ಬೆಳಗಿನ ನಡಿಗೆಯ ಬೆಡಗು

ಒಟ್ಟಿನಲ್ಲಿ ಮುಂಜಾನೆಯ ವಿಹಾರದಿಂದ ನನ್ನ ದೇಹಭಾರವು ಕಡಿಮೆಯಾಗದಿದ್ದರೂ ಆ ರಸಕ್ಷಣಗಳ ಸಿಹಿನೆನಪಿನಿಂದ ನನ್ನ ಇಡೀ ದಿನವು ಆಹ್ಲಾದದಾಯಕವಾಗಿ ಚೈತನ್ಯಯುಕ್ತವಾಗಿ ಕಳೆಯುತ್ತಿದೆ ಎಂಬುದರಲ್ಲಿ ಎರಡು ಮಾತಿಲ್ಲ.

ಳೆದ ಡಿಸೆಂಬರ್ 31ರಂದು ‘ಹೊಸವರ್ಷದ ಮೊದಲದಿನದಿಂದ ನಮ್ಮ ಬೆಳಗಿನ ವಾಕಿಂಗ್ ಶುರು’ ಎಂದು ಮಾಲು ಘೋಷಿಸಿದಾಗ, ತುಂಬ ದಿನಗಳಿಂದ ವಾಕಿಂಗ್ ಬಗ್ಗೆ ಪ್ಲಾನ್ ಮಾಡುತ್ತಲೇ ಕಾಲ ಕಳೆದಿದ್ದ ನಾನೂ ನನ್ನ ಏರುತ್ತಿರುವ ದೇಹಭಾರವನ್ನು ಗಮನಿಸಿ ಅದು ಜೀರೋ ಸೈಜಾಗುವ ಕನಸು ಕಾಣುತ್ತ ಸಡಗರದಿಂದಲೇ ಒಪ್ಪಿಕೊಂಡೆ. ಜೊತೆಗೆ ಏರುತ್ತಿರುವ ವಯಸ್ಸನ್ನು ಗಮನಿಸಿದಾಗ, ಮುಂಜಾನೆ ಮುಸುಕು ಹೊದ್ದು ಮಲಗಿ ಗಳಿಸಿಕೊಳ್ಳುವ ಸುಖಕ್ಕಿಂತ ಕಳೆದುಕೊಳ್ಳುವ ಆರೋಗ್ಯದ ಚಿಂತೆಯೂ ಕಾಡತೊಡಗಿತ್ತು. ನಮ್ಮ ಮನೆ ಇರುವ ಬಡಾವಣೆಯಲ್ಲಿ ಕಿಲೋಮೀಟರುಗಟ್ಟಲೇ ನೇರವಾದ ಅಗಲವಾದ ರಸ್ತೆ, ರಸ್ತೆಯ ಇಕ್ಕೆಲಗಳಲ್ಲೂ ಮರ-ಗಿಡಗಳು, ವಿಶಾಲವಾದ ಜಾಗಗಳಲ್ಲಿ ಕಟ್ಟಿದ ಮನೆಗಳು, ಆ ಮನೆಗಳ ಮುಂದಿನ ಸುಂದರ ಪುಟ್ಟ ಹೂದೋಟಗಳೂ ಇದ್ದವು. ವಾಕಿಂಗಿಗೆ ಪ್ರಶಸ್ತವಾದ ಜಾಗದ ನೀಲನಕ್ಷೆಯೂ ನಮ್ಮ ಕಣ್ಣ ಮುಂದಿತ್ತು. ಹಾಗಾಗಿ ಆರಂಭಿಸಿಯೇ ಬಿಟ್ಟೆವು ಬೆಳಗಿನ ವಾಕಿಂಗನ್ನು.

ಎಂದೋ ಓದಿದ್ದ ಕುವೆಂಪುರವರ ‘ಮುಂಜಾನೆ ಮಂಜಿನೊಳು ಪಸುರಲ್ಲಿ ನಡೆವಾಗ, ಎಲೆ ಪೂವೆ ಆಲಿಸುವೆ ನಾನಿನ್ನ ಗೀತೆಯನು..’ ಎಂದು ಮನಸ್ಸಿನಲ್ಲೆ ಗುಣುಗುಣಿಸುತ್ತ, ಹಕ್ಕಿಗಳ ಇಂಪಾದ ಕಲರವಕ್ಕೆ ತೆರೆದುಕೊಳ್ಳುತ್ತ, ಆಚೀಚೆ ಮನೆಗಳ ಹೊಸ-ಹೊಸವಿನ್ಯಾಸಗಳನ್ನು ನೋಡುತ್ತ, ಕೈತೋಟಗಳ ಸೊಬಗನ್ನು ಸವಿಯುತ್ತ ನಾನು ನಿಧಾನವಾಗಿ ಸಾಗುತ್ತಿದ್ದರೆ, ‘ಹೀಗೆ ನಡೆದರೆ ನೀನು ಕರೀನಾ ಕಪೂರ್ ಆದ ಹಾಗೇ’ ಎಂದು ಛೇಡಿಸುತ್ತಾ ನನ್ನ ಮನೆಯವರು ಮುನ್ನಡೆಯುತ್ತಿದ್ದರು. ಅವರ ಹೆಜ್ಜೆಗೆ ಹೆಜ್ಜೆ ಜೋಡಿಸಬೇಕೆಂದು ಹೊರಟರೂ, ಪ್ರಕೃತಿಯ ಬೆಡಗಿನ ಜೊತೆಯಲ್ಲಿ ಇನ್ನಷ್ಟು ವಿಷಯಗಳು ನನ್ನ ಗಮನಕ್ಕೆ ಬರತೊಡಗಿ ನನ್ನ ನಡಿಗೆಯ ಆನಂದ ಹೆಚ್ಚತೊಡಗಿದಂತೆ ನಡಿಗೆಯ ಗತಿಯು ನಿಧಾನವಾಗುತ್ತ ಬಂದಿತು.

ಇಲ್ಲಿಯವರೆಗೆ ಮಂದಗತಿ, ಜೋರುಗತಿಯ ನಡಿಗೆಯನ್ನು ಮಾತ್ರ ನೋಡಿದ್ದ ನನ್ನ ಮುಂದೆ ಎಷ್ಟು ತರಹೇವಾರಿ ನಡಿಗೆಯ ಜನ! ನೇರವಾದ ಒಂದೇ ದೃಷ್ಟಿಯಲ್ಲಿ ಮುಂದಿನ ದಾರಿಯನ್ನೇ ನೋಡುತ್ತ (ಮಾಲುವಿನ ತರ) ಬಿರುಬಿರು ನಡೆಯುವವರು ಕೆಲವರಾದರೆ, ಬಿರುಸು ಹೆಜ್ಜೆಗಳನ್ನು ಹಾಕುತ್ತ ಕೈಗಳೆರಡನ್ನೂ ಆಗಾಗ ಗರಗರ ತಿರುಗಿಸುತ್ತಾ ನಡೆಯುವ ರೀತಿ ಇನ್ನು ಕೆಲವರದು; ಹತ್ತು ಹೆಜ್ಜೆ ಓಡುವುದು, ಹತ್ತು ಹೆಜ್ಜೆ ಜೋರುನಡಿಗೆ, ಮತ್ತೆ ಓಟ ನಂತರ ಸುಸ್ತಾಗಿ ಮೋರಿಕಟ್ಟೆಯ ಮೇಲೆ ಸ್ವಲ್ಪ ಹೊತ್ತು ಕುಳಿತು ಮತ್ತೆ ಓಡುವ ಶೈಲಿ ಒಬ್ಬರದ್ದಾದರೆ, ಇಡೀ ದೇಹಕ್ಕೂ ವ್ಯಾಯಾಮವಾಗಬೇಕೆಂದು ದೇಹವನ್ನಿಡೀ ಕುಲುಕಾಡಿಸುತ್ತ ರಸ್ತೆಯ ತುಂಬೆಲ್ಲಾ ನಡೆಯುತ್ತಿರುವವರು ಇನ್ನೊಬ್ಬರು; ಕೈಕಾಲುಗಳೆರಡನ್ನೂ ವಿರುದ್ಧದಿಕ್ಕಿನಲ್ಲಿ ಬೀಸುತ್ತ, ಕುತ್ತಿಗೆಯನ್ನು ತಿರುಗಿಸುತ್ತ ನಡೆಯುವವರು ಮತ್ತೊಬ್ಬರು.

2-3 ಜನ ಸೇರಿಕೊಂಡು ನಿಧಾನವಾಗಿ ವಾಕಿಂಗ್ ಹೋಗುತ್ತಿರುವ ವೃದ್ಧರು ಎದುರಾದರೆ ಅವರ ಹಾಗೂ ಈಗಿನ ಜನರೇಷನ್ನಿನ ಮಧ್ಯದ ತುಲನೆಯೇ ಅವರ ಮಾತಿನ ವಸ್ತುವಾಗಿರುತ್ತಿತ್ತು.

ಕಿವಿಗೆ ಇಯರ್ ಫೋನ್ ಸಿಕ್ಕಿಸಿಕೊಂಡು ಹಾಡು ಕೇಳುತ್ತ ತಲೆ ಅಲ್ಲಾಡಿಸುತ್ತ ತಾಳ ಹಾಕುತ್ತ ಹೋಗುವವರು ಕೆಲವರಾದರೆ, ಸುತ್ತಲಿನ ಪರಿವೆಯೇ ಇಲ್ಲದಂತೆ ತಮ್ಮ ಜಂಗಮವಾಣಿಯಲ್ಲಿ ಯಾರೊಂದಿಗೋ ಜೋರಾಗಿ ನಗುತ್ತ, ಹರಟುತ್ತ ಸಾಗುವವರು ಇನ್ನು ಕೆಲವರು. ಬೆಳ್ಳಂಬೆಳಿಗ್ಗೆ ಈ ರೀತಿಯ ಚಿತ್ರ-ವಿಚಿತ್ರ ಭಂಗಿಗಳ ನಡಿಗೆಯ ಪರಿಚಿತರು ನಂತರ, ಆ ದಿನದ ಇತರೆ ಸಮಯದಲ್ಲಿ ಅವರ ಮಾಮೂಲು ನಡಿಗೆಯಲ್ಲಿ ಕಣ್ಣಿಗೆ ಬಿದ್ದು ಮಾತನಾಡಿಸಿದಾಗ ಉಕ್ಕಿಬರುವ ನಗೆಯನ್ನು ತಡೆದುಕೊಳ್ಳಲು ತುಂಬ ಕಷ್ಟಪಡಬೇಕಾಗುತ್ತಿತ್ತು.

2-3 ಜನ ಸೇರಿಕೊಂಡು ನಿಧಾನವಾಗಿ ವಾಕಿಂಗ್ ಹೋಗುತ್ತಿರುವ ವೃದ್ಧರು ಎದುರಾದರೆ ಅವರ ಹಾಗೂ ಈಗಿನ ಜನರೇಷನ್ನಿನ ಮಧ್ಯದ ತುಲನೆಯೇ ಅವರ ಮಾತಿನ ವಸ್ತುವಾಗಿರುತ್ತಿತ್ತು. ಮಧ್ಯವಯಸ್ಕ ಗಂಡಸರಾದರೆ ಅವರ ವೃತ್ತಿ, ಬಡ್ತಿ, ಕ್ರಿಕೆಟ್, ರಾಜಕೀಯದ ಬಗೆಗಿನ ಮಾತು ಕಿವಿಗೆ ಬೀಳುತ್ತಿತ್ತು. ಇನ್ನು 3-4 ಹೆಂಗಸರು ಸೇರಿಕೊಂಡು ಹೋಗುತ್ತಿದ್ದರೆ ಅವರ ಮಾತುಗಳು ಅವರ ಮಕ್ಕಳ ವಿದ್ಯಾಭ್ಯಾಸ, ಮದುವೆ, ಕೆಲಸದವಳ ಕಿರಿಕ್ಕು, ಅದನ್ನು ತಾವು ನಿಭಾಯಿಸುತ್ತಿರುವ ರೀತಿ ಇವುಗಳ ಮಧ್ಯೆ ಸುತ್ತುತ್ತಿದ್ದವು.

ವಾಕಿಂಗಿಗೆ ಕೆಲವರು ತಮ್ಮ ನಾಯಿಯನ್ನೂ ಕರೆತಂದಿರುತ್ತಾರೆ ಅಥವಾ ಅದರ ಸಲುವಾಗಿಯೇ ವಾಕಿಂಗ್ ಮಾಡಲು ಬಂದವರಿರುತ್ತಾರೆ. ಮತ್ತೊಬ್ಬರ ಮನೆಯ ಮುಂದಿನ ಲೈಟುಕಂಬಕ್ಕೋ ಮರ-ಗಿಡಗಳ ಬೊಡ್ಡೆಗೋ ಅದರ ಕಕ್ಕ, ಉಚ್ಚೆ ಮಾಡಿಸಿ ವಾಪಸ್ಸು ತಮ್ಮ ಮನೆಗೆ ಕರೆದುಕೊಂಡು ಹೋಗುವ ಚಟ ಇವರಿಗೆ. ಹಾಗೆ ಸಿಗುವ ಇಂಥವರಲ್ಲಿ ಇಬ್ಬರನ್ನು ಗಮನಿಸುವುದು ಯಾವಾಗಲೂ ನನಗೆ ಮೋಜಿನ ಸಂಗತಿಯಾಗಿದೆ. ಒಬ್ಬರು ನೋಡಲು ತುಂಬಾ ಸಣಕಲು ಕಡ್ಡಿಕಾಷ್ಠದಂತಹ ವ್ಯಕ್ತಿಯಾದರೂ ಅವರ ಸೊಂಟ ಮಟ್ಟಕ್ಕೆ ಬರುವ ಭೀಮಕಾಯದ ಗ್ರೇಟ್ ಡೇನ್‍ನಾಯಿಯನ್ನು ಎಳೆದೊಯ್ಯುತ್ತಿರುತ್ತಾರೆ. ಆದರೆ ತುಂಬ ಸಲ ಆ ನಾಯಿಯು ಅವರ ಹಿಡಿತಕ್ಕೆ ಸಿಗದೇ ಅವರನ್ನೇ ತನಗೆ ಬೇಕಾದಂತೆ ಬೇಕಾದ ದಿಕ್ಕಿನಲ್ಲಿ ಎಳೆದೊಯ್ಯುವ ಚಂದವನ್ನು ಮಾತಿನಲ್ಲಿ ಬಣ್ಣಿಸಲಾಗುವುದಿಲ್ಲ. ಆ ಜೋಡಿ ಸಿಕ್ಕಾಗಲೆಲ್ಲ ತಿರು-ತಿರುಗಿ ಅವರನ್ನೇ ನೋಡುತ್ತ ನಾನು ಮುಂದುವರೆಯುತ್ತೇನೆ.

ಇನ್ನೊಬ್ಬರು ತಮ್ಮ ನಾಯಿಯ ಮಲವಿಸರ್ಜನೆಯ ಸಮಯದಲ್ಲಿಯೇ ನನಗೆ ಕಾಣಸಿಗುವುದು ಕಾಕತಾಳೀಯವೇನೋ! ಬಹುಶಃ ಅವರ ನಾಯಿಗೆ ಮಲವಿಸರ್ಜನೆಯ ಸಮಸ್ಯೆ ಇರಬಹುದೇನೋ! ಏಕೆಂದರೆ ಕಕ್ಕಸ್ಸನ್ನು ಮಾಡುವಾಗ ಅದು ತಿಣುಕುತ್ತಿರುತ್ತಿತ್ತು ಹಾಗೂ ನಾನು ಅವರನ್ನು ದಾಟಿ ಮುನ್ನಡೆಯುವಾಗ ‘ಆಯ್ತೇನೋ. ಬೇಗ ಮಾಡೋ. ಐದು ನಿಮಿಷ ಆಯ್ತಲ್ಲೋ’ ಎಂದು ಅವರು ಅದಕ್ಕೆ ಬಯ್ಯುತ್ತಿರುವುದು ಕೇಳುತ್ತಿತ್ತು. ಬಹುಶಃ ಅದು ಕಕ್ಕ ಮಾಡಿ ಮುಗಿಸಿದ ಮೇಲೆ ಅವರ ಮುಖದಲ್ಲೂ ತಮ್ಮದೇ ಮಲವಿಸರ್ಜನೆಯಾದ ನಿರಾಳ ಭಾವ ತುಂಬಿರಬಹುದೇ ಎಂಬ ಭಾವನೆ ಅದೆಷ್ಟೋ ಬಾರಿ ನನ್ನಲ್ಲೂ ಬಂದು ನನ್ನ ನಡಿಗೆ ಆಗ ಇನ್ನಷ್ಟು ನಿಧಾನವಾಗುತ್ತಿತ್ತು. ಆದರೆ ಆ ಸಮಯದಲ್ಲಿ ಅವರ ಮುಖವನ್ನೊಮ್ಮೆ ನೋಡುವ ನನ್ನ ಅದಮ್ಯ ಕುತೂಹಲ ತಣಿಯುವ ಭಾಗ್ಯ ಇನ್ನೂ ನನಗೆ ಒದಗಿಬಂದಿಲ್ಲ.

ಒಂದು ಮುಂಜಾನೆ ನನ್ನ ಪರಿಚಿತೆ -ಒಂದು ಮುದ್ದಾದ ಲ್ಯಾಬ್ರಡಾರ್ ನಾಯಿಯ ಒಡತಿ- ಮಂಜುಳಾ ತುಂಬ ಗಾಬರಿಯಿಂದ ಏದುಸಿರು ಬಿಡುತ್ತಾ ಓಡುನಡಿಗೆಯಲ್ಲಿ ಆಚೆ-ಈಚೆ ಏನನ್ನೋ ಹುಡುಕುವಂತೆ ಸಾಗುತ್ತಿದ್ದರು. ತಡೆದು ವಿಚಾರಿಸಿದಾಗ, ‘ನೋಡಿ ಇವರೆ, ರಾಜ ಹೇಗಾಡ್ತಿದಾನೆ. ಸ್ವಲ್ಪ ಸದರ ಕೊಟ್ಟೆ. ಕೈಕೊಟ್ಟು ಓಡಿಯೇಬಿಟ್ಟ. ಎಲ್ಲಿ ಹೋದನೋ ಗೊತ್ತಾಗ್ತಿಲ್ಲ. ನಿಮಗೇನಾದ್ರೂ ಸಿಕ್ಕಿದ್ರೆ ಮನೆಗೇ ಹೋಗಬೇಕಂತೆ. ಅಮ್ಮ ಕಾಯ್ತಿರ್ತಾಳೆ ಎಂದು ಅವನಿಗೆ ಹೇಳಿ’ ಎಂದು ನನ್ನ ಸಮಾಧಾನದ ಮಾತಿಗೂ ಕಾಯದೇ ಧಾವಂತದಿಂದಲೇ ಧಾವಿಸಿದರು. ಅದನ್ನು ಕೇಳಿದ ಮತ್ತೊಬ್ಬ ಹೆಂಗಸು, ‘ಯಾರು ಓಡಿ ಹೋದ್ರಂತೆ’ ಎಂದು ಕೆಟ್ಟ ಕುತೂಹಲದಿಂದ ನನ್ನನ್ನು ವಿಚಾರಿಸಿದರು. ‘ಅದು ಅವರ ಮುದ್ದಿನ ನಾಯಿ’ ಎಂದು ನಾನಂದಾಗ ಸೀರಿಯಸ್ ವಿಷಯ ನಿರೀಕಿಸುತ್ತಿದ್ದ ಅವರು ‘ಓ.. ನಾಯಿಯಾ?’ ಎಂದು ತುಂಬ ನಿರಾಸೆಯ ಮುಖಭಾವ ಹೊತ್ತು ಮುನ್ನಡೆದರು. ನಾನೂ ಮಂಜುಳಾರ ನಾಯಿ ಸಿಕ್ಕರೆ ಅದಕ್ಕೆ ಮನೆಗೆ ಹೋಗಲು ಕನ್ವಿನ್ಸ್ ಮಾಡುವುದು ಹೇಗೆ ಎಂದು ಆಲೋಚಿಸುತ್ತ ಮುಂದೆ ಹೆಜ್ಜೆ ಹಾಕಿದ್ದೆ.

ಈ ರೀತಿಯ ಶ್ರೀಮಂತ ನಾಯಿಗಳ ಹಿಂದೆ ಕಂತ್ರಿನಾಯಿಗಳ ಹಿಂಡೂ ಒಂದು ಅಂತರವನ್ನಿಟ್ಟುಕೊಂಡು ಸಾಗುತ್ತಿರುತ್ತವೆ. ಸರಪಳಿ ಬಿಗಿಸಿಕೊಂಡು ತಮ್ಮ ಬೀದಿಗೆ ಬಂದ ಅವುಗಳ ಪಾಡನ್ನು ಹೀಯಾಳಿಸುವಂತೆ ಆಗಾಗ ಜೋರಾಗಿ ಬೊಗಳುತ್ತ, ಹೆದರಿಸುತ್ತ ಆರ್ಭಟಿಸುತ್ತಿರುತ್ತವೆ. ಎಷ್ಟೋ ಸಲ ಅವುಗಳ ಗಲಾಟೆ ತಡೆಯದ ಅಲ್ಲಿನ ಮನೆಗಳ ಜನರು ಮನೆಯಿಂದ ಹೊರಗೆ ಬಂದು ‘ನಿಮ್ಮ ನಾಯಿಯನ್ನು ಬೇರೆ ಎಲ್ಲಾದರೂ ವಾಕಿಂಗಿಗೆ ಒಯ್ಯಿರಿ. ಈ ರಸ್ತೆಯಲ್ಲಿ ಬರಬೇಡಿ. ಈ ನಾಯಿಗಳ ಕಚ್ಚಾಟದಿಂದಲೇ ನಮಗೆ ಬೆಳಗಾಗ್ಬೇಕಾ?’ ಎಂದು ತಮ್ಮ ಸಕ್ಕರೆನಿದ್ದೆಯನ್ನು ಹಾಳುಮಾಡಿದ ಸಾಕು ನಾಯಿಗಳಿಗೂ ಅವರ ಯಜಮಾನರಿಗೂ ಶಾಪ ಹಾಕುತ್ತ ಕಂತ್ರಿನಾಯಿಗಳೆಡೆ ಕಲ್ಲುಬೀರುತ್ತ ಒಳನಡೆಯುವ ಒಂದೆರಡು ಪ್ರಸಂಗಗಳಿಗೆ ನಾನೂ ಸಾಕ್ಷಿಯಾದದ್ದಿದೆ.

ಮುಂಜಾನೆಯ ಸಮಯದಲ್ಲಿ ನಾನು ಹುಡುಕುವ ಇನ್ನೊಂದು ದೃಶ್ಯವೆಂದರೆ ಹೂಗಳ್ಳರದು. ವಾಕಿಂಗಿಗೆಂದು ತೆರಳುವಾಗಲೇ ಕೈಯಲ್ಲಿ ಪ್ಲ್ಯಾಸ್ಟಿಕ್ ಕವರ್, ಕೋಲು, ದೋಟಿ ಮೊದಲಾದ ಆಯುಧಗಳಿಂದ ಸನ್ನದ್ಧರಾಗಿ ಹೊರಟ ಇವರಲ್ಲಿ ಬಡವರು ಶ್ರೀಮಂತರು ಎಂಬ ತರತಮವಿಲ್ಲ. ತಮ್ಮ ಮನೆಯ ದೇವರನ್ನು ನಾನಾ ಮನೆಗಳ ನಾನಾವಿಧದ ಹೂಗಳಿಂದ ಅಲಂಕರಿಸಿ ಆನಂದಿಸಬೇಕು; ಸಾಕಷ್ಟು ಪುಣ್ಯವನ್ನೂ ಕಮಾಯಿಸಬೇಕೆಂಬ ಘನವಾದ ಉದ್ದೇಶ ಇವರದು! ಇವರಲ್ಲೂ ನಾನಾ ರೀತಿಯ ಜನರಿರುತ್ತಾರೆ. ಕೆಲವರು ಕಾಂಪೌಂಡಿನ ಹೊರಗೆ ರಸ್ತೆಯಲ್ಲಿ ಬೆಳೆಸಿದ ಗಿಡಗಳಿಂದ ಮಾತ್ರ ಹೂವನ್ನು ಕಿತ್ತರೆ ಇನ್ನು ಕೆಲವರು, ಆಚೀಚೆ ಕಳ್ಳನೋಟ ಬೀರುತ್ತ, ಮನೆಗಳ ಒಳಗಿನ ಆದರೆ ಕಾಂಪೌಂಡಿನಿಂದ ಹೊರಗೆ ಚಾಚಿರುವ ರೆಂಬೆಗಳಿಂದ ಹೂವನ್ನು ಕೀಳುತ್ತಾರೆ; ಕೆಲವರು ಕಾಂಪೌಂಡಿಗೆ ತಾಗಿ ನಿಂತು ಅಥವಾ ಸ್ವಲ್ಪ ಕಾಲುಎತ್ತರಿಸಿ ಒಳಗೆ ಬಿಟ್ಟಿರುವ ಹೂವನ್ನೂ ಕಿತ್ತರೆ ಮತ್ತೆ ಕೆಲವರು ತಮಗೆ ನಿಲುಕದ ಹೂಗಳನ್ನು ತಮ್ಮ ದೋಟಿಯಿಂದ ರೆಂಬೆಯನ್ನು ಸಳೆದು, ಕೆಲವೊಮ್ಮೆ ರೆಂಬೆಯನ್ನೂ ಮುರಿದು ಕೀಳುತ್ತಾರೆ. ಶ್ರಮವಹಿಸಿ ಸುಂದರವಾಗಿ ಕೈತೋಟವನ್ನು ಮಾಡಿಕೊಂಡಿರುವವರಿಗೆ ಪಕ್ಕಾ ತಲೆನೋವು ಕೊಡುವ ಜನರಿವರು.

ಒಟ್ಟಿನಲ್ಲಿ ಮುಂಜಾನೆಯ ವಿಹಾರದಿಂದ ನನ್ನ ದೇಹಭಾರವು ಕಡಿಮೆಯಾಗದಿದ್ದರೂ ಆ ರಸಕ್ಷಣಗಳ ಸಿಹಿನೆನಪಿನಿಂದ ನನ್ನ ಇಡೀ ದಿನವು ಆಹ್ಲಾದದಾಯಕವಾಗಿ ಚೈತನ್ಯಯುಕ್ತವಾಗಿ ಕಳೆಯುತ್ತಿದೆ ಎಂಬುದರಲ್ಲಿ ಎರಡು ಮಾತಿಲ್ಲ.

ಇದರ ಅನುಭವ ನನಗೂ ಆಗಿದ್ದಕ್ಕೆ ನಾನಿದರ ಬಗ್ಗೆ ಅಧಿಕಾರಯುತವಾಗಿ ಮಾತನಾಡಬಹುದು. ನಮ್ಮ ಮನೆಯ ಮುಂದಿನ ಜಾಗದಲ್ಲಿ ನಾನೂ ಸಣ್ಣದೊಂದು ಗಾರ್ಡನ್ ಮಾಡಿ ಬಗೆಬಗೆಯ ಹೂಗಿಡಗಳನ್ನು ಹಾಕಿದ್ದೇನೆ. ದೇವರಿಗಾಗಿ ಸ್ವಲ್ಪ ಮಾತ್ರವೇ ಹೂಗಳನ್ನು ಕೊಯ್ದು ಉಳಿದ ಹೂಗಳನ್ನು ಗಿಡದಲ್ಲಿಯೇ ಬಿಡುವ ಪದ್ಧತಿ ನನ್ನದು. ಒಮ್ಮೆ ಹೀಗಾಯಿತು. ಹಿಂದಿನ ದಿನ ನೋಡಿದ್ದ ಮೊಗ್ಗುಗಳೆಲ್ಲ ಮರುದಿನ ಕಾಣೆಯಾಗುತ್ತಿರುವುದನ್ನು ಗಮನಿಸಿ ಆ ಹೂಕಳ್ಳರನ್ನು ಹಿಡಿಯಲೇ ಬೇಕೆಂದು ನಿರ್ಧರಿಸಿ ದಿನಾಲೂ ಆರು ಗಂಟೆಗೆ ಏಳುವ ನಾನು ಬೆಳಗಿನ ಐದು ಗಂಟೆಗೇ ಎದ್ದು ನಮ್ಮ ಮನೆಯ ಹೂವಿಗಾಗಿ ಬರುವವರನ್ನು ಕಾಯುತ್ತ ಹೊರ ಕಿಟಕಿಯ ಬಳಿ ನಿಲ್ಲತೊಡಗಿದೆ. ಅಂತವರು ಬಂದಾಗ ಮೆಲ್ಲಗೆ ಸದ್ದಾಗದಂತೆ ಬಾಗಿಲು ತೆರೆದು ಹೋಗಿ ಅವರಿಗೆ ವಾಚಾಮಗೋಚರ ಬೈಯ್ದು ಅವರು ಕಕಮಕವಾಗುವಂತೆ ಮಾಡುತ್ತಿದ್ದೆ.

ಒಮ್ಮೆಯಂತೂ, ಆಗ ಹೈಸ್ಕೂಲ್ ಓದುತ್ತಿದ್ದ ಮಗನನ್ನೂ ಜೊತೆಯಲ್ಲಿರಿಸಿಕೊಂಡು, ನಮ್ಮ ಸುಳಿವು ಸಿಕ್ಕು ಗಾಬರಿಬಿದ್ದು ಓಡುತ್ತಿದ್ದವರನ್ನು ಹಿಂಬಾಲಿಸಿಕೊಂಡು ಹೋಗಿ ಜಗಳವಾಡಿ ನಂತರ ನನ್ನ ಗಂಡನಿಂದ ಬೈಯ್ಯಿಸಿಕೊಂಡದ್ದೂ ಉಂಟು. ಕೆಲವರಂತೂ ಈ ವಿಚಾರದಲ್ಲಿ ಎಷ್ಟು ನಿರ್ಲಜ್ಜರಿರುತ್ತಾರೆ ಅಂದರೆ ಒಂದೊಮ್ಮೆ ಅವರು ಹೂ ಕೀಳುವಾಗ ಸಿಕ್ಕಿಬಿದ್ದರೂ ‘ಏನು ಬಂಗಾರ ಕದೀತೀದೀವೇ? ಏನೋ ದೇವರಿಗಾಗಿ ಒಂದೆರಡು ಹೂನಪ್ಪ. ಅದಕ್ಯಾಕೆ ಹೀಗಾಡ್ತೀರಾ?’ ಅಂತ ನಾವೇ ಏನೋ ತಪ್ಪು ಮಾಡಿದ ರೀತಿಯಲ್ಲಿ ಗುರಾಯಿಸಿ ಎದಿರೇಟು ಹಾಕ್ತಾರೆ. ಕೊನೆಕೊನೆಗೆ ನನ್ನ ಈ ಹವ್ಯಾಸ ನನಗೆಷ್ಟು ಖುಷಿ ನೀಡುತ್ತಿತ್ತೆಂದರೆ ದಿನಾ ಬೆಳಿಗ್ಗೆ ಹೀಗೆ ಯಾರಾದರೂ ಹೂಕೀಳಲು ಬಂದು, ನಾನವರನ್ನು ರೆಡ್‍ಹ್ಯಾಂಡಾಗಿ ಹಿಡಿಯುವಂತಾಗಲಿ ಎಂದು ನಿರೀಕ್ಷಿಸುವಂತಾಗುತ್ತಿತ್ತು; ಹಾಗೆ ಯಾರೂ ಬರದಿದ್ದಾಗ ನಿರಾಸೆಯೂ ಆಗುತ್ತಿತ್ತು. ಆ ಸಮಯದಲ್ಲಿ ಮನೆಯ ಎದುರು ಯಾರೇ ಹೋದರೂ ನಮ್ಮ ಮನೆಯ ಹೂವನ್ನು ಕೀಳಲೇ ಅವರು ಬಂದಿರಬಹುದಾ ಎಂಬ ಅನುಮಾನ ಬೇರೆ ಮೂಡುತ್ತಿತ್ತು. ನನ್ನ ಈ ಸಾಹಸವನ್ನೆಲ್ಲ ನೋಡಿ ನೋಡಿ ಸಾಕಾಗಿ ನನ್ನ ಗಂಡ ಹಾಗೂ ಮಕ್ಕಳು ‘ನಿನಗೆ ಬೇರೆ ಕೆಲಸ ಇಲ್ವಾ?’ ಎಂದು ಚನ್ನಾಗಿ ಉಗಿದ ಮೇಲೆ ನನ್ನ ಈ ಮಹತ್ಕಾರ್ಯಕ್ಕೆ ತಿಲಾಂಜಲಿ ನೀಡಿದೆ.

ಒಟ್ಟಿನಲ್ಲಿ ಮುಂಜಾನೆಯ ವಿಹಾರದಿಂದ ನನ್ನ ದೇಹಭಾರವು ಕಡಿಮೆಯಾಗದಿದ್ದರೂ ಆ ರಸಕ್ಷಣಗಳ ಸಿಹಿನೆನಪಿನಿಂದ ನನ್ನ ಇಡೀ ದಿನವು ಆಹ್ಲಾದದಾಯಕವಾಗಿ ಚೈತನ್ಯಯುಕ್ತವಾಗಿ ಕಳೆಯುತ್ತಿದೆ ಎಂಬುದರಲ್ಲಿ ಎರಡು ಮಾತಿಲ್ಲ.

 

Leave a Reply

Your email address will not be published.