ಬ್ಲ್ಯಾಕ್  ಪಂಗಸ್ ಜನ್ಮ ತಾಳಿದ್ದು ಹೇಗೆ?

ಕರೋನಾ ವೈರಸ್ ಪೀಡಿತರಿಗೆ ಬ್ಲ್ಯಾಕ್ ಪಂಗಸ್ ಬಾಧಿಸತೊಡಗಿತು. ಜೊತೆಗೆ ವೈಟ್, ಯಲ್ಲೊ ಪಂಗಸ್ ಹೆಸರುಗಳು ಸೇರಿಕೊಂಡವು. ಈ ಪಂಗಸ್ ಗಳಿಗೆ ಅತಿಯಾದ ಸ್ಟಿರೈಡ ಬಳಕೆ ಕಾರಣ ಎಂದು ವೈದ್ಯಲೋಕ ಹೇಳಿತು. ಆದರೆ ಪಂಗಸ್ ಗೆ ಇನ್ನೂ ಹಲವು ಕಾರಣಗಳಿವೆ. ಅವುಗಳಲ್ಲಿ ಮುಖ್ಯವಾಗಿ:

ಹಾಸ್ಪಿಟಲ್ ಇನ್ ಪೆಕ್ಷನ್, ಬೆಡ್‍ಗಳ ಅಶುಚಿತ್ವ, ಇಂಡಸ್ಟ್ರಿಯಲ್ ಆಕ್ಸಿಜನ್ ಸಿಲೆಂಡರ್ ಬಳಕೆ, ಆಕ್ಸಿಜನ್ ಮಾಸ್ಕ್‍ನ ಅಶುಚಿತ್ವ, ಯುಮಿಡಿಪಯರ್ ಗೆ ಡಿಸ್ಟಿಲ್ ವಾಟರ್ ಬದಲಿಗೆ ಸಾಧಾರಣ ನೀರಿನ ಬಳಕೆ, ವಾಟರ್ ಕೂಲರ ಬಳಕೆ, ಐ.ಸಿ.ಯು.ನ ಅಸ್ವಚ್ಛತೆ, ಮಾಸ್ಕನ ಮರು ಬಳಕೆ, ಕೈ ವಸ್ತ್ರಗಳ,ಟವಲ್ ಗಳ ಮರು ಬಳಕೆ… ಹೀಗೆ ಪಟ್ಟಿ ಮಾಡುತ್ತಾ ಹೋಗಬಹುದು.

ಕೋವಿಡ್ ವೈರಸ್ ರೂಪಾಂತರ ಗೊಂಡಿರುವುದರಿಂದ ಸ್ಯಾನಿಟೈಜರ್ ಬದಲಿಗೆ ಪರ್ಯಾಯ ದ್ರಾವಣವನ್ನು ಬಳಸಿ ಸ್ವಚ್ಚತೆ ಕಾಪಾಡಿಕೊಳ್ಳಬೇಕಾದ ಅವಶ್ಯಕತೆಯಿದೆ. ಪ್ರತಿದಿನ ಬೆಡ್ ಹಾಗೂ ತಲೆದಿಂಬುಗಳ ಹೊದಿಕೆಗಳ ತ್ವರಿತ ಬದಲಾವಣೆ, ಪ್ಲಾಸ್ಟಿಕ್ ಅಥವಾ ರೆಗ್ಜಿನ್ ಹೊದಿಕೆಗಳಿರುವ ಬೆಡ್, ತಲೆ ದಿಂಬುಗಳನ್ನು ಡೆಟಾಲ್ ಲಿಕ್ವಿಡ್ ಅಥವಾ ಸುರಕ್ಷಿತ ಆಲ್ಕೋಹಾಲ್ ಮಿಶ್ರಿತ ಲಿಕ್ವಿಡ್ ಗಳಿಂದ ಸ್ವಚ್ಚಗೊಳಿಸಬೇಕು. ಇದೇ ರೀತಿ ಚಿಕಿತ್ಸೆಗೆ ಬಳಸುವ ಎಲ್ಲಾ ಉಪಕರಣಗಳನ್ನು ನಿಗದಿಪಡಿಸಿದ ದ್ರಾವಣಗಳಿಂದ ಸ್ವಚ್ಚಗೊಳಿಸಬೇಕು.

ತಪ್ಪು ತಪ್ಪಾದ ಚಿಕಿತ್ಸೆ, ಅನವಶ್ಯಕ ಆಂಟಿಬಯೋಟಿಕ್ ಬಳಕೆ, ನಕಲಿ ವೈದ್ಯರ ಮತ್ತು ಅನಧಿಕೃತ ವೈದ್ಯರ ಬಳಿ ಚಿಕಿತ್ಸೆ ಪಡೆಯುವುದು, ಎಲ್ಲೆಂದರಲ್ಲಿ, ಹೇಗೆಂದರೆ ಹಾಗೆ ಶುಚಿತ್ವ ಇಲ್ಲದ ಕಡೆ ರೋಗಿಗಳಿಗೆ ಚಿಕಿತ್ಸೆ ಕೊಡುವುದು ಬ್ಲ್ಯಾಕ್ ಪಂಗಸ್ ಗೆ ಮೂಲ ಕಾರಣ. ಆದರೆ ವೈದ್ಯಲೋಕ ಇಂತಹ ಸಂಗತಿಗಳನ್ನು ಮರೆಮಾಚುತ್ತಿರುವುದು ಸರಿಯಾದದ್ದಲ್ಲ.

ಬರೀ ಸ್ಯಾನಿಟೈಜರ ಮಾತ್ರ ಬಳಸುವುದಕ್ಕಿಂತ ನೀಲಗಿರಿ, ಬೇವಿನ ಎಣ್ಣೆ, ಕರ್ಪೂರ, ನಿಂಬು, ಎಲೋವಿರಾ ಮುಂತಾದ ಅಂಶಗಳನ್ನು ಸೇರಿಸಿ ತಯಾರಿಸಿದ ದ್ರಾವಣಗಳ ಬಳಕೆ ಉತ್ತಮ. ಚಿಕಿತ್ಸೆಯ ಸಮಯದಲ್ಲಿ ಮತ್ತು ಚಿಕಿತ್ಸೆಯ ನಂತರ ಸ್ವಚ್ಚತೆ ಕಾಪಾಡಿಕೊಳ್ಳುವುದು ಹಾಗೂ ನಿಗದಿತ ಸಮಯಕ್ಕೆ ವೈದ್ಯರನ್ನು ಸಂಪರ್ಕಿಸುವುದು ಬಹಳ ಮುಖ್ಯ. ಕರೋನಾ ಚಿಕಿತ್ಸೆಯ ನಂತರ ವೈದ್ಯರು ಸೂಚಿಸಿದ ಔಷಧಗಳನ್ನು ತಪ್ಪದೆ ಸೇವಿಸುವುದು, ಅವರ ಸಲಹೆಯಂತೆ ವಿಶ್ರಾಂತಿ ಪಡೆಯುವುದು, ಹಸಿ ತರಕಾರಿ, ಹಣ್ಣುಗಳ ಸೇವನೆ ಮಾಡುವುದು ಅವಶ್ಯ.

ದೈಹಿಕ ವಿಶ್ರಾಂತಿಯ ಜೊತೆಗೆ, ಲಘು ವ್ಯಾಯಾಮ, ಮಾನಸಿಕ ನೆಮ್ಮದಿ ಕೊಡುವ ಚಟುವಟಿಕೆಗಳನ್ನು ಅಳವಡಿಸಿಕೊಳ್ಳಬೇಕು. ಆಸ್ಪತ್ರೆಗಳಿಗೆ ಅಲೆದಾಡುವ ಗೀಳು ಹಚ್ಚಿಕೊಳ್ಳದೆ, ಅವಶ್ಯವೆನಿಸಿದಲ್ಲಿ ಮನೆ ವೈದ್ಯರು ಅಥವಾ ಪಾರ್ಮಾಸಿಸ್ಟಗಳನ್ನು ದೂರವಾಣಿಯ ಮೂಲಕ ಸಂಪರ್ಕಿಸಿ ಅನುಮಾನಗಳನ್ನು ಪರಿಹರಿಸಿ ಕೊಳ್ಳಬಹುದು. ಯಾವುದೇ ಕಾರಣಕ್ಕೂ ಕರೋನಾ ಚಿಕಿತ್ಸೆಯ ನಂತರ ಸೆಕೆಂಡರಿ ಇನ್ ಪೆಕ್ಷನ್ ಆಗದಂತೆ ನೋಡಿಕೊಳ್ಳುವುದರಿಂದ ಪಂಗಸ್ ರೋಗದಿಂದ ದೂರವಿರಬಹುದು.

ಅಶೋಕಸ್ವಾಮಿ ಹೇರೂರ, ಔಷ­­ಧಿ ತಜ್ಞ, ಗಂಗಾವತಿ.

ಸಂಗತಿ ಎಷ್ಟು ಜನಕ್ಕೆ ಗೊತ್ತಿದೆ?

2021ರ ಮೇ ಮತ್ತು ಜೂನ್ ಸಮಾಜಮುಖಿ ಸಂಚಿಕೆಗಳಲ್ಲಿ ಹಲವು ವಿದ್ವಾಂಸರು ಜಿಜ್ಞಾಸೆ, ವಿವೇಚನೆ, ವಿಶ್ಲೇಷಣೆ, ಸಾಧಕ ಬಾಧಕಗಳಂತಹ ಗಂಭೀರ ಚರ್ಚೆ ಸಮಾಲೋಚನೆಗಳ ಮೂಲಕ ಶಾಸ್ತ್ರೀಯ ಸಂಗೀತದ ತಲಸ್ಪರ್ಶಿ ಹೃದಯಸ್ಪರ್ಶಿ ವಿಮರ್ಶಾತ್ಮಕ, ಆತ್ಮಾವಲೋಕನಾತ್ಮಕವಾದ ಅಭಿವ್ಯಕ್ತಿಗಳಿಂದ ಸಂಗ್ರಾಹ್ಯ ಸಂಚಿಕೆಯಾಗಿವೆ.

ಭಾರತರತ್ನ ಪಂ.ಭೀಮಸೇನ ಜೋಶಿ ಮಾತ್ರವಲ್ಲ, ಮಧ್ಯಪ್ರದೇಶ ಸಂಗೀತ ಲೋಕದ ಅಸ್ಮಿತೆಯಾಗಿ ಕುಮಾರ ಗಂಧರ್ವರೆಂದು ಜಗದ್ವಿಖ್ಯಾತಿ ಪಡೆದ ವಿಜಯಪುರ ಜಿಲ್ಲೆಯ ಸಿದ್ಧರಾಮಸ್ವಾಮಿ ಕೋಂಕಾಳಿ ಮಠರವರನ್ನೂ ಕರ್ನಾಟಕದ ಆಕಾಶವಾಣಿ ಕೇಂದ್ರ “ಧ್ವನಿ ಪರೀಕ್ಷೆ” (ಆಡಿಷನ್) ಪ್ರಕ್ರಿಯೆ ಯಲ್ಲಿ “ಫೇಲ್” ಮಾಡಿತು. ಮಹಾರಾಷ್ಟ್ರ ಸರ್ಕಾರ ಭೀಮಸೇನ್ ಜೋಶಿಯವರನ್ನು, ಮಧ್ಯಪ್ರದೇಶ ಸರ್ಕಾರ ಕುಮಾರ ಗಂಧರ್ವರನ್ನು ಒಪ್ಪಿದ್ದು-ಅಪ್ಪಿದ್ದು ದಾಖಲಾರ್ಹ. ಮರಾಠಿ-ಹಿಂದಿ ಚಲನಚಿತ್ರ ಸಂಗೀತದ ಬೆಳವಣಿಗೆಯಲ್ಲಿ “ಲೆಜೆಂಡರೀ” ಗಾಯಕಿಯರಾದ ಅಮೀರಬಾಯಿ ಕರ್ನಾಟಕಿ,

ಗೋಹರಜಾನ್ ಕರ್ನಾಟಕಿ ಸಹೋದರಿಯರು ಕರ್ನಾಟಕದ ವಿಜಯಪುರ ಜಿಲ್ಲೆಯವರೆಂಬ ಸಂಗತಿ ಎಷ್ಟು ಜನಕ್ಕೆ ಗೊತ್ತಿದೆ?

ಟಿ.ಕೆ.ಗಂಗಾಧರ ಪತ್ತಾರ, ಬಳ್ಳಾರಿ.

ನಾನೂ ಪತ್ರಿಕೆಯ ಚಂದಾದಾರನಾಗುತ್ತೇನೆ

ಸಮಾಜಮುಖಿ ಪಿಡಿಎಫ್ ಸಂಚಿಕೆಯನ್ನು ಉಚಿತವಾಗಿ ಕಳುಹಿಸಿದ್ದಕ್ಕೆ ತುಂಬ ಧನ್ಯವಾದಗಳು. ನಾನು ಕೂಡ ಪತ್ರಿಕೆಯ ಚಂದಾದಾರನಾಗುತ್ತೇನೆ. ಜೂನ್ ಸಂಚಿಕೆ ಬಹುಮುಖೀ ಚಿಂತನೆಯಿಂದ  ಕೂಡಿದೆ. ಸಂಚಿಕೆಯಲ್ಲಿನ ಎಲ್ಲ ಲೇಖನಗಳು ಹೃದಯಸ್ಪರ್ಶಿಯಾಗಿವೆ ಮತ್ತು ಆಪ್ತವಾಗಿವೆ.  ಕಲ್ಲೇಶ್ ಕುಂಬಾರರ `ನಿಂದ ನಿಲುವಿನ ಘನ’ ಕಥಾಸಂಕಲನ ಮತ್ತು ಸಂಪಿಗೆ ನಾಗರಾಜರ `ವೇದಾವತಿ ತೀರದಲ್ಲಿ’ ಕಾದಂಬರಿ ಕುರಿತು ನಾನು ಬರೆದ ವಿಮರ್ಶಾ ಲೇಖನಗಳನ್ನು ನಿಮಗೆ ಈ-ಮೇಲ್ ಮಾಡಿದ್ದೇನೆ. ಗಮನಿಸಿ.

ಸಿ.ಎಸ್.ಭೀಮರಾಯ, ಶಹಾಪುರ.

ಪತ್ರಿಕೋದ್ಯಮದಲ್ಲಿ ದೊಡ್ಡ ಸಂಚಲನ!

“ಸಮಾಜಮುಖಿ” ನಿಜವಾಗಿಯೂ ಪತ್ರಿಕೋದ್ಯಮದಲ್ಲಿ ದೊಡ್ಡ ಸಂಚಲನವನ್ನು ಉಂಟುಮಾಡಿದೆ. ಸಂಗೀತ, ಸಾಹಿತ್ಯ, ಪ್ರಚಲಿತ ವಿದ್ಯಮಾನಗಳ ಮೇಲೆ ಬೆಳಕು ಚೆಲ್ಲುವಂತಹ ಅದ್ಭುತ-ಅನನ್ಯ ಲೇಖನಗಳಿಂದ ಪತ್ರಿಕೆ ಓದುಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ಕೋವಿಡ್ ಕಾರಣದಿಂದ ಓದುಗರಿಗೆ ಉಚಿತವಾಗಿ ಪಿಡಿಎಫ್ ಪ್ರತಿ ಹಂಚುವ ನಿಮ್ಮ ಸಹೃದಯತೆ- ಹೃದಯಶ್ರೀಮಂತಿಕೆಗೆ ನಾನು ವಿಸ್ಮಯ ಪಟ್ಟಿರುವೆ.

ಬಿ.ಎನ್.ಜ್ವಾಲನಪ್ಪ, ಚಿಕ್ಕಮಗಳೂರು.

Leave a Reply

Your email address will not be published.