ಬ್ರೆಕ್ಟ್ ಪರಿಣಾಮ! ಒಂದು ರಾಜಕೀಯ ಕಾವ್ಯ

ಮಾತುಗಳಿಗೆ ಕಾವ್ಯದ ಲಯವಿದ್ದರೆ ಅಪಾಯವಲ್ಲ, ಕಾವ್ಯಗಳಿಗೆ ಮಾತುಗಳ ಪೋಷಾಕು ಬಿದ್ದರೆ ಕಾವ್ಯದ ದೃಷ್ಟಿಯಿಂದ ಅಪಾಯ.

ರಾಜಕೀಯ ಕಾವ್ಯಗಳು ಅತ್ಯಂತ ಸಂಕೀರ್ಣವಾದವು. ಆ ಬಗೆಯ ಕಾವ್ಯಗಳನ್ನು ಬರೆಯುವ ಕವಿಯನ್ನು ಯಾವುದೋ ಒಂದು ನಿರ್ದಿಷ್ಟವಾದ ಸಿದ್ಧಾಂತ ಅಥವಾ ರಾಜಕೀಯ ಪಕ್ಷಗಳ ಧೋರಣೆಯನ್ನು ಪ್ರತಿನಿಧಿಸುವ ಮುಂಚೂಣಿ ನಾಯಕನಂತೆ ನೋಡುವ ಅಪಾಯವೇ ಹೆಚ್ಚು. ರಾಜಕೀಯ ಕಾವ್ಯಗಳನ್ನು ಮತ್ತೊಂದು ತೆರನಾದ ದೃಷ್ಟಿಕೋನದಿಂದ ನೋಡುವುದು ಸಾಧ್ಯವಾದರೆ, ಆ ಎಲ್ಲಾ ಕಾವ್ಯಗಳು ನಿರ್ದಿಷ್ಟ ಕಾಲಮಾನದ ರಾಜಕೀಯ ದೋಷಗಳನ್ನು ವಿರೋಧಿಸಿ ರಚಿತವಾಗುವ ಕಾವ್ಯಗಳ ಪರಿಮಿತಿಗೊಳಗೆ ಸಿಲುಕಿರುತ್ತವೆ. ಆ ಬಗೆಯ ಕಾವ್ಯಗಳು ಸಾರ್ವಕಾಲಿಕತೆಯನ್ನು ಪಡೆದುಕೊಳ್ಳಲು ಸೋಲುವಂತೆ, ಅದ್ಭುತ ಕಾವ್ಯಗಳು ಎನ್ನುವ ಉದ್ಗಾರವನ್ನು ಸೃಷ್ಟಿಸಿದಷ್ಟೇ ವೇಗವಾಗಿ ಕಾಲದೊಳಗೆ ಅಪ್ರಸ್ತುತವಾಗಿಬಿಡುತ್ತವೆ. ಅದೊಂದು ಅಪಾಯ.

ಇದೇ ಕಾರಣಕ್ಕೆ ಜರ್ಮನ್‍ನ ದಾರ್ಶನಿಕ ಕವಿ ರೈನರ್ ಮಾರಿಯಾ ರಿಲ್ಕ್, ತನ್ನ ವಿದ್ಯಾರ್ಥಿಮಿತ್ರ, ಕಾಪ್ಪಸ್‍ಗೆ ರಾಜಕೀಯ ಕಾವ್ಯಗಳನ್ನು ರಚಿಸುವ ಕವಿ ವರ್ತಮಾನದ ವ್ಯವಸ್ಥೆ ರೂಪುಗೊಂಡಿದ್ದರ ಹಿನ್ನಲೆ ಮತ್ತು ಇದೇ ಹಾದಿಯಲ್ಲಿ ಸಾಗುವ ಬದುಕು ಭವಿಷ್ಯತ್‍ನಲ್ಲಿ ತಲುಪುವ ಗಮ್ಯ ಎಷ್ಟು ವಿರೂಪವಾಗಿರುತ್ತದೆ ಎನ್ನುವುದರ ಕಾಳಜಿ, ಈ ಎರಡು ಅಂಶಗಳನ್ನು ಗಮನಿಸುತ್ತಿರಬೇಕು ಮತ್ತು ಅದೊಂದು ನಿರಂತರ ಪ್ರಕ್ರಿಯೆ ಎನ್ನುವುದನ್ನು ಆಂತರ್ಯದಲ್ಲಿ ಒಪ್ಪಿಕೊಂಡಿರಬೇಕು ಎಂದು ಎಚ್ಚರಿಸಿದ್ದನು. ಹಾಗೆಂದಮಾತ್ರಕ್ಕೆ ಬರೆಯುವ ಎಲ್ಲಾ ಕಾವ್ಯಗಳು ಸಾರ್ವಕಾಲಿಕವಾಗಿ ಉಳಿದುಕೊಳ್ಳಬೇಕು ಎನ್ನುವ ಇಚ್ಛೆಯನ್ನು ಒಳಗಿಟ್ಟುಕೊಂಡೇ ಕಾವ್ಯವನ್ನು ರಚಿಸುವುದು ಕೂಡ ಮತ್ತೊಂದು ರೀತಿಯ ಅಪಾಯ. ವ್ಯವಸ್ಥೆಯ ಆರೋಗ್ಯ ಹದಗೆಡುತ್ತಿದೆ ಎನ್ನುವ ಸುಳಿವು ದೊರೆಯುತ್ತಿದಂತೆ ತನ್ನ ಕಾವ್ಯಮಾರ್ಗದ ಮೂಲಕ ಪ್ರತಿಕ್ರಿಯಿಸುವುದು ಕವಿಯ ಜವಾಬ್ದಾರಿ ಮತ್ತು ಹಾಗೆ ಪ್ರತಿಕ್ರಿಯಿಸುವವನು ಮಾತ್ರ ಓರ್ವ ಜವಾಬ್ದಾರಿಯುತ ಕವಿ.

ಈ ನಿಟ್ಟಿನಲ್ಲಿ ನೋಡುವುದಾದರೆ ಗೆಳೆಯ, ಕವಿ, ರಾಜೇಂದ್ರ ಪ್ರಸಾದ್ ತಮ್ಮ “ಬ್ರೆಕ್ಟ್ ಪರಿಣಾಮ” ಕವನ ಸಂಕಲನದ ಮೂಲಕ ವರ್ತಮಾನದ ಭಾರತದ ಸ್ಥಿತಿಗೆ ಪ್ರಜೆಯಾಗಿ ಎದುರಿಸುತ್ತ, ಕವಿಯಾಗಿ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸಿದ್ದಾರೆ ಮತ್ತು ಈ ಕವಿತೆಗಳು ಸದ್ಯದ ತುರ್ತು ಹೌದು. ಜತೆಯಾಗಿ ಹೆಜ್ಜೆ ಹಾಕಬೇಕಾಗಿರುವ ಮನುಷ್ಯನ ಪ್ರಜ್ಞೆ ಹಾಗೂ ಪರಿಸರ ಈ ಎರಡು ವಿರುದ್ಧ ದಿಕ್ಕಿನಲ್ಲಿ ಚಲಿಸುವಾಗ ಸಮಾಜದಲ್ಲಿ ವೈಪರೀತ್ಯಗಳು ತಲೆದೋರುತ್ತವೆ ಎನ್ನುವ ನಂಬಿಕೆಯನ್ನು ತನ್ನ ಬದುಕು ಹಾಗೂ ಬರವಣಿಗೆಯ ಮೂಲಕ ತೋರಿದ ಕವಿ, ನಾಟಕಕಾರ ಬರ್ಟೋಲ್ಟ್ ಬ್ರೆಕ್ಟ್ ನ ಪರಿಣಾಮ ರಾಜೇಂದ್ರ ಪ್ರಸಾದ್‍ರ ಈ ಸಂಕಲನದ ಬಹುತೇಕ ಕವಿತೆಗಳಲ್ಲಿ ನಿಚ್ಚಳವಾಗಿ ಕಾಣುತ್ತದೆ.

ಇಲ್ಲಿನ ಬಹುತೇಕ ಕವಿತೆಗಳಲ್ಲಿ ರಾಜೇಂದ್ರ ಪ್ರಸಾದ್ ದುರಿತಕಾಲ ಎನ್ನುವ ಪದಗುಚ್ಛವನ್ನ ಬಳಸುತ್ತಾರೆ. ಬ್ರೆಕ್ಟ್ ಪರಿಣಾಮ ಕವನ ಸಂಕಲನದಲ್ಲಿ ಕಾಣಿಸಿಕೊಂಡಿರುವಂತೆ ಅವರ ಹಿಂದಿನ ಬಹುತೇಕ ಕವಿತೆಗಳು ಹಾಗೂ ಕೆಲವು ಗದ್ಯಗಳಲ್ಲೂ ಅದೊಂದು ಪದ ಹೆಚ್ಚು ಎನ್ನುವಂತೆ ಕಾಣಿಸಿಕೊಂಡಿದೆ. ಹಾಗಾದರೆ ಅದೊಂದು ಪದದ ಸ್ಥೂಲವಾದ ಅರ್ಥ ಏನು? ಈಗ ಅದೊಂದು ಪದವನ್ನು ಮುಂದಿಟ್ಟುಕೊಂಡು ಒಂದಿಷ್ಟು ಸೂಕ್ಷ್ಮವಾಗಿ ಗಮನಿಸುತ್ತ ರಾಜೇಂದ್ರ ಪ್ರಸಾದ್ ಓರ್ವ ಕವಿಯಾಗಿ ಯೋಚಿಸುತ್ತಿರುವುದು ಏನು ಎನ್ನುವುದನ್ನು ಅವಲೋಕಿಸುವುದು ಸಾಧ್ಯವಾಗುತ್ತದೆ. ಅವರ ಬಹುತೇಕ ಕಾವ್ಯಗಳಲ್ಲಿ ಅದೊಂದು ಪದ ಹೀಗೆ ಪುನಾರವರ್ತನೆಯಾಗುವುದಕ್ಕೆ ಕಾರಣ ಏನೆನ್ನುವುದಕ್ಕೆ ಉತ್ತರ ದೊರೆಯುತ್ತದೆ. ಇದೊಂದು ಪ್ರಶ್ನೆಗೆ ಇವರ “ಬ್ರೆಕ್ಟ್ ಪರಿಣಾಮ” ಸಂಕಲನದ ಕವಿತೆಗಳೇ ಉತ್ತರಗಳಾಗುತ್ತವೆ.

ಭಾರತದ ಉಸಿರಾಟವಾಗಿರುವ ಬಹುತ್ವದ ಸಂಸ್ಕತಿಯನ್ನು ಸದ್ಯ ಎರವಲು ಸಂಸ್ಕತಿ ಎನ್ನುವ ಧೋರಣೆಯೊಂದು ಕ್ರಮೇಣವಾಗಿ ದೇಶದೊಳಗೆ ಉಲ್ಬಣಗೊಳ್ಳುತ್ತಿದೆ. ಶತಮಾನಗಳ ಹೋರಾಟದ ಮೂಲಕ ಮಣಿಸಿದ ಮೂಲಭೂತ ಜೀವನೈಲಿ ಎನ್ನುವ ಪೆಡಂಭೂತವನ್ನ ಇದೀಗ ರಾಜಕೀಯದ ಸ್ಥಿತ್ಯಂತರದ ಮೂಲಕ ಪುನರ್ ನಿರ್ಮಾಣ ಮಾಡುವ ಕೆಲಸಗಳು ಸದ್ದಿಲ್ಲದೇ ನಡೆಯುತ್ತಿವೆ. ರಾಷ್ಟ್ರೀಯತೆ ಎನ್ನುವ ಬಹುತ್ವದ ಪರಿಕಲ್ಪನೆ ಕೂಡ ಅಪಭ್ರಂಶವಾಗುತ್ತಿರುವ ಈ ಹೊತ್ತಿನಲ್ಲಿ ರಮ್ಯಕಾವ್ಯಗಳನ್ನು ರಚಿಸುತ್ತಾ ಮೈಮರೆಯುವುದು ಅಸಲಿ ಕವಿತೆ ಸಾಧ್ಯವಾಗುವುದಲ್ಲ. ಇನ್ನು ಇಂತಹ ಸ್ಥಿತಿಯಲ್ಲಿ ಕವಿಯಾದವನು ವ್ಯಂಗ್ಯ, ವಿಡಂಬನೆಗಳಿಲ್ಲದೆ ಹೇಳುವ ಯಾವ ಮಾತುಗಳು ಪ್ರಮಾಣಿಕವಾಗಿರುವುದು ಸಾಧ್ಯವಿಲ್ಲ. ಈ ಹೊತ್ತಿನಲ್ಲಿ ಬೌದ್ಧಿಕ ನಿದ್ರಾವಸ್ಥೆಯಲ್ಲಿರುವವರನ್ನು ಅಪಾಯದಿಂದ ಪಾರುಮಾಡುವುದು ಕೂಡ ರಮ್ಯಕಾವ್ಯಗಳಿಗೆ ಅಸಾಧ್ಯ.

ಈ ಮಾತುಗಳನ್ನೇ ಚಿಲಿಯ ಜನಪ್ರಿಯ ಕವಿ ಪಾಬ್ಲೋ ನೆರೂಡ

ರಸ್ತೆಯಲ್ಲಿ ರಕ್ತ ಚೆಲ್ಲಿರುವಾಗ

ಪ್ರೇಮ ಕವಿತೆಗಳನ್ನು ಹೇಗೆ ರಚಿಸಲಿ...

ಎಂದು ಪ್ರಶ್ನಿಸಿದ್ದರು.

ಕಾವ್ಯಗಳ ನಿಜವಾದ ಸಾರ್ಥಕತೆ ಕವಿತೆಗಳನ್ನು ಮುಖಕ್ಕೆ ರಾಚುವುಂತೆ ಹೇಳುವುದರಿಂದ ಸಾಧ್ಯವಾಗುವುದಿಲ್ಲ, ಬದಲಿಗೆ ಅಸ್ಖಲಿತವಾದ ಪ್ರತಿಮೆಗಳನ್ನು ಅವಲಂಬಿಸಿ ಓದುಗನ ಕವಾಟಕ್ಕೆ ಸತ್ಯವನ್ನು ಪಿಸುನುಡಿಯುವುದರ ಮೂಲಕ ಸಾಧ್ಯವಾಗುತ್ತದೆ. ಅಪಕ್ವ ಅನುಭವಗಳ ಕವಿತೆಗಳಿಂದ ಕಾವ್ಯಮಾರ್ಗವೇ ಜಾಳಾಗುತ್ತಿರುವ ಈ ಹೊತ್ತಿನಲ್ಲಿ ತೀವ್ರವಾದ ಭಾವನೆಗಳಿಗೆ ಒಡ್ಡಿಕೊಂಡು ಬರೆಯುವ ಧೈರ್ಯ ಮುಖ್ಯವಾಗುತ್ತದೆ.

ಇನ್ನು ರಾಜೇಂದ್ರ ಪ್ರಸಾದರ ಈ ಸಂಕಲನದ ಬಗ್ಗೆ ಬಹುಮುಖ್ಯವಾಗಿ ಹೇಳಬೇಕಾಗಿರುವ ಕೆಲವು ಮಾತುಗಳಿವೆ. ಆ ಮಾತುಗಳು ಈ ಸಂಕಲನದ ವೈಶಿಷ್ಟ್ಯಗಳನ್ನು ಬಿಂಬಿಸಲು ಸಾಧ್ಯವಾಗುತ್ತದೆ ಎನ್ನುವುದು ನನ್ನ ನಂಬಿಕೆ. ಇಲ್ಲಿನ ಕವಿತೆಗಳ ವಸ್ತುಗಳು ಬಹಳ ಸೋಜಿಗ ವಾದವು. ಬಹುತ್ವದ ಪರಿಕಲ್ಪನೆಯನ್ನು ಹಿಂಬಾಗಲಿನಿಂದ ಧಿಕ್ಕರಿಸುತ್ತಿರುವ ಸರ್ಕಾರದ ಹುಸಿಮಾತುಗಳನ್ನು ಮತ್ತು ಅಪಾಯಕಾರಿ ಯಾದ ನಡೆಗಳನ್ನು ವಿರೋಧಿಸುವ ಗುಣಗಳೇ ಇಲ್ಲಿನ ಕವಿತೆಗಳ ಪ್ರಮುಖ ವಸ್ತು. ಆದರೆ ಆ ಯಾವ ಕವಿತೆಗಳು ಒಂದು ವರದಿಯಂತೆ ಅಥವಾ ಕೇವಲ ಘಟನೆಗಳನ್ನು ಹಸಿಹಸಿಯಾಗಿ ಮಂಡಿಸುವ ಹುಸಿಕಾವ್ಯವಾಗದೆ ನಿರ್ಲಿಪ್ತ ಸ್ಥಿತಿಯಲ್ಲಿ ಎಲ್ಲವನ್ನೂ ಮುಕ್ತವಾಗಿ ವಿವವರಿಸುವ ತಾಳ್ಮೆತೋರುವುದು ಇಲ್ಲಿನ ಕವಿತೆಗಳ ಹೆಚ್ಚುಗಾರಿಕೆ.

ಗ್ರಾಂಥಿಕ ಭಾಷೆಯನ್ನು ಕೂಡ ಸಮರ್ಥವಾಗಿ ಮತ್ತು ಉದ್ದೇಶವೊಂದನ್ನು ಪೂರ್ಣಗೊಳಿಸಿಕೊಳ್ಳುವುದಕ್ಕೆ ಸಾಧನವಾಗಿ ಬಳಸಿಕೊಳ್ಳುತ್ತಲೇ ಒಂದು ಕವಿತೆಯಿಂದ ಮತ್ತೊಂದು ಕವಿತೆಗೆ ನಿಖರ ಅರ್ಥಗಳನ್ನು ಹೊಮ್ಮಿಸುತ್ತ ಸಾಗುವುದನ್ನು ಈ ಸಂಕಲನದ ಸಾರ್ಥಕತೆ ಎಂದು ಪರಿಗಣಿಸಬಹುದು. ನಿರ್ದಿಷ್ಟವಾದ ವಿಚಾರಗಳನ್ನು ಕಾವ್ಯಕ್ಕಿಳಿಸುವಾಗ ಸಾಲುಗಳು ಕಾವ್ಯದ ಲಯವನ್ನು ಕಳೆದುಕೊಂಡು ವಾಚ್ಯಗೊಳ್ಳಬಹುದು. ಹೀಗೆ ವಾಚ್ಯಗೊಂಡ ಸಾಲು ಕವಿತೆಯ ಜೀವಂತಿಕೆಗೂ ಮಾರಕವಾಗಿಬಿಡುತ್ತವೆ, ಕವಿತೆಯನ್ನು ಸಂಪೂರ್ಣವಾಗಿ ಕವಿತೆಯನ್ನೇ ಸಂಪೂರ್ಣವಾಗಿ ಸಂಕುಚಿತಗೊಳಿಸಿಬಿಡುತ್ತವೆ. ಇಂತಹ ಸಮಯದಲ್ಲಿ ಅನುಭವದ ಪ್ರಾಮಾಣಿಕತೆಗೆ ಮಾರಕವಾಗುವ ಮಾತಿನ ಆಡಂಬರವನ್ನು ಪ್ರತ್ಯೇಕಿಸಿ ನೋಡುವಂತೆ ತೀರಾ ಅಗತ್ಯವಿದ್ದಲ್ಲಿ ನೇರವಾಗಿ ಅಭಿವ್ಯಕ್ತಿಸುವ ಮಾತುಗಳನ್ನೂ ವಿಗಂಡಿಸಿ ನೋಡಬೇಕಾಗುತ್ತದೆ. ಇದು ಬಹುಮುಖ್ಯ ಪ್ರಕ್ರಿಯೆ.

ಕವಿಯ ಧೋರಣೆ ಕಾವ್ಯಗಳಲ್ಲಿ ಪ್ರತಿಬಿಂಬಿತವಾಗುವುದು ಅಸಾಧ್ಯವಾದರೆ ಕವಿತೆಗಳು ದುರ್ಬಲಗೊಳ್ಳುತ್ತವೆ. ನಮ್ಮ ತೀವ್ರಭಾವನೆ, ಸಂಕೋಚ, ಭಾವಾತಿರೇಕಗಳು ಕೇವಲ ಭಾಷೆಯಲ್ಲಿ ವ್ಯಕ್ತವಾಗಿ ಕಾವ್ಯವಾಗುವುದರಲ್ಲಿ ಸೋಲುಕಾಣುತ್ತವೆ. ಅದು ಕಾಲುಹಾದಿಯ ಪ್ರಯಾಣಕ್ಕೆ ರಥವನ್ನು ಸಿದ್ಧಗೊಳಿಸಿದಷ್ಟೇ ಆಭಾಸವನ್ನು ಉಂಟುಮಾಡಬಹುದು. ಹೀಗಾಗಿ ರಾಜಕೀಯದಂತಹ ಸಂಕೀರ್ಣ ವಿಚಾರಗಳನ್ನು ಕಾವ್ಯಗಳ ಮೂಲಕ ಮಾತನಾಡುವಾಗ ಜಾಗೃತವಾಗಿರಬೇಕು. ಆದರೆ ಇಂತಹ ಅದೆಷ್ಟೋ ಪರಿಧಿಗಳನ್ನು ರಾಜೇಂದ್ರ ಪ್ರಸಾದ್ ಅಪ್ರಜ್ಞಾಪೂರ್ವವಾಗಿ ಸಾಧಿಸಿದ್ದಾರೆ ಎನ್ನುವುದನ್ನು ಒಪ್ಪಿಕೊಳ್ಳುತ್ತಲೇ ಈ ಸಂಕಲನದ ಕವಿತೆಗಳ ಒಂದಿಷ್ಟು ಮಿತಿಗಳನ್ನೂ ನೋಡಬೇಕಾಗುತ್ತದೆ.

ಕಾವ್ಯವಾಗುವ ಮೊದಲಿನ ಕವಿಯೊಳಗೆ ಗೂಡುಕಟ್ಟಿದ್ದ ವಿಚಾರಗಳ ಒಳಾರ್ಥಗಳು ಎಲ್ಲವನ್ನೂ ಕಳಚಿ ನಿರ್ವಾಣಗೊಳ್ಳುವ ಸ್ಥಿತಿಗೆ ತೆರದುಕೊಳ್ಳುವುದು ಸಾಧ್ಯವಾಗದೇ ಹೋಗಬಹುದು.

ಮೌನದ ಅಗತ್ಯವೇ ಇಲ್ಲ ಎನ್ನುವ ಸ್ಥಳಗಳಲ್ಲಿ ಮಾತ್ರ ಕವಿ ಮಾತುಗಳನ್ನು ಬಳಸುತ್ತಾನೆ. ಮಂತ್ರ ಶಕ್ತಿಯನ್ನು ಪಡೆದ ದಿವ್ಯಸ್ಥಿತಿಯಲ್ಲಿ ಮಾತುಗಳು ಕೂಡ ಮೌನವನ್ನೇ ಹೋಲುತ್ತವೆ. ಇದು ಸೋಜಿಗವೂ ಹೌದು ವಿಪರ್ಯಾಸವೂ ಹೌದು. ಆದರೆ ಜಾನಪದೀಯ ಮತ್ತು ವಚನ ಶೈಲಿಯ ರಚಿತಗುಣಗಳನ್ನು ನೆಚ್ಚಿಕೊಂಡಿರುವ ರಾಜೇಂದ್ರಪ್ರಸಾದ್ ಮಾತಿನ ಧಾಟಿಯನ್ನೇ ಕಾವ್ಯಗಳಲ್ಲೂ ಹೆಚ್ಚಾಗಿ ಬಳಸುವುದು ಕಾವ್ಯದ ಓಘಕ್ಕೆ ತಡೆಯಾಗುತ್ತದೆ ಎನ್ನುವ ಎಚ್ಚರವನ್ನ ವಹಿಸಬೇಕಾಗುತ್ತದೆ. ಮಾತುಗಳಿಗೆ ಕಾವ್ಯದ ಲಯವಿದ್ದರೆ ಅಪಾಯವಲ್ಲ, ಕಾವ್ಯಗಳಿಗೆ ಮಾತುಗಳ ಪೋಷಾಕು ಬಿದ್ದರೆ ಕಾವ್ಯದ ದೃಷ್ಟಿಯಿಂದ ಅಪಾಯ.

ಅಂತಹ ಗುಣಗಳನ್ನು ಹೆಚ್ಚಾಗಿ ಹೊಂದಿರುವ ಕವಿತೆಗಳು ಕೇವಲ ಹೇಳಿಕೆ ಅಥವಾ ಒಬ್ಬರ ವಿರುದ್ಧ ದೂರು ದಾಖಲಿಸುವಾಗಿನ ಸ್ಥಿತಿಯ ಚೌಕಟ್ಟಿನೊಳಗೆ ಮುರುಟಿಹೋಗುತ್ತವೆ. ಕಾವ್ಯವಾಗುವ ಮೊದಲಿನ ಕವಿಯೊಳಗೆ ಗೂಡುಕಟ್ಟಿದ್ದ ವಿಚಾರಗಳ ಒಳಾರ್ಥಗಳು ಎಲ್ಲವನ್ನೂ ಕಳಚಿ ನಿರ್ವಾಣಗೊಳ್ಳುವ ಸ್ಥಿತಿಗೆ ತೆರದುಕೊಳ್ಳುವುದು ಸಾಧ್ಯವಾಗದೇ ಹೋಗಬಹುದು. ಕವಿಗೆ ಇದೊಂದು ಎಚ್ಚರ. ಕವಿಯಾದವನು ಮಾತಿನಿಂದಲೇ ಎಲ್ಲವನ್ನೂ ಹೇಳಬಹುದು ಎನ್ನುವ ಭರವಸೆಯನ್ನು ಆದಷ್ಟೂ ಕಳೆದುಕೊಳ್ಳುವುದು ಒಳ್ಳೆಯದು. ಅಂತಹ ಕಾವ್ಯಗಳು ಮಾತ್ರ ಕಾಲಕ್ಕೂ ಅತೀತವಾಗಿರುತ್ತವೆ.

ಆದರೆ ಕಾವ್ಯಗಳ ಒಳಮಾತುಗಳನ್ನು ಇಲ್ಲಿನ ಕವಿತೆಗಳಿಗೆ ಅನ್ವಯಿಸುತ್ತಲೇ, ಮಾತುಗಳು ಹೇರಳವಾಗಿ ಚಿಂತನೆಗಳು ಕುಬ್ಜವಾಗುತ್ತಿರುವ ಈ ಹೊತ್ತಿನಲ್ಲಿಯೂ ನೆಚ್ಚಿಕೊಂಡಿರುವ ಕಾವ್ಯಮಾರ್ಗದ ಮೂಲಕವೇ ಪ್ರತಿಕ್ರಿಯಿಸಿರುವುದು ದೊಡ್ಡದು. ಇಲ್ಲಿನ ಕವಿತೆಗಳು ನಾಳೆಯೇ ಅಪ್ರಸ್ತುತವಾಗಬಹುದು. ಆದರೆ ಕಾವ್ಯದ ಮೂಲಕ ತನ್ನ ದುಃಖ ಹಾಗೂ ಕಾಳಜಿಯನ್ನು ತೆರೆದಿಟ್ಟಿದ್ದು ಬಹುಮುಖ್ಯ ನಡೆ. ಕಡೆಯದಾಗಿ:

ಎಲ್ಲವೂ ಆಯಿತು

ಒಳ್ಳೆಯವರು ಕೊಲ್ಲಲು ನಿಂತಾಗ

ಲೋಕ ತಾನೇ ಕಣ್ಣುಮುಚ್ಚಿಕೊಂಡಿತು

ಅರರೇ! ಸಾಕ್ಷ್ಯಕ್ಕೇ ಯಾರೂ

ಬರದಾಗಿ ನ್ಯಾಯದ ಕಟಕಟೆಯಲ್ಲಿ

ಕವಿತೆಯೇ ಬಂದು ನಿಂತಿತು

ಇಂತಹದೊಂದು ಕವಿತೆಯನ್ನು ನೀಡಿದಕ್ಕೆ ಆ ಮೂಲಕ ನಮ್ಮನ್ನು ಎಚ್ಚರಿಸಿದಕ್ಕೆ ಗೆಳೆಯ, ಕವಿ ರಾಜೇಂದ್ರ ಪ್ರಸಾದ್‍ರನ್ನು ನಾನು ಅಭಿನಂದಿಸುತ್ತೇನೆ.

Leave a Reply

Your email address will not be published.