ಬೊಂಬೆ

ಜಿ.ಪಿ.ಬಸವರಾಜು

1

ಒಂದು ಬೊಂಬೆಯನ್ನು

ಹೇಗೂ ಮಾಡಬಹುದು

ಮೊದಲು ಕೈ ಕಾಲು

ಬೇಡ ಬೆರಳಿಂದಲೂ ಆದೀತು,

ಕಣ್ಣು ಕಿವಿ ಹೊಟ್ಟೆ ತುಟಿ ಹಲ್ಲು

ಬೇಕಾದ್ದು ಬೇಕಾದಂತೆ ಮಾಡಿ

ಜೋಡಿಸಬಹುದು ಆಕಾರಕ್ಕೆ

ಮತ್ತೆ ಬಟ್ಟೆಯ ಮಾತು, ಬೊಂಬೆಯೇನೂ

ಕೇಳುವುದಿಲ್ಲ, ಬಟ್ಟೆ, ಬೆತ್ತಲು ಎಲ್ಲ ನಿಮ್ಮ

ನಿಮ್ಮ ಅರಿವಿನ ಪರಿಧಿ;

ಬಟ್ಟೆ, ಆಕಾರ, ಬಣ್ಣ, ನಿಮ್ಮ ಕಣ್ಣಿನ ಬಿಂಬ

ಬೊಂಬೆ ಯಾವುದನ್ನೂ ಆಚೆ ತಳ್ಳುವುದಿಲ್ಲ

ಇಷ್ಟೆಲ್ಲ ಆದಮೇಲೂ ಬೊಂಬೆಗೆ ಜೀವ-

ಬರುವುದು ಮಗು ಮಾತನಾಡಿದಾಗ

ಮಗು ನಿಜಕ್ಕೂ ಮಾತನಾಡುತ್ತೆ, ಬೊಂಬೆಗೆ

ಏಟು ಕೊಡುತ್ತೆ, ಕೈಕಾಲು ಮುರಿಯುತ್ತೆ; ಅತ್ತು

ಮುದ್ದಿಸಿ ನಗಿಸಿ ತಿನ್ನಿಸಿ ತೊಟ್ಟಿಲಲ್ಲಿಟ್ಟು ತೂಗಿ

ತನ್ನೆದೆಯ ಮಾತು ಬೊಂಬೆಗೆ ಮುಟ್ಟಿಸಿ

ತಟ್ಟಿ ಮಲಗಿಸುತ್ತೆ ಬೊಂಬೆಯನ್ನು

ಬೊಂಬೆ ಜೀವ ಜೀವಂತ, ಜೀವ

ತುಂಬಿದ ಮಗು ಇನ್ನೊಂದು ಜೀವ-

ದ ಜೊತೆ ಆಡುತ್ತ ಕಾಲವನ್ನು ಕೂಡುತ್ತೆ

2

ಎಲ್ಲಿ ಹೋಯಿತು ಈ ಬೊಂಬೆ, ಮನೆ,

ಮುಳುಗಿ ಆಡುವ ಮಗು, ಅದರ ಬಳ್ಳನೆಯ

ನಗು, ಬೀದಿಬೀದಿಯ ಅಲೆದರು ಇಲ್ಲ

ಮಣ್ಣಿನಾಳಕ್ಕೆ ಇಳಿದರೂ ಇಲ್ಲ, ಪದರ

ಪದರ ಹೊಕ್ಕು ಹೊರಬಂದರೂ ಕಾಣದು

ಬೊಂಬೆ, ಅದರ ಜೀವಜೀವದ ಆಟ

ಮಾಲುಗಳಲ್ಲಿ ಸಾಲು ಸಾಲು ಬೊಂಬೆ

ಬಣ್ಣಬಣ್ಣದ ಬಟ್ಟೆ, ಝಗಮಗಿಸಿ ಕಣ್ಣು-

ಕುಕ್ಕುವ ದೀಪ, ಕಣ್ಣುಜ್ಜಿ, ನೆನಪುಜ್ಜಿ ಉಜ್ಜಿ

ನೋಡಿದರೂ ಇಲ್ಲ ಆ ಅದು ಬಾಲ್ಯ-

ದ ಬೊಂಬೆ.

ಜಿ.ಪಿ.ಬಸವರಾಜು

 

Leave a Reply

Your email address will not be published.