ಬೆಂಗಳೂರು ಗಲಭೆಯಲ್ಲಿ ಬೆಂಕಿ ಹಚ್ಚಿಸಿ ಜಂತಿ ಎಣಿಸಿದ ರಾಜಕಾರಣಿಗಳು!

ಬೆಂಗಳೂರಿನ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿಯಲ್ಲಿ ನಡೆದ ಗಲಭೆ-ಬೆಂಕಿ-ಗೋಲಿಬಾರ್ ಪ್ರಕರಣಕ್ಕೆ ಹೊಲಸು ರಾಜಕಾರಣವೇ ಕಾರಣ. ಬೆಂಕಿಯಲ್ಲಿ ಬೇಳೆ ಬೇಯಿಸಿಕೊಂಡವರು, ಜಂತಿ ಎಣಿಸಿದವರು ರಾಜಕಾರಣಿಗಳು ಎಂಬುದರಲ್ಲಿ ಅನುಮಾನ ಉಳಿದಿಲ್ಲ. ಬೆಂದದ್ದು ಮಾತ್ರ ಅವರ ಮಾತು ಕೇಳಿ ಕಂಡಕAಡಲ್ಲಿ ಬೆಂಕಿ ಹಚ್ಚಿ, ಜೈಲು ಸೇರಿದವರು!.

ಜಯಾತನಯ

ದೇಶದಲ್ಲಿ ಎಲ್ಲಿಯವರೆಗೆ ಕೋಮುವ್ಯಾಧಿ ಹರಡುವವರು, ಕೋಮುವಾದ ರಕ್ಷಿಸುವವರು ಇರುತ್ತಾರೋ ಅಲ್ಲಿಯವರೆಗೆ ಮತಾಂಧರು ಬಾಲ ಅಲ್ಲಾಡಿಸುತ್ತಾ ಸಮಾಜದ ಸ್ವಾಸ್ಥ್ಯವನ್ನು ಕೆಡಿಸುತ್ತಲೇ ಇರುತ್ತಾರೆ. ಕೋಮು ದಳ್ಳುರಿಗೆ ಕುಮ್ಮಕ್ಕು ಕೊಟ್ಟವರು ಟಿವಿಗಳ ಮೈಕ್ ಮುಂದೆ ವಿರಾಜಮಾನರಾಗಿ ನಿಂತು ಸಮಾಜೋದ್ಧಾರಕರಿಗೆ ಅನ್ವರ್ಥ ಎಂದರೆ ನಾವೇ ಎನ್ನುತ್ತಾರೆ. ಆದರೆ, ಅತ್ತ ಕಡೆ ಗಲಭೆಯ ಕೆನ್ನಾಲಿಗೆಗೆ ಸಿಲುಕಿ ಪ್ರಾಣ ಕಳೆದುಕೊಳ್ಳುವ ಕೆಲವು ಮುಗ್ಧರ ಬಗ್ಗೆ ಸ್ವಲ್ಪವೂ ಅನುಕಂಪವಿರುವುದಿಲ್ಲ ಇವರಿಗೆ. ಕೋಮುದ್ವೇಷದ ಬೆಂಕಿ ಹತ್ತಿದ ತಕ್ಷಣ ಇವರ ಕಣ್ಣೆದುರು ಬಂದು ನಿಲ್ಲುವ ದೆವ್ವವೆಂದರೆ ಅವರ ರಾಜಕಾರಣ!

ಹೀಗಾಗಿಯೇ ಇವರ ರಾಜಕಾರಣದ ತೆವಲಿಗೆ ಅದೆಷ್ಟೋ ಮುಗ್ಧ ಜೀವಗಳು ಬಲಿಯಾಗಿವೆ, ಬಲಿಯಾಗುತ್ತಿವೆ, ಬಲಿಯಾಗುತ್ತವೆ. ಈ ಕೆಟ್ಟ ರಾಜಕಾರಣ ತನ್ನ ಕೊನೆ ಉಸಿರೆಳೆಯುವವರೆಗೆ ಅಮಾಯಕರ ಬಲಿ ನಿಲ್ಲುವುದಿಲ್ಲ.

ಮೊನ್ನೆ ಬೆಂಗಳೂರಿನ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿಯಲ್ಲಿ ನಡೆದದ್ದಕ್ಕೂ ಇದೇ ಹೊಲಸು ರಾಜಕಾರಣವೇ ಕಾರಣವಾಗಿದೆ. ಇದರಲ್ಲಿ ಬೇಳೆ ಬೇಯಿಸಿಕೊಂಡವರು ರಾಜಕಾರಣಿಗಳಾದರೆ, ಬೆಂದದ್ದು ಮಾತ್ರ ಅವರ ಮಾತುಗಳನ್ನು ಕೇಳಿ ಕಂಡಕಂಡಲ್ಲಿ ಬೆಂಕಿ ಹಚ್ಚಿ, ದಾಂಧಲೆ ಸೃಷ್ಟಿಸಿ ಜೈಲು ಸೇರಿರುವವರು.

ಹೇಳಿ ಕೇಳಿ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿಯಲ್ಲಿ ಅಲ್ಪಸಂಖ್ಯಾತರೆನಿಸಿರುವ ಮುಸಲ್ಮಾನರೇ ಬಹುಸಂಖ್ಯಾತರು. ಒಪ್ಪೊತ್ತಿನ ಊಟಕ್ಕೂ ಪರದಾಡುವ ಕುಟುಂಬಗಳಿಗೆ ಲೆಕ್ಕವೇ ಇಲ್ಲ. ಇಲ್ಲಿ ಚಿಂದಿ ಆಯುವವರಿಂದ ಗುಜರಿ ಅಂಗಡಿಗಳನ್ನಿಟ್ಟುಕೊಂಡು, ಬೀದಿ ಬದಿ ವ್ಯಾಪಾರ ಮಾಡಿಕೊಂಡು ಜೀವನ ಹೊರೆಯುವವರ ಕುಟುಂಬಗಳೇ ಅಧಿಕ. ಕಿತ್ತು ತಿನ್ನುವಂತಹ ಬಡತನ, ಕೆಲವು ಯುವಕರು ಅಂಡಲೆಯುತ್ತಾ ಅಲ್ಲಲ್ಲಿ ಹಫ್ತಾ ವಸೂಲಿ ಮಾಡುವ ದಂಧೆಯನ್ನೂ ಮಾಡದೇ ಇರಲಾರರು. ಹಾಗಂತ ಈ ಬಡತನವೆಂಬುದು ಇಲ್ಲಿನವರಿಗೆ ಶಾಪವಲ್ಲ. ಅವರನ್ನು ಆರ್ಥಿಕವಾಗಿ ಮುಂದುವರಿಯಲು ಬಿಡದೇ ಇರುವ ರಾಜಕಾರಣಿಗಳೇ ಈ ಬಡತನವನ್ನು ಶಾಪವನ್ನಾಗಿ ಮಾಡಿದ್ದಾರೆ.

ಈ ಎರಡೂ ಸ್ಥಳಗಳಲ್ಲಿ ಗಲಭೆ ಉಂಟಾಗಲು ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಸೋದರ ಸಂಬಂಧಿ ನವೀನ್ ಫೇಸ್ ಬುಕ್ ನಲ್ಲಿ ಪೈಗಂಬರ್ ಬಗ್ಗೆ ಹಾಕಿದ್ದ ಅವಹೇಳನಾಕಾರಿ ಹೇಳಿಕೆ ಕಾರಣ ಎಂದು ಹೇಳಲಾಗುತ್ತದೆ. ಆದರೆ, ಇದೊಂದು ನೆಪವಷ್ಟೇ. ಅಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಇದನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳಲಾಗಿದೆ ಎಂಬುದಂತೂ ಸ್ಪಷ್ಟವಾಗಿದೆ.

ಮೇಲ್ನೋಟಕ್ಕೆ ಎಸ್.ಡಿ.ಪಿ.ಐ. ಎಂಬ ಮುಸ್ಲಿಂ ಸಂಘಟನೆ ತನ್ನ ಸಮುದಾಯವೇ ಅಧಿಕವಾಗಿರುವ ಈ ಭಾಗದಲ್ಲಿ ಅಸ್ತಿತ್ವವನ್ನು ಸ್ಥಾಪಿಸಲು ಹಲವು ವರ್ಷಗಳಿಂದ ಪ್ರಯತ್ನಿಸುತ್ತಾ ಬಂದಿದೆ. ಆದರೆ, ಯಶಸ್ಸು ಸಿಕ್ಕಿರಲಿಲ್ಲ. ಈ ಸಂಘಟನೆಗೂ ಅಖಂಡ ಶ್ರೀನಿವಾಸಮೂರ್ತಿಗೂ ಆಗಿ ಬರುತ್ತಿರಲಿಲ್ಲ. ಅಷ್ಟೇ ಏಕೆ, ಜೆಡಿಎಸ್ ಪಕ್ಷದಿಂದ ಬಂದು ಟಿಕೆಟ್ ಗಿಟ್ಟಿಸಿ ಗೆದ್ದು ಬಿಟ್ಟನಲ್ಲಾ ಎಂಬ ಕುದಿ ಮೌನ ಸ್ಥಳೀಯ ಮಟ್ಟದ ಕಾಂಗ್ರೆಸ್ ಮುಖಂಡರಲ್ಲಿ ಮನೆ ಮಾಡಿತ್ತು. ಆಗಾಗ್ಗೆ ಕತ್ತಿ ಮಸೆಯುತ್ತಲೇ ಇದ್ದವರಿಗೆ ನವೀನ್ ಹಾಕಿದ ಪೋಸ್ಟ್ ಅಸ್ತ್ರವಾಗಿ ಪರಿಣಮಿಸಿ ದೊಡ್ಡ ರಾದ್ಧಾಂತವನ್ನೇ ಸೃಷ್ಟಿಸಿ, ನಾಲ್ಕು ಹೆಣಗಳೂ ಬೀಳುವಂತೆ ಮಾಡಿತು.

ಎಸ್.ಡಿ.ಪಿ.ಐ. ಮುಖಂಡರನ್ನು ಬಂಧಿಸಿಯಾಯ್ತು, ಇವರಿಗೆ ಸಂಪರ್ಕವಿದ್ದ ಉಗ್ರಗಾಮಿ ಸಂಘಟನೆಗಳ ಉಗ್ರರನ್ನೂ ಬಂಧಿಸಿಯಾಯ್ತು. ಅಖಂಡ ಶ್ರೀನಿವಾಸಮೂರ್ತಿ ಪ್ರತಿನಿಧಿಸುವ ಪುಲಿಕೇಶಿ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಕಾಂಗ್ರೆಸ್ಸಿನ ಮೂರ್ನಾಲ್ಕು ಕಾರ್ಪೊರೇಟರುಗಳನ್ನೂ ವಿಚಾರಣೆ ಮಾಡಲಾಯಿತು. ಆದರೆ, ಈ ರಾಜಕಾರಣಿಗಳಿಗೆ ಮಾತ್ರ ನಿದ್ದೆಯೇ ಬರದಂತಾಯಿತು. ಕೋಮುದ್ವೇಷವೆಂದರೆ ಅಲ್ಲಿ ರಾಜಕೀಯ ಬಣ್ಣ ಲೇಪನವಾಗದಿದ್ದರೆ ಅಂತ್ಯವನ್ನೇ ಕಾಣುವುದಿಲ್ಲ.

ಕಾಂಗ್ರೆಸ್ ಶಾಸಕರಾದರೂ ಅಖಂಡ ಶ್ರೀನಿವಾಸಮೂರ್ತಿ ಬೆಂಬಲಕ್ಕೆ ಬಿಜೆಪಿಯವರು ನಿಂತರೆ… ವಿನಾಕಾರಣ ಅಮಾಯಕರನ್ನು ಬಂಧಿಸಿ ಜೈಲಿಗೆ ಹಾಕಲಾಗುತ್ತಿದೆ, ಕಾಂಗ್ರೆಸ್ ಕಾರ್ಯಕರ್ತರು ಮತ್ತು ಕಾರ್ಪೊರೇಟರುಗಳನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದೆಲ್ಲಾ ಕಾಂಗ್ರೆಸ್ ನಾಯಕರು ಗೋಳಿಡತೊಡಗಿದರು.

ಇನ್ನೂ ಕೆಲವು ಶಾಸಕರು ಗಲಭೆಯಲ್ಲಿ ದಾಂಧಲೆ ನಡೆಸಿ ಪೊಲೀಸರ ಗೋಲಿಬಾರ್ ನಿಂದ ಸಾವನ್ನಪ್ಪಿದವರು ಎನ್ನಲಾದ ಯುವಕರ ಮನೆಗೆ ಹೋಗಿ ಅಲ್ಲಿ ಸಾಂತ್ವನದ ನುಡಿಗಳನ್ನು ಆಡಿ ಬಂದಿದ್ದೂ ಆಯ್ತು.

ಈ ಘಟನೆಯ ಹಿನ್ನೆಲೆಯಲ್ಲಿ ಇಡೀ ಮುಸ್ಲಿಂ ಸಮುದಾಯವೇ ತಪ್ಪಿತಸ್ಥ ಎಂಬಂತೆ ಬಿಜೆಪಿ ನಾಯಕರು ತಮ್ಮ ಎಂದಿನ ಶೈಲಿಯಲ್ಲಿ ಆ ಸಮುದಾಯವನ್ನು ಹೀಗಳೆಯಲು ಆರಂಭಿಸಿ ದ್ವೇಷದ ಜ್ವಾಲೆಗೆ ತುಪ್ಪ ಸುರಿಯುವ ಕೆಲಸ ಮಾಡಿದರೆ, ಕಾಂಗ್ರೆಸ್ ಮತ್ತು ಇತರೆ ಪಕ್ಷಗಳ ಮುಖಂಡರು ಆ ಸಮುದಾಯದ ಪರವಾಗಿ ನಿಲ್ಲುವ ಭರಾಟೆಯಲ್ಲಿ ಬಂಧಿತರೆಲ್ಲರೂ ಅಮಾಯಕರು ಎಂಬಂತೆ ಹೇಳಿಕೆಗಳನ್ನು ಕೊಡತೊಡಗಿದ್ದಾರೆ. ಆದರೆ, ಬಂಧಿತರಲ್ಲಿ ಬಹುತೇಕ ಮಂದಿ ಅಂದು ನಡೆದ ಗಲಭೆಯಲ್ಲಿ ಭಾಗಿಯಾಗಿದ್ದವರೇ ಎಂಬುದನ್ನು ಹತ್ತಾರು ಕ್ಯಾಮೆರಾಗಳು ಸೆರೆ ಹಿಡಿದಿರುವ ದೃಶ್ಯಗಳೇ ಸಾಕ್ಷಿಯಾಗಿವೆ. ಅಂಗೈ ಹುಣ್ಣಿಗೆ ಕನ್ನಡಿ ಬೇಕೆ?

ಈ ಕ್ಷೇತ್ರದಲ್ಲಿ ಬಿಜೆಪಿ ತನ್ನ ಕಮಲವನ್ನು ಅರಳಿಸಲು ಹಿಂದಿನ ಚುನಾವಣೆಗಳಲ್ಲಿ ಸಾಕಷ್ಟು ಪ್ರಯತ್ನಗಳನ್ನು ನಡೆಸಿದರೂ ಸಾಧ್ಯವಾಗಿರಲಿಲ್ಲ. ಆ ಪ್ರಯತ್ನಗಳಿಗೆ ಅಡ್ಡಗಾಲು ಹಾಕಿದ್ದವರು ಇದೇ ಅಖಂಡ ಶ್ರೀನಿವಾಸಮೂರ್ತಿ. ಜೆಡಿಎಸ್ ನಿಂದ ಸ್ಪರ್ಧಿಸಿ ಗೆದ್ದಿದ್ದ ಅವರು ರಾಜಕೀಯ ಚಿತ್ರಣ ಬದಲಾದ ನಂತರ ಕಾಂಗ್ರೆಸ್‌ಗೆ ಬಂದು ತಮ್ಮ ಪ್ರಭಾವ ಬೀರಿ ಟಿಕೆಟ್ ಗಿಟ್ಟಿಸಿ ಗೆಲುವನ್ನು ಸಾಧಿಸಿ ಮತ್ತೆ ವಿಧಾನಸಭೆ ಪ್ರವೇಶಿಸಿದವರು. ಈ ಮಧ್ಯೆ, ಶ್ರೀನಿವಾಸಮೂರ್ತಿಯವರನ್ನು ತನ್ನತ್ತ ಸೆಳೆಯಲು ಬಿಜೆಪಿ ಈ ಹಿಂದೆ ಮರಳಿ ಯತ್ನವ ಮಾಡು ಎಂಬAತೆ ಎರಡ್ಮೂರು ಬಾರಿ ಪ್ರಯತ್ನ ನಡೆಸಿ ವಿಫಲವಾಗಿತ್ತು.

ಇದೀಗ ಶ್ರೀನಿವಾಸಮೂರ್ತಿಯವರ ಮನೆಗೆ ಬೆಂಕಿ ಬಿದ್ದಿರುವುದನ್ನೇ ನೆಪವಾಗಿಟ್ಟುಕೊಂಡು ಅವರ ಪರವಾದ ಬ್ಯಾಟಿಂಗ್ ಮಾಡಲು ಆರಂಭಿಸಿದೆ. ಇದಕ್ಕೆ ಇಂಬು ಕೊಟ್ಟಂತೆ ಶ್ರೀನಿವಾಸಮೂರ್ತಿ ತಮ್ಮ ಮನೆಗೆ ಬೆಂಕಿ ಬಿದ್ದ ಮರುದಿನ ಬಿಜೆಪಿ ಶಾಸಕರೊಂದಿಗೆ ನೇರವಾಗಿ ಮುಖ್ಯಮಂತ್ರಿಗಳ ಪ್ರತಿನಿಧಿಯಾದ ಕಂದಾಯ ಸಚಿವ ಆರ್.ಅಶೋಕ್ ಎದುರು ಅಲವತ್ತುಕೊಂಡರು. ಅಷ್ಟೇ ಅಲ್ಲ, ಶ್ರೀನಿವಾಸಮೂರ್ತಿ ತಮ್ಮದೇ ಪಕ್ಷದ ನಾಯಕರಿಗಿಂತ ಹೆಚ್ಚಾಗಿ ಸಂಪರ್ಕ ಇಟ್ಟುಕೊಂಡದ್ದು ಬಿಜೆಪಿ ನಾಯಕರೊಂದಿಗೆ ಎಂಬುದು ಜನಜನಿತವಾದ ವಿಚಾರವಾಗಿದೆ. ಇದು ಮೇಲ್ನೋಟಕ್ಕೆ ಕಾಂಗ್ರೆಸ್ ನಾಯಕರನ್ನು ವಿಚಲಿತರನ್ನಾಗಿ ಮಾಡಿತು.

ಆದರೆ ಕಾಂಗ್ರೆಸ್ ನಾಯಕರಿಗೆ, ಅದರಲ್ಲೂ ಪುಲಕೇಶಿ ನಗರ ವಿಧಾನಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ನಾಯಕರ ಮಟ್ಟಿಗಂತೂ ಇದು ಒಳ್ಳೆಯ ಬೆಳವಣಿಗೆ. ಶ್ರೀನಿವಾಸಮೂರ್ತಿಗೆ ಬಿಜೆಪಿ ಸಖ್ಯ ಹೆಚ್ಚಾದಂತೆ ಮುಂದಿನ ಚುನಾವಣೆಯಲ್ಲಿ ತಮಗೇ ಟಿಕೆಟ್ ನಿಕ್ಕಿ ಎಂಬಂತೆ ಹಿರಿಹಿರಿ ಹಿಗ್ಗಿಕೊಂಡರು.

ಇನ್ನು ಕಾಂಗ್ರೆಸ್ ನಾಯಕರು ಒಬ್ಬ ಶ್ರೀನಿವಾಸ ಮೂರ್ತಿ ಹೋದರೇನಂತೆ ಮತ್ತೊಬ್ಬ ಮೂರ್ತಿಯನ್ನು ತಂದರಾಯಿತು ಎಂದು ಒಳಗೊಳಗೇ ಗುಣಾಕಾರ, ಭಾಗಾಕಾರ ಮಾಡಿಕೊಂಡು ಡಿಜೆ ಹಳ್ಳಿ, ಕೆಜಿ ಹಳ್ಳಿಯ ಮುಸ್ಲಿಂರನ್ನು ಓಲೈಸಿಕೊಂಡು ತಮ್ಮ ವೋಟ್ ಬ್ಯಾಂಕ್ ಅನ್ನು ಭದ್ರ ಮಾಡಿಕೊಳ್ಳುವ ಕೈಂಕರ್ಯದಲ್ಲಿ ತೊಡಗಿದ್ದಾರೆ. ಈ ವೋಟ್ ಬ್ಯಾಂಕ್ ಭದ್ರವಾಗಿದ್ದರೆ ಇನ್ನೂ ಹತ್ತಾರು ಶ್ರೀನಿವಾಸಮೂರ್ತಿಗಳು ಹುಟ್ಟಿಕೊಳ್ಳುತ್ತಾರೆ ಎಂಬುದು ಕಾಂಗ್ರೆಸ್ ನಾಯಕರ ಲೆಕ್ಕಾಚಾರ.

ಯಾವುದೇ ಹಿಂದೂವಾಗಲೀ, ಮುಸಲ್ಮಾನರಾಗಲೀ ಅಥವಾ ಕ್ರೈಸ್ತರಾಗಲಿ ಅಥವಾ ಇನ್ನಾವುದೇ ಕೋಮಿನವರಾಗಲೀ ತಮ್ಮ ಧರ್ಮಕ್ಕೆ ಯಾವುದೇ ನೋವು ಉಂಟಾದರೂ ಅದನ್ನು ನುಂಗಿಕೊಂಡಿರುತ್ತಾರೆ. ದ್ವೇಷದ ಗೊಡವೆ ನಮಗೇಕೆ ಎಂದು ಸುಮ್ಮನಿರಲು ಪ್ರಯತ್ನಿಸುತ್ತಿರುತ್ತಾರೆ. ಆದರೆ, ಈ ಕೋಮುದ್ವೇಷದ ರಾಜಕಾರಣಿಗಳು ಮಾತ್ರ ಸಮುದಾಯಗಳನ್ನು ಎತ್ತಿ ಕಟ್ಟುವುದನ್ನು ನಿಲ್ಲಿಸುವುದಿಲ್ಲ. ತೆರೆ ಮರೆಯಲ್ಲಿ ಕಲ್ಲು ಹೊಡೆಯಿರಿ ಎಂದು ಪುಸಲಾಯಿಸುವ ಈ ಕೋಮು ದಳ್ಳುರಿಯನ್ನೇ ಉಂಡು ಮಲಗುವ ರಾಜಕಾರಣಿಗಳು ತೆರೆಯ ಮೇಲೆ ಮಾತ್ರ ನಾನು ಧರ್ಮಸಹಿಷ್ಣುತೆ ಹೊಂದಿರುವ ವ್ಯಕ್ತಿ, ನಾನು ಉಭಯ ಕೋಮುಗಳ ನಡುವೆ ಸಂಧಾನ ಸಭೆ ನಡೆಸುತ್ತೇನೆ ಎಂದೆಲ್ಲಾ ಭಾಷಣ ಬಿಗಿಯುತ್ತಾರೆ.

ಇವರ ಮಾತುಗಳನ್ನು ಕೇಳಿ ಕಲ್ಲು ತೂರಿ, ಬೆಂಕಿ ಹಚ್ಚಿ ಸಾರ್ವಜನಿಕರ ಆಸ್ತಿಪಾಸ್ತಿಯನ್ನು ನಷ್ಟ ಮಾಡುವ ಯುವ ಪೀಳಿಗೆ ಪರಿಸ್ಥಿತಿಯ ಕೈಗೊಂಬೆಯಾಗುತ್ತಾರಷ್ಟೇ. ಇಂತಹ ಸೋಗಲಾಡಿತನದ ರಾಜಕಾರಣಿಗಳ ಬೆನ್ನ ಹಿಂದೆ ನಿಲ್ಲದೇ ವಾಸ್ತವ ಪರಿಸ್ಥಿತಿಗಳನ್ನು ಅರಿತು ಯುವ ಸಮುದಾಯ ತಮ್ಮ ಜೀವನವನ್ನು ರೂಪಿಸಿಕೊಳ್ಳಬೇಕು. ಇದೇ ಪರಿಸ್ಥಿತಿಯನ್ನು ಬಳಸಿಕೊಂಡು ಮತ್ತಷ್ಟು ಕಿಚ್ಚು ಹಚ್ಚುವ ಕಿಡಿಗೇಡಿಗಳೂ ಇದ್ದಾರೆ. ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿಯಲ್ಲಿ ಗಲಭೆ ಸೃಷ್ಟಿಸಿದವರಲ್ಲಿ ಬಹುತೇಕ ಮಂದಿ ಹೊರಗಿನಿಂದ ಬಂದವರೇ. ಪೂರ್ವ ನಿಯೋಜಿತವಾಗಿ ಸಿದ್ಧರಾಗಿ ಬಂದಿದ್ದರು ಎಂಬುದಕ್ಕೆ ಅವರ ಕೈಲಿದ್ದ ಮಾರಕಾಸ್ತ್ರಗಳು, ರಾಶಿಗಟ್ಟಲೆ ಕಲ್ಲು, ಪೆಟ್ರೋಲ್ ಬಾಂಬ್ ಗಳೇ ಸಾಕ್ಷಿಯಾಗಿದ್ದವು.

ಒಟ್ಟಾರೆ, ದಶಕಗಳಿಂದಲೂ ತಮ್ಮ ಬಡತನ, ದೈನಂದಿನ ಜೀವನಕ್ಕೆ ನಡೆಸುವ ಹೋರಾಟ, ಕೂಲಿ ನಾಲಿ ಬದುಕು ಸಾಗಿಸುವ ಸಾವಿರಾರು ಕುಟುಂಬಗಳು ಮತಾಂಧರ ಕುಮ್ಮಕ್ಕಿನಿಂದ ಇಂದು ನರಳುವಂತಾಗಿದೆ. ಬಡಾಯಿಕೋರ ರಾಜಕಾರಣಿಗಳು ಮತ್ತು ಅವರ ಪಟಾಲಂಗಳ ಕುಮ್ಮಕ್ಕಿಗೆ ಬಲಿಯಾಗುವುದರ ಬದಲು ಯಾವುದೇ ಕೋಮಿನ ಯುವ ಪೀಳಿಗೆ ತಮ್ಮ ಜೀವನವನ್ನು ಹಸನು ಮಾಡಿಕೊಳ್ಳುವುದನ್ನು ಕಲಿತರೆ ಈ ಬಡಾಯಿಕೋರರು ಬಾಲ ಮುದುಡಿಕೊಂಡು ಇರುತ್ತಾರೆ. ಆದರೆ, ಕುಮ್ಮಕ್ಕಿಗೆ ಬಲಿಯಾಗುತ್ತಾ ಹೋದರೆ, ಬೆಂಕಿ ಬಿದ್ದ ಮನೆಯ ಗಳಗಳನ್ನು ಇರಿಯುತ್ತಲೇ ಇರುತ್ತಾರೆ. ದಾಂಧಲೆ ನಡೆಸಿದ ಕಿಡಿಗೇಡಿಗಳ ಜತೆಗೆ ಅಮಾಯಕರೂ ಜೈಲು ಕಂಬಿ ಎಣಿಸಬೇಕಾಗುತ್ತದೆ.

Leave a Reply

Your email address will not be published.