೌನಕ್ಕೆ ಶರಣಾದ.

ಉರಳುಹೊಳಿ ತನ್ನ ಹಳೆಯ ಡೈಲಾಗ್ ಹೊಡೆದ. “ಲೇ ಮಂಜ್ಯಾ… ನನ್ನ ಮಂದಿ ನಿನ್ನ ಮಂದಿ ಅಂತ ಎಣಿಸ್ಕೋಂತ ಕುಂದರಬಾರದು. ಟೈಮ್ ಬಂದಾಗ ಅಧಿಕಾರ ಅನುಭವಿಸಬೇಕು. ಪಕ್ಷ-ಗಿಕ್ಷಾನೂ ನೋಡಬಾರದು. ನಮಗೆಲ್ಲ ಲಕ್ಷಿö್ಮ ಮುಖ್ಯಾನೋ ಮಗನಾ ಲಕ್ಷಿö್ಮ ಮುಖ್ಯ” ಎನ್ನುತ್ತ ಮೇಲೆದ್ದ. “ಲೇ ನಾನು ಬರೇ ದುಡ್ಡಿನ ಹಿಂದ ಬಿದ್ದದ್ದರ ಈ ಎಲೆಕ್ಷನ್ಯಾಗ ಆರಾಮ ಗೆಲ್ಲತಿದ್ದೆ. ಆದರ ನನ್ನದೂ ಮೌಲ್ಯಾಧಾರಿತ ರಾಜಕೀಯ…” ಮೀಸೇ ತಿರಿವಿದ ಮಂಜಣ್ಣ.

ಈಗ ಚರ್ಚೆಗೆ ಮುಂದಾದವನು ಪರಮೇಶಿ. “ಲೇ ಮಂಜ್ಯಾ… ಮೊನ್ನೆ ಮೊನ್ನೆ ನಿಮ್ಮ ಬುಸ್‌ಬುಸ್‌ಗೌಡ ಊರಿನ ಮುಖ್ಯ ರಸ್ತೆ ಕಾಮಗಾರಿ ಒಳಗ ಪಿ.ಡಿ.ಓ.ನಿಂದ ಲಂಚ ತೊಗೊಂಡಿರೋ ವಿಡಿಯೊ ನನ್ನ ಮೊಬೈಲಿನಾಗ ಐತಿ… ಹಂಗ ನೀನು ಆ ಕಡೇಮನಿ ಮಾಳವ್ವನ ಜೊತೆ ಆ ಹಾಳುಬಿದ್ದ ಶೆಟ್ಟರ ಹೊಲದಾಗ ಏನು ಮಾಡಾಕ್ಹತ್ತಿದ್ದಿ ಅನ್ನೂದು ದನಕಾಯುವ ಯಲ್ಲಮ್ಮಾಚಾರ್ಯ ಮೊಬೈಲ್‌ನ್ಯಾಗ ವಿಡಿಯೊ ಮಾಡ್ಯಾನ…” ಬ್ರೇಕಿಂಗ್ ನ್ಯೂಸ್ ಲೀಕ್ ಮಾಡಿಯೇಬಿಟ್ಟ. ಮಂಜಣ್ಣ ಹೊಟ್ಟೆ ಹಿಡಿದು, “ಲೇ ಪರಮೇಶಿ, ನನ್ನ ಹೊಟ್ಟಿ ಮುರಿಯಾಕ್ಹತ್ತೆತಿ ತಡಿ… ಹೊರಗ ಹೋಗಿಬಂದು ನಿನಗ ಉತ್ತರ ಕೊಡ್ತೀನಿ” ಅಂತ ಪ್ಲಾಸ್ಟಿಕ್ ಚರಿಗಿ ತುಂಬಿಕೊOಡು ಹೊರಟೇಬಿಟ್ಟ.

ಐದು ನಿಮಿಷ ಕಳೆದಿರಬೇಕು ಹೋಟೆಲ್ ರಂಗು ಕಳೆದುಕೊಂಡು. ಈಗ ಬುಸ್‌ಬುಸ್‌ಗೌಡರೇ ಬಂದುಬಿಟ್ಟರು. “ಯಾಕಾರ ಬಂದನೋ ಈ ಭಾಡ್ಯಾ… ಪುರಿ, ಭಜಿ, ಮಂಡಕ್ಕಿ ಒಷ್ಟೂ ತಿಂತಾನ, ಒಂದ್ ಪೈಸಾ ಕೊಡಂಗಿಲ್ಲ” ಗಿರಿಜವ್ವ ಗೊಣಗಿಕೊಂಡಳು.

“ಬರಬೇಕು ಬರಬೇಕು… ಮೌಲ್ಯಾಧಾರಿತ ರಾಜಕಾರಣಿ, ಸಿಡಿಯೂರಪ್ಪನವರ ಸಿ.ಡಿ. ಶಿಖಾಮಣಿ ಬುಸ್‌ಬುಸ್‌ಗೌಡರು…” ಸ್ವಾಗತ ಕೋರಿದರು ಸಿಟ್ರಾಮಯ್ಯ, ಡಿಕ್ಕೇಶಿ, ಪರಮೇಶಿ, ಕುಮಾರರಾಮ. ಗಾಗಲ್ ತೆಗೆಯುತ್ತ, ಒಂದು ಕೈಯಲ್ಲಿದ್ದ ಧೋತರದ ಚುಂಗನ್ನು ಕೈಬಿಟ್ಟು ಬೆಂಚಿನ ಮೇಲೆ ಕುಳಿತ ಗೌಡರು, “ಏನು ನಮ್ಮ ಶಿಷ್ಯಾ ಮಂಜ್ಯಾಗ ಎಲ್ಲರೂ ಏನೋ ಕಾಡಿಸಿದಂಗ ಕಾಣಿಸ್ತು…” ಪೀಠಿಕೆ ಹಾಕಿದರು. “ಏನಿಲ್ಲರಿ, ಅಂವಾ ನಿಮ್ಮನ್ನ ಭಾಳ ಹೊಗಳತಿದ್ದ, ನಾವು ನಿಮ್ಮನ್ನ ತೆಗಳತಿದ್ವಿ ಅಷ್ಟ” ಸಿಟ್ರಾಮ ನೇರವಾಗಿ ವಿಷಯಕ್ಕ ಬಂದ. ಡಿಕ್ಕೇಶಿನೂ ತಡಮಾಡಲಿಲ್ಲ, “ಗೌಡರ, ನಿಮ್ಮದೂ ಭಾರಿ ಧರ‍್ಯಾರ ಮತ್ತ, ಅಲ್ರಿ ನಿಮ್ಮ ಬಾಸು ಸಿಡಿಯೂರಪ್ಪನವರ ಮ್ಯಾಲೆ ಮುಗಿಬಿದ್ದೀರಲ್ಲ? ನಿಮ್ಮನ್ನ ಪಾರ್ಟಿಯಿಂದ ಸಸ್ಪೆಂಡ್ ಮಾಡಿದರ ಹೆಂಗ ಅಂತ?” ಕೇಳಿಯೇ ಬಿಟ್ಟ.

ಗೌಡರು ಮೆಲ್ಲನೆ ದನಿಯಲ್ಲಿ ಹೇಳಿದರು- “ಸಿಡಿಯೂರಪ್ಪನ್ನ ಎತ್ತಾಕ ಏನಾರ ಒಂದು ಕಾರಣ ಬೇಕಾಗೈತಿ. ನೀನು ಇವನ ವಿರುದ್ಧ ಓಪನ್ ಆಗೇ ಕತ್ತಿ ಮಸೀತಾ ಇರು ಅಂತ ನನಗ ನಮ್ಮ ಪಾರ್ಟಿಯ ದೊಡ್ಡಾವರ ಹೇಳ್ಯಾರ. ಇವ ಮತ್ತ ತಾನ ಗ್ರಾಮ ಪಂಚಾಯಿತಿ ಪ್ರೆಸಿಡೆಂಟ್ ಆಗಬೇಕಂತ ಮಾಡ್ಯಾನ… ನಾ ಬಿಟ್ಟೇನೇನು ಇವನ್ನ…”

ಪರಮೇಶಿ ಗೌಡರನ್ನ ಮತ್ತಷ್ಟು ಉಬ್ಬಿಸಲು ಹೇಳಿದ- “ಗೌಡ್ರ, ನಿಮ್ಮ ಮಂಜ್ಯಾ ಇವತ್ತ ರಾತ್ರಿ ಊರಾಗ ನಾಟಕ ಐತಿ ಅಂತ ಡಂಗುರ ಹೊಡಿಯಾಕಹತ್ತಿದ್ದ. ಅದೇನರ ಇದ್ದದ್ದ ಖರೆ ಆದರೆ ಸಿಡಿಯೂರಪ್ಪ ಹೀರೊ, ನೀವ ವಿಲನ್ ಆಗಿದ್ದರ ನಾಟಕ ರಂಗೇರುತ್ತಿತ್ತು ನೋಡ್ರಿ”.

ಗೌಡರಿಗೆ ತಮ್ಮ ಮನೆಯಲ್ಲಿ ಬೆಳಗ್ಗೆ ನಡೆದಿದ್ದ ಚರ್ಚೆ ಇಷ್ಟು ಲಗೂ ಹೆಂಗ ಹೊರಗ ಬಂತು ಅಂತ. “ಏನು ಹೇಳಿದರಿ ಮಂಜ್ಯಾ?” ಹುಬ್ಬೇರಿಸಿ ಕೇಳಿದರು. “ಒಂದು ಲೌಡ್‌ಸ್ಪೀಕರ್ ಹಿಡ್ಕೊಂಡು ಇವತ್ತ ನಾಟಕ ಐತಿ, ಸಿಡಿಯೂರಪ್ಪನ ಅದರಾಗ ನಾಯಕನ ಪಾತ್ರ ಮಾಡ್ತಾನ ಅಂತ ಒದರಕೊಂತ ಬಂದ” ಪರಮೇಶಿ ತಿಳಿಸಿಯೇ ಬಿಟ್ಟ. ಗೌಡರ ಮುಖ ಬಿಳಿಚಿಕೊಂಡಿತು. “ಈ ಅಡ್ನಾಡಿ ಮಂಜ್ಯಾ ಆಗಲೇ ಊರಾಗ ಡಂಗುರ ಹೊಡೆದುಬಿಟ್ನಾ? ಏನ್ ಮನುಷ್ಯಾ ಅದಾನ್ರಿ ಇಂವ… ಮತ್ತ ಏನೇನು ಹೇಳಿದರಿ?” ಗೌಡರ ಹಣೆ ಮೇಲೆ ಮತ್ತಷ್ಟು ಗೆರೆಗಳು ಮೂಡಿದವು.

“ಗೌಡ್ರ ನಿಮಗೇನು ಕೊಡಲಿ?” ಗಿರಿಜವ್ವ ಬಂದು ಕೇಳಿದಳು. ಎಲ್ಲರ ಕಡೆ ನೋಡಿದ ಗೌಡ್ರು, “ನಿಮ್ಮದು ಆಗೈತೇನು…?” ಅಂತ ಮೆಲ್ಲಗೆ ಕೇಳಿದರು. “ನೀವೇನೂ ಕೇಳಬ್ಯಾಡ್ರಿ, ನಾ ಒಬ್ಬನ ತಿಂತೀನಿ’ ಅನ್ನೂ ಧ್ವನಿ ಅವರ ಮಾತಿನಲ್ಲಿತ್ತು. “ಗೌಡರೇ, ನೀವು ನಮ್ಮ ಗುಂಪಿನಲ್ಲಿ ಇದ್ದಾಗಲೂ ಒಂದು ಪೈಸೆ ಖರ್ಚು ಮಾಡಲಿಲ್ಲ. ಅಧಿಕಾರ ಸಿಕ್ಕಾಗ ರಸ್ತೆ, ಶೌಚಾಲಯ ಎಲ್ಲದರ ದುಡ್ಡನ್ನೂ ಬಳಕೊಂಡು ತಿಂದಿರಿ. ಈಗ ಒಂದು ಚಹಾ ಹೇಳಾಕ ಹಿಂದ ಮುಂದ ನೋಡತೀರಲ್ರಿ” ಕುಮಾರರಾಮ ಟೈಮ್ ನೋಡಿ ಒಂದ್ ಕಲ್ಲು ಎಸೆದೇಬಿಟ್ಟ.

“ಹೇ ಚಹಾ ಏನು… ಎಲ್ಲರೂ ಮಂಡಕ್ಕಿ ತಿನ್ರಿ… ಇವರೆಲ್ಲರಿಗೂ ಒಂದೊAದು ಮಂಡಕ್ಕಿ-ಮಿರ್ಚಿ ಕೊಡವಾ” ಗಿರಿಜವ್ವನಿಗೆ ಆದೇಶಿಸಿದರು ಗೌಡರು. ಗಿರಿಜವ್ವನೂ ತನ್ನ ಅಳಲು ತೋಡಿಕೊಂಡೇ ಬಿಟ್ಟಳು- “ಗೌಡ್ರ, ನೀವು ಹಿಂದಿನ ಎಲೆಕ್ಷನ್ಯಾಗ ನಿಮ್ಮ ಬೆಂಬಲಿಗರಿಗೆ ಮಾಡಿಸಿದ್ದ ನಾಷ್ಟಾದ ಬಾಕಿ ಇನ್ನೂ ಕೊಟ್ಟಿಲ್ಲ… ಈಗರ ಕೊಡ್ರಿ ಗೌಡರೇ ನಾವು ದುಡ್ಕೊಂಡು ತಿನ್ನವರು.. ನಮಗ ಅಂಗಡಿ ನಡೆಸೂದು ಕಷ್ಟ ಆಗತೈತಿ”. ಗೌಡರಿಗೆ ಎಲ್ಲರ ಎದುರಿಗೆ ಅವಮಾನ ಆಯಿತು. ಕೂಡಲೇ ಸಾವರಿಸಿಕೊಂಡು ಹೇಳಿದರು- “ನೀ ಆವಾಗಲೇ ಕೇಳಬೇಕಿಲ್ಲವಾ… ಇರಲಿ ಹಳೆಯದು ಬಾಕಿ ಆಮೇಲೆ ಕೊಡ್ತೀನಿ… ಇವತ್ತನದು ಈಗಲೇ ಕೊಟ್ಟು ಹೋಗ್ತೀನಿ ತೊಗೊ” ಅಂತ ಆಶ್ವಾಸನೆ ಕೊಟ್ಟರು.

“ಗೌಡ್ರು ಈ ಸಲ ಅಧ್ಯಕ್ಷರಾದರ ಎಲ್ಲ ಬಾಕಿ ಕೊಡ್ತಾರ… ನಿಮ್ಮ ಹೋಟೆಲ್ ಇರುವ ಭಾಗಕ್ಕ ಅನುದಾನ ಬಂದಿಲ್ಲ ಅಂತಾನ ಗೌಡರು ಸಿಡಿಯೂರಪ್ಪಗ ಆವಾಜ ಹಾಕಾಕಹತ್ಯಾರ. ನೀ ಏನೂ ಚಿಂತಿ ಮಾಡಬ್ಯಾಡ ಗಿರಿಜವ್ವ” ಸಿಟ್ರಾಮ ಹೇಳಿದ್ದು ತಮಾಷೆಗೋ, ಗಂಭೀರವಾಗಿಯೋ ಒಂದೂ ತಿಳಿಯಲಿಲ್ಲ.

ಮಂಜಣ್ಣ ಓಡೋಡಿ ಬರೋದು ಕಾಣಿಸಿತು. ಗುಡ್ ನ್ಯೂಸ್ ಐತೋ ಬ್ಯಾಡ್ ನ್ಯೂಸ್ ಐತೋ ಗೌಡರಿಗೆ, ಅಲ್ಲಿದ್ದವರಿಗೆ ಕುತೂಹಲ.

“ಗೌಡ್ರ ಗೌಡ್ರ… ಈ ಸಲಾನೂ ಸಿಡಿಯೂರಪ್ಪನೇ ನಮ್ಮ ಪಂಚಾಯಿತಿ ಅಧ್ಯಕ್ಷ ಅಂತ..” ಮಂಜಣ್ಣ ತಂದ ಬ್ರೇಕಿಂಗ್ ಸುದ್ದಿಗೆ ಗೌಡರ ಎದೆ ಝಲ್ ಅಂದಿರಬೇಕು. ಅಲ್ಲಿಂದ ಎದ್ದು ಹೊರಟೇ ಬಿಟ್ರು… ಗಿರಿಜವ್ವ ದುಡ್ಡು ಕೇಳಿದ್ದೂ ಅವರ ತಲೆಗೆ ಹೋಗಲಿಲ್ಲ. ಸಿಟ್ರಾಮ, ಡಿಕ್ಕೇಶಿ, ಕುಮಾರಾಮ, ಪರಮೇಶಿ, “ನಾವು ತಿಂದಿರೋ ದುಡ್ಡು ನಾವು ಕೊಡ್ತೀವಿ ಬಿಡು ಗಿರಿಜವ್ವ” ಅಂತ ಸಮಾಧಾನ ಹೇಳಿದರು.

Leave a Reply

Your email address will not be published.