ಬೆಂಗಳೂರಿನ ಹತ್ತು ಸ್ಥಳಗಳ ಕುತೂಹಲಕಾರಿ ಕತೆಗಳು

-ಪ್ರೊ.ಪದ್ಮನಾಭ ರಾವ್

ಪ್ರತಿಯೊಂದು ಊರಿಗೂ ತನ್ನದೇ ಆದ ಕುರುಹುಗಳು ಇರುತ್ತವೆ. ಅವು ಆ ಊರಿನ ವ್ಯಕ್ತಿತ್ವದ ಭಾಗವೇ ಆಗಿರುತ್ತವೆ. ಈಗ ಮಹಾನಗರವಾಗಿ ಬೆಳೆದು ನಿಂತಿರುವ ಬೆಂಗಳೂರಿನ ಹಳೆಯ ಗುರುತುಗಳನ್ನು ಹುಡುಕುವ ಪ್ರಯತ್ನ ಇಲ್ಲಿದೆ.

ಮಡ್ ಟ್ಯಾಂಕ್ 

ಈಗ ಕರ್ನಾಟಕ ರಾಜ್ಯ ಹಾಕಿ ಕ್ರೀಡಾಂಗಣ ಮತ್ತು ಅದರ ಪಕ್ಕದ ಕ್ರಿಕೆಟ್ ಪಿಚ್ ಇರುವ ಪ್ರದೇಶವು ಹಿಂದೊಮ್ಮೆ ಅಕ್ಕಿತಿಮ್ಮೇನಹಳ್ಳಿ ಕೆರೆ ಆಗಿತ್ತು. ಅದನ್ನು ನಂತರ ಬ್ರಿಟಿಷ್ ನಿವಾಸಿಗಳು ‘ಮಡ್ ಟ್ಯಾಂಕ್’ (ಮಣ್ಣಿನ ಕೆರೆ) ಎಂದು ಕರೆದರು. ಇದನ್ನು ಅಕ್ಕಿತಿಮ್ಮೇನಹಳ್ಳಿ (ಈಗ ‘ಶಾಂತಿನಗರ’ ಎಂದು ಕರೆಯಲಾಗುತ್ತದೆ) ಮತ್ತು ಸುತ್ತಮುತ್ತಲಿಗೆ ನೀರನ್ನು ಸರಬರಾಜು ಮಾಡುವುದಕ್ಕಾಗಿ ಕೆಂಪೇಗೌಡರ ಕಾಲದ ಮುನ್ನ ಅಥವಾ ಅವರ ಕಾಲದಲ್ಲಿ (16ನೇ ಶತಮಾನದ ಕೊನೆಯಲ್ಲಿ) ಕಟ್ಟಲಾಯಿತು.

ಈ ಹಿಂದೆ ಕೆರೆಯನ್ನು ಸುತ್ತುವರೆದಿದ್ದ ದೊಡ್ಡ ರಸ್ತೆ ಬದಿ ಮರಗಳ ವರ್ತುಲವು ಸುಮಾರು 100 ವರ್ಷಗಳ ಹಿಂದೆ ನೆಡಲ್ಪಟ್ಟಿದ್ದವು. 1950ರ ದಶಕದಲ್ಲಿನ ಬಾಲ್ಯದ ದಾಖಲೆಗಳು ಕೆರೆಯೊಳಗೆ ಸಣ್ಣ ಮೀನುಗಳನ್ನು ಹಿಡಿಯಲು ಮೀನುಗಾರಿಕೆ ಮಾಡಿದ ಖುಷಿಯ ಬಗ್ಗೆ ವಿವರಿಸುತ್ತವೆ. ಕಾವೇರಿ ನೀರು ಯಾವಾಗ ಹೆಚ್ಚಾಗಿ ದೊರೆಯಲಾರಂಭಿಸಿತೋ ಆಗ, ಕೆರೆಯ ನಿರ್ವಹಣೆ ನಿಂತು ಹೋಯಿತು ಮತ್ತು ಅದು ಮಲೇರಿಯಾ ರೋಗ ವಾಹಕಗಳಾದ ಸೊಳ್ಳೆಗಳ ಸಂತಾನೋತ್ಪತ್ತಿ ಜಾಗವಾಗಿ ಹೋಯಿತು. 1970ರ ದಶಕದಲ್ಲಿ ಸಂಪೂರ್ಣವಾಗಿ ಅದನ್ನು ತೆರವುಗೊಳಿಸಲಾಯಿತು ಮತ್ತು ಪುನಃಶ್ಚೇತನಗೊಂಡ ಆ ಭೂಮಿಯ ಮೇಲೆ 1980ರ ದಶಕದಲ್ಲಿ ಹಾಕಿ ಕ್ರೀಡಾಂಗಣವನ್ನು ಕಟ್ಟಲಾಯಿತು.

ಫಿಫಿ ವಿಲ್ಲಾ

ಮುಖ್ಯ ರಸ್ತೆಯ ಎರಡೂ ಬದಿಗಳಲ್ಲಿ ಸಾಲಾಗಿದ್ದ ಒಂದೇ ತೆರನಾದ 6-7 ಮನೆಗಳಲ್ಲಿ ಈ 20ನೇ ಶತಮಾನದ ಶುರುವಿನಲ್ಲಿದ್ದ ಬಂಗಲೆಯು ಕೊನೆಯದಾಗಿದೆ. ಪ್ರತಿ ಬಂಗಲೆಯು ಅತಿ ದೊಡ್ಡ ನಿವೇಶನ ಮೇಲೆ ಕಟ್ಟಲ್ಪಟ್ಟಿದ್ದು ಮುಂಭಾಗದ, ಬದಿಯ ಮತ್ತು ಹಿಂಬದಿಯ ಪ್ರಾಗಂಣಗಳನ್ನು ಹೊಂದಿತ್ತು.

ಇದರೊಡನೆ ಪ್ರತ್ಯೇಕವಾದ ಹೊರ ಕಟ್ಟಡಗಳಂತಹ ಅಡುಗೆ ಮನೆ, ಲಾಯಗಳು ಮತ್ತು ಹಿಂಬದಿಯಲ್ಲಿ ಮನೆಕೆಲಸದವರಿಗಾಗಿ ಗುಡಿಸಲು ಗಳನ್ನು ಹೊಂದಿತ್ತು. ನೆಲದ ರಚನೆಗಳು ವಿಶಿಷ್ಟವಾಗಿದ್ದು ತಡಿಕೆಯಿಂದ ಬೀದಿಗೆ ಕಾಣದಂತೆ ಮುಚ್ಚಲ್ಪಟ್ಟ ಮುಂಭಾಗದ ವರಾಂಡದವರೆಗೆ ಒಳಗೆ ಹಾದುಹೋಗಲು ಪ್ರಧಾನ ಮನೆಗೆ ಪ್ರವೇಶ ದ್ವಾರವಿತ್ತು.

ವರಾಂಡದ ಮೂಲಕ ಎರಡು ಅತಿ ಎತ್ತರದ ಮುಚ್ಚಿಕೆಯುಳ್ಳ ಕೋಣೆಗಳಿಗೆ ದಾರಿಯಿದ್ದು, ಮೊದಲು ಕೂರುವ ಕೋಣೆ ಮತ್ತು ನಂತರ ಊಟದ ಕೋಣೆಯಿತ್ತು. ಈ ವಿಶಾಲವಾದ ಮಧ್ಯದ ಕೋಣೆಗಳ ಅಕ್ಕಪಕ್ಕದಲ್ಲಿ ದೊಡ್ಡದಾದ ಮಲಗುವ ಕೋಣೆಗಳಿದ್ದು ಪ್ರತಿಯೊಂದಕ್ಕೂ ಪ್ರತ್ಯೇಕ ಬಚ್ಚಲುಮನೆಯಿದ್ದು ಅದಕ್ಕೆ ಬದಿಯ ಬಾಗಿಲಿನ ಪ್ರವೇಶಗಳಿದ್ದು, ಆದಿನಗಳಲ್ಲಿ ಆಧುನಿಕ ಪ್ಲಂಬಿಂಗ್ ಇಲ್ಲದಿದ್ದಾಗ, ಮಲ ಸಂಗ್ರಹಣೆಗೆ ಅವಕಾಶವಿತ್ತು.

ಫಿಫಿ ವಿಲ್ಲಾ ಬೆಂಗಳೂರಿನ ಪ್ರಸಿದ್ಧವಾದ `ಮಂಕಿ ಟಾಪ್’ ಆಲಂಕಾರಿಕವಾದ ಗೇಬಲ್ಲಿನ ಒಂದು ಸುಂದರ ಉದಾಹರಣೆಯನ್ನು ಹೊಂದಿದೆ- ಇದು ಮುಂಭಾಗದ ಪ್ರವೇಶದ ಮೇಲೆ ಕಾಣಸಿಗುವ ಹಸಿರು ಆಲಂಕಾರಿಕ ಉದ್ದನೆಯ ಪಟ್ಟಿಕೆಗಳಾಗಿವೆ.

29 ನಾರಿಸ್ ರಸ್ತೆ (`ಹಾಫ್ ಬಂಗ್ಲೋ’)

ಹಿಂದೊಮ್ಮೆ ರಿಚ್ಮಂಡ್ ಟೌನ್ ಒಂದೇ ಬ್ರಿಟಿಷ್ ಕುಟುಂಬದಿಂದ ನಿರ್ಮಿಸಲ್ಪಟ್ಟ ಬಂಗಲೆಗಳಿಂದ ಸಾಲುಗಟ್ಟಿತ್ತು. ಹೆಚ್ಚಾದ ಜನಸಂಖ್ಯೆ, ಹೆಚ್ಚುತ್ತಿರುವ ಭೂಮಿಯ ಬೆಲೆ ಮತ್ತು ಒತ್ತಾದ, ಹಲವು ಕುಟುಂಬಗಳು ವಾಸಿಸುವ ಮನೆಗಳ ಅಗತ್ಯತೆಯ ಕಾರಣ ಇವುಗಳು ವೇಗದಿಂದ ಕಣ್ಮರೆಯಾಗಿವೆ.

ವಿಶಾಲವಾದ ಜಮೀನು ಭಾಗವಾಗುತ್ತಾ ಹೋಗಿ ಕಾಲ ಕಳೆದಂತೆ ಪ್ರತ್ಯೇಕವಾಗಿ ಈ ಹಾಫ್ ಬಂಗ್ಲೋದಂತೆ ರೂಪುಗೊಂಡಿತು. ಇಲ್ಲಿ ಜಮೀನು ಮೂಲ ಬಂಗಲೆಯ ಮಧ್ಯ ಭಾಗವಾಯಿತು. ಒಂದು ಕುಟುಂಬವು ಹಳೆಯ ಮನೆಯ ಅರ್ಧ ಭಾಗವನ್ನು ಉಳಿಸಿಕೊಂಡರೆ, ಇನ್ನೊಂದು ಕುಟುಂಬವು ಅವರ ಭಾಗವನ್ನು ಗೃಹಸ್ತೋಮಕ್ಕಾಗಿ ಒಡೆದು ಕಟ್ಟಿದ್ದಾರೆ. ಬೆಂಗಳೂರಿನ ವೇಗದ ಬೆಳವಣಿಗೆಗೆ ಈ ಆಸ್ತಿಯು ಒಂದು ಜೀವಂತ, ಕಣ್ಣೆದುರು ಕಾಣುವ ಸಾಕ್ಷಿಯಾಗಿದೆ.

ವೆಲ್ಲಿಂಗ್ ಟನ್ ಅಡ್ಡ ರಸ್ತೆ (`ಮರ್ಡರ್ ಲೇನ್’)

ಈ ಕಿರಿದಾದ ಪಾದಚಾರಿ ರಸ್ತೆಯು ಮೊದಲಿಗೆ ಬಹುಶಃ ದೊಡ್ಡ ಬಂಗ್ಲೋಗಳಿಗೆ ಬದಿಯ ಪ್ರವೇಶ ದೊರಕಿಸಿಕೊಡುವ ಓಣಿಯಾಗಿತ್ತು. ನಿವೇಶನಗಳು ಮತ್ತೆ ವಿಭಜಿತಗೊಂಡ ಕಾರಣ, ನಾವು ಈಗ ಈ ಓಣಿಯಲ್ಲಿ ಕೆಲವು ಮನೆಗಳನ್ನು ಕಾಣುತ್ತೇವೆ. ಗಿಡ್ಡವಾಗಿದ್ದ ಬಂಗಲೆಗಳ ಆವರಣ ಗೋಡೆಗಳು ಓಣಿಯು ಬೀದಿಗೆ ಕಾಣದಂತೆ ಎತ್ತರವಾಗಿ ಬದಲಾಗಿವೆ. ಬಹುಕಾಲದಿಂದ ಇಲ್ಲಿ ವಾಸವಾಗಿರುವವರ ಪ್ರಕಾರ ಬೀದಿ ಬೆಳಕಿಲ್ಲದುದರ ಜೊತೆಗೆ ಬೀದಿಯ ಬಗೆಗಿನ ಅಲಕ್ಷ್ಯವು ಕಿಡಿಗೇಡಿಗಳು ಗುಂಪುಗೂಡುವುದಕ್ಕೆ, ಕುಡಿಯುವುದಕ್ಕೆ ಮತ್ತು ಕೆಲವೊಮ್ಮೆ ಈ ಬೀದಿಯಲ್ಲಿ ಅಮಲಿನಲ್ಲಿ ಬೀಳುವುದಕ್ಕೆ ಇದು ಆಕರ್ಷಿಸುವ ಜಾಗವಾಗಿ ಹೋಗಿದೆ. ಈ ಕೆಟ್ಟ ಕೂಟಗಳು ಕೊಲೆಯ ಸುಳ್ಳು ಗಾಳಿಸುದ್ದಿ ಹರಡಲು ಕಾರಣವಾಯಿತು. ಈಗ ಓಣಿಯಲ್ಲಿ ಚೆನ್ನಾಗಿ ಬೆಳಕಿದೆ ಮತ್ತು ಅದು ತುಂಬಾ ಸುರಕ್ಷಿತವಾಗಿದೆ, ಮತ್ತು ಈಗ ಈ ಸುಳ್ಳು ಗಾಳಿಸುದ್ದಿಗಳಿಗೆ ಮುಕ್ತಿ ನೀಡಬಹುದು!

ರಿಚ್ಮಂಡ್ ಇನ್ಸ್ಟಿಟ್ಯೂಟ್

ಇದು ಈ ಹಿಂದೆ “ಚರ್ಚ್ ಆಫ್ ಇಂಗ್ಲೆಂಡ್ ಕ್ಲಬ್, ಆಲ್ ಸೇಂಟ್ಸ್” ಅಥವಾ ಸಂಕ್ಷಿಪ್ತವಾಗಿ “ಆಲ್ ಸೇಂಟ್ಸ್ ಸಂಸ್ಥೆ” ಎಂದು ಕರೆಯಲ್ಪಡುತ್ತಿತ್ತು. ಇದು ಮುಖ್ಯವಾಗಿ ರಿಚ್ಮಂಡ್ ಟೌನಿನ ಬ್ರಿಟಿಷ್ ಸಮುದಾಯದ ಸಾಮಾಜಿಕ ತಾಣವಾಗಿತ್ತು. ಇದು ಟೆನ್ನಿಸ್, ಪ್ಲೇ ಕಾರ್ಡುಗಳು, ಓದುವುದು, ಪರಸ್ಪರ ಬೆರೆಯುವುದು ಮತ್ತು ವಿಶೇಷ ಸಂದರ್ಭಗಳಲ್ಲಿ ಮನರಂಜನೆಗಳಂತಹ ಸಂಗೀತ ಗೋಷ್ಠಿಗಳು ಮತ್ತು ನೃತ್ಯಗಳಂತಹ ಚಟುವಟಿಕೆಗಳನ್ನು ಒಳಗೊಂಡಿತ್ತು. 20ನೇ ಶತಮಾನದ ಆದಿಯ ಪ್ರಧಾನ ಕಟ್ಟಡವು ಇನ್ನೂ ನಿಂತಿದೆ ಮತ್ತು 1967ರಲ್ಲಿ ಸ್ಥಾಪಿತವಾದ ಫ್ರಾಂಕ್ ಆಂತೋನಿ ಜೂನಿಯರ್ ಶಾಲೆಯ ರಿಚ್ಮಂಡ್ ಟೌನ್ ಕ್ಯಾಂಪಸ್ಸಿಗೆ ಮನೆಯಾಗಿದೆ.

ಅರಬ್ ಲೈನ್ಸ್

ನೆರೆಹೊರೆಯಲ್ಲಿನ ಇತರೆ ದೊಡ್ಡ ಬಂಗಲೆಗಳಿಗೆ ಹೋಲಿಸಿದಲ್ಲಿ ರಿಚ್ಮಂಡ್ ಟೌನಿನ ಈ ಮೂಲೆಯು ಕಿರಿದಾದ ಓಣಿಗಳ (ಅದರಲ್ಲಿ ಕೆಲವು ಇನ್ನೂ ಇವೆ) ಮೇಲೆ ಸಾಲು ಮನೆಗಳನ್ನು ಹೊಂದಿದೆ. ಈ ಮನೆಗಳು ಬ್ರಿಟಿಷ್ ಪಡೆಗಳಿಗೆ ಕುದುರೆಗಳ ಪ್ರಧಾನ ಸರಬರಾಜುದಾರರಾದ ಅಗಾ ಅಲಿ ಅಸ್ಕರ್ ಅವರಿಂದ ನೇಮಿಸಲ್ಪಟ್ಟಿದ್ದ   ಪರ್ಶಿಯಾದ ಕುದುರೆ ತರಬೇತುದಾರರ ಮತ್ತು ಲಾಯಗಳ ಕೆಲಸಗಾರರ ವಂಶಸ್ಥರ ಮನೆಗಳಾಗಿವೆ. ವಾಸ್ತವಾಗಿ, ಜಾನ್ಸನ್ ಮಾರುಕಟ್ಟೆಯು ಅಲಿ ಅಸ್ಕರ್ ಅವರ ನಾಲ್ಕು ಲಾಯಗಳಲ್ಲಿ ಒಂದಾಗಿತ್ತು, ಇದರಂತೆಯೇ ಇನ್ನೂ ಮೂರು ಲಾಯಗಳು ಹೊಸೂರು ರಸ್ತೆಯನ್ನು ಸುತ್ತುವರೆದು ಇಂದಿನ ಬಾಲ್ಡ್ವಿನ್ ಪ್ರೌಢ ಶಾಲೆ ಮತ್ತು ದಿ ಲಿಟಲ್ ಸಿಸ್ಟರ್ ಆಫ್ ದಿ ಪೂರ್ ಅನ್ನು ಹೊಂದಿರುವ ಜಾಗೆಯಲ್ಲಿತ್ತು. ಅರಬ್ ಲೈನ್ಸ್ ಮತ್ತು ಜಾನ್ಸನ್ ಮಾರುಕಟ್ಟೆಯ ಸುತ್ತಲಿನ ಪ್ರದೇಶದ ನಿವಾಸಿಗಳು ಬೆಂಗಳೂರಿನ ಅತೀ ದೊಡ್ಡ ಷಿಯಾ ಸಮುದಾಯದವರಾಗಿದ್ದಾರೆ. 

ಜಾನ್ಸನ್ ಮಾರುಕಟ್ಟೆ

ಈ ಇಂಡೋ-ಸಾರ್ಸೆನಿಕ್ ಕಟ್ಟಡವು 1929ರಲ್ಲಿ ಹಿಂದೆ ಅಗಾ ಅಲಿ ಅಸ್ಕರ್ ಅವರ ಲಾಯಗಳಾಗಿದ್ದ ನಿವೇಶನಗಳ ಮೇಲೆ ನಿರ್ಮಿಸಲ್ಪಟ್ಟಿತು. ಆಟೋಮೊಬೈಲುಗಳ ಹೆಚ್ಚಳವಾದಂತೆ ಮತ್ತು ಕುದುರೆಗಳಿಗೆ ಬೇಡಿಕೆ ಕಡಿಮೆಯಾದಂತೆ, ಸ್ಥಳೀಯ “ರಿಚ್ಮಂಡ್ ಟೌನ್ ಮಾರುಕಟ್ಟೆ” ಯು ಆ ಪ್ರದೇಶದಲ್ಲಿ ತಲೆಯೆತ್ತಿದೆ. ಪ್ರಸಿದ್ಧ ಕುದುರೆ ವ್ಯಾಪಾರಿಯಾದ ಅಗಾ ಅಲಿ ಅಸ್ಕರ್ ಅವರ ಮೊಮ್ಮಗನಾದ, ಆಗಿನ ಮೈಸೂರಿನ ದಿವಾನರಾದ ಸರ್ ಮಿರ್ಜಾ ಇಸ್ಮಾಯಿಲ್ ಅವರ ಆದೇಶದ ಮೇರೆಗೆ ಹೊಸ `ಜಾನ್ಸನ್ ಮಾರುಕಟ್ಟೆ’ ಕಟ್ಟಲಾಯಿತು. ಈ ಮಾರುಕಟ್ಟೆಗೆ ನಾವು ಅಂದುಕೊಂಡಂತೆ ಇದರ ನಿರ್ಮಾಣವನ್ನು ನಡೆಸಿಕೊಟ್ಟ ಓರ್ವ ಬ್ರಿಟಿಷ್ ನಾಗರಿಕ ಸೇವಕರ ಹೆಸರೇ ಬಂದಿದೆ.

ಮಾರುಕಟ್ಟೆಯ ಕೆಲವು ಪ್ರಸಿದ್ಧ ಮಾರಾಟಗಾರರೆಂದರೆ ‘ದಿ ಮಕ್ಕಾ ಕಫೆ’ ಮತ್ತು `ಗೋಲ್ಡನ್ ಫಿಶ್ ಸ್ಟಾಲ್’. ಈ ರಚನೆಯು ಪ್ರಸ್ತುತ ಹೀನಾಯವಾದ ಸ್ಥಿತಿಯಲ್ಲಿದೆ ಮತ್ತು ಮುಂದಿನ ದಿನಗಳಲ್ಲಿ ಇದನ್ನು ಕೆಡವಲು ಯೋಜಿಸಲಾಗಿದೆ.

ಕೆರೆ ಮುನೀಶ್ವರ ದೇವಸ್ಥಾನ

ಈ ದೇವಸ್ಥಾನವು ಒಂದು ಮುನೀಶ್ವರ (ಶಿವನ ರೂಪ) ವಿಗ್ರಹವಿರುವ ಇನ್ನೂ ಚಿಕ್ಕದಾದ ಗುಡಿಯಾಗಿತ್ತು, ಅದು ಬಹುಶಃ ಮಣ್ಣಿನ ಕೆರೆ (ಮಡ್ ಟ್ಯಾಂಕ್) ಕಟ್ಟಿದ ಕಾಲದಲ್ಲೇ ಇತ್ತು. `ಕೆರೆ’ ಅಥವಾ ಟ್ಯಾಂಕ್ ಒಡ್ಡಿರುವ ದೇವಸ್ಥಾನಗಳು ಸ್ಥಳೀಯರಿಗೆ ತಮ್ಮ ನೀರಿನ ಸಂಪನ್ಮೂಲಗಳನ್ನು ಮತ್ತು ತಮ್ಮನ್ನು ಮಳೆಗಾಲದ ಪ್ರವಾಹದಿಂದ ರಕ್ಷಿಸಿಕೊಳ್ಳಲು ಪ್ರಾರ್ಥಿಸಲು ಪ್ರದೇಶದಲ್ಲಿ ಸಾಮಾನ್ಯವಾಗಿರುತ್ತಿತ್ತು.

ಇಂದು, ದೇವಸ್ಥಾನದ ಹೊರಗಿನ ರಚನೆಯು ಆಧುನಿಕವಾಗಿದೆ, ಮುಂಚೆಯಿದ್ದ ವಿಗ್ರಹದ ಜಾಗದಲ್ಲಿ ಕೆತ್ತಿರುವ ವಿಗ್ರಹವೊಂದಿದೆ. `ದೇವನ ಕಟ್ಟೆಗಳು’ ಅಥವಾ ಪವಿತ್ರವಾದ ತೋಪು ಮಂಗಳಕರವಾದ ಅಶ್ವತ್ಥಮರ ಮತ್ತು ಆಲದ ಮರದ ಜೋಡಿಯನ್ನು ಗುಡಿಯ ಹಿಂದೆ ಕಾಣಬಹುದು. ಅವುಗಳ ತಳದಲ್ಲಿ ಪ್ರತಿಷ್ಠೆ ಮಾಡಲ್ಪಟ್ಟಿರುವ ಅನೇಕ `ನಾಗರ’ ಕಲ್ಲುಗಳನ್ನು ಕಾಣಬಹುದು, ಇವು `ನಾಗ ದೋಷವನ್ನು’ ಕಡಿಮೆ ಮಾಡಬಲ್ಲವು ಎಂದು ನಂಬಲಾಗುತ್ತದೆ.

 

 

ಮಸ್ಜಿದ್-ಇ-ಅಸ್ಕರಿ

ಈ ಮಸೀದಿಯು 19ನೇ ಶತಮಾನದ ಪರ್ಶಿಯಾದ ಕುದುರೆ ವ್ಯಾಪಾರಿ ಅಗಾ ಅಲಿ ಅಸ್ಕರ್ ಅವರ ಹೆಸರಿನಲ್ಲಿ ಕಟ್ಟಲಾಗಿದೆ. ಅವರು ಮೂಲತಃ ಶಿರಾಜಿನಿಂದ ಕುದುರೆಗಳ ಸಾಗಣೆಯೊಂದಿಗೆ ಬಂದು, 1824ರಲ್ಲಿ ಬೆಂಗಳೂರಿನಲ್ಲಿ ನೆಲೆಯೂರಿದರು. ಕೊನೆಗೆ ಅವರು ಬೆಂಗಳೂರಿನ ದಂಡು ಪ್ರದೇಶವಾದ ಕಂಟೋನ್ಮೆಂಟಿನ ಹಲವು ಭಾಗಗಳಲ್ಲಿ ದೊಡ್ಡ ಪ್ರದೇಶಗಳನ್ನು ಕೊಂಡರು. ರಿಚ್ಮಂಡ್ ಟೌನಿನಲ್ಲಿ 700 ಕುದುರೆಗಳಿಗೆ ಲಾಯಗಳನ್ನು ಕಟ್ಟಿದರು. ಅವರು 1891ರಲ್ಲಿ ನಿಧನರಾದರು ಮತ್ತು 800 ರೂಗಳನ್ನು ಮತ್ತು ತಮ್ಮ ಆಸ್ತಿಯಲ್ಲಿನ ಒಂದು ಪ್ರದೇಶವನ್ನು ಬೆಂಗಳೂರಿನ ಶಿಯಾ ಸಮುದಾಯಕ್ಕಾಗಿ ಈ ಪರ್ಶಿಯನ್ ಶೈಲಿಯ ಮಸೀದಿಯ ನಿರ್ಮಾಣಕ್ಕಾಗಿ ಉಯಿಲು ಬರೆದರು.

ಅವರ ಗಂಡು ಮಕ್ಕಳಿಂದ ನಿರ್ಮಾಣಗೊಂಡ ಮಸೀದಿಯು 1909ರಲ್ಲಿ ಸಂಪೂರ್ಣವಾಯಿತು. 1930ರ ದಶಕದಲ್ಲಿ ಅಗಾ ಅಲಿ ಅಸ್ಕರ್ ಅವರ ಮೊಮ್ಮಗ, ಮೈಸೂರಿನ ದಿವಾನರಾದ ಸರ್ ಮಿರ್ಜಾ ಇಸ್ಮಾಯಿಲ್ ಅವರಿಂದ ಅದು ಪುನಃಶ್ಚೇತನಗೊಂಡಿತು. ಇತ್ತೀಚೆಗೆ ಮಸೀದಿಯನ್ನು ಸಾರ್ವಜನಿಕರಿಗೆ ತೆರೆದಿರುವ ಗ್ರಂಥಾಲಯವುಳ್ಳ ಗಟ್ಟಿ ಶಿಲೆಯ ಕಟ್ಟಡದ ಸೇರ್ಪಡೆಯ ಮೂಲಕ ವಿಸ್ತರಿಸಲಾಯಿತು. ಇದು ಶಿಯಾ ಸಮುದಾಯದ ಕೇಂದ್ರ ಬಿಂದುವಾಗಿದ್ದು, ಪ್ರವಾದಿ ಮೊಹಮದ್, ಅವರ ಮೊಮ್ಮಗ ಮತ್ತು ಆತನ ಕುಟುಂಬದವರು ಹುತಾತ್ಮರಾದ ಸಂದರ್ಭದ ಜ್ಞಾಪಕಾರ್ಥವಾಗಿ ಶೋಕಾಚರಣೆಯ ಅವಧಿಯಾದ ಮುಹರ್ರಮ್ ಅನ್ನು ಇಲ್ಲಿ ಆಚರಿಸಲಾಗುತ್ತದೆ.

ಕೋಶೀಸ್ ಆಟೋಮ್ಯಾಟಿಕ್ ಬೇಕರಿ

ಬೆಂಗಳೂರಿನ ನೆಚ್ಚಿನ ಈ ಬೇಕರಿಯ ಮೂಲದ ಕಥೆ ನಾಟಕೀಯವಾಗಿದೆ. 1940ರ ದಶಕದ ಕೊನೆಯಲ್ಲಿ ಇದರ ಸಂಸ್ಥಾಪಕರಾದ ಪಿ.ಊಮನ್ ಕೋಶಿಯವರು ಸೌತ್ ಪೆರೇಡಿನಲ್ಲಿ (ಈಗಿನ ಎಂ.ಜಿ.ರಸ್ತೆ) ಕಿರಾಣಿ ಅಂಗಡಿಯನ್ನು ನಡೆಸುತ್ತಿದ್ದರು. ಅವರು ತಮ್ಮ ಬಾಗಿಲಿನಲ್ಲಿ ಒಂದು ಬೆಳಗ್ಗೆ ಓರ್ವ ದಣಿದ, ಪೌಷ್ಟಿಕಾಂಶದ ಕೊರತೆಯುಳ್ಳ ವ್ಯಕ್ತಿಯು ಒಂದು ಸಣ್ಣ ಹುಡುಗಿಯ ಜೊತೆ ಪ್ರಜ್ಞೆ ತಪ್ಪಿ ಬಿದ್ದಿರುವುದನ್ನು ಕಂಡರು. ಅವರನ್ನು ಒಳಗೆ ಕರೆತರಲಾಯಿತು ಮತ್ತು ಅವರಿಗೆ ಆರೈಕೆ ನೀಡಲಾಯಿತು. ಆ ವ್ಯಕ್ತಿಯು ಯಾವುದೇ ಗುರುತಿರುವ ಭಾಷೆಯನ್ನು ಮಾತನಾಡುತ್ತಿಲ್ಲವೆಂದು ಕಂಡು ಬಂದಿತು, ಆತನಿಗೆ ಗೊತ್ತಿದ್ದ ಒಂದೇ ಆಂಗ್ಲ ಪದವೆಂದರೆ ಅದು `ಬೇಕ್’ ಎಂಬುದು. ನಂತರ ಆತ ಬರ್ಮಾದಿಂದ ಓಡಿ ಬಂದಿದ್ದಾಗಿ, ಭಾರತದುದ್ದಕ್ಕೂ ನಡೆದು ಕೊನೆಗೆ ಬೆಂಗಳೂರಿಗೆ ಕಾಲ್ನಡಿಗೆಯಲ್ಲಿ ಬಂದು ಸೇರಿದ್ದ ಎಂಬುದು ನಂತರ ಅವರಿಗೆ ತಿಳಿದು ಬಂತು!

“ಬರ್ಮಾ ಮೇಸ್ತ್ರಿ” ಎಂದೇ ಪ್ರೀತಿಯಿಂದ ಕರೆಯಲ್ಪಟ್ಟ ಈ ವ್ಯಕ್ತಿಯ ಹೆಸರು ಸಿ.ಎ.ಜೋಸೆಫ್. ಅವರು ತಾವೇ ಒಂದು ಚಿಕ್ಕ ಇಟ್ಟಿಗೆಯ ಒಲೆಯನ್ನು ತಮ್ಮ ಕೌಶಲವನ್ನು ತೋರಿಸಲು ನಿರ್ಮಿಸಿದರು ಮತ್ತು ಅವರು ಮುಂದೆ ಕೋಶೀಸ್ ನ ಹೆಡ್ ಬೇಕರ್ ಆದರು. ಕೋಶೀಸ್ ಕಂಟೋನ್ಮೆಂಟ್ ಪ್ರದೇಶದಲ್ಲಿ ಬ್ರೆಡ್ಡನ್ನು ಸರಬರಾಜು ಮಾಡುತ್ತಿತ್ತು- ಯುದ್ಧ ಕಾಲದಲ್ಲಿ ಅಭಾವಗಳಿದ್ದ ಕಾರಣ ಮೊದಲಿಗೆ ಗೋಧಿ ಹಿಟ್ಟು ಮತ್ತು ಬೆಲ್ಲದ “ದಿ ಆರ್ಮಿ ಲೋಫ್” ಅನ್ನು ಸರಬರಾಜು ಮಾಡುತ್ತಿದ್ದು, ನಂತರ ಕೇಕುಗಳು, ಪೇಸ್ಟ್ರಿಗಳು ಮತ್ತು ಅತಿ ಹೆಚ್ಚಿನ ವೈವಿಧ್ಯಗಳ ಬಿಸ್ಕತ್ತುಗಳನ್ನು ಸರಬರಾಜು ಮಾಡತೊಡಗಿತು.

ಹೆಚ್ಚಿದ ಬೇಡಿಕೆಯಿಂದ, ಪಿ.ಒ.ಕೋಶಿ ಅವರು ಬೇಕಿಂಗ್ ವಿಜ್ಞಾನದಲ್ಲಿ ಪದವಿ ಪಡೆದು ಅರ್ಹರಾಗಿದ್ದ ತಮ್ಮ ದೊಡ್ಡ ಮಗನಾದ ಪಿ.ಊಮನ್ ಅವರ ನೆರವಿನಿಂದ ಉತ್ಪಾದನೆಯನ್ನು ಆಧುನೀಕರಿಸಲು ನಿರ್ಧರಿಸಿದರು.  ಅವರು ಕೋಶೀಸ್ ಆಟೋಮ್ಯಾಟಿಕ್ ಅನ್ನು ಒಂದು ಪರಿವರ್ತಿತ ಬಂಗಲೆಯಲ್ಲಿ ಆಮದುಗೊಳಿಸಿಕೊಂಡ ಅತ್ಯಾಧುನಿಕ ಸಾಧನದೊಂದಿದೆ ವೆಲ್ಲಿಂಗ್‍ಟನ್ ಬೀದಿಯಲ್ಲಿ ಸ್ಥಾಪಿಸಿದರು, ಬೇಕರಿಯ ಮೇಲೆ ಹೆಮ್ಮೆಯಿಂದ ಪ್ರದರ್ಶಿತವಾದ ಭವಿಷ್ಯತಾವಾದಿ ಚಿಹ್ನೆಗಳೊಂದಿಗೆ ಇದನ್ನು ಅವರು ಜಾಹೀರಾತುಗೊಳಿಸಿದರು. ಬರ್ಮಾ ಮೇಸ್ತ್ರಿಯವರು ಲ್ಯುಕೋಸ್ ಅವರ ಜೊತೆಯಲ್ಲಿ 40 ವರ್ಷಗಳಿಗಿಂತಲೂ ಹೆಚ್ಚಾಗಿ ಹೆಡ್ ಕನಫೆಕ್ಷನರ್ ಆಗಿ ಉಳಿದರು, ಇಬ್ಬರೂ 80ರ ದಶಕದಲ್ಲಿ ನಿವೃತ್ತಿಯಾದರು. ಅವರ ಕಿರಿಯ ಮಗಳು ಕೊನೆಗೆ ನನ್ ಆದರು ಮತ್ತು ಅವರ ಕೊನೆಗಾಲದಲ್ಲಿ ಅವರನ್ನು ನೋಡಿಕೊಂಡರು. ಇಂದಿನ ಕೋಶೀಸ್ ಬರ್ಮಾದಿಂದ 70 ವರ್ಷಗಳ ಹಿಂದೆ ನಡೆದು ಬಂದಿದ್ದ ಕೆಲವು ಅದೇ ರೆಸಿಪಿಗಳನ್ನು ಇನ್ನೂ ಬಳಸುತ್ತದೆ!

*ಲೇಖಕರು ನಿವೃತ್ತ ಪ್ರಾಧ್ಯಾಪಕರು; ಮೂಲತಃ ಕೋಲಾರ ಜಿಲ್ಲೆಯ ಮುಳಬಾಗಿಲಿನವರು. ಹಲವು ಪತ್ರಿಕೆಗಳ ಸಂಪಾದಕೀಯ ವಿಭಾಗದಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ಹವ್ಯಾಸಿ ಅನುವಾದಕ, ಪತ್ರಿಕಾ ಬರಹಗಾರ.

Leave a Reply

Your email address will not be published.