ಬೆಂಗಳೂರಿನ ಶ್ರೀ ರಾಮಸೇವಾ ಮಂಡಲಿ

ಪ್ರತಿವರ್ಷ ರಾಮನವಮಿಯ ಸಂದರ್ಭದಲ್ಲಿ ಕನಿಷ್ಠ 31 ದಿನಗಳ ಕಾಲ ಸತತ ಸಂಗೀತ ರಸದೌತಣವನ್ನು ಉಣಬಡಿಸುವ ಬೆಂಗಳೂರು ಚಾಮರಾಜಪೇಟೆಯ ಶ್ರೀ ರಾಮಸೇವಾ ಮಂಡಲಿಗೆ ಈಗ 83ಹರೆಯ.

-ಶಶಿಧರ ಭಾರಿಘಾಟ್

ಸಂಗೀತ ವಿಶ್ವಾತ್ಮಕ ಕಲೆ. ದೈವಿಕ ಕಲೆಯೂ ಎನ್ನುತ್ತಾರೆ. ರಸಿಕರನ್ನು ನಾದಮಾಧುರ್ಯದಿಂದ ಮಂತ್ರ ಮುಗ್ಧಗೊಳಿಸುವ ಸಂಗೀತಕ್ಕೆ ಕಲೆಗಳಲ್ಲೇ ವಿಶೇಷ ಸ್ಥಾನಮಾನವಿದೆ. ಸಂಗೀತವನ್ನು ಮಾನವನ ವಿಕಾಸದ ಸಾಧನವೆನ್ನುತ್ತಾರೆ. ಅಂತರಾತ್ಮದ ದರ್ಶನ ಸಂಗೀತದಿಂದ ಮಾತ್ರ ಸಾಧ್ಯ, ಇದು ದೈವದತ್ತವಾದದ್ದು ಎಂದು ಹೇಳುತ್ತಾರೆ. ಇದು ನಾದದ ಭಾಷೆ ನಾದಕ್ಕೆ ಆಕಾರವಿಲ್ಲ. ಬೇರೆ ಲಲಿತಕಲೆಗಳಿಗೆ ಪ್ರಕೃತಿಯಲ್ಲಿ ಮಾದರಿಗಳು ಒದಗಿದರೆ, ಸಂಗೀತ ಮಾನವನ ಪ್ರಜ್ಞೆಯಿಂದ, ಅವನಲ್ಲಿರುವ ಕಲ್ಪನಾಶಕ್ತಿಯಿಂದ ಹೊರಹೊಮ್ಮಿದೆ ಎಂಬುದು ಎಲ್ಲರ ನಂಬಿಕೆ. ಭಾರತೀಯ ಪರಂಪರೆಯ ಹಿನ್ನೆಲೆಯಲ್ಲಿ ಸಂಗೀತಕ್ಕೆ ಮಹತ್ವದ ಸ್ಥಾನವಿದೆ. ಏಕೆಂದರೆ ಇದು ಭಕ್ತಿಯ ಅಭಿವ್ಯಕ್ತಿಗೆ ಒಂದು ಸುಗಮ ಮಾಧ್ಯಮ. ಯಾವುದೇ ಮಧ್ಯವರ್ತಿಯಿಲ್ಲದೆ ನೇರವಾಗಿ ದೇವರಲ್ಲಿ ತನ್ನ ಭಕ್ತಿಯನ್ನು ನಿವೇದಿಸಿಕೊಳ್ಳಬಹುದು. ನಾದೋಪಾಸನೆಯ ಮೂಲಕ ಆತ್ಮಜ್ಞಾನವನ್ನು ಪಡೆಯಬಹುದೆಂಬುದು ಭಾರತೀಯ ಸಂಸ್ಕøತಿಯಲ್ಲಿ ಹಾಸುಹೊಕ್ಕಾಗಿದೆ.

ಇಂತಹ ಸಂಗೀತ ಏಕಕಾಲಕ್ಕೆ ಸಂಗೀತೋಪಾಸಕರಿಗೂ, ಸಾಮಾನ್ಯ ರಸಿಕನಿಗೂ ದಕ್ಕುವುದು ಸಂಗೀತೋತ್ಸವಗಳ ಮೂಲಕ. ಆನಂದಮಯವಾದ ಕ್ಷಣಗಳನ್ನು ಸುಂದರ ಸಂಗೀತವನ್ನು ಕೇಳುವುದರ ಮೂಲಕ ಆಸ್ವಾದಿಸುವ ಶಕ್ತಿ ಮಾನವನಿಗಿದೆ. ಹಾಗಾಗಿ ಸಂಗೀತ ದೇಶಭಾಷೆಗಳನ್ನು ಮೀರಿದ ಒಂದು ವಿಶಿಷ್ಟ ಕಲಾಮಾಧ್ಯಮ. ಇಂತಹ ಸಂಗೀತವನ್ನು ಜನಸಾಮಾನ್ಯರಿಗೆ, ರಸಿಕರಿಗೆ ಕೇಳಿಸುವ ಸಾಂಸ್ಕøತಿಕ ಪರಿಚಾರಿಕೆಯನ್ನು ಹತ್ತು ಹಲವು ಸಂಸ್ಥೆಗಳು, ವ್ಯಕ್ತಿಗಳೇ ಶಕ್ತಿಗಳಾದ ಪ್ರತಿಭಾನ್ವಿತರು ಮಾಡುತ್ತಾ ಬಂದಿದ್ದಾರೆ. ಇಂತಹ ಪರಿಚಾರಿಕೆಯನ್ನು ಕಲಾತ್ಮಕವಾಗಿಯೂ, ಹೆಚ್ಚು ಬದ್ಧತೆಯಿಂದಲೂ ಮಾಡುತ್ತಿರುವ ಅನೇಕ ಸಂಸ್ಥೆಗಳಲ್ಲಿ ಬೆಂಗಳೂರಿನ ಶ್ರೀರಾಮಸೇವಾ ಮಂಡಲಿಯೂ ಒಂದು.

ಶಾಸ್ತ್ರೀಯ ಸಂಗೀತಕ್ಕೂ, ಶ್ರೀರಾಮನವಮಿಗೂ ಒಂದು ರೀತಿಯ ಅವಿನಾಭಾವ ನಂಟು. ಗಣೇಶೋತ್ಸವಕ್ಕೆ ಹಾಗಲ್ಲ ಅದರ ಆಯಾಮವೇ ಬೇರೆ. ಗಣೇಶೋತ್ಸವದ ಕಾರ್ಯಕ್ರಮಗಳು ಜನಪ್ರಿಯವೆನ್ನಬಹುದಾದ ಎಲ್ಲಾ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅಳವಡಿಸಿಕೊಂಡಿರುತ್ತವೆ. ಆದರೆ ರಾಮನವಮಿ ಹಾಗಲ್ಲ. ಈ ಸಂದರ್ಭದಲ್ಲಿ ಏರ್ಪಾಡಾಗುವ ಸಂಗೀತ ಕಾರ್ಯಕ್ರಮಗಳು ಭಾರತೀಯ ಶಾಸ್ತ್ರೀಯ ಸಂಗೀತಕ್ಕೆ ಮೀಸಲು. ಕರ್ನಾಟಕ ಶಾಸ್ತ್ರೀಯ ಸಂಗೀತವಾಗಲಿ, ಹಿಂದುಸ್ತಾನಿ ಶಾಸ್ತ್ರೀಯ ಸಂಗೀತವಾಗಲಿ ರಾಮನವಮಿಯ ಸಂಗೀತೋತ್ಸವಗಳಲ್ಲಿ ಪ್ರಾಶಸ್ತ್ಯವನ್ನು ಪಡೆಯುತ್ತವೆ. ಸಾಮಾನ್ಯವಾಗಿ ಏಪ್ರಿಲ್-ಮೇ ತಿಂಗಳಲ್ಲಿ ನಡೆಯುವ ರಾಮನವಮಿ ಸಂಗೀತೋತ್ಸವಗಳು ಭಾರತೀಯ ಶಾಸ್ತ್ರೀಯ ಸಂಗೀತದ ಮೇರುದರ್ಶನವನ್ನು ಕಾಣಿಸುತ್ತದೆ. ಶೋತೃಗಳಿಗೆ ರಾಗಾಲಾಪನೆಯ, ತಾಳ-ಲಯಗಳ ಪ್ರಜನಶೀಲ ವಿನ್ಯಾಸಗಳನ್ನು ಉಣಬಡಿಸುತ್ತದೆ. ಇಂತಹ ರಸಾನುಭವಕ್ಕಾಗಿ ಕಾಯುವ ಒಂದು ದೊಡ್ಡ ರಸಿಕರ ಬಳಗವೇ ನಮ್ಮ ಸಮಾಜದಲ್ಲಿದೆ. 

ಬೆಂಗಳೂರಿನಲ್ಲಿ ರಾಜ್ಯದ ವಿವಿಧೆಡೆಯಲ್ಲಿ, ಹಾಗೆಯೇ ತಮಿಳುನಾಡು, ಆಂಧ್ರಪ್ರದೇಶ, ಕೇರಳ ರಾಜ್ಯಗಳಲ್ಲಿ ಅನೇಕ ಸಂಗೀತ ಸಭಾಗಳು ದೇಶದ ಪ್ರತಿಷ್ಠಿತ ಸಂಗೀತ ಕಲಾವಿದರ ಕಛೇರಿಗಳನ್ನು ನಡೆಸುತ್ತದೆ. ಅಂತಹ ಸಂಗೀತ ಸಭಾಗಳಲ್ಲಿ ನಿಯಮಿತವಾದ ಕೇಳುಗರು ಸೇರುತ್ತಾರೆ. ವರ್ಷವಿಡೀ ನಿಯತವಾಗಿ ಸಭಾ ಸಂಗೀತ ಕಚೇರಿಗಳು ನಡೆಯುತ್ತವೆ. ಆದರೆ ರಾಮನವಮಿ ಸಂಗೀತೋತ್ಸವಗಳು ಹಾಗಲ್ಲ. ಇದೊಂದು ಸಾಮುದಾಯಿಕ ರಾಗರಚನೆ. ಪಂಡಿತರಿಂದ ಪಾಮರನವರೆಗೂ ವಯೋವೃದ್ಧರಿಂದ ತರುಣ-ತರುಣಿಯರವರೆಗೂ ವಿವಿಧ ವಯೋಮಾನದ ಕೇಳುಗರು ಸಮ್ಮಿಲಿತವಾಗುತ್ತಾರೆ. ಸಂಗೀತವನ್ನು ಕೇಳುತ್ತಲೇ, ತಮ್ಮ ಬದುಕಿನ ಸಾಂಸ್ಕೃತಿಕ ನೆಲೆಗಳನ್ನು ಗುರುತಿಸಿಕೊಳ್ಳುತ್ತಾರೆ. ಎಲ್ಲರೂ ಸಂಗೀತ ಕಲಾವಿದರಾಗಲು ಸಾಧ್ಯವಾಗದಿರಬಹುದು. ಸಹೃದಯ ಕೇಳುಗರಾಗಿ ಇಂತಹ ಸಂಗೀತ ಪಯಣದಲ್ಲಿ ಜೊತೆಯಾಗುತ್ತಾರೆ. ಇಂತಹ ಸಂಗೀತ ಕೈಂಕರ್ಯದಲ್ಲಿ ತೊಡಗಿಕೊಂಡು ಸಂಗೀತ ಸಭಾಗಳಲ್ಲಿ ಶ್ರೀರಾಮಸೇವಾ ಮಂಡಲಿ ವಿಶಿಷ್ಟವಾದುದು. ಪ್ರತಿವರ್ಷ ರಾಮನವಮಿಯ ಸಂದರ್ಭದಲ್ಲಿ ಕನಿಷ್ಠ 31 ದಿನಗಳ ಕಾಲ ಸತತ ಸಂಗೀತ ರಸದೌತಣವನ್ನು ಉಣಬಡಿಸುವ ಶ್ರೀ ರಾಮಸೇವಾ ಮಂಡಲಿಗೆ ಈಗ 83ರ ಹರೆಯ.

1939ರಲ್ಲಿ ಹಲವು ಗೆಳೆಯರ ಸಮಾನ ಆಸಕ್ತಿಯಿಂದ ಅಸ್ತಿತ್ವಕ್ಕೆ ಬಂದ ಶ್ರೀರಾಮಸೇವಾ ಮಂಡಲಿ, ಇಂದು ರಾಷ್ಟ್ರದಲ್ಲೇ ಪ್ರತಿಷ್ಠಿತ ಸಾಂಸ್ಕೃತಿಕ ಸಂಸ್ಥೆಯಾಗಿ ಸಂಗೀತಾಸಕ್ತರ ಗಮನ ಸೆಳೆದಿದೆ. ಈ ಸಂಸ್ಥೆ ಪ್ರತಿಷ್ಠಿತ ಸಂಸ್ಥೆಯಾಗಿ ಬೆಳೆಸುವಲ್ಲಿ ಸಂಘಟನಾ ಚಾತುರ್ಯದ ಶಕ್ತಿ ಸಂಚಿತವಾಗಿದೆ. ದೇಶದ ಪ್ರಸಿದ್ಧ ಸಂಗೀತ ಕಲಾವಿದರ ಸಹಚರ್ಯವಿದೆ. ಸಹೃದಯ ಕೇಳುಗರ ಏಕನಿಷ್ಠೆ ಇದೆ.

ಹದಿನಾಲ್ಕು ವರ್ಷದ ಒಬ್ಬ ಬಾಲಕ, ಬೆಂಗಳೂರಿನ ಚಾಮರಾಜಪೇಟೆಯ ಬಡಾವಣೆಯಲ್ಲಿ ಗಣೇಶೋತ್ಸವವನ್ನು ನಡೆಸುತ್ತಿದ್ದ ಬಳಗದಲ್ಲಿ ಗುರುತಿಸಿಕೊಂಡಾತ. ಇವನಿಗೆ ಶ್ರೀರಾಮನವಮಿಯ ಸಂದರ್ಭದಲ್ಲಿ ಸಂಗೀತೋತ್ಸವವನ್ನು ಸಂಘಟಿಸುವ ಪ್ರೇರಣೆ ಸಿಗುತ್ತದೆ. ತನ್ನ ಬಳಿ ಇದ್ದ ಪುಡಿಗಾಸನ್ನು ಸೇರಿಸಿ, ಹಿತೈಷಿಗಳು ನೀಡಿದ ಕೆಲವೇ ರೂಪಾಯಿಗಳನ್ನು ಕೂಡಿಸಿ, ಸಂಗೀತೋತ್ಸವಕ್ಕೆ ಮುಂದಾಗುತ್ತಾನೆ ಆ ಬಾಲಕನೇ ಎಸ್.ಎನ್.ನಾರಾಯಣಸ್ವಾಮಿರಾವ್. ಇವರ ತಂದೆ ಪೊಲೀಸ್ ಇಲಾಖೆಯಲ್ಲಿ ಅಧಿಕಾರಿಯಾಗಿದ್ದವರು. ನಾರಾಯಣಸ್ವಾಮಿರಾವ್ ಹಿಂದೂಸ್ತಾನ್ ಏರೋನಾಟಿಕ್ (HAL) ನಲ್ಲಿ ಉದ್ಯೋಗದಲ್ಲಿದ್ದರು.

11ನೇ ತರಗತಿಯವರೆಗೆ ಓದಿದ್ದ ನಾರಾಯಣಸ್ವಾಮಿ ರಾಮನವಮಿ ಸಂಗೀತೋತ್ಸವಕ್ಕೆ ಮನಗೊಟ್ಟರು. ಸಂಗೀತೋತ್ಸವವನ್ನು ಮೊದಲ ಬಾರಿಗೆ 1939ರಲ್ಲಿ ಬೆಂಗಳೂರು ಸಿಟಿಕ್ಲಬ್ (BCC) ಆವರಣದಲ್ಲಿ ಮಾಡಿಯೇ ಬಿಟ್ಟರು. ಮನೆ ಮನೆಗೆ ಹೋಗಿ ಶೋತೃಗಳನ್ನು ಕರೆತಂದರು. ಸಂಗೀತೋತ್ಸವವನ್ನು ಯಶಸ್ವಿಗೊಳಿಸಿದರು. ಆದರೆ ಸಂಗೀತೋತ್ಸವದ ಸಂಘಟನೆಯ ಉತ್ಸಾಹದಲ್ಲಿ ಕೆಲಸಕ್ಕೆ ಗೈರುಹಾಜರಾದ ಕಾರಣ ಕೆಲಸ ಕಳೆದುಕೊಂಡರು. ಮುಂದೆ ಭಾರತೀಯ ಜೀವವಿಮಾ ನಿಗಮಕ್ಕೆ ಸೇರಿದಾಗಲೂ ಇದೇ ಪುನರಾವರ್ತನೆ. ಸಂಗೀತೋತ್ಸವದ ಸಂಘಟನೆಗೆ ಒಲಿದವರು, ಬೇರೆ ಯಾವ ಕೆಲಸಕ್ಕೆ ಹೋಗದೆ, ಸಂಗೀತ ಪರಿಚಾರಿಕೆಗೆ ತೊಡಗಿದರು. ಶ್ರೀರಾಮನನ್ನು ಸಂಗೀತದ ಮೂಲಕ ಆರಾಧಿಸುವ, ರಾಮನ ಸಂದೇಶವನ್ನು ಜನರಿಗೆ ತಲುಪಿಸುವ ಕೆಲಸದಲ್ಲಿ ಮಗ್ನರಾದರು.

ಸತತ 60 ವರ್ಷಗಳ ಕಾಲ, ಅಂದರೆ 2000 ಇಸವಿಯಲ್ಲಿ ಅವರು ನಿಧನರಾಗುವವರೆಗೆ ನಿರಂತರವಾಗಿ ಸಂಗೀತೋತ್ಸವವನ್ನು ಸಂಘಟಿಸಿದರು. ರಾಷ್ಟ್ರದ ಸಿದ್ಧ-ಪ್ರಸಿದ್ಧರನ್ನು ಆಹ್ವಾನಿಸಿ ವೇದಿಕೆ ನೀಡಿ, ಸಂಗೀತವನ್ನೂ ಬೆಳೆಸಿದರು, ಕಲಾವಿದರನ್ನೂ ಬೆಳೆಸಿದರು. ಹಾಗೆಯೇ ಬಹು ದೊಡ್ಡ ಶೋತೃಗಣವನ್ನೂ ಬೆಳೆಸಿದರು. ಈಗ ಶ್ರೀರಾಮ ಸೇವಾ ಮಂಡಲಿ, 83ನೇ ರಾಷ್ಟ್ರೀಯ ಸಂಗೀತೋತ್ಸವವನ್ನು ಆಚರಿಸುತ್ತಿದೆ. 2000ದ ಇಸವಿಯ ನಂತರ ಎಸ್.ವಿ.ನಾರಾಯಣಸ್ವಾಮಿರಾವ್ ಅವರ ಮಗ ಎನ್.ವರದರಾಜು ತಂದೆಯ ಸಂಗೀತ ಪರಿಚಾರಿಕೆಯ ಕೆಲಸವನ್ನು ಮುಂದುವರಿಸಿದ್ದಾರೆ.

ಇಂದು ಸಕಲ ಅನುಕೂಲತೆಗಳು ಇವೆ. ಪ್ರತಿವರ್ಷ ಚಾಮರಾಜಪೇಟೆ ಕೋಟೆ ಪ್ರೌಢಶಾಲೆಯ ಮೈದಾನದಲ್ಲಿ ತಾತ್ಕಾಲಿಕವಾಗಿ ನಿರ್ಮಾಣಗೊಳ್ಳುವ ಭವ್ಯ ಸಭಾಂಗಣದಲ್ಲಿ, ಆಕರ್ಷಕ ವೇದಿಕೆಯಲ್ಲಿ ಕಾರ್ಯಕ್ರಮ ನಡೆಯುತ್ತದೆ. ಅತ್ಯಾಧುನಿಕವಾದ ಧ್ವನಿವ್ಯವಸ್ಥೆ, ಬೆಳಕಿನ ವ್ಯವಸ್ಥೆ, ಕಲಾವಿದರನ್ನು ಸಂಪರ್ಕಿಸಲು ಸ್ಮಾರ್ಟ್ ಫೋನ್, ಇ-ಮೇಲ್‍ಗಳು ಸಂವಹನವನ್ನು ಸುಲಭವಾಗಿಸಿವೆ. ಹಾಗೆಯೇ ಪ್ರಚಾರವನ್ನು ಸುಲಲಿತವಾಗಿ, ವ್ಯಾಪಕವಾಗಿ ಮಾಡುವ ಅನುಕೂಲತೆಗಳು ಇವೆ. ಕಲಾವಿದರ ಪ್ರಯಾಣಕ್ಕೆ ವಿಮಾನಯಾನದ ಸೌಕರ್ಯ, ವೇಗದ ರೈಲುಗಳು ಇವೆ.

ಸ್ವತಂತ್ರ ಪೂರ್ವದಲ್ಲಿ ನಾರಾಯಣಸ್ವಾಮಿರಾವ್‍ರವರು ಈ ಸಂಗೀತೋತ್ಸವವನ್ನು ಪ್ರಾರಂಭಿಸಿದ ಸಂದರ್ಭದಲ್ಲಿ ಇಂದಿನ ಯಾವುದೇ ಸೌಕರ್ಯಗಳಿರಲಿಲ್ಲ. ಕಲಾವಿದರನ್ನು ಸಂಪರ್ಕಿಸಲು ದೂರವಾಣಿ ಇರಲಿಲ್ಲ. ಅಂಚೆಯ ಮೂಲಕ ಸಂಪರ್ಕಿಸಬೇಕು. ಇಲ್ಲವೇ ನೇರವಾಗಿ ಕಲಾವಿದರನ್ನು ಭೇಟಿಯಾಗಬೇಕು. ಅವರ ಮನವೊಲಿಸಿ ಕಾರ್ಯಕ್ರಮಕ್ಕೆ ಬರುವಂತೆ ಮಾಡಬೇಕು. 60-70 ವರ್ಷದ ಹಿಂದೆ ಅವರು ನಡೆಸಿರುವ ಸಾಹಸಗಳನ್ನು ಕಲ್ಪಿಸಿಕೊಳ್ಳುವುದು ಕಷ್ಟವಾಗುತ್ತದೆ. ಛಲ ಬಿಡದೆ ದೇಶದ ಪ್ರತಿಷ್ಠಿತ ಕಲಾವಿದರನ್ನು ಸಂಪರ್ಕಿಸಿ ಕರೆಸಿ, ಅವರ ಸಂಗೀತ ಸಾಧನೆಯನ್ನು ಬೆಂಗಳೂರಿನ ರಸಿಕರಿಗೆ ಪರಿಚಯಿಸಿದ ಕೀರ್ತಿ ನಾರಾಯಣಸ್ವಾಮಿ ರಾವ್ ಅವರಿಗೆ ಸಲ್ಲಬೇಕು.

120 x 80 ಚದರ ಅಡಿಯ ವಿಸ್ತೀರ್ಣದಲ್ಲಿ ಪ್ರಾರಂಭವಾದ ಸಂಗೀತೋತ್ಸವ ಇಂದು 40,000 ಚದರ ಅಡಿಯ ವಿಸ್ತೀರ್ಣದ ಪೆಂಡಾಲ್‍ನಲ್ಲಿ ನಡೆಯುತ್ತದೆ. 15000 ಜನರಿಗೆ ಕುಳಿತುಕೊಳ್ಳುವ ಆಸನ ವ್ಯವಸ್ಥೆಯನ್ನು ಮಾಡಲಾಗಿರುತ್ತದೆ, ಎಂದರೆ ಯಾವ ಹಂತದಿಂದ ಯಾವ ಹಂತಕ್ಕೆ ಈ ಉತ್ಸವ ಬೆಳೆದಿದೆ ಎನ್ನುವುದು ವೇದ್ಯವಾಗುತ್ತದೆ. ನಾದ, ಲಯ, ತಾಳ, ಸಾಹಿತ್ಯಗಳ ದೈವಿಕ ಆನಂದವನ್ನು ಅನಂತವಾಗಿಸುವ ಆಶಯದಲ್ಲಿ ಪ್ರಾರಂಭವಾದ ಈ ಸಂಗೀತೋತ್ಸವ ಒಂದು ಭಕ್ತಿಭಾವಯಾನ. ಭಾರತೀಯ ಸಂಮೃದ್ಧ ಸಾಂಸ್ಕೃತಿಕ ಪರಂಪರೆಯನ್ನು ಜಗತ್ತಿಗೆ ಸಾರುವ ಈ ಸಂಗೀತೋತ್ಸವದ ಮೂಲಕ ಶ್ರೀರಾಮನ ಚೈತನ್ಯವನ್ನು, ತನ್ಮೂಲಕ ವಿಶ್ವಶಾಂತಿಯನ್ನು ಪಸರಿಸುವ ಒಂದು ಸಾಂಸ್ಕೃತಿಕ ಚಳವಳಿ ಎಂದು ಈ ಉತ್ಸವದಲ್ಲಿ ಭಾಗವಹಿಸಿದ ಸಂಗೀತ ಲೋಕದ ದಿಗ್ಗಜರು ಹೇಳಿದ್ದಾರೆ.

ಭಾರತ ರತ್ನ ಸಿ.ರಾಜಗೋಪಾಲಚಾರಿ ಅವರು ಈ ಸಂಗೀತೋತ್ಸವವನ್ನು “ಸಂಗೀತದ ದೇಗುಲ” (Temple of Music) ಎಂದು ಕರೆದಿದ್ದಾರೆ. ಕರ್ನಾಟಕ ಸಂಗೀತಕ್ಕಷ್ಟೇ ಸೀಮಿತಗೊಳ್ಳದೆ ಹಿಂದೂಸ್ತಾನಿ ಸಂಗೀತಕ್ಕೂ ಸಮಾನ ಅವಕಾಶ ನೀಡಿ ಭಾರತೀಯ ಸಂಗೀತ ಪರಂಪರೆಯ ಅನನ್ಯತೆಯನ್ನು ಅನಾವರಣಗೊಳಿಸಿರುವ ಈ ಸಂಗೀತೋತ್ಸವದಲ್ಲಿ ಪ್ರತಿಷ್ಠಿತ ಸಂಗೀತ ವಿದ್ವಾಂಸರೊಂದಿಗೆ ಉದಯೋನ್ಮುಖ ಸಂಗೀತ ಕಲಾವಿದರಿಗೂ ಅವಕಾಶವನ್ನು ಕಲ್ಪಿಸುತ್ತಾ ಬರಲಾಗಿದೆ.

ಈ ಸಂಗೀತೋತ್ಸವದ ಹೆಗ್ಗಳಿಕೆ ಎಂದರೆ ಭಾರತರತ್ನ ಎಂ.ಎಸ್.ಸುಬ್ಬುಲಕ್ಷ್ಮಿ ಅವರು 1952ರಿಂದ 1992ರವರೆಗೆ 31 ಬಾರಿ ತಮ್ಮ ಗಾನಸುಧೆಯಿಂದ ರಂಜಿಸಿದ್ದಾರೆ. ನಾರಾಯಣಸ್ವಾಮಿರಾವ್ ಅವರು ಕಾಲವಾದ ನಂತರ 2001ರಿಂದ ಆರಂಭಿಸಿದ ಎಸ್.ವಿ.ಎನ್. ಸ್ಮಾರಕ ರಾಷ್ಟ್ರೀಯ ಪುರಸ್ಕಾರವನ್ನು ಮೊದಲು ಎಂ.ಎಸ್. ಸುಬ್ಬುಲಕ್ಷ್ಮಿ ಅವರಿಗೆ ನೀಡಲಾಗಿದ್ದು, ನಂತರದ ವರ್ಷಗಳಲ್ಲಿ ಹಿರಿಯ ಸಂಗೀತ ವಿದ್ವಾಂಸರಾದ ಆರ್.ಕೆ.ಶ್ರೀಕಂಠನ್, ಲಾಲ್‍ಗುಡಿ ಜಯರಾಮನ್ ಸೇರಿದಂತೆ ಪ್ರತಿ ವರ್ಷವೂ ಈ ಪ್ರಶಸ್ತಿಯನ್ನು ನೀಡುತ್ತಾ ಬರಲಾಗಿದೆ.

ಭಾರತೀಯ ಸಂಗೀತದ ಧ್ರುವತಾರೆಗಳಾದ ವೀಣೆ ಡಾ.ದೊರೆಸ್ವಾಮಿ ಅಯ್ಯಂಗಾರ್, ಭಾರತರತ್ನ ಭೀಮಸೇನ ಜೋಶಿ, ಗಂಗೂಬಾಯಿ ಹಾನಗಲ್, ಅರೈಕುಡಿ ರಾಮಾನುಜ ಅಯ್ಯಂಗಾರ್, ಚೆಂಬೈ ವೈದ್ಯನಾಥ ಭಾಗವತರ್, ಎ.ಮನಿ ಶಂಕರಶಾಸ್ತ್ರಿ, ಉಸ್ತಾದ್ ಬಿಸ್ಮಿಲ್ಲಾಖಾನ್, ಉಸ್ತಾದ್ ಬಡೇಗುಲಾಮ್ ಅಲಿ, ಅಲಿ ಅಕ್ಬರ್‍ಖಾನ್, ಡಾ.ಬಾಲಮುರಳಿಕೃಷ್ಣ, ಎಂ.ಎಲ್.ವಸಂತಕುಮಾರಿ, ಡಿ.ಕೆ.ಪಟ್ಟಮ್ಮಾಳ್, ಎಲ್.ಬಾಲಸುಬ್ರಹ್ಮಣ್ಯಂ ಮುಂತಾದ ಹಿರಿಯ ಪೀಳಿಗೆಯ ಕಲಾವಿದರು ಸಂಗೀತ ಕಛೇರಿ ನೀಡಿದ್ದಾರೆ. ನಂತರದ ಪೀಳಿಗೆಯ ಕೆ.ಜೆ.ಜೇಸುದಾಸ್, ಸುಧಾ ರಘುನಂದನ್, ಬಾಂಬೆ ಜಯಶ್ರೀ, ರಂಜನಿ ಗಾಯತ್ರಿ… ಹೀಗೆ ಪ್ರವರ್ಧಮಾನಕ್ಕೆ ಬಂದಿರುವ ಸಂಗೀತ ಕಲಾವಿದರ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.

ಮೈಸೂರು ಮಹಾರಾಜ ಜಯಚಾಮರಾಜೇಂದ್ರ ಒಡೆಯರ್, ಮೂವರು ಭಾರತದ ರಾಷ್ಟ್ರಪತಿಗಳು, ನಾಲ್ವರು ಉಪರಾಷ್ಟ್ರಪತಿಗಳು, ಸಿ.ರಾಜಗೋಪಾಲಚಾರಿ, ಕರ್ನಾಟಕದ ಎಲ್ಲಾ ಮುಖ್ಯಮಂತ್ರಿಗಳು ಹಾಗೂ ರಾಜ್ಯಪಾಲರು ಈ ಸಂಗೀತೋತ್ಸವದ ಉದ್ಘಾಟನೆಯಲ್ಲಿ ಪಾಲ್ಗೊಂಡಿರುವುದು ಹೆಮ್ಮೆಯ ಸಂಗತಿ.

2013ರಲ್ಲಿ ಪ್ಲಾಟಿನಂ ಜ್ಯುಬಿಲಿಯನ್ನು ಆಚರಿಸಿದ ಶ್ರೀರಾಮ ಸೇವಾ ಮಂಡಲಿ, ಭಾರತೀಯ ಶಾಸ್ತ್ರೀಯ ಸಂಗೀತದ ಸಂರಕ್ಷಣೆ ಹಾಗೂ ಪ್ರಸಾರದ ಜೊತೆಗೆ ವಿಶ್ವಶಾಂತಿಯ ಸಂದೇಶವನ್ನು ನೀಡುವುದು ತನ್ನ ಧ್ಯೇಯವನ್ನಾಗಿಸಿಕೊಂಡಿದೆ. ರಾಷ್ಟ್ರೀಯ ಸಂಗೀತೋತ್ಸವದ ಜೊತೆಗೆ ಸಂಗೀತ ವಿಶ್ವವಿದ್ಯಾಲಯ ಸ್ಥಾಪನೆ, ದೇಶದ ಪ್ರಮುಖ ನಗರಗಳಲ್ಲಿ ಸಂಗೀತ ಕೇಂದ್ರಗಳು ಹಾಗೂ ಬೆಂಗಳೂರಿನಲ್ಲಿ ರಾಮಾಯಣವನ್ನು ಆಧಾರಿಸಿದ ಥೀಮ್‍ಪಾರ್ಕ್ ಮುಂತಾದವುಗಳನ್ನು ಸ್ಥಾಪಿಸುವುದು ತಮ್ಮ ಮುಂದಿನ ಯೋಜನೆಗಳೆಂದು ಶ್ರೀರಾಮ ಸೇವಾ ಮಂಡಲಿಯ ಮಾರ್ಗದರ್ಶಿ ಸೂತ್ರ ಹಿಡಿದಿರುವ ಎನ್.ವರದರಾಜು ಹೇಳುತ್ತಾರೆ. 24 x 7 ಶಾಸ್ತ್ರೀಯ ಸಂಗೀತಕ್ಕೆ ಮೀಸಲಾದ ರೇಡಿಯೋ ಚಾನಲ್ ಕೂಡ ಪ್ರಾರಂಭಿಸುವ ಉದ್ದೇಶವನ್ನು ಹೊಂದಿದ್ದಾರೆ.

ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರು ಶ್ರೀರಾಮ ಸೇವಾ ಮಂಡಲಿಯ ಸಂಗೀತ ಕೈಂಕರ್ಯವನ್ನು ‘ಜ್ಞಾನಗಾನಸುಧೆ’ ಎಂದು ಕರೆದಿದ್ದಾರೆ. ಖ್ಯಾತ ಪಿಟೀಲುವಾದಕ ಟಿ.ಚೌಡಯ್ಯ ಅವರು ಭಾರತೀಯ ಶಾಸ್ತ್ರೀಯ ಸಂಗೀತದ ರಕ್ಷಾಕವಚ ಎಂದು ಕರೆದಿದ್ದಾರೆ.

Leave a Reply

Your email address will not be published.