ಬೋಡೋ ಒಪ್ಪಂದದ ಆಶಯ ಕನಸಿನ ಸಾಕಾರದತ್ತ ಈಶಾನ್ಯ ಭಾರತ

ಪ್ರತ್ಯೇಕತಾವಾದ ಮತ್ತು ಉಗ್ರಗಾಮಿ ಮನಸ್ಥಿತಿಯನ್ನು ಪರಿವರ್ತಿಸಿ, ಭಾರತ ದೇಶದ ಅಖಂಡತೆಯೆಡೆಗೆ ಒಲವು ಮೂಡಿಸುವ ನಿಟ್ಟಿನಲ್ಲಿ ಈ ಒಪ್ಪಂದ ಯಶಸ್ವಿಯಾಗುವ ಲಕ್ಷಣಗಳು ತೋರುತ್ತಿವೆ.

– ಎಂ.ಕುಸುಮ ಹಾಸನ

ಸುಮಾರು ಐದು ದಶಕಗಳಿಂದ ಕುದಿಯುತ್ತಿದ್ದ ಅಸ್ಸಾಂ ಜನರ ಅಸಹನೆಯನ್ನು ಶಮನಗೊಳಿಸಲು ಹಾಗೂ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು, ಬೋಡೋ ಒಪ್ಪಂದವು ತ್ರಿಪಕ್ಷೀಯವಾಗಿ ಜನವರಿ 27, 2020 ರಂದು ಅಂಗೀಕೃತವಾಯಿತು. ಕೇಂದ್ರ ಸರ್ಕಾರ, ಅಸ್ಸಾಂನ ರಾಜ್ಯ ಸರ್ಕಾರ ಮತ್ತು ಮೂರು ಬಂಡುಕೋರ ಸಂಘಟನೆಗಳಾದ ಎನ್‍ಡಿಎಫ್‍ಬಿ (ನ್ಯಾಷನಲ್ ಡೆಮಾಕ್ರಟಿಕ್ ಫ್ರಂಟ್ ಆಫ್ ಬೋಡೋಲ್ಯಾಂಡ್), ಎಬಿಎಸ್‍ಯು (ಆಲ್ ಬೋಡೋ ಸ್ಟೂಡೆಂಟ್ಸ್ ಯೂನಿಯನ್) ಮತ್ತು ಯುಬಿಪಿಒ (ಯೂನಿಟೈಡ್ ಬೋಡೋ ಪೀಪಲ್ಸ್ ಆರ್ಗನೈಸೇಷನ್)ನ ಪ್ರಮುಖರು ಈ ಐತಿಹಾಸಿಕ ಬೋಡೋ ಒಪ್ಪಂದಕ್ಕೆ ಸಹಿ ಹಾಕಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಫೆಬ್ರವರಿ 7, 2020ರಂದು ಅಸ್ಸಾಂನ ಕೊಕ್ರಜಾರ್‍ನಲ್ಲಿ, ಈ ಒಪ್ಪಂದದ ಪ್ರಯುಕ್ತ ಆಯೋಜಿಸಲಾದ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಾಗ ಅಲ್ಲಿನ ನಿವಾಸಿಗಳು ಒಂದು ಲಕ್ಷ ಮಣ್ಣಿನ ಹಣತೆಗಳನ್ನು ಬೆಳಗಿ ಅಸ್ಸಾಂನ ಭವ್ಯಭವಿಷ್ಯಕ್ಕಾಗಿ, ಶಾಂತಿಗಾಗಿ ಪ್ರಾರ್ಥಿಸಿದರು. ಅಸ್ಸಾಂನ ಯುವ ಜನರ ಆಶೋತ್ತರಗಳ ಈಡೇರಿಕೆಗಾಗಿ ಹಾಗೂ ರಾಜ್ಯದ ಸರ್ವತೋಮುಖ ಅಭಿವೃದ್ಧಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮುಂಬರುವ ಮೂರು ವರ್ಷಗಳಲ್ಲಿ ಹಲವಾರು ಜನಸ್ನೇಹಿ ಯೋಜನೆಗಳನ್ನು ಹಮ್ಮಿಕೊಳ್ಳಲಿವೆ; ಇದಕ್ಕಾಗಿ ತಲಾ 750 ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜ್‍ನ್ನು ನೀಡುತ್ತಿವೆ.

ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರು, “ಬೋಡೋ ಸಮುದಾಯದ ಸಂಸ್ಕತಿ, ಭಾಷೆಯನ್ನು ರಕ್ಷಿಸಲಾಗುವುದು. ಅಸ್ಸಾಂನ ಪ್ರಾಂತೀಯ ಸಮಗ್ರತೆಯನ್ನು ಕೂಡ ಕಾಯ್ದುಕೊಳ್ಳಲಾಗುವುದು” ಎಂದು ಭರವಸೆಯನ್ನು ನೀಡಿದ್ದಾರೆ. 1972ರಲ್ಲಿಯೇ ಎಬಿಎಸ್‍ಯು ಪ್ರತ್ಯೇಕ ಬೋಡೋ ರಾಜ್ಯದ ಹೋರಾಟಕ್ಕೆ ಚಾಲನೆ ನೀಡಿತ್ತು. ನಂತರದ ವರ್ಷಗಳಲ್ಲಿ, ಸರ್ಕಾರ ಮತ್ತು ಬಂಡುಕೋರರ ನಡುವೆ ನಡೆದ ಮೂರನೇ ಒಪ್ಪಂದವೇ, ಬೋಡೋ ಒಪ್ಪಂದವಾಗಿದೆ. ಈವರೆಗೂ ಬೋಡೋ ಹಿಂಸಾಚಾರಕ್ಕೆ 4,000ಕ್ಕೂ ಅಧಿಕ ಜನರು ಬಲಿಯಾಗಿದ್ದಾರೆ.

ಶಸ್ತ್ರಾಸ್ತ್ರಧಾರಿಗಳನ್ನು ನಾಗರಿಕ ಕಾರ್ಯಕರ್ತರನ್ನಾಗಿಸುವ ಬೋಡೋ ಒಪ್ಪಂದವು ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ 150ನೇ ಜಯಂತಿಯ ಸಂದರ್ಭದಲ್ಲಿ ಜರುಗಿರುವುದು ಹೆಚ್ಚಿನ ಮಹತ್ವವನ್ನು ಪಡೆದಿದೆ. ಶಸ್ತ್ರಾಸ್ತ್ರ ತ್ಯಜಿಸುವ ಬೋಡೋ ಯುವಜನರ ಈ ನಡೆಯು ದೇಶದ ಇತರ ಬಂಡುಕೋರರಿಗೆ ಸ್ಫೂರ್ತಿದಾಯಕವಾಗಿ, ಅವರೂ ಮರಳಿ ನಾಗರಿಕ ಜೀವನವನ್ನು ಸಂಭ್ರಮಿಸಬೇಕೆಂದು ಪ್ರಧಾನಿ ಕರೆ ನೀಡಿದ್ದಾರೆ.

ಹಿನ್ನೆಲೆ

ಬೋಡೋಗಳೆಂದರೆ ಅಸ್ಸಾಂನ ಮೂಲ ನಿವಾಸಿಗಳು. 1971ರಲ್ಲಿ ನಡೆದ ಭಾರತ-ಪಾಕಿಸ್ತಾನದ ಯುದ್ದಕ್ಕೂ ಮುನ್ನ ಬೋಡೋಗಳೇ ಅಸ್ಸಾಂನಲ್ಲಿ ಬಹುಸಂಖ್ಯಾತರಾಗಿದ್ದರು. 2011ರ ಜನಗಣತಿಯ ಪ್ರಕಾರ ಅವರ ಜನಸಂಖ್ಯೆ 14 ಲಕ್ಷವಿತ್ತು. 1971ರ ಯುದ್ಧದ ನಂತರ ಬಾಂಗ್ಲಾ ದೇಶವು ಸೃಷ್ಟಿಯಾದ ನಂತರ ವಿವಿಧ ಸಮಸ್ಯೆಗಳು ಉದ್ಭವವಾದವು. ಬಾಂಗ್ಲಾ ಪ್ರಾಂತ್ಯದಲ್ಲಿ ನಡೆದ ಧಾರ್ಮಿಕ ದೌರ್ಜನ್ಯದ ಪರಿಣಾಮ, ಅಸಂಖ್ಯಾತ ಹಿಂದೂಗಳು ಹಾಗೂ ಮುಸ್ಲಿಮರು ಅಸ್ಸಾಂಗೆ ವಲಸೆ ಬಂದರು. ಮ್ಯಾನ್ಮಾರ್‍ನಿಂದ ಬಂದ ರೋಹಿಂಗ್ಯಾ ಮುಸ್ಲಿಮರ ಸಂಖ್ಯೆ ಅಧಿಕವಾದಂತೆ, ಸ್ಥಳೀಯ ಬೋಡೋ ಸಂಸ್ಕೃತಿಗೆ ಧಕ್ಕೆಯಾಗಿ ತಮ್ಮ ಉಳಿವಿಗಾಗಿ, ಅಸ್ಮಿತೆಗಾಗಿ ಅಸ್ಸಾಂನ ಬೋಡೋಗಳು ಮತ್ತು ಬುಡಕಟ್ಟು ನಿವಾಸಿಗಳು ಹೋರಾಟ ಆರಂಭಿಸಿದರು. 

ಪುರಾತನ ಸಂಸ್ಕøತ ಸಾಹಿತ್ಯ ಗ್ರಂಥಗಳಲ್ಲಿ ಬೋಡೋಗಳು ಮತ್ತು ಅಹೋಂ ಬುಡಕಟ್ಟು ಜನರ ನಡುವೆ ನಡೆದ ಹೋರಾಟದಲ್ಲಿ ಬೋಡೋಗಳು ಜಯಿಸಿದ ವರ್ಣಣೆ ಬರುತ್ತದೆ. ಅವರನ್ನು ‘ಕಚರಿ’ ಗಳೆಂದೂ ಕರೆಯುತ್ತಾರೆ. ಬ್ರಹ್ಮಪುತ್ರ ನದಿತಟದ ಮೂಲ ನಿವಾಸಿಗಳೆನ್ನಲಾದ ಅಹೋಂಗಳಿಗೂ ಬೋಡೊಗಳಿಗೂ ನಿರಂತರ ಕಾಳಗ ಹಿಂದಿನಿಂದಲೂ ನಡೆಯುತ್ತಲೇ ಬಂದಿದೆ. ಬರ್ಮಾದ ಮೂಲದವರಾದ ಥಾಯ್ ಜನರು ಅಸ್ಸಾಂಗೆ 1228 ರಿಂದ ವಲಸೆ ಬಂದು, ಅಲ್ಲಿದ್ದ ಬುಡಕಟ್ಟು ಜನರ ನಡುವಿನ ಅಂತರ್ಯುದ್ಧ ಇನ್ನೂ ತೀವ್ರಗೊಂಡಿತ್ತು. ಭೂಮಿ ಮೇಲಿನ ಹಕ್ಕಿಗಾಗಿ, ಮೇಲ್ಮೆಗಾಗಿ ನಡೆಯುತ್ತಲೇ ಬಂದ ರಕ್ತಪಾತ 21ನೇ ಶತಮಾನದಲ್ಲೂ ಅವರ ಇನ್ನಿತರ ಅಭಿವೃದ್ಧಿ ಕಾರ್ಯಗಳಿಗೆ ತೊಡಕಾಗಿದೆ.

ಬೋಡೋ ಒಪ್ಪಂದದ ಮುಖ್ಯಾಂಶಗಳು

ಅಸ್ಸಾಂ ರಾಜ್ಯದಲ್ಲಿನ ಕೊಕ್ರಜಾರ್, ಚಿರಾಂಗ್, ಬಕ್ಲಾ ಮತ್ತು ಉದಲ್ಗುರಿ ಪ್ರಾಂತ್ಯಗಳನ್ನು ಬೋಡೋಲ್ಯಾಂಡ್ ಪ್ರಾಂತ್ಯವೆಂದು ಕರೆಯಲಾಗುತ್ತದೆ. ಜನವರಿ 2020ರ ‘ಬೋಡೋ ಒಪ್ಪಂದ’ದ ತೀರ್ಮಾನಗಳ ಪ್ರಕಾರ..

  • ಪ್ರತ್ಯೇಕ ರಾಜ್ಯವೊಂದಕ್ಕೆ ನೀಡಲಾಗುವ ಬಹುಪಾಲು ಅಧಿಕಾರವನ್ನು ಸ್ವಾಯತ್ತ ಬೋಡೋಲ್ಯಾಂಡ್‍ಗೆ ನೀಡಲಾಗುತ್ತದೆ.
  • ಬಿಟಿಎಡಿ (ಬೋಡೋಲ್ಯಾಂಡ್ ಟೆರಿಟೋರಿಯಲ್ ಅಟೋನಾಮಸ್ ರೀಜನ್) ಆಗಿ ಬದಲಾದ ಬಿಟಿಸಿ (ಬೋಡೋಲ್ಯಾಂಡ್ ಟೆರಿಟೋರಿಯಲ್ ಕೌನ್ಸಿಲ್)ಗೆ ಹೆಚ್ಚಿನ ಆಡಳಿತಾತ್ಮಕ ಅಧಿಕಾರವನ್ನು ನೀಡಲಾಗುತ್ತದೆ.
  • ಶಿಕ್ಷಣ, ಅರಣ್ಯ, ತೋಟಗಾರಿಕೆ ಇನ್ನೂ ಮುಂತಾದ ಇಲಾಖೆಗಳು ಬಿಟಿಆರ್ ನಿಯಂತ್ರಣಕ್ಕೆ ಸೇರುತ್ತವೆ.
  • 1550 ಎನ್‍ಡಿಎಫ್‍ಬಿ ಬಂಡುಕೋರರು ಜನವರಿ 30ರಂದು ಶಸ್ತ್ರಾಸ್ತ್ರ ಸಮೇತ ಶರಣಾಗತಿ.
  • ಬಿ.ಟಿ.ಆರ್. ಸದಸ್ಯರ ಸಂಖ್ಯೆ 40-60ಕ್ಕೆ ಏರಿಕೆ ಈ ಪ್ರಾಂತ್ಯದ ವಿಧಾನಸಭಾ ಕ್ಷೇತ್ರದ 65% ಸ್ಥಾನಗಳನ್ನು ಹಾಗೂ ಲೋಕಸಭಾ ಕ್ಷೇತ್ರಗಳ ಎಲ್ಲಾ ಸ್ಥಾನಗಳನ್ನು ಬೋಡೋ ಸಮುದಾಯಗಳಿಗೆ ಮೀಸಲಾಗಿಡುವುದು.

‘ಭಾರತಕ್ಕೆ ಬಹಳ ವಿಶೇಷವಾದ ದಿನ’ ವೆಂದು ‘ಬೋಡೋ ಒಪ್ಪಂದ’ವಾದ ದಿನಕ್ಕೆ ಹೇಳಲಾಗುತ್ತಿದೆ. ಈ ಒಪ್ಪಂದದ ಸಫಲತೆಯು ಒಟ್ಟಾರೆಯಾಗಿ ಬೋಡೋ ಮತ್ತು ಅಸ್ಸಾಂ ಜನರ ನಡುವಿನ ಹೊಂದಾಣಿಕೆ, ಸೌಹಾರ್ದ, ರಾಷ್ಟ್ರೀಯತೆ ಮತ್ತು ಸಹನಶೀಲತೆಯ ಮೇಲೆ ಆಧಾರವಾಗಿದೆ. ಭವ್ಯ ಭವಿಷ್ಯಕ್ಕಾಗಿ ದೂರದೃಷ್ಟಿ ಮತ್ತು ಅವರ ಬದ್ಧತೆ ದೃಢವಾಗಿದ್ದರೆ, ಅಸ್ಸಾಂನ ಕಾನೂನು ಸುವ್ಯವಸ್ಥೆಯ ಸಮಸ್ಯೆಯು ಪರಿಹಾರವಾಗುವುದರಲ್ಲಿ ಸಂದೇಹವಿಲ್ಲ.

ಒಪ್ಪಂದದ ನಂತರ 1615 ಜನರು ಅಸ್ಸಾಂನ ಮುಖ್ಯಮಂತ್ರಿ ಸರ್ಬಾನಂದ ಸೋನೋವಾಲ್ ಮತ್ತು ವಿತ್ತ ಸಚಿವರ ಸಮ್ಮುಖದಲ್ಲಿ ಶರಣಾದರು. ತಮ್ಮೊಂದಿಗಿದ್ದ ಎಕೆ ರೈಫಲ್ಸ್, ಸ್ಟೆನ್ ಗನ್‍ಗಳು, ಲೈಟ್ ಮೆಷಿನ್ ಗನ್‍ಗಳು ಸೇರಿದಂತೆ 4,800ಕ್ಕೂ ಹೆಚ್ಚಿನ ಶಸ್ತ್ರಾಸ್ತ್ರಗಳನ್ನು ಸರ್ಕಾರಕ್ಕೆ ಒಪ್ಪಿಸಿದರು. ಶರಣಾದವರಿಗೆ ಅಸ್ಸಾಂನ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸುವ ಪ್ರಮಾಣವಚನ ಬೋಧಿಸಲಾಯಿತು.

ಒಪ್ಪಂದದ ನಿಬಂಧನೆ 6ರ ಜಾರಿಗಾಗಿ ಉನ್ನತ ಮಟ್ಟದ ಸಮಿತಿ ಹಾಗೂ ದೀರ್ಘ ಕಾಲದಿಂದ ಬಾಕಿ ಉಳಿದಿರುವ ಬೋಡೋಗಳ ಹಲವು ಬೇಡಿಕೆಗಳ ಈಡೇರಿಕೆಗೆ ಕೇಂದ್ರ ಸಂಪುಟವು ಸಭೆ ಸೇರಿ ಅನುಮೋದನೆ ನೀಡಿದೆ.

ಪ್ರಾದೇಶಿಕ ಶಾಂತಿಗಾಗಿ ಕೈಗೊಂಡ ಈ ಒಪ್ಪಂದದ ಪ್ರಕಾರ ಬೋಡೋ ಪ್ರದೇಶದಲ್ಲಿ ವಸ್ತು ಸಂಗ್ರಹಾಲಯ, ಭಾಷೆ ಮತ್ತು ಸಾಂಸ್ಕೃತಿಕ ಅಧ್ಯಯನ ಕೇಂದ್ರವು ಸ್ಥಾಪನೆಯಾಗಲಿದೆ. ಕ್ರೀಡಾ ವಿಶ್ವವಿದ್ಯಾಲಯ ಮತ್ತು ಉದ್ಯೋಗಾಧಾರಿತ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲಾಗುವುದು.

ಬೋಡೋ ಪ್ರಾಂತ್ಯದಲ್ಲಿ ಈಗಾಗಲೇ ಬೋಡೋ ಮತ್ತು ಮುಸ್ಲಿಮರ ನಡುವಿನ ಘರ್ಷಣೆಗಳಲ್ಲಿ ಸಾವಿರಾರು ಜನರು ಸಾವನ್ನಪ್ಪಿದ್ದಾರೆ. ಕಾನೂನಾತ್ಮಕ ಸುರಕ್ಷತೆ ಸದ್ಯದ ಪ್ರಾದೇಶಿಕ ಪ್ರಾಥಮಿಕ ಅಗತ್ಯಗಳಲ್ಲೊಂದಾಗಿದೆ. ಈ ಬಿಗಡಾಯಿಸಿರುವ ಪರಿಸ್ಥಿತಿಯಿಂದಾಗಿಯೇ ಲಕ್ಷದಷ್ಟು ಜನರು ತಮ್ಮ ನಿವಾಸ ಸ್ಥಳದಿಂದ ಸ್ಥಳಾಂತರಗೊಂಡಿದ್ದಾರೆ.

ಬೋಡೋ ಬಂಡುಕೋರರ ಸಂಘಟನೆಗಳ ನಾಯಕರು ಮ್ಯಾನ್ಮರ್ ಮತ್ತು ಬಾಂಗ್ಲಾ ದೇಶಗಳಲ್ಲಿ ಅವಿತು, ಅಲ್ಲಿಂದಲೇ ಹಣ ಸಂಗ್ರಹ ಮತ್ತು ಉಗ್ರಗಾಮಿಗಳ ನೇಮಕವನ್ನು ಮಾಡುತ್ತಿದ್ದರು. 1979ರಲ್ಲಿಯೇ ಅಸ್ಸಾಂನ ಸ್ಥಳೀಯ ತೀವ್ರವಾದಿ ನಾಯಕರು ಉಲ್ಫ (ಯುನೈಟೆಡ್ ಲಿಬರೇಷನ್ ಫ್ರಂಟ್ ಆಫ್ ಅಸ್ಸಾಂ) ಎಂಬ ಸಂಘಟನೆಯ ಮೂಲಕ ಶಸ್ತ್ರಾಸ್ತ್ರ ಹೋರಾಟವನ್ನು ಆರಂಭಿಸಿದ್ದರು. ನಂತರದ 2 ದಶಕಗಳಲ್ಲಿ ತಮ್ಮ ನಾಯಕರನ್ನು ಕಳೆದುಕೊಂಡ ಈ ಸಂಘಟನೆಗೆ ತೀವ್ರ ಹಿನ್ನಡೆಯಾಗಿದೆ.

ಪ್ರಸ್ತುತ 28% ಮಾತ್ರ ಇರುವ ಬೋಡೋಗಳಿಗೆ ಸಿಗುವ ಸೌಲಭ್ಯ-ಸವಲತ್ತುಗಳು 72% ರಷ್ಟಿರುವ ಬೋಡೋಯೇತರ ಸಮುದಾಯಗಳಲ್ಲಿ ಅಸಮಾಧಾನವನ್ನು ಈಗಾಗಲೇ ಸೃಷ್ಟಿಸಿದೆ. ಗುವಹಾಟಿಯಲ್ಲಿ ಡಿಸೆಂಬರ್ 2019ರಲ್ಲಿ ಭಾರತದ ಪ್ರಧಾನಮಂತ್ರಿಯು ಜಪಾನ್‍ನ ಪ್ರಧಾನಿ ಶಿನ್ ಅಬೆ ಜೊತೆಗಿನ ಒಪ್ಪಂದವೂ ಸಹ ಈ ಕಾರಣಗಳಿಗಾಗಿಯೇ ರದ್ದಾಗಿದೆ. ಜನವರಿ 2020ರಲ್ಲಿ ಉದ್ಘಾಟನೆಯಾಗಬೇಕಾಗಿದ್ದ ‘ಖೇಲೋ ಇಂಡಿಯಾ ಯೂತ್ ಗೇಮ್ಸ್’ ಸಹ ಮುಂದೂಡಲ್ಪಟ್ಟಿದೆ.

ಹಿಂದಿನ ಒಪ್ಪಂದಗಳ ಫಲಶ್ರುತಿ

ಭಾರತ ಸರ್ಕಾರವು ಬೊಡೋಗಳೊಂದಿಗೆ ತನ್ನ ಪ್ರಥಮ ಒಪ್ಪಂದವನ್ನು 1993ರಲ್ಲಿಯೇ ಕೈಗೊಂಡಿತ್ತು. ಎಬಿಎಸ್‍ಯು (ಆಲ್ ಬೋಡೋ ಸ್ಟುಡೆಂಟ್ಸ್ ಯೂನಿಯನ್) ಈ ಒಪ್ಪಂದಕ್ಕೆ ಬಾಧ್ಯವಾಗಿತ್ತು.  ಎರಡನೇ ಒಪ್ಪಂದವು 2003ರಲ್ಲಿ ಭಾರತ ಸರ್ಕಾರ ಮತ್ತು ಉಗ್ರಗಾಮಿ ಸಂಘಟನೆಯಾದ ಬಿಎಲ್‍ಟಿ (ಬೋಡೋ ಲಿಬರೇಶನ್ ಟೈಗರ್ಸ್) ಮಧ್ಯೆ ಕಾರ್ಯಗತಗೊಂಡು ಬಿಟಿಸಿ (ಬೋಡೋಲ್ಯಾಂಡ್ ಟೆರಿಟೋರಿಯಲ್ ಕೌನ್ಸಿಲ್) ಉದಯವಾಯಿತು. ನಂತರವೂ ಪ್ರಾದೇಶಿಕ ಅರಾಜಕತೆ ಮುಂದುವರೆದು ಪ್ರತ್ಯೇಕ ಬೋಡೋ ಟ್ರೈಬಲ್ಸ್ ಲ್ಯಾಂಡ್, ‘ಉದಯಾಚಲ್’ ಗಾಗಿ ಹೋರಾಟವಾಗತೊಡಗಿತ್ತು.

ಎಬಿಎಸ್‍ಯು ಮತ್ತು ಎನ್‍ಡಿಎಫ್‍ಬಿಗಳ ರಾಜಕೀಯ ಮಹಾತ್ವಾಕಾಂಕ್ಷೆಯು ಬೋಡೋಲ್ಯಾಂಡ್‍ನ್ನು ಕತ್ತಲಲ್ಲಿ ಮುಳುಗಿಸಿದೆ. ನಾಯಕರ ಬದ್ಧತೆ ಮತ್ತು ಯುವಜನರ ಸಾಂವಿಧಾನಿಕ ನಡೆಯು ಮೂರನೇ ಒಪ್ಪಂದವನ್ನು ಯಶಸ್ವಿಗೊಳಿಸಬಹುದು. ಒಪ್ಪಂದಕ್ಕೆ ನಿಷ್ಠರಾದರೆ, ಪ್ರತ್ಯೇಕವಾದವನ್ನು ಮರೆತರೆ, ಬೋಡೋ ಸಮುದಾಯದವರನ್ನು ಬಿಟಿಸಿಗೆ ಸೇರ್ಪಡೆ ಮಾಡಿ ಅಸ್ಸಾಂ ರಾಜ್ಯದ ಅಭಿವೃದ್ಧಿಗಾಗಿ ಸರಕಾರವು ಕೈಜೋಡಿಸುತ್ತದೆ. ಪ್ರತ್ಯೇಕತಾ ಹೋರಾಟದಲ್ಲಿ ಮೃತಪಟ್ಟ ಕುಟುಂಬಕ್ಕೆ 5 ಲಕ್ಷ ರೂಪಾಯಿಗಳ ಪರಿಹಾರ ದೊರಕುತ್ತದೆ. ಬಂಡುಕೋರರ ವಿರುದ್ಧ ದಾಖಲಾಗಿರುವ, ಗಂಭೀರವಲ್ಲದ ಕ್ರಿಮಿನಲ್ ಮೊಕದ್ದಮೆಗಳನ್ನು ಹಿಂಪಡೆದು, ಗಂಭೀರ ಪ್ರಕರಣಗಳಲ್ಲಿ, ಹಾಲಿ ಇರುವ ಕಾನೂನು, ನಿಯಮಗಳ ಅನ್ವಯ ಪರಿಶೀಲಿಸಲಾಗುವುದು.

ಒಟ್ಟಾರೆಯಾಗಿ ಬುದ್ಧ ಹುಟ್ಟಿದ ನಾಡಿನಲ್ಲಿ ಬೋಡೋಗಳಿಗೆ ಸಾಮ’ ಹಾಗೂ ‘ದಾನ’ ವಿಧಾನದಿಂದ ಭಾರತ ಸರ್ಕಾರವು ಶಾಂತಿ ಮಂತ್ರವನ್ನು ಪಠಿಸಿದೆ.

Leave a Reply

Your email address will not be published.