ಭಕ್ತಿ ಮತ್ತು ಪ್ರಭುತ್ವ ಪರಂಪರೆ ಹಿನ್ನೆಲೆಯಲ್ಲಿ ಅಯೋಧ್ಯೆಯ ರಾಮ ಮಂದಿರ

ರಾಮಮಂದಿರದ ನಿರ್ಮಾಣವು ರಾಜಕಾರಣದ ಪ್ರೇರಣೆಯನ್ನು ಹೊಂದಿದೆ ಎನ್ನುವ ಮಾತು ಆಗಾಗ ಕೇಳಿಬರುತ್ತದೆ. ಇದು ಸತ್ಯ. ದೇವಾಲಯಗಳು ಐತಿಹಾಸಿಕವಾಗಿ ಸಹ ಯಾವಾಗಲೂ ರಾಜಕಾರಣದ ಗುರಿಗಳು ಮತ್ತು ಆಶಯಗಳನ್ನು ಪ್ರತಿಪಾದಿಸುವ ಯೋಜನೆಗಳೆ ಆಗಿದ್ದವು.

ಪೃಥ್ವದತ್ತ ಚಂದ್ರಶೋಭಿ

ಕಳೆದ ಮೂರು ದಶಕಗಳಿಂದ ಭಾರತೀಯ ಸಮಾಜ ಮತ್ತು ರಾಜಕಾರಣಗಳನ್ನು ಗಾಢವಾಗಿ ಕಲಕಿದ ಮತ್ತು ಬದಲಿಸಿದ ರಾಮಜನ್ಮಭೂಮಿ ವಿವಾದಕ್ಕೆ ಆಗಸ್ಟ್ 5ರಂದು ಒಂದು ತಾರ್ಕಿಕ ಅಂತ್ಯ ದೊರಕಿದೆ. ಆ ದಿನದಂದು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ರಾಮನಿಗೆ ಹೊಸದೊಂದು ದೇವಾಲಯವನ್ನು ಕಟ್ಟುವ ಕೆಲಸ ಪ್ರಾರಂಭವಾಯಿತು. ಈ ದೇವಾಲಯದ ನಿರ್ಮಾಣಕಾರ್ಯವು ಅಯೋಧ್ಯೆಯ ನಿರ್ದಿಷ್ಟ ಸ್ಥಳದಲ್ಲಿಯೆ ರಾಮನು ಜನಿಸಿದನು ಎನ್ನುವ ನಂಬಿಕೆಗೆ ಪುಷ್ಟಿಕೊಡುವ ಮತ್ತು ಆ ನಂಬಿಕೆಯನ್ನು ಅಧಿಕೃತಗೊಳಿಸುವ ಯೋಜನೆ.

ದೇವಾಲಯ ನಿರ್ಮಾಣ ಪ್ರಾರಂಭವಾದರೂ, ರಾಮಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ನಮ್ಮೆಲ್ಲರ ಮನದಲ್ಲಿನ ಪ್ರಶ್ನೆಗಳು ಹಾಗೆಯೆ ಉಳಿದಿವೆ. ಈ ಪ್ರಶ್ನೆಗಳಲ್ಲಿ ಕೆಲವು ಸರಳವಾದ, ನೇರವಾದ ವಸ್ತುವಿಷಯಕ್ಕೆ ಸಂಬಂಧಿಸಿದವುಗಳು ಇರಬಹುದು. ಉದಾಹರಣೆಗೆ, ರಾಮನು ಅಯೋಧ್ಯೆಯಲ್ಲಿ ನಿರ್ದಿಷ್ಟವಾದ ಸ್ಥಳದಲ್ಲಿಯೆ ಹುಟ್ಟಿದನು ಎನ್ನುವುದು ನಮಗೆ ಹೇಗೆ ಗೊತ್ತು? ಅಯೋಧ್ಯೆಯ ರಾಮಜನ್ಮಸ್ಥಾನದಲ್ಲಿ ಬಾಬರನ ಕಾಲಕ್ಕೆ ಮೊದಲು ರಾಮನ ಜನ್ಮವನ್ನು ಸ್ಮರಿಸುವ ದೇವಾಲಯವೊಂದು ಇತ್ತೆ? ಆ ದೇವಾಲಯವನ್ನು ನಾಶ ಮಾಡಲಾಯಿತೆ? ಈ ಬಗೆಯ ವಿಷಯ ನಿರ್ದಿಷ್ಟ ಪ್ರಶ್ನೆಗಳಿಗೆ ಖಚಿತ ಉತ್ತರಗಳು ಇತಿಹಾಸದ ಆಕರಗಳಲ್ಲಿ ದೊರಕುವುದಿಲ್ಲ. ಬಹುತೇಕ ಉತ್ತರಗಳು ನಮ್ಮ ನಂಬಿಕೆಗಳನ್ನು ಆಧರಿಸಿರುತ್ತವೆ.

ಜೊತೆಗೆ ಮತ್ತಷ್ಟು ವರ್ತಮಾನಕ್ಕೆ ಸಂಬAಧಿಸಿದ ಕ್ಲಿಷ್ಟ ಪ್ರಶ್ನೆಗಳು ಸಹ ನಮ್ಮ ಮುಂದಿವೆ. ಇವುಗಳು ಹೆಚ್ಚಾಗಿ ಕಳೆದ ಮೂರು ದಶಕಗಳ ರಾಜಕೀಯ ಬೆಳವಣಿಗೆಗಳಿಗೆ ಸಂಬಂಧಿಸಿದವು. ಈ ಪ್ರಶ್ನೆಗಳ ಪೈಕಿ ಕೆಲವು ಬಾಬ್ರಿ ಮಸೀದಿಯನ್ನು ಒಡೆದುಹಾಕಿದ ಸಂದರ್ಭ ಮತ್ತು ಆ ಘಟನೆಯ ನ್ಯಾಯಸಮ್ಮತತೆಯ ಜೊತೆಗೆ ಸಂಬAಧ ಹೊಂದಿವೆ. ಉದಾಹರಣೆಗೆ, ಬಾಬ್ರಿ ಮಸೀದಿಯನ್ನು ಒಡೆಯುವುದರ ಮೂಲಕ ಸಂವಿಧಾನದ ಆಶಯಗಳು ಮತ್ತು ಕಾನೂನುಗಳ ಉಲ್ಲಂಘನೆಯಾಗಿದೆಯೆ? ಈ ಪ್ರಶ್ನೆಗೆ ಕಟ್ಟುನಿಟ್ಟಾದ ಉತ್ತರವನ್ನು ನೀಡುವುದಾದರೆ, ಹೌದು ಎನ್ನದೆ ವಿಧಿಯಿಲ್ಲ.

ಆದರೆ ಹಿಂದೂ ರಾಷ್ಟ್ರೀಯತೆಯ ಹೊಸ ವ್ಯಾಖ್ಯೆಗಳು ಮತ್ತು ಸಮರ್ಥನೆಗಳು ಭಾರತೀಯ ಸಂವಿಧಾನದ ಆಶಯಗಳನ್ನೆ ಪ್ರಶ್ನಿಸುವ ರೀತಿಯವೂ ಸಹ ಆಗಿವೆ. ಭಾರತವು ಹಿಂದೂ ರಾಷ್ಟ್ರವೆ ಆಗಬೇಕು ಎಂಬ ಆಶಯವನ್ನು ಕೇವಲ ಸಾಂವಿಧಾನಿಕ ನೆಲೆಯಿಂದ ವಿಶ್ಲೇಷಿಸುವುದು ಸೀಮಿತವಾದ ಚರ್ಚೆಯಾಗುತ್ತದೆ. ಈ ಹಿನ್ನೆಲೆಯಲ್ಲಿ, ಹಿಂದೂ ರಾಷ್ಟ್ರೀಯತೆಯ ಸ್ವರೂಪ, ಪರಿಣಾಮ ಮತ್ತು ಅಪೇಕ್ಷಣೀಯತೆಗಳ ಬಗ್ಗೆ ಗಂಭೀರ, ಮುಕ್ತ ಮತ್ತು ರಚನಾತ್ಮಕವಾದ ಚರ್ಚೆ ನಡೆಯಬೇಕಾದ ಅನಿವಾರ್ಯತೆಯೂ ನಮ್ಮ ಮುಂದಿದೆ. ಈ ಅನಿವಾರ್ಯತೆಯನ್ನು ಜಾತ್ಯಾತೀತರು ತಳ್ಳಿಹಾಕಲು ಸಾಧ್ಯವಿಲ್ಲ. ಭಾರತೀಯ ಸಂವಿಧಾನವು ಧರ್ಮನಿರಪೇಕ್ಷತೆಯ ತತ್ವಗಳನ್ನು ಪ್ರತಿಪಾದಿಸಿದರೂ ಸಹ, ಭಾರತೀಯ ಸಮಾಜ ತನ್ನ ರಾಜಕೀಯ ಸಂವಿಧಾನದ ಆಶಯಗಳನ್ನು ಸಂಪೂರ್ಣವಾಗಿ ಒಪ್ಪಿ, ಅಂತರAಗೀಯ ಬದಲಾವಣೆಗೆ ಕೈಹಾಕಿದೆ ಎನ್ನುವುದು ಕಷ್ಟಸಾಧ್ಯ.

ಈ ಹಿನ್ನೆಲೆಯಲ್ಲಿಯೆ ಭಾರತೀಯ ಸಮಾಜದ ಸ್ವರೂಪ, ಅದರ ಸಂಸ್ಕೃತಿಯ ಭೂತ, ವರ್ತಮಾನ ಮತ್ತು ಭವಿಷ್ಯಗಳನ್ನು ವಸ್ತುನಿಷ್ಠವಾಗಿ ಚರ್ಚಿಸಬೇಕು. ಈ ಸಮಾಜದ ರಚನೆ ಐತಿಹಾಸಿಕವಾಗಿ ಹೇಗೆ ಆಗಿದೆ? ಈ ಸಮಾಜವು ಅಲ್ಪಸಂಖ್ಯಾತರನ್ನು, ಅಂಚಿನ ಸಮುದಾಯಗಳನ್ನು ಹೇಗೆ ನಿರ್ವಹಿಸಬಯಸುತ್ತದೆ? ನಮ್ಮ ಇಂದಿನ ಸಂವಿಧಾನದ ಬಗ್ಗೆ ಹಲವರಲ್ಲಿ ಇರುವ ಅನುಮಾನಗಳನ್ನು ಹೇಗೆ ಪರಿಹರಿಸುವುದು? ಭಾರತೀಯ ಸಂವಿಧಾನದಲ್ಲಿ ಬದಲಾವಣೆಯ ಅವಶ್ಯಕತೆಯಿದೆ ಎನ್ನುವವರಲ್ಲಿ ಕೇವಲ ಹಿಂದೂ ರಾಷ್ಟ್ರೀಯತೆಯ ಪ್ರತಿಪಾದಕರು ಮಾತ್ರವಿಲ್ಲ, ಹಲವಾರು ಪ್ರತ್ಯೇಕತಾವಾದಿಗಳು ಮತ್ತು ಕೆಲವು ಉಗ್ರ ಎಡಪಂಥೀಯ ಗುಂಪುಗಳು ಸಹ ಇವೆ ಎನ್ನುವುದನ್ನು ಇಲ್ಲಿ ಮರೆಯಬಾರದು. ಏನೆ ಇರಲಿ. ಇಂತಹ ಪ್ರಶ್ನೆಗಳಿಗೆ, ಎಲ್ಲರೂ ತಣ್ಣಗೆ ಕುಳಿತು, ಪ್ರಬುದ್ಧ ಮತ್ತು ರಚನಾತ್ಮಕ ರೀತಿಯಲ್ಲಿ ಚರ್ಚಿಸುತ್ತಾರೆ ಎನ್ನುವ ವಿಶ್ವಾಸವಾಗಲಿ, ಖಚಿತವಾದ ಉತ್ತರಗಳನ್ನು ಮತ್ತು ಮಾನವೀಯವಾದ ಪರಿಹಾರಗಳನ್ನು ಪಡೆಯಬಹುದು ಎನ್ನುವ ನಂಬಿಕೆಗಳು ಬಹುತೇಕರಲ್ಲಿ ಇಲ್ಲ.

ಕಳೆದ ಮೂರು ದಶಕಗಳ ತಲ್ಲಣಗಳ ನಂತರ, ಇಂದು ರಾಮಮಂದಿರ ನಿರ್ಮಾಣವಾಗುತ್ತಿರುವ ಸಂದರ್ಭದ ಹೊಸ ವಾಸ್ತವದ ಸಂದರ್ಭದ ಒಂದು ಸೀಮಿತ ಪ್ರಶ್ನೆಗೆ ಐತಿಹಾಸಿಕ ಹಿನ್ನೆಲೆಯನ್ನು ಸಂಕ್ಷಿಪ್ತವಾಗಿ ಈ ಟಿಪ್ಪಣಿಯಲ್ಲಿ ಪ್ರಸ್ತುತಪಡಿಸುತ್ತಿದ್ದೇನೆ. ಈ ಪ್ರಶ್ನೆಯು ದೇವಾಲಯ ನಿರ್ಮಾಣ ಮತ್ತು ಪ್ರಭುತ್ವಗಳ ನಡುವಿನ ಸಂಬಂಧವನ್ನು ಸ್ಪಷ್ಟಪಡಿಸುವಂತಹುದು. ಇಂದು ರಾಮಮಂದಿರದ ನಿರ್ಮಾಣವು ರಾಜಕಾರಣದ ಪ್ರೇರಣೆಯನ್ನು ಹೊಂದಿದೆ ಎನ್ನುವ ಮಾತು ಆಗಾಗ ಕೇಳಿಬರುತ್ತದೆ. ಇದು ಸತ್ಯ. ದೇವಾಲಯಗಳು ಐತಿಹಾಸಿಕವಾಗಿಯೂ ಸಹ ಯಾವಾಗಲೂ ರಾಜಕಾರಣದ ಗುರಿಗಳು ಮತ್ತು ಆಶಯಗಳನ್ನು ಪ್ರತಿಪಾದಿಸುವ ಯೋಜನೆಗಳೆ ಆಗಿದ್ದವು. ಇದು ಹೊಸ ವಿಷಯವೇನಲ್ಲ. ಹಾಗೆಂದ ಮಾತ್ರಕ್ಕೆ ನಂಬಿಕೆಗಳು, ಪಾರಮಾರ್ಥಿಕ ಗುರಿಗಳು ಅಪ್ರಸ್ತುತವೆಂದೇನಿಲ್ಲ. ಪಾರಮಾರ್ಥಿಕ ಮತ್ತು ರಾಜಕೀಯ ಉದ್ದೇಶಗಳು ಜೊತೆಯಾಗಿಯೆ ಇರುತ್ತಿದ್ದವು. ಇಂದು ಮೋದಿಯವರು ರಾಮಮಂದಿರ ನಿರ್ಮಾಣದ ನಾಯಕತ್ವ ವಹಿಸುವಾಗ ಈ ಪರಂಪರೆಯನ್ನೆ ಮುಂದುವರೆಸುವ ಕೆಲಸ ಮಾಡುತ್ತಿದ್ದಾರೆ.

ಈ ಮೇಲಿನ ಮಾತಿಗೆ ಸಂಕ್ಷಿಪ್ತವಾದ ಐತಿಹಾಸಿಕ ವಿವರಣೆಯೊಂದನ್ನು ನೀಡಬಹುದು. ಈ ವಿವರಣೆಗೆ ಎರಡು ಆಯಾಮಗಳಿವೆ. ಇವುಗಳಲ್ಲಿ ಮೊದಲನೆಯದು, ದೇವಾಲಯ ನಿರ್ಮಾಣವನ್ನು ಭಾರತೀಯ ಭಕ್ತಿ ಪರಂಪರೆಯ ಹಿನ್ನೆಲೆಯಲ್ಲಿ ನೋಡುವುದಾದರೆ ಎರಡನೆಯದು, ದೇವಾಲಯ ನಿರ್ಮಾಣವನ್ನು ಪ್ರಭುತ್ವ ರಚನೆಯ ಹಿನ್ನೆಲೆಯಲ್ಲಿ ಗಮನಿಸುವುದು.

ಭಕ್ತಿಯನ್ನು ಹಲವಾರು ರೀತಿಯಲ್ಲಿ ಅರ್ಥೈಸಬಹುದು. ಇವುಗಳಲ್ಲಿ ಕೆಲವು ಪ್ರಮುಖ ರೀತಿಗಳೆಂದರೆ ಮೌಲ್ಯವೆಂದು, ಪರಂಪರೆಯೆಂದು, ಲೌಕಿಕ ಮತ್ತು ಪಾರಮಾರ್ಥಿಕ ಗುರಿಗಳನ್ನು ಸಾಧಿಸುವ ಸಾಧನವೆಂದು ಭಕ್ತಿಯನ್ನು ನೋಡುವುದು. ಈ ಯಾವ ರೀತಿಯಲ್ಲಿ ಗ್ರಹಿಸಿದರೂ ಸರಿಯೆ, ನನ್ನ ದೃಷ್ಟಿಯಲ್ಲಿ ಭಕ್ತಿ ಎನ್ನುವ ವಿದ್ಯಮಾನವು ಕಳೆದ ಎರಡು ಸಹಸ್ರಮಾನಗಳಲ್ಲಿ ಭಾರತೀಯ ನಾಗರಿಕತೆಯ ಕೇಂದ್ರದಲ್ಲಿ ಭದ್ರವಾಗಿ ತನ್ನ ಸ್ಥಾನವನ್ನು ಆಕ್ರಮಿಸಿಕೊಂಡಿದೆ. ವೈದಿಕ ಧರ್ಮದ ಮುಂದಿನ ಹಂತವಾಗಿ ಕ್ರಿಸ್ತಶಕೆಯ ಪ್ರಾರಂಭದಲ್ಲಿ ಹುಟ್ಟಿದ ಅಭಿಜಾತ ಹಿಂದೂ ಧರ್ಮವನ್ನು ಭಕ್ತಿಯನ್ನು ಹೊರತುಪಡಿಸಿ ನೋಡಲು ಸಾಧ್ಯವಿಲ್ಲ. ಪುರಾಣಗಳು, ಧರ್ಮಶಾಸ್ತçಗಳು, ರಾಮಾಯಣ-ಮಹಾಭಾರತಗಳು, ವರ್ಣಾಶ್ರಮಧರ್ಮ ಮತ್ತು ಪುರುಷಾರ್ಥಗಳನ್ನು ಒಳಗೊಂಡಿದ್ದ ಈ ಹೊಸ ಹಿಂದೂ ಧಾರ್ಮಿಕತೆಯ ವಾಸ್ತುಶಿಲ್ಪವು ವೇದ-ಉಪನಿಷತ್ತುಗಳ ಕಾಲದ ವೈದಿಕ ಧರ್ಮದ ಆಚರಣೆಗಳು, ನಂಬಿಕೆಗಳು ಮತ್ತು ತಾತ್ವಿಕತೆಗಿಂತ ಭಿನ್ನವಾದುದು ಆಗಿತ್ತು. ಈ ಹೊಸ ಧಾರ್ಮಿಕತೆಯ ಕೇಂದ್ರದಲ್ಲಿ ಭಕ್ತಿಯಿದೆ ಎನ್ನುವುದು ನಾವು ಗ್ರಹಿಸಬೇಕಿರುವ ಬಹು ಮುಖ್ಯ ಅಂಶ.

ಭಕ್ತಿಯ ಮೂಲಕವೆ ಅಭಿಜಾತ ಹಿಂದೂ ಧರ್ಮವು ಬೌದ್ಧ ಮತ್ತು ಜೈನ ಧರ್ಮಗಳು ಮನುಷ್ಯ ಜೀವನದ ಅಸ್ತಿತ್ವದ ಸ್ವರೂಪ ಮತ್ತು ಉದ್ದೇಶಗಳ ಬಗ್ಗೆ ಎತ್ತಿದ ಪ್ರಶ್ನೆಗಳಿಗೆ ಉತ್ತರ ಕೊಡಲಾಗಿದ್ದು. ಶ್ರಮಣನಾಗುವ ಮೂಲಕ ಜ್ಞಾನೋದಯ ಮತ್ತು ನಿರ್ವಾಣಗಳು ದೊರಕುತ್ತವೆ ಎನ್ನುವ ಪರಿವ್ರಾಜಕ ಪರಂಪರೆಗಳಿಗೆ ಉತ್ತರವಾಗಿ ಭಕ್ತಿಯನ್ನು ಹೊಸ ಸಾಮಾಜಿಕ ಮೌಲ್ಯವಾಗಿ ಬ್ರಾಹ್ಮಣ ಬುದ್ಧಿಜೀವಿಗಳು ಮೊದಲನೆಯ ಸಹಸ್ರಮಾನದ ಆರಂಭದ ಹೊತ್ತಿಗೆ ಮುಂದಿಡುತ್ತಾರೆ. ಇದರ ಅತ್ಯಂತ ಸಮರ್ಥ ಪ್ರತಿಪಾದನೆಯಾಗುವುದು ಭಗವದ್ಗೀತೆಯಲ್ಲಿ. ಅದರ ಎರಡನೆಯ ಮತ್ತು ಮೂರನೆಯ ಅಧ್ಯಾಯಗಳ ಹಲವು ಶ್ಲೋಕಗಳು ನೇರವಾಗಿ ಬುದ್ಧನಿಗೆ ಉತ್ತರಿಸುವಂತೆ ಇವೆ. ಕೃಷ್ಣನಿಗೆ ಸರ್ವಸ್ವವನ್ನೂ ಸಮರ್ಪಿಸಿ ಭೂಮಿಯ ಮೇಲಿನ ಬದುಕಿನಲ್ಲಿ ಅರ್ಥ ಕಂಡುಕೊಳ್ಳುವ ಸಂದೇಶವನ್ನು ಈ ಶ್ಲೋಕಗಳು ನೀಡುತ್ತವೆ.

ಹೀಗೆ ಇಷ್ಟದೈವಕ್ಕೆ ಎಲ್ಲವನ್ನು ಒಪ್ಪಿಸಿ ದೈವೇಚ್ಛೆಯಂತೆ ಬದುಕುವ ಸಂದೇಶದ ಭೌತಿಕ ಸ್ವರೂಪ ದೇವಾಲಯಗಳು. ಈ ಭೌತಿಕ ರಚನೆಗಳು ಸಹ ಮೊದಲನೆಯ ಸಹಸ್ರಮಾನದ ಆರಂಭದ ಹೊಸ ಅನ್ವೇಷಣೆಗಳು. ವೈದಿಕ ಆಚರಣೆಗಳು ಬಹುತೇಕವಾಗಿ ಯಾಗ-ಯಜ್ಞ ಕೇಂದ್ರಿತವಾಗಿದ್ದವು. ಜೊತೆಗೆ ಇಂದ್ರ, ಅಗ್ನಿಯರಂತಹ ವೈದಿಕ ದೇವತೆಗಳಿಗೆ ಶಿವ-ವಿಷ್ಣುರಿಗೆ ದೊರಕಿದ ಇಷ್ಟದೇವತಾ ಸ್ಥಾನ ದೊರಕಿರಲಿಲ್ಲ. ಹಾಗಾಗಿ, ಭಕ್ತಿ ಕೇಂದ್ರಿತ ಆಚರಣೆಗಳ ಪೈಕಿ ಉಪಾಸನೆ-ಪೂಜೆ ಇತ್ಯಾದಿಗಳನ್ನು ಮಾಡಲು ಬೇಕಿದ್ದ ಭೌತಿಕ ಸ್ಥಳಗಳ ಅಗತ್ಯವನ್ನು ದೇವಾಲಯಗಳೂ ಪೂರೈಸಿದವು.

ಗಮನಾರ್ಹವಾದ ವಿಷಯವೆಂದರೆ ದೇವಾಲಯಗಳನ್ನು ನಿರ್ಮಿಸಲು ಅಭಿಜಾತ ಹಿಂದೂ ಪರಂಪರೆಯ ಪ್ರತಿಪಾದಕರಿಗೆ ಪ್ರೇರೇಪಣೆ ದೊರಕಿದ್ದು ಸಹ ಆ ವೇಳೆಗಾಗಲೆ ವ್ಯಾಪಕವಾಗಿ ಹರಡಿದ್ದ ಜೈನ ಮತ್ತು ಬೌದ್ಧ ಸ್ಮಾರಕ (ಮಾನ್ಯುಮೆಂಟ್) ನಿರ್ಮಾಣ ಪರಂಪರೆಗಳು. ವಿಹಾರ, ಚೈತ್ಯ, ಸ್ತೂಪ ಮತ್ತು ಪರಿವ್ರಾಜಕರ ವಾಸಸ್ಥಾನಗಳನ್ನು ದೇಶಾದ್ಯಂತ ಬೌದ್ಧ ಮತ್ತು ಜೈನ ಪರಂಪರೆಗಳನ್ನು ಬೆಂಬಲಿಸುತ್ತಿದ್ದ ರಾಜರು ಮತ್ತು ವರ್ತಕರು ನಿರ್ಮಿಸಿದರು. ಕ್ರಿಸ್ತಶಕದ ಪ್ರಾರಂಭದ ಹೊತ್ತಿಗೆ ಬುದ್ಧನ ಬದುಕು ಕಲೆ ಮತ್ತು ಸಾಹಿತ್ಯಗಳಿಗೆ ವಸ್ತುವಾಗಿತ್ತು. ಇದನ್ನು ಅನುಸರಿಸಿ ಅಭಿಜಾತ ಹಿಂದು ಪರಂಪರೆಗಳು ತಮ್ಮ ಸಂಪ್ರದಾಯಗಳನ್ನು ಕಟ್ಟಿಕೊಂಡರು.

ಭಕ್ತಿಗೆ ಸಂಬAಧಿಸಿದAತೆ ಮತ್ತೊಂದು ಸಣ್ಣ ಟಿಪ್ಪಣಿ. ಸಾಮಾನ್ಯವಾಗಿ ಭಕ್ತಿ ಪರಂಪರೆಯನ್ನು ಮೊದಲನೆಯ ಸಹಸ್ರಮಾನದ ಕಡೆಯ ಭಾಗದ ಹೊತ್ತಿಗೆ ಹೊರಹೊಮ್ಮಿದ ಭಕ್ತರ ಜೊತೆಗೆ ಸಮೀಕರಿಸುವ ಅಭ್ಯಾಸವಿದೆ. ಭಕ್ತರು ಭಕ್ತಿ ವಿದ್ಯಮಾನದ ಒಂದು ಪ್ರಮುಖ, ವೈವಿಧ್ಯಮಯ ಮತ್ತು ಪ್ರಭಾವಿ ಆಯಾಮ. ಆದರೆ ಅವರ ಹೊರತಾಗಿ ಸಹ ಭಕ್ತಿ ಹಲವಾರು ಇತರೆ ಆಯಾಮಗಳನ್ನು ಹೊಂದಿದೆ. ಅವುಗಳಲ್ಲಿ ಮುಖ್ಯವಾದುದು ದೇವಾಲಯ ಪರಂಪರೆ.

ನಾವು ಗಮನಿಸಬೇಕಿರುವ ಎರಡನೆಯ ಅಂಶವು ದೇವಾಲಯ ಪರಂಪರೆಯ ರಾಜಕೀಯ ನಂಟು. ನಮ್ಮ ಇಂದಿನ ವಿಶ್ಲೇಷಣೆಯ ಹಿನ್ನೆಲೆಯಲ್ಲಿ ಸಹ ಇದು ಮುಖ್ಯವಾದ ಅಂಶವೆಂದು ನನಗೆ ಅನ್ನಿಸುತ್ತದೆ. ದೇವಾಲಯಗಳು, ಅದರಲ್ಲಿಯೂ ಬೃಹತ್ ಸಂಕೀರ್ಣ ಸ್ವರೂಪವನ್ನು ಹೊಂದಿದ್ದ ಎಲ್ಲೋರದ ಕೈಲಾಸ ದೇವಾಲಯ ಅಥವಾ ತಮಿಳು ಪ್ರದೇಶಗಳಲ್ಲಿನ ತಂಜಾವೂರಿನ ಬೃಹದೀಶ್ವರ ದೇವಾಲಯ ಇಲ್ಲವೆ ಚಿದಂಬರA, ಮಧುರೈ, ಕಂಚಿ, ಮಹಾಬಲಿಪುರಂ ಇತ್ಯಾದಿ ಸ್ಥಳಗಳಲ್ಲಿನ ದೇವಾಲಯ ಸಮುಚ್ಚಯಗಳು ಅಪಾರವಾದ ಸಂಪನ್ಮೂಲಗಳನ್ನು ನಿರೀಕ್ಷಿಸುತ್ತಿದ್ದಂತಹ ಸಾಂಸ್ಥಿಕ ತಾಣಗಳು.

ಇವುಗಳನ್ನು ಸ್ಥಾಪಿಸಲು ಮತ್ತು ನಿರ್ವಹಿಸಲು ಸಂಪನ್ಮೂಲಗಳು ಬೇಕು. ಇಂತಹ ಸಂಪನ್ಮೂಲಗಳು ಒಂದು ಸಮಾಜದಲ್ಲಿ ಇದ್ದ ಹೆಚ್ಚುವರಿ ಸಂಪತ್ತಿನ ಒಂದು ಭಾಗವಾಗಿರುತ್ತಿದ್ದವು. ಸಾಮಾನ್ಯವಾಗಿ ಇವುಗಳನ್ನು ನಿಯಂತ್ರಿಸುತ್ತಿದ್ದ ಸಮಾಜದ ಗಣ್ಯವರ್ಗಗಳು – ಇವುಗಳಲ್ಲಿ ರಾಜರು, ಸಾಮಂತರು, ಶ್ರೀಮಂತ ವರ್ತಕರು – ದೇವಾಲಯಗಳನ್ನು ನಿರ್ಮಿಸುವ ಯೋಜನೆಗಳಿಗೆ ಕೈಹಾಕುತ್ತಿದ್ದರು. ಪ್ರಭುತ್ವದ ಬಹಳ ಮುಖ್ಯವಾದ ಕಾರ್ಯವೆಂದರೆ ತನ್ನ ಪ್ರದೇಶದಲ್ಲಿನ ಹೆಚ್ಚುವರಿ ಸಂಪನ್ಮೂಲಗಳ ಮರುವಿಂಗಡಣೆ. ಹೀಗೆ ಮರುವಿಂಗಡಣೆಗೆ ಮೊದಲು ಸಂಪನ್ಮೂಲಗಳನ್ನು ಸೃಷ್ಟಿಸುವ ಮತ್ತು ಕ್ರೋಡೀಕರಿಸುವ ಕೆಲಸವನ್ನು ಪ್ರಭುತ್ವ ಮತ್ತು ರಾಜ್ಯವ್ಯವಸ್ಥೆಗಳು ಮಾಡುತ್ತಿದ್ದವು.

ಇಲ್ಲಿ ಗಮನಿಸಬೇಕಾದ ಐತಿಹಾಸಿಕ ವಿದ್ಯಮಾನವೆಂದರೆ ದೇವಾಲಯಗಳ ನಿರ್ಮಾಣವು ಪ್ರಭುತ್ವಗಳ ಸ್ಥಾಪನೆ ಮತ್ತು ಉಳಿವಿನ ಪ್ರಕ್ರಿಯೆಗಳಿಗೆ ಜೋಡಣೆಯಾಗಿದ್ದ ಪ್ರಕ್ರಿಯೆ. ಪ್ರಭುತ್ವ ಸ್ಥಾಪನೆಯು ಕೇವಲ ಒಬ್ಬ ವೀರನೊಬ್ಬ ತನ್ನ ಪರಾಕ್ರಮ, ಧೈರ್ಯಸಾಹಸಗಳಿಂದ ಆಗುತ್ತಿರಲಿಲ್ಲ. ಇದಕ್ಕಾಗಿ ಕೃಷಿ ವಿಸ್ತರಣೆ, ನಗರಗಳ ನಿರ್ಮಾಣ, ವ್ಯಾಪಾರ-ವಹಿವಾಟುಗಳಿಗೆ ಉತ್ತೇಜನ ಇತ್ಯಾದಿ ಹತ್ತುಹಲವು ವ್ಯವಹಾರಗಳನ್ನು ದಕ್ಷತೆಯಿಂದ ನಿರ್ವಹಿಸಬೇಕಿತ್ತು. ಈ ಕೆಲಸಕಾರ್ಯಗಳ ಅಂಗವಾಗಿಯೆ ದೇವಾಲಯಗಳ ನಿರ್ಮಾಣವೂ ನಡೆಯುತ್ತಿತ್ತು.

ನನ್ನ ಮಾತಿನ ಅರ್ಥವಿಷ್ಟೆ. ದೇವಾಲಯಗಳ ನಿರ್ಮಾಣ ಐತಿಹಾಸಿಕವಾಗಿ ರಾಜಕೀಯ ಪ್ರಕ್ರಿಯೆಗಳ ಅಂಗವಾಗಿಯೆ ಯಾವಾಗಲೂ ಇದ್ದುದು. ಹಲವು ಪ್ರದೇಶಗಳಲ್ಲಿ ಮತ್ತು ಕಾಲಘಟ್ಟಗಳಲ್ಲಿ, ರಾಜ ಮತ್ತು ದೇವರುಗಳ ಸಮೀಕರಣವನ್ನು ಮಾಡುವುದನ್ನು ಸಹ ನಾವು ಕಾಣುತ್ತೇವೆ. ರಾಜನು ಪ್ರತ್ಯಕ್ಷ ದೇವತೆ ಎನ್ನುವ ಮಾತು ನಮ್ಮ ಆಡುಭಾಷೆಯಲ್ಲಿ ಸಾಮಾನ್ಯವಾಗಿ ಮನೆಮಾತಾಗಿರುವುದು ಎಲ್ಲರಿಗೆ ತಿಳಿದಿದೆ. ಇದು ಒಂದು ಲೆಕ್ಕದಲ್ಲಿ ಸಾಮಾನ್ಯ ತಿಳುವಳಿಕೆ. ಆದರೆ ಈ ವಿದ್ಯಮಾನದ ಬೇರುಗಳನ್ನು ನೋಡಿದರೆ, ರಾಜಕಾರಣ ಮತ್ತು ಧಾರ್ಮಿಕ ವಿದ್ಯಮಾನಗಳ ಆಳವಾದ ಸಂಬAಧಗಳು ಸ್ಪಷ್ಟವಾಗುತ್ತವೆ.

ಇಂತಹ ಸಂಬಂಧಗಳನ್ನು ಸುಲಭವಾಗಿ ತಳ್ಳಿಹಾಕುವುದು ಸಾಧ್ಯವಿಲ್ಲ ಎನ್ನುವುದು ಒಂದು ಅಂಶ. ಮತ್ತೊಂದೆಡೆ ಈ ಐತಿಹಾಸಿಕ ಆಯಾಮಗಳು ಧರ್ಮ ಮತ್ತು ರಾಜಕಾರಣಗಳ ನಡುವಿನ ಆಳವಾದ ನಂಟು ಏಕೆ ಮತ್ತು ಹೇಗೆ ಮುಂದುವರೆಯುತ್ತಿವೆ ಎನ್ನುವುದನ್ನು ಸಹ ಸ್ಪಷ್ಟಪಡಿಸುತ್ತವೆ. ಇದು ಕೇವಲ ಐತಿಹಾಸಿಕ ವಾಸ್ತವ ಮಾತ್ರವಲ್ಲ. ಆ ಐತಿಹಾಸಿಕ ವಾಸ್ತವವು ಪ್ರಭಾವಿಸುತ್ತಿರುವ ಮತ್ತು ರೂಪಿಸುತ್ತಿರುವ ವರ್ತಮಾನ ಸಹ.

ಹಿಂದೂ ರಾಷ್ಟ್ರೀಯತೆ ಮತ್ತು ಹಿಂದುತ್ವಗಳು ಒಂದೆಡೆ ಸಮಕಾಲೀನ ಆತಂಕಗಳಿಂದ ರೂಪುಗೊಂಡಿವೆ ಎನ್ನುವುದು ಸತ್ಯ. ಈ ಆತಂಕಗಳ ಜೊತೆಗೆ ಮತ್ತೊಂದು ಐತಿಹಾಸಿಕ ವಾಸ್ತವವು ಭಾರತದ ವರ್ತಮಾನ ಮತ್ತು ಭವಿಷ್ಯಗಳ ಚರ್ಚೆಯಲ್ಲಿ ತನ್ನ ಇರುವಿಕೆಯನ್ನು ತೋರಿಸಿಕೊಳ್ಳುತ್ತಿದೆ. ರಾಮಮಂದಿರದ ಶಂಕುಸ್ಥಾಪನೆಯನ್ನು ಈ ಎರಡೂ ನೆಲೆಗಳಲ್ಲಿ ನಾವು ನೋಡಬೇಕು.

Leave a Reply

Your email address will not be published.