ಬೇಗುದಿಗಳ ಬೇಗೆಯಲ್ಲಿ ಸಮ್ಮಿಶ್ರ ಸರ್ಕಾರ

ಆರಂಭದ ವರುಷವೇ ಸರ್ಕಾರದ ಎಲ್ಲವನ್ನೂ ಮೌಲ್ಯಮಾಪನ ಮಾಡಿ ಇಷ್ಟೇ ಎಂದು ಹೇಳುವುದು ಕಷ್ಟ ಹಾಗೂ ಸೂಕ್ತವಲ್ಲ. ಆದರೂ ಅದರ ನಡಿಗೆಯ ಹಾದಿಯನ್ನು ಗುರುತಿಸಲು ಈ ಒಂದು ವರ್ಷ ಸಾಕು.

ಕರ್ನಾಟಕದಲ್ಲಿನ ಜೆಡಿಎಸ್  ಮತ್ತು ಕಾಂಗ್ರೆಸ್  ಪಕ್ಷಗಳ  ಸಮಿಶ್ರ  ಸರ್ಕಾರ  ಉರುಳುವುದೋ  ಅಥವಾ  ಉಳಿಯುವುದೋ  ಎಂಬ  ಪ್ರಶ್ನೆ  ಸ್ವತಃ  ಆ  ಪಕ್ಷಗಳಿಗೂ, ರಾಜ್ಯದ ಜನತೆಗೂ ಸತತವಾಗಿ ಕಾಡುತ್ತಲೇ ಇದೆ. ಇಂತಹ ಅತಂತ್ರದ ಸನ್ನಿವೇಶವನ್ನು ವಿರೋಧ  ಪಕ್ಷವಾಗಿರುವ  ಬಿಜೆಪಿ  ಸೃಷ್ಟಿಸುತ್ತಲೇ ಇದೆ. ಇದಕ್ಕೆ ಸಮ್ಮಿಶ್ರ ಸರ್ಕಾರದ ಪಕ್ಷಗಳ ಆಂತರಿಕ  ಬೇಗುದಿ  ಮತ್ತು ವೈರುಧ್ಯಗಳು ಫಲವತ್ತಾದ ಭೂಮಿಕೆಯನ್ನು ನಿರ್ಮಿಸಿವೆ. ಸಂಸದೀಯ ಪ್ರಜಾಪ್ರಭುತ್ವದಲ್ಲಿ ಚುನಾವಣೆ ಬಳಿಕ ರಚನೆಗೊಂಡ  ಸರ್ಕಾರವೊಂದು ಐದು ವರ್ಷಗಳ ಕಾಲ ಆಡಳಿತ ನಡೆಸಲು ಅವಕಾಶ ಇದೆಯಾದರೂ ಅಲ್ಲಿಯವರೆಗೆ ವಿರೋಧ ಪಕ್ಷವಾಗಿದ್ದು ಕಾಯುವ, ಜನಾದೇಶ ಪಾಲಿಸುವ ತಾಳ್ಮೆ, ಸಂಯಮವೂ ಬಿಜೆಪಿಗೆ ಇಲ್ಲವಾಗಿದೆ. ಕೇಂದ್ರದಲ್ಲಿರುವ ತನ್ನ ಸರ್ಕಾರದ ಅಧಿಕಾರದ  ಬಲ, ಅಪಾರ ಸಂಪನ್ಮೂಲಗಳನ್ನು  ಬಳಸಿ ಈ ಸರ್ಕಾರವನ್ನು ಕಿತ್ತೊಗೆಯುವ ದಾಳಿಗಳ  ನಡುವೆಯೇ ಈ ಸರ್ಕಾರ ಉಸಿರಾಡಬೇಕಿದೆ.

ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕು ಎಂಬುದೇ ತಮ್ಮ ಉದ್ದೇಶವೆಂದು  ಹೇಳಿಕೊಂಡರೂ  ಅದಕ್ಕೆ  ಬೇಕಾದ ರಾಜಕೀಯ  ಬದ್ಧತೆ, ಆಡಳಿತಾತ್ಮಕ ಕ್ರಿಯಾಶೀಲತೆ ಹಾಗೂ ಕಾಳಜಿ ಎರಡು ಪಕ್ಷಗಳಲ್ಲಿ ಇನ್ನಷ್ಟೂ ನಿಖರ ಸ್ವರೂಪವನ್ನು ಪಡೆಯಬೇಕು.

ನೀರ ಮೇಲಣ ಗುಳ್ಳೆ

ಈ ಸರಕಾರದ ಆರ್ಥಿಕ ಧೋರಣೆ ಭಿನ್ನವಾದದ್ದೇನಲ್ಲ ಎಂಬುದು ಮಧ್ಯಂತರದ  ಮತ್ತು 2019-20ರ ಬಜೆಟ್ ಗಳಲ್ಲಿ ವ್ಯಕ್ತಗೊಂಡಿದೆ. ಹಿಂದಿನಿಂದಲೂ ರಾಜ್ಯದ ಒಟ್ಟು ಆರ್ಥಿಕತೆಗೆ ಕೃಷಿ, ಕೈಗಾರಿಕಾ ಮೂಲಭೂತ ಕ್ಷೇತ್ರಗಳ ಕೊಡುಗೆ ಒಟ್ಟಾರೆ ಕುಂಠಿತಗೊಂಡಿದೆ. ಹಾಗೂ ಸೇವಾ ಕ್ಷೇತ್ರದ ಮೇಲೆ ಅದರ ಒತ್ತು ಹಾಗೂ ಭಾರ ಮುಂದುವರೆದಿದೆ. ಹಿಂದಿನ ವರ್ಷ ಆರ್ಥಿಕ ಬೆಳವಣಿಗೆಯ ದರ ಶೇಕಡಾ 10.4 ಇದ್ದದ್ದು 9.6ಕ್ಕೆ ಕುಸಿಯುವ ಅಂದಾಜಿದೆ. ನೂರಕ್ಕೂ ಹೆಚ್ಚಿನ ತಾಲೂಕುಗಳಲ್ಲಿ ಮುಂದುವರಿದಿರುವ ಬರ ಕೃಷಿಯ ಅಭಿವೃದ್ಧಿಯಲ್ಲಿ ಶೇ. 4.8ರಷ್ಟು ಕುಸಿತ ಕಾಣಲು ಕಾರಣವಾಗಲಿದೆ. ಕೃಷಿ ಶೇ.10.11  ಮತ್ತು ಕೈಗಾರಿಕಾ  ವಲಯದ ಕೊಡುಗೆ ದರ ಶೇ.22ಕ್ಕೆ ಇಳಿಯಲಿದೆ. ಇದಕ್ಕೆದುರಾಗಿ ಸೇವಾ ವಲಯದ ಕೊಡುಗೆಯೇ ಶೇ. 67.87.

ಆರ್ಥಿಕತೆಯ ಮೂಲಭೂತ  ಕ್ಷೇತ್ರಗಳಾದ ಕೃಷಿ-ಕೈಗಾರಿಕಾ ಉತ್ಪನ್ನ ಮೂಲೆಗೆ ಒತ್ತರಿಸಲ್ಪಟ್ಟು  ಐಟಿ-ಬಿಟಿ ಮುಂತಾದ ಸೇವಾ ವಲಯದ  ಮೇಲೆ ಆರ್ಥಿಕತೆ ಅಧಿಕವಾಗಿ ಅವಲಂಬಿಸಿರುವುದು  ಆರೋಗ್ಯಕರ ಬೆಳವಣಿಗೆಯಲ್ಲ. ನಿಜಾರ್ಥದಲ್ಲಿ ಅದೊಂದು ‘ನೀರ ಮೇಲಣ ಗುಳ್ಳೆ’. ಈ ಸ್ಥಿತಿಯಲ್ಲಿಯೇ ಬಹುತೇಕ ಇಂತಹ ಎಲ್ಲ ಸರ್ಕಾರಗಳೂ ಅಧಿಕಾರದಲ್ಲಿ ಉಳಿಯಲು ಮತ್ತು ಅದರಲ್ಲಿ ಸಿಕ್ಕಷ್ಟನ್ನು ‘ಗಂಟು ಕಟ್ಟಲು’ ಇನ್ನಿಲ್ಲದಂತಹ  ಸರ್ಕಸ್ ಮಾಡುತ್ತವೆ. ಆದ್ದರಿಂದ ಮೂಲ ಪರಿಹಾರದ ಬದಲು ‘ಅರಳು-ಮರುಳು’ ಗೊಳಿಸುವ ಯೋಜನೆಗಳೇ  ಆದ್ಯತೆ  ಪಡೆಯುತ್ತವೆ.

ಕನ್ನಡಿಯೊಳಗಿನ ಗಂಟು

ಹಣಕಾಸಿನ ಖಾತೆಯನ್ನು ನಿರ್ವಹಿಸುತ್ತಿರುವ ಮುಖ್ಯಮಂತ್ರಿಗಳು ಮಂಡಿಸಿದ 2019-20ನೇ ಸಾಲಿನ ಬಜೆಟ್‍ಗಾತ್ರ ರೂ.2,34,153 ಕೋಟಿಗಳದ್ದಾಗಿದೆ. ಆದರೆ ಈ ಬಜೆಟ್ಟಿನ ಕೊರತೆಯೇ ರೂ.42,051 ಕೋಟಿ. (ಬಜೆಟ್ ನ ಶೇ.21ರಷ್ಟು) ಇದು ಜಿ.ಎಸ್.ಡಿ.ಪಿ. (ರಾಜ್ಯದಆಂತರಿಕಉತ್ಪನ್ನ 15,88,330 ಕೋಟಿ ರೂ.ಗಳ) ಯ ಶೇ.2.65 ಎಂದು ಹೇಳಲಾಗಿದೆ. ಆಂತರಿಕ ಉತ್ಪನ್ನದ ಹೆಚ್ಚಳವಿಲ್ಲದೆ ಇಂತಹ ಕೊರತೆಯನ್ನು ಸರಿದೂಗಿಸಲು ಸರಕಾರ ಏನು ಮಾಡುತ್ತದೆ?

ಒಂದನೆಯದಾಗಿ, ಜನರಿಗೆಕೊಟ್ಟ ಭರವಸೆಗಳನ್ನು‘ಕನ್ನಡಿಯೊಳಗಿನ ಗಂಟ’ನ್ನಾಗಿಸುವುದು. ಇಲ್ಲವೇ ಕೆಲವು ಕ್ಷೇತ್ರಗಳಿಗೆ ಹಂಚಿಕೆಯಾದ ಹಣಖರ್ಚು ಮಾಡದೆ ಇರುವುದು ಅಥವಾ ಹೊರಗಿನ ಸಾಲಗಳನ್ನು ಅವಲಂಬಿಸುವುದು. ಬಜೆಟ್   ಕೊರತೆಯನ್ನು ನಿಭಾಯಿಸಲು ಸಾಲಕ್ಕೆ ಮೊರೆ ಹೋಗುವುದು ಸುಲಭದ ಆಯ್ಕೆಯಾಗಿಬಿಟ್ಟಿದೆ. ಇಂತಹ ಕ್ರಮಗಳಿಂದಾಗಿ ಯಾವುದೇ ಪಕ್ಷದ ಸರಕಾರ ಅಧಿಕಾರದಲ್ಲಿದ್ದರೂ ಅವರೆಲ್ಲಾ ಸಾಲ ಬೆಳೆಸುವಲ್ಲಿ ಸ್ಪರ್ಧಾ ನಿಸ್ಸೀಮರೇ! ಪ್ರತಿ ವರುಷವೂ ಸಾಲದ ಹೊರೆ ಬೆಳೆಯುತ್ತಲೇ ಹೋಗುತ್ತದೆ ಹೊರತು ಒಂದಿಷ್ಟನ್ನಾದರೂ ತೀರಿಸಿ ಕಡಿಮೆಗೊಂಡೇ ಇಲ್ಲ! 2019-20ರ ಸಾಲಿನಲ್ಲಿ ಅದು ಸುಮಾರು 2 ಲಕ್ಷದ 34 ಸಾವಿರಕೋಟಿ ರೂಪಾಯಿಗಳಿಗೆ ಏರಿಕೆ ಆದರೆ ಆಶ್ಚರ್ಯವಿಲ್ಲ.

ಬೇಕಿದೆ ಬದ್ಧತೆ

ಸರಕಾರದ ಆರ್ಥಿಕ ನೀತಿ ದುಡಿಯುವವರ, ಒಟ್ಟಾರೆ ಜನಪರವಾಗಬೇಕಾದರೆ ಕೈಗಾರಿಕೆ ಕೃಷಿ ಮುಂತಾದ ಆರ್ಥಿಕ ಕ್ಷೇತ್ರಕ್ಕೆ, ಶಿಕ್ಷಣ, ಆರೋಗ್ಯ, ಸಮಾಜ ಕಲ್ಯಾಣ, ಆಹಾರ ಭದ್ರತೆಯಂತಹ ಸಾಮಾಜಿಕ, ಮಾನವಾಭಿವೃದ್ಧಿಯ ಕ್ಷೇತ್ರಕ್ಕೆ ಹೆಚ್ಚಿನ ಹೂಡಿಕೆ ಮಾಡುವುದು ಅಗತ್ಯ. 2017-18 ರಿಂದ 2019-20ರ ಆಯವ್ಯಯದಲ್ಲಿ ಸಾಮಾನ್ಯ ಸೇವೆಗೆ ನೀಡಲಾಗುವ ಹಣ ಹಂಚಿಕೆ ಶೇ. 20.5 ರಿಂದ ಶೇ.23.2 ಹೆಚ್ಚಳವಿದೆ. ಆದರೆ ಆರ್ಥಿಕ ಸೇವೆ ಶೇ. 36.9 ರಿಂದ 35.9ಕ್ಕೆ, ಸಾಮಾಜಿಕ ಸೇವೆ 38.9 ರಿಂದ 37.7ಕ್ಕೆ ಇಳಿಕೆಯಾಗಿದೆ.

ಪ್ರಮುಖ ಸಾಮಾಜಿಕ ಸೇವಾ ಕ್ಷೇತ್ರಗಳಾದ ಶಿಕ್ಷಣ, ಆರೋಗ್ಯ ಮತ್ತು ಆರ್ಥಿಕ ಕ್ಷೇತ್ರವಾದ ಕೃಷಿಯಲ್ಲಿ ಇದೇ ರೀತಿ ಬಜೆಟ್‍ ಗಾತ್ರದ ಏರಿಕೆಯಿಂದ ನಿಜ ಮೊತ್ತಗಳಲ್ಲಿ ಏರಿಕೆಯಾಗಿದ್ದರೂ ಶೇಕಡವಾರು ಕಡಿಮೆಯಾಗಿರುವುದು ಮತ್ತು ಕಳೆದ ಮೂರು ವರ್ಷಗಳಲ್ಲಿ ಅತಿಕಡಿಮೆ ಇರುವುದು ಕಂಡು ಬರುತ್ತದೆ. ಸೇವಾ ಕ್ಷೇತ್ರಗಳಲ್ಲಿ ಹೂಡಿಕೆ 2017-18ರಲ್ಲಿ ಕೃಷಿ ಶೇ.2.9 ಇದ್ದದ್ದು 2019ರಲ್ಲಿ ಶೇ 2.6, 2019-20ರಲ್ಲಿ ಶೇ.2.4ಕ್ಕೆ ಕಡಿಮೆಯಾಗಿದೆ. ಆರೋಗ್ಯಕ್ಷೇತ್ರ ಶೇ.3.5, ಶೇ.3.6 ಮತ್ತು ಶೇ.3.4, ಶಿಕ್ಷಣ ಶೇ.11.5, 11.7, ಮತ್ತು ಶೇ.11.3.

ಶಿಕ್ಷಣದ ಹೂಡಿಕೆ 2000-01ರಲ್ಲಿ ಎಲ್ಲಾ ರಾಜ್ಯಗಳ ಸರಾಸರಿ ಶೇ.17.4 ಇರುವಾಗ ಕರ್ನಾಟಕದ್ದು ಶೇ. 17.7 ಇತ್ತು. ಆದರೆ 2016-17ರಲ್ಲಿ ಎಲ್ಲಾ ರಾಜ್ಯಗಳದ್ದು ಸರಾಸರಿ ಶೇ. 15.6 ಇರುವಾಗ ಕರ್ನಾಟಕದ್ದು 12.7ಕ್ಕೆ ಇಳಿದಿತ್ತು. ಆರೋಗ್ಯ ಕ್ಷೇತ್ರದಲ್ಲಿ 2004ರಲ್ಲಿಯೇ ರಾಜ್ಯ ಮಟ್ಟದ ಯೋಜನೆ ತಯಾರಿಸಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆ ಪಡೆದ ಕರ್ನಾಟಕ ಇತರ ರಾಜ್ಯಗಳ ಸರಾಸರಿಗಿಂತ ಹೆಚ್ಚು ಹಣ ಇರಿಸಿತ್ತು. 2016-17ರಲ್ಲಿ ರಾಜ್ಯಗಳ ಸರಾಸರಿ ಶೇ. 4.9 ಇದ್ದರೆ ಕರ್ನಾಟಕದ ಹೂಡಿಕೆ ಶೇ 3.5 !. ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ ಹೂಡಿಕೆ ಚೇತರಿಸಿಕೊಂಡಿಲ್ಲ.

ಸರಕಾರದ ಆರ್ಥಿಕ ಸ್ಥಿತಿಯ ಸುಧಾರಣೆಗೆ ಆಂತರಿಕ ಸಂಪನ್ಮೂಲಗಳ ಕ್ರೋಢೀಕರಣ ಮುಖ್ಯವಾಗಿದೆ. ಇದಕ್ಕಾಗಿ ತೆರಿಗೆಗಳ ಮೂಲಕ ಹಣ ಸಂಗ್ರಹಿಸುವುದು ಸಾಮಾನ್ಯ. ಆದರೆಜಿ.ಎಸ್.ಟಿ. ಮೂಲಕ ಕೇಂದ್ರವು ರಾಜ್ಯದ ಕೈಗಳನ್ನು ಕಟ್ಟಿಹಾಕಿದೆ. ಕೇಂದ್ರದ ಮುಂದೆ ಅಂಗಲಾಚಿ ಬೇಡಬೇಕಾದ ಪರಿಸ್ಥಿತಿಯೂ ಇದೆ. ಈ ದಿಕ್ಕಿನಲ್ಲಿ ಕರ್ನಾಟಕ ಸರ್ಕಾರದ ಧ್ವನಿ ಕ್ಷೀಣ ಎನ್ನಬಹುದು. ಹೀಗಾಗಿ ಹೊರ ಸಾಲದ ಮೇಲೆ ಅವಲಂಬಿಸುವುದು ಆರ್ಥಿಕವಾಗಿ ರಾಜ್ಯಗಳನ್ನು ದಿವಾಳಿ ಅಂಚಿಗೆ ನೂಕುತ್ತದೆ.

ವಿದೇಶಿ ಬಂಡವಾಳ ಹೂಡಿಕೆಗೆ ನಿರಂತರವಾಗಿ ಕರ್ನಾಟಕ ಪ್ರಯತ್ನ ನಡೆಸುತ್ತಲೇ ಬಂದಿದೆ. ಅದಕ್ಕಾಗಿ ಅಂತರಾಷ್ಟ್ರೀಯ ಹಲವು ಸಮ್ಮಿಲನಗಳನ್ನು ಸತತವಾಗಿ ನಡೆಸುತ್ತಲೇ ಇದೆ. ಆದರೆಅಲ್ಲಿ ಸಿಕ್ಕ ಭರವಸೆ ಪೂರ್ಣವಾಗಿ ಜಾರಿಯಾಗದೇ ಇರುವುದು ವಾಸ್ತವ. ಆದರೆ ಈಗಿನ ಸಮ್ಮಿಶ್ರ ಸರ್ಕಾರವೂ ಬಂಡವಾಳ ಹೂಡಿಕೆ ಲಭಿಸುತ್ತಿದೆ, ಅದನ್ನು ವಿವಿಧ ಕ್ಷೇತ್ರಗಳಿಗೆ ಅದನ್ನು ತೊಡಗಿಸಲಾಗುವುದು ಎಂದು ಹೇಳುತ್ತಿದೆ. ‘ಕಾಂಪಿಟ್‍ವಿತ್ ಚೈನಾ’ ಎಂಬ ನೀತಿಯನ್ನು ಅಂಗೀಕರಿಸಿದೆ.

ಕೆಲವು ಸ್ವಾಗತಾರ್ಹ ಕ್ರಮಗಳು

ದೇಶದ ಇಡೀ  ಕೃಷಿಕ ರಂಗವೇ ಬಿಕ್ಕಟ್ಟಿನಲ್ಲಿದ್ದು ರೈತರ ಆತ್ಮಹತ್ಯೆಗಳಿಗೆ ಮುಖ್ಯಕಾರಣ. ಕೃಷಿ ಸಾಲ, ರೈತನಿಗೆ ಫಸಲಿಗೆ ಬೆಂಬಲಿತ ಬೆಲೆ ನಿಗದಿಯೂ ಒಳಗೊಂಡು ಕೃಷಿ ಬಿಕ್ಕಟ್ಟಿನ ಬಾಧೆಗಳಿಂದ ರಕ್ಷಿಸಲು ಡಾ.ಸ್ವಾಮಿನಾಥನ್‍ ಆಯೋಗದ ಶಿಫಾರಸ್ಸುಗಳ ಜಾರಿ ಬಗ್ಗೆ ಎಲ್ಲ ಸರ್ಕಾರಗಳು ಮಾತನಾಡಿದರೂ ಈ ದೆಸೆಯಲ್ಲಿ ದಿಟ್ಟ ಕ್ರಮಗಳನ್ನು ಕೈಗೊಳ್ಳಲಾಗುತ್ತಿಲ್ಲ. ಕುಮಾರಸ್ವಾಮಿಅವರ ನೇತೃತ್ವದ ಸರ್ಕಾರ ಸುಮಾರು 46,000 ಕೋಟಿ ರೂಪಾಯಿಗಳ ಬೆಳೆ ಸಾಲ ಮನ್ನಾ ಮಾಡಲು ನಿರ್ಧರಿಸಿರುವುದು ಅತ್ಯಂತ ಮಹತ್ವದ್ದಾಗಿದೆ. ದೇಶದಲ್ಲಿ ಒಂದು ರಾಜ್ಯ ಸರ್ಕಾರ ಕೈಗೊಂಡ ಕ್ರಮ ದಾಖಲಾರ್ಹ. ಈ ಕ್ರಮದ ಮೂಲಕ ಸಮ್ಮಿಶ್ರ ಸರ್ಕಾರ ಕೃಷಿಕರ ಪರ ಕಾಳಜಿ ಉಳ್ಳದ್ದು ಎಂದು ಬಿಂಬಿಸಿಕೊಂಡಿದೆ. ಇದು ಮೂಲ ಪ್ರಶ್ನೆಗಳನ್ನು ಇತ್ಯರ್ಥಗೊಳಿಸದೇ ಇದ್ದರೂ ರೈತರ ಮೇಲಿನ ಹೊರೆ ಇಳಿಸುವಲ್ಲಿ ಮಹತ್ವದ ಹೆಜ್ಜೆ. ಕೇರಳದ ಮಾದರಿಯಲ್ಲಿ ಸಾಲ ಪರಿಹಾರ ಆಯೋಗದ ಸ್ಥಾಪನೆ ಸ್ವಾಗತಾರ್ಹ. ಹಾಗೆಯೇ ರೇಷ್ಮೆ ಕೈಗಾರಿಕೆಗಳ ಆಧುನಿಕರಣಕ್ಕೆ ಹಣ ಮೀಸಲು, 500 ಸಂಯುಕ್ತ ಬೇಸಾಯ ಸಹಕಾರ ಸಂಘಗಳ ಸ್ಥಾಪನೆ, ಬೆಲೆ ಕೊರತೆ ಪಾವತಿ ಯೋಜನೆಗಳು, ಸಕಾರಾತ್ಮಕವಾಗಿದ್ದು ಜಾರಿಯಾಗಬೇಕು.

ಬರೀ ಭರವಸೆ ಆಗದಿರಲಿ

ಕೃಷಿ ಕೂಲಿಕಾರರಿಗೆ ವಿಶೇಷ ಯೋಜನೆಗಳು ರೂಪಗೊಂಡಿಲ್ಲ. ವಲಸೆ ತಡೆಗೆ ಒಂದು ಕಾರ್ಯಯೋಜನೆ ಇಲ್ಲ. ಕೃಷಿ ಕೂಲಿಕಾರ ರಕ್ಷಣೆಗೆ ಒಂದು ಕಾನೂನು ಅಗತ್ಯವಾಗಿದೆ. ಆದರೆ ಅದರತ್ತ ಗಮನವಿಲ್ಲ. ಆದರೆ, ಗ್ರಾಮೀಣ ಉದ್ಯೋಗ ಖಾತ್ರಿಯೋಜನೆಯಲ್ಲಿ ಮಾನವ ದಿನಗಳ ಹೆಚ್ಚಳ ಸ್ವಲ್ಪ ಮಟ್ಟಿಗೆ ಸಹಕಾರಿ. ನಿರುದ್ಯೋಗದ ನಿವಾರಣೆಗೂ ಸ್ಪಷ್ಟ ಯೋಜನೆಯ ಕೊರತೆ ಇದೆ. ಸರ್ಕಾರ ತಾನೇ ಹಾಕಿಕೊಂಡಿರುವ ನಿರ್ಬಂಧಗಳಿಂದಾಗಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಬರೇ ಬಾಯಿ ಮಾತಿನ ವರಸೆಯಾಗಿದೆ.

ದಲಿತ ಮತ್ತು ಆದಿವಾಸಿ ಬುಡಕಟ್ಟು ಸಮುದಾಯಗಳ ಅಭಿವೃದ್ಧಿಗೆ ಸುಮಾರು ಹದಿನೈದು ಸಾವಿರ ಕೋಟಿ ಹಣವನ್ನು ಈ ಬಜೆಟ್ಟಿನಲ್ಲಿ ಮೀಸಲಿರಿಸಲಾಗಿದೆ. 14500 ಕೋಟಿ ರೂಪಾಯಿಗಳ ಮೊತ್ತವನ್ನು ಸೇರಿಸಿದರೆ ಅತಿದೊಡ್ಡದಾದ ಮೊತ್ತವದು. ಆದರೆ ಇದಕ್ಕೆ ಮೀಸಲಾದ ಹಣದ ಸದ್ಬಳಕೆಗೆ ಸರ್ಕಾರ ಗಂಭೀರವಾಗಿ ಯೋಚಿಸುತ್ತಿಲ್ಲ ಮತ್ತು ಅದರ ಜಾರಿಗೆ ಜಾರಿ ಮಾಡದೇ ಇರುವ ಅಧಿಕಾರಿಗಳ ಮೇಲೆ ಕ್ರಮಕ್ಕೆ ಮುಂದಾಗುತ್ತಿಲ್ಲ. ಹೀಗಾಗಿ ಅವರ ಪರಿಸ್ಥಿತಿ ಶೋಚನೀಯವಾಗಿಯೇ ಉಳಿದಿದೆ.

ವಿದ್ಯುತ್ ಆಟೋಗಳ ಪರಿವರ್ತನೆಗೆ ‘ಸಾರಥಿ ಸೂರು’ ಯೋಜನೆಯಡಿ ಸಬ್ಸಿಡಿ, ಚಾಲಕರ ದಿನದಘೋಷಣೆ, ಗಾಮೆರ್ಂಟ್ಸ್ ಕಾರ್ಮಿಕರಿಗೆ ಬಾಡಿಗೆಆಧಾರಿತ ವಸತಿಯೋಜನೆ, ಬೀದಿ ವ್ಯಾಪಾರಿಗಳಿಗೆ ಹತ್ತು ಸಾವಿರ ರೂಪಾಯಿ ಸಾಲದ ‘ಕಾಯಕ ಬಂಧು’, ಅಂಗನವಾಡಿ, ಆಶಾ ಕಾರ್ಯಕರ್ತರಿಗೆ ಗೌರವಧನದ ಹೆಚ್ಚಳ ಇವು ಕೆಲವು ಸ್ವಾಗತಾರ್ಹ ಅಂಶಗಳು.

ಈಡೇರದ ನಿರೀಕ್ಷೆಗಳು

ಆದರೆ ಪ್ರಮುಖವಾಗಿ ಅಸಂಘಟಿತ ಕಾರ್ಮಿಕರ ಬೇಡಿಕೆಯಾದ ಕನಿಷ್ಠ ಕೂಲಿ 18 ಸಾವಿರ ರೂಗಳಿಗೆ ನಿಗದಿಯನ್ನು ಸರ್ಕಾರ ಮಾಡಲಿಲ್ಲ. ಈಗ 14 ಸಾವಿರ ಇದ್ದರೂ ಅದು ವಾಸ್ತವದಲ್ಲಿ ಪೂರ್ಣ ಪ್ರಮಾಣದಲ್ಲಿ ಜಾರಿಯಾಗುವುದಿಲ್ಲ. 2009ರಲ್ಲಿ ರಚಿತವಾದ ‘ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ’ಗೆ ಹಣವನ್ನು ಈ ಸರ್ಕಾರವಾದರೂ ನೀಡುವ ನಿರೀಕ್ಷೆಇತ್ತು. ಅದನ್ನು ನಿರ್ಲಕ್ಷಿಸುವ ಮೂಲಕ ಕಲ್ಯಾಣ ಕಾರ್ಯಕ್ರಮಗಳಿಂದ ಒಂದುವರೆ ಕೋಟಿ ಕಾರ್ಮಿಕರನ್ನು ವಂಚಿತರನ್ನಾಗಿ ಮಾಡಲಾಗಿದೆ.

ಕೈಗಾರಿಕಾ ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸಲು ಆಡಳಿತಾತ್ಮಕ ಕ್ರಮಗಳ ಅಗತ್ಯವಿತ್ತು. ವಿಶೇಷವಾಗಿ ಕೈಗಾರಿಕೆಗಳಲ್ಲಿ ಕಾರ್ಮಿಕರ ವಿವಾದಗಳು ಉದ್ಭವಿಸಿದಾಗ,ಉದಾಹರಣೆಗೆ ಕಾರ್ಮಿಕರ ಸಂಘ ರಚನೆಗೆ ಮುಂದಾದರೆ ಮಾಲೀಕ ವರ್ಗ ಅಂತಹವರನ್ನು ಬಲಿಪಶು ಮಾಡುತ್ತದೆ. ಹೀಗಾಗಿ, ಒಂದು ಬಿಗಿಯಾದ ಕಾನೂನು ರೂಪಿಸುವ ಜರೂರತ್ತಿದೆ. ಈ ಬೇಡಿಕೆಯನ್ನು ಸಂಘಟನೆಗಳು ಹಲವು ವರ್ಷಗಳಿಂದ ಮಂಡಿಸುತ್ತಲೇ ಇದ್ದರೂ ಆಗಿಲ್ಲ. ಈ ಸರ್ಕಾರವಾದರೂ ಪರಿಗಣಿಸಬೇಕಿತ್ತು.

ಹಲವು ಬಿಕ್ಕಟ್ಟುಗಳ ನಡುವೆ

ಕೇಂದ್ರದಲ್ಲಿನ ಬಿಜೆಪಿ-ಎನ್.ಡಿ.ಎ ಸರ್ಕಾರಕ್ಕಿಂತ ತಾವು ಭಿನ್ನಎಂದು ಹೇಳಿಕೊಳ್ಳುವಾಗ ಸಮ್ಮಿಶ್ರ ಸರ್ಕಾರ ತನ್ನನ್ನು ತಾನು ಭಿನ್ನವಾಗಿ ಗುರುತಿಸಿಕೊಳ್ಳಬೇಕು. ಹೀಗಿರುವಾಗಲೂ ಹಿಂದಿನ ಅವಧಿಯಲ್ಲಿ ಬಿಜೆಪಿ ಸರ್ಕಾರದ ಹಗರಣ, ಭ್ರಷ್ಟತೆ, ಸೌಹಾರ್ದಕ್ಕೆ ಕೇಡು, ಅಶಾಂತಿ, ಅವಾಂತರಗಳನ್ನು ಕಂಡ ಕರ್ನಾಟಕ ಈ ಸಮ್ಮಿಶ್ರ ಸರ್ಕಾರದಲ್ಲಿ ಕೆಲವು ಕನಿಷ್ಠ ಭಿನ್ನತೆಗಳನ್ನು ಕಾಣುವುದು ಸುಳ್ಳೇನಲ್ಲ. ದೇಶದಲ್ಲಿ ಸಮ್ಮಿಶ್ರ ಸರ್ಕಾರದ ಹಲವು ಯಶಸ್ವಿ ಮಾದರಿಗಳಿವೆ. ವಿಶೇಷವಾಗಿ, ಜನತೆಗೆ ಬದ್ಧವಾದ ಪರ್ಯಾಯ ಹಾಗೂ ಪ್ರಜಾಸತ್ತಾತ್ಮಕ ನೀತಿಗಳ ಆಧಾರದಲ್ಲಿ ಒಗ್ಗಟ್ಟು ಸಾಧಿಸಿ ಜನಹಿತವೇ ಪರಮೋಚ್ಚ ಎಂದು ಹಲವಾರು ದಶಕಗಳ ಕಾಲ ಸರ್ಕಾರಗಳನ್ನು ನಡೆಸಿದ ಎಡರಂಗಗಳ ಅನುಭವ ನಿಚ್ಚಳವಾಗಿದೆ.

ಪ್ರಶ್ನೆಗಳಿವೆ, ಉತ್ತರ ಎಲ್ಲಿ?

ಈಗ ಪ್ರಶ್ನೆಇರುವುದು ಸಮ್ಮಿಶ್ರ ಸರ್ಕಾರದ ಘೋಷಿತ ಉದ್ದೇಶಗಳನ್ನು ಸಾಕಾರಗೊಳಿಸುವುದು ಹೇಗೆ? ನಿಜಕ್ಕೂ ಪರ್ಯಾಯ ಆಡಳಿತ ನೀಡುವುದು ಹೇಗೆ? ಸಮಿಶ್ರ ಸರ್ಕಾರ ಘೋಷಿಸಿದಂತೆ ರಾಜ್ಯವನ್ನು ಕೋಮುಸೌಹಾರ್ದ, ಶಾಂತಿ, ಸಾಮರಸ್ಯದ ನಾಡಾಗಿ, ಅಭಿವೃದ್ಧಿಗಾಗಿ ಮುನ್ನಡೆಸುವುದು ಹೇಗೆ? ಎಂಬ ಪ್ರಶ್ನೆಗಳು ಮುಖ್ಯ. ಬದಲಾದ, ಪರ್ಯಾಯ ಆರ್ಥಿಕ ನೀತಿಗಳನ್ನು ಅನುಸರಿಸದೇ ನಿಜಕ್ಕೂ ಜನತೆಗೆ ಪರಿಹಾರ ನೀಡಲು ಸಾಧ್ಯವೇ? ಇವು ಕೇವಲ ಪ್ರಶ್ನೆಯಾಗಿ ಉಳಿಯಬಾರದು ಎಂಬುದು ಪ್ರಗತಿಪರ ಪ್ರಜಾಸತ್ತಾತ್ಮಕ ವಿಭಾಗಗಳ ಆಶಯ.

Leave a Reply

Your email address will not be published.