ಬೆಂಗಳೂರಿನ ಸಂಚಾರ ದಟ್ಟಣೆಗೆ ಶಾಶ್ವತ ಪರಿಹಾರ ಸಾಧ್ಯವೇ..?

ಜನೆವರಿ ಸಂಚಿಕೆಯ ಮುಖ್ಯ ಚರ್ಚೆ:

ಬೆಂಗಳೂರಿನಲ್ಲಿನ ಸಂಚಾರ ದಟ್ಟಣೆಯ ವಿವರಗಳನ್ನಾಗಲಿ ತೀವ್ರತೆಯನ್ನಾಗಲಿ ನಿಮ್ಮ ಮುಂದೆ ಬಿಚ್ಚಿಡುವ ಅಗತ್ಯವಿಲ್ಲ. ಬೆಂಗಳೂರಿನ ನಾಗರಿಕರು ಪ್ರತಿದಿನವೂ ಈ ನರಕಯಾತನೆಯನ್ನು ಅನುಭವಿಸುತ್ತಲೇ ಬಂದಿದ್ದಾರೆ. ಬೇರೆಡೆಯಿಂದ ಬೆಂಗಳೂರಿಗೆ ಬರುವ ಕನ್ನಡಿಗರು ದಟ್ಟಣೆಯ ತೀವ್ರತೆಗೆ ಕಕ್ಕಾಬಿಕ್ಕಿಯಾಗಿ ಯಾವಾಗ ತಮ್ಮ ಊರಿಗೆ ಮರುಳುವೆವೋ ಎಂದು ಪರಿತಪಿಸುತ್ತಾರೆ. ಈ ಸಂಚಾರ ದಟ್ಟಣೆಯಿಂದ ಕನ್ನಡಿಗರಿಗೆ ಮತ್ತು ಕರ್ನಾಟಕಕ್ಕೆ ಆಗುತ್ತಿರುವ ಹಾನಿಯನ್ನು ಇಲ್ಲಿ ಸಂಕ್ಷಿಪ್ತವಾಗಿ ಪಟ್ಟಿ ಮಾಡಿದೆ.

  • ಬೆಂಗಳೂರಿನ ಟ್ರಾಫಿಕ್ ಕಂಜೆಶನ್‍ನಲ್ಲಿ ವೃತ್ತಿನಿರತ ಸಾಮಾನ್ಯ ನಾಗರಿಕನೊಬ್ಬ ದಿನಕ್ಕೆ ಸರಾಸರಿ ಮೂರು ಘಂಟೆ ವ್ಯಯ ಮಾಡುತ್ತಾನೆ. ಈ ದಟ್ಟಣೆಯ ದೂಳು, ಹೊಗೆ, ಕಿರಿಕಿರಿ ಹಾಗೂ ತಾಪವು ನಾಗರಿಕರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಿ ಹಲವು ರೋಗ- ಕುಂಠಿತ ಜೀವನಕ್ಕೆ ಕಾರಣವಾಗುತ್ತಿವೆ.
  • ದಟ್ಟಣೆಯಿಂದ ಅನವಶ್ಯಕವಾಗಿ ಪೆಟ್ರೋಲ್-ಡೀಸಲ್ ಉರಿಸುವುದರಿಂದ ಆರ್ಥಿಕತೆಗೆ ನಷ್ಟದ ಜೊತೆಗೆ ಬೆಂಗಳೂರಿನ ಪರಿಸರದಲ್ಲಿ ಕಾರ್ಬನ್ ಡೈಆಕ್ಸೈಡ್ ಮಲಿನಕ್ಕೆ ಕಾರಣವಾಗುತ್ತಿದೆ.
  • ಬೆಂಗಳೂರಿನ ವಾಣಿಜ್ಯ-ವ್ಯಾಪಾರ-ವಹಿವಾಟಿಗೆ ಈ ಸಂಚಾರ ದಟ್ಟಣೆ ಕಡುಶಾಪವಾಗಿದೆ. ವೃತ್ತಿನಿರತ ಸ್ವ-ಉದ್ಯೋಗಿಗಳಂತೂ ತಮ್ಮ ವೃತ್ತಿಯನ್ನೇ ಮೊಟಕುಗೊಳಿಸುವ ಅನಿವಾರ್ಯತೆಯಲ್ಲಿದ್ದಾರೆ. ಒಟ್ಟಾರೆ ಬೆಂಗಳೂರಿನ ಆರ್ಥಿಕತೆಗೆ ಸಂಚಾರ ದಟ್ಟಣೆಯು ಕೊರಳು ಹಿಂಡುವ ಉರುಳಾಗಿದೆ.
  • ಬೆಂಗಳೂರಿನಲ್ಲಿ ಸಂಚರಿಸುವುದೇ ದುರ್ಗಮವಾಗಿ ಕನ್ನಡಿಗರ ಸಾಂಸ್ಕೃತಿಕ ಹಾಗೂ ಕೌಟುಂಬಿಕ ಚಟುವಟಿಕೆಗಳಿಗೆ ಕಡಿವಾಣ ಬಿದ್ದಿದೆ. ಸಂಜೆಯ ವಿರಾಮದಲ್ಲಿ ನಾಟಕ ಅಥವಾ ಯಾವುದೇ ಸಿನಿಮಾ ನೋಡುವ ಸಾಮಾನ್ಯ ಕ್ರಿಯೆಗಳಿಗೂ ಬರೆ ಬಿದ್ದಂತಾಗಿದೆ.

ಕಳೆದ ಹತ್ತಿಪ್ಪತ್ತು ವರ್ಷಗಳಲ್ಲಿ ಬೆಂಗಳೂರಿನ ಮಾನಸಿಕತೆಯನ್ನು ಆವರಿಸಿರುವ ಈ ಸಂಚಾರ ದಟ್ಟಣೆ ನಮ್ಮ ಜೀವನದ ಹಾಸುಹೊಕ್ಕಾಗಿದೆ. ಈ ಅನಿವಾರ್ಯತೆಗೆ (ಸಮಸ್ಯೆಯಾಗಿ ಉಳಿದಿಲ್ಲ) ಯಾವುದೇ ಪರಿಹಾರ ಇಲ್ಲವೆನ್ನುವ ಮಟ್ಟಿಗೆ ನಾವು ಮಾನಸಿಕವಾಗಿ ಸೋತಿದ್ದೇವೆ. ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಹಾ ಪರಿಹಾರಗಳನ್ನು ಹತ್ತಿಳಿದು ಬಸವಳಿದಿದ್ದೇವೆ. ‘ಉತ್ತಮ ಪ್ರಭುತ್ವ ಲೊಳಲೊಟ್ಟೆ’ಯ ಮುಂದುವರೆದ ಭಾಗವಾಗಿ ಬೆಂಗಳೂರಿನಲ್ಲಿ ‘ಸುಲಭ ಸಂಚಾರ ಲೊಳಲೊಟ್ಟೆ’ಯೆಂದು ನಂಬಲು ಒತ್ತಾಯಕ್ಕೆ ಒಳಗಾಗಿದ್ದೇವೆ.

ಹಾಗಾದರೆ ಬೆಂಗಳೂರಿನಲ್ಲಿನ ಸಂಚಾರ ದಟ್ಟಣೆಗೆ ಶಾಶ್ವತ ಪರಿಹಾರ ಇಲ್ಲವೇ..? ಇದೆಯೆಂದರೆ ಅದು ನಿಜಕ್ಕೂ ಸಾಧ್ಯವಿದೆಯೇ..? ಸಾಧ್ಯವಿದ್ದರೆ ಅದು ನಮ್ಮ ಪ್ರಸಕ್ತ ರಾಜಕೀಯ ಸನ್ನಿವೇಶದಲ್ಲಿ ಆಗಬಹುದಾದ ಯೋಜನೆಯೇ..? ಆಗುವು ದಾದರೆ ನಮ್ಮ ಇದೇ ಜೀವಿತಾವಧಿಯಲ್ಲಿ ಕಾಣಬಹುದೇ..?

ಮೇಲಿನ ಪ್ರಶ್ನೆಗಳು ಶಬ್ದಮೀರಿ ಗಹನವಾಗಿವೆ. ಮೇಲಿನ ಪ್ರಶ್ನೆಗಳಿಗೆ ಉತ್ತರ ಹುಡುಕುವಲ್ಲಿ ಕರ್ನಾಟಕದ ಮತ್ತು ಕನ್ನಡಿಗರ ಭವಿಷ್ಯ ಅಡಗಿದೆ. ಬೆಂಗಳೂರಿನ ಮತ್ತು ಭಾರತದ ಆರ್ಥಿಕತೆಗೆ ಪುನಶ್ಚೇತನ ನೀಡುವ ವಶೀಲಿಯಿದೆ. ಕರ್ನಾಟಕದ ರಾಜಧಾನಿಯಲ್ಲಿ ಸಾಂಸ್ಕೃತಿಕ ಪುನರುಜ್ಜೀವನ ಮಾಡುವ ಆಶಯವಿದೆ. ಬನ್ನಿ, ಸಂಚಾರ ದಟ್ಟಣೆಗೆ ಶಾಶ್ವತ ಪರಿಹಾರ ಹುಡುಕುವ ನಿಟ್ಟಿನಲ್ಲಿ ಸದ್ಯಕ್ಕೆ ಚರ್ಚೆಯನ್ನಾದರೂ ಪ್ರಾರಂಭಿಸೋಣ. ಚರ್ಚೆಯು ಶಾಶ್ವತ ಪರಿಹಾರಕ್ಕೆ ಬೇಕಿರುವ ನಂಬಿಕೆ- ಬದ್ಧತೆಗಳನ್ನು ರೂಪಿಸುವ ಸಾಧ್ಯತೆಯಲ್ಲಿ ಆಶಾವಾದಿಗಳಾಗೋಣ. ‘ಶಾಶ್ವತ ಪರಿಹಾರ’ದ ಈ ಚರ್ಚೆಯಲ್ಲಿ ನಿಮ್ಮ ಅನಿಸಿಕೆ, ಬರಹ, ಪರಿಹಾರ, ಎಚ್ಚರಿಕೆಗಳನ್ನು ಬರೆದು ಕಳಿಸಿ. ಡಿಸೆಂಬರ್ 15ರೊಳಗೆ ನಿಮ್ಮ ಬರಹ ನಮಗೆ ತಲುಪಲಿ.

ಸಮಾಜಮುಖಿ ಮಾಸಪತ್ರಿಕೆ
ನಂ.8, ಡಾ.ಎಚ್.ಎಲ್.ನಾಗೇಗೌಡ ರಸ್ತೆ (ಸರ್ಪೆಂಟೈನ್ ರಸ್ತೆ), ಕುಮಾರ ಪಾರ್ಕ್ ಪಶ್ಚಿಮ, ಶೇಷಾದ್ರಿಪುರಂ, ಬೆಂಗಳೂರು-560020.
ಇಮೇಲ್: samajamukhi2017@gmail.com, ದೂ: 9606934018.

Leave a Reply

Your email address will not be published.