ಬೆಂಗಳೂರಿನ ಸಂಚಾರದಟ್ಟಣೆಗೆ ಶಾಶ್ವತ ಪರಿಹಾರ ಸುಹೈಲ್ ಯೂಸುಫ್ ಕನಸುಗಳು

ಬೆಂಗಳೂರಿನ ಬ್ರಿಗೇಡ್ ರೋಡ್‍ನಲ್ಲಿ ಪಾರ್ಕಿಂಗ್ ಮಾಫಿಯಾ ಕೊನೆಗೊಳಿಸುವಲ್ಲಿ ಸುಹೈಲ್ ಯೂಸುಫ್ ಪಾತ್ರ ಗಮನಾರ್ಹ. ಬಹುತೇಕ ಬೆಂಗಳೂರು ನಗರದ ಸಂಚಾರ ಸಮಸ್ಯೆಗಳಿಗೆ ಪರಿಹಾರ ಒದಗಿಸಬಲ್ಲ ಯೋಜನೆಗಳು ಯೂಸುಫ್ ಅವರಲ್ಲಿವೆ.

ಸಂಚಾರದಟ್ಟಣೆ, ಸಂಚಾರದ ಸಮಸ್ಯೆಗಳನ್ನು ಗಮನಿಸುವುದು ಕುತೂಹಲದ ಸಂಗತಿಯೂ ಅಲ್ಲ, ಅಷ್ತ್ತೊಂದು ಆಸಕ್ತಿಕರವಾದ ಕ್ಷೇತ್ರವೂ ಅದಲ್ಲ. ಹಾಗಂತ ನಿರ್ಲಕ್ಷ್ಯಿಸುವ ಕ್ಷೇತ್ರವೂ ಅಲ್ಲ. ಆದರೆ ಅವು ನಗರಬದುಕಿನ ನಿತ್ಯ ಅಗತ್ಯವಾಗಿರುವುದಿರಂದ ಅಂತಹ ಗಂಭೀರ ವಿಷಯಗಳತ್ತ ಗಮನ ನೀಡುವ, ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನಗಳಿಗೆ ಕೈ ಹಾಕುವ ವಿರಳ ವ್ಯಕ್ತಿಗಳಾದರೂ ಇರುವುದು ನಮ್ಮ ಅದೃಷ್ಟ. ಹೀಗೆ, ಸಂಚಾರದಟ್ಟಣೆಗೆ, ವಾಣಿಜ್ಯ, ವ್ಯವಹಾರಕ್ಕೆ ಹೊಡೆತ ನೀಡುವ ಪಾರ್ಕಿಂಗ್ ಸಮಸ್ಯೆ ತನ್ನ ಬುಡಕ್ಕೇ ಬಂದಾಗ, ಅದರಕುರಿತು ತಲೆಕೆಡಿಸಿಕೊಂಡು, ಕೊನೆಗೆ ಪಾರ್ಕಿಂಗ್ ವ್ಯವಸ್ಥೆಯ ಕುರಿತು ಸಂಶೋಧನೆಯನ್ನೇ ನಡೆಸಿದ ವ್ಯಕ್ತಿ ಬೆಂಗಳೂರಿನ ಸುಹೈಲ್ ಯೂಸುಫ್.

ಇಲ್ಲಿನ ಬ್ರಿಗೇಡ್ ರೋಡ್ ಮಾರುಕಟ್ಟೆ ಸಂಘದ ಕಾರ್ಯದರ್ಶಿಯಾಗಿರುವ ಸುಹೈಲ್ ಯೂಸುಫ್, ‘ಅವಕಾಶ ಕೊಟ್ಟರೆ ಇಡೀ ಬೆಂಗಳೂರಿನ ಸಂಚಾರದಟ್ಟಣೆ ಸಮಸ್ಯೆಯನ್ನು ಬಹುತೇಕ ಬಗೆಹರಿಸುವೆ’ ಎಂದು ಉತ್ಸುಕರಾಗಿ ನುಡಿಯುತ್ತಾರೆ. ಯೂಸುಫ್, ಪ್ರಸ್ತುತ ಬ್ರಿಗೇಡ್ ರೋಡ್‍ನಲ್ಲಿರುವ ಸೋನಿ ಸೆಂಟರ್‍ನ ಮಾಲೀಕ. ಸಂಚಾರದಟ್ಟಣೆಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸ್ಥಾಪನೆಯಾದ ಅಂತರರಾಷ್ಟ್ರೀಯ ಸಂಸ್ಥೆಯಾಗಿರುವ ‘ಇಂಟರ್‍ಟ್ರಾಫಿಕ್’ನ ಸದಸ್ಯರೂ ಹೌದು.

80 ವರ್ಷಗಳ ಹಿಂದೆಯೇ ಸ್ಥಾಪನೆಯಾದ ಸೋನಿ ಸೆಂಟರ್, ಯೂಸುಫ್ ಅವರ ತಂದೆ ನಡೆಸುತ್ತಿದ್ದ ಅಂಗಡಿ. ಇಲ್ಲಿನ ಅಂಗಡಿಗಳ ಮುಂದೆ ವಾಹನಗಳನ್ನು ನಿಲ್ಲಿಸುವುದರಿಂದ ವ್ಯಾಪಾರಕ್ಕೆ ಅಡ್ಡಿಯಾಗುತ್ತದೆ ಎಂಬ ಮಾತು 1996ರಲ್ಲಿಯೇ ಕೇಳಿಬಂದಿತ್ತು. ಆ ಹೊತ್ತಿನಲ್ಲಿ ಒಂದು ಬಾರಿ ಒಂದು ತಿಂಗಳು ಪಾರ್ಕಿಂಗ್ ತೆಗೆದುಬಿಟ್ಟಿದ್ದರು ಕೂಡಾ. ಇದರಿಂದ ವ್ಯಾಪಾರ ವಹಿವಾಟು ಇನ್ನಷ್ಟು ಕುಸಿತ ಕಂಡಿತ್ತು. ಅದೇ ಸಂದರ್ಭದಲ್ಲ ಬ್ರಿಗೇಡ್ ರಸ್ತೆ ಮಾರುಕಟ್ಟೆ ಸಂಘ ಸ್ಥಾಪನೆಯಾಗಿ, ಯೂಸುಫ್ ಜಂಟಿ ಕಾರ್ಯದರ್ಶಿಯಾದರು. ಮೂರು ವರ್ಷಗಳ ಕಾಲ ಪಾರ್ಕಿಂಗ್ ವ್ಯವಸ್ಥೆ ಸರಿಪಡಿಸಲು ಅಲೆದಾಡಿ, ಆಗಿನ ಮುಖ್ಯಮಂತ್ರಿಯಾಗಿದ್ದ ಜೆ.ಎಚ್.ಪಟೇಲರನ್ನೂ ಯೂಸುಫ್ ಭೇಟಿಯಾಗಿದ್ದರು. ಕೊನೆಗೆ, ಏನಾದರೊಂದು ಶಾಶ್ವತ ಪರಿಹಾರ ಮಾಡಲೇಬೇಕೆಂದು ನಿರ್ಧರಿಸಿ1999ರಲ್ಲಿ ಅಧ್ಯಯನ ಆರಂಭಿಸಿ 4 ವರ್ಷಗಳ ಕಾಲ ಅಧ್ಯಯನ ನಡೆಸಿದರು.

ಹದಿನೈದು ವರ್ಷಗಳ ಹಿಂದೆ, ಯೂರೋಪ್‍ಗೆ ತೆರಳಿ, ಪಾರ್ಕಿಂಗ್ ವ್ಯವಸ್ಥೆಯನ್ನು ಉತ್ತಮಪಡಿಸಲು, ಬೆಂಗಳೂರು ನಗರಕ್ಕೆ ಸೂಕ್ತವಾಗಬಹುದಾದ ಯಂತ್ರಗಳನ್ನು ಅಳವಡಿಸುವ ಯೋಜನೆಯನ್ನು ಮನಸ್ಸಿನಲ್ಲಿಟ್ಟುಕೊಂಡು 72 ಕಂಪನಿಗಳನ್ನು ಆಹ್ವಾನಿಸಿ ಯಂತ್ರಗಳನ್ನು ಪರಿಶೀಲಿಸಿದವರು ಸುಹೈಲ್ ಯೂಸುಫ್. ಬಳಿಕ 2004ರಲ್ಲಿ ಪಾರ್ಕಿಂಗ್ವೆಂಡಿಂಗ್ ಮಷಿನ್‍ಅನ್ನು ಫ್ರಾನ್ಸ್‍ನಿಂದ ತರಿಸಿದ ಅವರು, ಬ್ರಿಗೇಡ್ ರೋಡ್‍ನಲ್ಲಿ ಅದನ್ನು ಅಳವಡಿಸಿದರು. ಇದು ಭಾರತದಲ್ಲಿಯೇ ಮೊಟ್ಟಮೊದಲ ಪಾರ್ಕಿಂಗ್ ವ್ಯವಸ್ಥೆ ಎಂಬುದು ಗಮನಾರ್ಹ.

ಎಸ್‍ಎಂ ಕೃಷ್ಣ

ಸಹಕಾರ ಎಂ.ಆರ್.ಶ್ರೀನಿವಾಸಮೂರ್ತಿ ಬಿಬಿಎಂಪಿ ಆಯುಕ್ತರಾಗಿದ್ದ ಸಂದರ್ಭ ಒಂದು ವರ್ಷ ಅವರ ಬಳಿ ಹೋಗಿ, ತಾನು ಸಿದ್ಧಪಡಿಸಿದ್ದ ಯೋಜನೆಯ ಒಂದೇ ಪುಸ್ತಕವನ್ನು 25 ಬಾರಿ ಕೊಟ್ಟಿದ್ದರು ಯೂಸುಫ್. ಅದನ್ನು ಲೆಕ್ಕಿಸಲೇ ಇಲ್ಲ. ಆ ಅವಧಿಯಲ್ಲಿ ಎಸ್. ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದರು. ಅವರ ಮಗಳು ಯೂಸುಫರ ಅಂಗಡಿಗೆ ಬರುತ್ತಿದ್ದರು. ಅವರ ಮೂಲಕ ಎಸ್.ಎಂ.ಕೃಷ್ಣ ಅವರನ್ನು ಭೇಟಿಯಾಗಿ ತಮ್ಮ ಯೋಜನೆಗಳನ್ನು ಅವರ ಮುಂದಿಟ್ಟ ಯೂಸುಫ್‍ಗೆ ಅವರು ಮೂರು ಪ್ರಶ್ನೆಗಳನ್ನು ಕೇಳಿದರಂತೆ; ಆ ಸಂಭಾಷಣೆ ಹೀಗಿದೆ:
‘ಈ ಯೋಜನೆಗೆ ಸರ್ಕಾರ ನೀಡಬೇಕಾದ್ದೆಷ್ಟು?’
‘ಸೊನ್ನೆ ಸರ್’
‘ಈಗ ಇರುವ ಪಾರ್ಕಿಂಗ್ ವ್ಯವಸ್ಥೆಯಿಂದ ಬರುವ ಆದಾಯ?’
‘ರೂ.3 ಲಕ್ಷ’
‘ನಿಮ್ಮ ಯೋಜನೆಯಿಂದ ಸರ್ಕಾರಕ್ಕೆ ಎಷ್ಟು ಆದಾಯ
ನೀಡುತ್ತೀರಿ?’
‘ರೂ.12 ಲಕ್ಷ ಸರ್’.
ಅವರಿಗೆ ಖುಷಿಯಾಯ್ತು. ತಕ್ಷಣ ಎಂ.ಆರ್.ಶ್ರೀನಿವಾಸ ಮೂರ್ತಿಗೆ ಕರೆ ಮಾಡಿ, ಈ ಯೋಜನೆಗಳನ್ನು ಗಮನಿಸಿ ನಾಳೆಯೇ ವಿವರ ಸಲ್ಲಿಸುವಂತೆ ತಿಳಿಸಿದರು. ಹಾಗಾಗಿ ಈ ವ್ಯವಸ್ಥೆ ತರಲು ಸಾಧ್ಯವಾಗಿದೆ.

ಹೊಸ ವ್ಯವಸ್ಥೆಯೊಂದನ್ನು ಅಳವಡಿಸುವುದರ ಹಿಂದಿರುವ ಸಂಕಷ್ಟಗಳು ಆ ಸಂಕಟವನ್ನು ಅನುಭವಿಸಿದವರಿಗಷ್ಠೆ ಗೊತ್ತಿರುತ್ತದೆಯೇ ಹೊರತು ಆ ವ್ಯವಸ್ಥೆಯನ್ನು ಅನುಭವಿಸುವವರಿಗೆ ಗೊತ್ತಾಗುವುದಿಲ್ಲ. ಯೂಸುಫ್ ವಿಚಾರದಲ್ಲಿಯೂ ಅಷ್ಠೆ. ತಮ್ಮ ಅಧ್ಯಯನದ ಫಲವಾಗಿ ಪಾರ್ಕಿಂಗ್ ಸಂಬಂಧಿಸಿ ಬಹಳಷ್ಟು ಹೊಸ ಆಲೋಚನೆಗಳು ಅವರಲ್ಲಿವೆ. ಆದರೆ ಈ ಒಂದು ವ್ಯವಸ್ಥೆಯನ್ನು ಅಳವಡಿಸುವುದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಅವರು ಬಹಳಷ್ಟು ಪಾಡು ಪಟ್ಟಿದ್ದಾರೆ. ಕೊನೆಗೆ ಯೂಸುಫ್ ಅವರ ಯೋಜನೆಗೆ ಅನುಮತಿ ನೀಡಿದ್ದು, ಆಗಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ.

ಬ್ರಿಗೇಡ್ ರೋಡ್‍ನಲ್ಲಿ ಪಾರ್ಕಿಂಗ್ ವ್ಯವಸ್ಥೆಯನ್ನು ತಂದುದರ ಜತೆಗೆ, ಅಲ್ಲಿನ ಅಂಗಡಿ ಮಾಲೀಕರುಗಳಿಗೆ ಎರಡು ಆಯ್ಕೆಗಳನ್ನೂನೀಡಿದ್ದರು ಯೂಸುಫ್. ಅದು, ಒಂದೋ ಅಂಗಡಿ ಇರಬೇಕು, ಇಲ್ಲದಿದ್ದರೆವಾಹನ ಇರಬೇಕು ಎಂಬ ಆಯ್ಕೆ. ‘ಗ್ರಾಹಕರು ಬಂದು ವಾಹನ ನಿಲ್ಲಿಸಿ, ಖರೀದಿಯ ಬಳಿಕ ಸ್ವಲ್ಪ ಹೊತ್ತಿನಲ್ಲೇ ಹೊರಟುಬಿಡುತ್ತಾರೆ. ಅಂಗಡಿ ಮಾಲೀಕರು ಬೆಳಿಗ್ಗೆ ಬಂದು ವಾಹನ ನಿಲ್ಲಿಸಿದರೆ ರಾತ್ರಿಯವರೆಗೂ ಅಲ್ಲಿಯೇ ಇರುತ್ತದೆ. ಅದರಿಂದಾಗಿ ಗ್ರಾಹಕರಿಗೆ ವಾಹನ ನಿಲುಗಡೆಗೆ ಅವಕಾಶ ಸಿಗುವುದಿಲ್ಲ. ಹಾಗಾಗಿ ಮಾಲೀಕರಿಗೆ ಇಂತಹ ಆಯ್ಕೆ ನೀಡಿದೆ’ ಎನ್ನುತ್ತಾರೆ ಯೂಸುಫ್.

ಈ ಪಾರ್ಕಿಂಗ್ ವ್ಯವಸ್ಥೆಯಲ್ಲಿ ಒಟ್ಟು 85ಕಾರುಗಳ ನಿಲುಗಡೆಗೆ ಜಾಗವಿದ್ದು, ದಿನಕ್ಕೆ 1362 ವಾಹನಗಳು ಪಾರ್ಕ್ ಆಗುತ್ತವೆ. ಯಂತ್ರದ ನಿರ್ವಹಣೆಗೆ ವರ್ಷಕ್ಕೆ ರೂ.5ಲಕ್ಷ, ಟಿಕೆಟ್‍ನ ಮುದ್ರಣ ಕಾಗದಕ್ಕೆ ರೂ.50,000 ಖರ್ಚಿದೆ. ಇವೆಲ್ಲ ಖರ್ಚುಗಳನ್ನೂ ಸಂಘದ ಹಣದಿಂದಲೇ ನಿಭಾಯಿಸುವ ಯೂಸುಫ್, ವಾರ್ಷಿಕ ರೂ.27 ಲಕ್ಷ ಆದಾಯವನ್ನು ಸಂಪೂರ್ಣವಾಗಿ ಬಿಬಿಎಂಪಿಗೆ ನೀಡುತ್ತಾರೆ. ಆದರೆ ಹದಿನೈದು ವರ್ಷದಲ್ಲಿ ಪಾಲಿಕೆಯ ಯಾರೂ ಕೂಡಾ ಒಮ್ಮೆಯೂ ಇಲ್ಲಿಗೆ ಭೇಟಿ ನೀಡಿ, ಯಂತ್ರದ ನಿರ್ವಹಣೆ ಕುರಿತು ಪರಿಶೀಲಿಸಿಲ್ಲ ಎಂಬ ವಿಷದವೂ ಅವರಲ್ಲಿದೆ.

ಪಾರ್ಕಿಂಗ್ ವೆಂಡಿಂಗ್ ಯಂತ್ರದಿಂದ ನಯಾಪೈಸೆಯನ್ನೂ ನಾವು ಪಡೆಯಲು ಸಾಧ್ಯವಿಲ್ಲ. ಉಳಿದಿರುವ ಹಣದ ಬಗ್ಗೆ, ಪಾವತಿಯಾದ ಮೊತ್ತದ ಬಗ್ಗೆ ಸ್ಪಷ್ಟ ಮಾಹಿತಿಯ ರಶೀದಿಯನ್ನು ಯಂತ್ರ ನೀಡುತ್ತದೆ. ಹಾಗಾಗಿ ಮೋಸ ಅಸಾಧ್ಯ’ ಎಂದು ವಿಶ್ವಾಸದಿಂದ ನುಡಿಯುತ್ತಾರೆ ಅವರು.

‘ಇಲ್ಲಿ ಬಹುತೇಕ ಕಡೆಗಳಲ್ಲಿ ಪಾರ್ಕಿಂಗ್ ಮಾಫಿಯಾ ಎಗ್ಗಿಲ್ಲದೆ ನಡೆಯುತ್ತಿವೆ. ಅವಧಿಗೆ ರೂ.10 ಪಡೆಯಬೇಕಾದಲ್ಲಿ ರೂ.20, ರೂ.20ಕ್ಕೆ ರೂ.40 ಪಡೆಯುವುದು ನಡೆಯುತ್ತಿವೆ. ಇದರಿಂದ ಬಿಬಿಎಂಪಿ ಪಾಲಾಗಬೇಕಾದ ದುಡ್ಡು ಈ ಮಾಫಿಯಾಗಳ ಕಿಸೆ ಸೇರುತ್ತದೆ. ಪಾಲಿಕೆ ಮಾತ್ರ ಇವನ್ನೆಲ್ಲ ಕಂಡೂ ಕಣ್ಣುಮುಚ್ಚಿ ಕೂತಂತಿದೆ. ಪಾರ್ಕಿಂಗ್ ವೆಂಡಿಂಗ್ ಯಂತ್ರದಿಂದ ನಯಾಪೈಸೆಯನ್ನೂ ನಾವು ಪಡೆಯಲು ಸಾಧ್ಯವಿಲ್ಲ. ಉಳಿದಿರುವ ಹಣದ ಬಗ್ಗೆ, ಪಾವತಿಯಾದ ಮೊತ್ತದ ಬಗ್ಗೆ ಸ್ಪಷ್ಟ ಮಾಹಿತಿಯ ರಶೀದಿಯನ್ನು ಯಂತ್ರ ನೀಡುತ್ತದೆ. ಹಾಗಾಗಿ ಮೋಸ ಅಸಾಧ್ಯ’ ಎಂದು ವಿಶ್ವಾಸದಿಂದ ನುಡಿಯುತ್ತಾರೆ ಅವರು.

ಬೆಂಗಳೂರಿನ ಸಂಚಾರದಟ್ಟಣೆಯ ಸದ್ಯದ ವ್ಯವಸ್ಥೆಗಳ ಕುರಿತು ಯೂಸುಫ್ ಅವರಿಗೆ ಅಸಮಾಧಾನವಿದೆ. ‘ಇಲ್ಲಿ ತಲೆಬುಡ ಇಲ್ಲದ ಕೆಲಸಗಳೇ ಹೆಚ್ಚು ನಡೆದಿವೆ. 144 ಏಕಮುಖ ಸಂಚಾರ ವ್ಯವಸ್ಥೆ ಮಾಡಿದ್ದಾರೆ. ದ್ವಿಮುಖ ಸಂಚಾರ ವ್ಯವಸ್ಥೆಯಲ್ಲಿ ಹತ್ತು ನಿಮಿಷದಲ್ಲಿ ತಲುಪಬಹುದಾದ ಸ್ಥಳಕ್ಕೆ ಏಕಮುಖ ವ್ಯವಸ್ಥೆಯಲ್ಲಿ 30ನಿಮಿಷ ತಗಲುತ್ತದೆ. 20-30 ನಿಮಿಷ ಹೆಚ್ಚಾಗಿಯೇ ವಾಹನಗಳು ರಸ್ತೆ ಮೇಲಿರುತ್ತವೆ. ಇವರೇನು ಸಮಸ್ಯೆ ಬಗೆಹರಿಸುತ್ತಿದ್ದಾರೋ ಅಥವಾ ಇನ್ನಷ್ಟು ಸಮಸ್ಯೆ ಸೃಷ್ಟಿಸುತ್ತಿದ್ದಾರೋ’ ಎಂಬ ಯೂಸುಫ್ ಅವರ ಪ್ರಶ್ನೆ, ಪ್ರಸ್ತುತ ವ್ಯವಸ್ಥೆಯ ಕುರಿತು ಅವಲೋಕಿಸಬೇಕಾದ ಅನಿವಾರ್ಯತೆಯನ್ನು ಧ್ವನಿಸುತ್ತದೆ.

ಸರ್ಕಾರ, ಇಲಾಖೆಗಳ ಕಡೆಗೆ ಹಲವು ವರ್ಷಗಳಿಂದ ಯೂಸುಫ್ ಖುದ್ದು ಭೇಟಿ ನೀಡಿ ತನ್ನಿಂದ ಯಾವ ಸಲಹೆಯನ್ನು ಬೇಕಾದರೂ ಕೇಳಿರಿ, ಉಚಿತವಾಗಿಯೇ ನೀಡಲು ಸಿದ್ಧ ಎಂದಿದ್ದರು. ಆದರೆ ಅಧಿಕಾರಿಗಳು, ‘ನೀವು ಎಷ್ಟು ಕೊಡುತ್ತೀರಿ’ ಎಂದು ಕೇಳುತ್ತಿದ್ದರಂತೆ. ಒಬ್ಬ ಸ್ವಇಚ್ಛೆಯಿಂದ ಸಮಾಜದ ಸೇವೆಗೆ ಹೊರಟರೆ, ಸೇವೆಯ ಜತೆಗೆ ಹಣವನ್ನೂ ಆತನೇ ಕೊಡಬೇಕೇ ಎಂದು ಪ್ರಶ್ನಿಸುತ್ತಾರೆ ಯೂಸುಫ್.

‘ಅಂತರರಾಷ್ಟ್ರೀಯ ಸಂಚಾರ ನಿರ್ವಹಣೆ ನಿಯಮ’ಗಳನ್ನು ಸರಿಯಾಗಿ ಅಳವಡಿಸಿದರೆ ನಮ್ಮ ನಗರದ ಸಮಸ್ಯೆ ಸಂಪೂರ್ಣ ಇಲ್ಲವಾಗುತ್ತದೆ ಎನ್ನುವ ಯೂಸುಫ್, ಬ್ರಿಗೇಡ್ ರೋಡ್‍ನಲ್ಲಿ ಅಳವಡಿಸಿರುವ ವ್ಯವಸ್ಥೆ ಒಂದು ಉದಾಹರಣೆಯಷ್ಠೆ ಎನ್ನುತ್ತಾರೆ.

ಪಾರ್ಕಿಂಗ್ ವ್ಯವಸ್ಥೆಗೆ ಸಂಬಂಧಿಸಿ ತನ್ನಲ್ಲಿ ಯೋಜನೆಗಳು ಬೇಕಾದಷ್ಟಿವೆ. ಆದರೆ ಯಾರು ಅಳವಡಿಸಿಕೊಳ್ಳುತ್ತಾರೆ ಎಂದು ಕೇಳುವ ಯೂಸುಫ್, ಪಾರ್ಕಿಂಗ್‍ನ ಜಾಗದಲ್ಲಿ ಕಾರು ನಿಲ್ಲಿಸಲು ಖಾಲಿ ಸ್ಥಳ ಇದೆಯೇ ಇಲ್ಲವೇ ಎಂಬ ಮಾಹಿತಿಯನ್ನು ನೀಡುವ ಪಾರ್ಕಿಂಗ್ ಮಾಹಿತಿ ಕೇಂದ್ರದ ವ್ಯವಸ್ಥೆಯನ್ನು ಸಂಘದ ಖರ್ಚಿನಲ್ಲೇ ಮಾಡಬೇಕು ಎಂಬ ಯೋಜನೆ ಹಾಕಿಕೊಂಡಿದ್ದಾರೆ. ಈ ವ್ಯವಸ್ಥೆಯಿಂದ ಚಾಲಕರಿಗೆ ಬಹಳಷ್ಟು ಅನುಕೂಲಗಳಿವೆ. ರಸ್ತೆಯಲ್ಲಿ ಚಲಿಸುವಾಗಲೇ ದೊಡ್ಡದಾಗಿಯೇ ಪಾರ್ಕಿಂಗ್ ಸ್ಥಳದ ಕುರಿತ ಎಲ್ಲಾ ಮಾಹಿತಿಗಳನ್ನು ಪರದೆ ಮೇಲೆ ತೋರಿಸಲಾಗುತ್ತದೆ. ಆದರೆ ಅಳವಡಿಕೆಗೆ ಅವಕಾಶ ನೀಡುತ್ತಿಲ್ಲ. ‘ಅಂತರರಾಷ್ಟ್ರೀಯ ಸಂಚಾರ ನಿರ್ವಹಣೆ ನಿಯಮ’ಗಳನ್ನು ಸರಿಯಾಗಿ ಅಳವಡಿಸಿದರೆ ನಮ್ಮ ನಗರದ ಸಮಸ್ಯೆ ಸಂಪೂರ್ಣ ಇಲ್ಲವಾಗುತ್ತದೆ ಎನ್ನುವ ಯೂಸುಫ್, ಬ್ರಿಗೇಡ್ ರೋಡ್‍ನಲ್ಲಿ ಅಳವಡಿಸಿರುವ ವ್ಯವಸ್ಥೆ ಒಂದು ಉದಾಹರಣೆಯಷ್ಠೆ ಎನ್ನುತ್ತಾರೆ.

‘ವಾಹನಗಳು ಕಡಿಮೆ ಅವಧಿಯವರೆಗೆ ರಸ್ತೆ ಮೇಲಿರುವುದು ಟ್ರಾಫಿಕ್‍ನ ಸಾಮಾನ್ಯ ತತ್ವ. ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ತಲುಪುವ ಅಂತರ ಕಡಿಮೆಯಿದ್ದಷ್ಟೂ ಒಳ್ಳೆಯದು. ಇಲ್ಲಿ ರಸ್ತೆಯ ಅಲ್ಲಲ್ಲಿ, ಅದೂ ಸಿಗ್ನಲ್‍ಗಳಲ್ಲಿ ಹಂಪ್ಸ್‍ಗಳನ್ನು ಹಾಕಲಾಗಿದೆ. ಇದರಿಂದ ವಾಹನಗಳು ಹೆಚ್ಚು ಹೊತ್ತು ರಸ್ತೆ ಮೇಲಿರುತ್ತವೆ. ಅದಕ್ಕಿಂತ, ವಾಹನಗಳು ಒಂದೇ ಸಾಲಿನಲ್ಲಿ ಚಲಿಸುವಂತೆ, ಎಡಗಡೆಯಿಂದ ಹಿಂದಿಕ್ಕದಂತೆ ಸಂಚಾರದಲ್ಲಿ ಶಿಸ್ತನ್ನು ಪಾಲಿಸುವ ನಿಯಮ ತಂದರೆ ಎಷ್ಟು ಚೆನ್ನಾಗಿರುತ್ತದೆಯಲ್ಲವೇ’ ಎಂದು ಆಶಾದಾಯಕವಾಗಿ ನುಡಿಯುತ್ತಾರೆ ಯೂಸುಫ್. 

ಪಾರ್ಕಿಂಗ್ ವೆಂಡಿಂಗ್ ಮಷಿನ್

ಪಾರ್ಕಿಂಗ್ ಯಂತ್ರವನ್ನು ಚಾಲಕರು ಸುಲಭವಾಗಿ ಬಳಸಲು ಸಾಧ್ಯ.ಕಾರು ಪಾರ್ಕ್ ಮಾಡಿ ಚಾಲಕರೇ ಈ ಯಂತ್ರದ ಬಳಿ ಹೋಗಿ 5 ರೂಪಾಯಿ ನಾಣ್ಯಗಳನ್ನಷ್ಠೆ ಬಳಸಿ ಗಂಟೆಗೆ ರೂ.10 ಹಾಗೂ 2 ಗಂಟೆಗೆ ರೂ.20ನ್ನು (2 ಗಂಟೆಗಿಂತ ಹೆಚ್ಚು ಹೊತ್ತು ಪಾರ್ಕ್ ಮಾಡಿದರೆ ವಾಹನವನ್ನು ಟೋ ಮಾಡಲಾಗುತ್ತದೆ.) ಪಾವತಿಸಬೇಕು. ರಶೀದಿಯನ್ನು ಕಾರಿನ ಎದುರು ಗಾಜಿನ ಮೂಲಕ ಹೊರಕ್ಕೆ ಸ್ಪಷ್ಟವಾಗಿ ಕಾಣಿಸುವಂತೆ ಇಡಬೇಕು.

Leave a Reply

Your email address will not be published.