ಬೃಹತ್ ಕಸದ ರಾಶಿ ತತ್ತರಿಸುತ್ತಿರುವ ಬಿ.ಬಿ.ಎಂ.ಪಿ

ಇತ್ತೀಚೆಗೆ, ಸಚಿವ ಜಿ.ಪರಮೇಶ್ವರ ಅವರು ಕಸನಿರ್ವಹಣೆ ಅಧ್ಯಯನ ಮಾಡಲು ಫ್ರಾನ್ಸ್ ದೇಶಕ್ಕೆ ಹೋಗಿದ್ದರು. ವೈಜ್ಞಾನಿಕವಾಗಿ ತ್ಯಾಜ್ಯ ನಿರ್ವಹಣೆ ಮಾಡುವ ವಿದೇಶಿ ತಂತ್ರಜ್ಞಾನವನ್ನು ಇಲ್ಲಿಯೂ ಅಳವಡಿಸಿಕೊಳ್ಳಬೇಕೆಂಬ ಸರ್ಕಾರದ ಆಶಯವೇನೋ ಸರಿ. ಆದರೆ ಇಲ್ಲಿ ಅದರ ಅನುಷ್ಠಾನ ಕಾಣದಾಗಿದೆ.

ನಗರಗಳು ಬೆಳೆದಂತೆ ಸಂಗ್ರಹವಾಗುವ ಹೆಚ್ಚುವರಿ ತ್ಯಾಜ್ಯಗಳನ್ನು ವಿಲೇವಾರಿ ಮಾಡುವಲ್ಲಿ ಇಂದು ನಗರಪಾಲಿಕೆಗಳು ಮಿತಿಮೀರಿದ ಸಮಸ್ಯೆಗಳನ್ನು ಎದುರಿಸುತ್ತಿವೆ. ಅದರಲ್ಲೂ ನಮ್ಮ ಉದ್ಯಾನ ನಗರಿ, ವಿಜ್ಞಾನದ ನಗರಿ, ಜ್ಞಾನದ ನಗರಿ, ಆರೋಗ್ಯ ನಗರಿ, ಸಿಲಿಕಾನ್ ವ್ಯಾಲಿ ಎಂದೆಲ್ಲಾ ಕರೆಸಿಕೊಳ್ಳುವ ಬೆಂಗಳೂರು ನಗರ ಇಂದು ತ್ಯಾಜ್ಯ ನಿರ್ವಹಣೆ ಸಮಸ್ಯೆಗಳಲ್ಲಿ ಸಿಕ್ಕು ತತ್ತರಿಸುತ್ತಿದೆ. ಪ್ರತಿನಿತ್ಯ ಸಂಗ್ರಹವಾಗುವ ನೂರಾರು ಟನ್ ತ್ಯಾಜ್ಯವನ್ನು ನಗರದಿಂದ ಹೊರಕ್ಕೆ ಸಾಗಿಸಿ ವಿಲೇವಾರಿ ಮಾಡುವುದೇ ಮಹಾನಗರ ಪಾಲಿಕೆಗೆ ದೊಡ್ಡ ತಲೆನೋವಾಗಿದೆ. ತ್ಯಾಜ್ಯವನ್ನು ನಗರದಿಂದ ಹೊರಕ್ಕೆ ಸಾಗಿಸಿ ಸುರಿಯುವ ಸ್ಥಳದ ಆಸುಪಾಸಿನ ನಿವಾಸಿಗಳು ಇತ್ತೀಚೆಗೆ ತೀವ್ರ ವಿರೋಧ ವ್ಯಕ್ತಪಡಿಸಿ ತ್ಯಾಜ್ಯ ಕೊಂಡೊಯ್ಯುವ ನೂರಾರು ವಾಹನಗಳನ್ನು ತಡೆ ಹಿಡಿದಿದ್ದರು. ಸಮಸ್ಯೆ ಈಗ ತಾತ್ಕಾಲಿಕ ಪರಿಹಾರ ಕಂಡರೂ ಶಾಶ್ವತ ಪರಿಹಾರ ದೊರಕಿಲ್ಲ.

ಹೊರ ದೇಶಗಳಲ್ಲಿರುವ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಇಲ್ಲಿನ ಕಸದ ಸಮಸ್ಯೆಗೊಂದು ಪರಿಹಾರ ಕಂಡುಕೊಳ್ಳಬೇಕೆಂದು ಪಾಲಿಕೆ ಸದಸ್ಯರು, ಅಧಿಕಾರಿಗಳು ಹೊರ ದೇಶಗಳಲ್ಲಿ ಸಾಕಷ್ಟು ಸಲ ಸುತ್ತಾಡಿ ಬಂದರು. ಇತ್ತೀಚೆಗೆ, ಸಚಿವ ಜಿ.ಪರಮೇಶ್ವರ ಅವರು ಕಸನಿರ್ವಹಣೆ ಅಧ್ಯಯನ ಮಾಡಲು ಫ್ರಾನ್ಸ್ ದೇಶಕ್ಕೆ ಹೋಗಿದ್ದರು. ವೈಜ್ಞಾನಿಕವಾಗಿ ತ್ಯಾಜ್ಯ ನಿರ್ವಹಣೆ ಮಾಡುವ ವಿದೇಶಿ ತಂತ್ರಜ್ಞಾನವನ್ನು ಇಲ್ಲಿಯೂ ಅಳವಡಿಸಿಕೊಳ್ಳಬೇಕೆಂಬ ಸರ್ಕಾರದ ಆಶಯವೇನೋ ಸರಿ. ಆದರೆ ಇಲ್ಲಿ ಅದರ ಅನುಷ್ಠಾನ ಕಾಣದಾಗಿದೆ.

‘ಕಣ ಕಾಯಬಹುದು, ಹೆಣ ಕಾಯೋಕೆ ಆಗೋದಿಲ್ಲ’ ಎಂಬಂತೆ ಕಸ ಸುರಿಯುವವರನ್ನು ಕಾಯುವುದೂ ಸುಲಭವಲ್ಲ! ಕಣ್ತಪ್ಪಿಸಿ ಮರೆಯಲ್ಲಿ ಕಸ ಸುರಿಯುವವರನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ರಾತ್ರೋರಾತ್ರಿ ಬೀದಿಗಳಲ್ಲಿ ಕಸ ಸುರಿಯುತ್ತಾರೆ. ಬೈಕ್‍ಗಳಲ್ಲಿ ಹೋಗುತ್ತಲೇ ಕಸದ ಚೀಲಗಳನ್ನು ಎಸೆಯುತ್ತಾರೆ. ಕಣ್ಣುರೆಪ್ಪೆ ಪಿಳುಕಿಸುವಷ್ಟರಲ್ಲಿ ಕಸದ ಚೀಲಗಳು ರಸ್ತೆಯಲ್ಲಿ ಬಿದ್ದಿರುತ್ತವೆ.

ಇತ್ತೀಚೆಗೆ ಮಹಾನಗರ ಪಾಲಿಕೆ ಹೊರಡಿಸಿದ ಆದೇಶದ ಪ್ರಕಾರ ನಾಗರಿಕರು ಹಸಿ ಮತ್ತು ಒಣ ಕಸವನ್ನು ವಿಂಗಡಿಸಿ ನೀಡದಿದ್ದರೆ, ಪೌರಕಾರ್ಮಿಕರು ಕಸ ಒಯ್ಯುವುದಿಲ್ಲ; ಅಧಿಕಾರಿಗಳು ಮನೆಬಾಗಿಲಿಗೆ ಬಂದು ದಂಡ ಹಾಕುವರು. ಬೇರ್ಪಡಿಸದ ಕಸ ಸಂಗ್ರಹಿಸುವ ಪೌರಕಾರ್ಮಿಕರ ವಿರುದ್ಧವೂ ಕ್ರಮ ಜರುಗಿಸುವುದಾಗಿ ಪಾಲಿಕೆ ಎಚ್ಚರಿಸಿದೆ. ರಸ್ತೆ ಮತ್ತು ಖಾಲಿ ಪ್ರದೇಶಗಳಲ್ಲಿ ಕಸ ಸುರಿಯುವುದನ್ನು ತಡೆಗಟ್ಟಲು ನಿವೃತ್ತ ಮಾರ್ಷಲ್‍ಗಳನ್ನು ಬಳಸಿಕೊಳ್ಳುವುದಾಗಿಯೂ, ಕಸ ಹಾಕುವ ಸ್ಥಳಗಳಲ್ಲಿ ಸಿ.ಸಿ.ಟಿ.ವಿ. ಕ್ಯಾಮೆರಾಗಳನ್ನು ಅಳವಡಿಸಿ ಕಸ ಹಾಕುವವರಿಗೆ ದಂಡ ಹಾಕುವುದಾಗಿಯೂ ಹೇಳಿತ್ತು. ಅದರಂತೆ, ಆದೇಶ ಉಲ್ಲಂಘಿಸಿದ ನಾಗರಿಕರಿಂದ ಸುಮಾರು ಹತ್ತು ಲಕ್ಷ ರೂಪಾಯಿ ದಂಡ ವಸೂಲಿ ಮಾಡಿರುವುದಾಗಿಯೂ ಪಾಲಿಕೆ ಹೇಳಿಕೊಂಡಿದೆ.

‘ಕಣ ಕಾಯಬಹುದು, ಹೆಣ ಕಾಯೋಕೆ ಆಗೋದಿಲ್ಲ’ ಎಂಬಂತೆ ಕಸ ಸುರಿಯುವವರನ್ನು ಕಾಯುವುದೂ ಸುಲಭವಲ್ಲ! ಕಣ್ತಪ್ಪಿಸಿ ಮರೆಯಲ್ಲಿ ಕಸ ಸುರಿಯುವವರನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ರಾತ್ರೋರಾತ್ರಿ ಬೀದಿಗಳಲ್ಲಿ ಕಸ ಸುರಿಯುತ್ತಾರೆ. ಬೈಕ್‍ಗಳಲ್ಲಿ ಹೋಗುತ್ತಲೇ ಕಸದ ಚೀಲಗಳನ್ನು ಎಸೆಯುತ್ತಾರೆ. ಕಣ್ಣುರೆಪ್ಪೆ ಪಿಳುಕಿಸುವಷ್ಟರಲ್ಲಿ ಕಸದ ಚೀಲಗಳು ರಸ್ತೆಯಲ್ಲಿ ಬಿದ್ದಿರುತ್ತವೆ. ಹೀಗೆ ಬಿದ್ದ ಕಸದ ಗುಡ್ಡೆಗಳು ಬೆಳಕು ಹರಿಯುವಷ್ಟರಲ್ಲಿ ಗುಡ್ಡವಾಗಿ ಬೆಳೆದಿರುತ್ತವೆ.

ತ್ಯಾಜ್ಯ ವಿಲೇವಾರಿಯ ಪ್ರತಿಯೊಂದು ಹಂತದಲ್ಲೂ ಮಹಾನಗರ ಪಾಲಿಕೆ ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿದೆ. ಎಲ್ಲೆಂದರಲ್ಲಿ ಕಸ ಸುರಿ ಯುವವರು, ಬೀದಿಗಳನ್ನು ಗುಡಿಸಿ ಸ್ವಚ್ಚ ಮಾಡುವವರು, ತ್ಯಾಜ್ಯವನ್ನು ನಗರದಿಂದ ಹೊರಕ್ಕೆ ಸಾಗಿಸುವವರು… ಹೀಗೇ ಎಲ್ಲಾ ಹಂತಗಳಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದೆ. 2013ರಲ್ಲಿಯೇ ಹಸಿ ಹಾಗೂ ಒಣ ಕಸ ವಿಂಗಡಿಸುವ ಕ್ರಮವನ್ನು ಕಡ್ಡಾಯಮಾಡಿದರೂ ಅದು ಇನ್ನೂ ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ. ಕೋರ್ಟ್ ಕೂಡ ಈ ವಿಷಯದಲ್ಲಿ ಗಂಭೀರವಾಗಿಯೇ ಹಸ್ತಕ್ಷೇಪ ಮಾಡಿ, ಮಹಾನಗರ ಪಾಲಿಕೆಯನ್ನು ತರಾಟೆಗೆ ತೆಗೆದುಕೊಂಡಿದೆ. ಸಮರ್ಪಕ ತ್ಯಾಜ್ಯ ನಿರ್ವಹಣೆಗೆ ಕ್ರಮ ಕೈಗೊಳ್ಳುವಂತೆ ಎಚ್ಚರಿಸಿದೆ.

ಪ್ಲೆಕ್ಸ್ ಬ್ಯಾನರ್, ಹೋರ್ಡಿಂಗ್ಸ್, ರಸ್ತೆ ಗುಂಡಿಗಳು, ತ್ಯಾಜ್ಯ ನಿರ್ವಹಣೆ, ಸಂಚಾರ ದಟ್ಟಣೆ ಮುಂತಾದ ಬಗೆಹರಿಯದ ಸಮಸ್ಯೆಗಳಿಂದ ಬಳಲುತ್ತಿರುವ ಬೆಂಗಳೂರನ್ನು ಬೇರೊಂದು ಸ್ಥಳಕ್ಕೆ ಏಕೆ ಸ್ಥಳಾಂತರಿಸಬಾರದೆಂದು ಕೋರ್ಟು ಮಾಲಿನ್ಯ ನಿಯಂತ್ರಣ ಮಂಡಳಿಗೆ ಪ್ರಶ್ನೆ ಹಾಕಿತ್ತು. ಇದು ಮೇಲ್ನೋಟಕ್ಕೆ ಹಾಸ್ಯಾಸ್ಪದವೆನಿಸಿದರೂ, ಬಿಗಡಾಯಿಸಿರುವ ಭೀಕರ ಸಮಸ್ಯೆಗಳಿಂದ ಬಿಡುಗಡೆ ಹೊಂದುವ ಪ್ರಯತ್ನ ಪಾಲಿಕೆ ಮಾಡದಿದ್ದರೆ, ಭವಿಷ್ಯದಲ್ಲಿ ಬೆಂಗಳೂರಿನ ಚಿತ್ರಣವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಾಗದು. ಕಸ ಒಂದು ಅನುಪಯುಕ್ತ ವಸ್ತುವಾದರೂ ಅದು ಸೃಷ್ಟಿಸಿರುವ ಸಮಸ್ಯಾತ್ಮಕ ಗೋಜು ಗೊಂದಲಗಳು ಮಾತ್ರ ಬೃಹದಾಕಾರದಷ್ಟು.

ಒಂದು ಕಾಲದಲ್ಲಿ ಬೆಂಗಳೂರಿನ ಕಸದ ಸಮಸ್ಯೆ ಇಷ್ಟೊಂದು ಬಿಗಡಾಯಿಸಿರಲಿಲ್ಲ. ಐಟಿ, ಬಿಟಿ. ಗಳು ತಲೆ ಎತ್ತಿದ ಮೇಲೆ ಬೆಂಗಳೂರಿನ ಸಮಗ್ರ ಚಿತ್ರಣವೇ ಬದಲಾಯಿತು. ಅದರೊಟ್ಟಿಗೆ ಮಿತಿಮೀರಿದ ಕಸದ ಉತ್ಪಾದನೆಯೂ ಆಯಿತು. ಅದರ ವಿಲೇವಾರಿಯ ಸಮಸ್ಯೆಗಳೂ ಬೃಹದಾಕಾರ ತಾಳಿದವು. ನಗರ ಮತ್ತು ಜನಸಂಖ್ಯೆ ಬೆಳೆದಂತೆ ಮಹಾ ನಗರಪಾಲಿಕೆ ತ್ಯಾಜ್ಯ ನಿರ್ವಹಣೆಗೆ ಪರ್ಯಾಯ ಪರಿಕಲ್ಪನೆಗಳನ್ನು ರೂಪಿಸಿ ಅವುಗಳನ್ನು ಹಂತ ಹಂತವಾಗಿ ಜಾರಿಗೆ ತರವಂತಹ ಕೆಲಸಗಳು ಆಗಲಿಲ್ಲ. ಅದರಲ್ಲಿ ವಿಫಲವಾಗಿದ್ದರಿಂದಲೇ ಇಂದು ಪಾಲಿಕೆ ಬೃಹತ್ ಕಸದ ಸಮಸ್ಯೆಯಲ್ಲಿ ಸಿಕ್ಕು ತತ್ತರಿಸುತ್ತಿದೆ.

‘ಮಾಡೋದು ದುರಾಚಾರ, ಮನೆಯ ಮುಂದೆ ಬೃಂದಾವನ’ ಎನ್ನುವಂತೆ ತಮ್ಮ ಮನೆಯ ಮುಂದೆ ಕಸವಿರಬಾರದು, ಆದರೆ ಬೇರೆಯವರ ಮನೆ ಮುಂದೆ ಕಸ ಸುರಿದರೆ ತಪ್ಪಿಲ್ಲ ಎಂಬ ಧೋರಣೆ ಇವರದು.

ಇದರ ಜೊತೆಗೆ ಜನಸಾಮಾನ್ಯರ ಪರಿಸರ ನಿರ್ಲಕ್ಷ್ಯವೂ ತಳುಕು ಹಾಕಿಗೂಡಿದೆ. ಕಸದ ಸಮಸ್ಯೆ ಇಂದು ಇಷ್ಟು ಉತ್ತುಂಗಕ್ಕೇರಲು ಅವರೂ ಭಾಗಶಃ ಕಾರಣರು ಎಂದರೆ ತಪ್ಪಲ್ಲ. ಕೆಲವರಿಗೆ ತಮ್ಮ ಮನೆಯ ಸುತ್ತಮುತ್ತ ಕಸ ಹಾಕಬಾರದು, ತಾವು ವಾಸಿಸುವ ಆವರಣವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕೆಂಬ ಸಾಮಾನ್ಯ ಪ್ರಜ್ಞೆಯಿಲ್ಲ, ಪರಿಸರ ಕಾಳಜಿಯೂ ಇಲ್ಲ. ಕಸವನ್ನು ಎಲ್ಲೆಂದರಲ್ಲಿ ಸುರಿಯುವರು. ಒಬ್ಬರನ್ನು ನೋಡಿ ಒಬ್ಬರು ಅನುಕರಣೆ ಮಾಡುವ ಪರಿಪಾಟ ಬೆಳೆದಿದೆ. ಪ್ರಾಯೋಗಿಕವಾಗಿ ಬಳಕೆಗೆ ಬಂದ ಈ ಅವೈಚಾರಿಕ ಹವ್ಯಾಸಗಳೇ ಇಂದಿನ ಕಸದ ಸಮಸ್ಯೆಗಳಿಗೆ ಮೂಲ ದ್ರವ್ಯವಾಗಿವೆ. ‘ಮಾಡೋದು ದುರಾಚಾರ, ಮನೆಯ ಮುಂದೆ ಬೃಂದಾವನ’ ಎನ್ನುವಂತೆ ತಮ್ಮ ಮನೆಯ ಮುಂದೆ ಕಸವಿರಬಾರದು, ಆದರೆ ಬೇರೆಯವರ ಮನೆ ಮುಂದೆ ಕಸ ಸುರಿದರೆ ತಪ್ಪಿಲ್ಲ ಎಂಬ ಧೋರಣೆ ಇವರದು.

ದಿನದ ಇಪ್ಪತ್ನಾಲ್ಕು ಗಂಟೆಗಳ ಕಾಲ ಕಸ ಸುರಿಯುವವರನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯಲು ಸಾಧ್ಯವಿಲ್ಲ. ಹೇಗಾದರೂ ಮಾಡಿ ಕಣ್ತಪ್ಪಿಸಿ ಕಸವನ್ನು ಸುರಿದೇತೀರುತ್ತಾರೆ. ಇನ್ನು ಬೀದಿ ನಾಯಿಗಳ ಉಪಟಳ ಮೇರೆಮೀ ರಿದೆ. ಅವುಗಳಿಗೆ ಯಾವ ಅಂಕುಶವೂ ಇಲ್ಲ. ಕಸದ ಚೀಲಗಳನ್ನು ಕಚ್ಚಿ ಎಳೆದು ರಸ್ತೆಯ ಉದ್ದಗಲಕ್ಕೂ ಚೆಲ್ಲಾಡಿಬಿಡುತ್ತವೆ. ನಾಯಿಗಳನ್ನು ನಿಯಂತ್ರಿಸುವುದೂ ಪಾಲಿಕೆಯವರಿಗೊಂದು ನುಂಗಲಾರದ ತುತ್ತಾಗಿದೆ. ಪ್ರಾಣಿದಯಾ ಸಂಸ್ಥೆಯವರ ಅನುಕಂಪದ ಬೊಬ್ಬೆ ಅವರ ನಿದ್ದೆಯನ್ನು ಕೆಡಿಸಿದೆ. ಇನ್ನು ಬೆಂಗಳೂರಿನಲ್ಲಿ ಪ್ಲ್ಯಾಸ್ಟಿಕ್ ತ್ಯಾಜ್ಯ ಮತ್ತು ಚಿಂದಿಗಳನ್ನು ಆಯುವ ದೊಡ್ಡ ಪರಿವಾರವೇ ಇದೆ. ಬಳಸಿ ಬಿಸಾಡಿದ ಪ್ಲ್ಯಾಸ್ಟಿಕ್ ಬಾಟಲ್‍ಗಳನ್ನು, ಖಾಲಿ ಡಬ್ಬಗಳನ್ನು, ಕಾಗದಗಳನ್ನು, ರಟ್ಟುಗಳನ್ನು ಆಯ್ದು ಶೇಖರಿಸಿ ಗುಜರಿಗಳಿಗೆ ಹಾಕುವುದರಲ್ಲಿ ತಮ್ಮ ಬದುಕನ್ನು ಕಟ್ಟಿಕೊಂಡವರು ಬಹಳಷ್ಟು ಮಂದಿ ಇದ್ದಾರೆ. ಬೀದಿಗಳಲ್ಲಿ ಗುಡ್ಡೆ ಬಿದ್ದಿರುವ ಕಸದ ಕವರ್‍ಗಳನ್ನು ಬಿಚ್ಚಿ ಕೆದರಿ ತಮಗೆ ಬೇಕಾದ ವಸ್ತುಗಳನ್ನು ಆಯ್ದುಕೊಂಡು ಉಳಿದ ಕಸವನ್ನು ಮನಸ್ಸಿಗೆ ಬಂದಂತೆ ಹರಡಿಬಿಡುತ್ತಾರೆ. ಈ ಕೆಲಸ ಮುಂಜಾನೆಯೇ ಪ್ರಾರಂಭವಾಗಿ ಕಸ ತೆಗೆಯುವವರು ಬರುವುದರೊಳಗೆ ಎಲ್ಲವೂ ಮುಗಿದಿರುತ್ತದೆ.

ಇನ್ನು ಜನಸಾಮನ್ಯರು ಕಸ ಹಾಕದಿರಲೆಂದು ಕಸ ಸುರಿಯುವ ಮಾಮೂಲಿ ಸ್ಥಳಗಳಲ್ಲಿ ಚಪ್ಪಲಿಗಳ ಹಾರ ಹಾಕುವುದು, ದೇವರ ಪೋಟೋಗಳನ್ನು ಇಡುವುದು, ಗಿಡಗಳ ಪಾಟ್‍ಗಳನ್ನು ಇಡುವುದು, ಸ್ಥಳವನ್ನು ಗುಡಿಸಿ ಸ್ವಚ್ಛ ಮಾಡಿ ರಂಗೋಲಿ ಹಾಕುವುದು ಮತ್ತು ಗೋಡೆಗಳ ಮೇಲೆ ‘ಕಸ ಸುರಿದರೆ, ದಂಡ ಹಾಕಲಾಗುವುದು’ ಎಂದು ಬರೆಯುವುದು, ಮುಂತಾದ ಯಾವ ಎಚ್ಚರಿಕೆಯ ಮುನ್ಸೂಚನೆಗಳೂ ಕಸ ಹಾಕುವವರ ಮೇಲೆ ಗಂಭೀರ ಪ್ರಭಾವ ಬೀರಿಲ್ಲ.

ಕಸವನ್ನು ಮನೆಯಿಂದ ಹೊರಗೆ ಸಾಗಿಸುವಲ್ಲಿ ನಾಗರಿಕರಿಗೆ ಅವರವರದೇ ಆದ ಹಲವಾರು ಸಮಸ್ಯೆಗಳಿವೆ. ಮನೆಯ ಹತ್ತಿರ ಕಸ ಸಂಗ್ರಹಕಾರರು ಬಂದಾಗ ಹಸಿಕಸ ಮತ್ತು ಒಣಕಸವನ್ನು ಪ್ರತ್ಯೇಕಿಸಿ ಕೊಡಬೇಕು. ಕಸ ಒಯ್ಯಲು ಅವರಿಗೆ ಮನೆಗೆ ಇಂತಿಷ್ಟು ಕಾಸು ಕೊಡಬೇಕೆಂಬ ಪರಿಪಾಠವೂ ಇದೆ. ಕಾಸು ಕೊಡದಿದ್ದರೆ ಕಸವನ್ನು ಒಯ್ಯುವುದಿಲ್ಲ. ಒಂದು ವೇಳೆ ನಾವು ಇಲ್ಲದ ಸಮಯದಲ್ಲಿ ಕಸದ ಬುಟ್ಟಿಗಳನ್ನು ಹೊರಗೆ ಇಟ್ಟರೆ ಅವುಗಳನ್ನು ಒಯ್ಯುವುದಿಲ್ಲ. ನಂತರ ನಾವೇ ಅವುಗಳನ್ನು ಹೊರಗೆ ಹಾಕಿ ಬರಬೇಕು. ಇಲ್ಲಿಂದಲೇ ಕಸದ ವಿಲೇವಾರಿ ಸಮಸ್ಯೆ ಆರಂಭವಾಗುವುದು. ಇನ್ನು ತಳ್ಳುಗಾಡಿಗಳಲ್ಲಿ ಕಸ ಕೊಂಡೊಯ್ಯುವ ಪೌರಗುತ್ತಿಗೆ ನೌಕರರ ಬೇಜವಾಬ್ದಾರಿ ವರ್ತನೆ ಕೆಲವೊಮ್ಮೆ ಬೇಸರ ಮೂಡಿಸುತ್ತದೆ. ಅವರನ್ನು ಯಾರೂ ಕೇಳುವಂತಿಲ್ಲ, ಪ್ರಶ್ನಿಸುವಂತಿಲ್ಲ. ಅವರದೇ ಪ್ರಪಂಚ, ಅವರದೇ ಕೆಲಸ ಎನ್ನುವಂತ ಗಡಿಬಿಡಿ ಅವರದು. ಗಾಡಿಗಳಲ್ಲಿ ತುಂಬಿಸಿಕೊಂಡ ಕಸವನ್ನು ಮುತುವರ್ಜಿಯಿಂದ ಕೊಂಡೊಯ್ಯುವುದಿಲ್ಲ. ರಸ್ತೆಯ ಉದ್ದಕ್ಕೂ ಚೆಲ್ಲಿಕೊಂಡು ಹೋಗುತ್ತಾರೆ. ಹಾಗೆ ಬಿದ್ದ ಕಸವನ್ನು ಪುನಃ ಎತ್ತಿ ಗಾಡಿಗೆ ಹಾಕಿಕೊಳ್ಳುವುದಿಲ್ಲ. ಕೆಳಗೆ ಬಿದ್ದ ಕಸಕ್ಕೂ ನಮಗೂ ಸಂಬಂಧವಿಲ್ಲವೆಂದು ಬಿಟ್ಟು ಹೋಗುತ್ತಾರೆ. ಹೀಗೆ ಬೀದಿಯ ಉದ್ದಕ್ಕೂ ಕಸದ ಸಿಂಪಡಣೆಯಾಗಿ ಕರ್ಮಚಾರಿಗಳು ಬಂದು ತೆಗೆಯುವವರೆಗೂ ಅದು ಅಲ್ಲೇ ಬಿದ್ದು ಕೊಳೆತು ದುರ್ವಾಸನೆ ಬೀರುತ್ತಿರುತ್ತದೆ.

ಎಲ್ಲೆಂದರಲ್ಲಿ ಕಸ ಹಾಕದಂತೆ ಕಟ್ಟುನಿಟ್ಟು ನಿಯಮಗಳನ್ನು ಜಾರಿ ಗೆ ತಂದು ಅವುಗಳನ್ನು ಉಲ್ಲಂಘಿಸುವವರ ಮೇಲೆ ಶಿಸ್ತು ಕ್ರಮ ಜರುಗಿಸಬೇಕೆಂಬುದು ಮಹಾನಗರ ಪಾಲಿಕೆಯ ಉದ್ದೇಶ. ಆದರೆ ಜನಸಾಮಾನ್ಯರು ನಿಯಮಗಳಿಂದ ನಿಯಂತ್ರಿತರಾಗದೆ, ಸ್ವಯಂ ಪ್ರೇರಿತರಾಗಿ ವೈಚಾರಿಕ ಪ್ರಜ್ಞೆ ಬೆಳೆಸಿಕೊಳ್ಳುವ ಮನಸ್ಸು ಮಾಡಿದರೆ, ಕಸದ ಸಮಸ್ಯೆ ಉಲ್ಬಣವಾಗದು. ಬೆಂಗಳೂರಿನ ಕೆಲವು ವಾರ್ಡ್‍ಗಳಲ್ಲಿ ಪ್ರಾರಂಭಗೊಂಡಿರುವ ಕಸದ ಮರುಬಳಕೆ ತಂತ್ರಜ್ಞಾನವು ಎಲ್ಲಾ ವಾರ್ಡ್‍ಗಳಿಗೆ ವಿಸ್ತರಣೆಯಾದರೆ, ಕಸದ ಸಮಸ್ಯೆಗೆ ಕಿರು ಪರಿಹಾರ ಸಿಕ್ಕಂತೆ.

Leave a Reply

Your email address will not be published.