ಬೆಳಗಾವಿ ನಮ್ಮ ಕೈ ಬಿಡುತ್ತದೆಯೇ?…

ಕೃತಿಕಾರರು ಈ ಚಳವಳಿ ನಡೆಯುವ ಜಾಗದಲ್ಲಿಯೇ ಖುದ್ದಾಗಿ ಇದ್ದವರು, ಅದನ್ನು ಕಣ್ಣಾರೆ ಕಂಡವರು, ಅದರ ಪರಿಣಾಮಗಳನ್ನು ಅನುಭವಿಸಿದವರು. ಅವರ ಪುಸ್ತಕ, ಬೆಳಗಾವಿ ಗಡಿ ಸಮಸ್ಯೆ ಕುರಿತ ಒಂದು ಫಸ್ಟ್ ಹ್ಯಾಂಡ್ ಅಕೌಂಟ್‌ನಂತೆ ಇದೆ.

ಸುಪ್ರೀಮ್ ಅಂಗಳದಿಂದ ಗಡಿ ಸಮಸ್ಯೆಯ ಪಕ್ಷಿನೋಟ
ರಾಘವೇಂದ್ರ ಜೋಶಿ
ಪ್ರಕಾಶನ: ಕನ್ನಡ ಜಾಗೃತಿ ಪುಸ್ತಕ ಮಾಲೆ,

ಅಲ್ಲಮಪ್ರಭು ಜನಕಲ್ಯಾಣ ಸಂಸ್ಥೆ,
ಅಲ್ಲಮಪ್ರಭು ಸಿದ್ಧ ಸಂಸ್ಥಾನ ಮಠ,
ಚಿಂಚಣಿ. ಪ್ರಕಟಣೆ: 2020
ಪುಟ: 92 ಬೆಲೆ: ರೂ.150

ಪದ್ಮರಾಜ ದಂಡಾವತಿ

“ಕಾಶ್ಮೀರ ಎಂದೆಂದೂ ನಮ್ಮದೇ. ಅದನ್ನು ಎಂದೂ ನಾವು ಬಿಟ್ಟುಕೊಡೆವು” ಎಂದು ಕೇಂದ್ರದಲ್ಲಿ ಪ್ರಧಾನಿಯಾದವರೆಲ್ಲ ಘೋಷಿಸಿಕೊಂಡು ಬಂದ ಹಾಗೆ ಕರ್ನಾಟಕದ ಮುಖ್ಯಮಂತ್ರಿಗಳು “ಬೆಳಗಾವಿ ಎಂದೆಂದೂ ನಮ್ಮದೇ” ಎಂದು 1956ರಲ್ಲಿ ಮೈಸೂರು ರಾಜ್ಯ ರಚನೆಯಾದಾಗಿನಿಂದ ಹೇಳುತ್ತಲೇ ಬಂದಿದ್ದಾರೆ.          

ಹಾಗೆ ನೋಡಿದರೆ ರಾಜ್ಯಗಳ ಪುನರ್ ವಿಂಗಡಣೆಯಾದ ನಂತರ ಇದು ಮುಗಿದುಹೋದ ಅಧ್ಯಾಯವಾಗಬೇಕಿತ್ತು. ಆದರೆ, ಮಹಾರಾಷ್ಟ್ರಕ್ಕೆ ಬೆಳಗಾವಿ ಒಂದು ಸುಂದರ ಕನಸು. ಅದಕ್ಕೆ ಮತ್ತೆ ಮತ್ತೆ ಆ ಕನಸು ಬೀಳುತ್ತಲೇ ಇರುತ್ತದೆ. ಮೈಸೂರು ರಾಜ್ಯ ರಚನೆಯಾಗಿ ಈಗ 65 ವರ್ಷಗಳು ಆಗುತ್ತ ಬಂದರೂ ಬೆಳಗಾವಿ ಮೇಲಿನ ಬೇಡಿಕೆಯನ್ನು ಅದು ಕೈ ಬಿಟ್ಟಿಲ್ಲ. “ಕರ್ನಾಟಕದಲ್ಲಿನ ಕಾರವಾರದಿಂದ ಔರಾದ್‌ವರೆಗಿನ ಮರಾಠಿ ಭಾಷಿಕ ಪ್ರದೇಶಗಳು ಮಹಾರಾಷ್ಟ್ರಕ್ಕೆ ಝಾಲಾಚ ಪಾಹಿಜೇ” ಎಂಬ ಚಳವಳಿ ಈಗ ತೀವ್ರತೆ ಕಳೆದುಕೊಂಡಿರಬಹುದು. ಆದರೆ, ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿರುವ ಮಹಾರಾಷ್ಟ್ರ ರಾಜ್ಯವು ತನ್ನ ಬೇಡಿಕೆ ಇನ್ನೂ ಜೀವಂತ ಎಂಬ ಭಾವನೆ ಹೊಂದಿದೆ.

ಈ ಹಿನ್ನೆಲೆಯಲ್ಲಿ ಬೆಳಗಾವಿಯ ಹಿರಿಯ ಕನ್ನಡ ಹೋರಾಟಗಾರ, ಪತ್ರಕರ್ತ ರಾಘವೇಂದ್ರ ಜೋಶಿ ಅವರ “ಸುಪ್ರೀಮ್ ಅಂಗಳದಿಂದ ಗಡಿ ಸಮಸ್ಯೆಯ ಪಕ್ಷಿನೋಟ” ಎಂಬ ಪುಸ್ತಕ ಇದೀಗ ಪ್ರಕಟವಾಗಿದ್ದು ಈ ವಿವಾದ ಕುರಿತು ಅನೇಕ ಉಪಯುಕ್ತ ಹಾಗೂ ಆಸಕ್ತಿಯುತ ಮಾಹಿತಿಗಳನ್ನು ಒಳಗೊಂಡಿದೆ. ಜೋಶಿಯವರು ಈ ಚಳವಳಿ ನಡೆಯುವ ಜಾಗದಲ್ಲಿಯೇ ಖುದ್ದಾಗಿ ಇದ್ದವರು, ಅದನ್ನು ಕಣ್ಣಾರೆ ಕಂಡವರು. ಅದರ ಪರಿಣಾಮಗಳನ್ನು ಅನುಭವಿಸಿದವರು. ಅವರ ಪುಸ್ತಕ, ಬೆಳಗಾವಿ ಗಡಿ ಸಮಸ್ಯೆ ಕುರಿತ ಒಂದು ಫಸ್ಟ್ ಹ್ಯಾಂಡ್ ಅಕೌಂಟ್‌ನಂತೆ ಇದೆ.

ಗಡಿ ಸಮಸ್ಯೆಯ ವಿಶೇಷ ಎಂದರೆ ಇದು ಎರಡು ರಾಜ್ಯಗಳ ನಡುವಣ ವಿವಾದ. ಎರಡು ಭಾಷಿಕರ ನಡುವಿನ ವಿವಾದ ಅಲ್ಲ. ಕನ್ನಡ ಮತ್ತು ಮರಾಠಿ ಬಾಂಧವ್ಯಕ್ಕೆ ಎರಡೂ ರಾಜ್ಯಗಳು ಹೆಸರುವಾಸಿ. ಎರಡೂ ಭಾಷೆಗಳ ನಡುವಿನ ಕೊಡುಕೊಳ್ಳುವಿಕೆಗೂ ಕೊರತೆಯೇನೂ ಇಲ್ಲ. ಶಿವರಾಮ ಕಾರಂತ, ದ.ರಾ.ಬೇಂದ್ರೆ, ವಿ.ಕೃ.ಗೋಕಾಕ್, ಎಸ್.ಎಲ್.ಭೈರಪ್ಪ, ಗಿರೀಶ್ ಕಾರ್ನಾಡರಂಥ ಕನ್ನಡ ಲೇಖಕರು, ಭೀಮಸೇನ ಜೋಶಿ ಅವರಂಥ ಹಿಂದುಸ್ತಾನಿ ಗಾಯಕರು ಮತ್ತು ಕೆ.ಕೆ.ಹೆಬ್ಬಾರ್ ಅವರಂಥ ಕಲಾವಿದರಿಗೆ ಮಹಾರಾಷ್ಟ್ರದಲ್ಲಿ ಇರುವ ಜನಪ್ರಿಯತೆ ಕನ್ನಡಿಗರೇ ಅಸೂಯೆ ಪಡುವಂತೆ ಇದೆ. ಬೆಳಗಾವಿಯಲ್ಲಿಯೂ ಕನ್ನಡಿಗರು ಮತ್ತು ಮರಾಠಿಗರ ನಡುವೆ ಯಾವುದೇ ವ್ಯಾಜ್ಯ, ಮನಸ್ತಾಪ ಇಲ್ಲ. ಇಲ್ಲಿ ಕನ್ನಡ ಮತ್ತು ಮರಾಠಿ ಬಾಂಧವ್ಯಕ್ಕೆ ವಾಣಿಜ್ಯ ಕಾರಣವೂ ಇದೆ. ಇಲ್ಲಿನ ವ್ಯಾಪಾರ ವಹಿವಾಟು ಮಾಡಿಕೊಂಡು ಇರುವ ಮರಾಠಿ ಭಾಷಿಕರು ಕನ್ನಡಿಗರ ಜೊತೆ ಜಗಳ ಮಾಡಿಕೊಂಡು ಇರಲು ಆಗುತ್ತದೆಯೇ? ಮರಾಠಿಗರು ಬಂದರೆ ಕನ್ನಡಿಗರು ವಸ್ತು ಕೊಡುವುದಿಲ್ಲ ಎನ್ನಲು ಆದೀತೇ?

ಹಾಗಾದರೆ, ಇದು ಯಾರಿಗೆ ಬೇಕಾದ ಚಳವಳಿ? ಬೆಳಗಾವಿಯಲ್ಲಿನ ಮರಾಠಿ ಪತ್ರಿಕೆಗಳು, ಮರಾಠಿ ರಾಜಕಾರಣಿಗಳು ಇದನ್ನು ಸದಾ ಜೀವಂತವಾಗಿ ಇಡಲು ನೋಡಿದರು. ಇದು ಭಾಷೆ ಆಧಾರಿತ ವಿವಾದವಾದ್ದರಿಂದ ಮಹಾರಾಷ್ಟ್ರದಲ್ಲಿನ ರಾಜಕಾರಣಿಗಳು ಇದನ್ನು ತಮ್ಮ ರಾಜಕೀಯ ಪುನರುಜ್ಜೀವನದ ಏಣಿಯಾಗಿ ಬಳಸಿಕೊಳ್ಳಲು ನೋಡಿದರು. ಅದಕ್ಕಾಗಿ ಬೆಳಗಾವಿಯಲ್ಲಿ ಅವರು ಮಹಾರಾಷ್ಟ್ರ ಏಕೀಕರಣ ಸಮಿತಿ ಎಂಬ ಒಂದು ಸೀಮಾ ಹೋರಾಟ ಸಮಿತಿ ಹುಟ್ಟಿಕೊಳ್ಳಲು ಕಾರಣರಾದರು. ಬೆಳಗಾವಿಯಲ್ಲಿನ ಮರಾಠಿ ಭಾಷಿಕರ ರಕ್ಷಣೆ ತನ್ನ ಹೊಣೆ ಎನ್ನುವಂತೆ ಮಹಾರಾಷ್ಟ್ರ ಸರ್ಕಾರ ಕೊಚ್ಚಿಕೊಳ್ಳುವುದರಲ್ಲಿ ಆ ರಾಜ್ಯದಲ್ಲಿನ ಮರಾಠಿ ಭಾಷಿಕರ ಭಾವನೆಗಳನ್ನು ಕೆರಳಿಸುವ ಉದ್ದೇಶವಿತ್ತೇ ಹೊರತು ಕರ್ನಾಟಕದಲ್ಲಿನ ಮರಾಠಿಗರ ಮೇಲಿನ ಪ್ರೀತಿ ಏನೂ ಇರಲಿಲ್ಲ. ತಮಗೆ ಬೇಕಾದಾಗ ಈ ವಿವಾದವನ್ನು ಬಳಸಿಕೊಂಡು ಆನಂತರ ಅದನ್ನು ಮರೆತು ಹೋದವರಲ್ಲಿ ಶರದ್ ಪವಾರ್ ಅವರಂಥ ಹಿರಿಯರೇ ಇದ್ದಾರೆ.

1935ರಲ್ಲಿ ಬೆಳಗಾವಿ ತನಗೆ ಬೇಕು ಎಂದು ಮೊಟ್ಟ ಮೊದಲು ಧ್ವನಿ ಎತ್ತಿದ ಮಹಾರಾಷ್ಟ್ರವು 1956ರಲ್ಲಿ ವಿಪರ್ಯಾಸ ಎನ್ನುವಂತೆ “ಬೆಳಗಾವಿಯನ್ನು ಕರ್ನಾಟಕಕ್ಕೆ ಕೊಟ್ಟಿದ್ದ ರಾಜ್ಯಗಳ ಪುನರ್ ವಿಂಗಡಣೆಯ ಮಸೂದೆ”ಯನ್ನು ಬಹುಮತದಿಂದಲೇ ಅಂಗೀಕರಿಸಿತು. ಮುಂದೆ ಕೆಲವೇ ದಿನಗಳಲ್ಲಿ ಲೋಕಸಭೆಯಲ್ಲಿಯೂ ಈ ಮಸೂದೆ ಅಂಗೀಕೃತವಾಯಿತು. ಅಲ್ಲಿಗೆ ಗಡಿ ವಿವಾದ ಎನ್ನುವುದು ಇತ್ಯರ್ಥವಾದಂತೆ ಆಗಿತ್ತು. “ಯಾವುದೇ ಪ್ರದೇಶವನ್ನು ಕೇವಲ ಭಾಷಿಕ ಆಧಾರದ ಮೇಲೆ ಹಂಚಲಾಗದು” ಎಂದು ರಾಜ್ಯಗಳ ಪುನರ್ ವಿಂಗಡಣೆಯ ಫಜಲ್ ಅಲಿ ಆಯೋಗವು ಮಹಾರಾಷ್ಟ್ರದ ಬೇಡಿಕೆಯನ್ನು ತಳ್ಳಿ ಹಾಕಿ ಬೆಳಗಾವಿಯನ್ನು ಕರ್ನಾಟಕಕ್ಕೆ ಕೊಟ್ಟಿತ್ತು.

ಆದರೆ, ವಿವಾದ ಸಾಯಲಿಲ್ಲ. ಮುಂದೆ ಅದು ಮಹಾಜನ ಆಯೋಗದ ರಚನೆಗೆ ಹೇಗೆ ಕಾರಣವಾಯಿತು. ಆಗ ಮುಖ್ಯಮಂತ್ರಿಯಾಗಿದ್ದ ಎಸ್.ನಿಜಲಿಂಗಪ್ಪ ಕೇಂದ್ರದ ವಿರುದ್ಧ ದೃಢ ನಿಲುವು ತಾಳದೆ ಆಯೋಗ ರಚನೆಗೆ ಹೇಗೆ ಒಪ್ಪಿಕೊಂಡರು ಎಂದು ಜೋಶಿಯವರು ದಾಖಲಿಸಿದ್ದಾರೆ. ಹಾಗೆ ನೋಡಿದರೆ ಒಟ್ಟು ಗಡಿ ವಿವಾದ ಕುರಿತು ಆಗಿನ ಮೈಸೂರಿನ, ಈಗಿನ ಕರ್ನಾಟಕದ ಮುಖ್ಯಮಂತ್ರಿಗಳು ಯಾರೆಲ್ಲ ಹೇಗೆ ನಡೆದುಕೊಂಡರು ಎಂಬುದನ್ನು ಜೋಶಿಯವರು ನಿಷ್ಠುರವಾಗಿ ದಾಖಲು ಮಾಡಿದ್ದಾರೆ. ಬಿ.ಡಿ.ಜತ್ತಿ, ದೇವರಾಜ ಅರಸು, ಎಚ್.ಡಿ.ಕುಮಾರಸ್ವಾಮಿ ಅವರ ನಿಲುವುಗಳನ್ನು ಪ್ರಶಂಸಿಸುವ ಜೋಶಿಯವರು, ಹೆಗಡೆ, ಕೃಷ್ಣ, ಯಡಿಯೂರಪ್ಪ ಅವರ ನಿಲುವುಗಳನ್ನು ಕಟುವಾಗಿ ಟೀಕಿಸುತ್ತಾರೆ.

“ಇದು ಬೆಳಗಾವಿ ವಿಭಜನೆವರೆಗೆ, ಬೆಳಗಾವಿ ಖರೀದಿವರೆಗೆ ಹೋಯಿತು. 1986ರಲ್ಲಿ ಬೆಳಗಾವಿಯನ್ನು ನೂರು ಕೋಟಿ ರೂಪಾಯಿಗೆ ಖರೀದಿಸಲು ಶರದ್ ಪವಾರ್ ಅವರು ಬಯಸಿದ್ದರು” ಎಂಬುದನ್ನು ಲೇಖಕರು ಉಲ್ಲೇಖಿಸಿದ್ದಾರೆ. ಆದರೆ, ಆಗ ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿಯಾಗಿದ್ದವರು ಎಸ್.ಬಿ.ಚವಾಣ್ ಅವರು. ವಾಸ್ತವದಲ್ಲಿ ಚವಾಣ್ ಅವರೇ ಆಗ ಕರ್ನಾಟಕದಲ್ಲಿ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆಯವರ ಮುಂದೆ ಈ ಪ್ರಸ್ತಾಪ ಇಟ್ಟಿದ್ದರು ಎಂಬ ವರದಿಗಳು ಇದ್ದುವು. ಆದರೆ, ಶರದ್ ಪವಾರ್ ಅವರು ಅದೇ ವರ್ಷ ಜೂನ್ 1 ರಂದು ಬೆಳಗಾವಿಯ ರಾಣಿ ಚೆನ್ನಮ್ಮ ವರ್ತುಲದಲ್ಲಿ ಪ್ರತ್ಯಕ್ಷರಾಗಿ ತಮ್ಮ ರಾಜ್ಯದಲ್ಲಿ ಮರುಹುಟ್ಟು ಗಳಿಸಿ ಮುಖ್ಯಮಂತ್ರಿಯೇ ಆದರು. ಆಗ ಅವರು ವಿರೋಧ ಪಕ್ಷದಲ್ಲಿ ಇದ್ದರು. ಪವಾರ್ ಅವರು ಬೆಳಗಾವಿ ಪ್ರವೇಶಿಸದಂತೆ ತಡೆಯಲು ಗಡಿಯಲ್ಲಿ ಭಾರಿ ಪೊಲೀಸ್ ನಾಕಾಬಂದಿ ಮಾಡಿದ್ದರೂ ಪವಾರ್ ತಾವು ಮೊದಲೇ ಹೇಳಿದಂತೆ ಬೆಳಗಾವಿಯಲ್ಲಿ ಪ್ರತ್ಯಕ್ಷರಾಗಿದ್ದರು. ಅದು ಕರ್ನಾಟಕದ ಪೊಲೀಸರ ಕೆನ್ನೆಗೆ ಹೊಡೆದಂತೆ ಇತ್ತು. ಆದರೆ, ಆಗ ಜನತಾ ಪರಿವಾರದಲ್ಲಿಯೇ ಇದ್ದ ಪವಾರ್ ಅವರ ರಾಜಕೀಯ ಮರುಹುಟ್ಟಿಗೆ ಹೆಗಡೆಯವರು ಪರೋಕ್ಷವಾಗಿ ಕಾರಣರಾಗಿದ್ದರು ಎಂದು ಹೆಗಡೆ ಸಂಪುಟದಲ್ಲಿ ಇದ್ದ ಹಿರಿಯರೊಬ್ಬರು ನನಗೆ ಖಾಸಗಿಯಾಗಿ ಹೇಳಿದ್ದರು. ಹೆಗಡೆಯವರು ಹಾಗೆ ನಡೆದುಕೊಳ್ಳಲು ಕಾರಣ ಅವರಿಗೆ ಇದ್ದ ರಾಷ್ಟ್ರ ರಾಜಕಾರಣದ ಕನಸು!

1986ರಲ್ಲಿ ನಡೆದ “ಸೀಮಾ ಲಢಾಯಿ” ಹಿಂಸಾಚಾರಕ್ಕೆ ತಿರುಗಿದ್ದರಿಂದ ಒಟ್ಟು ಚಳವಳಿಗೇ ತೀವ್ರ ಹಿನ್ನಡೆಯಾಯಿತು ಎಂದು ಜೋಶಿಯವರು ಅಭಿಪ್ರಾಯಪಟ್ಟಿದ್ದಾರೆ. ಮುಂದೆ 1992ರಲ್ಲಿ ಮೊದಲ ಬಾರಿಗೆ ಕನ್ನಡಿಗ ಸಿದ್ಧನಗೌಡ ಪಾಟೀಲರು ಬೆಳಗಾವಿ ಮೇಯರ್ ಆಗಲು ಆಗಿನ ಎಸ್.ಬಂಗಾರಪ್ಪ ಸರ್ಕಾರ ಪಾಲಿಕೆಯ ಮರಾಠಿ ಭಾಷಿಕ ಸದಸ್ಯರನ್ನು ಸೆಳೆದುದು ಕಾರಣವಾಯಿತು. ಬೆಳಗಾವಿಯ ಮೇಯರ್ ಆಗಿ ಹಲವು ಸಾರಿ ಆಯ್ಕೆಯಾಗಿ ದಾಖಲೆ ನಿರ್ಮಿಸಿ ಮುಂದೆ ಶಾಸಕರೂ ಆದ ದಿ.ಸಂಭಾಜಿ ಪಾಟೀಲರು, ಸಿದ್ಧನಗೌಡರು ಮೇಯರ್ ಆಗಲು ಕಾರಣಕರ್ತರಾಗಿದ್ದರು.

ಸಂಭಾಜಿ, ಮರಾಠಿಗರಾದರೂ ಗಡಿ ವಿವಾದದಲ್ಲಿ ಭಿನ್ನಮತೀಯರಾಗಿದ್ದರು. ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕು ಎಂಬ ಆಂದೋಲನದ ಮುಂಚೂಣಿಯಲ್ಲಿ ಇರುವ ಬೆಳಗಾವಿಯ “ತರುಣ್ ಭಾರತ್” ಪತ್ರಿಕೆ ನವೆಂಬರ್ ಒಂದನೇ ತಾರೀಖನ್ನು ಕರಾಳ ದಿನ ಎನ್ನುತ್ತಲೇ ಕರ್ನಾಟಕ ಸರ್ಕಾರ ಕೊಡುವ ಜಾಹೀರಾತು ತೆಗೆದುಕೊಳ್ಳುವ ದ್ವಂದ್ವವನ್ನು ಅವರು ಮೊದಲ ಬಾರಿ ಪ್ರಶ್ನಿಸಿದರು. ಮರಾಠಿ ಭಾಷಿಕ ಬ್ರಾಹ್ಮಣರು ಮತ್ತು ಮರಾಠಾ ಸಮುದಾಯಗಳ ನಡುವೆ ಶಿವಾಜಿ ಕಾಲದಿಂದ ಇರುವ ಐತಿಹಾಸಿಕ ತಿಕ್ಕಾಟಕ್ಕೆ ಸ್ವತಃ ಮರಾಠಾ ಆಗಿದ್ದ ದಿ.ಸಂಭಾಜಿ ಪಾಟೀಲರು ಗಡಿ ವಿವಾದದ ಮಗ್ಗುಲ ಮುಳ್ಳು ಎನಿಸಿದರು. (ಈ ಮಾಹಿತಿ ಪುಸ್ತಕದಲ್ಲಿ ಇಲ್ಲ).

1957ರಲ್ಲಿ ರಾಜ್ಯ ವಿಧಾನಸಭೆಗೆ ಆಯ್ಕೆಯಾಗಿದ್ದ ಏಳು ಜನ ಎಂ.ಇ.ಎಸ್ ಶಾಸಕರ ಸಂಖ್ಯೆ ನಂತರ ಸತತವಾಗಿ ಕಡಿಮೆಯಾಗುತ್ತ 1999ರ ಚುನಾವಣೆಯಲ್ಲಿ ಮೊದಲ ಬಾರಿಗೆ ಶೂನ್ಯಕ್ಕೆ ಇಳಿಯಿತು. 2013ರಲ್ಲಿ ಇಬ್ಬರು ಎಂ.ಇ.ಎಸ್‌.ನವರು ಗೆದ್ದಿದ್ದರು. 2018ರ ಚುನಾವಣೆಯಲ್ಲಿ ಅಂದರೆ ಹಾಲಿ ವಿಧಾನಸಭೆಯಲ್ಲಿ ಅವರಿಗೆ ಯಾವ ಪ್ರಾತಿನಿಧ್ಯವೂ ಇಲ್ಲ. ಹೀಗೆ ಎಂ.ಇ.ಎಸ್. ಸದಸ್ಯರಿಗೆ ಆಗುತ್ತಿರುವ ಸೋಲು, ಅದು ಮುಂದೆ ಇಟ್ಟಿದ್ದ “ತುಲನಾತ್ಮಕ ಬಹುಮತ” ಮತ್ತು “ಲೋಕೇಚ್ಛೆ” ತನ್ನ ಪರವಾಗಿ ಇದೆ ಎಂಬ ವಾದವೂ ಸೋತು ಹೋಗಿದೆ ಎಂಬುದನ್ನು ರಾಘವೇಂದ್ರ ಜೋಶಿಯವರು ದಾಖಲಿಸಿದ್ದಾರೆ.

ಇಂಥ ಹೋರಾಟ, ಚಳವಳಿ, ಚಿತಾವಣೆಗಳಿಂದ ಯಾವುದೇ ಪ್ರಯೋಜನವಾಗದೇ 2004ರಲ್ಲಿ ಮಹಾರಾಷ್ಟ್ರ ಸರ್ಕಾರವು ಸುಪ್ರಿಂ ಕೋರ್ಟಿನಲ್ಲಿ ದಾವೆ ಹೂಡಿದ್ದು ಅದು ವಿಚಾರಣೆಗೆ ಸ್ವೀಕಾರಾರ್ಹವೇ (ಮೆಂಟೇನೇಬಲ್) ಅಲ್ಲವೇ ಎಂಬ ವಿಚಾರವೇ ಇನ್ನೂ ಇತ್ಯರ್ಥವಾಗಿಲ್ಲ. ನಡುವೆ ಆರ್.ಎಂ.ಲೋಧಾ ಅವರು ಮುಖ್ಯ ನ್ಯಾಯಮೂರ್ತಿಯಾಗಿದ್ದಾಗ ಜಮ್ಮು ಕಾಶ್ಮೀರದ ನಿವೃತ್ತ ಮುಖ್ಯ ನ್ಯಾಯಮೂರ್ತಿ ಸರೀನ್ ಅವರಿಗೆ ಸಂಬಂಧಿಸಿದ ದಾಖಲೆ ಸಂಗ್ರಹಿಸಲು ಆದೇಶಿಸಿದ್ದರು. ಆದರೆ, ಆ ವಿಚಾರದಲ್ಲಿಯೂ ಇದುವರೆಗೆ ಯಾವ ಪ್ರಗತಿಯೂ ಆಗಿಲ್ಲ. ಲೋಧಾ ಅವರ ನಂತರ ಬಂದವರು ಮತ್ತೆ, “ಈ ಅರ್ಜಿ ಸ್ವೀಕಾರಾರ್ಹವೇ ಅಲ್ಲವೇ” ಎಂಬ ಅಂಶ ಮೊದಲು ತೀರ್ಮಾನವಾಗಲಿ ಎಂದರು. ಅಲ್ಲಿಗೇ ದಾವೆ ನಿಂತಿದೆ.

“ರಾಜ್ಯಗಳ ಪುನರ್ ವಿಂಗಡಣೆಯಾಗಿ ಮತ್ತು ಅದಕ್ಕೆ ಮುಂಬೈ ವಿಧಾನಸಭೆ ಹಾಗೂ ಲೋಕಸಭೆಯಲ್ಲಿ ಅಂಗೀಕಾರ ಸಿಕ್ಕಿರುವಾಗ ಮಹಾರಾಷ್ಟ್ರದ ಅರ್ಜಿಯೇ ಊರ್ಜಿತವಲ್ಲ” ಎಂಬ ವಾದವನ್ನು ಕರ್ನಾಟಕ ಮಂಡಿಸಿದೆ. ಇದೇ ವಾದವನ್ನು ಕೇಂದ್ರ ಸರ್ಕಾರವೂ ಮಂಡಿಸಿದೆ. ಒಂದು ಹಂತದಲ್ಲಿ, “ಕಾಲಹರಣ ಮಾಡುವ ಇಂಥ ಅರ್ಜಿ ಸಲ್ಲಿಸಿದ ಮಹಾರಾಷ್ಟ್ರ ಸರ್ಕಾರಕ್ಕೆ ಭಾರಿ ದಂಡ ವಿಧಿಸಬೇಕು” ಎಂದು ಕೇಂದ್ರ ಸರ್ಕಾರ ವಾದಿಸಿತ್ತು (ಪುಟ 45). “ರಾಜ್ಯಗಳ ಪುನರ್ ವಿಂಗಡಣೆಗಿಂತ ಮುಂಚೆ ಗುಜರಾತ್-ಮಹಾರಾಷ್ಟ್ರಗಳ ಪ್ರದೇಶಗಳನ್ನು ಒಳಗೊಂಡ ಪ್ರದೇಶದಲ್ಲಿ ಇದ್ದ ಬೆಳಗಾವಿಯನ್ನು ಈಗ ಕೇವಲ ಮಹಾರಾಷ್ಟ್ರಕ್ಕೆ ಕೊಡುವುದು ನ್ಯಾಯಯುತವೇ” ಎಂಬ ಕುತೂಹಲಕಾರಿ ಅಂಶವನ್ನೂ ಲೇಖಕರು ಪ್ರಸ್ತಾಪಿಸಿದ್ದಾರೆ (ಪುಟ 48).

ಸಂವಿಧಾನದ ಪರಿಚ್ಛೇದ 3ರ ಪ್ರಕಾರ ರಾಜ್ಯಗಳ ಗಡಿ ತೀರ್ಮಾನದ ಅಧಿಕಾರ ಇರುವುದು ಸಂಸತ್ತಿಗೇ ಹೊರತು ಸುಪ್ರೀಂ ಕೋರ್ಟಿಗೆ ಅಲ್ಲ. ಮತ್ತು ಹಾಗೆ ತೀರ್ಮಾನ ಮಾಡುವಾಗಲೂ ಕೇಂದ್ರ ಸರ್ಕಾರ ಆಯಾ ರಾಜ್ಯಗಳ ಸಲಹೆ ಕೇಳಬೇಕು ಎಂಬ (ಸಡಿಲ) ಷರತ್ತು ಇದೆ. ಹೀಗಾಗಿ ಮಹಾ ರಾಷ್ಟ್ರ ಸರ್ಕಾರದ ಅರ್ಜಿ “ಹಗ್ಗ ಹರಿಯುವುದಿಲ್ಲ, ಕೋಲು ಮುರಿಯುವುದಿಲ್ಲ” ಎಂಬ ಮಟ್ಟಿಗೆ ಮಾತ್ರ ಸೀಮಿತವಾಗಿ ಇರುತ್ತದೆ. ಎರಡೂ ರಾಜ್ಯಗಳು ವಕೀಲರಿಗೆ ಶುಲ್ಕ ಕೊಡುತ್ತ ಇರಬೇಕು ಅಷ್ಟೇ. ಸೋಜಿಗ ಎಂದರೆ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಿದ್ದ ಮಹಾರಾಷ್ಟ್ರದ ವೈ.ವಿ.ಚಂದ್ರಚೂಡರು ತಮ್ಮ ರಾಜ್ಯ ಸರ್ಕಾರಕ್ಕೆ ಈ ದಾವೆ ಹಾಕಲು ಸಲಹೆ ನೀಡಿದ್ದುದು ಮತ್ತು ಅವರ ಜೊತೆಗೆ ಪ್ಯಖ್ಯಾತ ವಕೀಲ ಹರೀಶ್ ಸಾಳ್ವೆಯವರೂ ನಿಂತುದು. ಕಾನೂನು ಮತ್ತು ಸಂವಿಧಾನದ ವಿಧಿಗಳು ಇಷ್ಟು ಸ್ಪಷ್ಟವಾಗಿದ್ದರೂ ಜೋಶಿಯವರು, “ಸುಪ್ರೀಂ ಕೋರ್ಟಿನಲ್ಲಿ ಏನಾಗುತ್ತದೋ ಏನೋ” ಎಂಬ ಆತಂಕದಲ್ಲಿ ಪುಸ್ತಕವನ್ನು ಮುಗಿಸುತ್ತಾರೆ. ಬಹುಶಃ, ಇದು ಸ್ಥಳೀಯರಲ್ಲಿ ಇರುವ ಆತಂಕದ ಛಾಯೆಯ ಸಂಕೇತದಂತೆ ಇರಬಹುದು.

ಸುಮಾರು 90 ಪುಟಗಳ ಈ ಪುಟ್ಟ ಪುಸ್ತಕ, ಒಂದು ಪಕ್ಷಿ ನೋಟದಂತೆಯೇ ಇದೆ. ಭಾಷಾವಾರು ಪ್ರಾಂತ ರಚನೆ ನಡೆದು ಬಂದ ದಾರಿ, ವಿವಿಧ ಆಯೋಗಗಳು, ಗಡಿ ವಿವಾದ ಕುರಿತ ಹಲವು ಮಾಹಿತಿ, ಜನಸಂಖ್ಯೆ, ಮಹಾರಾಷ್ಟ್ರದ ಅರ್ಜಿ, ಅಲ್ಲಿನ ರಾಜಕಾರಣಿಗಳು ನಡೆದುಕೊಂಡ ರೀತಿ, ಚಳವಳಿಗೆ ಇದ್ದ ಹಿಂಸೆಯ ಮುಖ, ಸುಪ್ರೀಂ ಕೋರ್ಟಿನಲ್ಲಿ ಸಲ್ಲಿಸಿದ ಮನವಿ, ಸಂವಿಧಾನದ ಕಲಮುಗಳು ಇತ್ಯಾದಿ ಅನೇಕ ಮಾಹಿತಿಗಳನ್ನು ಜೋಶಿಯವರು ಕಲೆ ಹಾಕಿ ಇದನ್ನು ಒಂದು ಉಪಯುಕ್ತ ಸಂದರ್ಭ ಗ್ರಂಥವಾಗುವಂತೆ ಮಾಡಲು ಬಹಳಷ್ಟು ಶ್ರಮಿಸಿದ್ದಾರೆ. ಅವರದು ಅಭಿನಂದನಾರ್ಹ ಪ್ರಯತ್ನ.

ಈ ಪುಸ್ತಕದಲ್ಲಿ ಕಾಸರಗೋಡನ್ನು ಕರ್ನಾಟಕಕ್ಕೆ ಸೇರಿಸಬೇಕು ಎಂಬ ಹೋರಾಟದ ಕುರಿತು ಮಾಹಿತಿ ಇಲ್ಲದೇ ಇರುವುದು ಒಂದು ಕೊರತೆ. ಮಹಾಜನ ಆಯೋಗವು ಕರ್ನಾಟಕ, ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳ ನಡುವಿನ ಗಡಿ ವಿವಾದ ಕುರಿತು ವರದಿ ನೀಡಿತ್ತು. ರಾಜ್ಯಗಳ ಪುನರ್ ವಿಂಗಡಣೆಯಲ್ಲಿ ನೆರೆಯ ರಾಜ್ಯಗಳ ಪಾಲಾದ, ನ್ಯಾಯವಾಗಿ ತನ್ನದಾದ, ಕನ್ನಡ ಪ್ರದೇಶಗಳನ್ನು ಮರಳಿ ದೊರಕಿಸಲು ಕರ್ನಾಟಕ ಯಾವುದೇ ಪ್ರಯತ್ನ ಮಾಡಲೇ ಇಲ್ಲ. ಕಯ್ಯಾರ ಕಿಂಞಣ್ಣ ರೈ ಅವರು ಕಾಸರಗೋಡು ಕರ್ನಾಟಕಕ್ಕೆ ಸೇರಬೇಕು ಎಂದು ಏಕಾಂಗಿಯಾಗಿ ಧ್ವನಿ ಎತ್ತಿದರು. ಅವರ ಜೊತೆಗೆ ಕನ್ನಡಿಗರ ಧ್ವನಿ ಸೇರಲೇ ಇಲ್ಲ. ಇದು ಏನನ್ನು ತೋರಿಸುತ್ತ ಇರಬಹುದು? ಕನ್ನಡಿಗರ ಹಿಂಜರಿಕೆಯನ್ನೇ? ನಿರಭಿಮಾನವನ್ನೇ? ಹೋರಾಟದ ಮನೋಭಾವದ ಕೊರತೆಯನ್ನೇ?

ಈ ಗಡಿ ವಿವಾದವನ್ನೆಲ್ಲ ಕುರಿತು ಅನೇಕ ವರ್ಷಗಳ ಹಿಂದೆ ಹಾ.ಮಾ.ನಾಯಕರು ಬರೆದ ಮಾತು: “ಬೆಳಗಾವಿ ಮಹಾರಾಷ್ಟ್ರಕ್ಕೆ ಹೋಗುವುದಿಲ್ಲ. ಕಾಸರಗೋಡು ಕರ್ನಾಟಕಕ್ಕೆ ಸಿಗುವುದಿಲ್ಲ.” ಇದು ಗೋಡೆ ಮೇಲಿನ ಬರಹ. ಉಳಿದುದೆಲ್ಲ ರಾಜಕಾರಣ, ಅಭಿಮಾನ, ಹಳವಂಡ, ಹೊಟ್ಟೆಪಾಡು… ಇತ್ಯಾದಿ.

*ಲೇಖಕರು ಪ್ರಜಾವಾಣಿಯ ನಿವೃತ್ತ ಕಾರ್ಯನಿರ್ವಾಹಕ ಸಂಪಾದಕರು. ಹಲವು ಕೃತಿಗಳ ಲೇಖಕರು. ಈಚೆಗೆ ದೇವದತ್ತ ಪಟ್ಟನಾಯಕರ ಬೃಹತ್ ಇಂಗ್ಲಿಷ್ ಕೃತಿ “ಸೀತಾ ರಾಮಾಯಣ”ವನ್ನು ಕನ್ನಡಕ್ಕೆ ತಂದಿದ್ದಾರೆ.

Leave a Reply

Your email address will not be published.