ಭಕ್ತಿಯೆಂಬ ಸಂಕೀರ್ಣತೆ

ಭಕ್ತಿ ನಿರ್ಮಿಸಿದ ಹಿಂಸೆಯ ಜಗತ್ತನ್ನು, ಭಕ್ತಿಯೇ ಅಧಿಕಾರವಾಗಿ ಚಲಾಯಿಸಿದ ದಮನಕಾರಿ ನೀತಿಗಳನ್ನು ತಮ್ಮ ಅಪಾರವಾದ ಅಧ್ಯಯನ ಬಲದಿಂದ ಕಟ್ಟಿಕೊಟ್ಟಿರುವ ಅಪರೂಪದ ಕೃತಿ ಇದು.

ಪ್ರಭುತ್ವ ಮತ್ತು ಹಿಂಸೆ ಒಂದಕ್ಕೊಂದು ಬಿಡಿಸಲಾರದಂತೆ ಬೆರೆತುಹೋಗಿವೆ. ಇವೆಲ್ಲವಕ್ಕೂ ಅಂತರ್ ಸಂಬಂಧ ಕಲ್ಪಿಸುವ ಮಾಧ್ಯಮವಾಗಿ ಇಂದಿಗೂ ಧರ್ಮ ಮಹತ್ವದ ಪಾತ್ರ ವಹಿಸಿದೆ. ಧರ್ಮಕ್ಕೂ ಪ್ರಭುತ್ವಕ್ಕೂ ಇರುವ ನೇರಾನೇರಾ ಸಂಬಂಧ ಅದರ ಅಧಿಕಾರದ ಕ್ರಿಯಾಚರಣೆಯ ಮೂಲಕ ನಮಗೆ ಸ್ಪಷ್ಟವಾಗುತ್ತದೆ.

ಆದರೆ ಭಕ್ತಿ ಹಾಗಲ್ಲ. ಸಂಸ್ಕೃತಿ, ಧರ್ಮಗಳು ಭಿನ್ನಭಿನ್ನವಾಗಿದ್ದರೂ ಆ ವಿಭಿನ್ನ ಧರ್ಮಗಳ ಭಕ್ತಿ ಮತ್ತು ಭಕ್ತರ ಮನಸ್ಥಿತಿಗಳು ತಲುಪುವ ಗಮ್ಯ ಸ್ಥಾನ ಒಂದೇ ಎನಿಸುತ್ತದೆ. ಭಕ್ತಿಯ ಜೀವದ್ರವ, ಅಂತಿಮ ಗುರಿ, ಕಣ್ಣಿಗೆ ಕಾಣದ, ಭೂಮಿಯ ಮೇಲೆ ಇರುವ ಯಾವ ಜೀವಿಗೂ ತುಸು ಕೇಡನ್ನೂ ಬಯಸದ ಆದರ್ಶ, ಆಧ್ಯಾತ್ಮಿಕ ಮತ್ತು ಸಮಾಜ ಉದ್ಧಾರಕ ನಡೆಗಳು ಎಲ್ಲ ಧರ್ಮಗಳಲ್ಲಿಯೂ ಏಕವಾಗಿರುವಂತೆ ಮೇಲ್ನೋಟಕ್ಕೆ ತೋರುತ್ತವೆ. ಧಾರ್ಮಿಕ ಅನುಯಾಯಿಗಿಂತ ಭಕ್ತನಾಗಿರುವುದು ಮೃದುವಾಗಿಯೂ ಸ್ವಚ್ಛವಾಗಿಯೂ ಕಾರುಣ್ಯವಾಗಿಯೂ ಕಾಣುತ್ತದೆ.

ಭಕ್ತಿಯ ಕುರಿತ ನಮ್ಮ ಈ ರೀತಿಯ ಪೂರ್ವನಿರ್ಧಾರಿತ ಗ್ರಹಿಕೆಗಳನ್ನು ಮುರಿದು ಭಕ್ತಿಯನ್ನು ಅಧಿಕಾರದ ನೆಲೆಯಲ್ಲಿ, ಹಿಂಸೆಯ ನೆಲೆಯಲ್ಲಿ ನಿಂತು ನೋಡುವಂತೆ ಮಾಡುವ ಕೃತಿ ಕೆ.ಜಿ.ನಾಗರಾಜಪ್ಪ ಅವರ ‘ಅನುಶ್ರೇಣಿ-ಯಜಮಾನಿಕೆ’. ಭಕ್ತಿ ನಿರ್ಮಿಸಿದ ಹಿಂಸೆಯ ಜಗತ್ತನ್ನು, ಭಕ್ತಿಯೇ ಅಧಿಕಾರವಾಗಿ ಚಲಾಯಿಸಿದ ದಮನಕಾರಿ ನೀತಿಗಳನ್ನು ಅಪಾರವಾದ ಅಧ್ಯಯನ ಬಲದಿಂದ ಕಟ್ಟಿಕೊಟ್ಟಿರುವ ಅಪರೂಪದ ಕೃತಿ ಇದು. ಭಕ್ತಿಯ ಬಗ್ಗೆ ಮೃದು ನಿಲುವುಗಳನ್ನು ತಳೆದಿರುವ ನಾವು ಇಂದಿನ ಸಮಾಜದಲ್ಲಿ ಭಕ್ತಿಯೂ ಹಿಂಸೆಯನ್ನು ಪೋಷಿಸಿದೆ ಎಂಬ ಸತ್ಯವನ್ನು ಅರಗಿಸಿಕೊಳ್ಳಲು ತುಸು ಕಷ್ಟವೇ ಸರಿ. ಕಷ್ಟವೆಂಬ ಕಾರಣಕ್ಕೆ ಸತ್ಯವನ್ನು ಮುಚ್ಚಿಡಲೂ ಆಗುವುದಿಲ್ಲ.

ಆರಂಭದಲ್ಲಿ ಧರ್ಮ ರಾಜಕೀಯ ಅಧಿಕಾರಕ್ಕೆ ಅಂಕುಶದಂತೆ ಕಂಡರೂ ಅದರ ಪರವಾಗಿ ಅನೇಕಾನೇಕ ಅಧಿಕೃತ ಮುದ್ರೆಯೊತ್ತುವ ಸಂಸ್ಥೆಯಾಗಿಯೂ ವರ್ತಿಸುತ್ತದೆ. ಭಾರತವನ್ನು ಕಾಡಿರುವ ಸಾಮಾಜಿಕ ಶ್ರೇಣೀಕರಣದ ಜೊತೆಗೆ ಭಕ್ತಿಯೂ ತನ್ನೊಳಗೆ ಒಂದು ಶ್ರೇಣೀಕರಣ ವ್ಯವಸ್ಥೆಯನ್ನು ಹೆಣೆದುಕೊಂಡಿದೆ. ಈ ಧಾರ್ಮಿಕ ಅನುಶ್ರೇಣಿಯಲ್ಲಿ ಹೆಚ್ಚೂ ಕಡಿಮೆ ಬ್ರಾಹ್ಮಣ ಮತ್ತು ಚಂಡಾಲರ ಧಾರ್ಮಿಕ ಸ್ಥಾನಗಳು ಸ್ಥಿರ. ಆದರೆ ಇದರ ಮಧ್ಯೆ ಇರುವವರ ತಲ್ಲಣಗಳು ಅಪಾರ. ಇವೆಲ್ಲವನ್ನೂ ಖಚಿತ ಉಲ್ಲೇಖಗಳೊಂದಿಗೆ ನಾಗರಾಜಪ್ಪ ತಮ್ಮ ಈ ಪುಸ್ತಕದಲ್ಲಿ ದಾಖಲಿಸುತ್ತಾರೆ. ಆರು ಶತಮಾನಗಳಷ್ಟು ದೀರ್ಘಕಾಲದ ಅವಧಿಯ ಭಕ್ತಿ ಗ್ರಂಥಗಳು ಈ ಪುಸ್ತಕದ ಅಧ್ಯಯನ ವ್ಯಾಪ್ತಿಗೆ ಬಂದಿರುವುದು ಸೋಜಿಗವೆನಿಸುತ್ತದೆ.

ಜೈನ, ವೀರಶೈವ, ಶೈವ, ವೈದಿಕ, ಚಾರ್ವಾಕ ಪಂಥಗಳು ಧಾರ್ಮಿಕ ಅನುಶ್ರೇಣಿಯ ತುದಿಗೆ ಏರಲು ನಡೆಸಿದ ಪವಾಡ, ರಾಜತಂತ್ರ, ಪರಧರ್ಮ ನಿಂದನೆ, ಮತಾಂತರ, ಕುಟಿಲತೆ, ಮುಷ್ಟಾ-ಮುಷ್ಟಿ ಕಾದಾಟಗಳು ಈ ಪುಸ್ತಕದಲ್ಲಿವೆ. ಒಂದು ಭಕ್ತಿ ಪಂಥವು ತಮ್ಮ ಪಂಥವನ್ನು ಉನ್ನತಿಗೇರಿಸುವ  ಭರದಲ್ಲಿ ಇತರ ಅನ್ಯಮತದ ಜನರನ್ನು ಶಿಕ್ಷಿಸುವುದು ಮತ್ತು ಕೇವಲ ಭಕ್ತರಷ್ಟೇ ಅಲ್ಲದೇ ಸಾಕ್ಷಾತ್ ಭಗವಂತನೇ ಭಕ್ತರೊಡನೆ ಕೂಡಿ ಅವತಾರವೆತ್ತಿ ಪರಧರ್ಮವನ್ನೂ, ಪರಭಕ್ತಿಯನ್ನೂ ನಾಶಮಾಡುವುದರ ಜೊತೆಗೆ ಅವೈದಿಕ-ವೈದಿಕ, ಕೃಷ್ಣ-ಶಿವ, ವೀರಭದ್ರ-ವಿಷ್ಣು ಮುಂದಾದ ದೇವತೆಗಳ ನಡುವೆ ಮಾರಾಮಾರಿಯೇ ನಡೆದಿರುವುದನ್ನು ಪುಸ್ತಕವು ದಾಖಲಿಸುತ್ತದೆ.

ದೇವರು ಒಲಿಯುವುದೇ ಭಕ್ತನ ಕುಟುಂಬ ಅಪಾರವಾದ ಸಾವು-ನೋವುಗಳನ್ನು ಅನುಭವಿಸಿದ ನಂತರ. ದೇವರು ಮತ್ತು ದೇವರ ಮೂಲಕ ನಡೆಸಿದ ದಬ್ಬಾಳಿಕೆಗಳೆಲ್ಲಾ, ನೀಡಿದ ಶಿಕ್ಷೆಗಳೆಲ್ಲಾ ದೇವರ ಲೀಲೆಗಳಾಗಿ, ಪುಣ್ಯಕಥೆಗಳಾಗಿ ರೂಪಾಂತರ ಹೊಂದಿರುವುದನ್ನು,
ಭಕ್ತಿ ದುರ್ಬಲರ ಮೇಲೆ ನಡೆಸಿದ ದಾಳಿಯ ರಾಜಕಾರಣದ ಹೊಸ ಹೊಳಹುಗಳನ್ನು ಈ ಕೃತಿ ತನ್ನಲ್ಲಿ ಹಿಡಿದಿಟ್ಟುಕೊಂಡಿದೆ.

ಇತರ ದೈವರಗಂಡ ಗೋಪಾಲ ವಿಠಲ/ ಕಚ್ಚಿನ ಗಡಿಗೆಮ್ಮ ಹುಚ್ಚು ಮೋರೆಯ ಮರಗಿ/ ಗಚ್ಚಿನ ಪೋತರಾಜರಚ್ಚಕಟ್ಟೆಯಎಲ್ಲಿ/ ಬಿಚ್ಚಾಳೆ ಪಲ್ಲಿ ಶಡವಿ ಬನಶಂಕರಿಯ/ ಕಶ್ಚಿತ ದೇವತೆಗಳ ಇಚ್ಛಿಸಲಿಲ್ಲವಯ್ಯ
-ಗೋಪಾಲದಾಸರು

ಹಿಂದಿ ನಾನಾಚಾರವೇನಾದರೇನಾಯಿತು/ ಮುಂದಾದರೂ ಮುಕುತಿಪಥವ ಬಯಸಿ/ ಕಣ್ದೆರೆದು ನೋಡದನ್ಯ ದೈವಗಳ/ ಪುರಂದರ ವಿಠಲನ ಭಜಿಸಲೆ ಮೂಳಿ
-ಪುರಂದರದಾಸ.

ಎನ್ನುವ ಮಾತುಗಳು ದೇವರು ಮತ್ತು ತಮ್ಮ ಪಂಥವನ್ನು ಮೇಲುಸ್ತರಕ್ಕೇರಿಸುವ ಪ್ರಯತ್ನಗಳೇ ಆಗಿ ತೋರುತ್ತವೆ.

‘ಕನ್ನಡ ಸಂಸ್ಕøತಿಯ ಅಸಲಿ ವ್ಯವಹಾರಕ್ಕೆ, ಸಂಶೋಧನೆಗೆ, ವೈಚಾರಿಕ ಅಭಿವ್ಯಕ್ತಿಗೆ, ಮುಕ್ತ ಚಿಂತನೆಗೆ ಸೂಕ್ತ ವಾತಾವರಣವಿಲ್ಲ’ ಎನ್ನುವ ನಾಗರಾಜಪ್ಪ ಅವರ ಈ ಕೃತಿ ಅಪಾರವಾದ ಅಕಾಡೆಮಿಕ್ ಶಿಸ್ತಿನಿಂದ ಕೂಡಿದ ಅಧ್ಯಯನವಾಗಿದೆ. ಭಕ್ತಿ-ಕಾರ್ಯಸ್ವರೂಪ, ಭಕ್ತಿ-ಹಿಂಸಾವಿಧಾನ, ತಮಿಳು ಶೈವ ಪರಂಪರೆ ಮತ್ತು ರಗಳೆ, ಸಹಜ ಪಂಥ ಎಂಬ ಅಧ್ಯಾಯಗಳಿಂದ ಕೂಡಿದ ವಿದ್ವತ್ ಪುಸ್ತಕ.

ಈ ಪುಸ್ತಕ ಓದುವಾಗ ಇಟಲಿಯ ದಾರ್ಶನಿಕ ಆಂಟೋನಿಯೊಗ್ರಾಮ್ಷಿಯ ಪ್ರಭುತ್ವದ ಕುರಿತ ಚಿಂತನೆಗಳಿಗೂ, ಅನುಶ್ರೇಣಿ-ಯಜಮಾನಿಕೆಯ ಭಕ್ತಿ ಕುರಿತ ಚಿಂತನೆಗಳಿಗೂ ಸಮೀಪ ಎನಿಸುವ ಅನೇಕ ಅಂಶಗಳು ಥಟ್ಟನೆ ನೆನಪಾಗದೇ ಇರಲಾರವು.

ಕನ್ನಡ ಸಾಹಿತ್ಯದಲ್ಲಿ ಭಕ್ತಿ ಕುರಿತ ಅತಿ ಮಹತ್ವದ ಪುಸ್ತಕ ಇದಾಗಿದ್ದು. ಭಕ್ತಿಪಂಥ ಕುರಿತು ಕುತೂಹಲ ಹೊಂದಿರುವವರಿಗೆ, ಸಂಶೋಧನೆ ನಡೆಸುವವರಿಗೆ ಸಾವಿರ ಹೊಸ ನೋಟಗಳನ್ನು ನೀಡುವ ಪುಸ್ತಕವಾಗಿದೆ. 2018ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಈ ಕೃತಿಯ ವಿದ್ವತ್ ಮೌಲ್ಯವನ್ನು ಹೆಚ್ಚಿಸಿದೆ.

(‘ಅನುಶ್ರೇಣಿ-ಯಜಮಾನಿಕೆ’, ಕೃತಿಕಾರರು: ಕೆ.ಜಿ.ನಾಗರಾಜಪ್ಪ, ಬೆಲೆ: 200 ಪುಟ: 208, ಅಭಿನವ ಪ್ರಕಾಶನ, ಬೆಂಗಳೂರು)

Leave a Reply

Your email address will not be published.